ಕಳೆದ ವಾರದ ಒಂದು ಮುಂಜಾನೆ ಕಂಪ್ಯೂಟರ್ ತೆರೆದಾಗ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ `ಗಾಡ್ ಆಫ್ ಸ್ಮಾಲ್ ಥಿಂಗ್ಸ್'ನ ಲೇಖಕಿ ಹಾಗೂ ಹಲವು ಸ್ತುತ್ಯರ್ಹ ಕಾರಣಗಳಿಗಾಗಿ ಹೋರಾಟ ನಡೆಸುತ್ತಿರುವ ಅರುಂಧತಿ ರಾಯ್ ಅವರಿಂದ ಬಂದ ಇ-ಮೇಲ್ ಕಾಣಿಸಿತು. ಅವರು ಬರೆದಿದ್ದರು:
ಪ್ರಿಯ ಸುಕೇತು,
`ಗಾರ್ಡಿಯನ್' ನನ್ನದೊಂದು ಸಂದರ್ಶನವನ್ನು ಪ್ರಕಟಿಸಿದೆ. ಅದರಲ್ಲಿ ನಾನು `ಮ್ಯಾಕ್ಸಿಮಮ್ ಸಿಟಿ'ಯ ಬಗ್ಗೆ ಹೇಳಿರುವಂತೆ ಇರುವ ಮಾತುಗಳು ಸರಿಯಾಗಿಲ್ಲ. ಅಲ್ಲಿರುವ ಮಾತುಗಳು `ಮ್ಯಾಕ್ಸಿಮಮ್ ಸಿಟಿ'ಯನ್ನು ನಾನು ಓದದೇ ಇರುವುದಕ್ಕೆ ಕಾರಣ ನೀವು ಹಿಂಸೆಯನ್ನು ನಿರ್ವಹಿಸಿರುವ ವಿಧಾನ ಕಾರಣ ಎಂಬ ಅರ್ಥ ನೀಡುತ್ತದೆ. ಇದೊಂದು ಬೌದ್ಧಿಕ ಅಸಂಗತ. ನಾನು ಹೇಳಿದ್ದು ನೀವು ಚಿತ್ರಹಿಂಸೆ ನೀಡುವ ಸ್ಥಳಕ್ಕೆ ಹೋಗಿದ್ದಾಗ ಹಿಂಸಕನ ಅನುಮತಿ ಪಡೆದಿದ್ದಿರೇ ಹೊರತು ಹಿಂಸೆಗೆ ಒಳಗಾಗುತ್ತಿರುವವನ ಅನುಮತಿ ಪಡೆದಿರಲಿಲ್ಲ. ಅದು ಒಬ್ಬ ಬರಹಗಾರನ ಮಟ್ಟಿಗೆ ಬಹಳ ಕುತೂಹಲಕಾರಿಯೂ ಸಂಕೀರ್ಣವೂ ಆದ ನೈತಿಕ ಪ್ರಶ್ನೆಗಳನ್ನು ಎತ್ತುತ್ತದೆ. ಆದರೆ ನನ್ನ ಸಂದರ್ಶನದಲ್ಲಿ ಪ್ರಕಟವಾಗಿರುವ ಮಾತುಗಳು ದಡ್ಡತನವನ್ನು ಧ್ವನಿಸುತ್ತಿವೆಯಷ್ಟೇ ಅಲ್ಲದೇ ಸದಾಚಾರವನ್ನು ಬೋಧಿಸುವ ಧ್ವನಿಯಲ್ಲಿದೆ...'
ಅರುಂಧತಿಯವರ ಈ ಪತ್ರ ಪತ್ರಕರ್ತನಾದವನು ನೈತಿಕವಾಗಿ ಸಂಕೀರ್ಣವಾಗಿರುವ ಹಿಂಸಕರು ಮತ್ತು ಕೊಲೆಗಾರರಂಥ ಪಾತ್ರಗಳನ್ನು ತನ್ನ ಕೃತಿಯಲ್ಲಿ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಆಲೋಚಿಸಲು ನನ್ನನ್ನು ಪ್ರೇರೇಪಿಸಿತು. ನನ್ನ ಕೃತಿಯಲ್ಲಿ ಬರುವ ಮುಂಬೈ ಪೊಲೀಸರ ಕುರಿತಂತಿರುವ ಭಾಗವನ್ನು ಅರುಂಧತಿ ಉಲ್ಲೇಖಿಸಿದ್ದರು. ನಗರದ ಅತ್ಯಂತ ಬುದ್ಧಿವಂತ ಮತ್ತು ಭ್ರಷ್ಟನಾಗದೇ ಉಳಿದಿರುವ ಪೊಲೀಸ್ ಕಮೀಷನರ್ ಒಬ್ಬರು ನನ್ನನ್ನು ಅವರ ಕಚೇರಿಗೆ ಆಹ್ವಾನಿಸಿದ್ದರು. ಅವರ ಕಚೇರಿಯ ಹಿಂಬದಿಯಲ್ಲಿದ್ದ ಆ ಸ್ಥಳದಲ್ಲಿ ಅವರ ಸಹೋದ್ಯೋಗಿಗಳು ಶಂಕಿತ ಆರೋಪಿಗಳನ್ನು ಬೆಲ್ಟ್‌ಗಳಲ್ಲಿ ಬಾರಿಸಿ ಮುಷ್ಟಿಯಲ್ಲಿ ಗುದ್ದಿ ವಿಚಾರಣೆ ನಡೆಸುತ್ತಿರುವಾಗ ನಾನಲ್ಲಿ ಕುಳಿತಿದ್ದೆ.
ಅಲ್ಲೇ ಹಿಂಬದಿಯಲ್ಲಿದ್ದ ಕೋಣೆಯಲ್ಲಿ ಶಂಕಿತರ ಗುಪ್ತಾಂಗಗಳಿಗೆ ವಿದ್ಯುತ್ ಶಾಕ್ ಕೊಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ಇಂಥ ವಿಚಾರಣೆಗಳು ಮುಗಿದ ನಂತರ ಶಂಕಿತರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಗೋಜಿಗೇ ಹೋಗದೆ ನಗರದ ಬೇರೊಂದು ಮೂಲೆಗೆ ಕೊಂಡೊಯ್ಯುತ್ತಿದ್ದ ಪೊಲೀಸರು ನಕಲಿ ಎನ್‌ಕೌಂಟರ್‌ಗಳಲ್ಲಿ ಅವರನ್ನು ಮುಗಿಸಿಬಿಡುತ್ತಿದ್ದರು. ಪತ್ರಿಕೆಗಳು ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು ಎಂದು ಬರೆದು ಎನ್‌ಕೌಂಟರ್ ಕುರಿತ ಪೊಲೀಸರ ಹೇಳಿಕೆಗಳನ್ನೇ ಪುನರಾವರ್ತಿಸುತ್ತಿದ್ದವು. ಆ ಪೊಲೀಸ್ ಅಧಿಕಾರಿ ಇವೆಲ್ಲವನ್ನೂ ನನಗೆ ಹೇಳಿದರು. ಅವರ ಸಹೋದ್ಯೋಗಿಗಳು ಕೊಂದು ಹಾಕಿದ ಶಂಕಿತ ಆರೋಪಿಗಳ ವಿಷಯವನ್ನೆಲ್ಲಾ ವಿವರಿಸಿದ ಮೇಲೆ ನನ್ನ ಮನೆಗೆ ಊಟಕ್ಕೂ ಬಂದಿದ್ದರು.
ಆಗ ನನ್ನ ಮಕ್ಕಳ ಜೊತೆಗೇ ಕೆಲ ಹೊತ್ತು ಕಳೆದಿದ್ದರು. ನಾನು ಆತನ ಹೆಸರು ಬದಲಾಯಿಸಿ ಪೊಲೀಸರು ನೀಡುವ ಹಿಂಸೆಯ ಕುರಿತು ನನ್ನ ಪುಸ್ತಕದಲ್ಲಿ ಬರೆದೆ. ಕೆಲವು ಓದುಗರು ಈ ಹಿಂಸೆಯನ್ನು ತಡೆಯಲು ನಾನೇನೂ ಮಾಡಲಿಲ್ಲವೇಕೆ ಎಂದು ಕೇಳಿದರು. ನಾನೇನು ಮಾಡಬಹುದಿತ್ತು? ಪೊಲೀಸರನ್ನು ಕರೆಯಬೇಕಿತ್ತೇ? ನಾನು ಹಿಂಸೆ ನೀಡುವ ಕೋಣೆಗೆ ಪ್ರವೇಶಿಸುವಾಗ ಹಿಂಸೆಗೆ ಗುರಿಯಾಗುತ್ತಿದ್ದವರ ಅನುಮತಿ ಪಡೆದಿರಲಿಲ್ಲ ಎಂಬುದು ನಿಜ; ಅವರಲ್ಲಿ ಅನುಮತಿ ಪತ್ರಕ್ಕೆ ಸಹಿ ಹಾಕಿರೆಂದು ಕೇಳಲೂ ಸಾಧ್ಯವಿರಲಿಲ್ಲ. ಆದರೆ ನಾನು ಅರುಂಧತಿಯವರಿಗೆ ಉತ್ತರ ಬರೆದೆ- ನಾನು ಅಲ್ಲಿದ್ದೆ, ಏಕೆಂದರೆ ನಾನು ಬರಹಗಾರನಾಗಿ ನನ್ನ ಧರ್ಮ ಪಾಲಿಸುತ್ತಿದ್ದೆ.
