ADVERTISEMENT

ಅರಿವು ಇರವಿನ ಒಳಗಿನ ಮಾತು

ಜಿ.ಕೆ.ರವೀಂದ್ರಕುಮಾರ್
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST
ಅರಿವು ಇರವಿನ ಒಳಗಿನ ಮಾತು
ಅರಿವು ಇರವಿನ ಒಳಗಿನ ಮಾತು   

ಪೌರಾತ್ಯ  ತತ್ವಜ್ಞಾನದ ಬಹು ಮುಖ್ಯ ಕೊಡುಗೆಗಳಲ್ಲಿ ಝೆನ್ ಒಂದಾಗಿದೆ. ತಾತ್ವಿಕ ಪರಿಕಲ್ಪನೆಗಳನ್ನು ರೂಪಕಾತ್ಮಕವಾಗಿ ನೋಡಿದ ಅಲ್ಲಿಯ ಚಿಂತಕರು ತಮ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಹೊಳಹುಗಳ ಜಗತ್ತನ್ನು ನಿರ್ಮಿಸಿದರು.
 
ಇದಕ್ಕಾಗಿ ಅವರು ಬಳಸಿದ ಬೆಡಗು, ಒಗಟು, ಉಲ್ಲಂಘನೆಯ ಹಟ, ಅನುಮಾನ ವಿಶೇಷ, ಧ್ಯಾನಾತ್ಮಕ ಸಿದ್ಧಿಗಳು ಕಾವ್ಯವನ್ನು ಪ್ರೇರಿಸಿರುವುದು ಮತ್ತು ಕಾವ್ಯ ಅವುಗಳನ್ನು ಪರಿಭಾವಿಸಿಕೊಳ್ಳುತ್ತಿರುವುದು ಕುತೂಹಲಕಾರಿಯಾಗಿದೆ. ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಝೆನ್ ಸಾಹಿತ್ಯ, ತಾವೋ ಪದ್ಯ, ಹಾಯಿಕು ಮುಂತಾದವುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ದರ್ಶನ ಸಾರವೊಂದು ಕಾವ್ಯದ ಪರಿವೇಶವನ್ನು ತೊಡುವ ಮತ್ತು ತೊಡಿಸುವ ಕಾವ್ಯ ಕ್ರಿಯೆಯಾಗಿ ಇದು ಚಾಲ್ತಿಯಲ್ಲಿದೆ. ಈ ಆಕರ್ಷಕ, ಸರಳ ಮಾರ್ಗವು `ಇರುವುದನ್ನು ಇಲ್ಲವಾಗಿಸುತ್ತ, ಇಲ್ಲದುದನ್ನು ಇರುವಂತೆ ತೋರುತ್ತ, ಇದು ಅದಾಗುವ ಅದೇ ಇದಾಗುವ~ ಒಂದು ಸರಳ ಉತ್ಕಟದ ಬಗೆಯಲ್ಲಿ ಅಧ್ಯಾತ್ಮದ ಅಂಚನ್ನು ಮುಟ್ಟುವ ಹವಣಿಕೆಯಲ್ಲಿದೆ. ಸದ್ಯಕ್ಕೆ ಇದು ಕನ್ನಡ ಕಾವ್ಯದ ಪ್ರೀತಿಯ ಮಾರ್ಗವಾಗಿದೆ.

 ಎಚ್.ಆರ್. ರಮೇಶರು ಝೆನ್‌ಗೆ ಕನ್ನಡದ ನದಿಯನ್ನು ಸೇರಿಸಿ ಅದನ್ನು ~ಝೆನ್ನದಿ~ ಎಂದು ಕರೆದಿದ್ದಾರೆ.  ಇದೊಂದು ಹೊಸ ಪ್ರಯೋಗ.  ~ಧ್ಯಾನದ ನದಿ~ ಎಂದು ಇದನ್ನು ಅರ್ಥೈಸಬಹುದು.  ತಮ್ಮ ~ಝೆನ್ನದಿ~ ಸಂಕಲನದಲ್ಲಿ ಎಂಬತ್ತೇಳು ಪುಟ್ಟ ಕವಿತೆಗಳನ್ನು ಅವರು ಸೇರಿಸಿ ಕೊಟ್ಟಿದ್ದಾರೆ.  ಈ ಕವಿತೆಗಳಿಗೆ ಶೀರ್ಷಿಕೆಗಳಿಲ್ಲ.  ಹಾಗಾಗಿ 23, 24, 25 ಎಂಬುದಾಗಿ ಸಂಖ್ಯಾ ಶೀರ್ಷಿಕೆಗಳನ್ನು ಅವರು ಕೊಡಲೇಬೇಕಾಗಿದೆ. ಬಹುಶಃ ಇದು ಬಿಟ್ಟೆನೆಂದರೂ ಬಿಡಲಾಗದ ಮಾಯೆಯ ಒಂದು ಝೆನ್.

