ಈ ರೋಗ ನವ್ಯಚಳವಳಿಯ ಸಂದರ್ಭದಲ್ಲಿ ಉಲ್ಬಣಗೊಂಡಿತು. ತಮ್ಮ ಕಾವ್ಯ ಗುರು ಎಂದೇ ಸ್ವೀಕರಿಸಿದ್ದ ಎಲಿಯಟ್‌ನ ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ, ಐತಿಹಾಸಿಕ ಪ್ರಜ್ಞೆ ಮೊದಲಾದ ಪರಿಕಲ್ಪನೆಗಳು ಅವರಿಗೆ ಕೇವಲ ವಿಚಾರಗಳಾಗಿ ಬಂದವೇ ಹೊರತು ಅಂತರ್ಗತ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಪರಿಣಾಮ - ಕನ್ನಡ ಪರಂಪರೆಯೊಡನೆ ಸೃಜನಶೀಲ ಸಂವೇದನಾಶೀಲ ಮನಸ್ಸು ಅರ್ಥಪೂರ್ಣ ಸಂಬಂಧವನ್ನು ಕಡಿದುಕೊಂಡದ್ದು; ಪರಂಪರೆಗೂ ಸಮಕಾಲೀನ ವಾಸ್ತವಕ್ಕೂ ಮಧ್ಯೆ ಬಿರುಕು ಮೂಡಿದ್ದು. ನವ್ಯಸಾಹಿತ್ಯದ ಪ್ರಮುಖರಲ್ಲೊಬ್ಬರಾದ ರಾಮಚಂದ್ರ ಶರ್ಮರು ಸಂದರ್ಶನವೊಂದರಲ್ಲಿ `ನಮಗೆ ಇತ್ತೀಚಿನ ಐವತ್ತು ವರ್ಷಗಳ ಕನ್ನಡ ಸಾಹಿತ್ಯವಷ್ಟೇ ಸಾಕು, ಅದರ ಹಿಂದಿನ ಸಾಹಿತ್ಯದ ಅಧ್ಯಯನ ಅನಗತ್ಯ' ಎಂದು ಉದ್ಗರಿಸಿದ್ದರು. ಇದೊಂದು ರೀತಿಯಲ್ಲಿ ಆ ಕಾಲದ ಅಲಿಖಿತ ಒಪ್ಪಂದದಂತಿತ್ತು. ಒಂದು ಕಾಲಘಟ್ಟದಲ್ಲಿ ಕನ್ನಡ ಮನಸ್ಸನ್ನು ಸಂಮೋಹನಗೊಳಿಸಿ ಆಕರ್ಷಿಸಿದ ಅನಂತಮೂರ್ತಿ, ಲಂಕೇಶ್, ಚಿತ್ತಾಲ, ತೇಜಸ್ವಿ, ದೇಸಾಯಿ - ಇವರೆಲ್ಲರೂ ಸಾವಿರ ವರ್ಷದ ದೀರ್ಘ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಂಪರೆಯೊಡನೆ ಸಂವಾದ ನಡೆಸಿದವರಲ್ಲ. ಪ್ರಖರ ಸಮಕಾಲೀನ ಪ್ರಜ್ಞೆಯನ್ನು ಪ್ರಕಟಿಸಿದ ಇವರ ಅದ್ಭುತ ಪ್ರತಿಭೆಯನ್ನು ವಸಾಹತುಶಾಹಿಯ ಭೂತ ಆವರಿಸಿಕೊಂಡಿತ್ತು. ಕೆಲವೊಮ್ಮೆ ಅನಂತಮೂರ್ತಿ, ತೇಜಸ್ವಿ ಇದನ್ನು ಮೀರಲು ಪ್ರಯತ್ನಿಸುತ್ತಾರೆನ್ನುವುದು ನಿಜವಾದರೂ ಆಂತರ್ಯದಲ್ಲಿ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಇವರೆಲ್ಲ ಅನಾಥ ಶಿಶುಗಳೇ. ಕನ್ನಡ ಸಂಸ್ಕೃತಿಯ ಸ್ಮೃತಿ ಪ್ರಪಂಚದೊಡನೆ, ಶ್ರದ್ಧೆ ನಂಬಿಕೆಗಳೊಂದಿಗೆ, ಕನ್ನಡ ಮನಸ್ಸು ಎದುರಿಸಿದ ಸಂಘರ್ಷಗಳೊಡನೆ ಇವರಿಗೆ ಸಂವಾದ ಸಾಧ್ಯವಾಗಲೇ ಇಲ್ಲ. `ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು' ಎಂದ ಅಡಿಗರಿಗೂ ಕಂಡದ್ದು ಪ್ರಧಾನ ಸಂಸ್ಕೃತಿಯ ಪದರುಗಳೇ. ಕಂಬಾರ, ದೇವನೂರ ಮಾತ್ರ ಇವರೆಲ್ಲರಿಗಿಂತ ಭಿನ್ನರಾಗಿ ಕಾಣಿಸುತ್ತಾರೆ.