ನನ್ನ ಬಹಳಷ್ಟು ಕೃತಿಗಳಲ್ಲಿ ಮುಂಬೈ, ಪಂಜಾಬ್, ಕ್ವೀನ್ಸ್, ಡಾನ್ಬರಿ, ಸಿಟಿ ಮತ್ತು ಯೂನಿಯನ್ ಕಾರ್ಬೈಡ್‌ನ ಮುಖ್ಯ ಕಚೇರಿಯ ತನಕ ಎಲ್ಲೆಲ್ಲೂ ಇರುವ ಇತರರಿಗೆ ಕೆಡುಕುಂಟು ಮಾಡುವ ವ್ಯಕ್ತಿಗಳನ್ನು ನಿರ್ವಹಿಸಿದ್ದೇನೆ.
ಸುಪಾರಿ ಕೊಲೆಗಾರರು, ಪುಂಡು ಪೊಲೀಸರು, ಮತೀಯ ಗಲಭೆಕೋರರು ಮತ್ತು ಮಾಫಿಯಾ ದೊರೆಗಳನ್ನು ನಾನು ಭೇಟಿಯಾಗಿದ್ದೇನೆ. ಇವೆಲ್ಲವುಗಳ ಮೂಲಕ ನನಗೊಂದು ವಿಚಾರ ಸ್ಪಷ್ಟವಾಗಿದೆ. ಕೊಲೆ ಮಾಡುವವನೊಬ್ಬನನ್ನು ಅದೊಂದರ ಮೂಲಕವಷ್ಟೇ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಒಬ್ಬ ಮತ್ತೊಬ್ಬ ಮನುಷ್ಯನನ್ನು ಕೊಂದ ತಕ್ಷಣ ಅವನ ವ್ಯಕ್ತಿತ್ವದ ಬಹುಭಾಗ ಅಥವಾ ಬಹುದೊಡ್ಡ ಭಾಗ ಕೊಲೆಗಾರನದ್ದಾಗುತ್ತದೆ. ಅದು ಅವನನ್ನು ಇತರ ಕೊಲೆಗಾರರಲ್ಲದ ಮನುಷ್ಯರಿಂದ ಭಿನ್ನವಾಗಿಸುತ್ತದೆ.
ಆದರೆ ಅವನು ಕೇವಲ ಕೊಲೆಗಾರನಷ್ಟೇ ಅಲ್ಲ. ಅವನೊಬ್ಬ ತಂದೆಯಾಗಿರಬಹುದು, ಗೆಳೆಯನಾಗಿರಬಹುದು, ದೇಶಭಕ್ತನಾಗಿರಬಹುದು, ಪ್ರೇಮಿಯಾಗಿರಬಹುದು. ನಾವೊಂದು ಕೊಲೆಯನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ ಆಂಶಿಕವಾದುದನ್ನು ಪೂರ್ಣ ಎಂದು ಭಾವಿಸಿಬಿಡುತ್ತೇವೆ. ಅಂದರೆ `ಕೊಲೆಗಾರ'ನನ್ನಷ್ಟೇ ನಿರ್ವಹಿಸಲು ಹೊರಟು ಅವನು ಹೇಗೆ ನಮಗಿಂತ, ನಿಮಗಿಂತ ಭಿನ್ನವಾಗಿಬಿಟ್ಟ ಎಂದು ಅರ್ಥಮಾಡಿಕೊಳ್ಳಲಾಗದೆ ಗೊಂದಲದಲ್ಲಿ ಬೀಳುತ್ತೇವೆ.
ಪಾತ್ರಗಳ ನೈತಿಕ ಸಂಕೀರ್ಣತೆ ಎನ್ನುವುದು ಸಾಂಪ್ರದಾಯಿಕವಾಗಿ ಸೃಜನಶೀಲ ಕೃತಿಗಳ ಕಾರ್ಯಕ್ಷೇತ್ರಕ್ಕೆ ಸೀಮಿತವಾಗಿದೆ. ಇದು ಮಹಾಭಾರತದಿಂದ ಆರಂಭಗೊಂಡು ದಾಸ್ತೋಯ್‌ವ್‌ಸ್ಕಿಯಿಂದ ಡಿಲಿಲ್ಲೋ ತನಕವೂ ವ್ಯಾಪಿಸಿಕೊಳ್ಳುತ್ತದೆ. ಆದರೆ ಕೊಲೆ ಅಥವಾ ಅತ್ಯಾಚಾರದ ಸುಸ್ಪಷ್ಟ ವಾಸ್ತವಾಂಶಗಳೇ ಮುಖ್ಯವಾಗಿಬಿಡುವ ಪತ್ರಿಕಾವೃತ್ತಿಯಲ್ಲಿ ನೈತಿಕ ಸಂಕೀರ್ಣತೆಯನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇಲ್ಲಿ ಸುಸ್ಪಷ್ಟವಾಗಿರುವ ವಾಸ್ತವಾಂಶಗಳೇ ಸೂಕ್ಷ್ಮಗಳನ್ನು ನುಜ್ಜುಗುಜ್ಜು ಮಾಡಿಬಿಡುತ್ತವೆ. ಆದರೆ ಗೇ ಟ್ಯಾಲೆಸ್ (Gay Talese) ತನ್ನ ಆನರ್ ದೈ ಫಾದರ್ (Honor Thy Father), ದೈ ನೇಬರ್ಸ್ ವೈಫ್ ('Thy Neighbor's Wife ) ನಂಥ ಕೃತಿಗಳಲ್ಲಿ ಹಾಗಿ ಜೋನ್ ಡಿಡಿಯೋನ್ (Joan Didion)) ತನ್ನ'Slouching Towards Bethlehem'ನಂಥ ಕೃತಿಗಳಲ್ಲಿ ಸಹತಾಪಕ್ಕೆ ಅರ್ಹವಲ್ಲದ ಪಾತ್ರಗಳನ್ನೂ ಸೃಜನೇತರ (ಕಥೇತರ) ಕೃತಿಗಳಲ್ಲೂ ಯುಕ್ತವಾಗಿ ಮತ್ತು ಆಕರ್ಷಕವಾಗಿ ನಿರ್ವಹಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನಾನು ಪತ್ರಕರ್ತನಾಗುವ ಮೊದಲು ಕಾದಂಬರಿ ಬರೆಯಲು ತರಬೇತಾದವನು. ನನ್ನ `ಮ್ಯಾಕ್ಸಿಮಮ್ ಸಿಟಿ' ಒಂದು ಕಥೇತರ ಕೃತಿ. ಇದನ್ನು ಬರೆಯುವಾಗ ನನ್ನಲ್ಲಿ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದ ಎಲ್ಲರನ್ನೂ ಒಂದು ಕಾದಂಬರಿಯ ಪಾತ್ರಗಳಂತೆ ನಿರ್ವಹಿಸುವುದು ಅಗತ್ಯ ಎಂಬುದು ಅರಿವಾಯಿತು. ಈ ನಿಜ ಬದುಕಿನ ಪಾತ್ರಗಳನ್ನು ಅವುಗಳನ್ನು ನಾನೇ ಸೃಷ್ಟಿಸಿದ್ದೇನೆ ಎಂಬಂತೆ ಪೂರ್ಣವೂ ಸಂಕೀರ್ಣವೂ ಆದ ಪಾತ್ರಗಳಾಗಿ ಚಿತ್ರಿಸಿದೆ- ಇ.ಎಂ.ಫಾರ್‌ಸ್ಟರ್‌ನ ಮಾತೊಂದನ್ನು ಬಳಸಿಕೊಂಡು ಹೇಳುವುದಾದರೆ ಅವರನ್ನೆಲ್ಲಾ `ಪೂರ್ಣಗೊಳಿಸಿದೆ' (ರೌಂಡೆಡ್). ಅಂದರೆ ಕೊಲೆಗಾರರಂಥ ಕೆಟ್ಟವರನ್ನು ಬದುಕಿನ ಇತರ ಭಾಗಗಳಲ್ಲಿ ಒಳ್ಳೆಯವರಾಗಿರುವ ಸ್ವಾತಂತ್ರ್ಯ ನೀಡಿದಂತೆಯೇ ದುರಂತಗಳ ಬಲಿಪಶುಗಳಂಥ ಮುಗ್ಧರು ಬದುಕಿನ ಇತರ ಭಾಗಗಳಲ್ಲಿ ಸಹತಾಪಕ್ಕೆ ಅರ್ಹರಾಗದ ನಿಜವಾದ ಹಡಬೆಗಳಾಗಿರುವ ಸ್ವಾತಂತ್ರ್ಯ ಕೊಟ್ಟೆ.
