ಹನ್ನೆರಡನೆಯ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಒಂದು ಸಂಕ್ರಮಣ ಕಾಲ. ವಚನ ಚಳವಳಿ ಕನ್ನಡ ಸಂಸ್ಕೃತಿಯಲ್ಲಿ ಅನೇಕ ಬಗೆಯ ಪಲ್ಲಟಗಳಿಗೆ ಕಾರಣವಾಯಿತು. ಆ ನಂತರ ಬಂದ ಕವಿಗಳು ಹೊಸ ಬಗೆಯ ಸಾಧ್ಯತೆಗಳನ್ನು ಕಂಡುಕೊಂಡಂತೆ ಅನೇಕ ಸವಾಲುಗಳನ್ನೂ ಎದುರಿಸಿದರು.
ವಚನ ಚಳವಳಿಯ ನಂತರ ಬಂದ ಮೊದಲ ಮಹತ್ವದ ಕವಿ–ಹರಿಹರ ತನ್ನ ಅಭಿವ್ಯಕ್ತಿಯ ಮಾಧ್ಯಮವಾಗಿ ಸಂಸ್ಕೃತ ಮಾದರಿಯ ಚಂಪುವನ್ನು ನಿರಾಕರಿಸಿ ರಗಳೆಯನ್ನು ಆರಿಸಿಕೊಂಡ. ಆದರೆ ಸ್ಥಾಪಿತ ಪರಂಪರೆಯ ವಿರುದ್ಧ ಹೋರಾಡುವ ಸೃಜನಶೀಲ ಪ್ರತಿಭೆ ಅಲ್ಲಿ ತಾನು ಸಲ್ಲುವ ಹಾಗೆ ಮಾಡಿ, ನಂತರ ಹೊಸ ಹಾದಿ ಹಿಡಿಯಬೇಕಾಗುತ್ತದೆ.
ಇಲ್ಲದಿದ್ದರೆ ಪರಂಪರೆ ಆ ಪ್ರತಿಭೆಯನ್ನು ಸಂಪೂರ್ಣ ನಿರ್ಲಕ್ಷಿಸಿಬಿಡುತ್ತದೆ. ಸೃಜನಶೀಲ ಪ್ರತಿಭೆ ಎದುರಿಸುವ ಸಂದಿಗ್ಧತೆಯಿದು. ಹರಿಹರನಿಗೆ ಇದರ ಅರಿವಿತ್ತು. ಹೀಗಾಗಿ ಚಂಪುವಿನಲ್ಲಿ ‘ಗಿರಿಜಾ ಕಲ್ಯಾಣ’ವನ್ನು ಬರೆಯುವುದೂ ಆತನಿಗೆ ಅನಿವಾರ್ಯವಾಯಿತು. ಕುವೆಂಪು ಅವರ ಸಂಸ್ಕೃತಭೂಯಿಷ್ಠ ಶೈಲಿಯ ಹಿಂದೆಯೂ ಈ ಸಂದಿಗ್ಧತೆಯ ಸಮಸ್ಯೆಯಿದೆ.
ಹರಿಹರನ ಶಿಷ್ಯ ಹಾಗೂ ಸೋದರಳಿಯನಾದ ರಾಘವಾಂಕ ಪರಂಪರೆಯನ್ನು ಮಾತ್ರವಲ್ಲ, ತನ್ನ ಗುರು ಹರಿಹರನನ್ನೂ ಮುಖಾಮುಖಿಯಾಗುತ್ತಾನೆ. ಹಾಗೆ ನೋಡಿದರೆ ಹರಿಹರ ಹಾಕಿಕೊಟ್ಟ ಹಾದಿಯಲ್ಲಿ ರಾಘವಾಂಕ ಮುಂದುವರಿಯಬಹುದಿತ್ತು. ಪಂಪನ ಮಾದರಿಯನ್ನು ನಂತರದ ಕವಿಗಳು ಅನುಸರಿಸಿದಂತೆ. ಒಬ್ಬ ಸಮರ್ಥನಾದ ಕವಿ ಒಂದು ಹಾದಿ ಹಾಕಿಕೊಟ್ಟರೆ ನಂತರ ಬಂದವರು ಅದನ್ನು ಮೀರಿ, ಭಿನ್ನವಾಗಿ ಬರೆಯುವುದು ಸುಲಭವಲ್ಲ.
ಪಂಪನ ನಂತರ ಬಂದ ರನ್ನ ಈ ಸವಾಲನ್ನೆದುರಿಸಿದ; ತಂತ್ರದಲ್ಲಿ ಭಿನ್ನವಾಗುವ ಪ್ರಯತ್ನ ಮಾಡಿದ. ಆದರೆ ಒಟ್ಟಾರೆ ಪಂಪನ ಮಾದರಿಯನ್ನೇ ಅನುಸರಿಸಿದ. ರಾಘವಾಂಕ ಈ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿ ವಸ್ತು–ರೀತಿಗಳೆರಡರಲ್ಲೂ ತನ್ನ ಮಾರ್ಗದರ್ಶಕ ಹರಿಹರನಿಗಿಂತ ಬೇರೆ ಹಾದಿ ಹಿಡಿಯುತ್ತಾನೆ.
