ನಾನು ಲೇಖಕನಾಗಿ ವಿಮರ್ಶೆ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿದ್ದೇನೆ. ಯಾವ ಕೃತಿಯನ್ನೇ ಆದರೂ, ಯಾರದೇ ಕೃತಿಯನ್ನಾದರೂ, ಎಷ್ಟೇ ದೊಡ್ಡ ಸಾಹಿತಿಯ ಕೃತಿಯನ್ನೇ ಆದರೂ ವಿರ್ಮಶಾತ್ಮಕವಾಗಿ ಗ್ರಹಿಸದೇ ಭಾವುಕವಾಗಿ, ಮುಗ್ಧವಾಗಿ ಗ್ರಹಿಸುವ ಸ್ವಭಾವ ನನ್ನದಲ್ಲ. ಆದ್ದರಿಂದ ಯಾವುದೇ ಒಂದು ಕೃತಿ ನನ್ನ ಮೇಲೆ ಪೂರ್ಣ ಪ್ರಮಾಣದ ಪ್ರಭಾವ ಬೀರುವುದು ಸಾಧ್ಯವಿಲ್ಲ. ಇಷ್ಟವಾಗುವ ಭಾಗ, ಇಷ್ಟ ಆಗದೇ ಇರುವ ಭಾಗ ಇದ್ದೇ ಇರುತ್ತವೆ. ಇಷ್ಟ ಆಗುವ ಭಾಗಗಳಲ್ಲಿ ನಾನು ಹೊಸದಾಗಿ ತಿಳಿಯುವ, ಕಲಿತುಕೊಳ್ಳುವಂತಹ ಅಂಶಗಳು ಇದ್ದರೆ ಅದು ನನ್ನ ವಿಮರ್ಶೆ ಪ್ರಜ್ಞೆ ಜೊತೆಯಲ್ಲಿ ನನ್ನ ಒಳಗನ್ನು, ತಿಳಿವಳಿಕೆಯನ್ನು ರೂಪಿಸುತ್ತಾ ಹೋಗುವ ಪ್ರಕ್ರಿಯೆ ನಡೆಯುತ್ತದೆ ಎನ್ನುವುದು ನನ್ನ ಭಾವನೆ. ಆದ್ದರಿಂದ ನಿರ್ದಿಷ್ಟವಾಗಿ ಇಂಥದ್ದೇ ಕೃತಿ ಅಂತ ನಾನು ಹೇಳುವುದು ಸುಲಭವಲ್ಲ. ಆದರೆ ನಾನು ಕನ್ನಡ ವಿಮರ್ಶಕನಾಗಿಯೇ ಮುಖ್ಯವಾಗಿ ತೊಡಗಿಸಿಕೊಂಡಿದ್ದರಿಂದ ಕನ್ನಡದಲ್ಲಿ ಬರುತ್ತಿರುವಂತಹ ಕೃತಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಓದಬೇಕು ಎನ್ನುವ ಸಂಕಲ್ಪ ಬಲದಿಂದ ನನ್ನ ಶಕ್ತಿ ಸಾಮರ್ಥ್ಯದ ಮಿತಿಯಲ್ಲಿ ಓದಿಕೊಂಡು ಬರುತ್ತಿದ್ದೇನೆ.
ನಮ್ಮ ಸಮಕಾಲೀನ ಕೃತಿಗಳು ಮಾತ್ರವಲ್ಲ, ಕನ್ನಡ ಸಾಹಿತ್ಯದ ಸಾವಿರ ವರ್ಷದ ಕನ್ನಡ ಸಾಹಿತ್ಯದ ಕೃತಿಗಳನ್ನು ಕೂಡ ಆ ರೀತಿಯಲ್ಲಿ ನನ್ನ ಅಧ್ಯಯನದ ಚೌಕಟ್ಟಿನೊಳಗೆ ದಕ್ಕಿಸಿಕೊಳ್ಳುವ ಪ್ರಯತ್ನವನ್ನು ಸಾಧ್ಯವಾದಷ್ಟು ನಿಷ್ಠೆಯಿಂದ ಮಾಡುತ್ತಾ ಬಂದಿದ್ದೇನೆ. ವಿಮರ್ಶಕನಾದವನು ಶ್ರೇಷ್ಠ ಕೃತಿಗಳನ್ನು ಮಾತ್ರ ಅಧ್ಯಯನ ಮಾಡಬೇಕು, ಅಷ್ಟು ಮಾತ್ರ ಸಾಕು ಅನ್ನುವ ರೀತಿಯವನು ನಾನಲ್ಲ.
ಒಟ್ಟು ಸಾಹಿತ್ಯದ ಬೆಳವಣಿಗೆ ಇದೆಯಲ್ಲ ಅದರ ಜೊತೆಯಲ್ಲಿ ಸಾಧ್ಯವಾದಷ್ಟು ಹತ್ತಿರವಾದ, ನಿಕಟವಾದ ಸಂಬಂಧವನ್ನು ಉಳಿಸಿಕೊಳ್ಳುತ್ತಲೇ ನನ್ನ ವಿಮರ್ಶಾ ಪ್ರಜ್ಞೆ ಮತ್ತು ತಿಳಿವಳಿಕೆ ರೂಪುಗೊಳ್ಳುತ್ತಾ ಹೋಗಬೇಕು ಎನ್ನುವುದು ನನ್ನ ದೃಷ್ಟಿ.
ಕೆಲವು ಕೃತಿಗಳು, ಕೆಲವರ ಕೃತಿಗಳು, ಕೆಲವರ ಕೆಲವು ಕೃತಿಗಳು ನನಗೆ ಮಹತ್ವದ್ದು ಎನಿಸಿದಾಗ ಅವು ನನ್ನ ಸಾಹಿತ್ಯ ಕುರಿತ ದೃಷ್ಟಿಕೋನವನ್ನು, ಜೀವನ ಕುರಿತ ದೃಷ್ಟಿಕೋನವನ್ನು, ತಿಳಿವಳಿಕೆಯನ್ನು ರೂಪಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಶಕ್ತಿಯುತವಾದ ಸಾಮಗ್ರಿಗಳಾಗಿ ಒದಗಿ ಬರುತ್ತವೆ ಎನ್ನುವುದು ನನ್ನ ನಂಬಿಕೆ.
ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಸಾವಿರ ವರ್ಷಗಳಿಂತ ಹೆಚ್ಚು ದೀರ್ಘಕಾಲದ್ದು. ಎಲ್ಲ ಹಂತಗಳಲ್ಲೂ ಕೆಲವೇ ಕೆಲವು ಶ್ರೇಷ್ಠ ಪ್ರತಿಭಾವಂತರು ಎದ್ದುಕಾಣುತ್ತಾರೆ. ಹಾಗೆಯೇ ಕೆಲವೇ ಕೆಲವು ಶ್ರೇಷ್ಠ ಕೃತಿಗಳು ಕಾಣಿಸಿಕೊಳ್ಳುತ್ತವೆ. ಉಳಿದ ಪ್ರತಿಭಾವಂತರ ಕೃತಿಗಳು ಮತ್ತು ಈ ಶ್ರೇಷ್ಠ ಎಂದು ಗುರುತಿಸಲ್ಪಡುವ ಕೃತಿಗಳು ಇವೆಲ್ಲವುಗಳ ಒಟ್ಟಂದದ ಅರಿವು, ವಿವೇಕ ಆ ಕಾಲಮಾನದ ಸಂಸ್ಕೃತಿಯ ಬಿಂಬವನ್ನು ಕಟ್ಟಿಕೊಡುತ್ತವೆ. ಆ ಕಾರಣದಿಂದ ಶ್ರೇಷ್ಠ ಎಂಬ ಕೃತಿಗಳು ಮಾತ್ರವೇ ಮುಖ್ಯ ಎಂದು ಬೇರ್ಪಡಿಸಿ, ಹಾಗೆ ಓದುವ ಚಾಳಿ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲವುಗಳಿಂದ ಪಡೆಯಬಹುದಾದುದನ್ನು ಪಡೆಯುತ್ತಾ, ಹೋಗುವ ಮನಸ್ಸಿನ ವ್ಯಾಪ್ತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದು ನನ್ನ ಇಲ್ಲಿಯವರೆಗಿನ ಸಾಹಿತ್ಯ ದೃಷ್ಟಿಯಾಗಿದೆ.
