ADVERTISEMENT

ಮುದ್ದೆ ಮೇಷ್ಟ್ರು

ಕಲೀಮ್ ಉಲ್ಲಾ
Published 8 ಏಪ್ರಿಲ್ 2015, 19:30 IST
Last Updated 8 ಏಪ್ರಿಲ್ 2015, 19:30 IST

ಸರ್ಕಾರಿ ಶಾಲೆಯ ಹುಡುಗರನ್ನು ಮೇಷ್ಟ್ರುಗಳು ಫೇಲು ಮಾಡುವುದೇ ಕಡಿಮೆ. ಸಾರಾಸಗಟಾಗಿ ಎತ್ತಿ ಲಗೇಜುಗಳಂತೆ ಮುಂದಿನ ತರಗತಿಗೆ ಬಿಸಾಕುತ್ತಿದ್ದರು. ನಾವೇನು ಬರೆದಿರುತ್ತಿದ್ದೆವೋ, ಅವರೇನು ನೋಡಿ ಮಾರ್ಕ್ಸ್ ಹಾಕುತ್ತಿದ್ದರೋ? ಅದು ಆ ವಿದ್ಯಾ ಸರಸ್ವತಿಯೇ ಬಲ್ಲಳು.

ಆಗ ಈಗಿನಂತೆ ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಎಂಬ ಭೇದ ಭಾವಗಳಿರಲಿಲ್ಲ. ಇವು ಬೇರೆ ಕಡೆ ಬಳಕೆಯಲ್ಲಿದ್ದವೋ, ಏನೋ? ನಮಗೆ ತಿಳಿದಂತೆ ನಮ್ಮ ಶಾಲೆಯ ಪರಿಧಿಯಲ್ಲಂತೂ ಇವು ಚಾಲ್ತಿಯಲ್ಲಿರಲಿಲ್ಲ. ಒಟ್ನಲ್ಲಿ ಎಲ್ಲರೂ ಪಾಸ್ ಆಗಿರುತ್ತಿದ್ದೆವು. ರಿಸಲ್ಟ್ ಕೇಳೋರು ‘ನಿಂದು ಪಾಸಾ, ಫೇಲಾ’ ಎಂದಷ್ಟೇ ಕೇಳುತ್ತಿದ್ದರು.

ಈಗಿನಂತೆ ಆಗ ಜನ ನಿನ್ನ ಮಾರ್ಕ್ಸ್ ಎಷ್ಟು, ಫರ್ಸೆಂಟೇಜ್ ಎಷ್ಟಾಯಿತು, ಎಷ್ಟನೇ, ರ್‍್ಯಾಂಕ್ ನಿನ್ನದು? ಎಂಬಿತ್ಯಾದಿ ಅಸಂಬದ್ಧ ಪ್ರಶ್ನೆಗಳನ್ನು  ಕೇಳುತ್ತಲೇ ಇರಲಿಲ್ಲ. ಪ್ರೈವೇಟ್ ಶಾಲೆಗಳಲ್ಲಿ ಕೇಳುತ್ತಿದ್ದರೋ, ಏನೋ? ನಮಗದು ಗೊತ್ತಿರಲಿಲ್ಲ. ಜೀವನದಲ್ಲಿ ಎಳ್ಳಷ್ಟೂ ಕಷ್ಟವಿಲ್ಲದೆ ಪಾಸಾಗುವ ನಮಗೆ ಪಾಸಿನ ಕಿಮ್ಮತ್ತು ಗೊತ್ತಿರಲಿಲ್ಲ. ಫೇಲಾಯಿತೆಂದು ಕಣ್ಣೀರು ಹಾಕಿದ, ನೇಣಿಗೆ ಶರಣಾದ, ಕೆರೆಗೆ ಹಾರಿದ ಯಾವ ಕೇಸುಗಳೂ ನಮ್ಮ ಕಣ್ಣ ಮುಂದೆ ನಡೆಯಲಿಲ್ಲ.

ಮೇಲಾಗಿ ನಮ್ಮ ಊರಲ್ಲಿ ಯಾರಿಗೂ ಫೇಲು ಮಾಡುವಂತಿರಲಿಲ್ಲ. ಫೇಲು ಮಾಡಿದ ಮೇಷ್ಟ್ರು ಮನೆ ಎಲ್ಲಿದೇಂತ ಹುಡುಕಿಕೊಂಡು ಹೋಗಿ, ನಮ್ಮೂರ ಜನ ಹೊಡೆದು ಬರುತ್ತಿದ್ದರು. ಹೀಗಾಗಿ ಮೇಷ್ಟ್ರುಗಳು ಫೇಲ್ ಎಂಬ ಶಬ್ದವನ್ನು ಕನಸುಮನಸಲ್ಲೂ ಬಳಕೆ ಮಾಡುವಂತಿರಲಿಲ್ಲ.  ನಮಗೆಲ್ಲಾ ಫೇಲ್ ಶಬ್ದದ ನಿಜವಾದ ಮಜಾ ಗೊತ್ತಾಗಿದ್ದೇ ಎಸೆಸ್ಸೆಲ್ಸಿಯಲ್ಲಿ. ಎಸೆಸ್ಸೆಲ್ಸಿ ರಿಸೆಲ್ಟ್ ಬಂದ ದಿನ ಫೇಲಾದ ಗೆಳೆಯರೆಲ್ಲಾ ಕೂಡಿ ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ದುಂಡುಮೇಜಿನ ಚರ್ಚೆ ನಡೆಸಿದೆವು. ಹೇಗೆ ಸಾಯಬೇಕು, ಯಾರು ಮೊದಲು ಸಾಯಬೇಕು? ಅನ್ನೋದೆಲ್ಲಾ ಚರ್ಚಿಸಿದೆವು.