ಮೊದಲ ಝೆನ್ನದಿ ಪ್ರಳಯದ ಭೀತಿಯಲ್ಲಿ ಹೂವೊಂದರ ಕನಸನ್ನು ಕುರಿತು ಚಿಂತಿಸುತ್ತದೆ.  ಸೂರ್ಯ ಸುಡುವ, ಭೂಮಿ ಕುದಿಯುವ, ಸಮುದ್ರ ಹೆಪ್ಪುಗಟ್ಟುವ ಮೂಲಕ ಕೊನೆಯಾಗುವ ಚರಿತ್ರೆಯೊಂದನ್ನು ತನ್ನ ಮೊದಲ ನಾಲ್ಕು ಸಾಲುಗಳಲ್ಲಿ ಊಹಾತ್ಮಕವಾಗಿ ಕವನವು ಆವಾಹಿಸಿಕೊಳ್ಳುತ್ತದೆ.

ಇಂತಹ ತಲ್ಲಣದ ಸನ್ನಿವೇಶದಲ್ಲಿ ದೇವ ಪಾದಗಳನ್ನು ಅಲಂಕರಿಸುವ ಸ್ವಪ್ನದಲ್ಲಿದ್ದ ಹೂವಿನ ಕುರಿತು ಯೋಚಿಸುವುದು ಹಾಗೂ ಅಲಂಕರಿಸಿಕೊಳ್ಳಬಯಸಿದ ಪಾದಗಳೂ ಆ ಹೂವಿಗಾಗಿ ಕಾತರಿಸುವುದು ಕವಿತೆಯೊಳಗಿನ ಭಾವಾತ್ಮಕ ಸಂಚಲನ. 

ಕೊನೆಗೊಳ್ಳುವ ಯಾತನೆಯಲ್ಲೂ ಕವಿ ಮಣ್ಣಿಗಂಟಿದ ಹೂವನ್ನು ಪಾದಗಳ ಮೇಲಿಡುತ್ತಾನೆ. ಕೊನೆಯಾಗುವ ಕ್ಷಣಗಳಲ್ಲಿ ಆ ಹೂವು ಪಾದಗಳನ್ನು ಅರಳಿಸಿ ಬೆಳೆಸುವುದನ್ನು ಕಂಡು ವಿಸ್ಮಯಗೊಳ್ಳುತ್ತಾನೆ. ವಿನಾಶದ ಹೊತ್ತಿನಲ್ಲೂ ವಿಕಸಿತಗೊಳ್ಳುವ ಚೈತನ್ಯದ ಪರಿ ಇಲ್ಲಿಯ ಅಚ್ಚರಿ.

ಮೊದಲ ಝೆನ್ನದಿ ಕೈ ಮೀರಿದ ವಿನಾಶ ಕಾಲದಲ್ಲೂ ಇರುವ ಭಾವದ್ರವ್ಯದ ಕುರಿತು ಚಿಂತಿಸಿದರೆ ಎರಡನೆಯದು ಕೈಯೊಳಗಿನ ವಿನಾಶದ ಕ್ರೌರ್ಯದ ಕುರಿತು ಚಿಂತಿಸುತ್ತದೆ. ಹಸಿವಿಗಾಗಿ ಆಡುವ ಬೇಟೆ, ಹಸಿವಿಲ್ಲದೆಯೂ ಆಡುವ ಬೇಟೆಯ ಕ್ರೌರ್ಯದ ನಡುವೆ ಕೋವಿ ಎಂಬುದು ಜಗದ ಜೀವ ಅಳಿಸುವ ಮನಃಸ್ಥಿತಿಯ ರೂಪದಂತೆ ನಿಲ್ಲುತ್ತದೆ.
 