ಅತ್ಯುತ್ತಮ ಕೃತಿ ಎನ್ನುವುದನ್ನು ಒಂದೆರಡು ವಾಕ್ಯಗಳಲ್ಲಿ ವ್ಯಾಖ್ಯೆಗೆ ಅಳವಡಿಸಿ ಹೇಳುವುದು ಸುಲಭ ಅಲ್ಲ. ಕೃತಿಯ ಅಧ್ಯಯನದ ನಂತರ ಪಡೆದ ಅನುಭವ, ಆ ಕೃತಿ ಶ್ರೇಷ್ಠವೋ ಅಲ್ಲವೊ ಎಂಬುದರ ಬಗ್ಗೆ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಲು ಕಾರಣವಾಗುತ್ತದೆ.
ಪ್ರಾಚೀನ ಸಾಹಿತ್ಯ ಕೃತಿಯ ಬಗ್ಗೆ ಹೇಳುವುದಾದರೆ ನನಗೆ ಪಂಪ ಅತ್ಯಂತ ದೊಡ್ಡ ಕವಿ ಎನ್ನುವ ದೃಢವಾದ ತಿಳಿವಳಿಕೆ, ವಿಶ್ವಾಸ ಬೆಳೆದಿದೆ. ಈ ಹೊತ್ತಿಗೂ ಪಂಪ, ನನ್ನ ವಿಮರ್ಶೆಯ ಪ್ರಜ್ಞೆಯನ್ನು ತಿರುತಿರುಗಿ ಪರೀಕ್ಷೆಗೆ ಒಡ್ಡುವ ಸತ್ವಶಾಲಿ ಎನಿಸಿದೆ. ನನ್ನ ಎಪ್ಪತ್ತರ ವಯಸ್ಸಿನಲ್ಲಿಯೂ `ಪಂಪ ಭಾರತವನ್ನು ಮತ್ತೆ ಓದಿದಾಗ' ಎಂಬ 35 ಪುಟಗಳ ದೀರ್ಘ ಲೇಖನವನ್ನು ಬರೆಯುವಂತಾಯ್ತು.
ಅದರಲ್ಲಿ `ಪಂಪ ಭಾರತ' ಕುರಿತ ಹೊಸ ಓದಿನ ಸಾಧ್ಯತೆಯ ಬಗ್ಗೆ ಪ್ರಸ್ತಾಪಿಸಿದ್ದೇನೆ. ಉಳಿದ ಕವಿಗಳಾದ ರನ್ನ ಮೊದಲಾದವರಿಂದಲೂ ಆ ಕಾಲಮಾನದ ಸಾಹಿತ್ಯ ತಿಳಿವಳಿಕೆ, ನನ್ನ ಅಧ್ಯಯನದ ಜೊತೆಗೇ ಬರುವಂಥವಾಗಿವೆ. ಮುಂದೆ ಕುಮಾರವ್ಯಾಸನಂಥವರು, ಹಾಗೆಯೇ ಅಲ್ಲಮನಂಥ ಅನುಭಾವಿ ಅವರೆಲ್ಲ ಯಾವ ಯಾವ ರೀತಿಯಲ್ಲಿ ನಮ್ಮ ಮನಸ್ಸನ್ನು ಕಟ್ಟಿಕೊಳ್ಳುವುದಕ್ಕೆ ಒದಗಿ ಬರುತ್ತಾರೆ ಅಂತ ಹೀಗೆ ಎಂದು ವಿವರಿಸಿ ಹೇಳುವುದು ಕಷ್ಟ. ಆದರೆ, ಅವರೆಲ್ಲ ಈ ಹೊತ್ತಿನ ನನ್ನ ತಿಳಿವಳಿಕೆಯ, ಅರಿವಿನ ಒಳವಿವರಗಳಲ್ಲಿ ಕರಗಿಹೋಗಿರುವ ಶಕ್ತಿಶಾಲಿ ಪ್ರತಿಭಾವಂತರು.
ಆಧುನಿಕ ಸಾಹಿತ್ಯಕ್ಕೆ ಬಂದರೆ ನಾನು ಲೇಖಕನಾಗಿ, ವಿಮರ್ಶಕನಾಗಿ ಬೆಳೆಯುತ್ತಿದ್ದ ಹೊತ್ತಿನಲ್ಲಿ ನನ್ನ ವಿಶೇಷ ಆಸಕ್ತಿ ಮತ್ತು ಮೆಚ್ಚುಗೆಗೆ ಕಾರಣವಾದಂತಹ ಅನೇಕ ಕೃತಿಗಳನ್ನು ಹೆಸರಿಸಬಹುದು. ಉದಾಹರಣೆಗೆ: ವಿಮರ್ಶೆಗೆ ಸಂಬಂಧಿಸಿದಂತೆ ಹೇಳುವುದಾದರೆ ವಿದ್ಯಾರ್ಥಿ ದೆಸೆಯಲ್ಲಿ ನನ್ನನ್ನು ಆಕರ್ಷಿಸಿದ್ದು `ರನ್ನ ಪ್ರಶಸ್ತಿ' ಮತ್ತು `ಕುಮಾರವ್ಯಾಸ ಪ್ರಶಸ್ತಿ' ಕೃತಿಗಳು. ಅವುಗಳಿಂದ ಆ ಇಬ್ಬರು ಕವಿಗಳಿಗೆ ಸಂಬಂಧಿಸಿದಂತೆ ನವೋದಯ ತಲೆಮಾರಿನವರ ವಿಮರ್ಶಾ ತಿಳಿವು ಮತ್ತು ಕೃತಿಯನ್ನು ಬಗೆದು, ಅಗೆದು ನೋಡುವ ಪರಿಯನ್ನು ತಿಳಿಯುವುದಕ್ಕೆ ಬಹಳಷ್ಟು ಪ್ರಯೋಜನ ಆಯಿತು.
ಕುವೆಂಪು ಅವರ ಕೆಲವು ವಿಮರ್ಶೆಯ ಲೇಖನಗಳು ಆ ಹಂತದಲ್ಲಿ ವಿಶೇಷ ಆಸಕ್ತಿ ಬೆಳೆಸಿದವು. ನನ್ನ ಆಸಕ್ತಿ ರೂಪಿಸುವಲ್ಲಿ ಕುವೆಂಪು ಅವರ ಸಾಹಿತ್ಯ ವಿಮರ್ಶೆಯ ಲೇಖನಗಳಲ್ಲಿ `ಸರೋವರದ ಸಿರಿಗನ್ನಡಿಯಲ್ಲಿ', ಯಶೋಧರ ಚರಿತ್ರೆಗೆ ಸಂಬಂಧಿಸಿದ ಲೇಖನ, `ಶೂದ್ರ ತಪಸ್ವಿ' ನಾಟಕ ಕುರಿತ ಮಾಸ್ತಿಯವರ ವಿಮರ್ಶೆಗೆ ತೋರಿಸಿದ ಪ್ರತಿಕ್ರಿಯೆ ರೀತಿಯ ಬರವಣಿಗೆ ಆ ಕಾಲದಲ್ಲಿ ಸೆಳೆದುಕೊಂಡವು.