ಯಾವ ಅಂತಿಮ ನಿರ್ಧಾರವೂ ಅಲ್ಲಿ ಮೂಡಲಿಲ್ಲ. ಎಲ್ಲಾ ಗೆಣೆಕಾರರು ಸಾಯುವ ಥರೇವಾರಿ ಮಾರ್ಗಗಳು ಇನ್ನೊಬ್ಬರಿಗೆ ಸೂಚಿಸುತ್ತಿದ್ದರೇ ಹೊರತು, ಯಾರೂ ತಮಗೆ ಅನ್ವಯಿಸಿಕೊಂಡು ಮಾತಾಡಲಿಲ್ಲ.  ಪರಸ್ಪರ ಪ್ರೋತ್ಸಾಹ ಕೊಡುವ ಧಾಟಿಯಲ್ಲೇ ಎಲ್ಲರ ಮಾತುಗಳು ಸಾಗಿದ್ದವು. ನಮ್ಮ ಆತ್ಮಹತ್ಯೆಯ ಎಲ್ಲಾ ದಾರಿಗಳೂ ನೋವಿನಿಂದ ಕೂಡಿದ್ದವು. ನಮಗೆ ನೋವು, ರಕ್ತಪಾತವಿಲ್ಲದ ಸರಳ, ಸುಂದರ ಹಾದಿ ಬೇಕಿತ್ತು. ಇದ್ದದ್ದರಲ್ಲಿ ನೀರಿಗೆ ಬೀಳುವುದೇ ಸೂಕ್ತವೆನಿಸಿತು.

ಇರಲಿ ನೋಡೋಣವೆಂದು ಎಲ್ಲರೂ ನಮ್ಮೂರ ಕೆರೆಯ ಹತ್ತಿರ ಹೋದೆವು. ಕೆರೆ ನಮ್ಮ ಇಚ್ಛೆಗೆ ವಿರುದ್ಧವಾಗಿ ಬತ್ತುತ್ತಾ ಬಂದಿತ್ತು. ಅಲ್ಲಿ ಮುಳುಗುವಷ್ಟು ನೀರೇ ಇರಲಿಲ್ಲ. ಇದ್ದ ಮೊಣಕಾಲು ಮಟ್ಟದ ಕೊಳಕು ನೀರಿನಲ್ಲೇ ಜನ ಕುಂಡಿ ತೊಳೆದುಕೊಳ್ಳುತ್ತಿದ್ದರು. ಆ ದೃಶ್ಯವನ್ನು ನೋಡೇ ಯಾಕೋ  ಮನಸ್ಸಿಗೆ ಇಸ್ಸೀ ಎನಿಸಿತು. ಸತ್ತರೆ ಸ್ವಿಮ್ಮಿಂಗ್ ಪೂಲ್ ಥರ ಇರುವ ಕೆರೆಯ ಶುಭ್ರ ತಿಳಿ ನೀಲಿ ಬಣ್ಣದ ನೀರಿನಲ್ಲೇ ಸಾಯಬೇಕೆನಿಸಿತು. ಅಂಥ ಕೆರೆಗಳ್ಯಾವು ನಮ್ಮೂರಿನ ಸುತ್ತಮುತ್ತ ಇರಲಿಲ್ಲ.

