ಎ.ಕೆ. ರಾಮಾನುಜನ್ ಸಮಗ್ರ
ಪುಟಗಳು: 660, ಬೆಲೆ: ್ಙ 500
ಸಂಪಾದಕರು:
ಎಸ್. ದಿವಾಕರ್, ರಮಾಕಾಂತ ಜೋಷಿ
ಪ್ರಕಾಶಕರು:
ಮನೋಹರ ಗ್ರಂಥಮಾಲಾ
ಲಕ್ಷ್ಮೀ ಭವನ, ಸುಭಾಸ ರೋಡ್, ಧಾರವಾಡ
ದೂ.: 0836 2441822
ಎ.ಕೆ. ರಾಮಾನುಜನ್ ಎಂದೇ ಪ್ರಸಿದ್ಧರಾದ ಅತ್ತಿಪೇಟೆ ಕೃಷ್ಣಸ್ವಾಮಿ ರಾಮಾನುಜನ್ (1929-93) ಸಮಕಾಲೀನ ಕನ್ನಡ ಓದುಗರಿಗೆ ಪರಿಚಿತ ಹೆಸರು. ಮನೋಹರ ಗ್ರಂಥಮಾಲೆಯ `ರಾಮಾನುಜನ್ ಸಮಗ್ರ~ ಪುಸ್ತಕದಲ್ಲಿ ಬಹುಶಃ ರಾಮಾನುಜನ್ ಅವರ ಪತ್ರಗಳನ್ನು ಬಿಟ್ಟರೆ ಅವರ ಇನ್ನುಳಿದ ಕನ್ನಡ ಬರಹಗಳೆಲ್ಲವೂ ಅಡಕವಾಗಿವೆ.
ಆದರೆ ಒಟ್ಟಾರೆ ಅಧ್ಯಯನದ ಹಿತದೃಷ್ಟಿಯಿಂದ ಮೊದಲಿಗೇ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ರಾಮಾನುಜನ್ ಯಾರು ಎನ್ನುವುದು ತೋರಮಟ್ಟಿಗೆ ಕನ್ನಡಿಗರಿಗೆ ಗೊತ್ತಿದೆ; ಆದರೆ ವಿವರವಾಗಿ ಹೆಚ್ಚಿನ ಮಂದಿಗೆ ಗೊತ್ತಿರಲಾರದು. `ಪ್ರಕಾಶಕರ ಮಾತು~ ಮತ್ತು `ಮುನ್ನುಡಿ~ಗಳಲ್ಲಿ ಅಲ್ಲಲ್ಲಿ ಕೆಲವೊಂದು ವಿವರಗಳು ಬಿಡಿ ಬಿಡಿಯಾಗಿ ಬರುತ್ತವೆ ಎನ್ನುವುದು ನಿಜವಾದರೂ, ಅವೆಲ್ಲವೂ ಪ್ರಾಸಂಗಿಕವಾಗಿಯಲ್ಲದೆ ಒಪ್ಪವಾಗಿ ಅಲ್ಲ, ಹಾಗೂ ಪ್ರಾಸಂಗಿಕ ಉಲ್ಲೇಖಗಳು ಯಾವತ್ತೂ ಅಪೂರ್ಣವಾಗಿರುತ್ತವೆ.
ರಾಮಾನುಜನ್ ಜೀವನದ ಮುಖ್ಯ ಘಟನೆಗಳನ್ನು ಒಂದು ಕಿರು ಲೇಖನವಾಗಿಯೋ ಪಟ್ಟಿಯಾಗಿಯೋ ಕೊಡುತ್ತಿದ್ದರೆ ತುಂಬಾ ಉಪಯುಕ್ತವಾಗುತ್ತಿತ್ತು. ಈ ಪುಸ್ತಕವನ್ನು ಹುಡುಕಿದರೆ ಅವರು ಹುಟ್ಟಿದ ಇಸವಿ ಗೊತ್ತಾಗುತ್ತದೆ; ಆದರೆ ತೀರಿಹೋದ ಇಸವಿ ಸಿಗುವುದಿಲ್ಲ. ಅವರು ಹೇಗೆ ತೀರಿಹೋದರು ಎನ್ನುವುದೂ ಗೊತ್ತಾಗುವುದಿಲ್ಲ.
(ರಾಮಾನುಜನ್ 1993ರಲ್ಲಿ ಶಿಕಾಗೋ ಆಸ್ಪತ್ರೆಯೊಂದರಲ್ಲಿ ಶಸ್ತ್ರಕ್ರಿಯೆಯ ಮೊದಲಿಗೆ ನೀಡುವ ಅರಿವಳಿಕೆ ಔಷಧಿಯ ಕಾರಣ ತೀರಿಕೊಂಡರು). 1976ರಲ್ಲಿ ಭಾರತ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ತುರ್ತುಪರಿಸ್ಥಿತಿಯ ಆಸುಪಾಸಿನ ಕಾಲ ಅದು. ಭಾರತದ ಹಲವು ಲೇಖಕರು ಸರಕಾರದ ವಿರುದ್ಧ ನಿಂತಿದ್ದ ಸಮಯ. ಶಿವರಾಮ ಕಾರಂತರು ತಮಗೆ ಮೊದಲೇ ಸಿಕ್ಕಿದ್ದ ಇಂಥದೊಂದು ಪ್ರಶಸ್ತಿಯನ್ನು ಪ್ರತಿಭಟನೆಯಾಗಿ ಹಿಂತಿರುಗಿಸಿದ್ದರು ಎಂದು ನನ್ನ ನೆನಪು.
ರಾಮಾನುಜನ್ ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಹಲವರ ಟೀಕೆಗೆ ಗುರಿಯಾದ ಒಂದು ಘಟನೆ. ಅದೇ ಸರಿಸುಮಾರಿಗೆ ಅವರು ಸ್ಪಾನ್‌ಗೆ ನೀಡಿದ ಸಂದರ್ಶನದಲ್ಲಿ ತಾನು ರಾಜಕೀಯ ನಿಸ್ಪೃಹ (apolitical) ಎಂದು ಹೇಳಿದರೆಂದು ಕಾಣಿಸುತ್ತದೆ. ಆದರೆ ಅಷ್ಟಕ್ಕೆ ರಾಮಾನುಜನ್ ಆಳುವವರ ಪರವಾಗಿದ್ದರು ಎಂದೋ ಯಥಾಸ್ಥಿತಿವಾದಿ ಗಳಾಗಿದ್ದರು ಎಂದೋ ತಿಳಿಯುವುದು ತಪ್ಪು; ಅವರು ಹಾಗಿರಲಿಲ್ಲ ಎನ್ನುವುದು ಅವರ ಸಾಹಿತ್ಯವನ್ನು ಓದಿದವರಿಗೆ ಗೊತ್ತಾಗುತ್ತದೆ. ಓದುಗರು ತಮ್ಮ ಓದನ್ನು ತಾವೇ ನಿರ್ಧರಿಸಲಿ; ಆದರೆ ಅದಕ್ಕೆ ಅನುಕೂಲವಾದ ಮಾಹಿತಿಗಳು ಪ್ರಾಥಮಿಕ ನೆಲೆಯಲ್ಲಾದರೂ ಅವರಿಗೆ ದೊರಕುವುದು ಮುಖ್ಯ.
