ADVERTISEMENT

ರಾಜಕೀಯ ಅಧಿಕಾರದ ದಾಹ - ಭಾವಜಗತ್ತಿನ ನಾಶ

ನೆಲಸಿರಿ

ನರಹಳ್ಳಿ ಬಾಲಸುಬ್ರಹ್ಮಣ್ಯ
Published 4 ಮೇ 2013, 19:59 IST
Last Updated 4 ಮೇ 2013, 19:59 IST

ಕಳೆದ ಸಂಚಿಕೆಯಲ್ಲಿ ನಾನು `ಕವಿರಾಜಮಾರ್ಗ'ದ ಬಗ್ಗೆ ಚರ್ಚಿಸುತ್ತ `ಕವಿರಾಜಮಾರ್ಗ'ವನ್ನು ಇಂದು ನಾವು ಕಾವ್ಯಲಕ್ಷಣ ಗ್ರಂಥವಾಗಿ, ಸಾಂಸ್ಕೃತಿಕ ಪಠ್ಯವಾಗಿ ಮಾತ್ರವಲ್ಲದೆ, ರಾಜಕೀಯ ಪಠ್ಯವಾಗಿಯೂ ಪರಿಭಾವಿಸುವ ಅಗತ್ಯವಿದೆ; ನೃಪತುಂಗನ ಕಾಲದಲ್ಲಿ ಇತಿಹಾಸದಲ್ಲಿ ಬಹು ಅಪರೂಪವೆನ್ನುವಂತೆ ಸಾಹಿತ್ಯ ಮತ್ತು ರಾಜಕೀಯ ಸಹಧಾರೆಗಳಾಗಿ ಒಂದನ್ನೊಂದು ಪ್ರಭಾವಿಸುತ್ತ ಸಮೀಕರಣಗೊಂಡಿದ್ದವು. ಕವಿ ಹಾಗೂ ರಾಜ ಕೂಡಿ ರೂಪಿಸಿದ ಮಾರ್ಗ `ಕವಿರಾಜಮಾರ್ಗ' ಎಂದು ಪ್ರತಿಪಾದಿಸಿದ್ದೆ.

ಇದಕ್ಕೆ ಸೃಜನಶೀಲವಾಗಿ ಪ್ರತಿಕ್ರಿಯಿಸುತ್ತ ನಮ್ಮ ಖ್ಯಾತ ಸಂಶೋಧಕರಾದ ಎಂ.ಎಂ. ಕಲಬುರ್ಗಿಯವರು `ಕವಿರಾಜಮಾರ್ಗ'ದ ರಚನಾ ವಿನ್ಯಾಸವನ್ನು ಪರಿಶೀಲಿಸಿದರೆ ರಾಜಕೀಯ ಹಾಗೂ ಸಾಹಿತ್ಯದ ಸಂಬಂಧವನ್ನು ಮತ್ತೊಂದು ರೀತಿ ವ್ಯಾಖ್ಯಾನಿಸಲು ಸಾಧ್ಯವಿದೆ ಎಂದು ನನ್ನೊಡನೆ ಚರ್ಚಿಸಿದರು. `ಕವಿರಾಜಮಾರ್ಗ' ಕೃತಿಯ ಪ್ರತಿ ಪರಿಚ್ಛೇದದ ಕಡೆಯಲ್ಲಿ ಬರುವ `ಇದು ಪರಮ ಶ್ರೀ ನೃಪತುಂಗ ದೇವಾನುಮತಮಪ್ಪ...' ಎಂಬ ಮಾತು ನೃಪತುಂಗ ಚಕ್ರವರ್ತಿಯ ಒಪ್ಪಿಗೆಯನ್ನು ಪಡೆದು ಎಂಬ ಅರ್ಥವನ್ನು ನೀಡುತ್ತದೆ. ಅಂದರೆ ಶ್ರೀ ವಿಜಯ ನೃಪತುಂಗನ ಒಪ್ಪಿಗೆ ಪಡೆದು ಈ ಕೃತಿ ಪ್ರಕಟಿಸಿರಬೇಕು. ಪ್ರಭುತ್ವ ಸೃಜನಶೀಲತೆಯನ್ನು ನಿಯಂತ್ರಿಸುತ್ತಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ಸಾಹಿತ್ಯ ಪ್ರಕಟಣೆಯಲ್ಲಿ ಒಂದು ರೀತಿಯ ಸೆನ್ಸಾರ್‌ಶಿಪ್ ಇದ್ದಿರಬೇಕು ಎಂದು ವಿವರಿಸಿದರು.