‘ಮಕ್ಕಳು ಸಾಯಬಾರದೆಂದೇ ಸರ್ಕಾರ ದವರು ಸುಡು ಬೇಸಿಗೆಯಲ್ಲಿ, ಕೆರೆ, ಬಾವಿಗಳು ಒಣಗಿದ್ದಾಗ ರಿಸಲ್ಟ್ ಹಾಕ್ತಾರೆ ಕಂಡ್ರೋ! ಇದೆಲ್ಲಾ ಶಾಲೆಯ ಮೇಷ್ಟ್ರುಗಳದ್ದೇ ಕಿತಾಪತಿ. ಸರ್ಕಾರಕ್ಕೆ ಈ ಐನಾತಿ ಪ್ಲಾನು ಅವರೇ ಹೇಳಿರ್ತಾರೆ’ ಎಂದು ಓಂಕಾರಿ ಹೊಸ ವಿಷಯವೊಂದನ್ನು ಸಂಶೋಧನೆ ಮಾಡಿ ಹೇಳಿದ. ‘ಸರ್ಕಾರದವರಿಗೇ ನಾವೀಗ ಸಾಯೋದ್ ಇಷ್ಟವಿಲ್ಲ ಅಂದ್ಮೇಲೆ ಯಾರೇನ್ ಮಾಡಕಾಗುತ್ತೆ? ಅಕ್ಟೋಬರ್ ಪರೀಕ್ಷೆ ಒಂದನ್ನು ನೋಡಿಕೊಂಡು ಆಮ್ಯಾಕೆ  ಸಾಯೋ ಯೋಚ್ನೆ ಮಾಡ್ಬೋದೇನಪ್ಪ. ಅವಾಗ ಕೆರೆನೂ ತುಂಬಿರುತ್ತೆ’ ಎಂದು ಭರತ ಭರವಸೆಯ ಮಾತಾಡಿದ.

ಎಲ್ಲರಿಗೂ ಅವನ ಮಾತು ಸರಿ ಎನಿಸಿತು. ಆತ್ಮಹತ್ಯೆಯ ಪ್ಲಾನನ್ನು ಸದ್ಯಕ್ಕೆ  ಮುಂದೂಡಿ, ತಮ್ಮ ತಮ್ಮ ಮನೆಗಳಿಗೆ ಹೋಗಿ ಸಿಕ್ಕಷ್ಟು ಹೊಡೆತ ತಿನ್ನೋದೆ ಒಳ್ಳೆಯದೆಂದು ಎಲ್ಲರೂ ಒಮ್ಮನಸ್ಸಿನಿಂದ ರೆಡಿಯಾದೆವು. ಸಂಜೆಯಾದ ಮೇಲೆ ಕಳ್ಳರಂತೆ ಒಬ್ಬೊಬ್ಬರೇ ಮನೆ ಸೇರಿಕೊಂಡೆವು.  ನಾವೆಲ್ಲಾ ಹೈಸ್ಕೂಲಿನಲ್ಲಿ ಪಾಸಾಗಿ ಮುಂದಿನ ತರಗತಿಗಳಿಗೆ ಜಿಗಿದರೂ, ನಮಗೆ ಹೊಸ ಪುಸ್ತಕಗಳು ಸಿಗುತ್ತಿರಲಿಲ್ಲ. ಸರ್ಕಾರದವರು ಈಗಿನಂತೆ ಆಗ ಪುಕ್ಕಟ್ಟೆ ಪುಸ್ತಕಗಳನ್ನೂ ಹಂಚುತ್ತಿರಲಿಲ್ಲ.

ನಮ್ಮ ನಮ್ಮ ವಾರಸುದಾರರೂ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ‘ಪಾಸಾ ಗಿದ್ದೇವೆ ಹೊಸ ಪೆನ್ನು, ಪುಸ್ತಕ ಕೊಡಿಸಿ’ ಎಂದರೆ ಮನೆಗಳಲ್ಲಿ ಯಾರ ಕಿವಿಗೂ ಅದು ತಾಕುತ್ತಿರಲಿಲ್ಲ. ನಮ್ಮ ಓದಿನ ಅರ್ಧ ವರ್ಷ ಮುಗಿಯುತ್ತಾ ಬಂದರೂ ಮನೆ ಬಜೆಟ್ಟಿನ ಚೌಕಟ್ಟಿನೊಳಗೆ ಅದು ಬರುತ್ತಿರಲಿಲ್ಲ. ಅಪ್ಪನನ್ನು ಕೇಳಿದರೆ ಅವರು ದೊಡ್ಡಣ್ಣನ ಕಡೆ ಕೈ ತೋರಿಸುತ್ತಿದ್ದರು. ಅವನನ್ನು ಕೇಳಿದರೆ ಖಾಲಿ ಜೇಬು ಕೊಡವಿ ಕೊಡವಿ ತೋರಿಸುತ್ತಿದ್ದ.       
    