ನವ್ಯ ಕಾಲದ ಪ್ರಮುಖ ಚಿಂತಕರಲ್ಲೊಬ್ಬರಾದ ಎಂ. ಜಿ. ಕೃಷ್ಣಮೂರ್ತಿಯವರು ಹೇಳುತ್ತಾರೆ: `ಇಂಗ್ಲಿಷ್ ವಿಮರ್ಶಕ ಮಧ್ಯಕಾಲದಿಂದ ಈಗಿನವರೆಗೆ ಅಖಂಡ ಸಾಹಿತ್ಯ ಪರಂಪರೆಯನ್ನು ತೋರಿಸಬಲ್ಲ. ಆದರೆ ಕನ್ನಡ ವಿಮರ್ಶಕ ವಿಸ್ತಾರವಾದ ಸಾಹಿತ್ಯ ಇತಿಹಾಸವನ್ನು ತೋರಿಸಬಹುದಾದರೂ ಸಂಪ್ರದಾಯದ ಪ್ರಧಾನ ಅಂಶವಾದ ಕಾಳಜಿಗಳ ಅವಿಚ್ಛಿನ್ನತೆಯನ್ನು ಅವನು ತೋರಿಸಲಾರ. ಇಂಗ್ಲಿಷ್ ವಿಮರ್ಶಕನೊಬ್ಬ ಟಿ. ಎಸ್. ಎಲಿಯಟ್, ಮೆಟಫಿಸಿಕಲ್ ಕವಿಗಳು, ಜೇಕೊಬಿಯನ್ ನಾಟಕಕಾರರ ನಡುವೆ, ಫಲಪ್ರದವಾಗಿ ಸ್ಥಾಪಿಸಬಹುದಾದ ಸಂಬಂಧವನ್ನು ಕನ್ನಡ ವಿಮರ್ಶಕನೊಬ್ಬ ಬೇಂದ್ರೆ, ಪುಟ್ಟಪ್ಪ ಅಡಿಗರಿಗೂ ಪಂಪ, ಹರಿಹರ, ಕುಮಾರವ್ಯಾಸ, ಲಕ್ಷ್ಮೀಶರಿಗೂ ಮಧ್ಯೆ ಸ್ಥಾಪಿಸಬಹುದೆಂದು ನಾನಂತೂ ಭಾವಿಸಲಾರೆ. ಇದಕ್ಕೆ ಕಾರಣಗಳು ಐತಿಹಾಸಿಕವಾಗಿರಬಹುದು ಅಥವಾ ಸಮಾಜಶಾಸ್ತ್ರೀಯವಾಗಿರಬಹುದು. ಆದರೆ ಭಗ್ನಸ್ಥಿತಿಯ ವಾಸ್ತವವನ್ನು ಕಡೆಗಣಿಸಲಾಗದು.'
ವಸಾಹತುಶಾಹಿಯ ಪ್ರಭಾವಕ್ಕೊಳಗಾದ ಮನಸ್ಥಿತಿಯ ಫಲವಿದು. ವಸಾಹತುಘಟ್ಟದ ಮುಖ್ಯ ರೋಗವೇ ವಸಾಹತು ಪೂರ್ವದ ರಚನೆಗಳೊಡನೆ ಅಧಿಕೃತ ಸಂಬಂಧವನ್ನು ಅಸಾಧ್ಯವಾಗಿಸುವುದು. ಸಮೃದ್ಧವಾದ ಕನ್ನಡ ಪರಂಪರೆಯನ್ನು ವರ್ತಮಾನದ ಸಂದರ್ಭಕ್ಕೆ ಅನ್ವಯಿಸಿ ನೋಡಲು ಹಿಂಜರಿಯುವ ಮನಸ್ಥಿತಿಯೇ ಬೌದ್ಧಿಕ ವಸಾಹತೀಕರಣದ ಪ್ರಮುಖ ಲಕ್ಷಣ.