ಈ ಬಗ್ಗೆ ಒಂದು ದಂತಕತೆಯಿದೆ. ರಾಘವಾಂಕ ‘ಹರಿಶ್ಚಂದ್ರಕಾವ್ಯ’ವನ್ನು ಬರೆದು ತನ್ನ ಗುರು ಹರಿಹರನಿಗೆ ತೋರಿಸುತ್ತಾನೆ. ಆಗ ಆತ ‘ಮೃತಕಥಾ ಕಥನವಲ್ಲದೆ ರಾಜ ಕಥೆಗೊಡಂಬಡದೆಮ್ಮ ಮನ, ಇಲ್ಲಿಗೇಕೈ ತಂದೆ? ಕುಜನರೆಡೆಗೊಯ್ದು ಕೇಳಿಸಿದೊಡೆ ಅವರು ನಿನ್ನಯ ಮನಕೆ ಮುದವನ್ನಿತ್ತಪರು’ ಎನ್ನುತ್ತಾನೆ.
ಅದಕ್ಕೆ ರಾಘವಾಂಕ ಮನನೊಂದು ತನ್ನ ಕೃತಿ ‘ರಾಜ್ಯವನಾಳಿ ಅನೃತದಿಂ ನರಕಕ್ಕೆ ಸಂದವರ ಕಥೆಯೇ? ಸತ್ಯಕ್ಕಾಗಿ ಸತಿಯ ಸುತನಂ ರಾಜ್ಯವಂ ತನ್ನುವಂ ಕುಂದದೆ ಇತ್ತು ಈಶನೊಲಿಸಿದವನ ಕಥೆಯನ್ ಏನೆಂದು ಜರಿದಿರಿ, ಗುರುವಲಾ, ವಾದಿಸಲ್‌ಬಾರದು. ಇಂದಾಡಿ ತೋರಲೇ? ಚೋಳಾದಿಗಳ ಕಥೆಯನೇಕೆ ಪೇಳಿದಿರಿ?’ ಎಂದು ಎದುರು ವಾದಿಸುತ್ತಾನೆ. ಮಾತಿಗೆ ಮಾತು ಬೆಳೆಯುತ್ತದೆ. ‘ನರಪತಿ ಹರಿಶ್ಚಂದ್ರ ಶಂಭುವನೊಲಿಸಿ ರಾಜ್ಯದ ಸಿರಿಯಂ ಪಡೆದನ್, ಅವಂ ಭಕ್ತರೊಳಗಲ್ಲ’ ಎಂದು ಹೇಳಿದ ಹರಿಹರ ರಾಘವಾಂಕನ ಕೆನ್ನೆಗೆ ಹೊಡೆಯುತ್ತಾನೆ. ಐದು ಹಲ್ಲುಗಳು ಉದುರಿಬೀಳುತ್ತವೆ. ಮುಂದೆ ರಾಘವಾಂಕ ‘ಶೈವಕೃತಿ ಪಂಚಕ’ಗಳನ್ನು ಬರೆದು ಹಲ್ಲುಗಳನ್ನು ಮತ್ತೆ ಪಡೆಯುತ್ತಾನೆ.
ಚಿಕ್ಕನಂಜೇಶನ ‘ರಾಘವಾಂಕ ಚರಿತೆ’ಯಲ್ಲಿ ಈ ಪ್ರಸಂಗ ಬರುತ್ತದೆ. ಇದನ್ನು ಯಥಾವತ್ತಾಗಿ ಸ್ವೀಕರಿಸಬೇಕಿಲ್ಲ. ಆದರೆ ರಾಘವಾಂಕ ಎದುರಿಸಿದ ಸಂಘರ್ಷವನ್ನು ಇದು ಸೂಚಿಸುತ್ತದೆ. ಅದು ಯಾವುದೇ ಬಗೆಯ ‘ವ್ಯವಸ್ಥೆ’ ಇರಲಿ, ಅದನ್ನು ಎದುರಿಸಿದಾಗ ಒದಗಿಬರುವ ಸಂಕಷ್ಟವನ್ನು ಇದು ಸಂಕೇತಿಸುತ್ತದೆ. ಈ ಸಂಘರ್ಷವೇ ರಾಘವಾಂಕನ ಪ್ರತಿಭೆಯ ಸ್ವರೂಪವನ್ನೂ, ಆತನ ಕಾವ್ಯರಚನಾ ವಿನ್ಯಾಸವನ್ನೂ ರೂಪಿಸಿದಂತೆ ತೋರುತ್ತದೆ.
ಮಾರ್ಗ ಪರಂಪರೆಯ ಚಂಪುವಿಗೆ ಬದಲಾಗಿ ‘ರಗಳೆ’ಯನ್ನು ಹರಿಹರ ಸ್ವೀಕರಿಸಿದರೆ, ರಾಘವಾಂಕ ಚಂಪು, ರಗಳೆ ಎರಡನ್ನೂ ನಿರಾಕರಿಸಿ ಷಟ್ಪದಿಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಳ್ಳುತ್ತಾನೆ. ನಿರಂತರ ಗತಿಯ ರಗಳೆಯ ಶೈಲಿ ತನ್ನ ಸ್ವಭಾವ ರೀತಿಗೆ ಒಗ್ಗುವುದಿಲ್ಲವೆಂದು ರಾಘವಾಂಕ ಭಾವಿಸಿರಬೇಕು. ಜೊತೆಗೆ ರಗಳೆಯ ಏಕತಾನತೆಯೂ ಅವನ ಗಮನದಲ್ಲಿದ್ದಿರಬೇಕು. ಏನೇ ಆಗಲಿ, ತನ್ನ ಹಾದಿಯನ್ನು ಆತ ಕಂಡುಕೊಂಡದ್ದು ಆತನ ಸ್ವೋಪಜ್ಞ ಪ್ರತಿಭೆಗೆ ಸಾಕ್ಷಿಯಾಗಿದೆ. ಮುಂದೆ ಹರಿಹರನ ಸಂಪ್ರದಾಯ ಅಲ್ಲಿಗೇ ನಿಂತು, ರಾಘವಾಂಕನ ಷಟ್ಪದೀ ಪರಂಪರೆ ಮುಂದುವರೆದದ್ದು ಈಗ ಇತಿಹಾಸ.