ಮತ್ತೆ ಮತ್ತೆ ಇದನ್ನೇ ಕೇಳಿ ದೊಡ್ಡಣ್ಣನಿಗೆ ಬೇಸರ ತರಿಸಿದರೆ ಅವನು ‘ಓದೋದಕ್ಕೆ ಯಾವ ಪುಸ್ತಕ ಆದ್ರೇನು? ಈಗ ನಿನ್ನತ್ರ ಇದಾವಲ್ಲ ಅವೇ ಪುಸ್ಕಾನ ತಿರುಗ್ಸಿ ಮತ್ತೊಂದು ಸಲ ಓದ್ಕೊ. ಮನ್ಯಾಗೆ ಇಷ್ಟೊಂದು ರಾಶಿ ಕೆಲ್ಸ ಇಟ್ಕೊಂಡು ಯಾಕ್ ದಿನಾ ಶಾಲೆ ಶಾಲೆ ಅಂತ ಸಾಯ್ತಿಯ. ನಿಮ್ಮ ಮೇಷ್ಟ್ರಿಗೇನು ತಲೆ ಸರಿ ಇಲ್ವಂತೇನೋ? ಅದೇನು ಅಷ್ಟಷ್ಟು ಅರ್ಜೆಂಟಾಗಿ ನಿಮ್ಮನ್ನು ಪಾಸ್ ಮಾಡ್ತಿದ್ದಾರೆ ಅವರು? ನಿನಗೆ ಪುಸ್ತಕ ಕೊಡ್ಸಿ ಇನ್ನೂ ನಾಕ್ ತಿಂಗಳಾಗಿಲ್ಲ’ ಎನ್ನುತ್ತಿದ್ದ. ‘ನೀನು ಕೊಡ್ಸಿದ್ದೇ ಸ್ಕೂಲ್ ಶುರುವಾದ ಆರು ತಿಂಗಳಾದ ಮೇಲಲ್ವಾ’ ಎಂದು ರಾಗ ಎಳೆದರೆ ‘ಮತ್ತೆ ತಿರುಗಿಸಿ ಜವಾಬು ಕೊಡ್ತಿಯಾ, ಲೋಫರ್?’ ಎಂದು ಬೈದು ಓಡಿಸುತ್ತಿದ್ದ.

ಪುಸ್ತಕಗಳನ್ನು ಕೊಡಿಸಬೇಕು ಎಂಬ ಇರಾದೆ ಅವನಿಗೂ, ಅಪ್ಪನಿಗೂ ಇತ್ತು. ಆದರೂ ಜೇಬಿಗೆ ಹೋದ ಕೈ ಬಿಡಿಗಾಸೂ ಸಿಗದೆ ವಾಪಸ್ಸು ಬರುತಿತ್ತು. ಅಪ್ಪ ಇಡೀ ಬೀಡಿಯ ಸೇದಿ ಬಿಸಾಕುತ್ತಿದ್ದವರು; ಈಗ ಅರ್ಧಕ್ಕೆ ಅದರ ಬೆಂಕಿಯಾರಿಸಿ ಮುಂದಿನ ರೌಂಡಿಗೆ ಜೋಪಾನ ಮಾಡಿಕೊಳ್ಳುವಷ್ಟು ನಾಜೂಕಾಗಿದ್ದರು. ದಿನ ದಿನದ ಅನ್ನಕ್ಕೆ ಪ್ರತಿದಿನವೂ ಪರದಾಡುತ್ತಿದ್ದ ಕಾಲವದು. ಲಕ್ಷ್ಮೀ ಬರಿದಾದ ಸಮಯದಲ್ಲಿ  ಸರಸ್ವತಿ ಹುಟ್ಟಲು ಸಾಧ್ಯವೇ? ಹೀಗಾಗಿ, ಬೇಜಾರಿಲ್ಲದೆ ನಾವೂ ಹಳೆಯ ಪುಸ್ತಕಗಳನ್ನೇ ಹೊತ್ತುಕೊಂಡು ಜಗಭಂಡರಾಗಿ ಶಾಲೆಗೆ ಬರುತ್ತಿದ್ದೆವು. ನಮ್ಮ ಮೇಷ್ಟ್ರುಗಳೂ ಅಷ್ಟೇ; ಬೈಗುಳ, ಹೊಡೆತಗಳಲ್ಲೇ ಆರಾಮಾಗಿ ಅರ್ಧ ವರ್ಷ ಪೂರೈಸುತ್ತಿದ್ದರು. 

‘ಅರ್ಧ ವರ್ಷವಾದರೂ ಹೊಸ ಪುಸ್ತಕ ಯಾಕ್ರೋ ತಂಗಡಿಲ್ಲ ಮುಂಡೇ ಮಕ್ಕಳಾ! ಹಿಂಗೆ ಬಿಟ್ರೆ ವಿದ್ಯೆ ಬುದ್ಧಿ ಕಲೀದೆ ನೀವು ಸರ್ವನಾಶ ಆಗ್ತಿರಿ ಕಂಡ್ರೋ ಶನಿಗಳಾ’ ಎಂದು ಕೊರಗುತ್ತಾ, ನಮ್ಮ ಪುಟ್ಟಸ್ವಾಮಿ ಮೇಷ್ಟ್ರು ಬೈಯುತ್ತಿದ್ದರು. ಉಳಿದ ಮೇಷ್ಟ್ರುಗಳು ಬಲು ಆರಾಮ ಜನ. ಇಂಥ ಸಣ್ಣಪುಟ್ಟ ವಿಷಯಗಳ ಬಗ್ಗೆ ಅವರ್‍್ಯಾರೂ  ತಲೇನೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಶಾಲೆಯಲ್ಲಿದ್ದರೂ ಅವರ ಮಾತುಗಳು ಬಡ್ಡೀ ವ್ಯವಹಾರದಲ್ಲಿ, ತಮ್ಮ ತೋಟ, ಜಮೀನುಗಳ ನಿಗಾದಲ್ಲಿ, ಗೊಬ್ಬರ ಹಾಕಿಸುವ, ಬೀಜ ಬಿತ್ತಿಸುವ, ಕಳೆಕೀಳಿಸುವ ಕಾಳಜಿಗಳಲ್ಲಿ ಮುಳುಗಿ ಹೋಗಿರುತ್ತಿದ್ದವು.