ಆ ಮೇಲೆ ನಮಗಿಂತ ಸ್ವಲ್ಪ ಹಿರಿಯ ತಲೆಮಾರಿನಲ್ಲಿ ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಕುರಿತ ಚಿಂತನೆಯ ಲೇಖನಗಳು, ಕೀರ್ತಿನಾಥ ಕುರ್ತಕೋಟಿಯವರ `ಯುಗಧರ್ಮ ಮತ್ತು ಸಾಹಿತ್ಯ', ಯು.ಆರ್. ಅನಂತಮೂರ್ತಿಯವರ `ಪ್ರಜ್ಞೆ ಮತ್ತು ಪರಿಸರ' ವಿಮರ್ಶಾ ಪುಸ್ತಕ, ಡಾ. ಎಂ.ಜಿ. ಕೃಷ್ಣಮೂರ್ತಿಯವರ `ವಿಮರ್ಶಾ ಲೇಖನಗಳು' ವಿಶೇಷವಾದ ರೀತಿಯಲ್ಲಿ ನನ್ನ ತಿಳಿವಳಿಕೆಯನ್ನು ನನ್ನ ವಿಮರ್ಶೆಯ ದಾರಿ, ದಿಕ್ಕನ್ನು ರೂಪಿಸಿಕೊಳ್ಳಲು ನೆರವಾದವು. ಇವರು ದೊಡ್ಡವರು. ಇವರಿಂದ ಕಲಿಯುವುದು ಬಹಳಷ್ಟು ಇದೆ ಅನ್ನುವಂತೆ ನನ್ನ ಒಳಮನಸ್ಸಿನ ಒಳಗೆ ಭಾವನೆ ತುಂಬಿದರು. ಆಗಿನ ನನ್ನ ಆಯ್ಕೆಗಳು ಸರಿಯಾಗಿದ್ದವು ಎಂಬ ವಿಶ್ವಾಸ ಇಂದಿಗೂ ಉಳಿದುಕೊಂಡಿದೆ.
ಇನ್ನು ಕಾದಂಬರಿ ಕ್ಷೇತ್ರದ ಬಗ್ಗೆ ಹೇಳುವುದಾದರೆ ಗುಲವಾಡಿ ವೆಂಕಟರಾಯರ `ಇಂದಿರಾಬಾಯಿ' (1899) ಕಾದಂಬರಿ ಆಧುನಿಕ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಆ ಕಾದಂಬರಿ ಮೆಚ್ಚಿ ಗಂಭೀರವಾಗಿ ಒಂದು ದೀರ್ಘ ಲೇಖನ ಬರೆದಿದ್ದೇನೆ. ನನ್ನ ವಿಮರ್ಶೆಯ ಲೇಖನಗಳಲ್ಲಿ ಒಂದು ಮಹತ್ವದ ಲೇಖನ ಎಂದುಕೊಂಡಿದ್ದೇನೆ.
ಗಳಗನಾಥರ `ಮಾಧವ ಕರುಣಾ ವಿಲಾಸ' ನನ್ನನ್ನು ಆಕರ್ಷಿಸಿತು. ಇದು ಅದ್ಭುತ ಕಾದಂಬರಿ. ನನಗೆ ಎಂ.ಎ. ತರಗತಿಯಲ್ಲಿ ಪಠ್ಯ ಗ್ರಂಥವೂ ಆಗಿತ್ತು. ಆಗಲೇ ಮೆಚ್ಚಿಕೊಂಡಿದ್ದೆ. ಅದನ್ನು ಕುರಿತು ಮೆಚ್ಚಿಕೆಯ ಜೊತೆಗೆ ಸಾಕಷ್ಟು ವಿಮರ್ಶಾತ್ಮಕವಾಗಿಯೂ ಒಂದು ಲೇಖನ ಬರೆದಿರುವುದು ಉಂಟು. ಮುಂದೆ ಕುವೆಂಪು ಅವರ `ಕಾನೂನು ಹೆಗ್ಗಡಿತಿ' ಕೆಲಕಾಲ ನನ್ನ ಮನಸ್ಸನ್ನು ಆವರಿಸಿಕೊಂಡಿತು. ಮೊದಲು ಈ ಕಾದಂಬರಿಗೆ `ಕಾನೂರು ಸುಬ್ಬಮ್ಮ ಹೆಗ್ಗಡಿತಿ' ಎಂಬ ಹೆಸರಿತ್ತು. ನನಗೆ ನೆನಪು ಇರುವ ಹಾಗೆ ಈ ಕಾದಂಬರಿ ಐದು ಬಿಡಿಬಿಡಿ ಸಂಪುಟಗಳಲ್ಲಿ ಬಂದಿತು. ಆಗ ನಾನು ಹೈಸ್ಕೂಲ್ ವಿದ್ಯಾರ್ಥಿ. ಅತ್ಯಂತ ಶ್ರದ್ಧೆ ಮತ್ತು ತನ್ಮಯತೆಯಿಂದ ಓದಿದ್ದೆ. ಬರವಣಿಗೆಯ ಶ್ರೇಷ್ಠತೆಯ ಕಲ್ಪನೆ ನನ್ನ ಮನಸ್ಸು ತುಂಬಿದ ಕಾಲವದು. ಆ ಕಾಲದಲ್ಲಿ ಈ ಕಾದಂಬರಿ ನನ್ನನ್ನು ಬೆರಗುಗೊಳಿಸಿ, ಆಕರ್ಷಿಸಿತ್ತು.
ಮುಂದೆ `ಮಲೆಗಳಲ್ಲಿ ಮದುಮಗಳು' ಕಾದಂಬರಿ ಓದುವ ಹೊತ್ತಿಗೆ ನಾನು ಮೇಷ್ಟ್ರು ಆಗಿದ್ದೆ. ಅದು ನವ್ಯದ ವಿಮರ್ಶೆ, ತಿಳಿವಳಿಕೆ ಹಿನ್ನೆಲೆಯಲ್ಲಿ ನನ್ನ ಸಾಹಿತ್ಯಾಭಿರುಚಿ, ವಿಮರ್ಶೆಯ ದೃಷ್ಟಿಕೋನ ರೂಪುಗೊಳ್ಳುತ್ತಿದ್ದ ಕಾಲ. ಆ ಕೃತಿಯನ್ನು ಮರೆಯಲು ಆಗದೇ ಇರುವಷ್ಟು ನಿಚ್ಚಳವಾಗಿ ಮನಸ್ಸಿನಲ್ಲಿ ಊರಿ ಉಳಿಯುವಂತಹ ವಿವರಗಳನ್ನು ಬಹಳ ಮೆಚ್ಚಿದ್ದರೂ ಕೂಡ ಜನ್ಮ, ಜನ್ಮಾಂತರ ಬಗ್ಗೆ ವಿವರ ಬಂದಾಗ ಏನೇನೋ ನನ್ನ ಸಮಸ್ಯೆಗಳು ಇರುತ್ತಿದ್ದವು. ವಾಸ್ತವ ಬರವಣಿಗೆ ಭಾಗವಾಗಬೇಕಿದ್ದ ಕಾದಂಬರಿಯಲ್ಲಿ ಜನ್ಮಜನ್ಮಾಂತರ, ಟೆಲಿಪತಿ ವಿವರಗಳು ಬಂದಾಗ ಅವುಗಳಿಗೆಲ್ಲ ನಾನು ಹೇಗೆ ಸ್ಪಂದಿಸಬೇಕು ಎನ್ನುವಂಥದು ಸಮಸ್ಯೆಯಾಗಿತ್ತು. ಇಡಿಯಾಗಿ ಹೊಸ ಪ್ರಪಂಚಕ್ಕೆ ಪ್ರವೇಶ ಮಾಡಿದಂತಹ ಅನುಭವವಾಗಿತ್ತು.
ಈ ಹೊತ್ತಿಗೆ ಕನ್ನಡದಲ್ಲಿ ಶ್ರೇಷ್ಠ ಕಾದಂಬರಿ ಅಂತ ಒಂದೇ ಒಂದನ್ನು ಗುರುತಿಸಿ ಅಂದರೆ ನಾನು `ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನೇ ಗುರುತಿಸುತ್ತೇನೆ.
