ADVERTISEMENT

ಕತೆ ನಮ್ಮ ಬದುಕನ್ನು ಮತ್ತೆ ಪ್ರವೇಶಿಸಲಿ...

ನೆಲಸಿರಿ

ನರಹಳ್ಳಿ ಬಾಲಸುಬ್ರಹ್ಮಣ್ಯ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಆಧುನಿಕ ಬದುಕಿನ ದುರಂತಗಳಲ್ಲೊಂದು, ನಮ್ಮ ಬದುಕಿನಿಂದ ಕತೆಗಳು ಕಣ್ಮರೆಯಾಗುತ್ತಿವೆಯೆಂಬುದು. ಕತೆ ಕೇಳಲು, ಹೇಳಲು ನಮಗೀಗ ವ್ಯವಧಾನವಿಲ್ಲ. ಯಾರಿಗೆ ಬೇಕು ನಮ್ಮ ಕತೆ? ಇದು ವಿಷಾದದ ದನಿಯಲ್ಲ, ವಾಸ್ತವ ಕಟುಸತ್ಯ.

ಕತೆ ಕಣ್ಮರೆಯಾಗುತ್ತಿವೆ ಎಂದರೇನು? ಕತೆ ಎಂದರೆ ಕತೆ ಮಾತ್ರವಲ್ಲ. ಅದು ಅನ್ಯರ ಬಗೆಗಿನ ಆಸಕ್ತಿ, ಸಂಬಂಧಗಳ ಸೆಲೆ, ಆಪ್ತ ಅನುಭವ, ಅರಿವಿನ ಸಾಧನ, ಪ್ರವೃತ್ತಿ, ಸಹಜ ಬಯಕೆಗಳನ್ನು ಸಂಸ್ಕರಿಸುವ ಶಕ್ತಿ, ಎಲ್ಲಕ್ಕಿಂತ ಮಿಗಿಲಾಗಿ ಕತೆ ಎಂದರೆ ನಮ್ಮಳಗಿನ ಸೃಜನಶೀಲ ಚೈತನ್ಯ.

ಕತೆಯ ಈ ಶಕ್ತಿಯನ್ನು ನಮ್ಮ ಪ್ರಾಚೀನರು ಬಲ್ಲವರಾಗಿದ್ದರು. ಜನಪದರ ಬದುಕಿನ ಜೀವನಾಡಿ ಕತೆಗಳು. ಯಾವುದೇ ಜನಾಂಗವಾಗಲೀ ಕತೆಗಳಿಲ್ಲದೆ ಬದುಕುವುದು ಕಷ್ಟ. ಜನಪದರಲ್ಲಿ ಮಾತುಕತೆಯಾಗುತ್ತಿತ್ತು. ಆ ಮೂಲಕ ಸಂಬಂಧ ಸೃಷ್ಟಿಯಾಗುತ್ತಿತ್ತು. ನಗರದಲ್ಲಿದ್ದ ನನ್ನ ತಾಯಿ ಹಳ್ಳಿಗೆ ಹೋಗಿ ಬಂದಾಗಲೆಲ್ಲ ಕತೆಗಳ ಕಣಜವಾಗುತ್ತಿದ್ದಳು. ಅವಳ ಮಾತುಕತೆಯಾಗಿ ಇಡೀ ಹಳ್ಳಿ ನನ್ನೊಳಗೆ ಸೇರಿಕೊಳ್ಳುತ್ತಿತ್ತು. ಅವಳಿಗೆ ಹಳ್ಳಿಯ ಸಂಪರ್ಕ ಕಡಿಮೆಯಾದಂತೆ ಅವಳು ಅನುಭವಿಸಿದ್ದು ಅಸಹನೀಯ ಮೌನ. ಬೇಂದ್ರೆಯವರು ಹೇಳುವಂತೆ `ಮೌನದಲ್ಲಿಯು ಕೂಡ ಮಾತಿನ ದನಿಯಿರಲಿ, ಮೂಕ ಮೌನವದು ಶಾಪದೊಲು'. ನಾವೀಗ ಇಂಥ ಶಾಪಗ್ರಸ್ತರು. ಮಾತಿಗೇ ಬರ ಬಂದಿರುವಾಗ ಇನ್ನು ಕತೆಯೆಲ್ಲಿ? ಸಂಬಂಧಗಳೆಲ್ಲಿ?