ಸಂಗ್ರಹಗೊಂಡ ಹಲವು ಕೃತಿಗಳ ಮಟ್ಟಿಗೂ ಈ ಮಾಹಿತಿ ಕೊರತೆ ಕಣ್ಣಿಗೆ ಹೊಡೆದು ಕಾಣಿಸುವಂತಿದೆ. ರಾಮಾನುಜನ್ ಅವರ ಒಟ್ಟು ಮೂರು ಕನ್ನಡ ಕವನ ಸಂಕಲನಗಳಲ್ಲಿ `ಹೊಕ್ಕುಳಲ್ಲಿ ಹೂವಿಲ್ಲ~ (1977) ಮೊದಲನೆಯದು. (ಆದರೆ ಅವರ ಮೊದಲ ಕವನ ಸಂಕಲನವಲ್ಲ; ಮೊದಲನೆಯದು ಛಿ ಖಠ್ಟಿಜಿಛ್ಟಿ ಎಂಬ ಇಂಗ್ಲೀಷ್ ಕವನ ಸಂಕಲನ, 1966). `ಮತ್ತು ಇತರ ಪದ್ಯಗಳು~ (1977) ಎರಡನೆಯದು, `ಕುಂಟೋಬಿಲ್ಲೆ~ (1990) ಮೂರನೆಯದು. ಈ ಮೂರನೇ ಸಂಕಲನದ ಪ್ರಕಟಣೆಯ ಇಸವಿಯನ್ನು `ಸಮಗ್ರ~ದಲ್ಲಿ ಎತ್ತಿಕೊಟ್ಟಿರುವ ಕವಿಯ ಚಿಕ್ಕ ಟಿಪ್ಪಣಿಯಿಂದ ನಾವು ಊಹಿಸಿಕೊಳ್ಳಬಹುದಾಗಿದೆ; ಆದರೆ ಮೊದಲ ಎರಡು ಸಂಕಲನಗಳು ಯಾವಾಗ ಪ್ರಕಟವಾದುವು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಕಿರು ಕಾದಂಬರಿ `ಮತ್ತೊಬ್ಬನ ಆತ್ಮಚರಿತ್ರೆ~ಯ ರಚನಾಕಾಲ 1976-1977 ಎಂದು ಲೇಖಕರೇ ಕೊನೆಯಲ್ಲಿ ಕೊಟ್ಟಿರುವ ಮಾಹಿತಿಯಿಂದ ನಮಗೆ ಗೊತ್ತಾಗುತ್ತದೆ, ಆದರೆ ಅದು ಯಾವಾಗ ಪ್ರಕಟವಾಯಿತು ಎನ್ನುವುದು `ಸಮಗ್ರ~ದಿಂದ ಗೊತ್ತಾಗುವುದಿಲ್ಲ. (`ಮತ್ತೊಬ್ಬನ ಆತ್ಮಚರಿತ್ರೆ~ ಪುಸ್ತಕವಾಗಿ ಪ್ರಕಟವಾದುದು 1978ರಲ್ಲಿ). ರಾಮಾನುಜನ್ ಬರೆದ ನಾಲ್ಕು ಸಣ್ಣ ಕತೆಗಳು ಇಲ್ಲಿ ಇವೆಯಾದರೂ, ಅವು ಮೊದಲು ಎಲ್ಲಿ, ಯಾವಾಗ ಪ್ರಕಟವಾದುವು ಎಂಬ ಮಾಹಿತಿಗಳಿಲ್ಲ.
`ರಾಮಾನುಜನ್ ಸಮಗ್ರ~ ಎಂಬ ಕಲ್ಪನೆಯೇ ಒಂದು ಸಮಸ್ಯಾತ್ಮಕತೆಯನ್ನು ಸೃಷ್ಟಿಸುತ್ತದೆ. ಯಾಕೆಂದರೆ ರಾಮಾನುಜನ್ ಅವರ ಸಾಹಿತ್ಯ ಕೃಷಿಯ ಪ್ರಮಾಣ ಕನ್ನಡಕ್ಕಿಂತ ಇಂಗ್ಲೀಷ್‌ನಲ್ಲೇ ಹೆಚ್ಚು. ಇಂಗ್ಲೀಷ್‌ನಲ್ಲಿ ನಾಲ್ಕು ಕವನ ಸಂಕಲನಗಳು, ತಮಿಳು, ಕನ್ನಡ ಮತ್ತು ತೆಲುಗಿನಿಂದ ಹಲವಾರು ಭಾಷಾಂತರಗಳು, ಲೇಖನಗಳು, ಭಾರತದ ಜನಪದ ಕತೆಗಳ ಸಂಗ್ರಹಣ ಮತ್ತು ಅನುವಾದ ಇತ್ಯಾದಿ. ಅವರ ಈ ಇಂಗ್ಲೀಷ್ ಬರಹಗಳನ್ನು `ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್~ ಎರಡು ಬೃಹತ್ ಸಂಪುಟಗಳಲ್ಲಿ ಹೊರತಂದಿದೆ. ಅನಂತಮೂರ್ತಿಯವರ ಕಾದಂಬರಿ `ಸಂಸ್ಕಾರ~ ಲೋಕದ ಹಲವು ಭಾಷೆಗಳಿಗೆ ಅನುವಾದ ಗೊಂಡುದು ರಾಮಾನುಜನ್ ಅವರ ಇಂಗ್ಲೀಷ್ ಭಾಷಾಂತರದಿಂದಲೇ. ರಾಮಾನುಜನ್ ಅವರ ಚಿಕ್ಕಂದಿನಲ್ಲಿ ಮನೆ ಮಾತು ತಮಿಳು; ಪರಿಸರದ ಮಾತು ಕನ್ನಡ. ಹೀಗೆ ಈ ಎರಡೂ ಭಾಷೆಗಳು ಅವರಿಗೆ ಮಾತೃಸಮಾನ. ಮುಂದೆ ಅವರು ಇಂಗ್ಲೀಷ್ ಕಲಿತರು, ನಂತರ ಭಾಷಾವಿಜ್ಞಾನದಲ್ಲಿ ಸಂಶೋಧನೆ ನಡೆಸಿದರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿ ನಡೆಸಿದರು. ತಮಿಳು ಮತ್ತು ಕನ್ನಡದ ಕೆಲವು ಮಹತ್ವದ ಕೃತಿಗಳನ್ನು ಹೊಚ್ಚ ಹೊಸತಾಗಿ ಇಂಗ್ಲೀಷ್‌ಗೆ ಭಾಷಾಂತರಿಸಿ ಭಾಷಾಂತರ ಕ್ಷೇತ್ರದಲ್ಲೇ ಕ್ರಾಂತಿಯೆಬ್ಬಿಸಿದರು. ಜನಪದ ಸಾಹಿತ್ಯ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದರು.
ಹೀಗೆ ವಿಸ್ತೃತವಾದ ಪ್ರದೇಶಗಳಲ್ಲಿ ಬಹುಭಾಷೆಗಳಲ್ಲಿ ಕೆಲಸ ಮಾಡಿದ ಲೇಖಕನೊಬ್ಬನನ್ನು ಒಂದು ಭಾಷೆಗೆ ಸೀಮಿತಗೊಳಿಸಿ ಓದುವಂತಿಲ್ಲ. ಇದು `ರಾಮಾನುಜನ್ ಸಮಗ್ರ~ದ ಸಮಸ್ಯೆಯೆಂದು ನಾನು ಹೇಳಲಾರೆ. ಆದರೆ ವಾಸ್ತವವೆಂದರೆ, ರಾಮಾನುಜನ್ ಅವರ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರಿಗೆ ಇಂಗ್ಲೀಷ್‌ನಲ್ಲೂ ಪರಿಶ್ರಮ ಇರುತ್ತದೆ; ಆದ್ದರಿಂದ `ಸಮಗ್ರ~ವೊಂದನ್ನು ಪ್ರಕಟಿಸುವಾಗ ಅಂಥವರ ಅನುಕೂಲಕ್ಕಾಗಿ ಒಂದು ಅನುಬಂಧವನ್ನಾದರೂ ನೀಡಿ ರಾಮಾನುಜನ್ ಅವರ ಮುಖ್ಯ ಇಂಗ್ಲೀಷ್ ಬರಹಗಳ ಪರಿಚಯ ಮಾಡಿಕೊಡುವುದು ಅಗತ್ಯವಾಗಿತ್ತು.