ರಾಘವಾಂಕ ‘ವೀರೇಶಚರಿತೆ’, ‘ಸೋಮನಾಥ ಚರಿತ್ರೆ’, ‘ಸಿದ್ಧರಾಮ ಪುರಾಣ’, ‘ಹರಿಶ್ಚಂದ್ರಕಾವ್ಯ’, ‘ಶರಭಚಾರಿತ್ರ್ಯ’ ಹಾಗೂ ‘ಹರಿಹರಮಹತ್ವ’ ಎಂದು ಆರು ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಕಡೆಯ ಎರಡು ಕೃತಿಗಳು ಸಿಕ್ಕಿಲ್ಲ.
ಈ ಮೊದಲು ಹೇಳಿದ ದಂತಕತೆ ರಾಘವಾಂಕನ ಕೃತಿಗಳನ್ನು ಗಮನಿಸಿದಾಗ ತಿರುವು ಮುರುವಾದಂತೆ ತೋರುತ್ತದೆ. ಆರಂಭದಲ್ಲಿ ಆತ ಹರಿಹರನ ಹಾದಿಯನ್ನು ತುಳಿದು ‘ವೀರೇಶಚರಿತೆ’, ‘ಸೋಮನಾಥಚರಿತೆ’, ‘ಸಿದ್ದರಾಮಪುರಾಣ’ ಬರೆದಿರಬೇಕು. ನಂತರ ‘ಹರಿಶ್ಚಂದ್ರಕಾವ್ಯ’ ರಚಿಸಿರಬೇಕು. ಹೀಗೆ ಹೇಳಲು ಕಾರಣವಿದೆ.
‘ವೀರೇಶಚರಿತೆ’ ಪುರಾಣ ಪ್ರಸಿದ್ಧವಾದ ದಕ್ಷಯಜ್ಞದ ಕತೆಯನ್ನು ಆರಿಸಿಕೊಂಡು ಶಿವನ ವೀರಭದ್ರನ ಅವತಾರವನ್ನು ವರ್ಣಿಸುವ ಕಾವ್ಯ. ದಕ್ಷನ ಯಜ್ಞವನ್ನು ನಾಶಮಾಡಿದ ಕತೆಯನ್ನು ಹೇಳುವುದರ ಮೂಲಕ ರಾಘವಾಂಕ ಇಲ್ಲಿ ಶಿವಪಾರಮ್ಯವನ್ನು ಚಿತ್ರಿಸಿದ್ದಾನೆ. 127 ಪದ್ಯಗಳಿರುವ ಎರಡು ಸಂಧಿಗಳ ಪುಟ್ಟಕಾವ್ಯವಿದು. ಇದೊಂದು ರೀತಿ ಆರಂಭಕಾಲದ ಪ್ರಯೋಗದಂತಿದೆ. ಹರಿಹರನ ‘ವೀರಭದ್ರದೇವರ ರಗಳೆ’ಯ ಪ್ರಭಾವವನ್ನೂ ವಿದ್ವಾಂಸರು ಗುರ್ತಿಸುತ್ತಾರೆ. ಇಲ್ಲಿಯ ಷಟ್ಪದಿಯನ್ನು ‘ಉದ್ದಂಡ ಷಟ್ಪದಿ’ ಎಂದೂ ಒಂದು ಪ್ರತಿಯಲ್ಲಿ ಕರೆದಿರುವುದುಂಟು.
ಜಿನಾಲಯಗಳಿಂದ ತುಂಬಿರುವ ಪುಲಿಗೆರೆಯಲ್ಲಿ ಶಿವಭಕ್ತಿಗೆ ಅವಕಾಶ ಇಲ್ಲದ್ದನ್ನು ತಿಳಿದು, ಶಿವ ಕೈಲಾಸದಿಂದ ಆದಿಗಣನಾಥನನ್ನು ಭೂಲೋಕಕ್ಕೆ ಕಳಿಸುತ್ತಾನೆ. ಆತ ಪುಲಿಗೆರೆಗೆ ವ್ಯಾಪಾರಕ್ಕೆಂದು ಬಂದು, ಜೈನಯುವತಿಯನ್ನು ಸೇರಿ, ಅವಳ ತಂದೆ ಮೂದಲಿಸಲು ಸಿಟ್ಟುಗೊಂಡು ಆ ಊರಿನ ಬಸದಿಯಲ್ಲಿ ಸೋಮನಾಥನನ್ನು ಸ್ಥಾಪಿಸಿ, ಜೈನರನ್ನು ನಿಗ್ರಹಿಸಿದ್ದು ‘ಸೋಮನಾಥಚರಿತೆ’ಯ ವಸ್ತು. ಇದನ್ನು ‘ಆದಿಸೆಟ್ಟಿ ಪುರಾಣ’ ಎಂದೂ ಕರೆದಿರುವುದುಂಟು.