`ವಡ್ಡಾರಾಧನೆ' ಕತೆಯ ಶಕ್ತಿಯನ್ನು ನಮ್ಮ ಅನುಭವಕ್ಕೆ ತಂದುಕೊಡುವ ಒಂದು ಮಹತ್ವದ ಕೃತಿ. ಇದರ ಬಗ್ಗೆ ಹೆಚ್ಚು ಚರ್ಚೆ ನಡೆದಿಲ್ಲ, ಅದಕ್ಕೆ ಕಾರಣವೂ ಸ್ಪಷ್ಟ. ಭಾರತೀಯ ಚಿಂತನೆ ಬಹುಮಟ್ಟಿಗೆ ಕಾವ್ಯಕೇಂದ್ರಿತವಾದುದು. ಗದ್ಯ, ನಾಟಕವನ್ನು ಕಾವ್ಯವೆಂದು ಕರೆದರೂ, `ಗದ್ಯಂ ಕವೀನಾಂ ನಿಕಷಂ ವದಂತಿ' (ಗದ್ಯವೇ ಕವಿಯ ನಿಜವಾದ ಒರೆಗಲ್ಲು) ಎಂದು ಹೇಳಿದರೂ ಗದ್ಯವನ್ನು ಕುರಿತ ಗಂಭೀರ ಚರ್ಚೆ ನಡೆಯಲೇ ಇಲ್ಲ. ಪದ್ಯ, ಗದ್ಯ ಎಲ್ಲವೂ ಕಾವ್ಯವೇ ಎನ್ನುವುದಾದರೆ ಪಂಪನನ್ನು `ಆದಿಕವಿ' ಎಂದು ಕರೆಯುವುದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ.

ಕವಿರಾಜಮಾರ್ಗ ಲಕ್ಷಣ ಗ್ರಂಥವನ್ನು ಬಿಟ್ಟರೆ `ವಡ್ಡಾರಾಧನೆ' ನಿಸ್ಸಂದಿಗ್ಧ ರೀತಿಯಲ್ಲಿ ಕನ್ನಡದ ಮೊದಲ ಉಪಲಬ್ಧ ಕೃತಿ. `ಆದಿಕವಿ' ಸ್ಥಾನ ವಡ್ಡಾರಾಧನಕಾರನಿಗೆ ಸಲ್ಲಬೇಕು. ಪಂಪನಿಗಿಂತ ಮೊದಲು ಕನ್ನಡದಲ್ಲಿ ಪ್ರೌಢ ಗದ್ಯ ಪರಂಪರೆಯೊಂದು ಇದ್ದಿರಬೇಕು. ಕವಿರಾಜಮಾರ್ಗಕಾರ ಉಲ್ಲೇಖಿಸುವ ವಿಮಲೋದಯ, ನಾಗಾರ್ಜುನ, ಜಯಬಂಧು ದುರ್ವಿನೀತ ಮೊದಲಾದವರು `ಗದ್ಯಕಥಾ' ಲೇಖಕರೇ. ಇವರ ಕೃತಿಗಳು ನಮಗೆ ಲಭ್ಯವಿಲ್ಲ. ನಂತರವೂ ಕನ್ನಡದಲ್ಲಿ ಪ್ರಬಲವಾದ ಗದ್ಯ ಪರಂಪರೆಯೊಂದಿದೆ. ಆದರೆ ಕನ್ನಡ ಸಾಹಿತ್ಯ ಚರಿತ್ರೆ ಪ್ರಧಾನವಾಗಿ ಕಾವ್ಯ ಪರಂಪರೆಯನ್ನು ಗಮನಿಸಿ ರೂಪುಗೊಂಡಿದೆಯೇ ಹೊರತು ಗದ್ಯದ ಸಾಧನೆಯನ್ನು ಸಮರ್ಪಕವಾಗಿ ಗುರ್ತಿಸಿದಂತಿಲ್ಲ. ಹೊಸಗನ್ನಡದ ಹೊಸ್ತಿಲಲ್ಲಿ ನಿಂತು ಮುದ್ದಣ `ಗದ್ಯಂ ಹೃದ್ಯಂ ಪದ್ಯಂ ವಧ್ಯಂ' ಎಂದು ಹೇಳಿದ್ದು ಮುಂದೆ ಆಧುನಿಕ ಸಾಹಿತ್ಯ ಚರಿತ್ರೆಯನ್ನು ನಿರ್ದೇಶಿಸುವ ಸೂತ್ರರೂಪದ ಮಾತುಗಳಂತಿವೆ.