ಹಳ್ಳಿಯಿಂದ ದಿಲ್ಲಿ ತನಕದ ರಾಜಕೀಯವನ್ನು ನಾಲಿಗೆ ಸೋಲುವವರೆಗೂ ಮಾತಾಡುತ್ತಿದ್ದರು. ಯಾರ್‍್ಯಾರನ್ನೋ ಹಂಗಿಸಿ, ಗೇಲಿ ಮಾಡಿ ನಗುತ್ತಿದ್ದರು. ಇರುವ ಒಂದಿಬ್ಬರು ಮೇಡಂಗಳನ್ನು ಗುಡ್ಡೆ ಹಾಕಿಕೊಂಡು ನಮಗೆ ತಿಳಿಯದ ವಿಷಯಗಳನ್ನು ಮಾತಾಡುತ್ತಿದ್ದರು. ಹೆಡ್ಮೇಷ್ಟ್ರು ಸದಾ ನಿದ್ದೆ ಗಿರಾಕಿ. ಕೂತಲ್ಲೇ ಮಲಗಿ ಬಿಡುತ್ತಿದ್ದರು. ಬಾಯಿಂದ ಜೊಲ್ಲು ಸುರಿದರೂ ಅದವರ ಗಮನಕ್ಕೆ ಬರುತ್ತಿರಲಿಲ್ಲ.
ಮೇಷ್ಟ್ರುಗಳು ಬೀಡಿ ಸೇದಿ, ಎಲೆಯಡಿಕೆ ಜಗಿದು, ಕೊನೆ ಬೆಲ್ಲಿನೊತ್ತಿಗೆ ಮಿರ್ಜಿ ಮಂಡಕ್ಕಿ ಖಡಕ್ ಟೀಗೆ ಸಜ್ಜಾಗುತ್ತಿದ್ದರು.

ಇಡೀ ಅವರ ದಿನ ಹೀಗೆ ನಮ್ಮ ಕಣ್ಣೆದುರು ಮುಗಿದು ಹೋಗುತ್ತಿ ದ್ದವು. ಇವರನ್ನೆಲ್ಲಾ ಮೇಷ್ಟ್ರುಗಳು ಅನ್ನುವ ಬದಲಿಗೆ ಪ್ರಗತಿಪರ ರೈತರು, ಬಡ್ಡಿ ವ್ಯಾಪಾರಿಗಳು ಎನ್ನಬಹುದಿತ್ತು. ಸಾಲ ಪಡೆದ ಊರ ಜನ ಬಡ್ಡಿ ಕೊಡಲು ಶಾಲೆಯ ಹತ್ತಿರವೇ ಬರುತ್ತಿದ್ದರು. ನಮ್ಮ ಪಿ.ಇ. ಮೇಷ್ಟ್ರಂತೂ ಶಾಲೆಯನ್ನೇ ಫೈನಾನ್ಸ್ ಕಂಪನಿ ಮಾಡಿಕೊಂಡಿದ್ದರು. ಅವರಿಂದ ಸಾಲ ಪಡೆಯದ ಮನುಷ್ಯನೇ ಇರಲಿಲ್ಲ. ಗಂಟೆಗೊಮ್ಮೆ ಜೇಬಿನಿಂದ ನೋಟುಗಳ ಕಂತೆ ತೆಗೆದು ಎಣಿಸಿ ಎಣಿಸಿ ಇಟ್ಟುಕೊಳ್ಳುತ್ತಿದ್ದರು. 

ನಾವೆಲ್ಲಾ ಬೆರಗುಗಣ್ಣಿನಿಂದ ನೋಡುತ್ತಿದ್ದೆವು. ಅಷ್ಟೊಂದು ರೊಕ್ಕ ಎಣಿಸುವ ಮನುಷ್ಯನನ್ನೇ ನಾವು ಅಲ್ಲೀ ತನಕ ನೋಡಿರಲಿಲ್ಲ. ಬೆಳಿಗ್ಗೆ ಪೀಪಿ ಊದಿ, ಪ್ರೆಯರ್ ಮಾಡಿದರೆ ಅವರ ಡ್ಯೂಟಿ ಮುಗಿದಂತೇ ಲೆಕ್ಕ. ಇದೇನೆ ಇದ್ದರೂ ಅವರೆಲ್ಲಾ ನಮ್ಮ ಗುರುಗಳು. ಅವರ ವಿಷಯದಲ್ಲಿನ ಭಯ ಭಕ್ತಿಗಳು ಅದ್ಯಾಕೋ ಇಂದಿಗೂ ಇಳಿಮುಖವಾಗಿಲ್ಲ. ನಮ್ಮಗಳ ಓದಿನ ವಿಷಯದಲ್ಲಿ ಕಾಳಜಿ ಮಾಡುವ ಪುಟ್ಟಸ್ವಾಮಿ, ಸೋಮಶೇಖರಪ್ಪ, ಬಸವರಾಜಪ್ಪ ಥರದ ಕೆಲ ದೇವತಾ ಗುರುಗಳೂ ಆಗ ಇದ್ದರೆಂಬುದೇ ನಮಗಿದ್ದ ಸಮಾಧಾನ.