ಮೃಗವನ್ನು ಕೊಂದ ಕೋವಿಯು ಕೊಲುವವನನ್ನೇ ದಿಟ್ಟಿಸಿ ನೋಡುವಲ್ಲಿಗೆ ಕವಿತೆ ಮುಗಿಯುತ್ತದೆ.  ಜೀವವನ್ನು ತಿಂದ ಮೃಗದ ಕಣ್ಣಲ್ಲಿ ನವಿಲಾಟವೆಂಬ ವ್ಯಂಗ್ಯ ತೋರುವ ಕವಿತೆ ಬೇಟೆಯಾಡಿದ ಮನುಷ್ಯನ ಕಣ್ಣೊಳಗಿನ ವ್ಯಂಗ್ಯವನ್ನು  ತೋರಗೊಡುವುದಿಲ್ಲ. ಬದಲಾಗಿ ಕೋವಿಯೇ ಕಣ್ಣಾಗುತ್ತದೆ.

ಅಳಿವು ಮತ್ತು ಉಳಿವಿನ ತಾಕಲಾಟದಲ್ಲಿ ಇರವಿನ ಘನವಂತಿಕೆಯನ್ನು ಮೊದಲ ಕವಿತೆ ಹೇಳಿದರೆ ಎರಡನೆಯದು ಇರವಿನ ಅರ್ಥಹೀನತೆಯನ್ನು ತಿಳಿಸುತ್ತದೆ. ಇಲ್ಲಿ  ಹೂವು ಮತ್ತು ಪಾದಗಳ ಒಳಗಿನ ಮಾತು ಭಾಷೆಯ ಮೃದು ಯಾನವಾದರೆ, ಕೋವಿ ಮತ್ತು ಮನುಷ್ಯನ ಒಳಗಿನ ಮಾತು ಭಾಷೆಯ ಒರಟುಯಾನ. 

ಧ್ಯಾನದ ನದಿಯ ಹರಿಯುವಿಕೆಯಲ್ಲಿ ಈ ಎರಡೂ ಒಂದಾಗಿರುವುದೇ ವರ್ತಮಾನದ ಆತಂಕ. ಇದು ಇರಬಹುದೆನ್ನುವ ಹೊತ್ತಿನಲ್ಲೇ ಮೂರನೆಯ ಝೆನ್ನದಿ ಇದಕ್ಕೆ ಒಂದು ವಿಲಕ್ಷಣ ವ್ಯಾಖ್ಯಾನ ನೀಡುತ್ತದೆ.
 
ಇವೆಲ್ಲಾ ನಮ್ಮಳಗಿನ ಸ್ವಗತಗಳಾದಾಗ ಅರ್ಥವಾಗದಿರುವುದೇ ಬದುಕಿನ ದೊಡ್ಡ ಅರ್ಥ ಎಂದು ಮನದಟ್ಟಾಗುತ್ತದೆ.  ಆದರೂ ಅದಕ್ಕಾಗಿ ಹೆಣಗುವುದೇ ಕಾಲಾಂತರದ ಯತ್ನ. ಅಲ್ಲಿ ಕವಿತೆ ಒಂದು ಮೀಟುಗೋಲು. ಅದು ರಮೇಶರ ಝೆನ್ನದಿ. ಅದು ಅಸಂಗತ, ಆಧುನಿಕ, ಕೆಲವೊಮ್ಮೆ ದೇಸಿಯಾಗುವ ಮಿಶ್ರ ಧ್ಯಾನದ ಹಾದಿ.

ಮೂರು ಝೆನ್ನದಿಗಳು
ಝೆನ್ನದಿ - 34
ಆವೊತ್ತು ಕೊನೆಯಂತೆ.  ಸೂರ್ಯ ಸುಟ್ಟು ಬೂದಿಯಾಗುವ ಒಂದರೆಗಳಿಗೆ ಮುನ್ನ
ಒಲೆಯ ಮೇಲಿನ ಆಹಾರದಂತೆ ಕೊತ ಕೊತ ಭೂಮಿ ಕುದ್ದು ಹೋಗುತ್ತಂತೆ.
ಇದ್ದಕ್ಕಿದ್ದಹಾಗೆ ಸಮುದ್ರ ಹೆಪ್ಪು ಗಟ್ಟಿದ ಮಂಜಾಗುತ್ತಂತೆ.
ಸೂರ್ಯ ತಣ್ಣಗಾಗುತ್ತಂತೆ. ಇದೆಲ್ಲಾ ಕೊನೆ ಚರಿತ್ರೆಯಂತೆ.