ಇಂತಹ ಅನೇಕ ಅನುಸಂಧಾನಗಳಿಗೆ ಅವಕಾಶವಿದೆ ಎಂದೇ ಇಂದಿಗೂ `ಕವಿರಾಜಮಾರ್ಗ' ಮಹತ್ವದ ಕೃತಿ. ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಕಲಬುರ್ಗಿಯವರ ವ್ಯಾಖ್ಯಾನದ ಮಹತ್ವ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ನನಗೆ ಲೋಹಿಯಾ ಅವರು ಸೃಜನಶೀಲತೆ ಹಾಗೂ ವ್ಯವಸ್ಥೆಯ ಸಂಬಂಧವನ್ನು ವ್ಯಾಖ್ಯಾನಿಸಿದ್ದು ನೆನಪಾಗುತ್ತದೆ: ಸೃಷ್ಟಿಯೆಂದರೆ ಸ್ವತಂತ್ರವಾದ ಬದುಕು, ಧೀರೋದಾತ್ತವಾದ ಬದುಕು -ಇದು ರಾಮಮನೋಹರ ಲೋಹಿಯಾ ಸೃಜನಶೀಲತೆಯ ಬಗ್ಗೆ ಇರಿಸಿಕೊಂಡಿದ್ದ ಗಾಢನಂಬಿಕೆ. ಜಡವಾದ ರೂಢಿಗತ ಸಮಾಜದಲ್ಲಿ ಚಲನೆ ಉಂಟಾಗಬೇಕಾದರೆ ಮನುಷ್ಯನನ್ನು ಸೃಜನಶೀಲನನ್ನಾಗಿಸುವ ಅಗತ್ಯವಿದೆಯೆಂದು ಅವರು ಭಾವಿಸಿದ್ದರು.

ಸೃಜನಶೀಲ ಮನಸ್ಸು ದಾಸ್ಯವನ್ನು ಕಿತ್ತೊಗೆಯುವ, ಪಟ್ಟಭದ್ರ ವ್ಯವಸ್ಥೆಯನ್ನು ಪ್ರತಿಭಟಿಸುವ, ಅಧೀನ ಮನೋಭಾವವನ್ನು ಮೀರುವ ಹಂಬಲವುಳ್ಳದ್ದಾಗಿರುತ್ತದೆ. ತನ್ನ ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳಲು ಸದಾ ಹೆಣಗುತ್ತಿರುತ್ತದೆ. ಆದ್ದರಿಂದಲೇ ಪ್ರಭುತ್ವ, ವ್ಯವಸ್ಥೆ ಸೃಜನಶೀಲತೆಯನ್ನು ಎಂದೂ ಸಹಿಸುವುದಿಲ್ಲ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಬಯಸುವ ಅಧಿಕಾರ ವ್ಯವಸ್ಥೆ ಸೃಜನಶೀಲ ಪ್ರತಿಭೆಯನ್ನು ಹೊಸಕಿಹಾಕಲು ಪ್ರಯತ್ನಿಸುತ್ತಿರುತ್ತದೆ.

ಇದು ಸೃಜನಶೀಲತೆ ಹಾಗೂ ರಾಜಕೀಯದ ಸಂಬಂಧದ ಸ್ವರೂಪ. ಆದರೆ ಸಾಮಾಜಿಕ ಬದಲಾವಣೆ ತರಬೇಕಾದರೆ ರಾಜಕೀಯ ಶಕ್ತಿಯ ನೆರವು ಅತ್ಯಗತ್ಯ ಎಂದು ಗಾಂಧೀಜಿ ಭಾವಿಸಿದ್ದರು. ಹೀಗಾಗಿಯೇ ಗಾಂಧೀಜಿ ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಸವಣ್ಣ ಸಹ ಈ ಸತ್ಯ ಬಲ್ಲವನಾಗಿದ್ದ. ಧರ್ಮ, ರಾಜಕೀಯ ಹಾಗೂ ಸಾಹಿತ್ಯ-ಹನ್ನೆರಡನೇ ಶತಮಾನದ ವಚನ ಚಳವಳಿಯನ್ನು ರೂಪಿಸಿದ ಪ್ರೇರಣಶಕ್ತಿಗಳು.