`ಸಮಗ್ರ~ದ ಅಂಥದೇ ಇನ್ನೊಂದು ಕೊರತೆ ಯಾವುದೇ ಅಭ್ಯಾಸ ಸೂಚಿ ಇಲ್ಲದಿರುವುದು. ರಾಮಾನುಜನ್ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಲೇಖನಗಳಾಗಲಿ ಪುಸ್ತಕಗಳಾಗಲಿ ಬಂದಿಲ್ಲವೆನ್ನುವುದೇನೋ ನಿಜ; ಆದರೆ ಏನೂ ಬಂದಿಲ್ಲ ಎನ್ನುವುದು ನಿಜವಲ್ಲ. ದಿವಾಕರ್ ಸ್ವತಃ ತಮ್ಮ ಮುನ್ನುಡಿಯಲ್ಲಿ ಕುರ್ತಕೋಟಿ ಮತ್ತು ಡಿ.ಆರ್. ನಾಗರಾಜ್ ಅವರ ಕೆಲವು ಹೇಳಿಕೆಗಳನ್ನು ಪ್ರಸ್ತಾಪಿಸುತ್ತಾರೆ. ಆದರೆ ಅವುಗಳ ಮೂಲ ಯಾವುದೆಂದು ಗೊತ್ತಾಗುವುದಿಲ್ಲ. ರಾಮಾನುಜನ್ ತಾವೇ ಇಂಥದೊಂದು ಗ್ರಂಥವನ್ನು ಸಂಪಾದಿಸುತ್ತಿದ್ದರೆ ಈ ತರದ ಕಾಳಜಿಗಳನ್ನೆಲ್ಲ ಗಮನದಲ್ಲಿ ಇರಿಸಿಕೊಳ್ಳುತ್ತಿದ್ದರು. ಯಾಕೆಂದರೆ ಅವರು ಕವಿ, ಕತೆಗಾರ, ಅನುವಾದಕ ಮಾತ್ರವಲ್ಲ, ಒಬ್ಬ ವಿದ್ವಾಂಸ ಕೂಡಾ ಅಗಿದ್ದರು. ಅಂಥವರಿಗೆ ಪ್ರಸ್ತುತ `ಸಮಗ್ರ~ ಸರಿಯಾದ ನ್ಯಾಯ ಒದಗಿಸುತ್ತದೆ ಎಂದು ನನಗನಿಸುವುದಿಲ್ಲ. `ಸಮಗ್ರ~ ಕನ್ನಡ ಪಠ್ಯಗಳ ಕೇವಲ ಸಮಗ್ರವಷ್ಟೇ ಆಗಿದೆ. (ಅದೃಷ್ಟವಶಾತ್ ಇಂದು ಅಂತರ್ಜಾಲ ತಾಣಗಳಲ್ಲಿ ರಾಮಾನುಜನ್ ಕುರಿತಾದ ಹಲವು ವಿವರಗಳು ಲಭ್ಯವಿವೆ; ಆದರೆ ಇದು `ಸಮಗ್ರ~ದ ಕೊರತೆಗಳನ್ನು ಮರೆಸಲಾರದು.)
2
ರಾಮಾನುಜನ್ ಕನ್ನಡದ ನವ್ಯದ ಸಂದರ್ಭದಲ್ಲಿ ಬೆಳಕಿಗೆ ಬಂದವರು; ಮಾತ್ರವಲ್ಲ, ಕನ್ನಡದ ನವ್ಯಕ್ಕೆ ಮಹತ್ವದ ಕೊಡುಗೆ ನೀಡಿದವರು. ರಾಮಾನುಜನ್ ಕನ್ನಡದಲ್ಲಿ ಕೆಲವು ಒಳ್ಳೆಯ ಸಣ್ಣ ಕತೆಗಳನ್ನು, ಒಂದು ಅತ್ಯುತ್ತಮ ಕಿರುಕಾದಂಬರಿಯನ್ನು, ಮತ್ತಿತರ ರಚನೆಗಳನ್ನು ಮಾಡಿದ್ದರೂ ಅವರನ್ನು ಕನ್ನಡದವರು ಹೆಚ್ಚಾಗಿ ಗುರುತಿಸುವುದು ಒಬ್ಬ ವಿಶಿಷ್ಟ ಕವಿಯೆಂದೇ. ಸ್ವತಃ ರಾಮಾನುಜನ್‌ಗೆ ಪದ್ಯ-ಗದ್ಯಗಳ ನಡುವಣ ಈ ಭಿನ್ನತೆಯಲ್ಲಿ ಹೆಚ್ಚಿನ ವಿಶ್ವಾಸ ಬಹುಶಃ ಇದ್ದಿರಲಾರದು, ಇದ್ದರೂ ಅದೊಂದು `ತೀವ್ರತೆ~ಯ ದೃಷ್ಟಿಯಿಂದ ಮಾತ್ರ ಇದ್ದಿರಬಹುದು: ಪದ್ಯ ಹೆಚ್ಚು ತೀವ್ರ ಎನ್ನುವ ನೆಲೆಯಲ್ಲಿ. ಉಳಿದ ಮಟ್ಟಿಗೆ ರಾಮಾನುಜನ್ ಅವರ ಪದ್ಯ ಪರಂಪರಾಗತ ದೃಷ್ಟಿಯಿಂದ ಗದ್ಯದ ಹಾಗೇ ಇರುವಂಥದು.
ರಾಮಾನುಜನ್ ಕನ್ನಡ ಕಾವ್ಯಕ್ಷೇತ್ರವನ್ನು ಪ್ರವೇಶಿಸಿದಾಗ ನವ್ಯ ಕಾವ್ಯದ ಮುಂಚೂಣಿಯಲ್ಲಿದ್ದವರು ಅವರಿಗಿಂತ ತುಸು ಹಿರಿಯರಾದ ಗೋಪಾಲಕೃಷ್ಣ ಅಡಿಗರು. ನವ್ಯರಾಗಿದ್ದುಕೊಂಡೂ ಅಡಿಗರಿಗಿಂತ ತೀರಾ ಭಿನ್ನವಾಗಿ ಬರೆದವರು ರಾಮಾನುಜನ್. ಈ ಘಟನೆಯೇನೂ ನಿರ್ವಾತದಿಂದ ಉದಿಸಿದುದಲ್ಲ. ರಾಮಾನುಜನ್‌ರಿಗೆ ಇಂಗ್ಲೀಷ್ ಸಾಹಿತ್ಯದಲ್ಲಿ ಇಪ್ಪತ್ತರ ದಶಕಗಳಲ್ಲಿ (ಎಂದರೆ ಮಾಡರ್ನಿಸಮ್ ಉದಯಿಸಿದ ಕಾಲದಲ್ಲಿ) ನಡೆದ ವಿದ್ಯಮಾನಗಳ ಅರಿವು ಖಂಡಿತವಾಗಿಯೂ ಇದ್ದಿರಬೇಕು. ಇಂಗ್ಲೀಷ್ ಮಾಡರ್ನಿಸಮಿನಲ್ಲಿ ಎಝ್ರಾ ಪೌಂಡ್ ಮತ್ತು ಟಿ.ಎಸ್.ಎಲಿಯೆಟ್ ಅಂತರರಾಷ್ಟ್ರೀಯವಾಗಿ ಕೇಳಿಸುವ ಹೆಸರುಗಳು. ಇಬ್ಬರದೂ ಅವರವರ ರೀತಿಯಲ್ಲಿ ವೈಶಿಷ್ಟ್ಯಪೂರ್ಣ ಶೈಲಿಗಳು. ಆದರೆ ಸರಿಸುಮಾರು ಇಪ್ಪತ್ತರ ದಶಕದಲ್ಲೇ ಇತರ ಇಂಗ್ಲೀಷ್ ಕವಿಗಳೂ ತಮ್ಮದೇ ರೀತಿಗಳಲ್ಲಿ ಬರೆಯುತ್ತಿದ್ದರು. ಅವರಲ್ಲಿ ಅಮೇರಿಕದ ವಿಲಿಯಮ್ ಕಾರ್ಲೋ ವಿಲಿಯಮ್ಸ, ಹಾಗೂ ಇನ್ನೂ ಒಂದು ದಶಕ ಮುಂದಕ್ಕೆ ಬಂದರೆ ವಾಲೇಸ್ ಸ್ಟೀವನ್ಸ್ ಮುಖ್ಯರು. ರಾಮಾನುಜನ್ ತಮ್ಮ ಸ್ಫೂರ್ತಿಯನ್ನು ಪೌಂಡ್, ಎಲಿಯೆಟ್ ಮುಂತಾದವರಿಗಿಂತಲೂ ಹೆಚ್ಚಾಗಿ ವಿಲಿಯಮ್ಸ ಮತ್ತು ಸ್ಟೀವನ್ಸ್‌ರಂಥ ಕವಿಗಳಿಂದ ಪಡೆದಿದ್ದರೆ ಆಶ್ಚರ್ಯವಿಲ್ಲ. ಉದಾಹರಣೆಗೆ, ಸಾಕಷ್ಟು ಪ್ರಸಿದ್ಧವಾಗಿರುವ ವಿಲಿಯಮ್ಸನ `ದ ರೆಡ್ ವ್ಹೀಲ್‌ಬ್ಯಾರೋ~ ಕವಿತೆಯನ್ನು ನೋಡಬಹುದು:
so much depends
upon
a red wheel
barrow
glazed with rain
water
beside the white
chickens.