ಅಯ್ಯೋ ಅಲ್ನೋಡು ಹೂವು ಬಿದ್ದೇ ಬಿಡ್ತು.  ಎತ್ತಿ ಆ ಸುಂದರ ಪಾದಗಳ ಮೇಲಿಡುವೆ.
ಎಷ್ಟು ಕಾಲದಿಂದ ಆ ಹೂವು ಕಾಯ್ತೊ ಇತ್ತು.  ವಾಸ್ತವದ ಜಂಗುಳಿಯಲ್ಲೂ ಆ ಹೂವಲಿ
ದರ್ಪಣ ಗೊಂಡಿತ್ತು ಪಾದಗಳ ಆತ್ಮ.  ಬಿದ್ದು ಮಣ್ಣಿಗಂಟಿದ ಆ ಹೂವ ಆ
ಪಾದಗಳ ಮೇಲಿಡುವೆ.  ಮಣ್ಣಿಗಂಟಿದ ಹೂವು ಆ ಪಾದಗಳ ಅರಳಿಸುತಿರುವುದ ಕಾಣಿ.
ಕೊನೆಯಂತೆ ಅವೊತ್ತು.ಆಹಾ ಆ ಹೂವು ಆ ಪಾದಗಳ ಬೆಳೆಸುತಿದೆ.

ಝೆನ್ನದಿ - 36
ಮೃಗ ಕಂಡರೆ ಕೋವಿ ಥಟ್ಟನೆ ನಿಲ್ಲುವುದು ಮುಂದೆ.
ಹರಿದಾಡಿದರೆ ಹಾವಂತೂ ಬೆಂಕಿ ಸುಟ್ಟು ಬೂದಿ.
ಅವೆಲ್ಲ ಮೃಗಗಳಾಗಿ ತೋರಿ ಮುಗಿಸುವ ಸಂಚು.
ವಿಲಕ್ಷಣ ಸುಖ ತನ್ನನು ತಾನೇ ಕಂಡು ಜಗದ ಜೀವ ಅಳಿಸಿ.

ಪ್ರಭು,
ಮೃಗ ನನ್ನ ಮುಂದೇ ಹಾದೋಗುತಿದೆ ಮುದ್ದು ಚಿಗರೆಯ ತಿಂದು
ನೀನಿದ್ದರೂ ನಿನ್ನರಿವು ಇಲ್ಲದಂತೆ ಅವು.
ನೀನಡೆದಂತೆ ನಿನ್ನ ನೆರಳ ತುಳಿದಿರುವೆ.
ಅಬ್ಬಾ! ಮುದ್ದು ಚಿಗರೆಯ ಸಂಚಾಕಿ ಮುಗಿಸಿ ನಡೆಯುತಿದೆ ಮೃಗ.
ಮೃಗದ ಕಣ್ಣ ಹೊಳಪು.

ಕಣ್ಣ ಹೊಳಪಿನಾಳದಲಿ ನವಿಲಾಟ. ಮೃಗದ ಕಣ್ಣಲಿ ನವಿಲಾಟ.
ಪ್ರಭು, ಮೃಗವ ಕೊಂದಿರುವೆ. ಕೋವಿ ನನ್ನನೇ ನೋಡುತಿದೆ ದಿಟ್ಟಿಸಿ.
ನೋಡುತಿದೆ ಕೋವಿ ದಿಟ್ಟಿಸಿ.

ಝೆನ್ನದಿ - 41
ಅವನು ಸತ್ತೇ ಹೋಗಿಬಿಟ್ಟ ಮೊನ್ನೆ ಆಚೆ ಮೊನ್ನೆಯಷ್ಟೆ ಅನೇಕ ಪ್ರಾಣಗಳ ಹಾರಿಸಿದ್ದ
ಮೊನ್ನೆ ಅವನ ಕಿವಿಯೊಳಗೆ ಇರುವೆ ಸೇರಿಕೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.