ಯಾವುದೇ ಸಮಾಜದಲ್ಲಿಯೂ ವಿಮರ್ಶೆ ಒಂದು ಸಾಮಾಜಿಕ ವಿವೇಕ. ಇದು ಸಾಹಿತ್ಯಕ್ಕೆ ಮಾತ್ರ ಅನ್ವಯಿಸುವ ಮಾತಲ್ಲ, ಎಲ್ಲ ಕ್ಷೇತ್ರಗಳಲ್ಲೂ ಸರಿ ತಪ್ಪುಗಳ ಬಗೆಗಿನ ಚರ್ಚೆ, ಸಂವಾದ ಅತ್ಯಗತ್ಯ. ಆಗ ಮಾತ್ರ ಅರ್ಥಪೂರ್ಣ ಬೆಳವಣಿಗೆ ಸಾಧ್ಯ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಎಲ್ಲರಿಗೂ ಶಕ್ತಿ ದೌರ್ಬಲ್ಯಗಳು ಇದ್ದೇ ಇರುತ್ತವೆ. ಅದನ್ನು ಸಕಾರಣವಾಗಿ ತಿಳಿಸಿ ಹೇಳುವುದೇ ವಿಮರ್ಶೆ. ಇಂಥ ವಿಮರ್ಶೆ ದೌರ್ಬಲ್ಯವನ್ನು ಮೀರಲು, ಇತ್ಯಾತ್ಮಕ ಶಕ್ತಿಯನ್ನು ಸಂಚಯಿಸಿಕೊಳ್ಳಲು ನೆರವಾಗುತ್ತದೆ. ಆಗ ಅಪೌಷ್ಟಿಕತೆಯಿಂದಾಗಲೀ, ಅನಗತ್ಯ ಬೊಜ್ಜಿನಿಂದಾಗಲೀ ಸಮಾಜ ನರಳುವುದಿಲ್ಲ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವಿಮರ್ಶೆಯ ಪಾತ್ರ ಅತ್ಯಂತ ಮಹತ್ವದ್ದು.
ಆದರೆ ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನು ಬಹುಮಟ್ಟಿಗೆ ರೂಪಿಸಿ ಪ್ರಭಾವಿಸುವ ಅಧಿಕಾರ ಕೇಂದ್ರಗಳಾದ ಧರ್ಮ ಹಾಗೂ ರಾಜಕೀಯ ವಿಮರ್ಶೆಯನ್ನು ಸಹಿಸುವುದಿಲ್ಲ. ಇವು ಬಯಸುವುದು ಅಧೀನ ಮನೋಭಾವವನ್ನು, ಜೀ ಹುಜೂರ್ ಹಿಂಬಾಲಕರನ್ನು. ಇವರಿಬ್ಬರಲ್ಲೂ ಅನೇಕ ಸಾಮ್ಯಗಳಿವೆ. ಹೊಂದಾಣಿಕೆಯಿದೆ. ಇದೇ ಪ್ರವೃತ್ತಿ, ಸಾಂಸ್ಕೃತಿಕ ರಂಗದಲ್ಲೂ ಕಾಣಿಸಿಕೊಂಡರೆ ಆಗ ಅದು ಸಾಮಾಜಿಕವಾಗಿ ಅತ್ಯಂತ ಅಪಾಯದ ಸ್ಥಿತಿ. ಅಂಥ ಸಮಾಜ ರೋಗಗ್ರಸ್ತ ಸಮಾಜ. ಆರಂಕುಸವಿಟ್ಟರೂ ತನ್ನಂತರಂಗಕ್ಕೆ ಪ್ರಾಮಾಣಿಕವಾಗಿರುವ ಮನಃಸ್ಥಿತಿಯೇ ಸಾಹಿತ್ಯದ ಮೂಲದ್ರವ್ಯ; ಕಲೆಯ ಶಕ್ತಿ. ಇಂಥ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಆಗಾಗ ಧರ್ಮ, ರಾಜಕೀಯ ಶಕ್ತಿಗಳು ದಮನ ಮಾಡಲು ಪ್ರಯತ್ನಿಸುವುದು.
