ನಬಾರುಣ ಭಟ್ಟಾಚಾರ್ (1948) ಬಂಗಾಳಿಯ ಪ್ರಸಿದ್ಧ ಕವಿ, ಕಾದಂಬರಿಕಾರ, ಕತೆಗಾರ. ಹುಟ್ಟಿದ್ದು ಪಶ್ಚಿಮ ಬಂಗಾಳದ ಬಹೆರಾಂಪುರದಲ್ಲಿ. ತಂದೆ ಬಿಜನ್ ಭಟ್ಟಾಚಾರ್ಯ ರಂಗಭೂಮಿ ಮತ್ತು ಸಿನಿಮಾ ಜಗತ್ತಿನ ಗೌರವಾನ್ವಿತ ವ್ಯಕ್ತಿ. ಎಡಪಕ್ಷಗಳ ಸದಸ್ಯ.
`ಇಪ್ಟಾ' ಪ್ರೀತಿಯ ತಂಡ. ಬಡವರ, ಶೋಷಿತರ ಹಕ್ಕಿಗಾಗಿ ರಂಗಭೂಮಿಯನ್ನು ನೆಲೆಯಾಗಿಸಿಕೊಂಡವರು. ತಾಯಿ ಹೋರಾಟಗಾರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿ. ನಬಾರುಣರು ಓದಿದ್ದು ಕೋಲ್ಕೊತಾದಲ್ಲಿ. ಮೊದಲಿಗೆ ಭೂವಿಜ್ಞಾನ ನಂತರ ಇಂಗ್ಲಿಷ್ ಸಾಹಿತ್ಯ.
ಕೋಲ್ಕೊತಾ ವಿಶ್ವವಿದ್ಯಾಲಯ ಬೌದ್ಧಿಕ ಬೆಳವಣಿಗೆಗೆ ಅವಕಾಶ ಮಡಿಕೊಟ್ಟ ಜಾಗ. ರಷ್ಯಾ, ಜಪಾನ್, ಚೈನಾ ಸುದ್ಧಿಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ. ಬಂಗಾಳದ ಜನಪರ ಚಳುವಳಿಗಳಲ್ಲಿ ಸದಾ ಭಾಗಿ.
ಸಿಪಿಐ(ಎಂ.ಎಲ್)ನ ಪರ ಸಹಾನುಭೂತಿ. ಮಡದಿ ಪ್ರಣತಿ. ಮಗ ತಥಾಗತ ಪತ್ರಕರ್ತ. ಸದ್ಯ ನಾಬಾರುಣರು ಬಂಗಾಳಿ ಸಾಹಿತ್ಯ ಪತ್ರಿಕೆ `ಭಾಷಾಬಂಧನ'ದ ಸಂಪಾದಕರು. (ಇವರ ಮುಖ್ಯಕೃತಿಗಳು ಕಂಗಾಲ್ ಮಲಶಾತ್, ಹರ್ಬರ್ಟ್ , ಜುದ್ಧಾ ಪರಿಸ್ಥಿತಿ , ಲುಬ್ಧಕ್, (ಕಾದಂಬರಿ), ಹಲಾಲ ಝಂಡಾ , ಚೋಟಾ ಗಲಾ ್ಪ (ಕತೆಗಳ ಸಂಗ್ರಹ), ಈ ಮೃತ್ಯು ಉಪತ್ಯೊಕಾ ಅಮಾರ್ ದೇಶ್ ನಾ , ಪುಲಿಶ್ ಕರೇ ಮಾನುಶ್ ಶಿಕಾರ್ (ಕವನ ಸಂಗ್ರಹ)').
ಒಟ್ಟು ಏಳು ಕಾದಂಬರಿ, ಅರವತ್ತು ಕತೆಗಳು ಮತ್ತು ಮೂರು ಕವನ ಸಂಗ್ರಹಗಳ ರಚನೆ. `ಹರ್ಬರ್ಟ್' ಬಂಗಾಳಿ ಕಾದಂಬರಿ ಸಿನಿಮಾ ಆಗಿ ಅತ್ಯುತ್ತಮ ಬಂಗಾಳಿ ಚಲನಚಿತ್ರವೆಂದು ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಇದರ ನಿರ್ದೇಶಕ ಸುಮನ್ ಮುಖ್ಯೋಪಾಧ್ಯಾಯ್‌ಗೆ `ಪಿ. ಲಂಕೇಶ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ದೊರೆತಿದೆ. ಇದೇ ಕಾದಂಬರಿಗೆ ಒಲಿದದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಬಂಕಿಮ್ ಪುರಸ್ಕಾರ, ನರಸಿಂಗ್‌ದಾಸ್ ಪುರಸ್ಕಾರ. ಅವರ ಕಾದಂಬರಿ, ಕತೆಗಳು ರಂಗಭೂಮಿಯಲ್ಲಿ ಪ್ರದರ್ಶನಗೊಂಡಿವೆ.
ಬಂಗಾಳದ ಈ ಹಿರಿಯ ಲೇಖಕರ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ.
* ನೀವು ಬರಹಗಾರರ, ಚಳುವಳಿಗಾರರ, ಕಲಾವಿದರ ಕುಟುಂಬದಿಂದ ಬಂದವರು. ನಿಮ್ಮ ಮನೆಯ ವಾತಾವರಣ, ಬಾಲ್ಯ ಹೇಗೆ ನಿಮ್ಮ ಬರವಣಿಗೆಗೆ ಪೂರಕವಾಗಿ ಒದಗಿ ಬಂತು? ಈಗ ಹಿಂತಿರುಗಿ ನೋಡಿದರೆ ಏನನ್ನಿಸುತ್ತದೆ?
ನನ್ನ ತಂದೆ ಬಿಜನ್ ಭಟ್ಟಾಚಾರ್ಯರೇ ನನಗೆ ಆದರ್ಶ. ಆತ ತುಂಬಾ ಮುಗ್ಧ. ಅವರ ಪ್ರಭಾವ ನನ್ನ ಮೇಲಿದೆಯೇನೊ. ರಂಗಭೂಮಿ, ಸಿನಿಮಾ ರಂಗದಲ್ಲಿ ಅವರು ತೊಡಗಿಕೊಂಡಿದ್ದರು. ಹೀಗಾಗಿ ಮನೆಯಲ್ಲಿ ಸದಾ ಬಂಗಾಳಿಯ ಪ್ರಸಿದ್ಧ ನಟರು, ಕಲಾವಿದರು, ಲೇಖಕರು ಬರುವುದು ಇದ್ದೇ ಇತ್ತು. ಎಡಚಿಂತನೆ ಕೇಳಿಸಿಕೊಳ್ಳದ ಮನೆಗಳೇ ಆಗ ಕಡಿಮೆ. ಇದಕ್ಕೆ ನಮ್ಮ ಮನೆಯೂ ಹೊರತಲ್ಲ.
ನನ್ನ ತಂದೆ ಸಿಪಿಐ ಸದಸ್ಯರಾಗಿದ್ದರು. ಅಲ್ಲಿ ಬರುವವರ ಮಾತು ಚರ್ಚೆ ನನ್ನೊಳಗೆ ಇಳಿದಿರಬೇಕು. ಹಾಗೆಯೇ ಅಪ್ಪ-ಅಮ್ಮ ಇಬ್ಬರಿಗೂ ಪುಸ್ತಕದ ಹುಚ್ಚು. ಒಬ್ಬನೇ ಮಗನಾಗಿದ್ದುದರಿಂದ ಅಂಥ ಒತ್ತಾಯ ನಿರೀಕ್ಷೆಗಳೇನೂ ಇರಲಿಲ್ಲ. ನನ್ನ ಬಗ್ಗೆ ಹೆಚ್ಚು ಗಮನ ಕೊಡಲು ಅವರಿಗೆ ಸಮಯವೂ ಇರಲಿಲ್ಲ. ಹಾಗಾಗಿ ಪುಸ್ತಕಗಳೊಂದಿಗೆ ಒಂದು ಗೆಳೆತನ ಬೆಳೆದುಬಿಡ್ತು.