ಈ ಪದ್ಯ 1923ರಲ್ಲಿ ಪ್ರಕಟವಾಯಿತು, ಎಂದರೆ ಎಲಿಯೆಟ್‌ನ `ದ ವೇಸ್ಟ್ ಲ್ಯಾಂಡ್~ ಪ್ರಕಟವಾದ ಮಾರನೇ ವರ್ಷ. ವಿಲಿಯಮ್ಸ ಈ ತರದ ಪದ್ಯಗಳಿಗೆ ಪ್ರಸಿದ್ಧನಾದವನು: ಚಿಕ್ಕ ಚಿಕ್ಕ ಸಾಲುಗಳು, ಒಂದೇ ವಾಕ್ಯ, ಕೆಲವೊಮ್ಮೆ ಕ್ರಿಯಾಪದವೇ ಇಲ್ಲದಿರುವುದು, ಗದ್ಯದಂತಿರುವ ಪದ್ಯ, ಕಣ್ಣಿಗೆ ಕಟ್ಟುವಂಥ ಪ್ರತಿಮಾರಚನೆ, ಸರಳವಾದ ಪದಗಳಿಂದ ತುಂಬಿದ್ದರೂ ಒಟ್ಟಾರೆ ಅರ್ಥ (ಉದ್ದೇಶ ಎಂಬ ಅರ್ಥದಲ್ಲಿ) ಸ್ಪಷ್ಟವಾಗದೆ ಇರುವುದು, ಹಾಗೂ ಪ್ರಾದೇಶಿಕತೆ ಮತ್ತು ಸದ್ಯತೆಯ ಮೇಲೆ ಗಮನ ವಿಲಿಯಮ್ಸ ರಚನೆಗಳ ವೈಶಿಷ್ಟ್ಯ. ಪೌಂಡ್ ಮತ್ತು ಎಲಿಯೆಟ್ ಅವರ ಕಾವ್ಯಗಳಿಗೆ ವಿರುದ್ಧ ನಿಂತು, ಮತ್ತು ನಿಲ್ಲುವುದಕ್ಕೆಂದೇ, ಬರೆದನೋ ಎನಿಸಬೇಕು. ರಾಮಾನುಜನ್ ಕನ್ನಡ ಕಾವ್ಯ ಕೂಡಾ ಅಡಿಗರ ಎದುರು ಈ ರೀತಿ ನಿಲ್ಲುತ್ತದೆ. ವ್ಹೀಲ್‌ಬ್ಯಾರೋ ಜತೆಗೆ ರಾಮಾನುಜನ್ ಅವರ ಯಾವುದೇ ಚಿಕ್ಕ ಪದ್ಯವನ್ನು ಇರಿಸಿ ನೋಡಿದರೂ ಈ ಮಾತಿನ ಯಥಾರ್ಥತೆ ಗೊತ್ತಾಗುತ್ತದೆ. ಉದಾಹರಣೆಗೆ, ದಿವಾಕರ್ ಮುನ್ನುಡಿಯಲ್ಲಿ ಉದ್ಧರಣೆ ಮಾಡಿದ `ಹೊಕ್ಕುಳಲ್ಲಿ ಹೂವಿಲ್ಲ~ ಸಂಕಲನದ `ಅದರಲ್ಲಿ ಇದು~:
ಕಾಡು ಮರಗಳ ಮಧ್ಯ
ಮನೆ.
ಸಿಮೆಂಟು ಬಿರುಕಿನ
ಹುಲ್ಲು.
ಅಮೇರಿಕನ್ ಮಾರ್ಕೆಟ್ಟಿನಲ್ಲಿ
ಹಚ್ಚಗೆ ಕೊಯ್ದ ಕೊತ್ತಂಬರಿ
ಸೊಪ್ಪು.
ಕೇವಲ ಚಿತ್ರಗಳು; `No ideas but in things~~ ಎಂಬ (`"A Sort of a Song~) ವಿಲಿಯಮ್ಸನ ಪ್ರಸಿದ್ಧ ಮಾತನ್ನು ದೃಢೀಕರಿಸುವಂತೆ. ಇದು ಪ್ರತಿಮಾನಿಷ್ಠವಾದ ಕಾವ್ಯ. ವಿಚಾರಗಳೇನಿದ್ದರೂ ಪ್ರತಿಮೆಗಳಿಂದಲೇ ಬರಬೇಕು. ಒಂದೇ ಸ್ವಾಲೋ ಬೇಸಿಗೆ ಮಾಡುವುದಿಲ್ಲ ಎಂದಾದರೆ, ಇದೇ ಸಂಕಲನದ `ಅಪ್ಪ, ಮಗ~ ಎಂಬ ಪದ್ಯವನ್ನು ನೋಡಬಹುದು:
ಬಚ್ಚಲು ಮನೆ ಗಂಗಾಳದಲ್ಲಿ
ಅಪ್ಪ ಮರೆತ ಹೊಸ ಹಲ್ಲು ಸ್ವತಂತ್ರವಾಗಿ
ಹಲ್ಲು ಕಿರಿಯಿತು.
ನಾನು ನೋಡಿದೆ.
ಇಲ್ಲಾದರೆ ಎರಡು ವಾಕ್ಯಗಳಾದರೂ ಇವೆ; ಆದರೆ ನಮ್ಮ ಗಮನ ಸೆಳೆಯುವುದು ಹಲ್ಲಿನ ಪ್ರತಿಮೆ. ಅಪ್ಪ ಮರೆತು ಹೋದ ಕೃತಕ ಹಲ್ಲು ಸ್ವತಂತ್ರವಾಗಿ ಹಲ್ಕಿರಿಯುವುದು ಒಂದು `ಭಯಂಕರ~ ಪ್ರತಿಮೆಯೇ ಸರಿ. ರಾಮಾನುಜನ್ ಮೇಲೆ ಡನ್, ಹೆರಿಕ್‌ರಂಥ ಇಂಗ್ಲೀಷ್ ಮೆಟಾಫಿಸಿಕಲ್ ಕವಿಗಳ ಅಸಾಧಾರಣ ಪ್ರತಿಮಾ ನಿರ್ಮಾಣದ ಪ್ರಭಾವ ಮಾತ್ರವೇ ಅಲ್ಲ, ಜೆಕೋಬಿಯನ್ ನಾಟಕಕಾರರ ಬೆರಗು ಮತ್ತು ಅಸಹ್ಯಗೊಳಿಸುವ ಕಲೆಯ ಪ್ರಭಾವವೂ ಇದೆ.
ಇದೆಲ್ಲವೂ ಮುಂದೆ ಅವರು ತಮಿಳು ಶೆಂಗಂ ಕವಿತೆಗಳನ್ನು ಮತ್ತು ಕನ್ನಡದ ಶಿವಶರಣರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದಿಸುವಾಗ ಸಹಾಯಕ್ಕೆ ಬಂದಿರಬೇಕು. ಇಂಗ್ಲೀಷ್‌ನಲ್ಲಿ ತಾವು ಮೆಚ್ಚುವ ಶೈಲಿ ಮತ್ತು ಜೀವನದೃಷ್ಟಿಯನ್ನು ಅವರು ಈ ಪ್ರಾಚೀನ ಭಾರತೀಯ ಕವಿತೆಗಳಲ್ಲಿಯೂ ಕಂಡರು; ಅದರಲ್ಲೂ ಶಿವಶರಣರ ವಚನಗಳು ಅವರಿಗೆ ಹೇಳಿ ಮಾಡಿಸಿದಂತೆ ಇರುವಂಥವು: ಅತ್ತ ಗದ್ಯವೂ ಅಲ್ಲದ, ಇತ್ತ ಪದ್ಯವೂ ಅಲ್ಲದ, ಢಾಳಾಗಿ ಕಣ್ಣಿಗೆ ಹೊಡೆಯುವ ಪ್ರತಿಮೆಗಳ, ಒಗಟಿನ ಮಾತುಗಳ, ಎಲ್ಲಕ್ಕೂ ಮುಖ್ಯವಾಗಿ ಆಧುನಿಕ ಪಾಶ್ಚಾತ್ಯ ಲಿಬರಲ್ ಹ್ಯೂಮನಿಸ್ಟ್ ಧೋರಣೆಗೆ ಸರಿಸಮವೆನಿಸುವ ಜೀವನದರ್ಶನದ ಈ ಮಧ್ಯಕಾಲೀನ ರಚನೆಗಳಲ್ಲಿ ರಾಮಾನುಜನ್ ಅವುಗಳ ಇಂಗ್ಲೀಷ್ ಅನುವಾದದ ಮೂಲಕ ಆಧುನಿಕತೆಗೆ ಒಂದು ಅನಿರೀಕ್ಷಿತ ಪರಂಪರೆಯನ್ನು ನೀಡುವ ಸಾಧ್ಯತೆಯನ್ನು ಮನಗಂಡರೆಂದು ಕಾಣುತ್ತದೆ.