ಇವುಗಳ ಜಟಿಲ ಹೆಣಿಗೆ ವಚನ ಸಾಹಿತ್ಯವನ್ನು ರೂಪಿಸಿದೆ. ಇದರ ಅರಿವಿಲ್ಲದೆ ವಚನಸಾಹಿತ್ಯವನ್ನು ಕುರಿತಂತೆ ನಡೆಸುವ ಚರ್ಚೆ ಬೌದ್ಧಿಕ ವಿಲಾಸವಾಗಬಹುದೇ ಹೊರತು ಅರ್ಥಪೂರ್ಣ ಫಲಿತ ನೀಡುವುದಿಲ್ಲ. ವಚನ ಚಳವಳಿಗೆ ಬಹುಮುಖೀ ನೆಲೆಗಳಿವೆ. ಬಿಜ್ಜಳನ ವಿರುದ್ಧದ ಪ್ರತಿಭಟನೆ, ದೇವಸ್ಥಾನದ ನಿರಾಕರಣೆ, ಅನುಭಾವದ ಅಭಿವ್ಯಕ್ತಿಯಲ್ಲಿ ಕನ್ನಡದ ಬಳಕೆ, ಎಲ್ಲ ಸ್ತರದ ಜನರೂ ಸೃಜನಶೀಲರಾಗಿ ವಚನ ರಚನೆ ಮಾಡಿದ್ದು ಇವೆಲ್ಲ ಒಂದಕ್ಕೊಂದು ಸಂಬಂಧವಿರುವಂಥದು. ಕೇವಲ ಪದಗಳ ಬೆನ್ನು ಹತ್ತಿದವರಿಗೆ ವಚನಗಳ ಆತ್ಮ ಖಂಡಿತಾ ಸಿಗುವುದಿಲ್ಲ.

ನಮ್ಮ ಆದಿಕವಿ ಪಂಪನಿಗೂ ಇದರ ಸ್ಪಷ್ಟ ಅರಿವಿತ್ತು. ಜಾಗತಿಕ ಸಾಹಿತ್ಯದಲ್ಲಿ ಪ್ರಖರ ರಾಜಕೀಯ ಪ್ರಜ್ಞೆಯಿದ್ದ ಕೆಲವೇ ಕವಿಗಳಲ್ಲಿ ಪಂಪನೂ ಒಬ್ಬ. ಧರ್ಮ ಮತ್ತು ರಾಜಕಾರಣ ಯಾವುದೇ ಕಾಲದಲ್ಲೂ ಸಾಮಾಜಿಕ ರಚನೆಯನ್ನು ರೂಪಿಸುವ ಪ್ರಬಲ ಶಕ್ತಿಗಳು ಎಂದು ಆತ ಖಚಿತವಾಗಿ ನಂಬಿದ್ದ. ಹೀಗಾಗಿಯೇ ಪಂಪ ತನ್ನೆರಡೂ ಕಾವ್ಯಗಳಲ್ಲಿ ಈ ಶಕ್ತಿಗಳಿಗೆ ಮುಖಾಮುಖಿಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ `ಕವಿರಾಜಮಾರ್ಗ'ವನ್ನು ಮಾತ್ರವಲ್ಲ, ಪಂಪನ ಕೃತಿಗಳನ್ನೂ ಸಾಹಿತ್ಯ ಪಠ್ಯವಾಗಿ ಮಾತ್ರ ಪರಿಭಾವಿಸದೆ, ರಾಜಕೀಯ ಪಠ್ಯವಾಗಿಯೂ ಗಮನಿಸಿದಾಗ ನಮಗೆ ಅನೇಕ ಸೂಕ್ಷ್ಮ ಒಳನೋಟಗಳು ಸಿಗುತ್ತವೆ. ನಿದರ್ಶನಕ್ಕಾಗಿ `ಆದಿಪುರಾಣ'ದ ಒಂದು ಪ್ರಸಂಗವನ್ನು ನಾನಿಲ್ಲಿ ವಿವರಿಸುತ್ತಿದ್ದೇನೆ.