1931 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಪರೀಕ್ಷೆಯಲ್ಲಿ ವಡ್ಡಾರಾಧನೆಯ ಮೂರು ಕತೆಗಳನ್ನು ಡಿ.ಎಲ್. ನರಸಿಂಹಾಚಾರ್ ಸಂಪಾದಿಸಿ ಪ್ರಕಟಿಸುವುದರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಡ್ಡಾರಾಧನೆಯನ್ನು ಪರಿಚಯಿಸಿದರು. ನಂತರ 1949 ರಲ್ಲಿ ವಿಸ್ತಾರವಾದ ಪೀಠಿಕೆ, ಟಿಪ್ಪಣಿ ಸಹಿತ ಅವರೇ ಹತ್ತೊಂಬತ್ತು ಕತೆಗಳನ್ನು ಸಂಪಾದಿಸಿ ಶಿವಕೋಟ್ಯಾಚಾರ‌್ಯ ವಿರಚಿತ ವಡ್ಡಾರಾಧನೆ ಗ್ರಂಥ ಪ್ರಕಟಿಸಿದರು.

ಆ ವೇಳೆಗೆ ಆ.ನೆ. ಉಪಾಧ್ಯ ಕೃತಿಯ ಹೆಸರು ಮತ್ತು ಕರ್ತೃವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. 1970ರ ವೇಳೆಗೆ ಎಂ.ಎಂ. ಕಲಬುರ್ಗಿಯವರು ವಡ್ಡಾರಾಧನೆ ಎಂಬುದು ಕೃತಿಯ ಹೆಸರಲ್ಲ, ಶಿವಕೋಟ್ಯಾಚಾರ‌್ಯನೆಂಬುದು ಕರ್ತೃವಿನ ಹೆಸರ್ಲ್ಲಲ ಎಂದು ಪ್ರತಿಪಾದಿಸಿ ಇದರ ಹೆಸರು `ಆರಾಧನಾ ಕರ್ನಾಟ ಟೀಕಾ' ಎಂದೂ, ಇದನ್ನು ರಚಿಸಿದವನು ಬ್ರಾಜಿಷ್ಣು ಎಂದೂ ಪ್ರತಿಪಾದಿಸಿದರು. ಮುಂದೆ ಹಂಪ ನಾಗರಾಜಯ್ಯನವರು ಇದನ್ನು ಅನುಮೋದಿಸುತ್ತ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಸಂಪಾದಿಸಿ ಪ್ರಕಟಿಸುವಾಗ ರೂಢಿಯ ಜನಪ್ರಿಯ ಹೆಸರನ್ನು ಬಿಡಲಾಗದೆ ಕೃತಿಯ ಹೆಸರನ್ನು `ವಡ್ಡಾರಾಧನೆ' ಎಂದೇ ಕರೆದು ಕರ್ತೃ ಬ್ರಾಜಿಷ್ಣು ಎಂದು ಹೇಳುತ್ತಾರೆ. ಈಗ 2012 ರಲ್ಲಿ ಪ್ರಾಚೀನ ಗದ್ಯಸಾಹಿತ್ಯ ಮಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸುವಾಗ ಬ್ರಾಜಿಷ್ಣು ವಿರಚಿತ `ಆರಾಧನಾ ಕರ್ನಾಟ ಟೀಕಾ' (ಸಂ. ಶಾಂತಿನಾಥ ದಿಬ್ಬದ) ಎಂದೇ ಪ್ರಕಟಿಸಲಾಗಿದೆ.