ನಾನು ಭೋಪಾಲ್‌ನ ಅನಿಲ ದುರಂತ ಸಂಭವಿಸಿದ ಸ್ಥಳದಲ್ಲಿ ಮೂರು ತಿಂಗಳಿದ್ದೆ. ನಾನಲ್ಲಿಗೆ ಹೋಗುವುದಕ್ಕೆ ಹನ್ನೊಂದು ವರ್ಷ ಮೊದಲು (1984ರ ಡಿಸೆಂಬರ್ 2) ಸಂಭವಿಸಿದ ಅನಿಲ ಸ್ಫೋಟ 1000 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಈ ದುರಂತದಲ್ಲಿ ಬದುಕುಳಿದವರ ಬಗ್ಗೆ ನಾನು `ವಿಲೇಜ್ ವಾಯ್ಸ'ಗೆ ಎರಡು ಭಾಗಗಳ ಸರಣಿಯೊಂದನ್ನು ಬರೆದೆ.
ಭೋಪಾಲ್ ದುರಂತ ಸಂತ್ರಸ್ತರಲ್ಲಿ ಹಲವರು ಸಹತಾಪಕ್ಕೆ ಅರ್ಹರಲ್ಲದವರು. ಉದಾಹರಣೆಗೆ ನಾನು ಅರುಣ್ ಎಂದು ಗುರುತಿಸಿರುವ ವ್ಯಕ್ತಿ. ಈತ ಬೀದಿ ರೌಡಿ, ತನ್ನ ಕುಟುಂಬದ ಹತ್ತು ಮಂದಿಯಲ್ಲಿ ಏಳು ಮಂದಿ ಅನಿಲ ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ಅರುಣ್‌ಗೆ ಗೊತ್ತಾಗಿದ್ದು ಬೀದಿ ಬದಿಯ ಗೋಡೆಯಲ್ಲಿ ಅಂಟಿಸಲಾಗಿದ್ದ ಫೋಟೋಗಳನ್ನು ಕಂಡ ಮೇಲೆ. ಆಗ ಈತನಿಗೆ ಕೇವಲ 14 ವರ್ಷ ಪ್ರಾಯ.
ಕುಟುಂಬದ ಬದುಕುಳಿದವರಲ್ಲಿ ಈತನೇ ಹಿರಿಯ. ತಮ್ಮ ಮತ್ತು ತಂಗಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಮನೆಯ ಯಜಮಾನನೂ ಇವನೇ. ಈ ಸ್ಥಿತಿ ಸಹಜವಾಗಿಯೇ ಹೋರಾಟಗಾರ ಸಂಘಟನೆಗಳು ಮತ್ತು ಪತ್ರಕರ್ತರಿಗೆ ಆಕರ್ಷಣೀಯವಾಗಿ ಕಂಡಿತು. ಅವರೆಲ್ಲಾ ಇವನ ಸುತ್ತುಗೂಡಿದರು. ಕೆಲವರು ತಮ್ಮ ಉದ್ದೇಶಗಳಿಗೆ ಈತನನ್ನು ಬಳಸತೊಡಗಿದರು. ಒಂದು ಬಗೆಯಲ್ಲಿ ಈತ ವೃತ್ತಿಪರ ಸಂತ್ರಸ್ತನಾಗಿ ಬದಲಾಗಿಬಿಟ್ಟ. ಅರುಣ್ ತನ್ನ ಕುಟುಂಬವನ್ನು ನಾಶ ಮಾಡಿದ ದುರಂತದ ಬಗ್ಗೆ ಹೇಳಲು ಭಾರತಾದ್ಯಂತ ಪ್ರವಾಸ ಮಾಡಿದ, ಎರಡು ಬಾರಿ ಅಮೆರಿಕಕ್ಕೂ ಹೋಗಿ ಬಂದ. `ಹದಿನೈದನೇ ವರ್ಷದಲ್ಲೇ ನಾನು ಪತ್ರಕರ್ತರು ಪ್ರೀತಿಸುವಂಥ ಉತ್ತರಗಳನ್ನು ಕೊಡಲು ಕಲಿತಿದ್ದೆ' ಎಂದು ಆತ ನನ್ನಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದ.
ಅರುಣ್ ಒಳ್ಳೆಯವನಲ್ಲ. ಅವನು ಇತರ ಸಂತ್ರಸ್ತರು ಮತ್ತು ಅವರ ಪರಿಹಾರದ ಹಣವನ್ನು ಆಶ್ರಯಿಸಿ ಬದುಕುತ್ತಿದ್ದ. ಜನರ ಮೇಲೆ ಹಲ್ಲೆ ನಡೆಸುತ್ತಿದ್ದ, ಕುಡಿಯುತ್ತಿದ್ದ, ವೇಶ್ಯೆಯರ ಸಹವಾಸ ಮಾಡುತ್ತಿದ್ದ ಜೊತೆಗೆ ಅವಧಿ ಮುಗಿದು ಅಪಾಯಕಾರಿಯಾಗಿ ಬದಲಾದ ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ದುರಂತ ಸಂತ್ರಸ್ತರ ಪರವಾದ ಹೋರಾಟದಲ್ಲಿ ಪೋಸ್ಟರ್ ಬಾಯ್ ಆಗಿದ್ದ ತನ್ನ ಹಿರಿಮೆಯನ್ನು ಆತ ಹಣಕಾಸು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದ. ಪ್ರತೀ ವರ್ಷ ಅನಿಲ ಸ್ಫೋಟದ ವಾರ್ಷಿಕಾಚರಣೆಯ ಸಲುವಾಗಿ ಮುಖ್ಯಮಂತ್ರಿ ಒಂದು ಸಾರ್ವಜನಿಕ ಸಭೆ ನಡೆಸುತ್ತಾರೆ. ಇದಕ್ಕೆ ಬದುಕುಳಿದಿರುವ ಎಲ್ಲಾ ಸಂತ್ರಸ್ತರನ್ನು ಆಹ್ವಾನಿಸುತ್ತಾರೆ.
ಈ ಸಭೆಯಲ್ಲಿ ತಪ್ಪದೇ ಭಾಗವಹಿಸುವ ಅರುಣ್, ಮುಖ್ಯಮಂತ್ರಿಗಳಿಂದ ಏನಾದರೊಂದು ಸಹಾಯ ಕೇಳುತ್ತಾನೆ. ಉದಾಹರಣೆಗೆ ಸೀಮೆಎಣ್ಣೆ ಮಾರಾಟದ ಲೈಸೆನ್ಸ್. ಇದು ಮಂಜೂರಾದುದರ ಹಿಂದೆಯೇ ಈ ಲೈಸೆನ್ಸ್‌ಗೆ ದೊರೆಯುವ ಎಲ್ಲಾ ಸೀಮೆಎಣ್ಣೆಯೂ ನೇರವಾಗಿ ಕಾಳಸಂತೆಗೆ ಹೋಗುತ್ತದೆ.
ಮುಖ್ಯಮಂತ್ರಿಯಿಂದ ಸಹಾಯ ಪಡೆದುಕೊಂಡದ್ದನ್ನು ತಮಾಷೆಯಾಗಿ ವರ್ಣಿಸುತ್ತಿದ್ದ ಆತ `ನನ್ನಂಥ ಪ್ರಸಿದ್ಧ ಅನಾಥನೊಬ್ಬ ಕೇಳಿದ ಏನನ್ನೂ ನಿರಾಕರಿಸಲು ಮುಖ್ಯಮಂತ್ರಿಗೆ ಸಾಧ್ಯವಿಲ್ಲ. ಅದೂ ಅಷ್ಟೊಂದು ಪತ್ರಕರ್ತರ ಎದುರು!' ಎಂದು ನನಗೆ ಹೇಳಿದ್ದ. ಒಮ್ಮೆ ಹೋರಾಟಗಾರ ಗೆಳೆಯನೊಬ್ಬ ಅರುಣ್‌ನ ಈ ಬಗೆಯ ಕೆಲಸಗಳನ್ನ ಖಂಡಿಸಿ ವಾದಕ್ಕಿಳಿದಾಗ ಆತನ ಉತ್ತರ ಹೀಗಿತ್ತು `ವಾರನ್ ಆ್ಯಂಡರ್ಸನ್‌ನನ್ನು ನೋಡಿ. ಅವನು ಅಷ್ಟೊಂದು ಜನರನ್ನು ಕೊಂದು ಬಚಾವಾಗಿದ್ದಾನೆ. ಅವನೇ ಬಚಾವ್ ಆಗಬಹುದಾದರೆ ನಾನೇಕೆ ಆಗಬಾರದು?'