ಪಂಪನ `ವಿಕ್ರಮಾರ್ಜುನವಿಜಯ' ನಿಸ್ಸಂದೇಹವಾಗಿ ಒಂದು ಶ್ರೇಷ್ಠ ರಾಜಕೀಯ ಕಾವ್ಯ. ಸೃಜನಶೀಲತೆ ಪ್ರಭುತ್ವವನ್ನು ಎದುರಿಸಿದ ಕ್ರಮಕ್ಕೆ ಇದು ಜಾಗತಿಕ ಸಾಹಿತ್ಯದಲ್ಲಿಯೇ ಒಂದು ಅತ್ಯುತ್ತಮ ಮಾದರಿ. ಪಂಪನ ಇನ್ನೊಂದು ಕೃತಿ `ಆದಿಪುರಾಣ'ವನ್ನು ಇದುವರೆಗೆ ಒಂದು ಧಾರ‌್ಮಿಕಕಾವ್ಯ ಎಂದೇ ಕನ್ನಡ ವಿಮರ್ಶೆ ಚರ್ಚಿಸಿದೆ. ಆದರೆ ಪಂಪನ ರಾಜಕೀಯ ಪ್ರಜ್ಞೆ ಇಲ್ಲಿಯೂ ಪ್ರಖರವಾಗಿ ಕ್ರಿಯಾಶೀಲವಾಗಿದೆ ಎಂಬುದನ್ನು ನಾವು ಗಮನಿಸಬೇಕು. ಕುರ್ತಕೋಟಿಯವರು ಹೇಳುವಂತೆ ಪಂಪನದು ವಿಭಜಿತ ಗಂಡಭೇರುಂಡ ಪ್ರತಿಭೆಯಲ್ಲ, ಅಖಂಡ ಪ್ರಜ್ಞೆ; ಅದು ರಾಜಕೀಯ ಪ್ರಜ್ಞೆ. `ವಿಕ್ರಮಾರ್ಜುನ ವಿಜಯ'ದ ಮೂಲ `ಆದಿಪುರಾಣ'ದಲ್ಲಿಯೇ ಇದೆ. ಭರತ ಬಾಹುಬಲಿಯರ ದಾಯಾದಿ ಕಲಹ `ವಿಕ್ರಮಾರ್ಜುನ ವಿಜಯ'ದಲ್ಲಿ ವಿಸ್ತೃತರೂಪ ಪಡೆದಿದೆ.

`ಆದಿಪುರಾಣ'ದಲ್ಲಿ ನಾವು ಮೊದಲಿಗೇ ಗಮನಿಸಬೇಕಾದ್ದು ಪಂಪ ಇಲ್ಲಿ ಪ್ರಕಟಿಸುವ ಯುದ್ಧವಿರೋಧಿ ನಿಲುವು. ಮೂಲಕಥಾ ವಿನ್ಯಾಸದಲ್ಲಿಯೇ ಈ ಅಂಶವಿದ್ದರೂ ಪಂಪ ಅದನ್ನು ಗ್ರಹಿಸಿ ಮಂಡಿಸುವ ಕ್ರಮ ಅನನ್ಯವಾದುದು. `ಇವರ ಯುದ್ಧವೆಂಬುದು ಅತಿಕ್ರೂರ ಗ್ರಹ ಯುದ್ಧದಂತೆ ಸಕಲ ಪ್ರಜಾ ವಿನಾಶಕರಮಲ್ಲದೆ ಪೆರತಲ್ತು. ಸಮಸ್ತ ಜನ ಸಂಹರಣ ಕಾರಣಮಪ್ಪ ರಣದೊಳ್ ಏವಂದಪುದು?' ಯುದ್ಧವೆಂದರೆ ವಿನಾಶ. ಸಾಮಾನ್ಯ ಜನರ ಸಾವಿಗೆ, ಸಂಕಟಕ್ಕೆ ಕಾರಣವಾಗುವ ಈ ಯುದ್ಧದಿಂದ ಏನು ಪ್ರಯೋಜನ? ಏನು ಸಾಧಿಸಿದ ಹಾಗಾಗುತ್ತದೆ? ಇದೇ ಪ್ರಶ್ನೆಯನ್ನು ನಮ್ಮ ಕಾಲದಲ್ಲಿ ಟಾಲ್‌ಸ್ಟಾಯ್, ಕುವೆಂಪು, ಜಿಡ್ಡು ಮೊದಲಾದವರು ಮತ್ತೆ ಮತ್ತೆ ಕೇಳಿದ್ದಾರೆ.