ನಮ್ಮ ಕೆಲ ಮೇಷ್ಟ್ರುಗಳು ಪಾಠ ಮರೆತಿ ದ್ದರೂ, ಹೊಡೆಯುವುದನ್ನು ಮರೆತಿರಲಿಲ್ಲ. ಯಾವಾಗಲೋ ಬಂದು ಏನೇನೋ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಾವು ಉತ್ತರ ಹೇಳದಿದ್ದಾಗ ನಾಯಿಗಳಿಗೆ ತದುಕುವಂತೆ ತದುಕಿ ಬಿಸಾಕು ತ್ತಿದ್ದರು. ಸುಖಾಸುಮ್ಮನೆ ಇವರ ಹತ್ರ ಹೊಡೆತ ತಿನ್ನುವುದು ಕೊನೆಯ ಬೆಂಚಿನ ನಮಗೆ ವರ್ತನೆ ಆಗಿ ಹೋಗಿತ್ತು. ಎಷ್ಟೋ ಸಲ ಈ  ಮೇಷ್ಟ್ರುಗಳು ನಮಗೆ ಯಾಕೆ ಹೊಡೀತಿದ್ದಾರೆ ಅನ್ನೋದೂ  ಗೊತ್ತಾಗುತ್ತಿರಲಿಲ್ಲ. ಅವರ ಕೈಲಿ ಕೋಲು ಕಂಡ ತಕ್ಷಣ ಅಡ್ವಾನ್ಸಾಗಿ ಹೊಡೆತಕ್ಕೆ ಕೈ ಒಡ್ಡುತ್ತಿದ್ದವು.

ಕನ್ನಡಕ್ಕಿದ್ದ ಗುರುಗಳು ಮಾತ್ರ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಅವರನ್ನು ನಾವೆಲ್ಲಾ ಹಿಂದಿನಿಂದ ಕೆಂಪಾ, ಕೆಂಪಾ ಎಂದು ಕಿಚಾಯಿಸುತ್ತಿದ್ದೆವು. ಅವರು ಕೆಂಪಗೆ ಇದ್ದರು. ಇಸ್ತ್ರೀ ಮಾಡಿದ ಗರಿಗರಿ ಬಟ್ಟೆ ಹಾಕುತ್ತಿದ್ದರು. ‘ನಾನು ಕಣ್ಣು ಇಟ್ಟರೆ ಯಾರಿಗೂ ಬಿಡಲ್ಲ ಕಂಡ್ರೋ’ ಎನ್ನುತ್ತಿದ್ದರು. ಸೇಡು ತೀರಿಸಿಕೊಳ್ಳುವ ನಾಯಕರ ಕಥೆಗಳನ್ನೇ ಹೆಚ್ಚಾಗಿ ಹೇಳುತ್ತಿದ್ದರು. ಅವರನ್ನು ಕಂಡರೆ ಬಹಳ ಭಯವಾಗುತ್ತಿತ್ತು.

ನಮಗೆ ಹಿಂದಿ ಪಾಠಕ್ಕೆ ಬರುತ್ತಿದ್ದ ಮೇಷ್ಟ್ರು ತುಂಬಾ ಒಳ್ಳೆಯವರು. ಅವರು ನಮ್ಮ ಸ್ಕೂಲಿನ ಎದುರೇ ಅಂಗಡಿಯನ್ನೂ ಇಟ್ಟುಕೊಂಡಿದ್ದರು. ಅವರನ್ನು ಮುದ್ದೆ ಮೇಷ್ಟ್ರು ಎಂದು ಕರೀತಿದ್ದೆವು. ಅವರು ಯಾವಾಗಲೂ ಬಿಸಿ ರಾಗಿ ಮುದ್ದೆಗೆ ಲಗತ್ತಾಗುವ ಸಾರುಗಳ ವರ್ಣನೆ ಮಾಡುತ್ತಿದ್ದರು. ಬಾಯಲ್ಲಿ ನೀರೂರುವಂತೆ ಹೇಳುತ್ತಿದ್ದರು. ಶಾಲೆಗೆ ಬಂದು ಸಹಿ ಹಾಕಿ, ಪುಸಕ್ಕೆಂದು ಅಂಗಡಿಗೆ ಹೋಗಿ ಕೂತು ಬಿಡುತ್ತಿದ್ದರು. ಅಪರೂಪಕ್ಕೆ ಶಾಲೆಗೆ ಬಂದರೆ ಒಂದು ತಿಂಗಳ ಪಾಠವನ್ನು ಒಂದೇ ಪಿರಿಯೆಡ್‌ನಲ್ಲಿ ಮುಗಿಸಿ ಹೋಗುತ್ತಿದ್ದರು.