ಈ ರೋಗ ಉಲ್ಬಣಿಸಿದ್ದು ನವ್ಯದ ಸಂದರ್ಭದಲ್ಲಾದರೂ ಇದರ ಮೂಲವನ್ನು ನಾವು ಆಧುನಿಕ ಸಾಹಿತ್ಯದ ಆರಂಭದಲ್ಲೇ ಕಾಣುತ್ತೇವೆ. ವಸಾಹತುಶಾಹಿ ಆಡಳಿತ ನಮ್ಮಲ್ಲಿ ಅತ್ಯಂತ ಪ್ರಬಲವಾಗಿ ರೂಢಿಯಲ್ಲಿದ್ದ ಶ್ರವ್ಯ ಪರಂಪರೆಯನ್ನು ನಾಶಪಡಿಸಿ ಲಿಖಿತ ರೂಪವನ್ನು ಅಧಿಕೃತಗೊಳಿಸಿತು. ಇದು ನಮ್ಮ ಸಂಸ್ಕೃತಿಯಲ್ಲಾದ ಬಹುಮುಖ್ಯ ಪಲ್ಲಟ.
ಬಾಲ್ಯದ ನೆನಪಿಗೆ ಹೋಗುವುದಾದರೆ ನಮ್ಮದು ಪುಟ್ಟಹಳ್ಳಿ. ಅಲ್ಲಿ ವರ್ಷಕ್ಕೆ ಮೂರು ನಾಲ್ಕು ಬಾರಿ ವಾರಗಟ್ಟಲೆ ಕುಮಾರವ್ಯಾಸ ಭಾರತ ವಾಚನ ವ್ಯಾಖ್ಯಾನ ನಡೆಯುತ್ತಿತ್ತು. ಪ್ರಾಥಮಿಕ ಶಾಲೆಯ ಉಪಾಧ್ಯಾಯರೊಬ್ಬರು ಲಯಬದ್ಧವಾಗಿ ಅದನ್ನು ಓದುತ್ತಿದ್ದರು; ಮತ್ತೊಬ್ಬರು ಅದನ್ನು ವ್ಯಾಖ್ಯಾನ ಮಾಡುತ್ತಿದ್ದರು. ಸಂಜೆಯ ವೇಳೆ ಊರಿನ ಬಹುಪಾಲು ಜನ ಈ ಕಾವ್ಯಾಸ್ವಾದದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವಾಚನ - ವ್ಯಾಖ್ಯಾನದಲ್ಲಿ ಅನೇಕ ಸಮಕಾಲೀನ ಸಂಗತಿಗಳೂ ಸೇರಿಕೊಳ್ಳುತ್ತಿದ್ದವು. ಖಾಯಂ ಕೇಳುಗರಾಗಿದ್ದ ನಮ್ಮೂರಿನ ಕೆಲವು ಅನಕ್ಷರಸ್ಥ ಹಿರಿಯರಿಗೆ ಇಡೀ `ಕುಮಾರವ್ಯಾಸ ಭಾರತ' ಬಾಯಿಪಾಠವಾಗಿತ್ತು. ತಮ್ಮ ಮಾತುಕತೆಯ ನಡುವೆ ಅವರು ಕಾವ್ಯಭಾಗವನ್ನು, ಪ್ರಸಂಗವನ್ನು ಉಲ್ಲೇಖಿಸುತ್ತಿದ್ದರು. `ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳಾಗಿದ್ದರು'. ದಿನನಿತ್ಯ ಇಳಿಹೊತ್ತಿನಲ್ಲಿ ಮೊಮ್ಮಕ್ಕಳನ್ನು ಕೂರಿಸಿಕೊಂಡು ಕೈತುತ್ತು ಹಾಕುತ್ತ ಅನೇಕ ಕತೆಗಳನ್ನೂ ಉಣಿಸುತ್ತಿದ್ದ ಅಜ್ಜಿಯ ಜಗತ್ತಂತೂ ಪುರಾಣ, ಇತಿಹಾಸ, ಸಮಕಾಲೀನ ಎಲ್ಲ ಸಂಗತಿಗಳನ್ನೂ ಒಳಗೊಂಡಿರುತ್ತಿತ್ತು. ಅಲ್ಲಿ ಬಾರದ ಮಾತುಗಳಿಲ್ಲ; ಪ್ರಸ್ತಾಪವಾಗದ ವಿಷಯಗಳಿಲ್ಲ. ಎಷ್ಟೊಂದು ರಾಮಾಯಣಗಳು, ಅದೆಷ್ಟು ಮಹಾಭಾರತಗಳು! `ಜಗವೆಲ್ಲ ಒಂದೆ ರಾಮಾಯಣವು ಎಂಬುದದು ಹೆದ್ದಪ್ಪು. ಒಂದೊಂದು ಹಳ್ಳಿಯಲಿ ಒಬ್ಬೊಬ್ಬ ಜಸವಂತನಾನರಿಹ ವಾಲ್ಮೀಕಿ ನೆಲಸಿಹರು!' ರಾವಣನ ಜೊತೆಜೊತೆಗೇ ಅಹಿರಾವಣ, ಮಹಿರಾವಣರ ಕತೆಯೂ ನನ್ನ ಭಾವಜಗತ್ತನ್ನು ಪ್ರವೇಶಿಸಿದ್ದು ಅಜ್ಜಿಯ ಜಗತ್ತಿನ ಮೂಲಕವೇ! ಇಂಥ ಸೃಜನಶೀಲ ಮನಸ್ಸುಗಳಿಗೆ ಊರು - ಕೇರಿಗಳಲ್ಲಿ ಬರವಿರಲಿಲ್ಲ.
ಇಂತಹ ಬಹುಮುಖೀ ಸಂಸ್ಕೃತಿಯನ್ನು ನಿರ್ನಾಮಗೊಳಿಸಿ ಏಕಮುಖೀ ಸಂಸ್ಕೃತಿಗೆ ಹಾದಿಮಾಡಿಕೊಟ್ಟ ಸಾಹಿತ್ಯಾಧ್ಯಯನದ ಸ್ವರೂಪದ ಬಗ್ಗೆ ನಾವೀಗ ಮರುಚಿಂತಿಸಬೇಕಾಗಿದೆ. ಇದು ನಮ್ಮ ಸಂಸ್ಕೃತಿಯ ಮೂಲಾಂಶಗಳನ್ನೇ ದುರ್ಬಲಗೊಳಿಸಿ ಗ್ರಹಿಕೆ, ಸ್ವೀಕರಣದ ಕ್ರಮದಲ್ಲಿಯೇ ಅನೇಕ ಬದಲಾವಣೆಗಳನ್ನು ತಂದಿತು. ಮಾತಿನ ಅಧಿಕೃತತೆ ಹಿನ್ನೆಲೆಗೆ ಸರಿದು ಲಿಖಿತ ದಾಖಲೆ ಮುಖ್ಯವಾಗಿಬಿಟ್ಟಿತು. ಇದನ್ನು ನಮ್ಮ ಜೀವನವಿಧಾನದ ಹಲವಾರು ನೆಲೆಗಳಲ್ಲಿ ಕಾಣಬಹುದಾದಂತೆ ಸಾಹಿತ್ಯಾಧ್ಯಯನದಲ್ಲೂ ಕಾಣಬಹುದು. ಒಂದು ಕಾಲಕ್ಕೆ ಶಿಕ್ಷಣಕ್ಕೂ ಸಾಹಿತ್ಯಾಧ್ಯಯನಕ್ಕೂ ನೇರ ಸಂಬಂಧವಿರಲಿಲ್ಲ. ಆದರೆ ಈಗ ಸಾಹಿತ್ಯ ಬಹುಮಟ್ಟಿಗೆ ಶಿಕ್ಷಣದ ಸೌಲಭ್ಯ ಹಾಗೂ ಸವಲತ್ತುಗಳನ್ನು ಪಡೆದವರ ಸ್ವತ್ತಾಗಿಬಿಟ್ಟಿದೆ. ಇದು ಚಾರಿತ್ರಿಕ ಬೆಳವಣಿಗೆಯ ಅನಿವಾರ್ಯ ಸ್ಥಿತಿ ಎಂಬುದನ್ನು ಒಪ್ಪಿಕೊಂಡರೂ ನಮ್ಮ ಸಂಸ್ಕೃತಿಯ ಮೇಲೆ ಇದರಿಂದಾಗಿರುವ ಅಪಾಯದ ಬಗ್ಗೆಯೂ ನಾವು ಚಿಂತಿಸಬೇಕಾಗಿದೆ.