ಪುರುದೇವನ ಕತೆಯ ಮೂಲಕ ಪಂಪ ಮನುಷ್ಯನನ್ನು ಗಾಢವಾಗಿ ಕಾಡುವ ಪ್ರಬಲ ಶಕ್ತಿಯಾದ ಭೋಗ (ಸೆಕ್ಸ್)ದ ಪರಿಣಾಮವನ್ನು ವಿವರಿಸಿದರೆ ಭರತ ಬಾಹುಬಲಿಯರ ಕತೆ ಅಧಿಕಾರ (ಪವರ್)ದ ಹಂಬಲ ಹಾಗೂ ಅದರ ಪರಿಣಾಮಗಳನ್ನು ಹೇಳುತ್ತದೆ. ಅಧಿಕಾರದ ಆಸೆ ಮನುಷ್ಯನನ್ನು ಯಾವ ಮಟ್ಟಕ್ಕಾದರೂ ಕರೆದುಕೊಂಡು ಹೋಗಬಲ್ಲುದು ಎಂಬುದನ್ನು ಪಂಪ ಇಲ್ಲಿ ಅನೇಕ ನೆಲೆಗಳಲ್ಲಿ ನಿರೂಪಿಸುತ್ತಾನೆ. ಭರತ ದಿಗ್ವಿಜಯ ಮುಗಿಸಿ ಬಂದಾಗ ಚಕ್ರರತ್ನ ಪುರಪ್ರವೇಶ ಮಾಡದೆ ಊರ ಹೆಬ್ಬಾಗಿಲಲ್ಲೇ ನಿಲ್ಲುತ್ತದೆ. ನೈಮಿತ್ತಿಕರ ಮೂಲಕ ತನ್ನ ತಮ್ಮಂದಿರು ತನಗೆ ಶರಣಾಗಿಲ್ಲ ಎಂಬುದನ್ನು ಅದು ಸೂಚಿಸುತ್ತದೆಂಬುದನ್ನು ತಿಳಿದ ಭರತ ಅವರಿಗೆ ನಿರೂಪವೊಂದನ್ನು ಕಳಿಸುತ್ತಾನೆ:

ಎನಗೊರ್ವಂಗೆ ಉಪಭೋಗಮಲ್ತು ವಸುಧಾ ಸಾಮ್ರಾಜ್ಯಂ      ಓರಂತೆ ನಿ
ಮ್ಮನಿಬರ್ಗಂ, ಪಿರಿಯಣ್ಣನೇಂ ಜನಕನೇಂ ಎಂಬೊಂದು     ಕೊಂಡಾಟದಿಂ
ವಿನಯಂ ಸಲ್ವುದು. ತಾಮುಂ ಆಮುಂ ಒಡನಿರ್ಪಂ. ಬರ್ಪುದು. ಎಂಬ
ಈಶ ಶಾ
ಸನಮಂ ನೆತ್ತಿಯೊಳ್ ಆಂತು ಬನ್ನಿಂ, ಎರಗಿಂ ಚಕ್ರೇಶ     ಪಾದಾಬ್ಜದೊಳ್