* ನಿಮ್ಮ ತಾಯಿ ಪ್ರಸಿದ್ಧ ಲೇಖಕಿ. ಅವರ ಬರಹದ ರಾಶಿಯೆದುರು ನಿಮ್ಮ ನಡೆ ಹೇಗಿತ್ತು?
ಆಕೆಯ ಪ್ರಭಾವ ನನ್ನ ಮೇಲೆ ಅಷ್ಟಾಗಿ ಇಲ್ಲ. ಬಡವರ, ಶೋಷಿತರ ಕುರಿತಾದ ಕೆಲ ನಿಲುವುಗಳಲ್ಲಿ ಸಾಮ್ಯತೆ ಬಿಟ್ಟರೆ ಅಂಥ ವಿಶೇಷ ಪ್ರಭಾವವೇನೂ ಇಲ್ಲವೆನಿಸುತ್ತದೆ. ನಾನು ಸಾಹಿತ್ಯದ ಕುರಿತು ಬೇರೆಯೇ ಮಾರ್ಗವನ್ನು ತುಳಿದಿದ್ದರಿಂದ ಅವರ ಬರವಣಿಗೆಯ ಕ್ರಮದಿಂದ ದೂರವೇ ಉಳಿದಿದ್ದೇನೆ.
* ಕವಿತೆಯ ಕುರಿತು ನಿಮಗಿರುವ ನಂಬಿಕೆಗಳೇನು? ನಾಲ್ಕೈದು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿಕೊಂಡಿರುವ ನಿಮಗೆ ಕವಿತೆಯಿಂದ ಲೋಕವನ್ನು ನೋಡುವ ಕ್ರಮ ಬದಲಾಯತೆಂದು ಅನ್ನಿಸಿದೆಯೇ? ಲೋಕವನ್ನು ಹೇಗೆಲ್ಲಾ ಇದು ನೋಡಲು ಕಲಿಸಿದೆ? ಕವಿತೆಯೊಂದಿಗಿನ ನಿಮ್ಮ ಒಡನಾಟದ ರೀತಿ ಯಾವ ತರಹದ್ದು?
ಬಡವರು, ಅಸಹಾಯಕರ ಜಗತ್ತು ಮತ್ತು ಕವಿತೆಯ ಜಗತ್ತು ನನಗೆ ಬೇರೆ ಬೇರೆ ಅಲ್ಲ. ಭ್ರಷ್ಟತೆ, ಮನುಷ್ಯರ ಸ್ವಾಭಿಮಾನಕ್ಕೆ ಧಕ್ಕೆ, ಬಡವರಿಗೆ ತೊಂದರೆಯಾದರೆ ಸಹಿಸಿಕೊಳ್ಳಲಿಕ್ಕಾಗುವುದಿಲ್ಲ. ನನ್ನ ಕೈಲಾದಷ್ಟು ಇದರಲ್ಲಿ ತೊಡಗಿಕೊಳ್ಳುತ್ತೇನೆ. ಹಾಗಂತ ಇಲ್ಲಿ ಕಂಡದ್ದನ್ನೆಲ್ಲ ಕವಿತೆಯಲ್ಲಿ ತಂದು ಹಾಕಲಾಗುವುದಿಲ್ಲ.
ನನ್ನ ಸಾಹಿತ್ಯದ ಸೌಂದರ್ಯಪ್ರಜ್ಞೆಯಲ್ಲಿ ಬೇರೆಯದೇ ನಡೆಯುತ್ತಿರುತ್ತದೆ. ಇದೆಲ್ಲ ಒಳ ಉರಿಯ ಹಾಗೆ ಸಹಜವಾಗಿ ಬಂದರೆ ಚೆನ್ನ. ಇಲ್ಲವಾದರೆ ಬೇಡ. ಒಬ್ಬ ಕ್ರಾಂತಿಕಾರಿಯನ್ನು ಕೊಲ್ಲಲಾಯಿತು. ಅವರ ಸಾವು ನನ್ನನ್ನು ವೇದನೆಗೊಳಪಡಿಸಿತು. ಈ ಸಾವು, ಇದರ ಹಿಂದಿನ ದುಷ್ಟತೆ ಕುರಿತು ಕವಿತೆ ಬರೆದಿರುವೆ.
ಆ ಕ್ರಾಂತಿಕಾರಿಯ ಹಿಂಸೆಯ ಮಾರ್ಗ ನನಗೆ ಒಪ್ಪಿಗೆ ಇಲ್ಲ ನಿಜ, ಆದರೆ ಆತನ ಉದ್ದೇಶ ಗಮನಿಸಿ. ಜನರಿಗಾಗಿ ಆತ ಸ್ವಂತದ್ದೆಲ್ಲವನ್ನು ತ್ಯಾಗ ಮಾಡಿದ್ದಾನೆ. ಜನರಿಗಾಗಿ ಹೋರಾಡುವುದಕ್ಕೂ, ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಹೋರಾಡುವುದಕ್ಕೂ ಇರುವ ವ್ಯತ್ಯಾಸವನ್ನು ಅರಿಯುವ ಸೂಕ್ಷ್ಮತೆ ಇಲ್ಲದಿದ್ದರೆ ಹೇಗೆ?. ನನ್ನ ಕವಿತೆ ಇಂಥಲ್ಲಿ ತಳಮಳಕ್ಕೊಳಗಾಗುತ್ತದೆ. ಪ್ಯಾರಿಸ್ಸಿನಲ್ಲಿ ಒಮ್ಮೆ ಏನಾಯಿತೆಂದರೆ ಬೃಹತ್ ಆಕಾರದ ಗಡಿಯಾರಗಳನ್ನು ಒಡೆಯತೊಡಗಿದರು.
ಯಾಕೆಂದರೆ ಇವು ಆಳುವವರ ಕಾಲಕ್ಕೆ ಸಾಕ್ಷಿಯಾಗಿದ್ದವು. ತಮ್ಮದೇ ಹೊಸ ಕಾಲವನ್ನು ಸೃಷ್ಟಿಸಿಕೊಳ್ಳುವುದರ ಸಾಂಕೇತಿಕ ರೀತಿಯಾಗಿತ್ತದು. ಬರಹಗಾರ ಕೂಡ ಹೀಗೆಯೇ ಒಂದು ಹೊಸ ಕಾಲವನ್ನು ತನ್ನ ಬರವಣಿಗೆಯಲ್ಲಿ ರೂಪಿಸಬೇಕು. ವಾಲ್ಟರ್ ಬೆಂಜಮಿನ್, ಟಾಲ್‌ಸ್ಟಾಯ್, ಟ್ಯಾಗೋರ್ ಅನೇಕರಲ್ಲಿ ಹೀಗಾಯಿತು. ನಾನು ಕವಿತೆ ಕುರಿತು ಯೋಚಿಸುವಾಗಲೆಲ್ಲ ಈ ಗಡಿಯಾರದ ಘಟನೆ ನೆನಪಿಗೆ ಬರುವುದು.
ಓದು ಓದಲು ಶುರುಮಾಡಿದೆನೆಂದರೆ ಹೊಸಕಾಲವೊಂದು ಶುರುವಾಯಿತೆಂದೆ ಅರ್ಥ. ಕೆಲ ಗಡಿಯಾರಗಳು ಕೈಕೊಡುತ್ತವೆ. ಓಡುವುದೇ ಇಲ್ಲ. ಕೆಲ ಕವಿತೆಗಳಂತೆಯೇ. ಒಂದು ಕವಿತೆ ತನ್ನ ಹೊಸ ಕಾಲವನ್ನೂ, ಓದುಗನ ಹೊಸ ಕಾಲವನ್ನೂ ಹುಟ್ಟುಹಾಕುವಂತಾದರೆ ಒಳ್ಳೆಯದು. ಕವಿತೆಯಲ್ಲಿ ಹುಸಿತನವೆಂದರೆ ನನಗಾಗದು. ಕೆಲ ಕವಿತೆಗಳು ಅಮೆರಿಕ ಅಧ್ಯಕ್ಷರಿಗಿಂತ ಹೆಚ್ಚು ಸುಳ್ಳು ಹೇಳತೊಡಗುತ್ತವೆ. ಒಟ್ಟಿನಲ್ಲಿ ಕವಿತೆಗೆ ಚಳವಳಿಯ ಗುಣ ಇರಬೇಕು.
* ನಿಮ್ಮ ಯಾವುದಾದರೊಂದು ಕವಿತೆ ಓದಿ ಕೊಂಚ ವಿವರಿಸಿದರೆ ನನಗೆ ಕವಿತೆಯಲ್ಲಿ ನೀವು ತೊಡಗಿಕೊಂಡಿರುವ ರೀತಿಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಅನುಕೂಲವಾಗುವುದು.
ಒಂದು ಕವಿತೆಯಿದೆ ಅಂಗೈ ನೋಡುವ ಕುರಿತು. ಅಂಗೈ ನೋಡಿ ಭವಿಷ್ಯ ಹೇಳುತ್ತಾರಲ್ಲ ಅದನ್ನು ಕವಿತೆಯಲ್ಲಿ ಬೇರೊಂದು ಉದ್ದೇಶಕ್ಕಾಗಿ ತಂದೆ. ನೋಡಿ ಅದನ್ನು ಹೀಗೆ ಹೇಳಬಹುದೇನೊ: ಜನಗಳೇ ನಾನು ಕವಿ ನನಗೂ ಅಂಗೈ ನೋಡಲು ಬರುತ್ತದೆ.
ನಾನು ಗಾಳಿಯ ಅಂಗೈ ನೋಡಿರುವೆ. ಈ ಗಾಳಿ ಒಂದು ದಿನ ಬಿರುಗಾಳಿಯಾಗಿ, ಚಂಡಮಾರುತವಾಗಿ ಎಲ್ಲ ಸೊಕ್ಕಿನ ಸೌಧಗಳನ್ನು ಬೀಳಿಸುವುದು. ನಾನು ಭಿಕ್ಷೆ ಬೇಡುವ ಮಕ್ಕಳ ಅಂಗೈ ನೋಡಿರುವೆ. ಬರುವ ದಿನಗಳಲ್ಲಿ ಇವರ ಕಷ್ಟಗಳು ಕಡಿಮೆಯಾಗುವುದೆಂದು ನನಗೇನೂ ಅನಿಸುತ್ತಿಲ್ಲ. ನಾನು ಮಳೆಯ ಅಂಗೈ ನೋಡಿರುವೆ.
ಅದರ ತಲೆಯೊ ವಿಚಿತ್ರ. ನೀವು ಸದಾ ಒಂದು ಕೊಡೆಯೊಂದಿಗಿದ್ದರೆ ಒಳ್ಳೆಯದು. ನಾನು ಕನಸಿನ ಅಂಗೈ ನೋಡಿರುವೆ. ಅದನ್ನು ಹಿಡಿಯಹೊರಟರೆ ನಿದ್ದೆಯನ್ನು ಕೊಲ್ಲಲೇ ಬೇಕಾಗುತ್ತದೆ. ಪ್ರೀತಿಯ ಅಂಗೈಯನ್ನೂ ನೋಡಿರುವೆ. ಅಬ್ಬಾ ಇದರ ಹಿಡಿತ ಎಷ್ಟು ಬಿಗಿಯಾದದ್ದು. ಕ್ರಾಂತಿಕಾರಿಗಳ ಅಂಗೈ ನೋಡುವುದೆಂದರೆ ಹೆಮ್ಮೆಯ ಸಂಗತಿ.
ಈ ಅಂಗೈಗಳು ಖಾಲಿಯೇ ಇರುವುದಿಲ್ಲ. ಸದಾ ಮುಷ್ಟಿಯಾಗಿ ಆಕಾಶಕ್ಕೆ ಗುದ್ದುವ ತೆರ ಮೇಲೆಯೇ ಇರುತ್ತವೆ. ಕೆಲವರ ಅಂಗೈ ನೋಡಲಾಗುವುದಿಲ್ಲ ಅವು ಮೊನ್ನೆ ಬಾಂಬ್ ದಾಳಿಯಲ್ಲಿ ಛಿದ್ರಗೊಂಡಿವೆ. ನಾನು ಭೀಷಣ ಕತ್ತಲೆಯ ಅಂಗೈ ನೋಡಿರುವೆ. ಅದರ ದುಃಖ ಹೇಳತೀರದು. ಸಿರಿವಂತರ ಅಂಗೈಗಳನ್ನೂ ನೋಡಬೇಕಾಗಿ ಬಂತು.ಅವರ ಭವಿಷ್ಯ ಖಂಡಿತ ಅಂಧಕಾರದಲ್ಲಿದೆ. ಒಂದು ದಿನ ನನ್ನ ಅಂಗೈಯನ್ನೂ ನೋಡಿದೆ. ಆಗ ಗೊತ್ತಾಯಿತು ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ.
* `ಲೇಖಕ ವ್ಯಕ್ತಿತ್ವ' ಒಂದು ಇರುತ್ತದೆಯಲ್ಲವೆ? ಇದು ಹೇಗೆಲ್ಲಾ ಬೆಳೆಯುತ್ತ, ದಿಕ್ಕುತಪ್ಪುತ್ತಾ, ಮಾಗುತ್ತಾ ಹೋಗುವುದು. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಹೇಳಿರಿ.
ಪಾಪಪ್ರಜ್ಞೆ ಇಲ್ಲದವನು ಮತ್ತು ಜನರ ಎದೆಯ ದನಿಯನ್ನು ಹಿಡಿಯದವನು ನಿಜವಾದ ಲೇಖಕನಾಗುವುದು ಕಷ್ಟ. ಹೇಳಿ ಈಗ ಅಂಥ ಪಾಪಪ್ರಜ್ಞೆ ಲೇಖಕರಲ್ಲಿ ಉಳಿದಿದೆಯೇ? ಎಲ್ಲರೂ ಒಂದಲ್ಲ ಒಂದು ಬಗೆಯ ಸಮರ್ಥನೆಯ ದಾರಿ ಹಿಡಿದಿದ್ದಾರೆ. ಮೌನವೂ ಕೂಡ ಪಾಪಪ್ರಜ್ಞೆ ಇಲ್ಲದ ಸ್ಥಿತಿಯೆ. ಲೇಖಕ ಈಗ ಕಳೆದುಕೊಳ್ಳಲು ಸಿದ್ಧವಾಗಿದ್ದಾನೆಯೇ? ಅವನು ಪಡೆಯಲು ತೋರಿಸುವ ಉತ್ಸಾಹ ಅಸಹ್ಯ ಹುಟ್ಟಿಸುವುದಿಲ್ಲವೆ? ಫ್ರೆಂಚ್ ಭಾಷೆಯಲ್ಲಿ ರಚನೆಯಾದ ಒಂದು ಕೃತಿಯಿದೆ; `ಸೊಸೈಟಿ ಆಫ್ ಸ್ಪೆಕ್ಯ್ಟಾಕಲ್ಸ್' ಅಂತ.
ಈ ವ್ಯವಸ್ಥೆ ಯಾವಾಗಲೂ ಸುಳ್ಳು, ಮೋಸದ `ಸ್ಪೆಕ್ಯ್ಟಾಕಲ್'್ಸ ಗಳನ್ನು ಕಟ್ಟಲು ನೋಡುತ್ತದೆ. ತನ್ನ ಆಡಂಬರದ, ವೈಭವದ, ಹುಸಿ ವಿನಯದ ಮರೆಯಲ್ಲಿ ಸುಳ್ಳುಗಳನ್ನು ಪೋಷಿಸುತ್ತದೆ. ಇದನ್ನು ಲೇಖಕ ಅರ್ಥ ಮಾಡಿಕೊಳ್ಳಲು ಸಮರ್ಥನಾಗಿದ್ದಾನೆಯೇ?. ಲೇಖಕ ಇಂಥ ದುಷ್ಟ `ಸ್ಪೆಕ್ಯ್ಟಾಕಲ್ಸ್'ಗಳನ್ನು ಭೇದಿಸಿ ನಿಲ್ಲಬೇಕು. ಸೋಲು ಎಂಬುದಕ್ಕೂ ಬರಹದಲ್ಲಿ ಬೇರೆಯದೇ ಆದ ಅರ್ಥವಿರುತ್ತದೆ. ನಮ್ಮ ಲೇಖಕರು ಸೋಲಲು ಸಿದ್ಧರಾಗಿದ್ದಾರೆಯೆ?. ಅವರ ಹುಸಿ ಗೆಲುವಿನ ಹಿಂದಿರುವ ಅನಾರೋಗ್ಯ ಅವರಿಗೆ ಕಾಣುವುದೊ? ಇದೆಲ್ಲ ಅರಿಯದಿದ್ದರೆ ನೀವು ಹೇಳಿದಿರಲ್ಲ `ಲೇಖಕ ವ್ಯಕ್ತಿತ್ವ' ಅದು ರೂಪುಗೊಳ್ಳಲು ಸಾಧ್ಯವೇ ಇಲ್ಲ.