ನನ್ನ ಲೇಖನದಲ್ಲಿ ಅರುಣ್‌ನಂಥವರನ್ನು ಹೇಗೆ ನಿರ್ವಹಿಸಬೇಕು? ಅರುಣ್‌ನ ಸ್ಥಿತಿ ನಿಮಗೆದುರಾಗಿದ್ದರೆ ನೀವೇನು ಮಾಡುತ್ತಿದ್ದಿರಿ? ರಾತ್ರಿ ಮಲಗಿದ್ದವರು ಏದುಸಿರೆಳೆಯುತ್ತಾ ನಿದ್ರೆಯಿಂದ ಎದ್ದು ವಾಂತಿ ಮಾಡಲು ತೊಡಗುತ್ತೀರಿ. ಬೆಳಗಾಗುವ ಹೊತ್ತಿಗೆ ನಿಮ್ಮ ತಂದೆ ತಾಯಿ ಮತ್ತು ಐವರು ಅಣ್ಣ ತಮ್ಮಂದಿರು ಸತ್ತು ಹೋಗಿರುತ್ತಾರೆ!
ನಾನು ಎಲ್ಲವನ್ನೂ ಬರೆಯಲು ನಿರ್ಧರಿಸಿದೆ. ಅನಿಲ ದುರಂತದ ಸಂತ್ರಸ್ತ ಅರುಣ್‌ನ ಬಗ್ಗೆ, ಇದೇ ಬಗೆಯ ಸಂತ್ರಸ್ತರನ್ನು ಶೋಷಿಸುವ ಅರುಣ್‌ನ ಬಗ್ಗೆ ಹಾಗೆಯೇ ಸಂತ್ರಸ್ತ ಅರುಣ್ ಸಂತ್ರಸ್ತರ ಶೋಷಕನಾದ ಅರುಣ್ ಆಗಿ ಬದಲಾದ ಪ್ರಕ್ರಿಯೆಯ ಬರೆಯಲು ಹೊರಟೆ.
ಒಂದೆಡೆ ಅವನ ಬದುಕು ನಾಶವಾಗಿದ್ದು ನಿಜ. ಅಂತೆಯೇ ಅವನ ಅಪರಾಧಗಳಿಗೆ ಬಹಳ ಸ್ಪಷ್ಟವಾದ ಸಾಕ್ಷ್ಯಗಳಿದ್ದದ್ದೂ ನಿಜವೇ. ಅಷ್ಟೇ ಅಲ್ಲ ಅವನ ರೀತಿಯೇ ಬದುಕನ್ನು ಕಳೆದುಕೊಂಡರೂ ಅವನಂತೆ ಅಪರಾಧಿಗಳಾಗಿ ಬದಲಾಗದಿದ್ದವರು ಇರುವುದೂ ವಾಸ್ತವವೇ. ನನ್ನ ಮಟ್ಟಿಗೆ ಅರುಣ್‌ನ ಬದುಕು ಬಹಳ ಮೂಲಭೂತವಾದ ಯಾವುದೋ ಒಂದನ್ನು ಚಿತ್ರಿಸುತ್ತಿತ್ತು. `ನೈತಿಕತೆ'ಯ ಮೂಲಕ ವಾಸ್ತವವನ್ನು ಶುದ್ಧೀಕರಿಸಿ ಸಂತರಂತಿರುವ ಹೀರೋಗಳು ಮತ್ತು ಸಿದ್ಧ ಮಾದರಿಯ ವಿಲನ್‌ಗಳನ್ನು ಪ್ರಸ್ತುತ ಪಡಿಸುವುದಕ್ಕಿಂತಲೂ ಸತ್ಯವನ್ನು ಅದರ ಎಲ್ಲಾ ಸಂಕೀರ್ಣತೆಗಳ ಜೊತೆಗೆ ಬರೆಯುವುದು ಸಂತ್ರಸ್ತರಿಗೆ ಹೆಚ್ಚು ಉಪಕಾರಿ.
ನೈತಿಕ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲಾಗದೇ ಇದ್ದರೆ ಭಾರತ ಅಥವಾ ಅಮೆರಿಕದಂಥ ದೊಡ್ಡ ಮತ್ತು ಸಂಕೀರ್ಣವಾಗಿರುವ ದೇಶಗಳೂ ಅರ್ಥವಾಗುವುದಿಲ್ಲ. ನಾನೊಮ್ಮೆ `ಹಾರ್ಪರ್' ನಿಯತಕಾಲಿಕಕ್ಕಾಗಿ ವಾರಾಣಸಿಯಲ್ಲಿ ಸಂಭವಿಸಿದ್ದ ಹಿಂದೂ-ಮುಸ್ಲಿಮ್ ಗಲಭೆಯನ್ನು ಅಧ್ಯಯನ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ. ಸುಂದರವಾದ ಬನಾರಸ್ ರೇಷ್ಮೆ ಸೀರೆಗಳ ತಯಾರಿಕೆ ಈ ನಗರದ ಮುಖ್ಯ ಉದ್ಯಮ. ಮುಸ್ಲಿಮರು ಇವುಗಳನ್ನು ನೇಯುತ್ತಾರೆ. ಹಿಂದೂಗಳು ಮಾರಾಟ ಮಾಡುತ್ತಾರೆ.
ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ವ್ಯವಸ್ಥೆ. ಆದರೆ 1990ರ ಆರಂಭದಲ್ಲಿ ಈ ಸಂಬಂಧ ಮುರಿದುಬಿತ್ತು; ಗಲಭೆ ಸ್ಫೋಟಿಸಿತು, ಹಲವು ಡಝನ್ ಮುಸ್ಲಿಮರನ್ನು ಬಿಜೆಪಿಗೆ ಸೇರಿದ್ದ ಹಿಂದೂಗಳು ಕೊಂದು ಹಾಕಿದರು. ಈ ಗಲಭೆಗಳನ್ನು ಪ್ರಚೋದಿಸಿದ್ದ ಬಿಜೆಪಿಗೆ ಸೇರಿದ್ದ ಹಿಂದೂ ನಾಯಕನೊಬ್ಬನನ್ನು ಸಂದರ್ಶಿಸಲು ಆತನಲ್ಲಿ ಸಮಯ ಕೇಳಿದ್ದೆ. ಆತ ಒಂದು ಮುಂಜಾನೆ ತನ್ನ ಮನೆಗೆ ಆಹ್ವಾನಿಸಿದ. ಆತನ ಮನೆಯ ವೆರಾಂಡದಲ್ಲಿ ಮಾತನಾಡುತ್ತ ನಿಂತಿದ್ದ ಇಬ್ಬರು ಮುಸ್ಲಿಮರನ್ನು ದಾಟಿಕೊಂಡು ನಾನು ಒಳಗೆ ಹೋದೆ.
ಆ ಹಿಂದೂ ನಾಯಕ ಮುಸ್ಲಿಮರ ವಿರುದ್ಧ ಬೆಂಕಿಯುಗುಳಿದ. ಈ ತನಕ ನಾನು ಭಾರತದಲ್ಲಿ ಮುಸ್ಲಿಮರ ಬಗ್ಗೆ ಕೇಳದೇ ಇದ್ದ ಯಾವುದನ್ನೂ ಆತ ಹೇಳಲಿಲ್ಲ. ಮುಸ್ಲಿಮರು ಹೊರಗಿನವರು, ವಿಭಜನೆಯ ವೇಳೆ ಅವರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಎಂಬುದನ್ನೇ ಮತ್ತೆ ಹೇಳಿದ. ಈ ಸಂದರ್ಶನದಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡು ಮಾತುಕತೆ ಮುಗಿಸಲು ತೀರ್ಮಾನಿಸಿದ ನಾನು ಅವನಲ್ಲಿ ವೆರಾಂಡದಲ್ಲಿರುವ ಇಬ್ಬರು ಮುಸ್ಲಿಮರು ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದೆ. ಅದಕ್ಕೆ ಆತ `ಓ ಅವರಾ... ಅವರದ್ದೊಂದು ಆಸ್ತಿ ವಿವಾದವಿದೆ, ಅದನ್ನು ಬಗೆಹರಿಸಿಕೊಳ್ಳಲು ಬಂದಿದ್ದಾರೆ' ಎಂದ. ನಾನು `ನೀವು ಅವರನ್ನು ದ್ವೇಷಿಸುತ್ತೀರಿ ಅಂದುಕೊಂಡಿದ್ದೆ...' ಎಂದೆ. ಆತ `ಹೌದು ನಾನವರನ್ನೆಲ್ಲಾ ದ್ವೇಷಿಸುತ್ತೇನೆ' ಎಂದುತ್ತರಿಸಿದ.