ಕಳೆದ ಶತಮಾನದ ಆರಂಭದಲ್ಲಿ ಕನ್ನಡ ಪರಂಪರೆಯ ಸಾಹಿತ್ಯ ಕೃತಿಗಳ `ಸಂಗ್ರಹ' ಕಾರ್ಯ ಆರಂಭವಾಯಿತು. ಇಡೀ ಕೃತಿಯ ಓದು ಕಷ್ಟ ಅಥವಾ ಅನವಶ್ಯಕ ಎಂಬ ಉದ್ದೇಶ, ರಸವತ್ತಾದ ಭಾಗಗಳಿವು ಎಂಬ ಸಂಗ್ರಹಕಾರನ ಆಯ್ಕೆ - ಇವುಗಳಿಂದಾಗಿ ಇಂಥ ಸಂಗ್ರಹಗಳು ರೂಪುಗೊಂಡವು. ಇಲ್ಲಿಯೇ ಮಿಶೆಲ್‌ಪ್ಯುಕೋ ಹೇಳುವ ಸಾಹಿತ್ಯದ ಸಾಂಸ್ಥಿಕ ರೂಪದ `ಅಧಿಕಾರ' ಆರಂಭವಾದದ್ದು. ಇದರ ಮುಂದುವರಿಕೆಯೇ `ಸಾಹಿತ್ಯ ಚರಿತ್ರೆ'ಯ ರಚನೆ. ಇದು ಓದಿನ ಕ್ರಮವನ್ನೂ ನಿರ್ದೇಶಿಸುವ, ನಿರ್ಬಂಧಿಸುವ ಮಾರ್ಗ. ಇಡೀ ಕೃತಿಯನ್ನು ಒಂದು ವ್ಯವಸ್ಥೆಯೆಂದೂ, ಅದರಲ್ಲಿ ಈ ಸಂಗ್ರಹಿತ ಭಾಗ ಉಪಯುಕ್ತ ಅಂಗವೆಂದೂ, ತ್ಯಾಜ್ಯಭಾಗ ನಿರುಪಯುಕ್ತ ಎಂದೂ ಈ ಸಂಗ್ರಹಕ್ರಿಯೆ ನಿರ್ಧರಿಸುತ್ತದೆ. ಇದೊಂದು ರೀತಿಯಲ್ಲಿ ಓದುಗ ನೇರವಾಗಿ ಕೃತಿಯೊಡನೆ ಸಂವಾದಕ್ಕೆ ತೊಡಗದೆ ಸಂಗ್ರಹಕಾರನ ಮಧ್ಯವರ್ತಿ ನಿರ್ದೇಶನದೊಡನೆ ಕೃತಿ ಪ್ರವೇಶ ಮಾಡುವ ಕ್ರಮವಾಯಿತು. ಕ್ರಮೇಣ ಇದು ಕೃತಿಯ ಕೆಲವು ಆಯ್ದ ಭಾಗಗಳಿಗೆ ಸೀಮಿತವಾಗಿ, ಇನ್ನು ಕೆಲವೊಮ್ಮೆ ಕೃತಿಯ ಕೆಲವು ಕಾವ್ಯೋಕ್ತಿಯನ್ನು ಉದ್ಧರಿಸುವ ಮಟ್ಟಕ್ಕಿಳಿದು, ಕಡೆಗೆ ಕೃತಿಯ ಗದ್ಯಾನುವಾದ ಅಥವಾ ಸಾರಾಂಶದ ನೆಲೆ ತಲುಪಿ ನಿಜಕೃತಿಯಿಂದ ಓದುಗ ದೂರವೇ ಉಳಿಯುವಂತಾಯಿತು. ಹೀಗಾಗಿ ಕೃತಿ ನೀಡುವ ಕಾವ್ಯಾನುಭವ, ಅರ್ಥಪರಂಪರೆಯ ವಿಸ್ತಾರಗಳಿಂದ ಓದುಗ ವಂಚಿತನಾದಂತಾಯಿತು.