ಜೈನಬಸದಿ ಶಿವಾಲಯವಾಗಿ ಮಾರ್ಪಡುವುದು ಇಲ್ಲಿನ ಮುಖ್ಯ ಘಟನೆ. ರಾಘವಾಂಕ ವಾದಕ್ಕೆಂದು ಹೋಗಿದ್ದ ಓರಂಗಲ್ಲಿನಲ್ಲಿಯೂ ನೇಮಿನಾಥನ ವಿಗ್ರಹ ಕಿತ್ತು ಆ ಸ್ಥಾನದಲ್ಲಿ ಅನ್ನಮೇಶ್ವರನ ವಿಗ್ರಹ ಸ್ಥಾಪಿಸಿದ ಕತೆಯೊಂದು ಪ್ರಚಲಿತದಲ್ಲಿದೆ. ಜೈನ–ಶೈವ ಮತಗಳ ಘರ್ಷಣೆಯ ಪಲ್ಲಟದ ಕಾಲವನ್ನು ‘ಸೋಮನಾಥ ಚರಿತೆ’ ಚಿತ್ರಿಸುತ್ತದೆ. ಹರಿಹರನ ‘ಆದಯ್ಯನ ರಗಳೆ’ಯಲ್ಲಿಯೂ ಇದೇ ವಸ್ತು ಕೊಂಚ ಭಿನ್ನವಾಗಿ ನಿರೂಪಿತವಾಗಿದೆ.
ಮತಾವೇಶ ಮರೆಯಾಗಿ ರಾಘವಾಂಕನ ಸೃಜನಶೀಲ ಪ್ರತಿಭೆ ಮಾನವೀಯ ನೆಲೆಯಲ್ಲಿ ಕ್ರಿಯಾಶೀಲವಾದಾಗ ರಚಿತವಾದ ಕೃತಿ ‘ಸಿದ್ದರಾಮ ಪುರಾಣ’. ಭೂ ಕೈಲಾಸವೆನ್ನಿಸಿದ ಸೊನ್ನಲಿಗೆಯಲ್ಲಿ ಜನಿಸಿದ ಧೂಳಿಮಾಕಾಳನೆಂಬ ಹುಡುಗ ಶ್ರೀ ಶೈಲಕ್ಕೆ ಹೋಗಿ ಶಿವಕರುಣೆ ಪಡೆದು ಬಂದು ಸೊನ್ನಲಿಗೆಯಲ್ಲಿ ನೆಲೆನಿಂತು ಜನಪರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಇದು ‘ಸಿದ್ದರಾಮ ಪುರಾಣ’ದ ಕಥಾವಸ್ತು. ‘ಸಾಕಾರ ನಿಷ್ಠೆ ಭೂತಂಗಳೊಳನುಕಂಪೆ; ಆನುಗೊಂಬನಿತು ಕಾಯಕ’– ಇದು ಸಿದ್ದರಾಮನ ಆದರ್ಶ–ಶೈವಧರ್ಮ ಪ್ರತಿಪಾದನೆಯ ಆಶಯವನ್ನು ಈ ಕೃತಿ ಹೊಂದಿದ್ದರೂ, ಅದನ್ನು ಮೀರಿ, ಎಲ್ಲ ಧರ್ಮಗಳ ಸಾರವಾದ ‘ಮಾನವೀಯತೆ’ಯನ್ನು ಈ ಕೃತಿ ಪ್ರತಿಪಾದಿಸುತ್ತದೆ.
ವ್ಯಕ್ತಿತ್ವ ಮಾಗುವ ಕ್ರಮವಿದು. ನಿರ್ದಿಷ್ಟ ನೆಲೆಯಿಂದ ವಿಶಾಲಪಥದೆಡೆಗೆ ಚಲಿಸುವ ಬಗೆಯನ್ನಿಲ್ಲಿ ಕಾಣಬಹುದು. ಈ ಚಲನೆಯ ಅಂತಿಮ ಫಲವೆನ್ನುವಂತೆ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಕೃತಿ ರಚಿತವಾಗಿದೆ.