ಮುಸ್ಲಿಮರು ತಮ್ಮ ಆಸ್ತಿ ವಿವಾದ ಬಗೆಹರಿಸಿಕೊಳ್ಳಲು ಅವರದೇ ಸಮುದಾಯದ ಯಾರ ಬಳಿಗಾದರೂ ಹೋದರೆ ಆತ ಯಾರೋ ಒಬ್ಬನ ಸಂಬಂಧಿಯಾಗಿರುವ ಅಥವಾ ಯಾರೋ ಒಬ್ಬನ ಪರವಾದ ನಿಲುವು ಹೊಂದಿರುವ ಸಾಧ್ಯತೆ ಇದೆ. ಈ ಹಿಂದೂ ವ್ಯಾಪಾರಿ ಮುಸ್ಲಿಮರೆಲ್ಲರನ್ನೂ ದ್ವೇಷಿಸುತ್ತಾನೆ ಎಂದು ಗೊತ್ತಿರುವುದರಿಂದ ಆತ ಯಾರದೇ ಪರವಾದ ನಿಲುವು ತಳೆಯಲಾರ. ಆದ್ದರಿಂದಲೇ ಆತ ಆಸ್ತಿ ವಿವಾದವನ್ನು ನಿಷ್ಪಕ್ಷಪಾತವಾಗಿ ಬಗೆಹರಿಸಬಲ್ಲ ಎಂಬ ನಂಬಿಕೆ ಅವರದ್ದು.
ವಿದೇಶೀ ಪತ್ರಕರ್ತರಿಗೆ ಭಾರತದಲ್ಲಿ ಹುಚ್ಚು ಹಿಡಿದುಬಿಡುವದೇ ಇಂಥ ಕಾರಣಗಳಿಂದ. ಜನರು ತಮ್ಮ ಮನಸ್ಸನ್ನು ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆಯಾಗಿಯೇ ವಿಭಾಗಿಸಿಟ್ಟುಕೊಳ್ಳಬಲ್ಲರು. ಆಷಾಢಭೂತಿ ಧೋರಣೆ ಎಂಬುದು ಇಲ್ಲಿ ಅವಗುಣವಲ್ಲ. ಭಾರತೀಯ ತಾತ್ವಿಕತೆಯಲ್ಲಿ `ಇದಾಗಿದ್ದರೆ ಅದಾಗಿರಲು ಸಾಧ್ಯವಿಲ್ಲ' ಎಂಬ ಸರಳ ತರ್ಕ ಇಲ್ಲವೇ ಇಲ್ಲ. ಅದು ನಿಜವಾಗಿರಬಹುದು, ಸುಳ್ಳಾಗಿರಬಹುದು, ಎರಡೂ ಆಗಿರಬಹುದು ಅಥವಾ ಎರಡೂ ಆಗಿಲ್ಲದೇ ಇರಬಹುದು. ಕಾದಂಬರಿಕಾರರಿಗೆ ಮನುಷ್ಯನ ಮಟ್ಟಿಗೆ ಇದು ನಿಜ ಎಂಬುದು ಗೊತ್ತಿರುತ್ತದೆ.
ನಾನು ಅಯೋವಾ ರೈಟರ್ಸ್ ವರ್ಕ್‌ಶಾಪ್‌ನಲ್ಲಿ ಎಂಎಫ್‌ಎ ಪಡೆಯುವ ಹೊತ್ತಿಗೆ ಸಣ್ಣ ಕಥೆ ಇಲ್ಲವೇ ಕಾದಂಬರಿ ಮಾತ್ರ ಮುಖ್ಯ ಅಂದುಕೊಂಡಿದ್ದೆ. ಸೃಜನೇತರ ಬರವಣಿಗೆ ಎಂಬುದು ಬರೇ ಪತ್ರಿಕಾವೃತ್ತಿ ಎಂಬುದು ನನ್ನ ಅನಿಸಿಕೆಯಾಗಿತ್ತು. ಕಾದಂಬರಿ ಮಾತ್ರ ಬಾಳಿಕೆ ಬರುವಂಥದ್ದು ಎಂಬ ವಿಷಯದಲ್ಲಿ ನನಗೆ ಅನುಮಾನವೇ ಉಳಿದಿರಲಿಲ್ಲ. ನಮಗೀಗ ಹತ್ತೊಂಬತ್ತನೇ ಶತಮಾನದ ರಷ್ಯಾದ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿದರೆ ನಾವು ಆ ಕಾಲದ ವೃತ್ತಪತ್ರಿಕೆಗಳನ್ನು ಓದುವುದಿಲ್ಲ, ಬದಲಿಗೆ ನಾವು ಟಾಲ್ಸ್‌ಟಾಯ್ ಮತ್ತು ಚೆಕಾಫ್‌ನನ್ನು ಓದುತ್ತೇವೆ. ಒಂದು ವೇಳೆ ಇತ್ತೀಚೆಗೆ ವಿ.ಎಸ್. ನೈಪಾಲ್ ಅವರು ಹೇಳಿದಂತೆ ಕಾದಂಬರಿ ಸತ್ತಿದೆ ಎಂದಾದರೆ ನಾನು ಶವ ಪ್ರೇಮಿ.
ನಾನೀಗ ಬೈಟೆಕ್ಸ್‌ಚ್ಯುವಲ್. ಅಂದರೆ ಸೃಜನಶೀಲ ಮತ್ತು ಸೃಜನೇತರ ಕೃತಿಗಳೆರಡನ್ನೂ (ಕಥೆ ಮತ್ತು ಕಥೇತರ ಬರೆಹ) ಬರೆಯುತ್ತೇನೆ. ಆರ್ವೆಲ್, ನೈಪಾಲ್, ಟಾಮ್ ವೂಲ್ಪ್‌ರಂತೆ ಎರಡನ್ನೂ ಚೆನ್ನಾಗಿ ರಚಿಸುವವರು ಬಹಳ ಕಡಿಮೆ. ಇಲ್ಲಿರುವ ಪ್ರಲೋಭನೆಯೆಂದರೆ ಸೃಜನೇತರ ಬರವಣಿಗೆಯೊಳಕ್ಕೆ ಕಥೆ ಸೋರುವಂತೆ ಮಾಡುವುದು. ಜೋಸೆಫ್ ಮಿಷೆಲ್ ಮತ್ತು ಜಾನ್ ಬ್ರೆಂಟ್‌ನಂಥ ಲೇಖಕರು ತಮ್ಮ ಪಾತ್ರಗಳನ್ನು ಫಿಕ್ಷನಲೈಜ್ ಮಾಡಿ ಅವುಗಳನ್ನು ಪೂರ್ಣಗೊಳಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಕ್ರಿಯೆಯಲ್ಲಿ ಕಥನವನ್ನು ಕುತೂಹಲಕರಗೊಳಿಸುವುದು ಅಥವಾ ಒಟ್ಟು ಕಥನದಲ್ಲಿರುವ ಶೂನ್ಯಗಳನ್ನು ತಮ್ಮದೇ ಆದ ಆವಿಷ್ಕಾರಗಳ ಮೂಲಕ ತುಂಬಿಸಿದ್ದಾರೆ.
ನಾನು ಜೊಸೆಫ್ ಮಿಷೆಲ್‌ನನ್ನು ಬಹಳ ಗೌರವದಿಂದ ಕಾಣುತ್ತೇನೆ. ಆತನ ನ್ಯೂಯಾರ್ಕ್ ಕುರಿತ ಪುಸ್ತಕ ನನ್ನ ಮುಂಬೈ ಕುರಿತ ಪುಸ್ತಕಕ್ಕೆ ಮಾದರಿಯಾಗಿತ್ತು. ಆದರೆ ನಾನು ಸೃಜನೇತರ ಬರವಣಿಗೆಯಲ್ಲಿ ನನ್ನದೇನನ್ನೂ ಸೇರಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದನ್ನು ನಿಲ್ಲಿಸುವುದೆಲ್ಲಿ ಎಂಬ ಪ್ರಶ್ನೆ ನನಗಿದೆ. ಒಂದು ಪಾತ್ರದ ಬದುಕಿನ ಎರಡು ಘಟನೆಗಳು ನನ್ನಲ್ಲಿದ್ದರೆ ಅವರೆಡರ ನಡುವೆ ಏನಾಯಿತು ಎಂದು ಮತ್ತೆ ಅದೇ ಪಾತ್ರವನ್ನು ಭೇಟಿ ಮಾಡಿ ಕೇಳಲು ಸಾಧ್ಯವಿಲ್ಲ.