ರಾಜಕೀಯದ ಅಧಿಕಾರದ ದಾಹ ಮನುಷ್ಯನ ಭಾವಜಗತ್ತನ್ನು ನಾಶ ಮಾಡಿಬಿಡುವ ದುರಂತವನ್ನು ಈ ಪದ್ಯ ಮಾರ್ಮಿಕವಾಗಿ ನಿರೂಪಿಸುತ್ತಿದೆ. ನಮಗೆಲ್ಲರಿಗೂ ಎರಡು ಜಗತ್ತುಗಳಿರುತ್ತವೆ. ಒಂದು ನಮ್ಮ ಆಂತರಿಕ ಭಾವಜಗತ್ತು; ಮತ್ತೊಂದು ಬಾಹ್ಯ ವ್ಯಾವಹಾರಿಕ ಜಗತ್ತು. ಇವೆರಡರ ನಡುವೆ ಹೊಂದಾಣಿಕೆ ಅಷ್ಟು ಸುಲಭವಲ್ಲ. ಹೊರಗಿನ ವ್ವಾವಹಾರಿಕ ಜಗತ್ತಿನ ಹಿಂಸೆ, ಕ್ರೌರ‌್ಯ, ನಿಷ್ಕರುಣೆಯಿಂದ ತಪ್ಪಿಸಿಕೊಳ್ಳಲು ಅಡುಗುದಾಣವಾದ ಆಂತರಿಕ ಭಾವಜಗತ್ತಿನ ಆಶ್ರಯವನ್ನು ನಾವು ಪಡೆಯುತ್ತೇವೆ. ಕ್ಷುದ್ರ ರಾಜಕೀಯ ಈ ಅಡಗುದಾಣದ ಮೇಲೆಯೂ ಆಕ್ರಮಣ ಮಾಡುತ್ತದೆ, ನಮ್ಮ ಭಾವಜಗತ್ತನ್ನು ನಾಶ ಮಾಡುತ್ತದೆ.

ಇಲ್ಲಿ ಭರತ ಹೇಳುವ `ಈ ಸಾಮ್ರಾಜ್ಯ ಸುಖ ನನಗೊಬ್ಬನಿಗೇ ಅಲ್ಲ, ನಿಮ್ಮೆಲ್ಲರಿಗೂ ಸೇರಿದ್ದು, ಹಿರಿಯಣ್ಣ ತಂದೆಗೆ ಸಮಾನ, ಈ ಭಾವದಿಂದ ನೀವೆಲ್ಲರೂ ಬನ್ನಿ. ಈ ಸಾಮ್ರಾಜ್ಯ ಸುಖವನ್ನು ನಾವೆಲ್ಲರೂ ಒಂದಾಗಿ, ಒಡಗೂಡಿ ಅನುಭವಿಸೋಣ' ಎಂಬ ಮಾತುಗಳು ಸಹಜ ಭ್ರಾತೃ ವಾತ್ಸಲ್ಯವನ್ನು ಸೂಚಿಸುವಂಥವು. ಸಹಬಾಳ್ವೆಯ ಉದಾತ್ತ ನಿಲವನ್ನು ಪ್ರತಿಪಾದಿಸುವಂಥವು. ಇದು ನಮ್ಮೆಲ್ಲರ ಆದರ್ಶ, ಆಶಯ. ಆದರೆ ಈ ಪದ್ಯದ ಕಡೆಯ ಸಾಲು ಈ `ವಾತ್ಸಲ್ಯ'ವನ್ನು `ವ್ಯವಹಾರ'ವನ್ನಾಗಿ ರೂಪಾಂತರಿಸಿ `ಅಧಿಕಾರ'ವನ್ನು ಸ್ಥಾಪಿಸಲು ಬಯಸುತ್ತದೆ.

ಅದೇ ಉಸಿರಿನಲ್ಲಿ ಭರತ ಹೇಳುತ್ತಾನೆ: `ಇದು ರಾಜಾಜ್ಞೆ. ಈ ರಾಜಾಜ್ಞೆಯನ್ನು ಶಿರಸಾ ಸ್ವೀಕರಿಸಿ, ಒಪ್ಪಿಕೊಂಡು ಬಂದು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಿ ಶರಣಾಗಿ'. ಇದು ಅಧಿಕಾರದ ಅಹಂಕಾರ. ವಾತ್ಸಲ್ಯದ ಆಹ್ವಾನ ರಾಜಕೀಯದ ಅಧಿಕಾರ ದಾಹದಿಂದಾಗಿ ಆಜ್ಞೆಯಾಗಿ ಪರಿವರ್ತನೆಯಾಗಿ ಬಿಡುತ್ತದೆ. ಇದು ಅಣ್ಣ ತಮ್ಮಂದಿರ ಪ್ರೀತಿಯ ಜಗತ್ತಲ್ಲ, ಆಳರಸರ ಅಧೀನ ಮನೋಭಾವದ ಸಂಬಂಧ. ಪ್ರೀತಿಯ ಮಾತುಗಳೂ ಇಲ್ಲಿ ಅಧಿಕಾರ ಪಡೆಯುವ ಒಂದು ಹುನ್ನಾರ. ಇವತ್ತಿನ ನಮ್ಮ ರಾಜಕಾರಣಿಗಳು ಈ ಭರತನ ಸಂತತಿಯವರೇ.