ಕೆಲ ತಿಂಗಳ ಹಿಂದೆ ಕೆಲ ಕಾರ್ಮಿಕರು, ಕೂಲಿಯವರು ಒಂದು ನಾಟಕ ಪ್ರದರ್ಶಿಸಿದರು. ಸಿಲಿಗುರಿಯ `ಸೃಜನ್ ಉತ್ಸವ'ದಲ್ಲಿ. ಬಹಳ ಸರಳವಾದ ಆದರೆ ತೀವ್ರವಾದ ನಾಟಕವದು. ಪೌಷ್ಟಿಕಾಂಶಗಳಿಲ್ಲದೆ ಎಳೆಗೂಸೊಂದು ಟೀ ಎಸ್ಟೇಟ್‌ನಲ್ಲಿ ತೀರಿಕೊಂಡ ವಸ್ತುವನ್ನು ಕುರಿತದ್ದು. ಇದನ್ನು ಪ್ರದರ್ಶಿಸಿದ ರೀತಿ ಬಹಳ ಹರಿತವಾಗಿತ್ತು. ನಮ್ಮ ರಂಗಭೂಮಿಯ ಚಲನೆಗೆ ಪೆಟ್ಟು ಕೊಡುವಂತಿತ್ತು. ಮಗು ನಾಟಕದುದ್ದಕ್ಕೂ ಕೆಮ್ಮಿ ಕೆಮ್ಮಿ ನರಳುತ್ತಿರುತ್ತದೆ.ಮಗುವಿನ ಅಳು ಕೇಳುವುದು ಎಷ್ಟು ಕಷ್ಟ ನೋಡಿ. ಕೊನೆಗೆ ಅದು ಸಾಯುತ್ತದೆ.
ಅಲ್ಲಿನವರು ಅದರ ಮಣ್ಣಿಗೆ ಹೋಗುತ್ತಾರೆ. ನಾಟಕ ಮುಗಿದರೂ ತಾಯಿಯ ಅಳು ಅನುರಣಿಸುತ್ತಲೇ ಇತ್ತು. ಮಗು ಮತ್ತು ತಾಯಿ ಇಬ್ಬರೂ ಅಳುವ ದೃಶ್ಯ, ಈ ಅಳುವಿನ ನಿರಂತರತೆ ಜೀವಹಿಂಡುತಿತ್ತು. ಈ ಘಟನೆ ನಮ್ಮನ್ನು ಯೋಚಿಸುವಂತೆ ಮಾಡುವುದೆ?. ಇದನ್ನೆಲ್ಲ ಕಂಡು ಯೋಚಿಸುವ ಮನಸ್ಥಿತಿ ನಾವು ಉಳಿಸಿಕೊಂಡಿದ್ದೇವೆಯೇ?
ಬರಹಗಾರನ ಒಳಗೆ ನಿಜವಾದ ಕಿಡಿ ಇಲ್ಲದಿದ್ದರೆ ಅವನು ಸೃಷ್ಟಿಸುವ ಫಿರಂಗಿ, ಬಾಂಬುಗಳ ಬರಹ ವ್ಯರ್ಥ. ಸೀಳುಬಿಟ್ಟ ಭೂಮಿಯಲ್ಲಿ ಚಿಗುರುವ ಸಸಿಯ ವಿಶ್ವಾಸದಿಂದ ಅವನು ಕಲಿಯಬೇಕು. ಜ್ವಾಲಾಮುಖಿಯ ಮೇಲೆ ಕೆಟಲ್ ಇಟ್ಟು ಚಾ ಕಾಯಿಸುವ ಜನರ ಚಾ ಕುಡಿಯವ ತಾಕತ್ತಾದರೂ ಅವನಿಗೆ ಇರಬೇಕು.
* ` ಹರ್ಬರ್ಟ್ `- ನಿಮ್ಮ ಪ್ರಸಿದ್ಧ ಕಾದಂಬರಿ. ಬಂಗಾಳಿ ಗದ್ಯದಲ್ಲಿ ಇದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. `ಹರ್ಬರ್ಟ್'ನ ವಿಕ್ಷಿಪ್ತತೆ, ಸಾವು ಮತ್ತು ಬದಲಾಗುತ್ತಿರುವ ಕೋಲ್ಕೊತ್ತಾದ ಬದುಕಿನ ತಲ್ಲಣಗಳು ಕಾದಂಬರಿಯಲ್ಲಿದೆ. ಇದರ ಇಂಗ್ಲಿಷ್ ಅನುವಾದ ಕೊಡ ಸೊಗಸಾಗಿದೆ. ಕಾದಂಬರಿಯ ಈ ಪರಿಯ ಖ್ಯಾತಿ ನಿಮ್ಮಳಗೆ ಉಂಟು ಮಾಡಿದ ಅನ್ನಿಸಿಕೆಗಳೇನು?
` ಹರ್ಬರ್ಟ್' ಸಿನಿಮಾ ಆಗಿದ್ದರಿಂದ ಹೆಚ್ಚು ಜನ ಓದುವಂತಾಯಿತೇನೊ. ನನಗೆ ಮೊದಲಿನಿಂದಲೂ ವ್ಯವಸ್ಥೆಯಲ್ಲಿ ನಲುಗುವ ಮನುಷ್ಯರು ವಿಚಿತ್ರ ಯಾತನೆ ಉಂಟುಮಾಡುತ್ತಾರೆ. ಅಥವಾ ಅದು ನನ್ನ ಸ್ಥಿತಿಯೂ ಆಗಿರಬಹುದು. ಕೋಲ್ಕೊತಾದ ಬೆಳವಣಿಗೆ, ಬದಲಾವಣೆ ಒಂಥರದಾ ರೇಜಿಗೆ ಹುಟ್ಟಿಸುತಿತ್ತು.ಇದರ ಕೇಂದ್ರದಲ್ಲಿ ಒಬ್ಬ ವ್ಯಕ್ತಿ ಮಧ್ಯಮವರ್ಗದ ವ್ಯಕ್ತಿಯನ್ನಿಟ್ಟು ರಚಿಸಿದೆ.ಸಾವು ಇದರಲ್ಲಿ ಮುಖ್ಯ ರೂಪಕ.ಕೋಲ್ಕೊತಾದ ಬೀದಿ ಬದಿಯ ಭಾಷೆ ಇಲ್ಲಿ ತಾನಾಗೇ ಮೂಡಿಬಂದಿದೆ.
ಹರ್ಬರ್ಟ್‌ನ ತಲ್ಲಣಗಳನ್ನು ಮಧ್ಯಮವರ್ಗದ ಜನ ತಮ್ಮ ತಲ್ಲಣಗಳಂತೆಯೇ ಸ್ವೀಕರಿಸಿದರೆನಿಸುತ್ತದೆ. ಇದು ಅವರ ಜೀವನದ ಗೊಂದಲಗಳಿಗೆ ಸಮೀಪವೆನಿಸಿತೇನೊ. ಇದನ್ನು ಬರೆಯುವಾಗ ನಾನು ಕೂಡ ವಿಚಿತ್ರ ಒದ್ದಾಟದಲ್ಲಿದ್ದೆ.