ರಾಘವಾಂಕನ ಕೃತಿ ರಚನೆಯ ಕಾಲಾನುಕ್ರಮದ ಬಗ್ಗೆಯೂ ಚರ್ಚೆಯಿದೆ. ಹರಿಹರ – ರಾಘವಾಂಕರ ಸಂಘರ್ಷದ ಕತೆಯ ಪ್ರಕಾರ ‘ಹರಿಶ್ಚಂದ್ರ ಕಾವ್ಯ’ ಮೊದಲು ರಚಿತವಾಗಿ ಉಳಿದ ಕೃತಿಗಳು ನಂತರ ರಚಿತವಾದವು ಎಂದು ತಿಳಿಯುತ್ತದೆ. ಪ್ರಯೋಗಶೀಲ ಪ್ರತಿಭೆ ನಂತರ ಹೇಗೆ ಧಾರ್ಮಿಕ ಶ್ರದ್ಧೆಯ ಸೆಳವಿಗೆ ಸಿಕ್ಕಿ ತಲೆಬಾಗಬೇಕಾಯಿತು ಎಂಬ ನೆಲೆಯಲ್ಲಿ ಈ ಕ್ರಮವೇ ಸರಿಯೆಂದು ಜಿ. ಎಸ್. ಶಿವರುದ್ರಪ್ಪನವರು ಅಭಿಪ್ರಾಯ ಪಡುತ್ತಾರೆ. ಆದರೆ ಆರ್.ಸಿ. ಹಿರೇಮಠ, ಎ. ಆರ್. ಕೃಷ್ಣಮೂರ್ತಿ ಮೊದಲಾದವರು ‘ಸೋಮನಾಥ ಚರಿತೆ’, ‘ವೀರೇಶ ಚರಿತೆ’, ‘ಸಿದ್ದರಾಮಪುರಾಣ’ದ ರಚನೆಯ ನಂತರ ‘ಹರಿಶ್ಚಂದ್ರ ಕಾವ್ಯ’ ರಚಿತವಾಗಿರಬೇಕೆಂಬ ನಿಲುವು ತಾಳುತ್ತಾರೆ.
‘ಹರಿಶ್ಚಂದ್ರ ಕಾವ್ಯ’ ಅನೇಕ ದೃಷ್ಟಿಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ‘ವೀರೇಶ ಚರಿತ್ರೆ’ಯಂತೆ ಇದು ಪುರಾಣದ ಅವತಾರ ಕಲ್ಪನೆಯ ಕತೆಯಲ್ಲ; ‘ಸೋಮನಾಥ ಚರಿತೆ’ಯಂತೆ ವೀರ ಮಹೇಶ್ವರ ನಿಷ್ಠೆಯನ್ನು ಪ್ರದರ್ಶಿಸುವ ಆವೇಶ ಪ್ರಧಾನ ಕಥಾನಕವೂ ಅಲ್ಲ; ‘ಸಿದ್ಧರಾಮ ಪುರಾಣ’ ದಂತೆ ಶಿವನ ಅಂಶಾವತಾರ ಭೂಲೋಕದಲ್ಲಿ ಶರಣನಾಗಿ ಜನಿಸಿ ಶೈವ ಧರ್ಮ ಪ್ರತಿಪಾದನೆ ಮಾಡಿದ ಕತೆಯೂ ಅಲ್ಲ. ಯಾವ ಮತ ಜಾತಿಗಳ ಹಂಗೂ ಇಲ್ಲದೆ ಸಾರ್ವಕಾಲಿಕ ಮೌಲ್ಯವೊಂದನ್ನು ಪ್ರತಿಪಾದಿಸುವ ಕನ್ನಡದ ಮೊದಲ ಕೃತಿ – ಹರಿಶ್ಚಂದ್ರ ಕಾವ್ಯ.
ಹರಿಶ್ಚಂದ್ರನ ಕತೆ ಅತ್ಯಂತ ಪ್ರಾಚೀನವಾದುದು. ಐತರೇಯ ಬ್ರಾಹ್ಮಣ, ಸಾಂಖ್ಯಾಯನ ಶ್ರೌತ ಸೂತ್ರ, ವೇದಾರ್ಥ ದೀಪಿಕಾ, ದೇವಿ ಭಾಗವತ, ಮಾರ್ಕಂಡೇಯ ಪುರಾಣ, ಹರಿವಂಶ, ರಾಮಾಯಣ, ಮಹಾಭಾರತಗಳಲ್ಲಿ ಒಂದು ಉಪಾಖ್ಯಾನವಾಗಿ ಕಾಣಿಸುತ್ತದೆ. ಎ. ಆರ್. ಕೃಷ್ಣಶಾಸ್ತ್ರಿಗಳು ಹೇಳುವಂತೆ ವೈದಿಕ ಗ್ರಂಥಗಳಲ್ಲಿ ಈ ಕತೆಯ ಯಾಜ್ಞಿಕಾಂಶವೂ, ಪೌರಾಣಿಕ ಗ್ರಂಥಗಳಲ್ಲಿ ಐತಿಹಾಸಿಕಾಂಶವೂ, ಸಾಹಿತ್ಯ ಕೃತಿಗಳಲ್ಲಿ ಧಾರ್ಮಿಕಾಂಶವೂ ಪ್ರತಿಪಾದಿತವಾದಂತೆ ತೋರುತ್ತದೆ.