ಕೀರ್ತಿನಾಥ ಕುರ್ತಕೋಟಿಯವರನ್ನು ನಾನೊಮ್ಮೆ ಅವರೊಂದಿಗಿನ ಸಾಹಿತ್ಯ ಹರಟೆಯ ನಡುವೆ ಕೇಳಿದ್ದೆ: `ಸಾಹಿತ್ಯದಿಂದ ನಿಮಗಾದ ಪ್ರಯೋಜನವೇನು?' ಆಗ ಅವರು ಹೇಳಿದ್ದರು: `ದಿನ ನಿತ್ಯದಲ್ಲಿ ನಾವಾಡುವ ಭಾಷೆಗೆ ಎರಡೇ ಸಾಧ್ಯತೆ ಇರುತ್ತದೆ. ಹೊಗಳಿಕೆ ಇಲ್ಲ ತೆಗಳಿಕೆ. ಇವೆರಡನ್ನೂ ಮೀರಿದ ನೆಲೆಯಲ್ಲಿ ಭಾಷೆಯನ್ನು ಬಳಸುವ ರೀತಿಯನ್ನು ಸಾಹಿತ್ಯ ನನಗೆ ಕಲಿಸಿದೆ'. ಇದೇ ಸಾಹಿತ್ಯದ ಮೂಲತತ್ವ. ಪ್ರಜಾಪ್ರಭುತ್ವದ ಮೂಲತತ್ವವೂ ಇದೇ. `ನಿನ್ನ ಅಭಿಪ್ರಾಯ ನನಗೆ ಒಪ್ಪಿಗೆಯಿಲ್ಲ, ಆದರೆ ಗೌರವಿಸುತ್ತೇನೆ' - ಈ ನಿಲುವು ಪ್ರಜಾಪ್ರಭುತ್ವದ ತಳಹದಿ. ಅಭಿಪ್ರಾಯಗಳನ್ನು ಹತ್ತಿಕ್ಕುವುದು, ದಮನ ಮಾಡುವುದು ಸರ್ವಾಧಿಕಾರ.
ಶ್ರೇಷ್ಠ ಸಾಹಿತ್ಯ ಎಂದಿಗೂ ಸರ್ವಾಧಿಕಾರವನ್ನು ಸಹಿಸುವುದಿಲ್ಲ, ಅಧಿಕಾರವನ್ನು ಓಲೈಸುವುದಿಲ್ಲ. ಅಧಿಕಾರದ ಒಡನಾಟವಿದ್ದರೂ ಅಂತರವನ್ನು ಕಾಯ್ದುಕೊಳ್ಳುವುದರಲ್ಲೇ ಅದರ ಸತ್ವವಿರುವುದು. ಸೃಜನಶೀಲ ಪ್ರತಿಭೆ ಅಧಿಕಾರಕ್ಕೆ ಎಂದೂ ಅಧೀನವಾಗಿ ತಲೆಬಾಗುವುದಿಲ್ಲ. ಪಂಪ ತನ್ನ ರಾಜ, ಗೆಳೆಯ ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿ `ವಿಕ್ರಮಾರ್ಜುನ ವಿಜಯ' ವನ್ನು ಬರೆಯ ಹೊರಟರೂ ಕಡೆಗೆ ಅವನು ಬರೆದದ್ದು ಕರ್ಣನ ಕತೆಯನ್ನು. `ನೆನೆಯದಿರಣ್ಣ ಭಾರತದೊಳಿಂ ಪೆರೆನಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ' ಎಂದು ಅರಿಕೇಸರಿಯ ಮುಂದೆಯೇ ಹೇಳಲು ಪಂಪನ ಸೃಜನಶೀಲ ಪ್ರತಿಭೆಗೆ ಸಾಧ್ಯವಾಯಿತೆಂದೇ ಇಂದಿಗೂ ಪಂಪ ಶ್ರೇಷ್ಠ ಕವಿ. ಕಮೂ ಹೇಳುತ್ತಾನೆ: `ನಿನ್ನ ಮುಂದೆ ನಾನು ನಡೆಯುವುದಿಲ್ಲ, ಏಕೆಂದರೆ ನನಗೆ ಮಾರ್ಗದರ್ಶನ ಮಾಡುವ ಶಕ್ತಿಯಿಲ್ಲ. ನಿನ್ನ ಹಿಂದೆಯೂ ನಾನು ಬರಲಾರೆ. ಏಕೆಂದರೆ ನಿನ್ನನ್ನು ನಾನು ಹಿಂಬಾಲಿಸಲಾರೆ, ಅಧೀನನಾಗಲಾರೆ. ಒಟ್ಟಾಗಿ, ಜೊತೆಯಾಗಿ ನಡೆಯುವ ಬಾ'. ಸಾಹಿತ್ಯ ಹೀಗೆ ನಮ್ಮ ನಿಜವಾದ ಸಂಗಾತಿ. ಹೀಗಾಗಿಯೇ ಸಾಹಿತ್ಯ ಯಾವಾಗಲೂ ಬಹುಮುಖೀ ನೆಲೆಯನ್ನು ಗೌರವಿಸುತ್ತದೆ, ಬಹುಮುಖೀ ಸಂಸ್ಕೃತಿಯನ್ನು ಪೋಷಿಸುತ್ತದೆ. ಸಮಸ್ತ ಜೀವರಾಶಿಯನ್ನು ಪ್ರೀತಿಸುತ್ತದೆ. ಅಂಥ ಪ್ರೀತಿಸುವ ಶಕ್ತಿಯಿಲ್ಲದವರು ಸಾಹಿತಿಯಾಗಲಾರರು.