* ನಿಮ್ಮ ಗದ್ಯ ಬರಹಗಳ ಸ್ತ್ರೀ ಪಾತ್ರಗಳ ಕುರಿತು ವಿಮರ್ಶಕರು ಸ್ವಲ್ಪ ಕ್ರಿಟಿಕಲ್ ಆಗಿದ್ದಾರೆನಿಸುತ್ತದೆ. ಅವರಿಗೆ ಅಂಥ ವಿಶೇಷ ನೆಲೆಗಳಿಲ್ಲ ಅಂತ.
ಮೊದಲೇ ಇದನ್ನೆಲ್ಲ ಲೆಕ್ಕ ಹಾಕಿ ಬರೆಯಲಾಗುವುದಿಲ್ಲ. ಬರಹಗಾರನ ಬರಹದ ಚೌಕಟ್ಟಿನಲ್ಲಿ ಅವು ಮಿಡಿದು ಬರುವಂತಾದರೆ ಒಳ್ಳೆಯದು. ಸಾಮಾಜಿಕ ನೆಲೆಯಲ್ಲಿ ಅವರ ಅನೇಕ ಪ್ರಶ್ನೆಗಳನ್ನು ತೆಗೆದುಕೊಂಡು ನನ್ನ ಗೆಳೆಯರು ಹೋರಾಡುವಾಗ ನಾನು ಭಾಗಿಯಾಗಿರುವೆ. ಆದರೆ ಸಾಹಿತ್ಯದಲ್ಲಿ ಅವರು ರೂಪುಗೊಳ್ಳುವ ರೀತಿಯನ್ನು ನನ್ನ ಕಾದಂಬರಿಯ ಆವರಣಗಳೇ ನಿರ್ಧರಿಸುತ್ತವೆ. ನಾನೇನು ಮಾಡಲು ಬಯಸುವೆನೆಂದರೆ ನನ್ನ ಕಥನದಲ್ಲಿ ಪಾತ್ರಗಳು ತೀವ್ರವಾಗಿ ತೊಡಗಿಕೊಳ್ಳಬೇಕು.
ಅಲ್ಲದೆ ಅವರು ಇಂಪರ್ಸನಲ್ ಆಗಿ ಅಲ್ಲ. ಎಲ್ಲ ಸಾಮಾಜಿಕ, ರಾಜಕೀಯ ವೈರುಧ್ಯಗಳ ನಡುವಿನಿಂದಲೇ ಎದ್ದು ಬರಬೇಕು. ಜೊತೆಗೆ ಅಸ್ತಿತ್ವದಲ್ಲಿರುವ ಅಧಿಕಾರ ಕೇಂದ್ರಗಳಿಗೆ ಸವಾಲು ಒಡ್ಡುತ್ತಿರಬೇಕು. ಅದಕ್ಕಾಗಿ ನನ್ನ ಗದ್ಯದಲ್ಲಿ ಅವಕಾಶವಿರಬೇಕು. ಎಲ್ಲ ಒತ್ತಡಗಳು ಅಲ್ಲಿ ಕಾಣಬೇಕು. ಪಾತ್ರಗಳು ಕ್ರಿಯಾಶೀಲವಾಗಿರಬೇಕೆ ಹೊರತು ಚರಿತ್ರೆಯ ಪಳೆಯುಳಿಕೆಗಳಂತಲ್ಲ. ಸನ್ನಿವೇಶಗಳನ್ನು ರೂಪಿಸುವ ತಹತಹ ಅವರಲ್ಲಿರಬೇಕು. ಹೀಗನಿಸಿದಾಗ ಸ್ತ್ರೀ-ಪುರುಷವೆಂಬ ಭೇದವಿಲ್ಲದೆ ಪಾತ್ರಗಳು ನನ್ನ ಬರಹದೊಳಗೆ ಬರುತ್ತವೆ.
* ನಿಮ್ಮ ಕೃತಿಗಳು ಸಿನಿಮಾ ಮತ್ತು ರಂಗಭೂಮಿಯ ಮೇಲೂ ಪ್ರದರ್ಶನಗೊಂಡಿವೆ. ಈ ರೂಪಾಂತರ ನಿಮಗೆ ಖುಶಿ ಕೊಟ್ಟಿದೆಯೆ?
ಸುಮನ್ ಮುಖ್ಯೋಪಾಧ್ಯಾಯ ಮತ್ತೆ ಕೆಲವರು ಸಿನಿಮಾ, ನಾಟಕ ಮಾಡಿದ್ದಾರೆ. ಮೂರು ಕತೆಗಳು ಒಟ್ಟಿಗೆ ಕೂಡಿಸಿ `ಮಹಾನಗರ್ ಕೋಲ್ಕೊತಾ' ಎಂಬ ನಾಟಕ ಪ್ರದರ್ಶಿಸಲಾಯಿತು. ನೋಡಿದ್ದೇನೆ. ನನ್ನ ಬರಹದಲ್ಲಿ ನನಗೆ ವರ್ತಮಾನವೇ ಮುಖ್ಯ. ಈ ವರ್ತಮಾನ ರಂಗಭೂಮಿ, ಸಿನಿಮಾ ಮೂಲಕ ಜನರ ಹತ್ತಿರ ಹೋದರೆ ಒಳ್ಳೆಯದೆ. `ಕಂಗಾಲ್ ಮಲಶಾತ್' ನಾಟಕವಾಗಿ ಪ್ರದರ್ಶನಗೊಂಡಿದೆ. `ಫತರೂರ್ ಬಾಂಬ್‌ಚಾಕ್' ದೇಬೇಶ್ ಚಟ್ಟೋಪಾಧ್ಯಾಯ ನಿರ್ದೇಶಿಸಿದ್ದಾರೆ. ಅವುಗಳ ಪರಿಣಾಮವೇನೊ ಗೊತ್ತಿಲ್ಲ. ನನ್ನ ಕೆಲ ಮಿತ್ರರು ಬಹಳ ಶಾಕಿಂಗ್ ಆಗಿವೆ ಎಂದಿದ್ದಾರೆ. ಹೊಸ ಹುಡುಗರ ಉತ್ಸಾಹಕ್ಕೆ ಏನು ಹೇಳುವುದು. ಅವರ ಕೆಲಸ ಅವರು ಮಾಡುತ್ತಿರಲಿ.
* ನೀವು ಎಡಪಕ್ಷಗಳ ಚಿಂತನೆಗೆ ಸೇರಿದವರು. ಈ ಬಗೆಗೆ ಸಾಕಷ್ಟು ಕ್ರಿಟಿಕಲ್ ಕೂಡ ಆಗಿದ್ದೀರಿ.ಎಡಪಕ್ಷಗಳೊಂದಿಗೆ ಯಾಕೆ ಈ ತರಹದ ಪ್ರೀತಿ ಮತ್ತು ಜಗಳದ ಸಂಬಂಧ?
ನಾನು ಸಿಪಿಐ(ಎಂಎಲ್) ಪರವಾಗಿದ್ದೇನೆ. ಅದರ ಸಭೆಗಳಲ್ಲಿ ಭಾಗವಹಿಸುವೆ. ಆರೋಗ್ಯಕಾರಿ ಪ್ರಜಾಪ್ರಭುತ್ವವೇ ನಮ್ಮ ಕನಸು. ಎಡಪಕ್ಷಗಳು ಬಂಗಾಳದಲ್ಲಿ ಕೆಲವೊಮ್ಮೆ ಬಲಪಕ್ಷಗಳಂತೆಯೇ ವರ್ತಿಸಿವೆ. ಸಿಂಗುರ್, ನಂದಿಗ್ರಾಮದಲ್ಲಿ ಅವರು ನಡೆದುಕೊಂಡ ರೀತಿ ನೋಡಿರಿ. ಭೂಮಿಯ ಒಡೆತನದ ಹಕ್ಕು ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದದ್ದು.