ಇಲ್ಲಿ ಎಲ್ಲಿಯೂ ಹರಿಶ್ಚಂದ್ರನ ಕತೆ ವಿಸ್ತಾರವಾಗಿ ಅಖಂಡವಾಗಿ ಸಿಗುವುದಿಲ್ಲ. ಈ ದೃಷ್ಟಿಯಿಂದ ಹತ್ತನೇ ಶತಮಾನದ ಕ್ಷೇಮೇಶ್ವರನ ‘ಚಂಡಕೌಶಿಕ’ ನಾಟಕ ಗಮನಿಸಬೇಕಾದಂಥದು. ಆದರೆ ಇಲ್ಲಿಯೂ ಹರಿಶ್ಚಂದ್ರನ ಕತೆ ಕೌಶಿಕ ಕೇಂದ್ರಿತವಾಗಿ ರೂಪುಗೊಂಡಿದೆ. ರಾಘವಾಂಕನ ‘ಹರಿಶ್ಚಂದ್ರ ಚರಿತ್ರೆ’ಯನ್ನು ಹೋಲುವ, ತೆಲುಗು ಲಿಪಿಯಲ್ಲಿರುವ ಸಂಸ್ಕೃತದ ಉಪಾಖ್ಯಾನ ವೊಂದಿದೆ, ಆದರೆ ಅದರ ಕಾಲ ನಿಗದಿಯಾಗಿಲ್ಲ. ರಾಘವಾಂಕನಿಂದ ಆ ಕೃತಿ ಪ್ರಭಾವಿತವಾಗಿದೆಯೇ, ಅದರಿಂದ ರಾಘವಾಂಕ ಪ್ರೇರಣೆ ಪಡೆದಿದ್ದಾನೋ ಎಂಬ ವಿಷಯದಲ್ಲಿ ಸಂದಿಗ್ಧತೆಯಿದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಭಾರತೀಯ ಸಾಹಿತ್ಯದಲ್ಲಿಯೇ ಹರಿಶ್ಚಂದ್ರನನ್ನು ಕುರಿತ ಸಮಗ್ರ, ವಿಸ್ತಾರವಾದ ಮೊದಲ ಕೃತಿ ಎಂಬ ಗೌರವಕ್ಕೆ ಪಾತ್ರವಾಗಿದೆ.
ಹರಿಶ್ಚಂದ್ರನ ವೃತ್ತಾಂತದಲ್ಲಿ ಎರಡು ಭಾಗವಿದೆ:
ಅಯೋಧ್ಯೆಯ ರಾಜ ತ್ರಯ್ಯಾರುಣನಿಗೆ ಸತ್ಯವ್ರತನೆಂಬ ಮಗನಿದ್ದ. ಆತ ಅಯೋಧ್ಯಾವಾಸಿಯೊಬ್ಬರ ಮನೆಯಲ್ಲಿ ಮದುವೆಯಾಗುತ್ತಿರುವಾಗ ವಿವಾಹ ಕನ್ಯೆಯನ್ನೇ ಅಪಹರಿಸಿಕೊಂಡು ಹೋದ. ಈ ಅಕೃತ್ಯಕ್ಕೆ ಶಿಕ್ಷೆಯಾಗಿ ತಂದೆ ತ್ರಯ್ಯಾರುಣ ಸತ್ಯವ್ರತನನ್ನು ಅರಮನೆಯಿಂದ ಹೊರಹಾಕಿ ಚಂಡಾಲರ ಮನೆಗೆ ಕಳುಹಿಸುತ್ತಾನೆ.
ರಾಜಗುರು ವಸಿಷ್ಠರೂ ಇದಕ್ಕೆ ಸಮ್ಮತಿಸುತ್ತಾರೆ. ಈ ಕಾಲದಲ್ಲಿ ಕ್ಷಾಮ ಆವರಿಸಿದಾಗ ತಪಸ್ಸಿಗೆ ಹೋಗಿದ್ದ ವಿಶ್ವಾಮಿತ್ರನ ಹೆಂಡತಿ ಮಕ್ಕಳನ್ನು ಸತ್ಯವ್ರತ ಕಾಪಾಡುತ್ತಾನೆ. ಹಿಂತಿರುಗಿ ಬಂದ ವಿಶ್ವಾಮಿತ್ರ ಸತ್ಯವ್ರತನನ್ನು ಮತ್ತೆ ರಾಜ್ಯದಲ್ಲಿ ಪ್ರತಿಷ್ಠಾಪಿಸಿ, ಅವನಿಂದ ಯಾಗ ಮಾಡಿಸಿ ಸ್ವರ್ಗಕ್ಕೆ ಕಳಿಸುತ್ತಾನೆ. ಈ ಸತ್ಯವ್ರತನೇ ತ್ರಿಶಂಕು. ತ್ರಿಶಂಕು ಎಂದರೆ ಮೂರು ಪಾಪಗಳನ್ನು ಮಾಡಿದವನು ಎಂಬ ಅರ್ಥ. ಈತನ ಮಗನೇ ಹರಿಶ್ಚಂದ್ರ. ಇದು ಹರಿಶ್ಚಂದ್ರ ವೃತ್ತಾಂತದ ಪೂರ್ವಾರ್ಧ.