ನಾನು ಆ ದಿನಗಳಲ್ಲಿ `ಮಲೆಗಳಲ್ಲಿ ಮದುಮಗಳು' ಕೃತಿಯನ್ನು ಆಳವಾಗಿ ಆಗ ಗ್ರಹಿಸಿದ್ದೆ ಅನಿಸುವುದಿಲ್ಲ. ಆಗ ನನಗೆ ಪೂರ್ವನಿಶ್ಚಿತ ತಿಳಿವಳಿಕೆಗಳು ಇದ್ದವು. ವಾಸ್ತವ ಕಾದಂಬರಿಯಲ್ಲಿ ಜನ್ಮ, ಜನ್ಮಾಂತರಕ್ಕೆ ಸಂಬಂಧಿಸಿದ ವಿವರಗಳು ಬರುತ್ತವೆ ಎನ್ನುವ ಕಾರಣಕ್ಕಾಗಿ `ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಸರಿಯಾಗಿ ಗ್ರಹಿಸಲು ಅಡೆತಡೆ ಆಯಿತು ಅನಿಸಿತು. ದಿನಗಳು ಕಳೆದಂತೆ ಇದು ತುಂಬಾ ದೊಡ್ಡ ಕೃತಿ ಅನಿಸಿತು. ಈ ಮಾತು ಈಗ ಹೇಳುವುದು ಎಷ್ಟು ಸರಿಯೋ ಗೊತ್ತಿಲ್ಲ. ಆದರೂ ಹೇಳುತ್ತೇನೆ. ಈಗ `ಶ್ರೀ ರಾಮಾಯಣ ದರ್ಶನಂ'ಗಿಂತ `ಮಲೆಗಳಲ್ಲಿ ಮದುಮಗಳು' ಶ್ರೇಷ್ಠ ಅನಿಸುತ್ತದೆ. ತುಂಬಾ ಮೌಲಿಕವಾದ ಕೃತಿಗಳನ್ನು ಕುರಿತು ಹೀಗೆ ಒಂದೆರಡು ಮಾತುಗಳಲ್ಲಿ ಹೇಳಿಕೆ ರೂಪದಲ್ಲಿ ಹೇಳಿ ಸುಮ್ಮನಾಗುವುದು ಸರಿಯಲ್ಲವೇನೋ!
ನಾನು ವಿದ್ಯಾರ್ಥಿಯಾಗಿದ್ದಾಗ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು ಓದಿ ಮೆಚ್ಚಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ `ಚನ್ನಬಸವ ನಾಯಕ', `ಚಿಕವೀರ ರಾಜೇಂದ್ರ' ಕಾದಂಬರಿಗಳು, ಕೆ.ವಿ. ಅಯ್ಯರ್ ಅವರ `ಶಾಂತಲಾ' ರೊಮ್ಯಾಂಟಿಕ್ ಆಗಿದ್ದರಿಂದ ಆ ಕಾಲದಲ್ಲಿ ನನ್ನ ಮನಸ್ಸನ್ನು ತುಂಬಾ ಸೆಳೆಯಿತು. ಆಮೇಲೆ ಬಂದ `ರೂಪದರ್ಶಿ' ಇನ್ನೂ ಹೆಚ್ಚು ಮಹತ್ವದ್ದಾಗಿ ಕಂಡಿತು.
ಯು.ಆರ್. ಅನಂತಮೂರ್ತಿ ಅವರ `ಸಂಸ್ಕಾರ' ಕಾದಂಬರಿ ವಿಶೇಷ ಅನುಭವ ನೀಡಿತು. ನವ್ಯ ಪರಂಪರೆ ಗಟ್ಟಿಯಾಗಿ ರೂಪುಗೊಳ್ಳುತ್ತಿದ್ದ ಕಾಲವದು. ಅನಂತಮೂರ್ತಿ ಅವರು ಕೆಲವು ಕಥೆಗಳನ್ನು ಆಗಲೇ ಬರೆದಿದ್ದರು. `ಪ್ರಶ್ನೆ' ಸಂಕಲನದ ಕಥೆಗಳು ತುಂಬಾ ಆಕರ್ಷಿಸಿದ್ದವು. `ಪ್ರಕೃತಿ', `ಕಾರ್ತೀಕ', `ಘಟಶ್ರಾದ್ಧ'- ಈ ಮೂರು ಕಥೆಗಳು ಹೀಗೂ ಕಥೆ ಬರೆಯಬಹುದಾ, ಬರೆಯಲು ಸಾಧ್ಯವಾ ಎನ್ನುವಂತಹ ಬೆರಗು ಹುಟ್ಟಿಸುವಂಥವಾಗಿದ್ದವು. ನನಗೂ ಅವರಿಗೂ ಸ್ನೇಹ ಇದ್ದ ಕಾರಣ ಅವರು ತಮ್ಮ ಕಥೆಗಳನ್ನು ಅವರ ಸ್ವಂತ ಕೈ ಬರಹದಲ್ಲಿಯೇ ಇದ್ದ ಹಸ್ತಪ್ರತಿಯನ್ನು ಓದಲು ಕೂಡ ಕೊಡುತ್ತಿದ್ದರು. ಅವುಗಳನ್ನು ಓದುವಾಗ ಮಹಾ ಪ್ರತಿಭೆಯೊಂದು ನಮ್ಮ ಪಕ್ಕದಲ್ಲೇ ಬೆಳೆಯುತ್ತಿದೆ ಎನ್ನುವ ಭಾವನೆ ಬಲವಾಗುತ್ತಿತ್ತು. ನಂತರ `ಕ್ಲಿಪ್ ಜಾಯಿಂಟ್' ಕಥೆ ಬಂದಾಗ ಅನಂತಮೂರ್ತಿ ಸಾಮಾನ್ಯ ಅಲ್ಲ, ಅವರ ಸಂವೇದನೆಯ ಚಾಚು ವಿಸ್ತರಿಸುತ್ತಿದ್ದದ್ದು ಮಾತ್ರವಲ್ಲ, ಕನ್ನಡದಲ್ಲಿ ಸಣ್ಣ ಕಥಾ ಪ್ರಕಾರದಲ್ಲಿ ಸಂವೇದನೆಯ ಚಾಚೂ ವಿಸ್ತರಿಸುತ್ತಿದೆಯಲ್ಲ ಎಂದು ನನಗೆ ಅನಿಸಿತ್ತು. ಅಷ್ಟು ಬೆರಗಿನಲ್ಲಿ ಅವರ ಬರವಣಿಗೆಯನ್ನು ಎಷ್ಟು ಬಾರಿ ಓದಿದ್ದೇನೋ ಗೊತ್ತಿಲ್ಲ.
ಪಿ.ಲಂಕೇಶರ ಕಥೆ ಆಸಕ್ತಿ ಹುಟ್ಟಿಸುತ್ತಿದ್ದವು. ನಾವು ನವ್ಯದ ಜೊತೆ ಬೆಳೆಯುತ್ತಿದ್ದೆವು. ಸಾಹಿತ್ಯದಲ್ಲಿ ಒಂದು ಹೊಸ ತಿರುವು ಬರುತ್ತಿದ್ದಾಗ, ಹೊಸ ದೃಷ್ಟಿಕೋನ ಬದುಕನ್ನು ನೋಡುವ ರೀತಿ ಇವುಗಳಲ್ಲಿ ವ್ಯತ್ಯಾಸವಾಗಿ ರೂಪುಗೊಳ್ಳುತ್ತಿರುವಾಗ, ಬೆಳೆಯುತ್ತಿದ್ದ, ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ ನನ್ನೊಳಗೆ ಜ್ವಲಂತವಾಗಿದ್ದ ಆ ಕಾಲದಲ್ಲಿ ನನ್ನಂಥವನಿಗೆ ಹೊಸದು ಸಹಜವಾಗಿ ಸೆಳೆಯಿತು.
ಹೊಸದನ್ನು ತಿಳಿಯುವ ಆತುರ ತೀವ್ರವಾಗಿತ್ತು. ಲಂಕೇಶರ `ಬಿರುಕು' ಹೊಸ ಬಗೆಯ ಕಾದಂಬರಿ. ಡಬಲ್ ವಿಷನ್ (ದ್ವಿ ದರ್ಶನ)ಅನ್ನು ಮೊಟ್ಟ ಮೊದಲಿಗೆ ಆ `ಬಿರುಕು' ಕಾದಂಬರಿಯಲ್ಲಿ ಕಂಡೆ.