ಇಂಥ ಸಂದರ್ಭದಲ್ಲಿ ಒಂದು ನಿಜವೂ ಆಗಿರಬಹುದಾದ ಕಾಲ್ಪನಿಕ ದೃಶ್ಯವೊಂದನ್ನು ಸೇರಿಸುವ ಪ್ರಲೋಭನೆಯಿರುತ್ತದೆ. ಒಂದು ವೇಳೆ ಇಂಥದ್ದೊಂದು ದೃಶ್ಯವನ್ನು ನಾನು ಸೃಷ್ಟಿಸಿಬಿಟ್ಟರೆ ಇಡೀ ಕಥನವನ್ನೇ ಹಾಗೆಯೇ ಪೂರ್ಣಗೊಳಿಸುವುದಕ್ಕೆ ನನಗೆ ಇರುವ ಅಡ್ಡಿಯಾದರೂ ಏನು? ನನ್ನ ದೃಷ್ಟಿಯಲ್ಲಿ ಸೃಜನಶೀಲ ಕೃತಿಯೊಂದನ್ನು ರಚಿಸುವುದು ಸೃಜನೇತರ ಕೃತಿಯ ಮಿತಿಗಳನ್ನು ತಿಳಿಸಿಕೊಡುತ್ತದೆ; ಆವಿಷ್ಕಾರದ ಅಭ್ಯಾಸವೇ ನೀವು ವಾಸ್ತವದ ಮರುಮಂಡನೆಯ ಸಂದರ್ಭದಲ್ಲಿ ನಿಮ್ಮನ್ನು ಪ್ರಾಮಾಣಿಕವಾಗಿಟ್ಟಿರುತ್ತದೆ.
ಸೃಜನಶೀಲ ಅಥವಾ ಸೃಜನೇತರವಾದ ಯಾವುದೇ ಸಂದರ್ಭವನ್ನು ತೆಗೆದುಕೊಂಡು ಮೂಲಭೂತವಾಗಿ ಅದು ಮನುಷ್ಯ ಜೀವಿ ತನ್ನ ವೈಯಕ್ತಿಕ ಮತ್ತು ರಾಜಕೀಯ ಇತಿಹಾಸದ ಪಾದದಡಿಯಲ್ಲಿ ನಡೆಸುವ ಹೋರಾಟ. ಹಿಂದೂ ಪುರಾಣಗಳ ಕಲ್ಪನೆಯಂತೆ ಶಿವ ಬೆಂಕಿಯ ಜ್ವಾಲೆಗಳ ವೃತ್ತದ ನಡುವೆ ಒಂಟಿ ಕಾಲಿನಲ್ಲಿ ನರ್ತಿಸುತ್ತಾನೆ. ಅವನ ಕಾಲ ಕೆಳಗೆ ಒಬ್ಬ ಕುಬ್ಜ ಜೀವಿಯಿದ್ದಾನೆ (ಅಂಧಕಾರದ ಪ್ರತೀಕವಾದ ಅಪಸ್ಮಾರ -ಅನುವಾದಕ).
ಈ ಕುಬ್ಜ ತನ್ನ ಮೇಲಿರುವ ಇತಿಹಾಸದ ಬೃಹತ್ ಪಾದಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಅವನ ನಿಯಂತ್ರಣದಲ್ಲಿರುವ ಮತ್ತು ನಿಯಂತ್ರಣದಲ್ಲಿ ಇಲ್ಲದೇ ಇರುವ ಚರಿತ್ರೆಯಿಂದ ಮುಕ್ತನಾಗುವ ಈ ಹೋರಾಟಕ್ಕೆ ಲೇಖಕರಾದ ನಾವು ಸಾಕ್ಷಿಗಳಾಗುತ್ತಾ ದಾಖಲಿಸುತ್ತಿರುತ್ತೇವೆ. ಆದ್ದರಿಂದ ಬರಹಗಾರನಾದವನು ಮುಂಬೈಯ ಕೊಳೆಗೇರಿಯಲ್ಲಿರುವ ವ್ಯಕ್ತಿಯನ್ನೂ ಬಾಧಿಸುವ ಜಾಗತಿಕವಾದ ವ್ಯಾಪಾರ ನೀತಿ ಮತ್ತು ನಾಗರಿಕತೆಗಳ ಸಂಘರ್ಷವನ್ನು ಅರ್ಥ ಮಾಡಿಕೊಳ್ಳುವಂತೆಯೇ ಅವನ ವೈಯಕ್ತಿಕ ಸಂಗತಿಗಳಾದ ಪ್ರೇಮ ಮತ್ತು ಅವನಿಗೆ ಇಷ್ಟವಾದ ಹಾಡು ಯಾವುದು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು.
ಮನುಷ್ಯ ತನ್ನ ಇತಿಹಾಸದಿಂದ ವಿಮೋಚನೆ ಪಡೆಯುವುದು ಒಂದು ಆಹ್ಲಾದಕರ ಕ್ಷಣ. ನ್ಯೂಯಾರ್ಕ್‌ನಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ನಡೆದ ಒಂದು ರ‌್ಯಾಲಿ ನನಗಿನ್ನೂ ನೆನಪಿದೆ. ಅಹಮದೌ ಡಿಯೋಲೋ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರ‌್ಯಾಲಿಯನ್ನು ಸಂಘಟಿಸಲಾಗಿತ್ತು. ಆ ಮುಂಜಾನೆ ಪೊಲೀಸ್ ಠಾಣೆಯ ಎದುರು ಬೃಹತ್ ಜನಸ್ತೋಮ ನೆರೆದಿತ್ತು.
ಮಾವೋವಾದಿಗಳಿಂದ ಆರಂಭಿಸಿ ವಲಸೆ ಹಕ್ಕುಗಳ ಹೋರಾಟಗಾರ ಸಂಘಟನೆಗಳ ತನಕದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒಬ್ಬರಾದ ನಂತರ ಒಬ್ಬರು ತಮ್ಮ ಭಾಷಣದಲ್ಲಿ ಎನ್‌ವೈಪಿಡಿಯ ತಂತ್ರಗಳನ್ನು ಖಂಡಿಸುತ್ತಿದ್ದರು. ಆಗ ಸಲೀಮ್ ಎಂಬ ಅಧೈರ್ಯದ ಯುವ ಮೇಲೆದ್ದು ನಿಂತ; ಗುತ್ತಿಗೆ ಚಾಲಕರ ಬಳಗದ ಈ ಪ್ರತಿನಿಧಿಯನ್ನು ಕಾರ್ಯಕ್ರಮದ ನಿರ್ವಾಹಕ ವೇದಿಕೆಗೆ ಸ್ವಾಗತಿಸಿದ. ಸಲೀಮ್ ಒಬ್ಬ ಪಾಕಿಸ್ತಾನಿ, ಆತ ಯಾವತ್ತೂ ಇಷ್ಟು ದೊಡ್ಡ ಜನಸ್ತೋಮವನ್ನುದ್ದೇಶಿಸಿ ಮಾತನಾಡಿರಲಿಲ್ಲ. ಸಲೀಮ್ ವೇದಿಕೆಯತ್ತ ಸಾಗುತ್ತಿದ್ದಂತೆಯೇ ಚಪ್ಪಾಳೆಯ ಅಲೆಗಳೆದ್ದವು. ಆತ ವೇದಿಕೆಯ ಮೇಲೆ ಹತ್ತಿ ನಿಂತು ಚಪ್ಪಾಳೆಯ ಅಲೆಗಳನ್ನೆಬ್ಬಿಸುತ್ತಿರುವ ಬೃಹತ್ ಜನಸ್ತೋಮವನ್ನೊಮ್ಮೆ ನೋಡಿದ. ಅವರೆಲ್ಲಾ ಸಲೀಮ್ ಟ್ಯಾಕ್ಸಿ ಚಾಲಕರ ಹಕ್ಕುಗಳನ್ನು ಪೊಲೀಸರು ಹೇಗೆ ದಮನಿಸುತ್ತಾರೆ ಎಂಬುದರ ಕುರಿತು ಮಾತನಾಡಬೇಕೆಂದು ಬಯಸಿದ್ದರು. ಸಲೀಮ್ ಹಿಂದೆಂದಿಗಿಂತಲೂ ಸಬಲನಾದವನಂತೆ ನಿಂತು ಮಾತನಾಡಿದ- `ನಾನು... ನಾನು ಗೇ!'