ಅವರು ಈಗಾಗಲೇ ಅಡಿಗರ ಅಭಿಜಾತ ಹೈ ಮಿಮೆಟಿಕ್ (ಎತ್ತರದ) ಶೈಲಿಗೆ ವಿರುದ್ಧವಾಗಿ ಜನಪದದ ಲೋ ಮಿಮೆಟಿಕ್ (ತಗ್ಗಿದ) ಶೈಲಿಗೆ ಒಲಿದಿದ್ದರು. ಆದ್ದರಿಂದಲೇ ರಾಮಾನುಜನ್ ಕಾವ್ಯ ಎಲ್ಲಾ ಸೀಮೆಗಳಲ್ಲೂ ಓಡಾಡಬಲ್ಲುದು: ಹಾಸ್ಯ, ಸ್ವ-ಹಾಸ್ಯ, ಜಿಗುಪ್ಸೆ, ಭಕ್ತಿ, ಭುಕ್ತಿ, ವಿರಕ್ತಿ, ಅನಾಸಕ್ತಿ, ಸಂಕರಣ, ಉಲ್ಲಂಘನ ಎಂಬ ಭಾವಗಳಲ್ಲಷ್ಟೇ ಇದು ಗೋಚರಿಸುವುದಲ್ಲ, ಅವರು ಆಯ್ದುಕೊಳ್ಳುವ ವಸ್ತುವೈವಿಧ್ಯದಲ್ಲೂ ಕಾಣಿಸಿಕೊಳ್ಳುತ್ತದೆ.
ಆಧುನಿಕ ಕಾವ್ಯ `ಅರ್ಥ~ವೆಂಬ ಕಲ್ಪನೆಗೆ ಯಾವತ್ತೂ ಸವಾಲೊಡೊತ್ತಾ ಬಂದಿದೆ. ಎಷ್ಟರ ಮಟ್ಟಿಗೆ ಎಂದರೆ ಕವಿತೆಯೊಂದು ಸುಲಭವಾಗಿ ನಮಗೆ ವೇದ್ಯವಾಗದೆ ಇದ್ದರೆ ಅದನ್ನು ಆಧುನಿಕ ಕವಿತೆಯೆಂದು ಕರೆಯುತ್ತೇವೆ. ಆದರೆ ಅರ್ಥದ ಕಲ್ಪನೆಯೇ ಬಿಗಡಾಯಿಸಿರುವ ಸಂದರ್ಭದಲ್ಲಿ ಪರಂಪರಾಗತ ಅರ್ಥದ ಕಲ್ಪನೆಯ ಮೇಲಿಂದ ನಾವಿಂದು ಕವಿತೆಯನ್ನು ಅಳೆಯುವ ಹಾಗಿಲ್ಲ. ಅಡಿಗರ ಕವಿತೆಗಳು ಕ್ಲಿಷ್ಟವಾಗಿವೆ, ರಾಮಾನುಜನ್‌ರ ಕವಿತೆಗಳು ಕ್ಲಿಷ್ಟವಾಗಿವೆ ಎನ್ನುವಂತಿಲ್ಲ. ಆದರೆ ಇಬ್ಬರ ಕವಿತೆಗಳೂ ನಮಗೆ ಸುಲಭದರಲ್ಲಿ ಗ್ರಾಹ್ಯವಾಗುವುದಿಲ್ಲ. ಅಡಿಗರ ಪದಪ್ರಯೋಗಗಳು ವಿಶಿಷ್ಟವಾಗಿವೆ, ಅವುಗಳನ್ನು ಹೊಂದಿಸಿಕೊಂಡು ಕವಿತೆಯ `ತಾತ್ಪರ್ಯ~ ಗ್ರಹಿಸುವುದು ಸುಲಭದ ಮಾತಲ್ಲ. ರಾಮಾನುಜನ್‌ರ ಕವಿತೆಗಳಲ್ಲಿ ಈ ಸಮಸ್ಯೆಯಿಲ್ಲ; ಅವರ ಕವಿತೆಗಳಲ್ಲಿ ತಾತ್ಪರ್ಯ ಕೊಡುವುದಕ್ಕೆ ಏನೂ ಇಲ್ಲ ಎನ್ನುವುದೇ ಒಂದು ಸಮಸ್ಯೆ! ಎಂದರೆ, ರಾಮಾನುಜನ್ ಅವರ ಕ್ಲಿಷ್ಟತೆ ಭಾಷಾಪ್ರಯೋಗದ ನೆಲೆಯದ್ದಲ್ಲ. ವಿಲಿಯಮ್ ಕಾರ್ಲೋಸ್ ವಿಲಿಯಮ್ಸನ `ವ್ಹೀಲ್‌ಬ್ಯಾರೋ~ ಕವಿತೆಯಲ್ಲಿ ಕೂಡಾ `ಅರ್ಥ~ವಾಗದ್ದು ಏನಿದೆ? ವಿಲಿಯಮ್ಸ ಕವಿತೆಯಲ್ಲಾಗಲಿ ರಾಮಾನುಜನ್ ಕವಿತೆಯಲ್ಲಾಗಲಿ ಅರ್ಥ ಹುಡುಕುವುದೆಂದರೆ ಕವಿತೆಗಳ ಮಹತ್ವ (significance) ತಿಳಿಯುವುದು ಎಂದೇ- ಯಾಕಿದು, ಇದು ನನ್ನಲ್ಲಿ ಏನು ಭಾವನೆಗಳನ್ನು ಉಂಟುಮಾಡುತ್ತದೆ, ಇದು `ಅರ್ಥಪೂರ್ಣ~ ಎನಿಸಬೇಕಾದರೆ ಇದನ್ನು ಯಾವ ರೀತಿ ಓದಬೇಕು ಎಂದು ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಹುಡುಕುವುದು. ರಾಮಾನುಜನ್ ಮಟ್ಟಿಗೆ ಈ ಮಾತು ಅವರ ಸಣ್ಣಕತೆಗಳು ಮತ್ತು ಕಿರು ಕಾದಂಬರಿಗೆ ಸಂಬಂಧಿಸಿಯೂ ನಿಜ. (ಅರ್ಥದ ಕುರಿತಾದ ಕವಿಯ ಮಾತುಗಳಿಗಾಗಿ `ಪದ್ಯದ ಮಾತು ಬೇರೆ~ ಎಂಬ ಪದ್ಯವನ್ನು ನೋಡಿರಿ.
`ರಾಮಾನುಜನ್ ಸಮಗ್ರ~ ಮುಖ್ಯವಾಗುವುದು ಇಂಥ ಓದಿನ ಸಂದರ್ಭದಲ್ಲಿ. ರಾಮಾನುಜನ್ ರಚನೆಗಳನ್ನು ನಾವು ಬಿಡಿ ಬಿಡಿಯಾಗಿಯೂ ಆಸ್ವಾದಿಸಬಹುದು, ಒಟ್ಟಾಗಿಯೂ ಅಧ್ಯಯನ ಮಾಡಬಹುದು. ಬಿಡಿ ಬಿಡಿಯಾಗಿ ಅವು ಒಂದೊಂದೂ ಮುತ್ತಿನಂತೆ, ಮಣಿಯಂತೆ ಸ್ವಾಯತ್ತವಾದುವು. ಒಟ್ಟಾಗಿ `ಮುತ್ತಂಮಣಿಯಂ ಕೋದಂತೆ~ ಒಂದು ಸಮಾಹಾರ. ಈ ಬಿಡಿಕವಿತೆಯನ್ನು ನೋಡಿ:
ಕುಸ್ತಿ ಸೋತ
ಪಯಿಲ್ವಾನ
ಕೆಮ್ಮಣ್ಣಿನಲ್ಲಿ
ದಿನವೆಲ್ಲ
ತಲೆವರೆಗೂ
ಹೂತಿಟ್ಟುಕೊಂಡು
ಸಂಜೆ ಎದ್ದ
ಹಾಗೆ
ಕೆಲವು ಪದ್ಯ
ಈ ಪದ್ಯದ `ಅರ್ಥ~ ಅರ್ಥಾತ್ ಅರ್ಥವಂತಿಕೆಯನ್ನು ನಾವು ಬಿಡಿಯಾಗಿ ವಿಶ್ಲೇಷಿಸುವುದು ಸಾಧ್ಯ. ಆದರೆ ಇಂಥಾ ಪದ್ಯಗಳು, ಕತೆಗಳು ಒಟ್ಟಾಗಿ ಸಿಕ್ಕಿ ಇವೆಲ್ಲವನ್ನೂ ಓದಿದಾಗ ದೊರಕುವ ಅನುಭವ ಇನ್ನೂ ಮಹತ್ತರವಾದುದು. ಆಗ ರಾಮಾನುಜನ್ ರಚನೆಗಳು ಒಂದು ಸುಂದರ ಟೇಪೆಸ್ಟ್ರಿಯಾಗಿ ಒಂದುಗೂಡುತ್ತವೆ.