ಬಡವರನ್ನು ಕೇಂದ್ರದಲ್ಲಿಟ್ಟುಕೊಂಡು ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ನಾನು ಯಾವಾಗಲೂ ಜನತೆಯ ಚಿಂತನೆಯ ಜೊತೆ ಇರಬಯಸುವೆ. ಈಗಿನ ಸರ್ಕಾರವೂ ವಿಶ್ವವಿದ್ಯಾಲಯ, ಪಠ್ಯ, ಪತ್ರಿಕೆಗಳ ಕುರಿತು ಸರಿಯಾದ ಧೋರಣೆ ಇಟ್ಟುಕೊಂಡಿಲ್ಲ. ಎಲ್ಲ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಿಮ್ಮತ್ತಿಲ್ಲದಂತೆ ಮಾಡಿವೆ.
ಈ ಹಿಂದೆ ಯಾರೋ ಹುಯಿಲೆಬ್ಬಿಸಿದರೆಂದು ತಸ್ಲೀಮಾ ನಸ್ರೀನರ ಆತ್ಮಕತೆಯ ಪುಸ್ತಕ `ನಿರ್ಬಾಸನ್' ಬಿಡುಗಡೆ ರದ್ದುಗೊಳಿಸಲಾಯಿತು. ಸರ್ಕಾರ ಕೂಡ ಮೌನ ವಹಿಸಿತು.ಕೋಲ್ಕೊತಾ `ಬುಕ್ ಫೇರ್'ನಲ್ಲಿ ಪುಸ್ತಕ ಬಿಡುಗಡೆ ನಡೆಯಬೇಕಾಗಿತ್ತು.
ಪ್ರಕಾಶಕರು ಕೂಡ ಹೆದರಿಬಿಟ್ಟರು. ಇದನ್ನು ಪ್ರತಿಭಟಿಸಲೆಂದೇ ನಾವೆಲ್ಲ ಗೆಳೆಯರು ಮುಖ್ಯವಾಗಿ ಸುಜಾತೊ ಭದ್ರಾ, ಇದೇ ಪುಸ್ತಕ ಪ್ರಕಾಶಕರ ಅಂಗಡಿಯೆದುರು ನಿಂತು ಸಿಕ್ಕ ಒಂದೆರಡು ಪ್ರತಿಗಳನ್ನು ಬಿಡುಗಡೆ ಮಾಡಿದೆವು. ಇದರಿಂದ ಆಕಾಶವೇನೂ ಬೀಳಲಿಲ್ಲ. ಇದಕ್ಕೆ ಸರ್ಕಾರವೇ ಅವಕಾಶ ಮಾಡಿಕೊಡಬಹುದಿತ್ತು.
* ಪ್ರಭುತ್ವ-ಸಾಹಿತ್ಯ-ಸಂಸ್ಕೃತಿ ಇವುಗಳ ಸಂಬಂಧವು ಬಂಗಾಳದಲ್ಲೂ ವಿಚಿತ್ರ ವೈರುಧ್ಯಗಳಲ್ಲಿರುವಂತಿದೆ. ಅಥವಾ ಎಲ್ಲ ಪ್ರಾದೇಶಿಕ ಸಮಾಜಗಳ ಸ್ಥಿತಿಯೂ ಹೀಗೇ ಇರಬಹುದು. ಬಂಗಾಳಿ ಸಮಾಜ ಈ ಸವಾಲುಗಳನ್ನು ಹೇಗೆ ಎದುರಿಸುತ್ತಿದೆ?
ನಾವೀಗ ಹೊಸ ಕ್ರಾಂತಿಗೆ ಸಜ್ಜಾಗಬೇಕಿದೆ. ಕ್ರಾಂತಿಯೆಂದರೆ ಹಿಂಸೆ ಅನ್ನುವ ಅರ್ಥದಲ್ಲಿ ಅಲ್ಲ. ಈ ಪೌರ‌್ವಾತ್ಯವಾದ ಮತ್ತು ಅಂತರರಾಷ್ಟ್ರೀಯ ಬಂಡವಾಳಶಾಹಿಗಳ ನೆರಳಿನಲ್ಲಿ ಬದುಕುವಂತಾಗಿದೆ. ಪಶ್ಚಿಮ ಬಂಗಾಳವೂ ಸೇರಿದಂತೆ ಭಾರತದಲ್ಲಿ ಪ್ರಜಾಪ್ರಭುತ್ವವು ಅಷ್ಟು ಆರೋಗ್ಯಕಾರಿಯಾಗಿ ಇಲ್ಲ. ಇದನ್ನು ಸಹಿಸಿಕೊಂಡು ಹೇಗೊ ಬದುಕುತ್ತಿದ್ದೇವೆ. ಲಕ್ಷಾಂತರ ಜನರ ಜೀವನ ಕೆಲವರಿಗಾಗಿ ಬಲಿಕೊಡಬೇಕಾಗಿದೆ. ಸರ್ಕಾರಗಳಿಗೆ ಜನರ ಅಸ್ತಿತ್ವದ ಪ್ರಶ್ನೆಗಿಂತ ಬಂಡವಾಳಶಾಹಿಗಳ ಅಸ್ತಿತ್ವದ ಪ್ರಶ್ನೆಯೇ ಮುಖ್ಯವಾಗಿದೆ.
ಪ್ರತಿದಿನ ನಮ್ಮನ್ನು ಇರಿಯುವ ಖಡ್ಗವನ್ನು ಮಸೆಯುತ್ತಲೇ ಇದ್ದಾರೆ. ಸಾಹಿತ್ಯ-ಸಂಸ್ಕೃತಿಯು ಇದರಿಂದ ಪಾರಾಗಿಲ್ಲ. ಪರ್ಯಾಯ ದಾರಿಗಳನ್ನು ಗಂಭೀರವಾಗಿ ಹುಡುಕಬೇಕಾಗಿದೆ. ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಎಲ್ಲ ಬಡವರು, ಕಾರ್ಮಿಕರು- ಇವರ ಭಾಷೆ, ನುಡಿಗಟ್ಟು, ಅನುಭವ, ಸಿಟ್ಟು ಸಾಹಿತ್ಯದಲ್ಲಿ ಬರಬೇಕು. ಇದರಿಂದ ಸಂಸ್ಕೃತಿಗೆ ಹೊಸ ಅರ್ಥ ಬರುತ್ತದೆ. ನೋಡಿ ಭಾರತೀಯ ಲೇಖಕರಾದ ಮುಕ್ತಿಭೋದ್ ಮತ್ತು ಶಂಕರ ಗುಹಾ ನಿಯೋಗಿ ಈ ಕೆಲಸ ಮಾಡಿದರು. ಲೇಖಕರು ತಮ್ಮ ಒಳನೋಟಗಳಿಂದ ಜಾಗತೀಕರಣದ ಒತ್ತಡಗಳಿಗೆ ಎದರು ಪಟ್ಟು ಹಾಕಬೇಕಿದೆ. ಅಮೇರಿಕಾವನ್ನು ಕ್ಯುಬಾ, ವೆನಿಜುವೆಲಾ, ವಿಯೆಟ್ನಾಂ ಎದುರಿಸಿದಂತೆ. ಕೊನೆಗೆ ಸಾವನ್ನಾದರೂ ಘನತೆಯಿಂದ ಸಾಯೋಣ.
* ಹಾಗಾದರೆ ಬಂಗಾಳಿ ಸಾಹಿತ್ಯದ ಇಂದಿನ ಬಿಕ್ಕಟ್ಟುಗಳೇನು? ಯಾರ‌್ಯಾರು ಹೊಸ ಮಾತಿನಲ್ಲಿ ಬರೆಯುತಿದ್ದಾರೆ. ನಿಮ್ಮ ಓದಿನ ಅನುಭವದಲ್ಲಿ ಹೇಳಿದರೂ ಆಯಿತು.