ಒಂದು ಕ್ಷಣ ಮೌನ, ಆಮೇಲೆ ಹಿಂದಿಗಿಂತಲೂ ಹೆಚ್ಚು ಜೋರಾದ ಚಪ್ಪಾಳೆಯ ಸದ್ದು. ಈಗ ಠಾಣೆಯೆದುರು ನಿಂತಿದ್ದ ಪೊಲೀಸರೂ ಚಪ್ಪಾಳೆ ಹೊಡೆಯುತ್ತಿದ್ದರು. ಸಲೀಮ್ ಮತ್ತೆ ಮತ್ತೆ `ಐ ಆಂ ಗೇ' ಎಂದ. ಅವನು ತನ್ನ ಇತಿಹಾಸದ ಭಾರವನ್ನು ಕಳಚಿಕೊಂಡಿದ್ದ. ಪಾಕಿಸ್ತಾನದಲ್ಲಿ ಯಾವತ್ತೂ ಸಾಧ್ಯವಿಲ್ಲದೇ ಇರುವುದನ್ನು ಸಾಧಿಸಿದ್ದ. ಈ ಹೊತ್ತಿನಲ್ಲಿ ಅವನು ತನ್ನೊಳಗಿನ ಅತ್ಯಂತ ಮಾನವೀಯವಾದುದನ್ನು ಹೇಳಿಕೊಂಡಿದ್ದ. ಒಬ್ಬ ಲೇಖಕನಾಗಿ ನನ್ನ ಮಟ್ಟಿಗೆ ಇದೊಂದು ಅತ್ಯಂತ ಸುಂದರ ಕ್ಷಣ. ಸಲೀಮ್ ಚರಿತ್ರೆಯ ಭಾರವನ್ನು ಕಳಚಿಕೊಂಡಿದ್ದ. ಯು.ಆರ್. ಅನಂತಮೂರ್ತಿ ಒಮ್ಮೆ ನನ್ನಲ್ಲಿ ಹೇಳಿದಂತೆ ವೈಯಕ್ತಿಕ ಚರಿತ್ರೆಯ ಬೃಹತ್ ಪಾದಗಳಡಿಯಿಂದ ಆತ ಹೊರಬಂದಿದ್ದ, ಅವನು ನೀಡಬೇಕಾದ ಸಂದೇಶದ ಕುರಿತ ನಿರೀಕ್ಷೆಗಳ ಭಾರವನ್ನು ಕಳಚಿಕೊಂಡಿದ್ದ. ಇದೊಂದು ಕಾದಂಬರೀಯ ಕ್ಷಣ. ನಾನಿದನ್ನು ಸೃಷ್ಟಿಸಬೇಕಾಗಿಲ್ಲ. ನಾನು ಆ ಕ್ಷಣದಲ್ಲಿ ನನ್ನ ಧರ್ಮವನ್ನು ನಿರ್ವಹಿಸುತ್ತಾ ಅಲ್ಲಿರಬೇಕಷ್ಟೆ!
ಕಥೇತರ ಕೃತಿಗಳಿಗೆ ಈಗ ವಾತಾವರಣ ಪಕ್ವವಾಗಿದೆ. ನ್ಯೂಯಾರ್ಕ್ ಟೈಮ್ಸ ಬುಕ್ ರಿವ್ಯೆ ಮತ್ತು ಅಟ್ಲಾಂಟಿಕ್ ಮ್ಯಾಗಝಿನ್‌ಗಳೆರಡೂ ಕಥೇತರ ಬರವಣಿಗೆಗೆ ಒತ್ತು ನೀಡುವುದಾಗಿ ಘೋಷಿಸಿಕೊಂಡಿವೆ. ಕಥೇತರ (ನಾನ್‌ಫಿಕ್ಷನ್) ಎಂದು ಗುರುತಿಸಲಾಗುವ ಈ ಪ್ರಕಾರ ಇನ್ನೂ ಹೊಸತು ಮತ್ತು ಇದು ಕಾದಂಬರಿಗಿಂತ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದೆ. ಹಾಗೆಯೇ ಇದು ನಮ್ಮ ಮಾಹಿತಿಯ ಹಸಿವನ್ನು ಇಂಗಿಸುವ ಪ್ರಕಾರವೂ ಹೌದು.
ನಾನು ಭಾರತದಲ್ಲಿ ಬಾಲ್ಯವನ್ನು ಕಳೆದ ದಿನಗಳಲ್ಲಿ ಆರ್ಥರ್ ಹೇಲಿ ಮತ್ತು ಜೇಮ್ಸ ಮಿಷೆನೆರ್ ಅವರ ಕೃತಿಗಳನ್ನು ಕಥೆಗಿಂತ ಹೆಚ್ಚಾಗಿ ಅವುಗಳೊಳಗೆ ಇರುವ ಮಾಹಿತಿಗಾಗಿ ಓದುತ್ತಿದ್ದೆ. ಇವು ಕಾದಂಬರಿಗಳು ಎನ್ನುವುದಕ್ಕಿಂತ ಹೆಚ್ಚಾಗಿ ಸಹಾಯಕರ ತಂಡಗಳನ್ನು ಬಳಸಿಕೊಂಡು ಹಲವು ಸಂಶೋಧನಾ ಪ್ರಬಂಧಗಳನ್ನು ಒಟ್ಟು ಸೇರಿಸಿದಂಥ ಕೃತಿಗಳು. ಇವುಗಳ ಮೂಲಕವೇ ನಾನು ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಂಡೆ, ಹವಾಯ್‌ನ ಚರಿತ್ರೆ ಗೊತ್ತಾಯಿತು. ಏರ್ ಟ್ರಾಫಿಕ್ ಕಂಟ್ರೋಲ್‌ನ ಒಳಗನ್ನು ಅರಿತೆ.
ಆದರೆ ನಾನು ಬೆಳೆದಂತೆ ಮಾಹಿತಿಗಾಗಿ ಮಾಹಿತಿಯ ಮಿತಿಗಳ ಅರಿವಾಯಿತು. ಒಮ್ಮೆ ಕಾದಂಬರಿಕಾರ ಅಮಿತಾವ್ ಘೋಷ್ ತಾವು ಕಾದಂಬರಿಗೆ ಬೇಕಿರುವ ಮಾಹಿತಿಗಾಗಿ ನಡೆಸುವ ಭಾರೀ ಪ್ರಮಾಣದ ಸಂಶೋಧನೆಯ ಬಗ್ಗೆ ಹೇಳುತ್ತಾ ಕೊನೆಗೆ ಕಾದಂಬರಿಯ ಅಂತಿಮ ಕರಡನ್ನು ಸಿದ್ಧಪಡಿಸುವಾಗ ಕೆಲವು ತಪ್ಪುಗಳನ್ನು ಪ್ರಜ್ಞಾಪೂರ್ವಕವಾಗಿ ಸೇರಿಸುತ್ತೇನೆ ಎಂದಿದ್ದರು. ಅವರಿಗೆ ತಮ್ಮ ಕಾದಂಬರಿಗಳು ಇರುವ ಜಗತ್ತನ್ನೇ ಪ್ರತಿಫಲಿಸದೇ ಅವುಗಳದ್ದೇ ಆದ ಒಂದು ಜಗತ್ತನ್ನು ಸೃಷ್ಟಿಸಬೇಕಿತ್ತು. ಇದು ನನಗೊಂದು ಹಳೆಯ ಭಾರತೀಯ ಜಾನಪದ ಕಥೆಯನ್ನು ನೆನಪಿಸುತ್ತಿದೆ.
ಒಬ್ಬ ಶಿಲ್ಪಿ ಹಲವು ವರ್ಷಗಳ ದುಡಿಮೆಯ ನಂತರ ಒಂದು ಅತ್ಯಂತ ಪರಿಪೂರ್ಣವಾದ ಶಿವನ ವಿಗ್ರಹವನ್ನು ಕೆತ್ತಿ ಪೂರ್ಣಗೊಳಿಸುತ್ತಾನೆ. ತನ್ನ ಸೃಷ್ಟಿಯನ್ನು ಕಂಡು ನಿಬ್ಬೆರಗಾಗಿ ನಿಲ್ಲುತ್ತಾನೆ. ಅದು ಎಷ್ಟರ ಮಟ್ಟಿಗೆ ಪರಿಪೂರ್ಣವಾಗಿ ಮತ್ತು ಜೀವಂತವಾಗಿತ್ತೆಂದರೆ ಅದು ನೆಲದಿಂದ ಮೇಲೇರಿ ಸ್ವರ್ಗಾರೋಹಣವನ್ನಾರಂಭಿಸಿತು. ಅದು ಭೂಮಿಯ ಮೇಲಿರಲಾರದಷ್ಟು ನಿಖರವಾದ ಶಿವನ ರೂಪ. ಮೇಲೇರತೊಡಗಿದ ಶಿವನ ವಿಗ್ರಹದತ್ತ ಶಿಲ್ಪಿ ಕಲ್ಲೊಂದನ್ನು ಎಸೆದ. ವಿಗ್ರಹದ ಎಡ ಹೆಬ್ಬೆರಳಿನಲ್ಲಿ ಚಿಪ್ಪೆದ್ದು ಶಿಲ್ಪ ಭಿನ್ನವಾಯಿತು. ಅಂದರೆ ಅದರ ನಿಖರತೆಯನ್ನು ಕಳೆದುಕೊಂಡು ವಿಗ್ರಹ ಭೂಮಿಗಿಳಿಯಿತು.