ಆ ಮೇಲೆ ದ್ವಿ ದರ್ಶನ ವ್ಯಾಪ್ತಿ ಮತ್ತು ಹೆಚ್ಚಿನ ಶಕ್ತಿಯಲ್ಲಿ ಕಂಡ ಮತ್ತೊಂದು ಕೃತಿ ದೇವನೂರ ಮಹಾದೇವ ಅವರ `ಕುಸುಮಬಾಲೆ'. ಅದನ್ನು ಓದುವಾಗಲೂ ನವ್ಯದ ರೀತಿಯಲ್ಲ, ಮಹಾದೇವ ಸ್ವೋಪಜ್ಞ ಪ್ರತಿಭೆಯ ನೆಲೆಯಲ್ಲಿ ಅದನ್ನು ಕಟ್ಟಿದ ರೀತಿ, ಬೆಳೆಸಿದ ರೀತಿ ವಿಶೇಷ ಆಸಕ್ತಿ ಬೆರಗು ಹುಟ್ಟಿಸಿತು. `ಒಡಲಾಳ' ಕೂಡ ಮೆಚ್ಚಿಕೊಂಡಿದ್ದೆ. `ಕುಸುಮಬಾಲೆ' ಕೃತಿಯನ್ನು ವಿಮರ್ಶಿಸುವುದಕ್ಕೆ ಅವರೆಗಿನ ನನ್ನ ತಿಳಿವಳಿಕೆ ಮಾನದಂಡಗಳನ್ನು ಪುನಾರಚಿಸಿ ಕೊಳ್ಳುವ ಅಗತ್ಯವಿದೆಯೇನೊ ಎಂಬಂಥ ಅನಿಸಿಕೆ ನನಗೆ ಎದುರಾಗಿತ್ತು. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಪ್ರಕಟವಾದ ಗಿರಿ (ಡಾ.ಎಂ.ಎನ್. ಹೆಗ್ಡೆ) ಅವರ `ಗತಿಸ್ಥಿತಿ' ಕಾದಂಬರಿ ವಸ್ತುವಿನ ಹೊಸತನ ಮತ್ತು ಅದರ ಗದ್ಯಶೈಲಿ ಸ್ವೋಪಜ್ಞ ಅನಿಸಿ, ಮೆಚ್ಚಿಗೆಯಾಗಿತ್ತು.
`ದ್ಯಾವನೂರು' ಕಥಾಸಂಕಲನದಲ್ಲಿದ್ದ `ಅಮಾಸ' ಮತ್ತು `ಮಾರಿಕೊಂಡವರು' ಕಥೆಗಳು ನನ್ನನ್ನು ಹೆಚ್ಚಾಗಿ ಸೆಳೆದಿದ್ದವು. `ಡಾಂಬರು ಬಂದುದು' ಹೊಸ ರೀತಿಯ ಪ್ರಯೋಗವಾಗಿತ್ತು. ಬೆರಗು ಉಂಟು ಮಾಡಿರಲಿಲ್ಲ. ಅದೇ ಕಾಲದಲ್ಲಿ ನವ್ಯದ ಬರವಣಿಗೆಯಿಂದ ಬಿಡಿಸಿಕೊಂಡು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ದೇವನೂರ ಮಹಾದೇವ ಇಬ್ಬರೂ ಹೊಸ ಪ್ರಯೋಗ ಮಾಡುತ್ತಿದ್ದರು. ಹೊಸ ಧೋರಣೆ ಹೊಸ ಜೀವನ ದೃಷ್ಟಿ ಕಟ್ಟವುದರಲ್ಲಿ ತನ್ಮಯವಾಗಿದ್ದರು.
ತೇಜಸ್ವಿಯ `ಅಬಚೂರಿನ ಪೋಸ್ಟ್ ಆಫೀಸ್', `ಕುಬಿ ಮತ್ತು ಇಯಾಲ', `ತುಕ್ಕೋಜಿ', `ನಿಗೂಢ ಮನುಷ್ಯರು' ಕಥೆಗಳು, ದೇವನೂರ ಮಹಾದೇವ ಅವರ `ದ್ಯಾವನೂರು' ಸಂಕಲನದ `ಅಮಾಸ', `ಮಾರಿಕೊಂಡವರು', `ಒಡಲಾಳ'-ಈ ಬಗೆಯ ಕಥೆಗಳಾಗಿದ್ದವು.
ತೇಜಸ್ವಿಯವರ `ಕರ್ವಾಲೊ', `ನಿಗೂಢ ಮನುಷ್ಯರು' ಶೈಲಿ ಮತ್ತು ನಿರೂಪಣೆಯ ದೃಷ್ಟಿಯಲ್ಲಿ ವಿಶಿಷ್ಟವಾಗಿವೆ. `ಕರ್ವಾಲೊ' ಕುರಿತು 50 ಪುಟದಷ್ಟು ಸುದೀರ್ಘ ಮುನ್ನುಡಿ ಬರೆದಿದ್ದೆ! ಇವರ `ಪರಿಸರದ ಕಥೆಗಳು' ಕನ್ನಡ ಸಾಹಿತ್ಯದಲ್ಲಿ ಮಹತ್ವ ಪಡೆದುಕೊಂಡಿದೆ. ಓದಿದವರಿಗೆ ಖುಷಿ ಕೊಟ್ಟಿವೆ. ಸಾಹಿತ್ಯದ ಯಾವ ಪ್ರಕಾರದಲ್ಲಿ ಗುರುತಿಸಬೇಕು ಎನ್ನುವುದು ಕಷ್ಟವಾಗುತ್ತದೆ. ಸಾಹಿತ್ಯ ಕೃತಿಗೆ, ಪ್ರಕಾರದ ಮೊಹರು ಇರಲೇ ಬೇಕೆಂಬುದು ಕಡ್ಡಾಯವಾಗಬೇಕಿಲ್ಲ.
ತೇಜಸ್ವಿಯವರ `ಅಬಚೂರಿನ ಪೋಸ್ಟ್‌ಆಫೀಸ್', `ಕುಬಿ ಮತ್ತು ಇಯಾಲ', `ಅವನತಿ', `ತುಕ್ಕೋಜಿ' ಕಥೆಗಳು ಭಿನ್ನ ಧ್ವನಿಯನ್ನು ಹೊರಡಿಸುತ್ತವೆ. ಇವುಗಳ ಮೂಲಕ ತೇಜಸ್ವಿ ನವ್ಯರ ಮೇಲೆ ನೇರವಾದ ಆಕ್ರಮಣ ಮಾಡಿದರು; ಮುಲಾಜಿಲ್ಲದೆ ಹರಿಹಾಯ್ದರು.
ನನ್ನನ್ನು ಯಾವುದೇ ರಾಜಕೀಯ ಐಡಿಯಾಲಜಿಗಾಗಲಿ, ಯಾವುದೇ ಸಾಹಿತ್ಯ ಪಂಥಕ್ಕಾಗಲಿ ನನ್ನನ್ನು ಮುಗ್ಧವಾಗಿ ಎಂದೂ ಒಪ್ಪಿಸಿಕೊಂಡವನಲ್ಲ. ಯಾರಿಗೂ ಭಕ್ತನಾಗುವ ದೃಷ್ಟಿ ನನಗೆ ಬೆಳೆದಿಲ್ಲ. ಈ ಮಾತನ್ನು ಅಹಂಕಾರದಿಂದ ಹೇಳುತ್ತಿಲ್ಲ. ಎಲ್ಲದಕ್ಕೂ, ಯಾವುದಕ್ಕು ಅವಿಮರ್ಶಕವಾಗಿ ನನ್ನನ್ನು ಒಪ್ಪಿಕೊಳ್ಳುವುದಿಲ್ಲ. ದೊಡ್ಡವರಿಂದ ನಮ್ಮ ಸಮಾಜ, ಸಂಸ್ಕೃತಿ ಬಗ್ಗೆ ಎಷ್ಟೋ ಪಡೆದುಕೊಳ್ಳುತ್ತೇವೆ. ಹೊಸ ವಿಚಾರಗಳನ್ನು, ಬೇರೆ ಬೇರೆ ರೀತಿ ಆಲೋಚನೆ ಸಾಧ್ಯತೆಯನ್ನು ನಮ್ಮಲ್ಲಿ ಹುಟ್ಟು ಹಾಕಿದವರು ಅವರೇ ಅಲ್ಲವೆ? ಈ ರೀತಿ ದೊಡ್ಡವರು ಯಾರೇ ಆಗಿರಲಿ ಭಕ್ತಾದಿಗಳ ರೀತಿ ಯಾರಿಗೂ ಆಗಲಾರೆ, ಇಲ್ಲಿಯವರೆಗೆ ಯಾವ ಸಾಹಿತಿಗೂ ಆಗಿಲ್ಲ ಅಂದುಕೊಂಡಿದ್ದೇನೆ.