`ಇಲ್ಲಿ ಯಾರೂ ಮುಖ್ಯವಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ನೀರೆಲ್ಲವೂ ತೀರ್ಥ'. ಕಿರೀಟದ ರನ್ನಮಣಿಯೂ ಹಸುರು ಗರಿಕೆಯ ಮೇಲಿನ ಇಬ್ಬನಿಯ ಹನಿಯೂ ಒಂದೇ. ಕರಿಸಿದ್ದನ ದುಃಖವೂ, ಚಂದ್ರಮತಿಯ ಪ್ರಲಾಪವೂ ಸಮಾನವಾದುದು. ಇದು ಕವಿಯ ದೃಷ್ಟಿ. ಈ ನೆಲೆಯಲ್ಲಿಯೇ ಶ್ರೇಷ್ಠ ಸಾಹಿತ್ಯದ ಸೃಷ್ಟಿ. ಆದರೆ ಧರ್ಮ, ರಾಜಕೀಯಗಳಂತೆ ಸಾಹಿತ್ಯವೂ ಸಾಂಸ್ಥಿಕ ರೂಪವನ್ನು ಪಡೆದುಕೊಂಡು ಬಿಟ್ಟಾಗ ಇಂಥ ಮನೋಭಾವದಿಂದ ದೂರ ಸರಿಯುತ್ತದೆ. ಬಹುಮುಖೀ ನೆಲೆಯನ್ನು ನಿರಾಕರಿಸಿ ಏಕಾಕೃತಿಯನ್ನು ಪ್ರತಿಪಾದಿಸುತ್ತದೆ. ವಿಮರ್ಶೆಗೆ ಬೆನ್ನುಹಾಕುತ್ತದೆ. ಮಿಶೆಲ್ ಪ್ಯುಕೋ ಹೇಳುವಂತೆ ಆಗ ಸಾಹಿತ್ಯವೂ ಅಧಿಕಾರ ಕೇಂದ್ರವಾಗಿ ಮಾರ್ಪಡುತ್ತದೆ. ಇಂಥ ಅಧಿಕಾರ ಕೇಂದ್ರಗಳು ತಮ್ಮದೇ `ಪರಂಪರೆ' ಯನ್ನು ಹುಟ್ಟುಹಾಕಿ `ಅನ್ಯ' ವನ್ನು ಮಣಿಸಲು ಹವಣಿಸುತ್ತಿರುತ್ತವೆ. ಇಂಥ `ಸಾಹಿತ್ಯ ಮಠ'ಗಳು ದಮನಕಾರಿ ಪ್ರವೃತ್ತಿಯನ್ನು ಪಡೆದುಕೊಳ್ಳುತ್ತವೆ. ಇಂಥಲ್ಲಿ ಸಂವಾದವಾಗಲೀ, ವಾಗ್ವಾದವಾಗಲೀ ಸಾಧ್ಯವಿಲ್ಲ. ಸಹಬಾಳ್ವೆ ನಾಶವಾಗುತ್ತದೆ.