ಎಲ್ಲಾ ಪಾಠಗಳಿಗೂ ಅವರದು ಒಂದೇ ಪೀಠಿಕೆ. ಈ ಪಾಠದಲ್ಲಿ ಅಂಥದ್ದೇನೂ ಇಲ್ಲ. ಬಹಳ ಸುಲಭ ಇದೆ. ಎಲ್ಲಾ ಒಂದ್ ಸಲ ಓದ್ಕೊಂಡು, ಮೂರು ಸಲ ಬರೆದು ಬಿಡಿ. ‘ಏಯ್ ರಘು. ನೀನು ಓದು ಮರಿ. ಎಲ್ಲಾ ಗಲಾಟೆ ಮಾಡದೆ ಕೇಳಿಸಿಕೊಳ್ಳಿ’ ಎಂದು ಹೇಳಿ ಐದೇ ನಿಮಿಷದಲ್ಲಿ ತರಗತಿಯಿಂದ ಮಾಯವಾಗಿ ಬಿಡುತ್ತಿದ್ದರು. ರಘು ಒಬ್ಬನಿಗೆ ಮಾತ್ರವಷ್ಟೇ ನಮ್ಮ ಕ್ಲಾಸಿನಲ್ಲಿ ಹಿಂದಿ ಓದಕ್ಕೆ, ಬರೆಯೋಕೆ ಅಲ್ಪ ಸ್ವಲ್ಪ ಬರುತ್ತಾ ಇತ್ತು. ಅವನು ಯಾರಿಂದ ಕಲಿತಿದ್ದನೋ ತಿಳಿಯದು. ಮೇಲಾಗಿ ಅವನೇನು ಓದುತ್ತಿದ್ದನೋ? ನಾವೇನು ಅರ್ಥಮಾಡಿ ಕೊಳ್ಳುತ್ತಿದ್ದವೋ? ಅದೂ ಗೊತ್ತಿಲ್ಲ.

ಪರೀಕ್ಷೆಗಳು ಹತ್ತಿರ ಬಂದು ಬಿಟ್ಟವು. ಹಿಂದಿಯನ್ನು ಹೇಗೆ ಬರೆಯಬೇಕೆಂಬ ಚಿಂತೆ ನಮ್ಮನ್ನು ಕಾಡತೊಡಗಿತ್ತು. ಎಲ್ಲಾ ಪಾಠಗಳೂ ಸುಲಭ ಎನ್ನುತ್ತಿದ್ದ ಹಿಂದಿ ಮೇಷ್ಟ್ರು ನೆಟ್ಟಗೆ ಹಿಂದಿ ವರ್ಣಮಾಲೆಯನ್ನೂ ಕಲಿಸಿರಲಿಲ್ಲ. ಕೊನೆಗೆ ಕೇಳಿದಾಗ ಅದೂ ಸುಲಭ ಎಂದರು. ಹೇಗೆಂದು ಕೇಳಿದೆವು.

‘ಅಯ್ಯೋ ಮುಂಡೇವಾ! ಹಿಂದಿ ಅಂದ್ರೆ ಏನಂತ ತಿಳ್ಕೊಂಡಿದ್ದೀರ. ಅದು ಹಿಂದಿ. ಅಂದ್ರೆ ಕನ್ನಡದಲ್ಲಿ ಹಿಂದೆ ಅಂತಾರಲ್ಲಾ ಅದೇ ಅರ್ಥ. ಅದೊಂದನ್ನ ನೀವು ನೆನಪಿಟ್ಟುಕೊಂಡ್ರೆ ಸಾಕು. ಉಳಿದಿದ್ದೆಲ್ಲಾ ಬಹಳ ಸುಲಭ. ಈಗ ನಿಮಗೆ ಎಕ್ಸಾಮಲ್ಲಿ  ಹಿಂದಿ ಕೊಶ್ಚನ್ ಪೇಪರ್ ಕೊಟ್ತಾರಲ್ಲಪ್ಪಾ. ಅದರಲ್ಲಿ ಹಿಂದಿ ಅಕ್ಷರಗಳು ಪ್ರಿಂಟ್ ಆಗಿರ್ತಾವೆ ತಾನೆ. ಅದನ್ನ ನೋಡ್ಕೊಂಡು ಒಂದೂ ಅಕ್ಷರನೂ ಬಿಡದಂಗೆ ಹಿಂದಿನಿಂದ ಮೇಲಿನ್ ತಂಕ ಬರೀರಿ. ಹಿಂಗ್ ಹಿಂದಿನಿಂದ ಬರಿಯೋ ಹೊತ್ತಿಗೆ ಅದನ್ನ ಹಿಂದಿ ಅನ್ನೋದು.