ನನಗೆ ಯಾರ, ಯಾವ ಕೃತಿಗಳನ್ನು ವಿಮರ್ಶೆ ಮಾಡುವಾಗಲೂ ವಿಶೇಷವಾದ ಭಕ್ತಿ, ಆರಾಧನಾ ಭಾವ ಅಡೆತಡೆ ಆಗಿದ್ದು ಇಲ್ಲ. ನನ್ನದು ಕೊನೆಯ ಮಾತು ಅಲ್ಲ. ನನ್ನ ಅಭಿಪ್ರಾಯವನ್ನು ನಾನು ಎಷ್ಟು ಗಂಭೀರವಾಗಿ ನಾಗರಿಕ ದನಿಯಲ್ಲಿ ಹೇಳುವುದು ಸಾಧ್ಯವೋ ಹಾಗೆ ಹೇಳುವುದು ನನ್ನ ಜವಾಬ್ದಾರಿ ಅಂತ ತಿಳಿದುಕೊಂಡು ಬಂದಿದ್ದೇನೆ.
ನನ್ನ ಇಂಗ್ಲಿಷ್ ಸಾಹಿತ್ಯದ ಓದು, ವ್ಯಾಪ್ತಿ, ವಿಸ್ತಾರ ಕಡಿಮೆ ಇದೆ. ಇಂಗ್ಲಿಷ್‌ನಲ್ಲಿ ಶ್ರೇಷ್ಠವಾದವೆಂದು ಬಲ್ಲವರು, ತಿಳಿದವರು ಹೇಳಿದಾಗ ಆಸೆಯಿಂದ, ಆಸಕ್ತಿಯಿಂದ ಓದುತ್ತಾ ಬಂದಿರುವ ಅಭ್ಯಾಸ ರೂಢಿಸಿಕೊಂಡಿರುವುದೇನೋ ಇದ್ದೇ ಇದೆ.
ಕೆಲವು ವರ್ಷಗಳಿಂದ ಆರೋಗ್ಯ ಸ್ಥಿತಿಯಲ್ಲಿ ಸಾಕಷ್ಟು ಏರುಪೇರು ಆಗಿದೆ. ಆದ್ದರಿಂದ ಓದು ಕಡಿಮೆಯಾಗಿದೆ. ಈ ಹಿಂದೆ ಕನ್ನಡದಲ್ಲಿ ಬರುತ್ತಿದ್ದ ಹೆಚ್ಚಿನ ಕೃತಿಗಳನ್ನು ಓದುತ್ತಿದ್ದೆ. ಓದಿಗೆ ಶ್ರೇಷ್ಠ, ಕನಿಷ್ಠ ಎನ್ನುವ ವಿಂಗಡಣೆ ಮಾಡುತ್ತಿರಲಿಲ್ಲ. ಎಷ್ಟು ಸಾಧ್ಯವೋ ಅಷ್ಟೂ ಕೃತಿಗಳನ್ನು ಓದಬೇಕು ಎನ್ನುವ ಛಲ, ಸಂಕಲ್ಪದಿಂದ ಓದುತ್ತಿದ್ದೆ. ಈ ಮೂಲಕ ನನ್ನನ್ನು ನಾನೇ ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದೆ. ಈಗ ಇಂಥ ಮಾತನ್ನು ಹೇಳುವುದು ನನಗೆ ಕಷ್ಟವಾಗುತ್ತಿದೆ. ವಿಮರ್ಶಕ ತನ್ನ ಎದುರಿಗೆ ಇರುವ ಕೃತಿಯ ಬಗ್ಗೆ ಹೇಳುವಾಗ ಸಮಗ್ರ ಕನ್ನಡ ಸಾಹಿತ್ಯವನ್ನು ಮನಸ್ಸಿನ ಹಿನ್ನೆಲೆಯಲ್ಲಿ ಇಟ್ಟುಕೊಂಡು ಹೇಳುವ ಮಾತಾಗಬೇಕು.
ಈಗ ಎಳೆ ತಲೆಮಾರಿನವರ ಎಲ್ಲ ಕೃತಿಗಳನ್ನು ಓದಿಲ್ಲ. ಮುಖ್ಯವಾದವುಗಳನ್ನು ಓದುತ್ತಾ ಬಂದಿದ್ದೇನೆ. ಎಲ್ಲವನ್ನು ಓದಿದ್ದೇನೆ ಎಂದು ಈಗ ಹೇಳುವ ಧೈರ್ಯ ನನಗೆ ಉಳಿದಿಲ್ಲ. ಈಗಿನ ತಲೆಮಾರಿನವರು ಸಾಹಿತ್ಯ ಕೃತಿಗಳನ್ನು ಓದುತ್ತಿಲ್ಲ ಎಂದು ಸುಲಭವಾಗಿ ಸಾರಾಸಗಟಾಗಿ ಹೇಳುವುದು ಕಷ್ಟ. ನಮ್ಮ ತಲೆಮಾರಿನ ನಂತರ ಬಂದವರಿಗೆ ಅವಕಾಶ ಹೆಚ್ಚು. ಬೆಳೆಯಲು ಹೆಚ್ಚಿನ ಅನುಕೂಲಗಳಿವೆ. ಅವುಗಳನ್ನು ಬಳಸಿಕೊಳ್ಳುವ ಪ್ರತಿಭಾವಂತರು ಬಂದೇ ಬರುತ್ತಾರೆ. ಇದ್ದೇ ಇರುತ್ತಾರೆ ಎನ್ನುವ ನಂಬಿಕೆ ಇದೆ. ಎಲ್ಲ ಪ್ರಕಾರದಲ್ಲೂ ಪ್ರತಿಭಾವಂತರು ಕಾಣಿಸಿಕೊಳ್ಳುತ್ತಾರೆ. ಸಮರ್ಥರು ಇದ್ದಾರೆ.
ಈಚೆಗೆ ಧಾರವಾಡದಲ್ಲಿ ನಡೆದ `ಸಾಹಿತ್ಯ ಸಂಭ್ರಮ'ದಲ್ಲಿ ಮೂರು ದಿನಗಳ ಕಾಲ ಎಲ್ಲ ಗೋಷ್ಠಿಗಳನ್ನು ಪೂರ್ತಿಯಾಗಿ ಕೇಳಿಸಿಕೊಂಡೆ. ಪ್ರತಿಭಾವಂತರು ಇದ್ದಾರೆ, ಸತ್ವಶಾಲಿಗಳು ಇದ್ದಾರೆ! ಅವರಿಂದ ಒಂದಷ್ಟು ಹೊಸತು ಕಲಿತೆ ಅನಿಸಿತು. ಆದ್ದರಿಂದ ನಂತರದ ಅಥವಾ ಎಳೆಯ ತಲೆಮಾರಿನವರ ಬಗ್ಗೆ ನಿರಾಶೆಯಿಂದ ಮಾತನಾಡುವುದು ಸರಿಯಲ್ಲ.