ಬಂಗಾಳಿ ಲೇಖಕರಿಗೆ ಚಳಿಗಾಲವೆಂದರೆ ಇಷ್ಟ. ಸ್ವಲ್ಪ ಚೆನ್ನಾಗಿ ಕುಡಿಯಬಹುದೆಂದು. ಹಾಗೂ ಬರೆಯಬಹುದೆಂದು. ಆದರೆ ಬರವಣಿಗೆ ಮಾತ್ರ ಅದೇ ಹಳೆಯದನ್ನೆ ಪುನರಾವರ್ತಿಸುತ್ತಿದೆ. ಏನು ಮಾಡುವುದು? ಬಂಗಾಳಿ ಭಾಷೆಯ ಹಣೆಬರಹವೆಂದು ಸುಮ್ಮನಾಗಬೇಕಷ್ಟೆ. ಲೇಖಕರು ಯಾವುದೊ ಒಂದು ಮಾದರಿ ಯಶಸ್ಸು ಪಡೆಯಿತೊ ಅದನ್ನೇ ಹಿಡಿದು ಬೆನ್ನುಬೀಳುತ್ತಾರೆ. ಗೆದ್ದೆತ್ತಿನ ಬಾಲ ಹಿಡಿದಂತೆ. ಬಫೂನ್‌ಗಿರಿ ಬಿಟ್ಟು ಅನೇಕರು ಹೊರಬರಬೇಕಾಗಿದೆ. ಅವಕಾಶಕ್ಕಾಗಿ ಹಲ್ಲುಗಿಂಜದೆ ಸ್ವಂತ ನಿಲ್ಲಬೇಕಾಗಿದೆ.ಈ ಹೊತ್ತು ನಾನು ಅಷ್ಟಾಗಿ ಕೇಳದ ಅರವಿಂದ ಚಟುರ್ವೇದಿಯ ಕವನಗಳನ್ನು ಓದಿದೆ. ಇಷ್ಟವಾದವು. `ನಾನು ಕುಡಿದ ಮೇಲೆ ಬಂಗಾಳಿ ಮಾತನಾಡುವೆ' ಅಂತ ಅದರ ಹೆಸರು. ಅವನದು ಗಟ್ಟಿ ಎಲುಬಿನ ಕಾವ್ಯ. ಅದು ಸೂರ್ಯನೆದುರು ಕರಗುವ ಕುಲ್ಫಿಯಂತಲ್ಲ.
ಇತ್ತೀಚೆಗೆ ಬಂಗಾಳದಲ್ಲೂ ಈ ಪಾಕೆಟ್ ಸೈಜ್ ಇಂಗ್ಲಿಷ್ ಕೃತಿಗಳನ್ನು ನೋಡಿರುವೆ. ಇವು ನಮ್ಮ ಸಾಹಿತ್ಯಲೋಕದ ವೈರಸ್‌ಗಳು.ಇವುಗಳ ಉದ್ದೇಶ ಬುಕರ್ ಅಥವಾ ಇನ್ಯಾವುದೊ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆಯುವುದು. ಅಥವಾ ಪಟ್ಟಿಯಲ್ಲಾದರೂ ಸೇರುವುದು. ನಮ್ಮ ಮಾಧ್ಯಮಗಳು ಕೂಡ ಇವುಗಳ ಬಗ್ಗೆ ಸುಮ್ಮನೆ ಹುಯಿಲೆಬ್ಬಿಸುತ್ತವೆ. ನಮ್ಮ ಜಾಗತೀಕರಣವೂ ಇವುಗಳಿಗೆ ಪೂರಕವಾಗೇ ಇದೆ.
ನೀವು ಸ್ವಲ್ಪ ಆಯಕಟ್ಟಿನ ಸ್ಥಳದಲ್ಲಿರುವವರ ಜೊತೆಯಿದ್ದರೆ ಅವರು ನಿಮ್ಮನ್ನು `ಟಾಮ್, ಡಿಕ್, ಹ್ಯಾರಿ'ಯೇ ಮಾಡಿಬಿಡುತ್ತಾರೆ. ಇದು ಯಾರಿಗೆ ಗೊತ್ತಿಲ್ಲ. ಇಂಗ್ಲಿಷಿನಲ್ಲಿ ಬರೆಯುವ ಬಂಗಾಳಿ ಬಾಬುಗಳ ಕುರಿತು ಏನು ಹೇಳುವುದು. ಪುಣ್ಯಕ್ಕೆ ಮೀನು ತಿಂದು ಬಂಗಾಳದ ಎಲ್ಲ ಹರತಾಳಗಳನ್ನು ನೋಡುತ್ತಾ ಅಬ್ಬೇಪಾರಿ ತಿರುಗುವ ಲೇಖಕರು ಬಂಗಾಳಿಯಲ್ಲಿ ಬರೆಯುತ್ತಿದ್ದಾರೆ. ಬಂಗಾಳಿಯ ಈ ಇಂಗ್ಲಿಷ್ ಬರಹಗಾರರು ಮತ್ತು ದೇಸಿ ಭಾಷೆಯ ಬರಹಗಾರರು ತಮ್ಮ ತಮ್ಮ ಮಿತಿಗಳನ್ನು ಮೀರುವುದು ಇದ್ದೇ ಇದೆ. ಬದುಕಿನ ವೈರುಧ್ಯಗಳನ್ನು ಮತ್ತು ಸಾಹಿತ್ಯದ ಕಲೆಗಾರಿಕೆ, ಕುಶಲತೆಯನ್ನು ಅರಿಯದಿದ್ದರೆ ಬರಹ ರಕ್ತಹೀನವಾಗಿಬಿಡುತ್ತದೆ.
ನಾನು ಬರೆದದ್ದರಲ್ಲಿ ಎಷ್ಟು ಉಳಿಯುತ್ತದೊ ಏನೊ? ನನಗೆ ಗೊತ್ತಿಲ್ಲ. ನನ್ನ ಬರವಣಿಗೆಯ ಯಾವ್ಯಾವ ಭಾಗ ದುರ್ಬಲವಾಗಿದೆಯೊ ಅದು ನಾಶವಾಗಲಿ. ಹೊಸಬರು ಅದರ ದೌರ್ಬಲ್ಯ ಎತ್ತಿತೋರಿಸಿ ಅದರ ನಾಶಕ್ಕೆ ಕಾರಣವಾಗಲಿ. ಇಂಥ ಹೊಸಬರ ದಾರಿ ಕಾಯುತಿದ್ದೇನೆ.
* ನೀವು `ಭಾಷಾ ಬಂಧನ್' ಸಾಹಿತ್ಯ ಪತ್ರಿಕೆಯ ಸಂಪಾದಕರು. ಇಲ್ಲಿ ಸಾಹಿತ್ಯ ಪತ್ರಿಕೆಗಳು ಸಾಹಿತ್ಯವನ್ನು ರೂಪಿಸುವಲ್ಲಿ ಹೇಗೆಲ್ಲಾ ಒತ್ತಾಸೆಯಾಗಿ ನಿಂತಿವೆ?
ಬಂಗಾಳದಲ್ಲಿ ಸಾಹಿತ್ಯ ಪತ್ರಿಕೆಗಳ ಪಾತ್ರ ದೊಡ್ಡದು. 1960ರ ದಶಕದಲ್ಲಿ ಸಾಹಿತ್ಯ ಪತ್ರಿಕೆಗಳಿಗೆ ಬರೆಯದಿದ್ದರೆ ಆತ ಲೇಖಕನೇ ಅಲ್ಲ ಎನ್ನುವಂತಿತ್ತು. ಅನೇಕರು ಈ ಪತ್ರಿಕೆಗಳಿಂದಾಗಿ ಪ್ರಸಿದ್ಧಿಯ ಪ್ರಖರತೆಗೆ ಬಂದರು. ಸಮರೇಶ್ ಬಸು ಎಲ್ಲರಿಗೂ ಪರಿಚಿತವಾದದ್ದು ಹೀಗೆಯೇ. ಈಗ ಸಾಹಿತ್ಯ ಪತ್ರಿಕೆಯ ಪ್ರಭಾವ ಆ ಮಟ್ಟದಲ್ಲಿ ಇಲ್ಲ. ಓದುಗರ ಸಂಖ್ಯೆ ಕಡಿಮೆಯಾಗಿದೆ. ಸಂಪಾದಕರ ಗುಣಮಟ್ಟವೂ ಮೊದಲಿನಂತಿಲ್ಲ.