ಸತ್ಯವ್ರತನ ನಂತರ ಹರಿಶ್ಚಂದ್ರ ರಾಜನಾಗುತ್ತಾನೆ. ಸತ್ಯವ್ರತ ಅಯೋಧ್ಯೆಯಿಂದ ದೂರವಿದ್ದಾಗ ಬಾಲಕನಾಗಿದ್ದ ಹರಿಶ್ಚಂದ್ರನಿಗೆ ವಸಿಷ್ಠ ಗುರುವಾಗಿ ಶಿಕ್ಷಣ ನೀಡಿರುತ್ತಾನೆ. ಬದಲಾದ ಸನ್ನಿವೇಶದಲ್ಲಿ ವಿಶ್ವಾಮಿತ್ರನ ಪ್ರಾಬಲ್ಯ ಕಡಿಮೆಯಾಗಿ ವಸಿಷ್ಠ ಮತ್ತೆ ರಾಜಗುರುವಾಗುತ್ತಾನೆ. ವಸಿಷ್ಠ – ವಿಶ್ವಾಮಿತ್ರರ ಸ್ಪರ್ಧಾತ್ಮಕತೆಯಲ್ಲಿ ಹರಿಶ್ಚಂದ್ರ ಅನೇಕ ಕಷ್ಟ ಪರಂಪರೆಗಳನ್ನು ಅನುಭವಿಸಬೇಕಾಗುತ್ತದೆ. ರಾಜ್ಯ ಕಳೆದುಕೊಳ್ಳುತ್ತಾನೆ, ಹೆಂಡತಿ ಮಕ್ಕಳಿಂದ ದೂರವಾಗುತ್ತಾನೆ. ಕಡೆಗೆ ಚಂಡಾಲನೊಬ್ಬನಲ್ಲಿ ಸೇವಕನಾಗುತ್ತಾನೆ ಇತ್ಯಾದಿ. ಈ ಎಲ್ಲ ಸತ್ವಪರೀಕ್ಷೆಯಲ್ಲೂ ಗೆದ್ದು ಆತ ‘ಸತ್ಯ ಹರಿಶ್ಚಂದ್ರ’ ನಾಗುತ್ತಾನೆ. ಇದು ಹರಿಶ್ಚಂದ್ರ ವೃತ್ತಾಂತದ ಉತ್ತರಾರ್ಧ.
ಈ ವೃತ್ತಾಂತವನ್ನು ಗಮನಿಸಿದಾಗ ರಾಜಕೀಯ ಸೂಕ್ಷ್ಮವೊಂದು ಇಲ್ಲಿ ಗೋಚರಿಸುತ್ತದೆ. ಎಫ್.ಇ. ಪಾರ್ಗಿಟರ್ ಎಂಬ ವಿದ್ವಾಂಸ ತಮ್ಮ Ancient Indian Historical Tradition (1917) ಎಂಬ ಗ್ರಂಥದಲ್ಲಿ ಈ ಅಂಶದ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಪ್ರಾಚೀನ ಭಾರತದಲ್ಲಿ ವಸಿಷ್ಠ – ವಿಶ್ವಾಮಿತ್ರರು ಅತ್ಯಂತ ಪ್ರಬಲರಾಗಿದ್ದ ರಾಜಗುರುಗಳು; ರಾಜ್ಯ ಸೂತ್ರಗಳನ್ನು ನಿರ್ದೇಶಿಸಬಲ್ಲ ಶಕ್ತಿಯಿದ್ದವರು. ಇವರಿಬ್ಬರ ರಾಜಕೀಯ ಮೇಲಾಟದ ಸ್ವರೂಪವೇ ಈ ವೃತ್ತಾಂತವನ್ನು ರೂಪಿಸಿದೆ. ವಸಿಷ್ಠ ಪ್ರಬಲರಾಗಿದ್ದಾಗ ಸತ್ಯವ್ರತ – ಈತ ವಿಶ್ವಾಮಿತ್ರನ ವಿಶ್ವಾಸಕ್ಕೆ ಪಾತ್ರನಾದವನು – ರಾಜ್ಯ ಭ್ರಷ್ಟನಾಗುತ್ತಾನೆ. ವಿಶ್ವಾಮಿತ್ರ ಪ್ರತಿಯಾಗಿ ವಸಿಷ್ಠನ ಶಿಷ್ಯ ಹರಿಶ್ಚಂದ್ರನನ್ನು ರಾಜ್ಯ ಭ್ರಷ್ಟನನ್ನಾಗಿಸುತ್ತಾನೆ. ರಾಜರ ಕತೆಯಲ್ಲಿ ರಾಜಗುರುಗಳ ಪಾತ್ರದ ಮಹತ್ವವನ್ನು ಈ ವೃತ್ತಾಂತ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ಅನೇಕ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದಂಥವರು ಈ ರಾಜಗುರುಗಳೇ. ಈಗಲೂ ರಾಜಕೀಯದಲ್ಲಿ ‘ಥಿಂಕ್‌ಟ್ಯಾಂಕ್’ ಎಂದು ಕರೆಸಿಕೊಳ್ಳುವವರ ಪಾತ್ರವನ್ನು ನಾವು ಗಮನಿಸಬಹುದು.
ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ದಲ್ಲಿ ಪೂರ್ವಾರ್ಧದ ಕತೆಯಿಲ್ಲ; ಅದರ ಅಗತ್ಯವೂ ಈ ವಸ್ತುವಿನ್ಯಾಸದಲ್ಲಿ ಇದ್ದಂತಿಲ್ಲ. ಉತ್ತರಾರ್ಧವೇ ‘ಹರಿಶ್ಚಂದ್ರ ಕಾವ್ಯ’ದ ವಸ್ತು. ಮೂಲತಃ ಹರಿಶ್ಚಂದ್ರನ ಕತೆ ಒಂದು ರಾಜಕೀಯ ವೃತ್ತಾಂತ. ಆದರೆ ಇದನ್ನು ಒಂದು ಮೌಲ್ಯ ಪ್ರತಿಪಾದನೆಯ ಕತೆಯಾಗಿ ರೂಪಾಂತರಿಸುವುದರಲ್ಲಿ ರಾಘವಾಂಕನ ವಿಶಿಷ್ಟತೆಯಿದೆ. ಈ ಹಿನ್ನೆಲೆಯಲ್ಲಿ ಇಂದ್ರಸಭೆಯ ವಸಿಷ್ಠ – ವಿಶ್ವಾಮಿತ್ರರ ವಾಗ್ವಾದ ಮುಖ್ಯವಾಗುತ್ತದೆ.