ಪ್ರತಿಷ್ಠಿತ ಶಕ್ತಿಗಳು ನಮ್ಮ ಸಾಮಾಜಿಕ ಸಂದರ್ಭದಲ್ಲಿ ಇಂಥದೊಂದು ಸ್ಥಿತಿಯನ್ನು ನಿರ್ಮಿಸಿದ್ದಾರೆಯೇ? ಅಭಿಪ್ರಾಯಗಳನ್ನು ದಮನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆಯೇ? ಸಂವೇದನಾಶೀಲ ಮನಸ್ಸುಗಳೂ ಈ ಜಾಲದಲ್ಲಿ ಪಾಲುದಾರರಾಗುತ್ತಿದ್ದಾರೆಯೇ? ಇಂಥ ಪ್ರಶ್ನೆಗಳು ಈಗ ಕಾಡುತ್ತಿವೆ. ಲಂಕೇಶ್ ಒಮ್ಮೆ ಸಭೆಯೊಂದರಲ್ಲಿ ಹೇಳಿದ್ದರು: `ಸುತ್ತಲೂ ಹೆಗ್ಗಣಗಳನ್ನು ಕುಳ್ಳಿರಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಏನು ಬೇಕಾದರೂ ಮಾತನಾಡು ಎಂದರೆ ಯಾರಿಗೆ ಮಾತನಾಡುವುದು?' ಹೆಗ್ಗಣಗಳ ರಾಜ್ಯದಲ್ಲಿ ಮಾತಿಗೆಲ್ಲಿ ಬೆಲೆ? ಕೇಳಿಸಿಕೊಳ್ಳುವ ಹೃದಯಗಳೇ ಇಲ್ಲದಿದ್ದರೆ ಹೇಳುವುದಾದರೂ ಯಾರಿಗೆ? ಇಂಥಲ್ಲಿ ಸಂವಾದವಾಗಲೀ, ವಾಗ್ವಾದವಾಗಲೀ ಹೇಗೆ ಸಾಧ್ಯ?
ನಮ್ಮ ಕನ್ನಡ ಪರಂಪರೆಯನ್ನು ಗಮನಿಸಿದರೆ ಅದು ವಾಗ್ವಾದಗಳ ಪರಂಪರೆ. ನಮ್ಮ ಹಿರಿಯರು ವಾಗ್ವಾದಗಳ ಮೂಲಕವೇ ಕನ್ನಡ ಜಗತ್ತನ್ನು, ಕನ್ನಡ ಮನಸ್ಸನ್ನು ಕಟ್ಟುತ್ತ ಬಂದಿದ್ದಾರೆ. ಸಾವಿರ ವರ್ಷದ ಕನ್ನಡ ಸಾಹಿತ್ಯ ಚರಿತ್ರೆ ವಾಗ್ವಾದಗಳ ಮೂಲಕವೇ ಬೆಳೆದು ಬಂದಿದೆ. ಆರೋಗ್ಯಕರ ಚರ್ಚೆಗೆ ಹಾದಿಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯ ಚರಿತ್ರೆಯೆಂದರೆ ಅದು ಸಂಘರ್ಷಗಳ ಚರಿತ್ರೆ. ಸೃಜನಶೀಲ ಮನಸ್ಸುಗಳ ಅರ್ಥಪೂರ್ಣ ಸಂವಾದ.