`ಹಿಂದಣ ಹೆಜ್ಜೆಯ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು' ಇದು ಅಲ್ಲಮನ ಮಾತು. ಪರಂಪರೆಯ ಅರಿವು ವರ್ತಮಾನದ ಅನೇಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆಗಳನ್ನು ಸೂಚಿಸುತ್ತದೆ. ಸಂವೇದನಾಶೀಲ ಸೂಕ್ಷ್ಮಮನಸ್ಸುಗಳು ಈ ಹಿಂದೆ ಇಂಥ ಸಮಸ್ಯೆಗಳನ್ನು ಹೇಗೆ ಮುಖಾಮುಖಿಯಾಗಿದ್ದವು ಎಂಬ ಅಧ್ಯಯನ ಇಂದಿನ ಬಿಕ್ಕಟ್ಟುಗಳಿಗೆ ಬಿಡುಗಡೆಯ ಒಳನೋಟಗಳನ್ನು ಒದಗಿಸುತ್ತದೆ. ಪ್ರಭುತ್ವಕ್ಕೆ ಸೃಜನಶೀಲತೆ ಡೊಗ್ಗು ಸಲಾಮು ಹಾಕುತ್ತಿರುವ ಸಂದರ್ಭದಲ್ಲಿ ಪಂಪನ ಸೃಜನಶೀಲ ಪ್ರತಿಭೆ ಪ್ರಭುತ್ವವನ್ನು ವಿವರಿಸಿದ ಕ್ರಮ ಅತ್ಯಂತ ಪ್ರಸ್ತುತ. ಧಾರ್ಮಿಕ ಸಂಸ್ಥೆಗಳು ಸೃಷ್ಟಿಸುತ್ತಿರುವ ಹಿಂಸೆ, ಭಯೋತ್ಪಾದನೆಯ ಹೊತ್ತಿನಲ್ಲಿ ವಚನಕಾರರು ಧರ‌್ಮದ ಸಾಂಸ್ಥಿಕ ರೂಪವನ್ನು ಬೋಧಿಸಿದ ಕ್ರಮ ಅಧ್ಯಯನ ಯೋಗ್ಯ. ಪ್ರವೃತ್ತಿ - ಸಂಸ್ಕೃತಿಗಳ ಸಂಘರ್ಷವನ್ನು ಜನ್ನ ಚಿತ್ರಿಸಿದ್ದು, ಲೌಕಿಕ - ಅಲೌಕಿಕಗಳನ್ನು ರತ್ನಾಕರವರ್ಣಿ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡದ್ದು, ಕನಕದಾಸ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸಿದ್ದು, ಕುಮಾರವ್ಯಾಸ ಭಕ್ತಿಯ ಆವೇಶದಲ್ಲೂ ಕಲಾತ್ಮಕ ಎಚ್ಚರವನ್ನು ಕಾಯ್ದುಕೊಂಡದ್ದು - ಈ ಎಲ್ಲದರ ಸೂಕ್ಷ್ಮ ಅಧ್ಯಯನ ಸಮಕಾಲೀನ ಸಾಹಿತ್ಯ - ಸಂಸ್ಕೃತಿಗೆ ಮಾತ್ರವಲ್ಲ, ನಮ್ಮ ಬದುಕಿಗೂ ಮಾರ್ಗದರ್ಶನ ನೀಡಬ್ಲ್ಲಲುದು. ಎಲ್ಲಕ್ಕಿಂತ ಮುಖ್ಯವಾಗಿ `ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ' ಎಂಬ ರಾಘವಾಂಕನ ಪರಿಕಲ್ಪನೆಯಂತೂ ಭಾರತೀಯ ಕಾವ್ಯಮೀಮಾಂಸೆಯಲ್ಲಾಗಲೀ, ಪಾಶ್ಚಾತ್ಯ ಕಾವ್ಯ ಮೀಮಾಂಸೆಯಲ್ಲಾಗಲೀ ಕಾಣಸಿಗದ, ಕನ್ನಡಕ್ಕೇ ವಿಶಿಷ್ಟವಾದ ಮಹತ್ವದ ಕಾವ್ಯಚಿಂತನೆಯಾಗಿದೆ. ಇಂಥ ಚಿಂತನೆಗಳಿಗೆ ಈ ಅಂಕಣದಲ್ಲಿ ಮುಖಾಮುಖಿಯಾಗೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.