‘ಹರಿಶ್ಚಂದ್ರ ಕಾವ್ಯ’ದಲ್ಲಿ ಎರಡು ಸಂಗತಿಗಳು ಮುಖ್ಯವಾಗುತ್ತವೆ. ಮೊದಲನೆಯದು ‘ಸತ್ಯ’ವೆಂಬ ಮೌಲ್ಯದ ಪ್ರತಿಪಾದನೆ. ‘ಹರನೆಂಬುದೇ ಸತ್ಯ, ಸತ್ಯವೆಂಬುದು ಹರನು’ ಎಂಬ ದರ್ಶನ ರಾಘವಾಂಕನ ಈ ಕೃತಿಯ ತಾತ್ವಿಕ ನೆಲೆ. ಕೀಟ್‌್ಸ ನನಗಿಲ್ಲಿ ನೆನಪಾಗುತ್ತಾನೆ. ಮತ್ತೊಂದು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ವಿಶ್ಲೇಷಣೆ; ‘ಹೊಲೆತನ’ದ ಪ್ರಶ್ನೆ ಕೃತಿಯುದ್ದಕ್ಕೂ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಯಾಗುತ್ತದೆ. ‘ಕುಲಾಚಾರನಿಷ್ಠೆ’ – ಹರಿಶ್ಚಂದ್ರನ ಸತ್ಯನಿಷ್ಠೆಯೊಡನೆ ತಳುಕುಹಾಕಿಕೊಳ್ಳುವುದನ್ನು ಜಿ.ಎಚ್. ನಾಯಕರು ತಮ್ಮ ‘ಹರಿಶ್ಚಂದ್ರ ಕಾವ್ಯ: ಓದು, ವಿಮರ್ಶೆ’ ಕೃತಿಯಲ್ಲಿ ವಿವರವಾಗಿ ಚರ್ಚಿಸುತ್ತಾರೆ. ರಾಘವಾಂಕ ಈ ವಸ್ತುನಿರ್ವಹಣೆಯಲ್ಲಿ ಅನೇಕ ಸಂದಿಗ್ಧತೆಗಳಿಗೆ ಒಳಗಾಗಿದ್ದಾನೆ. ಪ್ರಮುಖವಾಗಿ ವಿಶ್ವಾಮಿತ್ರನ ಪಾತ್ರದಲ್ಲಿ ಈ ಸಂದಿಗ್ಧತೆಯಿದೆ.
‘ವಿಶ್ವಾಮಿತ್ರ ಹರಿಶ್ಚಂದ್ರನ ಸತ್ಯನಿಷ್ಠೆಯನ್ನು ಪರೀಕ್ಷಿಸಿ ಅದನ್ನು ಲೋಕಕ್ಕೆ ಪ್ರಕಟ ಮಾಡುವ ಸದುದ್ದೇಶದಿಂದಲೇ ಪಣ ತೊಟ್ಟು ಕಾಟ ಕೊಟ್ಟನೋ ಅಥವಾ ವಸಿಷ್ಠನ ಮೇಲಣ ಹಗೆತನದಿಂದ ವಸಿಷ್ಠ ಶಿಷ್ಯನಾದ ಹರಿಶ್ಚಂದ್ರನನ್ನು ಭಂಗಿಸಲು ಪಣತೊಟ್ಟು ಕಾಟ ಕೊಟ್ಟನೇ ಎಂಬುದು ಪ್ರಶ್ನೆ. ರಾಘವಾಂಕ ಈ ಎರಡರಲ್ಲಿ ಯಾವೊಂದನ್ನು ಹಿಡಿದಿದ್ದರೂ ಸರಿಯಾಗಬಹುದಿತ್ತು. ಆದರೆ ಇವೆರಡನ್ನೂ ಬೆರಸಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾನೆ’ ಎಂಬ ಜಿ.ಎಸ್. ಶಿವರುದ್ರಪ್ಪನವರ ಅಭಿಪ್ರಾಯವನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ವಸಿಷ್ಠನ ಪಾತ್ರದಲ್ಲೂ ಸಮಸ್ಯೆಯಿದೆ. ಸ್ವೋಪಜ್ಞ ಪ್ರತಿಭೆ ಹೊಸದನ್ನು ಹಂಬಲಿಸಿ ಕೃತಿ ರಚಿಸುವಾಗ ಇದೆಲ್ಲ ಸಹಜವೇ.
ರಾಘವಾಂಕನದು ಜನಪರ ನಿಲುವು. ‘ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ ಕವಿ ರಾಘವಾಂಕಂ’ ಇದು ಕೃತಿಯ ಕಡೆಯಲ್ಲಿ ಕವಿ ಹೇಳುವ ಮಾತು. ಇದು ರಾಘವಾಂಕನ ಕಾವ್ಯ ಚಿಂತನೆ. ಕನ್ನಡ ಕವಿಯ ಈ ಕಾವ್ಯಚಿಂತನೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ಕಾವ್ಯ ಚಿಂತನೆಯಲ್ಲೂ ಕಾಣದ ಅವರೂಪದ, ಮಹತ್ವದ ಚಿಂತನೆ. ಕಾವ್ಯಮೀಮಾಂಸೆಗೆ ಕನ್ನಡದ ಕೊಡುಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.