`ವಡ್ಡಾರಾಧನೆ'ಯನ್ನು `ಉಪಸರ್ಗ ಕೇವಲಿಗಳ ಕತೆ' ಎಂದೂ ಒಂದು ಹಸ್ತಪ್ರತಿಯಲ್ಲಿ ಕರೆದಿರುವುದನ್ನು ಡಿ.ಎಲ್. ನರಸಿಂಹಾಚಾರ್ ಸೂಚಿಸುತ್ತಾರೆ. ಇದು ನನಗೆ ಆಸಕ್ತಿ ಮೂಡಿಸಿದೆ. ಮೋಕ್ಷ ಸಾಧನೆಯ ಹಾದಿಯಲ್ಲಿ ತಪಸ್ಸು ಮಾಡುವ ಯತಿಗೆ ದೇವತೆ, ಮನುಷ್ಯ, ಪ್ರಾಣಿ, ಜಡವಸ್ತು ಇವುಗಳಿಂದ ನಾನಾ ಬಗೆಯ ತೊಂದರೆಗಳು ಆಗುತ್ತವೆ. ಇವುಗಳಿಗೆ ಜೈನ ಪರಿಭಾಷೆಯಲ್ಲಿ ಉಪಸರ್ಗ ಎಂದು ಕರೆಯುತ್ತಾರೆ. ಜೊತೆಗೆ ಹಸಿವು, ನೀರಡಿಕೆ, ಶೀತವಾತ ಮೊದಲಾದ ದೇಹಬಾಧೆಗಳೂ ಕಾಡುತ್ತವೆ. ಇದನ್ನು ಪರೀಷಹ ಎನ್ನುತ್ತಾರೆ. ಈ ಉಪಸರ್ಗ ಪರೀಷಹಗಳನ್ನು ಎದುರಿಸಿ ಗೆದ್ದು ಮೋಕ್ಷ ಸಾಧಿಸುವವರೇ `ಕೇವಲಿ'ಗಳು. ಇಂತಹ ಸಾಧಕರ ಕತೆಗಳಿವು.

ಇದು ವಡ್ಡಾರಾಧನೆಯ ಕತೆಗಳ ವಿನ್ಯಾಸವನ್ನು ಸೂಚಿಸುತ್ತದೆ. ಈ ವಿನ್ಯಾಸ ಕೇವಲ ಧಾರ‌್ಮಿಕ ನೆಲೆಗೆ ಮಾತ್ರ ಅನ್ವಯವಾಗಬೇಕಿಲ್ಲ. ಎಲ್ಲ ಕ್ಷೇತ್ರಗಳ ಸಾಧಕರ ಹಾದಿಯಲ್ಲೂ ಉಪಸರ್ಗ (ಸುತ್ತಣ ಪರಿಸರದಿಂದ ತೊಂದರೆ) ಪರೀಷಹ (ದೈಹಿಕ ತೊಂದರೆ)ಗಳು ಇದ್ದೇ ಇರುತ್ತವೆ. ಇವುಗಳನ್ನು ಎದುರಿಸಿ ಮುನ್ನುಗ್ಗಿದಾಗ ಮಾತ್ರ ಆಯಾಯ ಕ್ಷೇತ್ರಗಳಲ್ಲಿ `ಮೋಕ್ಷ' ಸಾಧ್ಯ. ವಡ್ಡಾರಾಧನೆಯ ಕತೆಗಳ ವಿನ್ಯಾಸ ಈ ದೃಷ್ಟಿಯಿಂದ ಹೆಚ್ಚು ವ್ಯಾಪಕವೂ, ಅರ್ಥಪೂರ್ಣವೂ, ಸಮಕಾಲೀನವೂ ಆಗಿದೆ.

ಧರ್ಮ ಪ್ರತಿಪಾದನೆಗೆ ಕತೆಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡದ್ದು ವಡ್ಡಾರಾಧನೆಯ ರಚನಾ ವಿನ್ಯಾಸ. ಪುರಾಣಗಳಲ್ಲಿಯೂ ಒಂದು ಕಥಾಹಂದರವನ್ನಿಟ್ಟುಕೊಂಡೇ ಧರ್ಮ ಪ್ರತಿಪಾದನೆಯಿದೆ. ಆದರೆ ವಡ್ಡಾರಾಧನೆಯ ಗದ್ಯಕಥಾ ರೀತಿಗೂ ಪುರಾಣ ಪರಂಪರೆಯ ಕಥಾಬಳಕೆಯ ರೀತಿಗೂ ಒಂದು ಮಹತ್ವದ ವ್ಯತ್ಯಾಸವಿದೆ. ಇದು ಎರಡು ಪ್ರಕಾರಗಳ ವ್ಯತ್ಯಾಸವೂ ಹೌದು. ಪುರಾಣಗಳಲ್ಲಿ ಲೌಕಿಕಕ್ಕೆ ನೇರ ಪ್ರವೇಶವಿಲ್ಲ.