ಕನ್ನಡದ ಮೊದಲ ಕೃತಿ `ಕವಿರಾಜಮಾರ್ಗ'ವನ್ನೇ ಗಮನಿಸಿ. ತನ್ನೆದುರಿಗಿದ್ದ ಅತ್ಯಂತ ಪ್ರಭಾವೀ ಸಂಸ್ಕೃತ ಪರಂಪರೆಯ ಜೊತೆ ಮುಖಾಮುಖಿಯಾಗಿ, ಅನ್ಯಾಕ್ರಮಣದ ವಿರುದ್ಧ ಕನ್ನಡ ಪರಂಪರೆಯೊಂದನ್ನು ರೂಪಿಸಲು ಕನ್ನಡಿಯನ್ನೂ, ಕೈದೀವಿಗೆಯನ್ನೂ ಕೊಟ್ಟ ಕೃತಿ `ಕವಿರಾಜಮಾರ್ಗ'. ರಾಜಕೀಯ - ಸಮಾಜ - ಸಂಸ್ಕೃತಿ ಈ ಮೂರನ್ನೂ ಏಕಬಿಂದುವಿನಲ್ಲಿ ಪರಿಭಾವಿಸಿದ ಕವಿರಾಜಮಾರ್ಗಕಾರ ಸಮಕಾಲೀನ ತಲ್ಲಣಗಳನ್ನು ಎದುರಿಸಿ ಕನ್ನಡ ಜಗತ್ತನ್ನು ರೂಪಿಸಿದ ಬಗೆ ಇಂದಿನ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರದ ಮಾರ್ಗೋಪಾಯಗಳನ್ನು ನೀಡಬಲ್ಲಂಥದು. ಕೆ. ವಿ. ಸುಬ್ಬಣ್ಣನವರ `ಕವಿರಾಜಮಾರ್ಗ'ದ ಬಗೆಗಿನ ಚಿಂತನೆ ಪ್ರತಿಯೊಬ್ಬ ಕನ್ನಡಿಗರೂ ಪರಿಭಾವಿಸ ಬೇಕಾದಂಥದು.
`ಈ ಬದುಕಿನ ಬಗ್ಗೆ ಗಾಢ ನೀತಿಯಿದ್ದ ಜೈನ ಕವಿಗಳಂತೂ ನಮ್ಮ ಬದುಕಿನಲ್ಲಿ ಭೋಗ ಮತ್ತು ಅಧಿಕಾರ ವಹಿಸುವ ಮಹತ್ವದ ಪಾತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಇವುಗಳ ಸಂಘರ್ಷದಲ್ಲೇ ಅವರ ಕಾವ್ಯರಚನೆಯ ವಿನ್ಯಾಸವಿದೆ. `ಆದಿಪುರಾಣ'ದಂಥ ಧಾರ‌್ಮಿಕ ಕಾವ್ಯದಲ್ಲಿ ಲಲಿತಾಂಗ, ವಜ್ರಜಂಘರಂತಹ ಜೀವನ ವ್ಯಾಮೋಹಿಗಳಿದ್ದಾರೆ, ಭರತನಂತಹ ಅಧಿಕಾರದಾಹಿಯಾದ ರಾಜನಿದ್ದಾನೆ, ಇವೆಲ್ಲವನ್ನೂ ಮೀರಿ ನಿಲ್ಲುವ ಪುರುದೇವ, ಬಾಹುಬಲಿಯಂಥವರೂ ಇದ್ದಾರೆ. ಅಧಿಕಾರ ದಾಹ ಹಾಗೂ ಭೋಗಾಕಾಂಕ್ಷೆ ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ಕನ್ನಡ ಮನಸ್ಸು ಇದನ್ನು ಮುಖಾಮುಖಿಯಾದ ಕ್ರಮ ಗಮನಿಸಬೇಕಾದಂಥದು. ಜೊತೆಗೆ ಪ್ರಧಾನ ಸಂಸ್ಕೃತಿಯ ಸಂಸ್ಕೃತ ಕಾವ್ಯ ಪರಂಪರೆಗೆ ಎದುರಾಗಿ, ಅದರಿಂದ ಪಡೆಯಬೇಕಾದಷ್ಟನ್ನು ಪಡೆದು, ಭಿನ್ನರಾಗಿ ತಮ್ಮನ್ನು ಸ್ಥಾಪಿಸಿಕೊಂಡ ರೀತಿಯೂ ಪರಂಪರೆಯನ್ನು ನಾವು ಪ್ರವೇಶಿಸುವ ಕ್ರಮಕ್ಕೆ ಮಾದರಿ ಒದಗಿಸಬಲ್ಲುದು. `ಧರ್ಮಂ ಪ್ರಧಾನಂ, ಅರ್ಥಂ ಧರ್ಮಾಂಘ್ರಿತ ಫಳಂ, ಅದರ್ಕೆ ರಸಮದು ಕಾಮಂ' ಎಂದು ಧರ್ಮ, ಅರ್ಥ, ಕಾಮಗಳ ಸಂಬಂಧವನ್ನು ವಿವರಿಸಿದ ತಿಳಿವಳಿಕೆ ಇಂದಿನ ಅಗತ್ಯ.