ಶ್ರದ್ಧೆಯಿಂದ ಬರೆಯುವವರ ಕೊರತೆಯೂ ಇದೆ. ಸಾಹಿತ್ಯ ಪತ್ರಿಕೆಗಳು ಅಷ್ಟು ಡೆಮಾಕ್ರೆಟಿಕ್ ಆಗಿ ಉಳಿದಿಲ್ಲ. ಕೆಲ ಪತ್ರಿಕೆಗಳಂತೂ ನಿಂತೇ ಬಿಟ್ಟಿವೆ. ಇನ್ನು ಸಾಹಿತ್ಯ ಪತ್ರಿಕೆಗಳ ಪ್ರಭಾವಶಾಲಿ ಪಾತ್ರ ಬಂಗಾಳದಲ್ಲಿ ಮುಗಿಯಿತೇನೊ. ಈಗಲೂ ನನ್ನಲ್ಲಿರುವ ಹಳೆಯ ಸಾಹಿತ್ಯ ಪತ್ರಿಕೆಗಳು ನನ್ನೊಳಗೆ ಪುಳಕ ಉಂಟುಮಾಡುತ್ತವೆ. ಸಾಹಿತ್ಯ ಪತ್ರಿಕೆಗಳಿಗೆ ಬರೆಯುವುದು ನನಗೆ ಯಾವಾಗಲು ಪ್ರೀತಿಯ ಕೆಲಸ. ನನ್ನದೇ `ಭಾಷಾ ಬಂಧನ್' ಪತ್ರಿಕೆಯ ಕಾರ್ಯದಲ್ಲಿ ತೊಡಗುವುದು ಒಂದು ಅವಿಸ್ಮರಣೀಯ ಅನುಭವ.
ಇನ್ನೂ ಮುಖ್ಯವಿಚಾರವೆಂದರೆ ಕವಿತೆಗಳಿಗೆ ದೊಡ್ಡ ಸ್ಥಳ ಸಾಹಿತ್ಯ ಪತ್ರಿಕೆಗಳಲ್ಲಿದೆ.
* ಇದು ಕೊನೆಯ ಪ್ರಶ್ನೆ. ನೀವು ಬಹಳ ವರ್ಷಗಳಿಂದ ಫ್ರೀಲ್ಯಾನ್ಸ್ ಬರಹಗಾರ ಅಂತ ಕೇಳಿರುವೆ. ಹೀಗೆ ಪೂರ್ಣಪ್ರಮಾಣದ ಲೇಖಕ ವೃತ್ತಿಯಲ್ಲಿ ತೊಡಗಬೇಕು ಅಂತ ಅನ್ನಿಸಲು ಕಾರಣ?
ರಷ್ಯಾ, ಜಪಾನ್, ಚೈನಾ ಸುದ್ದಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವೆ. ರಷ್ಯಾದಲ್ಲಿ ಕ್ಷಿಪ್ರಕ್ರಾಂತಿಯ ನಂತರ ನೌಕರಿ ಹೋಯಿತು. ನನಗಿದರಿಂದ ಒಳ್ಳೆಯದೇ ಆಯಿತು. ಬರೆಯಲು ಸಾಕಷ್ಟು ಸಮಯ ದೊರಕಿತು. ನನ್ನ ಹೆಂಡತಿ ಟೀಚರ್ ಆಗಿದ್ದುದರಿಂದ ಒಂದು ರೀತಿಯ ಹುಂಬತನವೂ ಇತ್ತು. ಈಗ ಅವಳೂ ನಿವೃತ್ತಳಾಗಿದ್ದಾಳೆ. ಇದರಿಂದ ಮತ್ತೂ ಒಳ್ಳೆಯದಾಯಿತು. ನಾವಿಬ್ಬರೂ ಈಗ ಫುಲ್‌ಟೈಮ್ ಲವರ್ಸ್. ಮಗ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಾನೆ. ಈ ರಾಜಕಾರಣಿಗಳ ಮಾತುಗಳನ್ನು ನೋಟ್ ಮಾಡಿಕೊಂಡು ವರದಿ ಮಾಡುವುದು ಇಷ್ಟವಿಲ್ಲವೆಂದು ನೇಪಾಳಕ್ಕೆ ಹೋಗಿದ್ದಾನೆ.
ಅಲ್ಲಿನ ಮಾವೋವಾದಿಗಳನ್ನು ಸಂದರ್ಶಿಸಲು. ಅವನ ದಾರಿ ಅವನಿಗೆ. ಅದರಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ. ಅವನು ನೇಪಾಳದಿಂದ ಏನೆಲ್ಲ ಕತೆಗಳನ್ನು ಹೊತ್ತು ತರುತ್ತಾನೆಂದು ನಾನು ಮತ್ತು ನನ್ನವಳು ಕಾತುರದಿಂದ ಕಾಯುತ್ತಿದ್ದೇವೆ.
(ಚಿತ್ರ: ಕೃಪೆ: ಕನ್ನಡ ಸಂಸ್ಕೃತಿ ಇಲಾಖೆ)
ಗುಬ್ಬಿ
ಕುಡಿತದಿಂದಾಗಿಯೂ ಅಲ್ಲ
ಪಾರ್ಶ್ವವಾಯುದಿಂದಲೂ ನರಳುತ್ತಿಲ್ಲ
ನನ್ನ ಪಾದಗಳು ಜೋಲಿ ಹೊಡೆಯುತ್ತಿವೆ
ನನ್ನ ಹೃದಯ, ನನ್ನ ಮೆದಳಿನ ಮುಖಾಂತರ
ಕಂಪನ ಪುಟಿದು ಏಳುತ್ತಿದೆ.
ಮೊಬೈಲ್ ಗೋಪುರಗಳು ಚೀತ್ಕರಿಸುತ್ತಿವೆ, ಅರಚುತ್ತಿವೆ
ಗುಬ್ಬಿಗಳು ಸತ್ತು ಬಿದ್ದಿವೆ
ಅವುಗಳ ತಲೆಯ ಮೇಲಿನ ಆಕಾಶ ಕಳೆದು ಹೋಗಿದೆ
ಅವುಗಳ ಆಕಾಶಗಳನ್ನು ಡಕಾಯಿತರು ಕದ್ದಿದ್ದಾರೆ
ಅವನು ಬಿದ್ದಿದ್ದಾನೆ ದಿಕ್ಕಿಲ್ಲದೆ ಅಲ್ಲಿ
ಸತ್ತು ಬಿದ್ದ ಈ ಗುಬ್ಬಿಯು
ಅದರ ಗರಿಯ ಮೇಲಿನ ಈ ಗೆರೆಗಳಾವವು
ಕಣ್ಣು ಹಾಗೂ ತುಟಿಯ ಮೇಲಿನ ಹೊಡೆತ, ಅವನು
ನೀಲಿ ಬಣ್ಣಕ್ಕೆ ತಿರುಗಿದ್ದಾನೆಯೆ?
ಅವನ ಸುತ್ತ ಬಿದ್ದಿದೆ ದೂಳು ಮತ್ತು ಒಣ ಹುಲ್ಲು, ಅಓ. 47
ಹೀಗೆ ಮುಗಿದು ಹೋಗಿತ್ತು ಈ ಕಾರ್ಯಾಚರಣೆ
ಸದ್ದು ಮಾಡುವುದನ್ನ ದಯವಿಟ್ಟು ನಿಲ್ಲಿಸುವಿರಾ, ಅನನ್ಯ ರಣಹದ್ದುಗಳೆ
ನಿಮ್ಮ ಒರಟು ಧರ್ಮೋಪದೇಶ ಮಾಡುವುದನ್ನ ನಿಲ್ಲಿಸುವಿರಾ
ಕೆಲಹೊತ್ತು, ಯಾವ ಸಾಧನಗಳ ಸಹಾಯ ಪಡೆಯದೆ
ಗುಬ್ಬಿಗಳ ಹಾಡುಗಳನ್ನು ನಾವು ಆಲಿಸೋಣ
- ನಬಾರುಣ ಭಟ್ಟಾಚಾರ್ಯ
ಕನ್ನಡಕ್ಕೆ: ಡಾ. ಬಸವರಾಜ ಡೋಣೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.