ಹಿಂದಿನಿಂದ ಬರೆದು  ಕೊಶ್ಚನ್ ಪೇಪರ್ ಮುಗೀತು ಅನ್ತಿದ್ದಂಗೆ ಮತ್ತೆ ತಿರಗ ಬರಕೊಂಡು ವಾಪಸ್ಸು ಬಂದ ದಾರೀಲೇ ಹಿಂದಕ್ಕೆ ಹೋಗ್ರಿ. ಎಲ್ಲಿಗಂಟ ಆಗೋತ್ತೋ ಅಲ್ಲೀಗಂಟ ಹಿಂಗೆ ಮುಂದೆ ಹಿಂದೆ ಬರೀತಾನೆ ಇರ್ರಿ. ಬೆಲ್ ಹೊಡೀತಿದ್ದಂಗೆ ಆಯ್ತು ಅಂತ ಕೊಟ್ಬಿಡಿ. ಹಿಂದಿ ಅಂದ್ರೆ ಇಷ್ಟೆ’ ಎಂದು ಅತ್ಯಂತ ಸರಳವಾಗಿ ನಮಗೆಲ್ಲಾ ಹಿಂದಿ ಕಲಿಸಿಕೊಟ್ಟಿದ್ದರು. ನಾವು ಅವರ ಹಿಂದಿ ಕೊಶ್ಚನ್ ಪೇಪರ್‌ನ ಮೇಲ್ಭಾಗದಲ್ಲಿ ಇಂಗ್ಲಿಷಿನಲ್ಲಿ ಅಚ್ಚು ಹಾಕಿದ್ದ ‘ಜಿಲ್ಲಾ ಮಟ್ಟದ ಎಂಟನೇ ತರಗತಿ ವಾರ್ಷಿಕ ಪರೀಕ್ಷೆ, ವಿಷಯ ಹಿಂದಿ.

ಸಮಯ:ಮೂರು ಗಂಟೆಗಳು, ಅಂಕಗಳು:ನೂರು’ ಎಂಬ ಹೆಡ್ಡಿಂಗ್‌ಗಳನ್ನು ಬಿಡದೆ ಬರೆದು ಹಿಂದಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಸಾದೆವು. ಮೊನ್ನೆ ನನ್ನ ಮಗ ಹಿಂದಿಯ ಅದ್ಯಾವುದೋ ಪಾಠ ಗೊತ್ತಾಗುತ್ತಿಲ್ಲ ಅಪ್ಪಾ ಹೇಳಿಕೊಡು ಎಂದು ಬಂದು ನಿಂತ. ಆ ಭಾಷೆಯ ಪದಗಳನ್ನು ಅನಕ್ಷರಸ್ಥನಂತೆ ವೀಕ್ಷಿಸಿದೆ. ಬರಲ್ಲ ಎಂದು ಹೇಳುವ ಧೈರ್ಯವಿಲ್ಲದೆ ಕಷ್ಟಪಟ್ಟು ತಪ್ಪುತಪ್ಪಾಗಿ ಏನೇನೋ ಓದತೊಡಗಿದೆ.

ನಾನು ತಡವರಿಸಿ ಎಬಡತಬಡ ಓದುವುದನ್ನು ನೋಡಿ ನಕ್ಕ ಮಗ ಪುಸ್ತಕವನ್ನು ನನ್ನಿಂದ ಕಸ್ಕೊಂಡು ‘ಅಯ್ಯೋ ಪಪ್ಪನಿಗೆ ಹಿಂದಿ ಓದಕ್ಕೇ ಬರ್ತಿಲ್ಲ. ಶೇಮ್ ಶೇಮ್’ ಎಂದು ಅವರಮ್ಮನಿಗೆ ಚಾಡಿ ಹೇಳಲು ಓಡಿ ಹೋದ. ‘ಹಿಂದಿ ಎಂದರೆ ಬಹಳ ಸುಲಭ. ಹಿಂದಿನಿಂದ ಕೊಶ್ಚನ್ ಪೇಪರ್ ಬರಕೊಂಡು ಮೇಲಿನ ತಂಕ ಬರೋದೆ ಹಿಂದಿ ಕಣಪ್ಪ’ ಅಂತ ಅವನಿಗೆ ಹೇಳುವಷ್ಟು ಹೊತ್ತೂ ಅವನು ನಿಲ್ಲಲಿಲ್ಲ. ಶಾಲೆಯೊಳಗೆ ಹಿಂದಿ ಕಲಿಸದೆ, ಶಾಲೆಯ ಮುಂದೆ ಅಂಗಡಿ ನಡೆಸಿದ ಆ ಮುದ್ದೆ ಮೇಷ್ಟ್ರು ಮುಖ ಹಿಂದಿ ಅಕ್ಷರಗಳನ್ನು ಕಂಡಾಗೆಲ್ಲಾ ನೆನಪಾಗುತ್ತದೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.