ಕಾವ್ಯರೂಪದ ಆ ರಚನೆಗಳಲ್ಲಿ ವಿವರಗಳಿಗೂ ಅವಕಾಶ ಕಡಿಮೆ. ಆದರೆ `ಗದ್ಯಕಥಾ'ದಲ್ಲಿ ಲೌಕಿಕ-ಅಲೌಕಿಕಗಳ ನಡುವೆ ಗೆರೆ ಬಲು ತೆಳು. ಅಲ್ಲದೆ ದೈನಿಕ ವಿವರಗಳೇ ಅನೇಕ ವೇಳೆ ಗದ್ಯದ ಲಯವನ್ನು, ರಚನೆಯ ಸ್ವರೂಪವನ್ನು ರೂಪಿಸುತ್ತವೆ. ಗದ್ಯದ ಈ ಶಕ್ತಿಯನ್ನು ವಡ್ಡಾರಾಧನೆ ಸಮರ್ಥವಾಗಿ ಬಳಸಿಕೊಂಡಂತೆ ತೋರುತ್ತದೆ. ಅತ್ಯುತ್ತಮ ಗದ್ಯದ ಮಾದರಿಯನ್ನು ನಾವಿಲ್ಲಿ ಕಾಣಬಹುದು.
ವಡ್ಡಾರಾಧನೆಯ ಕತೆಗಳನ್ನು ಗಮನಿಸಿದಾಗ ಎರಡು ಸಂಗತಿಗಳು ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತವೆ. ಮೊದಲನೆಯದು ಕತೆಯ ಆಕೃತಿ, ಮತ್ತೊಂದು ಅಲ್ಲಿಯ ಕಥನ ಕೌಶಲ.

ಕತೆಯ ಆಕೃತಿಯಲ್ಲಿ ಎರಡು ನೆಲೆಗಳಿವೆ. ಒಂದು ಪ್ರಧಾನ ಕತೆ. ಆ ಕತೆಗೆ ಪೂರಕವಾಗಿ ಅನೇಕ ಉಪಕತೆಗಳು. ಪ್ರಧಾನ ಕತೆಯ ಜೊತೆಗೆ ಉಪಕತೆಗಳು ಹೆಣೆದುಕೊಂಡು ಕತೆಯ ಸಂಕೀರ್ಣ ಆಕೃತಿ ರೂಪುಗೊಳ್ಳುತ್ತದೆ. ಕುರ್ತಕೋಟಿಯವರು ಗುರ್ತಿಸುವಂತೆ ಮುಖ್ಯ ಕತೆಯ ಆಶಯ ಧರ್ಮ ಪ್ರತಿಪಾದನೆ. ತಿಳಿವಳಿಕೆಯ ಮಾಧ್ಯಮವಾಗಿ ಕತೆ ಇಲ್ಲಿ ಕ್ರಿಯಾಶೀಲವಾಗುತ್ತದೆ. ಆದರೆ ಉಪಕತೆಗಳ ಉದ್ದೇಶ ಧರ್ಮ ಪ್ರತಿಪಾದನೆಯಲ್ಲ. ಅಲ್ಲಿ ಚಿತ್ತವೃತ್ತಿ ಪ್ರವೃತ್ತಿಗಳ ಸಹಜ ನಿರೂಪಣೆಯಿದೆ.

ಇವೆರಡರ ಜೋಡಣೆಯ ಕತೆಯ ಆಕೃತಿ ಸಂಸ್ಕೃತಿ ಮತ್ತು ಪ್ರವೃತ್ತಿಗಳ ಸಂಘರ್ಷದ ಜಟಿಲ ಹೆಣಿಗೆಯಿಂದ ಆಕರ್ಷಕ ರೂಪ ಪಡೆದುಕೊಳ್ಳುತ್ತದೆ. ಧರ್ಮ ಅಧರ್ಮಗಳು ಇಲ್ಲಿ ಮುಖಾಮುಖಿಯಾಗುತ್ತವೆ. ಈ ವಿನ್ಯಾಸ ನಮ್ಮನ್ನು ಮತ್ತೊಂದು ಪ್ರಮುಖ ಸಂಗತಿಯತ್ತ ಕರೆದೊಯ್ಯುತ್ತದೆ. ಇದು ತತ್ವ ಹಾಗೂ ಸೃಜನಶೀಲತೆಗಳ ಜಗಳ. ಸೃಜನಶೀಲವಲ್ಲದ ತತ್ವ ಜಡ, ನೀರಸ. ತಾತ್ವಿಕ ಬೆನ್ನೆಲುಬಿಲ್ಲದ ಸೃಜನಶೀಲತೆ ಲಘು, ಲಂಪಟವಿಲಾಸ. ಇವೆರಡರ ಹೊಂದಾಣಿಕೆಯಲ್ಲಿ ರಸಾನುಭವದ ಸಾರ್ಥಕ್ಯವಿದೆ. ವಡ್ಡಾರಾಧನೆಯ ಕತೆಗಳು ಇದಕ್ಕೆ ಉಜ್ವಲ ನಿದರ್ಶನ.