ಇಲ್ಲಿ ಒಂದು ರಚನೆ ಇನ್ನೊಂದು ರಚನೆಯ ಜತೆ ಬೆರೆತು ಅಂತರ್‌ಪಠ್ಯದ ಓದನ್ನು ಸಾಧ್ಯಗೊಳಿಸುತ್ತದೆ. ಹಾಗೆ ಓದಿದಾಗ ನಮಗೆ ದೊರಕುವುದು ರಾಮಾನುಜನ್ ಸೃಷ್ಟಿಸಿರುವ ಒಂದು ಅದ್ಭುತ ಲೋಕ; ಹಾಗೂ ಈ ಲೋಕದಲ್ಲೇ ನಾವು ಮತ್ತು ನೀವು ಇರುವುದು ಎನ್ನುವ ಅರಿವು.
ನಮ್ಮನ್ನು ಚಕಿತಗೊಳಿಸುವ ಒಂದೆರಡು ವಿಷಯಗಳನ್ನಷ್ಟೇ ಹೇಳುವೆ: ರಾಮಾನುಜನ್ ಸಾಹಿತ್ಯ ಫಿಕ್ಷನ್ (ಕಲ್ಪನೆ) ಮತ್ತು ರಿಯಾಲಿಟಿ (ವಾಸ್ತವತೆ)ಯನ್ನು ಹಾಸುಹೊಕ್ಕಾಗಿ ಬಳಸುವ ರೀತಿ ಒಂದು. ಎಲ್ಲಾ ಸಾಹಿತಿಗಳೂ ಇದನ್ನು ಮಾಡುತ್ತಾರಾದರೂ ರಾಮಾನುಜನ್‌ರಲ್ಲಿ ಇದು ಗಮನ ಸೆಳೆಯುವಂತೆ ಇದೆ; ಯಾಕೆಂದರೆ ಅವರು ಇದನ್ನೇ ಒಂದು ಸಮಸ್ಯಾತ್ಮಕತೆಯಾಗಿ ಮಾಡುತ್ತಾರೆ. `ಮತ್ತೊಬ್ಬನ ಆತ್ಮಚರಿತ್ರೆ~ಯಲ್ಲಿ ಇಬ್ಬರು ರಾಮಾನುಜನರು ಬರುತ್ತಾರೆ: ಕೆ. ರಾಮಾನುಜನ್ ಮತ್ತು ಕೆ.ಕೆ. ರಾಮಾನುಜನ್! ಆದರೆ ಎ.ಕೆ. ರಾಮಾನುಜನ್ ಅಲ್ಲ; ಎ.ಕೆ. ರಾಮಾನುಜನ್ ನಮ್ಮ ರಿಯಾಲಿಟಿಗೆ ಸೇರಿದವರು. ಆದರೂ ಈ ಇಬ್ಬರೂ ರಾಮಾನುಜನರು ಎ.ಕೆ. ರಾಮಾನುಜನರನ್ನು ಒಳಗೊಂಡಿದ್ದು ಅವರು ಪರಸ್ಪರ ಬೇರೆ ಬೇರೆ ಇದ್ದೂ ಬಿಂಬ ಪ್ರತಿಬಿಂಬದಂತೆಯೂ ಇದ್ದಾರೆ. ಕೆ. ರಾಮಾನುಜನ್ ಕವಿ; ಆತ ಕೆ.ಕೆ. ರಾಮಾನುಜನ್‌ಗೆ ಕತೆ ಬರೆಯಲು ಪ್ರೇರೇಪಿಸುತ್ತಾನೆ. ಅದರಂತೆ ಕೆ.ಕೆ. ರಾಮಾನುಜನ್ ಕತೆ ಬರೆಯಲು ತೊಡಗುತ್ತಾರೆ. ಈ ಕತೆಯೇ ಆತ್ಮಚರಿತ್ರೆ, ಯಾಕೆಂದರೆ ಆತ್ಮಚರಿತ್ರೆ ಹೆಚ್ಚು ಅಥೆಂಟಿಕ್, ಆದರೆ ಅದೇ `ಮತ್ತೊಬ್ಬನ ಆತ್ಮಚರಿತ್ರೆ~ಯೂ ಆಗುತ್ತದೆ! ಯಾಕೆ ಮತ್ತೊಬ್ಬನದು ಎಂದು ಅರಿಯುವುದಕ್ಕೆ ಕತೆಯಲ್ಲಿ ಸಾಕಷ್ಟು ಜಿಜ್ಞಾಸೆಯಿದೆ. `ಯಾವುದು ನನ್ನದು, ಯಾವುದು ನನ್ನದಲ್ಲ ಹೇಳುವುದೇ ಕಷ್ಟ, ಐರಿಷ್ ಕವಿ ಯೇಟ್ಸ್‌ನಿಗೆ ನಿದ್ದೆಯಲ್ಲಿ ಕನಸು ಅರ್ಧಕ್ಕೆ ನಿಂತು ಪಕ್ಕದಲ್ಲಿದ್ದ ಹೆಂಡತಿಯ ನಿದ್ರೆಯಲ್ಲಿ ಅದು ಪೂರ್ಣವಾಗು ತ್ತಿತ್ತಂತೆ~ (ಪು. 339). `ಎಂಥ ಸೈತಾನ-ಸೃಷ್ಟಿ ಬರಹ! ಇದ್ದವರನ್ನು ಇಲ್ಲವಾಗಿಸಿ, ಇಲ್ಲದವರನ್ನು ಸೃಷ್ಟಿಸುತ್ತದಲ್ಲ! ನನ್ನ ನಿಜ ಸುಳ್ಳಾಗಿ ಅವನ ಸುಳ್ಳು ನಿಜ ಎನ್ನಿಸಿಕೊಳ್ಳುತ್ತದೆ. ಆತ್ಮಚರಿತ್ರೆಯ ಸತ್ಯ, ಪ್ರಾಮಾಣಿಕತೆ ಅಂತ ಹೊರಟ ನಾನು ಈ ಬರಹದಿಂದ ಸಂಶಯಾತ್ಮಕನಾಗುತ್ತ ಇದ್ದೇನೆ~ (ಪು. 348). ಈ ಕತೆಯೊಳಗೂ ಎಷ್ಟೊಂದು ಕತೆಗಳು ಬರುತ್ತವೆ! ಶಂಕರಪ್ರಸಾದ್ ಎಂಬ ರಾಜಸ್ತಾನೀ ಲೇಖಕ ಅಮೇರಿಕದಲ್ಲಿ; ಅವನು ಒಂಟಿ ರಾತ್ರಿಗಳಲ್ಲಿ ಬರೆಯುವ ಕತೆ. ಯಾರ ಕತೆ ಯಾರದು? ಯಾರೂ ಸ್ವಾಯತ್ತವಲ್ಲ, ಯಾರ ಅನುಭವವೂ ಸ್ವಂತವೇ ಅಲ್ಲ, ಅದು ಎಲ್ಲರದೂ.
