ADVERTISEMENT

ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!

ಆಕಾರ್ ಪಟೇಲ್
Published 30 ಸೆಪ್ಟೆಂಬರ್ 2018, 19:54 IST
Last Updated 30 ಸೆಪ್ಟೆಂಬರ್ 2018, 19:54 IST
   

2019ರ ಚುನಾವಣೆಯನ್ನು ಎದುರು ನೋಡುತ್ತಿರುವ ಜನರಲ್ಲಿ ಇರುವ ಕಳವಳಗಳಲ್ಲಿ ‘ಹಿಂದೂ ರಾಷ್ಟ್ರ’ದ ಭೀತಿಯೂ ಒಂದು. ಹಿಂದೂ ರಾಷ್ಟ್ರದ ಪರಿಕಲ್ಪನೆಯು ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಸಂವಿಧಾನದಿಂದ ಧಾರ್ಮಿಕ ಸಂವಿಧಾನದತ್ತ ಎಳೆಯುತ್ತದೆ. ಇದು ಭಾರತವನ್ನು ಇನ್ನಷ್ಟು ಅಥವಾ ಪೂರ್ತಿಯಾಗಿ ಹಿಂದೂ ಪ್ರಭುತ್ವವನ್ನಾಗಿ ಮಾಡುತ್ತದೆ. ಸತತವಾಗಿ ಎರಡನೆಯ ಬಾರಿ, ಭಾರಿ ಬೆಂಬಲದೊಂದಿಗೆ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದರೆ, ಅದು ಹಿಂದೂ ರಾಷ್ಟ್ರವಾಗಿಸುವ ಕೆಲವು ಅಂಶಗಳನ್ನು ಸಂವಿಧಾನಕ್ಕೆ ಸೇರಿಸಲು ಆ ಪಕ್ಷಕ್ಕೆ ಉತ್ತೇಜನ ನೀಡುತ್ತದೆ ಎಂಬ ಮಾತುಗಳು ಇವೆ.

ಅಂಥದ್ದೇನೂ ಆಗದು ಎಂಬುದು ನನ್ನ ಭಾವನೆ. ಏಕೆ ಎಂಬುದನ್ನು ವಿವರಿಸುತ್ತೇನೆ.

ಭಾರತವನ್ನು ಯಾವ ಪಕ್ಷ ಬೇಕಿದ್ದರೂ ಆಳಲಿ, ವೈಯಕ್ತಿಕ ಹಕ್ಕುಗಳ ವಿಚಾರದಲ್ಲಿ ದೊಡ್ಡ ಬದಲಾವಣೆ ಏನೂ ಆಗದು ಎಂಬ ಮಾತನ್ನು ಮೊದಲೇ ಹೇಳಿಬಿಡುವೆ. ನಾನು ಕೆಲಸ ಮಾಡುತ್ತಿರುವ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದೆ. ಅಲ್ಲಿ ಮಿತಿ ಮೀರಿದ ಬಲ ಪ್ರಯೋಗ ಹಾಗೂ ಸಶಸ್ತ್ರ ಪಡೆಗಳು ಶಿಕ್ಷೆಯಿಂದ ವಿನಾಯಿತಿ ಪಡೆದಿರುವುದು ತೀರಾ ಈಚೆಗಿನ ಬೆಳವಣಿಗೆಯೂ ಅಲ್ಲ, ಈ ಸರ್ಕಾರ ಬಂದ ನಂತರ ಆಗಿರುವುದೂ ಅಲ್ಲ. ಹಾಗೆಯೇ, ಸೇನೆಯ ವಿರುದ್ಧ ನಮ್ಮ ನ್ಯಾಯಾಲಯಗಳ ಮೂಲಕ ಕಾನೂನು ಕ್ರಮ ಜರುಗಿಸುವುದರಿಂದ ರಕ್ಷಣೆ ನೀಡಿರುವ ಎಎಫ್‌ಎಸ್‌ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಸೃಷ್ಟಿ ಈಗಿನ ಬಿಜೆಪಿ ಸರ್ಕಾರದಿಂದ ಆಗಿರುವುದಲ್ಲ. ಭಾರತೀಯರ ವೈಯಕ್ತಿಕ ಹಕ್ಕುಗಳು ಹಾಗೂ ಪ್ರಭುತ್ವದಿಂದ ನಡೆಯುವ ಹಕ್ಕುಗಳ ದಮನದ ಬಗ್ಗೆ ಆಲೋಚಿಸಿದಾಗ ನೆನಪಾಗುವ ಸಮಸ್ಯೆಗಳೆಲ್ಲ ಹಳೆಯವು.