ಎಲ್ಲ ಕತೆಗಳಲ್ಲೂ ಇದೇ ವಿನ್ಯಾಸವಿದೆಯೆಂದಲ್ಲ. ಸುಕುಮಾರ ಸ್ವಾಮಿಯ ಕತೆ ಈ ಬಗೆಯದು. ಆದರೆ ವಿದ್ಯುಚ್ಚೋರ ರಿಸಿಯ ಕತೆ ಇದಕ್ಕಿಂತ ಭಿನ್ನ. ಇದರಲ್ಲಿ ಧರ್ಮ ಪ್ರತಿಪಾದನೆಯ ಪ್ರಧಾನ ಕತೆಯೇ ಆಕರ್ಷಕವಾಗಿದೆ. ಉಪಕತೆಗಳ ಹಂಗಿಲ್ಲದ ನೇರ ನಿರೂಪಣೆ ಇಲ್ಲಿದೆ. `ಚಾಣಾಕ್ಯ ರಿಸಿಯ ಕತೆ'ಯಂತಹ ಕತೆಯಲ್ಲಿ ಇತಿಹಾಸದ ಚಾಣಕ್ಯ ಇಲ್ಲಿ ಜೈನಮುನಿಯಾಗಿ ರೂಪಾಂತರಗೊಂಡು ಕಾಣಿಸಿಕೊಳ್ಳುತ್ತಾನೆ. ರಾಜಕಾರಣ ಧರ್ಮವಾಗಿ ರೂಪಾಂತರಗೊಳ್ಳುವ ಕ್ರಮದ ಮಾದರಿಯಿದು.

ನಮ್ಮ ಕಾಲದಲ್ಲಿ ಇದರ ಪರ್ಯಾಯ ಮಾದರಿಯಿದೆ. ಧರ್ಮ ರಾಜಕಾರಣದ ವೇಷ ಧರಿಸುತ್ತಿದೆ. ಕಾರ್ತಿಕ ಋಷಿಯ ಕತೆಯಲ್ಲಿ ಇನ್ನೊಂದು ಬಗೆಯಿದೆ. ಇದು ನಮ್ಮನ್ನು ಬೆಚ್ಚಿಬೀಳಿಸುವಂಥ ಮನುಷ್ಯ ಸ್ವಭಾವವನ್ನು ಅನಾವರಣಗೊಳಿಸುತ್ತದೆ. ಕೃತ್ತಿಕಾಪುರದ ಅರಸು ಅಗ್ನಿರಾಜ. ಈತನ ಹೆಂಡತಿ ವೀರಮತಿ. ಇವರಿಗೆ ಆರು ಜನ ಹೆಣ್ಣು ಮಕ್ಕಳು. ಕಡೆಯವಳು ಕೃತ್ತಿಕೆ. ಅತಿ ಚೆಲುವೆ. ಅಗ್ನಿರಾಜ ಮಗಳ ಈ ಚೆಲುವಿಗೆ ಆಕರ್ಷಿತನಾಗಿ ಮಂತ್ರಿ ಪ್ರಮುಖ ಪರಿವಾರವನ್ನೆಲ್ಲ ಕರೆಸಿ `ನನ್ನ ರಾಜ್ಯದಲ್ಲಿರುವ ಉತ್ತಮವಾದದು, ಚೆಲುವಾದುದು ಯಾರಿಗೆ ಸೇರಬೇಕು?' ಎಂದು ಕೇಳುತ್ತಾನೆ. ಎಲ್ಲರೂ ಒಮ್ಮತದಿಂದ `ರಾಜನಿಗೆ' ಎಂದು ಉತ್ತರಿಸುತ್ತಾರೆ.