ಈ ಸಂದರ್ಭದಲ್ಲಿ ಒಂದು ಮಾತು ಹೇಳಬಹುದು. ಕನ್ನಡದ ಬಗೆಗಿನ, ಭಾಷೆ ಬಗೆಗಿನ ಅಂದರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಬಗೆಗಿನ ಆಸಕ್ತಿ ಕಡಿಮೆ ಆಗುವ ಕಾಲ ಸಂದರ್ಭ ಬೆಳೆಯುತ್ತಾ ಹೋಗುತ್ತಿರುವುದರಿಂದ ಕನ್ನಡ ಕೃತಿಗಳ ವಿಷಯದಲ್ಲಿ ನಾವುಗಳೆಲ್ಲ ಓದುತ್ತಿದ್ದ ಕಾಲದಲ್ಲಿ, ಬೆಳೆಯುತ್ತಿದ್ದ ಕಾಲದಲ್ಲಿ ಇದ್ದ ನಿಷ್ಠೆ, ಶ್ರದ್ಧೆ ಮತ್ತು ಒಂದು ಥರ ಅದರ ಮೂಲಕ ನಮ್ಮನ್ನು ಕಟ್ಟಿಕೊಳ್ಳುತ್ತೇವೆ, ಕಟ್ಟಿಕೊಳ್ಳಬಹುದು ಎನ್ನುವ ಆತ್ಮವಿಶ್ವಾಸ ಈಗಿನ ತಲೆಮಾರಿನ ಪ್ರತಿಭಾವಂತರಿಗೆ ಆ ಪ್ರಮಾಣದಲ್ಲಿ ಇಲ್ಲವೇನೋ ಅನಿಸುತ್ತದೆ.
ಕಾಲ ಬದಲಾಗುತ್ತಿದೆ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗುತ್ತಿರುವ ಆಸಕ್ತಿ ವ್ಯತ್ಯಾಸ ಮತ್ತು ಭಾಷಾ ಮಾಧ್ಯಮವಾಗಿ ಕನ್ನಡಕ್ಕೆ ಮೊದಲಿನ ಮನ್ನಣೆ ಮಹತ್ವ ಕಾಣಿಸುತ್ತಿಲ್ಲ. ಇದು ತೀವ್ರ ಆತಂಕದ ಸಂಗತಿಯಾಗಿದೆ. ಇವೆಲ್ಲ ಆ ರೀತಿಯಲ್ಲಿ ಪ್ರತಿಭಾವಂತ ಓದುಗರನ್ನು ಸೆಳೆದುಕೊಳ್ಳುವುದು ಕಡಿಮೆಯಾಗುತ್ತಿದೆ ಎಂದು ಸಾರ್ವತ್ರಿಕವಾಗಿ ಹೇಳಬಹುದು.
ಈಚೆಗೆ ಬಂದ ದೇವನೂರ ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ' ಕೃತಿ ಕುರಿತು ಒಂದು ಮಾತು ಹೇಳಬೇಕು ಅನಿಸುತ್ತದೆ. 21 ನೇ ಶತಮಾನದ 13 ನೇ ವರ್ಷದಲ್ಲಿದ್ದೇವೆ. ಅದು ಈ ಶತಮಾನದಲ್ಲಿ ನಾನು ಈವರೆಗೆ ಓದಿದ ಅತ್ಯಂತ ಮಹತ್ವದ ಗದ್ಯಕೃತಿ. ಸುಮಾರು 40 ವರ್ಷಗಳ ಕಾಲಮಾನ, ಸಮಾಜ, ಸಂಸ್ಕೃತಿ, ರಾಜಕೀಯ, ಸಾಹಿತ್ಯ ಇವುಗಳಿಗೆ ಸಂಬಂಧಿಸಿದಂತಹ ಎಷ್ಟೋ ಸಮಸ್ಯೆಗಳ ಕುರಿತು ಮಹಾದೇವ ಅವರ ಒಳನೋಟ, ಹೊಳಹುಗಳು ಸಮೃದ್ಧವಾಗಿ ಬಂದಿವೆ. ಅಲ್ಲಿಯ ಬಹುಪಾಲು ವಿಷಯಗಳ ಬಗ್ಗೆ ನಾವು ನಮ್ಮ ನಮ್ಮದೇ ರೀತಿಯಲ್ಲಿ ಬರವಣಿಗೆ ಮಾಡಿದ್ದು, ಪ್ರತಿಕ್ರಿಯಿಸುತ್ತಾ ಬಂದಿದ್ದು ಎಲ್ಲವೂ ಇದೆ. ಆ ಹಿನ್ನೆಲೆಯಲ್ಲೂ ಆ ಕೃತಿಯನ್ನು ನೋಡಿದಾಗ ಅದು ಒಂದು ಧ್ಯಾನಸ್ಥ ಮನಸ್ಸಿನ ಬರವಣಿಗೆಯಾಗಿ ಕಂಡಿದೆ.
ಇನ್ನೊಂದು ಕಾರಣಕ್ಕೂ ಮಹತ್ವದ್ದು ಅನಿಸಿದೆ. 2003ರಲ್ಲಿ ಮಹಾದೇವ ಅವರ ಕೃತಿಗಳ ಬಗ್ಗೆ ರಹಮತ್ ತರೀಕೆರೆ ಅವರು ನನ್ನನ್ನು ಸಂದರ್ಶನ ಮಾಡಿದಾಗ ಹೇಳಿದ್ದೆ. ಮಹಾದೇವ ಅವರ ಪ್ರತಿಭೆ ಸಾಮಾನ್ಯವಾದುದಲ್ಲ ಅಂದಿದ್ದೆ. ಅವರು ಬರೆದುದೆಲ್ಲ ಬಂಗಾರ ಅನ್ನುವ ಮಾತನ್ನೂ ಆಗಾಗ ಹೇಳುತ್ತಾ ಬಂದಿದ್ದೂ ಉಂಟು. ಆದರೆ ಒಂದು ನಾಗರಿಕತೆ, ಸಂಸ್ಕೃತಿಯ ವ್ಯಾಪ್ತಿ ದೃಷ್ಟಿಯಿಂದ ನೋಡಿದರೆ ಅಷ್ಟು ಸಾಲದು ಅನಿಸುತ್ತದೆ ಎಂದೂ ಹೇಳಿದಿದ್ದೆ. `ಎದೆಗೆ ಬಿದ್ದ ಅಕ್ಷರ' ಪುಸ್ತಕ ಬಂದ ಮೇಲೆ ಆ ಮಾತನ್ನು ಹೇಳುವುದು ಸಾಧ್ಯವಿಲ್ಲ. ಮಹಾದೇವ ಅವರು ಈವರೆಗಿನ ಸೃಜನಶೀಲ ಕೃತಿಗಳನ್ನು ಪ್ರಕಟಣೆಗೆ ಮುನ್ನವೇ ನನಗೆ ಕೊಟ್ಟು ಓದಿಸುತ್ತಾ ಬಂದ್ದ್ದಿದಾರೆ.
ಯು.ಆರ್. ಅನಂತಮೂರ್ತಿ ಅವರು `ಸಂಸ್ಕಾರ' ಬರೆದು ಮುಗಿಸುವವರೆಗೆ ಬರೀ ಬ್ರಾಹ್ಮಣ ಪರಿಸರದ ವಸ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆಯುತ್ತಿದ್ದರು. ಆಗ ಅನಂತಮೂರ್ತಿಯವರ `ಸಂಸ್ಕಾರ' ಕಾದಂಬರಿಗಿಂತ ಮೊದಲಿನ ಕಥೆಗಳ ಬಗ್ಗೆ ಲೇಖನ ಬರೆದು ಅದರಾಚೆಯಲ್ಲಿ ಅನಂತಮೂರ್ತಿಯವರ ಪ್ರಜ್ಞೆ ಮತ್ತು ಪ್ರತಿಭೆ ಕೆಲಸ ಮಾಡುತ್ತಿಲ್ಲ ಎಂದಿದ್ದೆ. ಹಾಗೆಯೇ ಮಹಾದೇವ ಬಗ್ಗೆಯೂ ಹೇಳಿದ್ದೆ.