ಹನ್ನೆರಡನೆಯ ಶತಮಾನವಂತೂ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ‌್ಮಿಕವಾಗಿ ಕರ್ನಾಟಕದ ಚರಿತ್ರೆಯಲ್ಲಿ ಒಂದು ಮಹತ್ವದ ಘಟ್ಟ; ಸಂಕ್ರಮಣಕಾಲ. ರಾಜಕೀಯ, ಧರ್ಮ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ -ಇವೆಲ್ಲವುಗಳ ಜಟಿಲ ಹೆಣಿಗೆಯೇ ನಮ್ಮ ಬದುಕು. ಇವೆಲ್ಲವುಗಳೂ ಪ್ರತ್ಯೇಕವಲ್ಲ, ಪರಸ್ಪರ ಪೂರಕವಾಗಿ ನಮ್ಮ ಬದುಕಿನ ಸ್ಥಿತಿ-ಗತಿಗಳನ್ನು ನಿರ್ಧರಿಸುತ್ತವೆ. ಇವೆಲ್ಲವುಗಳ ಜೊತೆ ಮುಖಾಮುಖಿಯಾಗಿಯೇ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಯಾವುದನ್ನು ನಿರ್ಲಕ್ಷಿಸಿದರೂ ಬದುಕು ವಿಕೃತವಾಗುತ್ತದೆ ಎಂಬ ಕಟುಸತ್ಯವನ್ನು ಬಸವಣ್ಣ ಬಲ್ಲವನಾಗಿದ್ದ. ನಮ್ಮ ಕಾಲದ ಗಾಂಧಿಗೂ ಇದರ ಅರಿವಿತ್ತು.
ಹೀಗೆ ಸಮಗ್ರವಾಗಿ ಚಿಂತಿಸುವ ವ್ಯಕ್ತಿತ್ವ ಈಗಿಲ್ಲದಿರುವುದು ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣ. ಜನಸಾಮಾನ್ಯರನ್ನು ಕೇಂದ್ರವಾಗಿಟ್ಟುಕೊಂಡು ಬಸವಣ್ಣ ರೂಪಿಸಿದ ವಚನ ಚಳವಳಿ ಎಲ್ಲ ಬಗೆಯ ಪ್ರಭುತ್ವಗಳನ್ನು, ಅಧಿಕಾರ ಕೇಂದ್ರಗಳನ್ನು ವಿರೋಧಿಸಿ ಹೊಸ ಹುಟ್ಟಿಗೆ ಕಾರಣವಾಯಿತು. ಇದೆಲ್ಲದರ ಜೊತೆಗೆ ಅತ್ಯಂತ ಮುಖ್ಯವಾದದ್ದು ಭಾಷೆ ಶೋಷಣೆಯ ಸಾಧನವಾಗಿ ಬಳಕೆಯಾಗುವ ಕ್ರಮದ ಬಗೆಗಿನ ಚಿಂತನೆ.
ಮೇಲು ವರ್ಗದವರು ಧರ್ಮದ ಅಧಿಕಾರ ಪಡೆದದ್ದು ಸಂಸ್ಕೃತದ ಮೂಲಕ. ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯ ಅಂಚಿನ ಜನರನ್ನು ದೂರವಿಟ್ಟದ್ದು ಈ ಭಾಷೆಯ ಮೂಲಕವೇ. ಜ್ಞಾನ, ಭಾಷೆ ಹಾಗೂ ಅಧಿಕಾರಕ್ಕಿರುವ ಸಂಬಂಧ ಅತ್ಯಂತ ಸೂಕ್ಷ್ಮವಾದದ್ದು. ಅಂದು ಸಂಸ್ಕೃತ ಇಂದು ಇಂಗ್ಲಿಷ್ ಇದನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದು ಗಮನಿಸಬೇಕಾದ ಸಂಗತಿ. ಲೋಹಿಯಾ ಇದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಆಸ್ತಿ, ಜಾತಿ, ಇಂಗ್ಲಿಷ್ ಇವುಗಳಲ್ಲಿ ಯಾವುದಾದರೂ ಎರಡನ್ನು ಹೊಂದಿದ್ದರೂ ನೀವು ಮೇಲುವರ್ಗಕ್ಕೆ ಸೇರುತ್ತೀರಿ.