ಆ ಪರಿವಾರದಲ್ಲಿ ಅಗ್ನಿರಾಜನ ಹೆಂಡತಿ ವೀರಮತಿಯೂ ಇರುತ್ತಾಳೆ. ಎಲ್ಲರ ಒಪ್ಪಿಗೆ ಪಡೆದು ಅಗ್ನಿರಾಜ ತನ್ನ ಮಗಳು ಕೃತ್ತಿಕೆಯನ್ನು ತಾನೇ ಮದುವೆಯಾಗುತ್ತಾನೆ. ಪ್ರಭುತ್ವದ ಪರಮಾಧಿಕಾರದ ಫಲವಿದು; ತರ್ಕದ ದುರಂತವಿದು; ತೀವ್ರ ವ್ಯಾಮೋಹಿ ಜೀವಿಯ ಕತೆಯಿದು. ಅಗ್ನಿರಾಜ-ಕೃತ್ತಿಕೆಯರ ಮಗನೇ ಕಾರ್ತೀಕಸ್ವಾಮಿ. ಒಮ್ಮೆ ಈತನಿಗೆ ತನ್ನ ತಾತ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ತನ್ನ ತಂದೆಯೇ ತನ್ನ ತಾಯಿಯ ತಂದೆಯೂ ಹೌದು ಎಂಬ ಸತ್ಯ ಸಂಬಂಧಗಳ ಗೊಂದಲವುಂಟು ಮಾಡುತ್ತದೆ. ಆತ ಮುಂದೆ ವೈರಾಗ್ಯದ ದೀಕ್ಷೆ ಪಡೆಯುತ್ತಾನೆ. ಸರಳವೆನ್ನಬಹುದಾದ ಈ ಕತೆ ನಮ್ಮಲ್ಲಿ ಅನೇಕ ಸಂಕೀರ್ಣ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಈಡಿಪಸ್ ಕಾಂಪ್ಲೆಕ್ಸ್, ಎಲೆಕ್ಟ್ರಾ ಕಾಂಪ್ಲೆಕ್ಸ್ ಕಣ್ಣೆದುರು ಸುಳಿದು ಹೋಗುತ್ತವೆ.

ವೈವಿಧ್ಯಮಯ ಕತೆಗಳು ವಡ್ಡಾರಾಧನೆಯಲ್ಲಿವೆ. ಪ್ರತಿ ಕತೆಯೂ ಭಿನ್ನ ಅನುಭವ ನೀಡುತ್ತದೆ. ವಡ್ಡಾರಾಧನೆಯ ಕಥನ ಕೌಶಲ ಅನುಭವ ಮೂಲವಾದದ್ದು. ಈ ಎಲ್ಲ ಕತೆಗಳ ಹಿಂದೆ ಒಂದು ಸಿದ್ಧಾಂತವಿದೆ ನಿಜ. ಆ ಸಿದ್ಧಾಂತಕ್ಕೆ ದೃಷ್ಟಾಂತವೆಂಬಂತೆ ಇಲ್ಲಿಯ ಕತೆಗಳ ರಚನೆಯಿದೆ. ಆದರೆ ಜಾನಪದ ಮಾದರಿಯ ಈ ಕತೆಗಳು ನೀಡುವ ಕಾವ್ಯಾನುಭವ ಸಿದ್ಧಾಂತಗಳ ನೆಲೆಯನ್ನು ಮೀರಿದ್ದು.

ಸುಕುಮಾರಸ್ವಾಮಿಯ ಕತೆಯನ್ನು ಈ ಹಿನ್ನೆಲೆಯಲ್ಲಿ ನಾವು ಗಮನಿಸಿದಾಗ `ಕಥೆ'ಯ ಶಕ್ತಿ ಸಾಧ್ಯತೆಗಳ ಅನೇಕ ಸಂಗತಿಗಳು ತಿಳಿಯುತ್ತವೆ. ಸುಕುಮಾರಸ್ವಾಮಿಯ ಶ್ರೀಮಂತಿಕೆಯನ್ನು, ಆತನ ಸುಕೋಮಲ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕ್ರಮ ಕಥನ ಕೌಶಲದ ಅತ್ಯುತ್ತಮ ಮಾದರಿಗೆ ನಿದರ್ಶನವೆನ್ನಿಸುತ್ತದೆ.

`ವಡ್ಡಾರಾಧನೆ'ಯ ಕತೆಗಳನ್ನು ಓದಿ ಮುಗಿಸಿದಾಗ ಅನ್ನಿಸಿದ್ದು: ಕತೆ ನಮ್ಮ ಬದುಕನ್ನು ಮತ್ತೆ ಪ್ರವೇಶಿಸಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.