ADVERTISEMENT

ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ದೇಶದ ದುರ್ಬಲ ವರ್ಗಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಸದಲ್ಲ. ಈ ಸರ್ಕಾರದ ನೀತಿಗಳು ಹಾಗೂ ಆವೇಶದ ಮಾತುಗಳು ದೇಶಕ್ಕೆ ಹೊಸದಾಗಿ ಪರಿಚಯಿಸಿದ್ದೆಂದರೆ, ನಿರ್ದಿಷ್ಟ ಮಾಂಸ ತಿಂದ, ಅದನ್ನು ಇಟ್ಟುಕೊಂಡ ಕಾರಣಕ್ಕೆ ವ್ಯಕ್ತಿಗಳನ್ನು ಗುಂಪುಗೂಡಿ ಸಾಯಹೊಡೆಯುವ ಸಾಂಕ್ರಾಮಿಕವನ್ನು ಮಾತ್ರ. ಇದನ್ನು ಹೊರತುಪಡಿಸಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ಏನೂ ಆಗಿಲ್ಲ ಎಂದು ವಾದಿಸಬಹುದು.

ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದವನಾಗಿ, ಆ ದೇಶವನ್ನು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದವನಾಗಿ, ಉಪಖಂಡದ ‘ಧಾರ್ಮಿಕ’ ಪ್ರಭುತ್ವದ ಅಡಿಯಲ್ಲಿ ವ್ಯಕ್ತಿಯ ಬದುಕೆಂಬುದು ‘ಜಾತ್ಯತೀತ’ ಪ್ರಭುತ್ವದ ಅಡಿಯಲ್ಲಿನ ಬದುಕಿಗಿಂತ ಬಹಳ ಭಿನ್ನವಾಗೇನೂ ಇಲ್ಲ ಎಂದು ನಾನು ಹೇಳುತ್ತೇನೆ. ಪಾಕಿಸ್ತಾನದಲ್ಲಿನ ಕೆಲವು ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಅಲ್ಲಿನ ಅಲ್ಪಸಂಖ್ಯಾತರ ವಿರುದ್ಧವಾಗಿ ರೂಪಿಸಲಾಗಿವೆ ಎಂಬುದು ನಿಜ. ಉದಾಹರಣೆಗೆ, ಅಲ್ಲಿ ಮುಸ್ಲಿಮರಲ್ಲದವರು ರಾಷ್ಟ್ರಪತಿ ಅಥವಾ ಪ್ರಧಾನಿ ಆಗುವಂತಿಲ್ಲ. ಅಲ್ಲಿನ ‘ಅಹಮದಿ’ ಮುಸ್ಲಿಂ ಸಮುದಾಯವು ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವಂತೆ ಇಲ್ಲ. ಆದರೆ, ಉಳಿದೆಲ್ಲವೂ ಹೆಚ್ಚು-ಕಮ್ಮಿ ಭಾರತದಲ್ಲಿ ಇರುವಂತೆಯೇ ಇವೆ. ಅಲ್ಪಸಂಖ್ಯಾತರು ಪಾಕಿಸ್ತಾನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದಾರಾದರೂ, ಭಾರತದಲ್ಲಿನ ಅಲ್ಪಸಂಖ್ಯಾತರಲ್ಲಿ ಇರುವಂತೆಯೇ ಅವರಲ್ಲಿ ಕೂಡ ಅಭದ್ರತೆ ಹಾಗೂ ಮುಖ್ಯವಾಹಿನಿಂದ ಹೊರಹಾಕಲ್ಪಟ್ಟ ಭಾವ ಇದೆ.

ಹಿಂದೂ ರಾಷ್ಟ್ರವೆಂದರೆ ಏನಿರಬಹುದು ಎಂಬುದನ್ನು ನೋಡೋಣ. ಯಾವುದೇ ಧಾರ್ಮಿಕ ರಾಷ್ಟ್ರದಲ್ಲಿ ಇರುವಂತೆ ಇಲ್ಲಿ ಕೂಡ ಎರಡು ಅಂಶಗಳು ಇರುತ್ತವೆ. ಧರ್ಮ ಹೇಳುವ ಮೌಲ್ಯಗಳು ಹಾಗೂ ಅದು ಪ್ರತಿಪಾದಿಸುವ ಸಂಸ್ಕೃತಿಯನ್ನು ಕಾನೂನು ರೂಪದಲ್ಲಿ ತರಲಾಗುತ್ತದೆ. ಉದಾಹರಣೆಗೆ, ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ, ಮದ್ಯದ ಮೇಲೆ ನಿರ್ಬಂಧ ಇದೆ. ರಮ್ಜಾನ್‌ ಮಾಸದ ಸಂದರ್ಭದಲ್ಲಿ ಹಗಲು ಹೊತ್ತಿನಲ್ಲಿ ರೆಸ್ಟೊರೆಂಟ್‌ಗಳನ್ನು ಮುಚ್ಚಬೇಕಾಗುತ್ತದೆ. ಇಂತಹ ಕೆಲವು ಅಂಶಗಳು ನಮ್ಮಲ್ಲಿ ಈಗಾಗಲೇ ಇವೆ. ಮದ್ಯ ಮತ್ತು ಗೋಹತ್ಯೆಯ ಮೇಲಿನ ನಿಷೇಧ ಒಂದಲ್ಲ ಒಂದು ರೂಪದಲ್ಲಿ, ಹಲವು ರಾಜ್ಯಗಳಲ್ಲಿ ಕಾನೂನಿನ ರೂಪದಲ್ಲಿ ಇವೆ.