ಕುಸುಮಬಾಲೆ ಪ್ರಕಟ ಆಗುವವರೆಗೂ ಸೃಜನಶೀಲ ಬರವಣಿಗೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಅವರ ಪ್ರತಿಭೆ ಸಾಧಾರಣ ಅಲ್ಲ ಅನಿಸಿದರೂ ದಲಿತ ಚೌಕಟ್ಟಿನ ಒಳಗಡೆ ಅತ್ಯಂತ ಸೂಕ್ಷ್ಮ ಪ್ರತಿಭಾವಂತ ಮನಸ್ಸು ಕೆಲಸ ಮಾಡುತ್ತಿದೆ ಎಂದು ಒಪ್ಪಿಕೊಳ್ಳುವಾಗಲೂ ಮಹಾದೇವರಿಗೆ ಅದರಾಚೆಗೂ ಆಳವಾಗಿ ಚಾಚಿಕೊಳ್ಳುವ ಶಕ್ತಿ, ಸಂವೇದನ ವ್ಯಾಪ್ತಿ ಇಲ್ಲವೇನೋ ಅಥವಾ ಕಡಿಮೆ ಇದೆಯೇನೋ ಅನಿಸಿತ್ತು. ಆದರೆ `ಎದೆಗೆ ಬಿದ್ದ ಅಕ್ಷರ'ವನ್ನು ಓದಿದಾಗ ಅದನ್ನು ಮೀರಿ ಮಹಾದೇವ ಪ್ರತಿಭೆ ಸೂಕ್ಷ್ಮ ಹೊಳಹುಗಳ ಸಮೃದ್ಧಿ, ತಾಜಾತನ ಇರುವ ತುಂಬಾ ಮಹತ್ವದ ಕೃತಿ ಅನಿಸಿದೆ.
ಈಗ ಅಡ್ಡ ಪ್ರವೇಶ ದಾರಿಗಳು ಮಕ್ಕಳಿಗೆ ಹೆಚ್ಚಾಗಿ ಇವೆ. ಟಿ.ವಿಯಲ್ಲಿ ಸೀರಿಯಲ್‌ಗಳು ಬರುತ್ತಿವೆ. ಅವುಗಳಲ್ಲಿ ಸಾಹಿತ್ಯ ರುಚಿಯಾಗಲಿ, ಸಂಸ್ಕೃತಿಯ ರುಚಿಯಾಗಲಿ, ಗುಣಮಟ್ಟದ ದೃಷ್ಟಿಯಿಂದ ಎತ್ತರದವಾಗಿ ಕಾಣಿಸುತ್ತಿಲ್ಲ. ಬದುಕು, ಜೀವನ ದೃಷ್ಟಿ ಬೆಳೆಸಿಕೊಳ್ಳುವುದಕ್ಕೆ ಸಂಬಂಧಿಸಿದ ಹಾಗೆ ಮಾಗಿದ ತಿಳಿವಳಿಕೆಯ ಸಂದೇಶಗಳು ಮಕ್ಕಳಿಗೆ ಸಿಗುತ್ತಿಲ್ಲ. ಇಂಥ ದುಷ್ಕಾಲದಲ್ಲಿಯೂ ಟಿ.ಎನ್. ಸೀತಾರಾಂ ಅವರ `ಮುಕ್ತ ಮುಕ್ತ' ಸೀರಿಯಲ್ ನನಗೆ ಸಂತೋಷ ಕೊಟ್ಟಿದೆ ಎಂದು ಹೇಳಬೇಕು.
ಹೀಗಾಗಿ ಹುಡುಗರಿಗೆ ಓದುವುದಕ್ಕಿಂತ ನೋಡುವುದು ಸುಲಭವಾಗಿ ಸಿಗುತ್ತದೆ. ಓದು ದುಡಿಮೆಯ ಭಾಗ. ನೋಡುವುದರಲ್ಲಿ ಅಷ್ಟೊಂದು ಮನಸ್ಸಿನ ದುಡಿಮೆಯ ಭಾಗ ಇರುವುದಿಲ್ಲ. ಹಾಗಾಗಿ ಸುಲಭವಾಗುತ್ತದೆ. ಓದಿ ತಿಳಿದುಕೊಳ್ಳುವುದಕ್ಕಿಂತ ನೋಡುವುದು ಹೆಚ್ಚು ಪ್ರಭಾವ ಬೀರುತ್ತದೆ. ಮುಯ್ಯಿ, ಹಿಂಸೆಗಳ ಬೆನ್ನು ಬೀಳುವ ಮನೋಧರ್ಮ ಬೆಳೆಸುತ್ತಿದೆ. ಇಂಥ ಹೊತ್ತಲ್ಲಿ ಸಂಸ್ಕೃತಿ ರುಚಿ ಬೆಳೆಸುವುದರಲ್ಲಿ ಸೋಲುತ್ತಿದೆ. ಮಕ್ಕಳ ಎದುರಿಗೆ ಇರುವ ದೊಡ್ಡ ಆತಂಕದ ಸಂದರ್ಭ ಇದು.
ಮಕ್ಕಳ ಆಸಕ್ತಿಯನ್ನು ವಿಸ್ತರಿಸಲು ಕುವೆಂಪು, ಮಾಸ್ತಿಯವರ ಸಣ್ಣಕಥೆಗಳನ್ನು ಮಕ್ಕಳು ಓದಬೇಕೆಂದು ಅನಂತಮೂರ್ತಿ ಹೇಳಿದ್ದುಂಟು. ಶಿವರಾಮ ಕಾರಂತ ಅವರ ಕಾದಂಬರಿಗಳನ್ನು ಓದಲು ಹೇಳಬೇಕು. ಇಂಥದ್ದೇ ಓದಿ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟವೇ. ಸಾಹಿತ್ಯದ ಪ್ರಧಾನ ಗುರಿ ಸಂಸ್ಕೃತಿ ಕಟ್ಟುವುದು. ಆ ಸಂಸ್ಕೃತಿ ಕಟ್ಟುವುದು ಅಂದರೆ ಬಾಲಕರಿದ್ದಾರಲ್ಲ ಅವರೊಳಗೆ ಅದರ ಬೀಜಗಳನು ಬಿತ್ತಿ ಬೆಳಸುತ್ತಾ ಹೋಗಬೇಕು. ಶಿವರಾಮ ಕಾರಂತ, ಯಶವಂತ ಚಿತ್ತಾಲ. ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಕಾರ್ನಾಡ ಸಾಮಾನ್ಯರಲ್ಲ. ಇವರೆಲ್ಲರನ್ನೂ ಓದಲೇಬೇಕು. ಇಂಥವರ ಕೃತಿಗಳ ಓದಿಗೆ ಒಂದು ಹಂತದ ಸಿದ್ಧತೆಯೂ ಬೇಕು. ಇಂತಹ ಸಿದ್ಧತೆಯನ್ನು ಎಳೆಯರಲ್ಲಿ ತುಂಬಬೇಕು.
ಮಕ್ಕಳು ಬೆಳೆಯುತ್ತಾ ಹೋದಂತೆ ಬದುಕಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳುವ ಮಾನವೀಯ ಮೌಲ್ಯ ಸೂಕ್ಷ್ಮಗಳಿಗೆ ಸಂವೇದಿಸುವ, ಅನುರಣನ ಸಾಧ್ಯತೆಗಳನ್ನು ಉಳಿಸಿಕೊಳ್ಳುವ ಸಹೃದಯ ಸಂಸ್ಕಾರವನ್ನು ಬೆಳೆಸುತ್ತಾ ಹೋಗುವಂಥ ಸತ್ವಶಾಲಿ ಕೃತಿಗಳು ಯಾರದಾದರೂ, ಯಾವುದಾದರೂ ಓದುವ ಅಭ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳತ್ತ ಹೋಗಬೇಕು. ಮತಧರ್ಮಾಂಧತೆ, ಜಾತಿ ಮೌಢ್ಯಗಳಿಗೆ ಬಲಿಯಾಗದೆ ಮಕ್ಕಳನ್ನು ಕುವೆಂಪು ಹೇಳಿದಂತೆ `ನಿರಂಕುಶಮತಿ'ಗಳಾಗಿ ಬೆಳೆಸುವುದರತ್ತ ಹಾಗೂ ದೇವನೂರ ಮಹಾದೇವ `ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ ಒತ್ತುಕೊಟ್ಟು ಹೇಳಿದಂಥ ಸಮತೆ, ಮಾನವೀಯ ಅನುಕಂಪ, ಅಂತಃಕರಣದ ಸಂವೇದನೆ ರೂಪಿಸುವುದರತ್ತ ಹಿರಿಯರಾದವರು ಎಷ್ಟು ಕಾಳಜಿ ವಹಿಸಿದರೂ ಕಡಿಮೆ ಎಂಬಂಧ ಕಾಲಸಂದರ್ಭ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.