ಸೆಪ್ಟೆಂಬರ್ 11ರ ನಂತರ ವಾಸ್ತವದ ನಾಟಕೀಯತೆ ಎಂಬುದು ಹೊಸತನ್ನು ಸೃಷ್ಟಿಸುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ನಮ್ಮನ್ನು ಪರವಶಗೊಳಿಸಿದೆ. ಎರಡು ವಿಮಾನಗಳು ಎರಡು ಬೃಹತ್ ಕಟ್ಟಡಗಳಿಗೆ ಢಿಕ್ಕಿ ಹೊಡೆದು ಅವುಗಳನ್ನು ಉರುಳಿಸುವುದು ಮತ್ತು ಅದರ ಫಲವಾಗಿ ಇಡೀ ಜಗತ್ತೇ ಬದಲಾಗುವುದಕ್ಕೆ ಸ್ಪರ್ಧಿಸುವಂತೆ ಯಾವುದನ್ನು ನಾವು ಸೃಜಿಸಬಹುದು? ಈ ಎಲ್ಲಾ ಅಲ್ ಖೈದಾ ಮತ್ತು ಇರಾಕ್‌ನ ಕುರಿತ ಪುಸ್ತಕಗಳು ಬಹಳ ಚೆನ್ನಾಗಿ ಮಾರಾಟವಾಗುತ್ತವೆ. ಏಕೆಂದರೆ ಜನರಿಗೆ ಬದಲಾದ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಏಕೆ ಅರ್ಥಮಾಡಿಕೊಳ್ಳಬೇಕಿದೆಯೆಂದರೆ ಅವರ ಅಸ್ತಿತ್ವವೇ ಪಣಕ್ಕಿದೆ. ಕಥೇತರ ಕೃತಿಗಳು ಸೃಜನಶೀಲ ಕೃತಿಗಳನ್ನು ಹಿಂದಕ್ಕೆ ಹಾಕುವ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ ಈ ಕೃತಿಗಳು ಸೃಜನಶೀಲ ಕೃತಿಗಳು ನೀಡುವ ಆನಂದವನ್ನೂ ಕೊಡಬೇಕು. ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬ ಪತ್ರಕರ್ತನೂ ಸಣ್ಣ ಕಥೆ ಬರೆಯುವ ಕೋರ್ಸ್ ಮಾಡಬೇಕು. ಕನಿಷ್ಠ ಅದರ ಒಂದು ಸೆಮಿಸ್ಟರನ್ನಾದರೂ ಪೂರ್ಣಗೊಳಿಸಬೇಕು. ಒಂದು ಕಥನದ ಶಿಲ್ಪವನ್ನು ಹೇಗೆ ರೂಪಿಸಬೇಕು, ಒಂದು ವಾಕ್ಯದ ಶಿಲ್ಪ ಯಾವುದಿರಬೇಕು ಎಂದು ಅರ್ಥಮಾಡಿಕೊಳ್ಳಲು ಇದು ಅಗತ್ಯ.
ಕೊನೆಗೂ ಜನರು ಓದುವುದು ಕೇವಲ ಮಾಹಿತಿಯನ್ನಲ್ಲ. ಈ ಪಠ್ಯದ ಓದಿನಲ್ಲಿ ಅವರೊಂದು ಆನಂದವನ್ನೂ ಕಂಡುಕೊಳ್ಳಬೇಕಾಗಿದೆ. ಮಹಾನ್ ಕಥೇತರ ಬರೆಹಗಾರನಾದ ಎ.ಜೆ. ಲೀಬ್ಲಿಂಗ್‌ರಂಥವರು ಅರ್ಥ ಮಾಡಿಕೊಂಡದ್ದು ಇದನ್ನೇ. ಈ ಕೃತಿಗಳ ಒಳಗೆ ಕಾವ್ಯವಿರಬೇಕಾಗುತ್ತದೆ, ಇವುಗಳ ಒಳಗೆ ಕಾದಂಬರಿಯೊಂದರ ಚಲನೆ ಇರಬೇಕಾಗುತ್ತದೆ. ಹಾಗೆಯೇ ಒಂದು ಸಂಶೋಧನಾ ಮಹಾಪ್ರಬಂಧಕ್ಕೆ ಅಗತ್ಯವಿರುವ ಸಂಶೋಧನೆಯೂ ಇದರಲ್ಲಿಬೇಕು.
ಕೊನೆಯಲ್ಲಿ ಪತ್ರಕರ್ತನಾಗಿ ನನ್ನ ಧರ್ಮ ಮತ್ತು ಕಾದಂಬರಿಕಾರನಾಗಿ ನನ್ನ ಧರ್ಮಗಳೆರಡೂ ಒಂದೇ ಆಗಿಬಿಡುತ್ತವೆ. ನಾವು ಸತ್ಯ ಹೇಳಬೇಕಷ್ಟೆ. ಝೆಕ್ ಕವಿ ಜರಾಸ್ಲೋವ್ ಸೀಫೆರ್ಟ್ ಹೇಳಿದಂತೆ `ಉಳಿದೆಲ್ಲರಿಗೂ ಸತ್ಯ ಹೇಳದೇ ಇರುವುದು ಒಂದು ತಂತ್ರಗಾರಿಕೆ ಮಾತ್ರ. ಆದರೆ ನಿಜ ಹೇಳದ ಬರೆಹಗಾರ- ಅವನು ಮೌನವಾಗಿದ್ದರೂ- ಸುಳ್ಳು ಹೇಳುತ್ತಿರುತ್ತಾನೆ'. ರಷ್ಯಾದ ಕವಯತ್ರಿ ಅನ್ನ ಅಹ್ಮತೋವಾ ತನ್ನ ಮಹಾನ್ ಪದ್ಯRequiemನ ಆರಂಭದಲ್ಲಿ ಇದನ್ನು ಬಹಳ ಚೆನ್ನಾಗಿ ವಿವರಿಸಿದ್ದಾಳೆ. ಆಕೆ ಬರೆಯುತ್ತಾಳೆ:
ಯೆಜ್ಹೋವ್ ದಬ್ಬಾಳಿಕೆಯ ಭೀಕರ ವರ್ಷಗಳಲ್ಲಿ ನಾನು ಲೆನಿನ್‌ಗ್ರಾಡ್‌ನ ಜೈಲು ಸಾಲುಗಳೊಳಗಿದ್ದೆ. ಒಂದು ದಿನ ಯಾರೋ ನನ್ನನ್ನು ಗುರುತುಹಿಡಿದರು. ಚಳಿಯ ತೀವ್ರತೆಗೆ ನೀಲಿಗಟ್ಟಿದ್ದ ತುಟಿಯ ಮಹಿಳೆಯೊಬ್ಬಳು ನನ್ನ ಹಿಂದೆ ನಿಂತಿದ್ದಳು. ಆಕೆಗೆ ನನ್ನ ಹೆಸರು ಗೊತ್ತಿರಲಿಲ್ಲ, ನಮಗೆಲ್ಲರಿಗೂ ಸಾಮಾನ್ಯವಾಗಿದ್ದ ಮಂಕಿನಿಂದ ಹೊರಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು (ನಾವು ಅಲ್ಲಿ ಮಾತಾಡುತ್ತಿದ್ದುದೇ ಹಾಗೆ): `ನೀನಿದನ್ನು ವಿವರಿಸಬಲ್ಲೆಯಾ?'
ನಾನು ಉತ್ತರಿಸಿದೆ `ಹೌದು ನಾನು ವಿವರಿಸಬಲ್ಲೆ'.
ಆಮೇಲೆ ಅವಳ ಮುಖದ ಮೇಲೆ ಹಿಂದೆಂದೋ ಇದ್ದ ಮಂದಹಾಸದಂಥ ಏನೋ ಒಂದು ಹಾದು ಹೋದಂತಾಯಿತು.
ಹಾಗಾಗಿ ಅರುಂಧತಿ ರಾಯ್ ಅವರಿಗೆ ನನ್ನ ಉತ್ತರ ಇಷ್ಟೇ: ನಾನು ವಿವರಿಸಬಲ್ಲೆ. ನಾನೊಬ್ಬನೇ ಹಿಂಸೆಗೆ ಗುರಿಯಾಗುತ್ತಿದ್ದವರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲದಿರಬಹುದು. ಆದರೆ ನಾನದನ್ನು ವಿವರಿಸಬಲ್ಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.