ಹನ್ನೆರಡನೇ ಶತಮಾನದ ಶರಣರು ಈ ಸತ್ಯವನ್ನು ಕಂಡುಕೊಂಡಿದ್ದೇ ಆ ಚಳವಳಿಯ ಬಹುಮುಖ್ಯ ಸಾಮಾಜಿಕ ನೆಲೆ. ಕನ್ನಡವನ್ನು ಅನುಭಾವದ ಅಭಿವ್ಯಕ್ತಿಗೆ ಸಮರ್ಥವಾಗಿ ಬಳಸುವುದರ ಮೂಲಕ, ಉನ್ನತ ಆಲೋಚನೆಗಳು ಕನ್ನಡದಲ್ಲಿ ಸಾಧ್ಯ ಎಂದು ತೋರಿಸಿಕೊಡುವುದರ ಮೂಲಕ ಸಂಸ್ಕೃತದ, ಆ ಮೂಲಕ ಮೇಲುವರ್ಗದ ಪ್ರಭುತ್ವವನ್ನು ಪ್ರಶ್ನಿಸಿದರು, ನಿರಾಕರಿಸಿದರು.
ಇಂಗ್ಲಿಷ್ ಮೂಲಕ ಅಧಿಕಾರ ಕೇಂದ್ರ ಸ್ಥಾಪಿಸುತ್ತಿರುವ ಮೇಲುವರ್ಗವನ್ನು ಎದುರಿಸಲು ಇರುವ ಮಾರ್ಗೋಪಾಯದ ಮಾದರಿಯನ್ನು ನಾವು ವಚನ ಚಳವಳಿಯಿಂದ ಪಡೆಯಬೇಕಾಗಿದೆ. `ದಯೆಯಿಲ್ಲದ ಧರ್ಮ ಆವುದಯ್ಯ' ಎಂಬ ಶರಣರ ಮಾತು, ಧರ್ಮದ ಸಾರವನ್ನು ಇಷ್ಟು ಸರಳವಾಗಿ, ಪರಿಣಾಮಕಾರಿಯಾಗಿ ಹೇಳಿದ ನಿದರ್ಶನ ಜಗತ್ತಿನ ಯಾವ ಭಾಷೆಯಲ್ಲೂ ಸಿಗುವುದಿಲ್ಲ. ಇದು ಕನ್ನಡದ ಶಕ್ತಿ ಮಾತ್ರವಲ್ಲ, ಜನಸಾಮಾನ್ಯರ ಶಕ್ತಿಯ ನಿರೂಪಣೆಯೂ ಹೌದು. ಹದಿನೈದನೇ ಶತಮಾನದಲ್ಲಿ ಸ್ಪೇನ್‌ನಲ್ಲಿದ್ದ ನೆಬ್ರಿಜಾ ಎಂಬ ಭಾಷಾತಜ್ಞ ದೇಶಭಾಷೆಯ ನಾಶ ಆ ದೇಶದ ಅವನತಿ ಎಂಬುದನ್ನು ಪರಿಣಾಮಕಾರಿಯಾಗಿ ಹೇಳಿದ್ದಾನೆ. ದೇಶಭಾಷೆಯ ವ್ಯಾಕರಣ ಆ ದೇಶದ ಜನಸಾಮಾನ್ಯರ ಬದುಕಿನ ವ್ಯಾಕರಣವೂ ಹೌದು.
ಹದಿನಾರನೇ ಶತಮಾನದ ಕನಕದಾಸ ಪ್ರತಿಷ್ಠಿತ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಿದ ಮಹತ್ವದ ಪ್ರತಿಭೆ, ಸಾಹಿತ್ಯದ ಶಕ್ತಿ, ಸೂಕ್ಷ್ಮಗಳನ್ನು ವ್ಯವಸ್ಥೆಯ ವಿರುದ್ಧ ಇಷ್ಟು ಪ್ರಭಾವಿಯಾಗಿ ಬಳಸಿದ ನಿದರ್ಶನ ವಿರಳ. ಆತನ `ರಾಮಧಾನ್ಯಚರಿತೆ' ಕನ್ನಡದ, ಮಾತ್ರವಲ್ಲ, ಜಾಗತಿಕ ಸಾಹಿತ್ಯದಲ್ಲೇ ಒಂದು ವಿಶಿಷ್ಟ ಕೃತಿ. ಕನಕದಾಸ ಅಧಿಕಾರ ಕೇಂದ್ರವನ್ನು ಗುರ್ತಿಸುವುದು ಧರ್ಮ, ರಾಜಕೀಯ, ಜ್ಞಾನದ ನೆಲೆಗಳಲ್ಲಿ ಮಾತ್ರವಲ್ಲ, `ಸಾಮಾಜಿಕ ಮನ್ನಣೆ'ಯಲ್ಲಿ.
ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಯೂ ಮೇಲಲ್ಲ, ಯಾವುದೂ ಕೀಳಲ್ಲ, ಎಲ್ಲವೂ ಸಮಾನವೇ. ಆದರೆ ಕೆಲವು ವೃತ್ತಿ ಮೇಲು, ಮತ್ತೆ ಕೆಲವು ಕೀಳು ಎಂದಾದದ್ದು ಹೇಗೆ? ಇದೇ ಮೇಲುವರ್ಗದವರ ವ್ಯವಸ್ಥಿತ ಪಿತೂರಿ. `ಚಿಕ್ಕೋರ್ ಸಿಕ್ಕವ್ರಣ್ಣ ಎಲ್ಲಾರ್ ನೆಗಾಕೆ, ದೊಡ್ಡೋರ್ ಎಂಗ್ಮಾಡಿದ್ರು ಎಲ್ಲಾನೂ ಸೈ'. ಕನಕದಾಸ ವ್ಯವಸ್ಥೆಯ ಈ ಸಂಚನ್ನು ತನ್ನ ಕೃತಿಯಲ್ಲಿ ಮುಖಾಮುಖಿಯಾಗುತ್ತಾನೆ. ಅಕ್ಕಿ ಮತ್ತು ರಾಗಿ ಇಲ್ಲಿ ಸಮರ್ಥ ರೂಪಕ. ಇವರಿಬ್ಬರ ಜಗಳ ವರ್ಗ ಸಂಘರ್ಷವೂ ಹೌದು, ವರ್ಣಸಂಘರ್ಷವೂ ಹೌದು. ವರ್ಣ ಎಂಬುದು ಇಲ್ಲಿ ಜಾತಿ, ಅಕ್ಷರ ಎಂಬ ಎರಡೂ ನೆಲೆಗಳನ್ನು ಒಳಗೊಂಡಿದೆ.
ನಯಸೇನ, ಹರಿಹರ, ರಾಘವಾಂಕ, ಆಂಡಯ್ಯ, ಕುಮಾರವ್ಯಾಸ, ರತ್ನಾಕರವರ್ಣಿ ಇವರೆಲ್ಲ ಸಂಸ್ಕೃತದ ವಸ್ತುಕ ಮಾರ್ಗವನ್ನು ನಿರಾಕರಿಸಿ ವರ್ಣಕದ ಮೂಲಕ ಕನ್ನಡವನ್ನು ಕಟ್ಟುವ ಕ್ರಮವನ್ನು ನಾವು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಂಡು, ನಂತರ ವಿವರವಾಗಿ ಚರ್ಚಿಸೋಣ.
ಇಂಥ ಪರಂಪರೆಯ ವಾರಸುದಾರರಾದ ನಾವು ವಾಗ್ವಾದಗಳ ಮೂಲಕವೇ ಇಂದು ಕನ್ನಡವನ್ನು, ಕನ್ನಡ ಜಗತ್ತನ್ನು ಕಟ್ಟಬೇಕಾಗಿದೆ. ವಾಗ್ವಾದಗಳನ್ನು ಹತ್ತಿಕ್ಕುವ ಪ್ರತಿಷ್ಠಿತ ಶಕ್ತಿಗಳ ವಿರುದ್ಧ ಸೆಣಸಬೇಕಿದೆ. ಸಂವಾದ ಸಾಧ್ಯವಾಗದ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಸತ್ಯ ತಿಳಿಯಬೇಕಾಗಿದೆ. ನಮ್ಮೆಲ್ಲರ ಹೃದಯ ರಣರಂಗವಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಸಂವೇದನಾಶೀಲ ಮನಸ್ಸುಗಳ ಮೇಲಿದೆ.' ಶ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.