ಫಿಕ್ಷನ್ ಮತ್ತು ರಿಯಾಲಿಟಿಯ ಭಿನ್ನತೆಯಲ್ಲಿ ಬಿರುಕು ತರುವ ಇನ್ನೊಂದು ತಂತ್ರ ರಾಮಾನುಜನ್ `ಆತ್ಮಚರಿತ್ರೆ~ಯಲ್ಲಿ ಬಳಸುವ ಪದ್ಯಗಳು; ಇವು ತಥಾಕಥಿತ ಕೆ. ರಾಮಾನುಜನ್ ಬರೆದು ಕೆ.ಕೆ. ರಾಮಾನುಜನ್‌ಗೆ ಕಳಿಸುವಂಥವು. ಆದರೆ ಇವೇ ಪದ್ಯಗಳನ್ನು ಯಥಾವತ್ತಾಗಿ ನಾವು ರಾಮಾನುಜನ್ ಸರಿಸುಮಾರು ಇದೇ ಕಾಲಕ್ಕೆ ಅಥವಾ ಇದರ ನಿಕಟಪೂರ್ವದಲ್ಲಿ ಬರೆದ `ಮತ್ತು ಇತರ ಪದ್ಯಗಳು~ ಸಂಕಲನದಲ್ಲೂ ಕಾಣಬಹುದು. (ಬೋರಿಸ್ ಪಾಸ್ಟರ್‌ನಾಕ್ `ಡಾಕ್ಟರ್ ಝಿವಾಗೋ~ ಕಾದಂಬರಿಯ ಕೊನೆಯಲ್ಲಿ `ಝಿವಾಗೋ ಕವಿತೆಗಳು~ ಎಂಬ ಅನುಬಂಧದಲ್ಲಿ ಕೊಡುವ ಕೆಲವು ಕವಿತೆಗಳನ್ನು ನೆನಪಿಸಬಹುದು. ಈ ಮೂಲಕ ಪಾಸ್ಟರ್‌ನಾಕ್ ಫಿಕ್ಷನ್ ಮತ್ತು ರಿಯಾಲಿಟಿಯ ಗೋಡೆಯನ್ನು ಒಡೆಯುತ್ತಾನೆ). ರಾಮಾನುಜನ್ ಸಾಹಿತ್ಯದಲ್ಲಿ ಫಿಕ್ಷನ್ ಮತ್ತು ರಿಯಾಲಿಟಿಯ ಸಂಬಂಧ ಮೋಬಿಯಸ್ ಸ್ಟ್ರಿಪ್‌ನ ಮೈಗಳ ಸಂಬಂಧ ಇದ್ದ ಹಾಗೆ: ಎರಡು ಮೈಗಳೇ ಒಂದೇ? ಇದನ್ನೊಂದು ಸಮಸ್ಯೆಯಾಗಿ ರಾಮಾನುಜನ್ ತೆಗೆದುಕೊಳ್ಳುತ್ತಾರೆ. `ಮೈ ತುಂಬ ಬರೀ ಮೈಯ್ಯಿ~!, `ಪದ್ಯ ತುಂಬ ಪದ ಪದ ಪದ~. ಅನುಭವದ ವೈಯಕ್ತಿಕತೆಯನ್ನೂ ರಾಮಾನುಜನ್ ನಿರಾಕರಿಸುತ್ತಾರೆ. ಒಬ್ಬ ಇನ್ನೊಬ್ಬನ ಒಳಗಿರುವುದು (`ನನ್ನ ಮೈಯಲ್ಲಿ ಅವರಿವರ ಎಲುಬು~), ಒಬ್ಬನ ಅನುಭವ ಇನ್ನೊಬ್ಬನದು ಆಗುವುದು, ಒಬ್ಬ ಮತ್ತು ಇನ್ನೊಬ್ಬನಿಗೆ ವ್ಯತ್ಯಾಸವಿದ್ದೂ ಇರದೆ ಇರುವುದು -- ಇಂಥ ಪ್ರಕ್ರಿಯೆಗಳನ್ನು ಅವರು ಪರಕಾಯ ಪ್ರವೇಶ (ನೋಡಿ: `ಅಂಗುಲ ಹುಳುವಿನ ಪರಕಾಯ ಪ್ರವೇಶ~), ತೇಪೆ, ಕ್ಯಾನಿಬಲಿಸಮ್ ಎಂದು ಮುಂತಾದ ಪರಿಭಾಷೆಯಿಂದ ಕರೆಯುತ್ತಾರೆ.
ಭಾರತದಿಂದ ಅಮೇರಿಕೆಗೆ ಹೋಗಿ ನೆಲಸಿ ಅಲ್ಲಿದ್ದುಕೊಂಡು ಕನ್ನಡದಲ್ಲೂ ಇಂಗ್ಲೀಷ್‌ನಲ್ಲೂ ಬರೆಯುತ್ತಿದ್ದ ಲೇಖಕ, ಎರಡು ಸಂಸ್ಕೃತಿಯನ್ನು ಒಳಗೊಂಡವರು. `ಸಂಸ್ಕೃತಿ ಸಮನ್ವಯ~ದ ಬಗ್ಗೆ ಅವರು `ಮತ್ತೊಬ್ಬನ ಆತ್ಮಚರಿತ್ರೆ~ಯಲ್ಲಿ ಉಲ್ಲೇಖಿಸುತ್ತಾರೆ. ಆದರೆ ಕೆಲವೊಮ್ಮೆ ಇದು ಸಂಸ್ಕೃತಿ ಸಂಘರ್ಷವೂ ಆಗಬಹುದು ಎನ್ನುವುದು `ಅಣ್ಣಯ್ಯನ ಮಾನವಶಾಸ್ತ್ರ~ ಎಂಬ ಕತೆಯಿಂದ ಗೊತ್ತಾಗುತ್ತದೆ; ಅದಾಗುವುದು ಸಂಸ್ಕೃತಿ ಒಂದು ಮಾರುವ (ಅಥವಾ ಕೊಂಡಾಡುವ) ಸರಕಾದಾಗ.
ರಾಮಾನುಜನ್ ಕತೆಗಳಲ್ಲಿ `ಒಂದು ದಿನಚರಿಯ ಕೆಲವು ಪುಟಗಳು~ ತುಂಬಾ ಕುತೂಹಲಕಾರಿ ಕತೆ. ಎರಡು ಸಂಸ್ಕೃತಿಗಳ ಮುಖಾಮುಖಿಯಲ್ಲಿ ಒಬ್ಬಾಕೆ ಬ್ರಿಟೀಷ್ ಹೆಣ್ಣುಮಗಳು ತೆಗೆದುಕೊಳ್ಳುವ ಮಾನವೀಯವೂ ಪ್ರಗತಿಶೀಲವೂ ಆದ ನಿಲುವು ಒಟ್ಟಾರೆಯಾಗಿ ರಾಮಾನುಜನ್ ಅವರದೇ ಮ್ಯಾನಿಫೆಸ್ಟೋ ಇದ್ದಂತೆ ಇದೆ.
ರಾಮಾನುಜನ್ ಅವರು ರಾಜಕೀಯ ವ್ಯಕ್ತಿ ಅಲ್ಲದೆ ಇರಬಹುದು; ಆದರೆ ಇದರ ಅರ್ಥ ಅವರೊಬ್ಬ ಈಸ್ತೀಟ್ ಎಂದಲ್ಲ. ಅವರು ಇನ್ನೇನೂ ಆಗಿರಬಹುದು, ಆದರೆ ಈಸ್ತೀಟ್ ಖಂಡಿತಾ ಅಲ್ಲ. ಅವರ ಪ್ರತಿಯೊಂದು ಕತೆ, ಕವಿತೆ, ಲೇಖನಗಳಿಗೂ ಅಗಾಧ `ಅರ್ಥ~ಸಾಧ್ಯತೆಗಳಿದ್ದು, `ಸಮಗ್ರ~ ಪ್ರತಿಯೊಬ್ಬ ಓದುಗನೂ ತನ್ನ ಬಳಿ ಇಟ್ಟುಕೊಳ್ಳಬೇಕಾದ ಪುಸ್ತಕ. ರಾಮಾನುಜನ್ ಅವರ `ಮತ್ತೊಬ್ಬನ ಆತ್ಮಚರಿತ್ರೆ~ ಅಬ್ರಪ್ಟ್ ಆಗಿ ನಿಲ್ಲುತ್ತದೆ -- ಇನ್ನುಳಿದುದನ್ನು ನೀವೇ ಬರಕೊಳ್ಳಿ ಎನ್ನುವಂತೆ; ಕತೆ, ಕವಿತೆ, ಲೇಖನ, ಬದುಕು ಹಾಗೇ, ಅದು ಮನುಷ್ಯರಿಂದ ಮನುಷ್ಯರಿಗೆ ಮುಂದರಿಯಬೇಕು.