ಭರತನ ಈ ಅಧಿಕಾರದ ಅಹಂಕಾರವನ್ನು ಬಾಹುಬಲಿ ಬಲ್ಲ. ಪ್ರೀತಿ, ವಾತ್ಸಲ್ಯಗಳ ನೆಪದಲ್ಲಿ ಅಧಿಕಾರ ಸ್ಥಾಪಿಸಬಯಸುವ ಆತನ ರಾಜಕೀಯ ಹುನ್ನಾರ ಬಾಹುಬಲಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಆತ ಹೇಳುತ್ತಾನೆ:

ಪಿರಿಯಣ್ಣಂಗೆ ಎರಗುವುದೇಂ
ಪರಿಭವಮೇ? ಕೀಳಿ ನೆತ್ತಿಯೊಳ್ ಬಾಳಂ ನಿ
ರ್ನೆರಂ ಊರಿ ಚಲದಿನ್ ಎವಗಿಸ
ಲಿರೆ ಭರತಂಗೆ ಎರಗುವ ಎರಕಂ ಅಂಜಮೆಯಲ್ತೇ?

ಈ `ಬಾಹುಬಲಿ ಪ್ರಜ್ಞೆ'ಯನ್ನು ನಮ್ಮ ಪ್ರಜೆಗಳು ಬೆಳೆಸಿಕೊಳ್ಳಲು ಸಾಧ್ಯವಾದರೆ, ಭರತನಂಥವರ ರಾಜಕೀಯ ಹುನ್ನಾರವನ್ನು ಸಮರ್ಥವಾಗಿ ಎದುರಿಸಬಹುದು. ನಮ್ಮ ಸಮಕಾಲೀನ ರಾಜಕಾರಣವೂ ಇದಕ್ಕಿಂತ ಭಿನ್ನವೇನಲ್ಲ. ರಾಜಕೀಯದ ಕೆಸರಿನಲ್ಲಿ ಎಲ್ಲ ಮಾನವೀಯ ಸಂಬಂಧಗಳೂ ನಾಶವಾಗಿಬಿಡುತ್ತಿವೆ. ಈ ರಾಜಕೀಯದ ಅಧಿಕಾರ ದಾಹ ಪಂಪನೇ ಹೇಳುವ ಹಾಗೆ-

ಸೋದರರೊಳ್ ಸೋದರರಂ
ಕಾದಿಸುವುದು, ಸುತನ ತಂದೆಯೆಡೆಯೊಳ್ ಬಿಡದು
ಉತ್ಪಾಂಸುವುದು ಕೋಪಮನ್ ಅಳ
ವೀದೊರೆತೆನೆ ತೊಡರ್ವುದು ಎಂತು ಈ ರಾಜ್ಯಶ್ರೀಯೊಳ್?

ಹಾಗೆಂದು ರಾಜಕೀಯ ಬಿಟ್ಟು ಬದುಕುವಂತಿಲ್ಲ. ಇದೆಲ್ಲದರ ನಡುವೆಯೇ ನಮ್ಮ ಬದುಕನ್ನು ಸಹನೀಯಗೊಳಿಸಿಕೊಳ್ಳಬೇಕು. ಪಂಪನ ಕೃತಿಗಳ ಸೂಕ್ಷ್ಮ ಓದು ಬದುಕನ್ನು ಸಹನೀಯಗೊಳಿಸಿಕೊಳ್ಳಬಹುದಾದ ನಮ್ಮ ಅರಿವನ್ನು ನಿಸ್ಸಂದೇಹವಾಗಿ ನಿಶಿತಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.