ರಾಮಾನುಜನ್ ಅವರ ಹರಹು ಮತ್ತು ಆಳ ಎರಡೂ ದೊಡ್ಡದು. ಒಂದು ವಿಧದಲ್ಲಿ ಅವರ ಕಾವ್ಯವೆನ್ನುವುದು ಪದಾರ್ಥಗಳ ಪಟ್ಟಿ. ಇನ್ನೊಂದು ವಿಧದಲ್ಲಿ ಅಂತರಗಳಿಂದ ತುಂಬಿ ಅಂತರತಮ. ಮತ್ತೊಂದು ವಿಧದಲ್ಲಿ ಅಂತರವೇ ಇಲ್ಲದ ನಿರಂತರ. ಚಿಕ್ಕ ಚಿಕ್ಕ ಕವಿತೆಗಳಲ್ಲೇ ಇವರದು ವಾಮನಕ್ರಮ. `ಕುಂಟೋಬಿಲ್ಲೆ~ಯ `ಸಂಶಯ ಭಕ್ತಿ~ ಒಂದು ಮಿನಿ ಮಹಾಕಾವ್ಯ. ಅದರ ಆರಂಭವೇ ಆಕರ್ಷಕ:
ದೇವರೇ,
ಇದ್ದಿಯೋ ಇಲ್ಲವೋ ನಾ ಕಾಣೆ.
ನೀನು ಅನ್ನುವುದಕ್ಕೆ ಕೂಡ ಕಾರಣ
ಹುಡುಕಬೇಕು. ಆದರೂ ನೀನು ಅನ್ನದೆ ವಿಧಿಯಿಲ್ಲ.
ಮಾತಿನಾಚೆಯ ಮಾತಿಲ್ಲದ ನಿನ್ನನ್ನು
ಮಾತೇ ಮನಸ್ಸಾದ ನನ್ನಂಥ ವಾಚಾಳಿ
ಮಾತಾಡಿಸುವುದು ಹೇಗೆ?
ಈ ರೀತಿ ಈ ಕವಿಯ ಮಾತಿನಲ್ಲಿ ನಾವೊಂದು ಮೌನವನ್ನು ಕಾಣುತ್ತೇವೆ; ಮತ್ತು ಮೌನದಲ್ಲಿ ಮಾತನ್ನೂ.
----------------------------------------------------------
ಎ.ಕೆ. ರಾಮಾನುಜನ್ ಅವರ ಕೆಲವು ಕವಿತೆಗಳು
ಪದ್ಯದ ಮಾತು ಬೇರೆ
ನಾನು ಕಾಗದಗಳಿಗೆ ಉತ್ತರ
ಬರೆಯೋದಿಲ್ಲ. ಬರೆದರೂ
ಪೋಸ್ಟ್ ಮಾಡುವುದಿಲ್ಲ. ಪೋಸ್ಟ್ ಮಾಡಿದರೂ
ಎಷ್ಟೋ ಸಾರಿ ಅದು ಬರೆದವರಿಗೆ ಹೋಗಿ
ಸೇರೋದಿಲ್ಲ. ಸೇರಿದರೂ
ಅವರು ಅದನ್ನ ಪೂರ್ತಿ ಓದೋದಿಲ್ಲ, ಏನೇನೋ
ಕೆಲಸ ಅವರಿಗೆ. ಹಾಗೆ ಓದಿದರೂ
ನಾನೂ ಹೇಳಿದ್ದೊಂದು, ಅವರಿಗೆ ಅರ್ಥ
ಆಗಿದ್ದೊಂದು. ಇದರಿಂದ ಮನಸ್ತಾಪ ಬೇರೆ.
ನನಗೆ ಮಿಕ್ಕವರಿಂದ ಕಾಗದ ಬಂದಾಗಲೂ
ಇದೇ ಗತಿ. ಅದಕ್ಕೇ ನಾನು ಕಾಗದಕ್ಕೆ ಉತ್ತರ
ಬರೆಯೋದಿಲ್ಲ.
ಪದ್ಯದ ಮಾತು ಬೇರೆ
ಅದು ಕುದುರಿಬಿಟ್ಟರಂತೂ
ಅಪಾರ್ಥಮಾಡಿಕೊಂಡರೆ
ಅದೂ ಒಂದು ತರಹ ಅರ್ಥವೇ ಅಂತ ಅನಿಸಿಬಿಡುತ್ತೆ,
ಪದ್ಯದಲ್ಲಿ ಅನರ್ಥ ವ್ಯರ್ಥ ಸಾರ್ಥ ಅನಿಸಿದರೆ
ಅವೆಲ್ಲ ನಿರರ್ಥಕದ ಕಲ್ಲುಮಣ್ಣಿನ ಗಣಿ
ಯಲ್ಲಿ ಸಿಕ್ಕಿದ ಅರ್ಥ
ಸೋಸಿಕೊಳ್ಳುವ ಬೇರೆ ಬೇರೆ ತಂತ್ರ.
ಎಲ್ಲವೂ ಸಮರ್ಥ. ಸುಳ್ಳುಕೂಡ ನಿಜ.
ಪದವೇ ಪದಾರ್ಥ.
ಅದರ ಮಣ್ಣಿನಲ್ಲಿ ಚಿನ್ನದ ಕಣ.
ಕಲ್ಲಿನಲ್ಲಿ ಬೆಳ್ಳಿಯ ನರ,
ಕೆಸರಿನಲ್ಲೂ ಚಾಲೀಸ ಬಡಿದ ಹಳದಿಕಣ್ಣು,
ಕೆತ್ತನೆಗೆ ಕಾದಿರುವ ವೈಢೂರ್ಯ.
ಲಂಕೆ ಸುಟ್ಟದ್ದು ಹೇಗೆ? ಅಂತ ಚರಿತ್ರೆ.
ಕೇಳಿದವರ ಮನೆಯನ್ನೇ `ಹೀಗೆ!~
ಅಂತ ಸುಟ್ಟು ತೋರಿಸಿ
ತೆನಾಲಿರಾಮ
ಆ ಹೊಗೆ ಆ ಬೂದಿ ಆ ಹಾಹಾಕಾರದೊಳಗೆ,
`ನೋಡಿ ಇಲ್ಲಿ,
ಯಥಾರ್ಥ ರಾಮಾಯಣ ಇದೇ~, ಅಂತ
ತೋರಿಸಿದನಲ್ಲ,
ಹಾಗೆ.
-------------------------------------------------------------
ಪಕ್ಕದ ಮನೆಯಲ್ಲಿ ಉಪನಿಷತ್ತು
ಸೀಬೇ ಮರ. ಕೊಂಬೆ. ಕವೆ
ಯಲ್ಲಿ ಎರಡು ಹಕ್ಕಿ.
ಒಂದು. ಹಣ್ಣು ಕುಕ್ಕಿ ಹೆಕ್ಕಿ
ತಿನ್ನುತ್ತಿದೆ. ಹಸಿವು. ದಾಹ.
ಮತ್ತೊಂದು ಸುಮ್ಮನೆ ಕೂತು
ನೋಡುತ್ತದೆ. ಮೈಯೆಲ್ಲ ಕಣ್ಣು.
ಹೀಗೆ ಒಬ್ಬ ಗಂಡ. ಅವನ ಹೆಂಡತಿ.
ಪಕ್ಕದ ಮನೆ ಸಂಸಾರ
---------------------------------------------------------------
ಬೆಸ್ತರು
ಮಡಚೋ ಹೇಳಿದ ಹಾಗೆ
ಕವಿ ಬೆಸ್ತ:
ನಿರಂತರದ ಹೊಳೆಯಲ್ಲಿ ಹಿಡಿದ ಮೀನು
ಐದು ನಿಮಿಷದ ಹಿಂದೆ ಬಳುಕಿ ಮಿಂಚಿದ ಮೀನು
ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ
ಬೆಸ್ತ.
ಕೆಲವರ ಕೈರಾಶಿ,
ಈ ಪವಾಡ ಕೂಡ ಅವರಿಗೆ ಸಿದ್ಧಿ.
ನಮ್ಮಂಥವರ ಕೈಯಲ್ಲಿ ಅವು
ಸತ್ತು ಎವೆಯಿಕ್ಕದೆ
ನಾರುವ ಮೀನು:
ಮತ್ತೆ ಕೆಲವರಿಗೆ
ರಾತ್ರಿ ಊಟ
ಕ್ಕೆ ಗರಿಗರಿ ಕರಿದ ಮೀನು,
ಹರಿವ ನೀರಿನ ಸಾರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.