ಧರ್ಮ ಅಥವಾ ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಿ, ಅವರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಸೂಚಿಸುವುದು ಎರಡನೆಯ ಅಂಶ. ಧಾರ್ಮಿಕ ಪ್ರಭುತ್ವದ ಅಡಿ ಜನ ಭಯಪಡುವುದು ಇಂಥವುಗಳ ಬಗ್ಗೆ. ಆಧುನಿಕ ಜಗತ್ತು ಸ್ವೀಕರಿಸಬಹುದಾದ ಯಾವುದೇ ಪಠ್ಯ ಇಲ್ಲದಿರುವುದೇ ಹಿಂದೂ ರಾಷ್ಟ್ರ ಪರಿಕಲ್ಪನೆಯಲ್ಲಿನ ಸಮಸ್ಯೆ. ಸಮಾಜ ಹಾಗೂ ದೇಶವನ್ನು ಹಿಂದೂ ಮಾರ್ಗದ ಮೂಲಕ ಸಂಘಟಿಸುವ ಅತ್ಯಂತ ಪ್ರಮುಖ ವಿಧಾನ 'ಜಾತಿ'. ಇದು ಹಿಂದೂಗಳಲ್ಲೇ ಹಲವರಿಗೆ ಸ್ವೀಕಾರಾರ್ಹವಲ್ಲ. ಉತ್ತರದಿಂದ ದಕ್ಷಿಣದವರೆಗೆ ರಾಜಕೀಯದಲ್ಲಿ ಪ್ರಭಾವಿ ಸಮುದಾಯಗಳಾಗಿ ಕಂಡುಬರುವ ಪಟೇಲರು, ಒಕ್ಕಲಿಗರು, ಜಾಟರು, ಯಾದವರು, ರೆಡ್ಡಿಗಳು... ಇವರೆಲ್ಲ ಶೂದ್ರ ಸಮುದಾಯಗಳಿಗೆ ಸೇರಿದವರು. ಬಹುಪಾಲು ಮುಖ್ಯಮಂತ್ರಿಗಳು ಹಾಗೂ ಸಚಿವರು ಈ ಜಾತಿಗಳಿಂದ ಬಂದವರಾಗಿರುತ್ತಾರೆ. ಕಾನೂನಿನಲ್ಲಿ ಕೆಲವು ಬದಲಾವಣೆ ಆದ ಕಾರಣಕ್ಕೆ ಈ ಜಾತಿಗಳೂ ತಮ್ಮಲ್ಲಿರುವ ಅಧಿಕಾರವನ್ನು ಬ್ರಾಹ್ಮಣರ ಕೈಗೆ ಸ್ವಯಂಸ್ಫೂರ್ತಿಯಿಂದ ಬಿಟ್ಟುಕೊಡುವುದಿಲ್ಲ. ಹಿಂದೂ ರಾಷ್ಟ್ರವು ಅವರ ಬಳಿ ಇಲ್ಲದ ಹೊಸದೇನನ್ನೋ ಕೊಡುವುದಿಲ್ಲ.

ಹಾಗೆಯೇ, ನಮ್ಮ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಇರುವ ದಲಿತರು ಮತ್ತು ಆದಿವಾಸಿಗಳಿಗೆ ಕೂಡ ಹಿಂದೂ ರಾಷ್ಟ್ರ ವ್ಯವಸ್ಥೆಯಲ್ಲಿ ಸಿಗುವುದು ಏನೂ ಇಲ್ಲ. ಹಾಗಾಗಿ ಅವರು ಈ ವ್ಯವಸ್ಥೆ ಬಯಸುತ್ತಾರೆ ಎಂಬುದಕ್ಕೆ ಕಾರಣಗಳು ಇಲ್ಲ. ಹಿಂದೂ ಧರ್ಮಕ್ಕೆ ಮತ್ತು ಅದರ ಅನುಯಾಯಿಗಳಿಗೆ ಪ್ರಾಧಾನ್ಯ ನೀಡುವ ವ್ಯವಸ್ಥೆಯು ಅದರಲ್ಲಿನ ಜಾತಿಗಳ ಬಗ್ಗೆ ಗಮನಿಸಬೇಕು. ಆ ಕೆಲಸ ಆರಂಭವಾಗುವಂಥದ್ದೇ ಅಲ್ಲ!

2008ರವರೆಗೆ ನೇಪಾಳ ಏಕೈಕ ಹಿಂದೂ ದೇಶ ಆಗಿತ್ತು. 2008ರಲ್ಲಿ ನೇಪಾಳ ಗಣರಾಜ್ಯ ಆಗುವ ಮೂಲಕ ಅಲ್ಲಿನ ಕ್ಷತ್ರಿಯ ವಂಶದ ಆಡಳಿತ ಕೊನೆಗೊಂಡಿತು. ನೇಪಾಳ ಹಿಂದೂ ರಾಷ್ಟ್ರ ಆಗಿದ್ದುದು ಏಕೆ? ಏಕೆಂದರೆ, ಅಲ್ಲಿನ ಕಾರ್ಯಕಾರಿ ಅಧಿಕಾರಗಳು ಮನುಸ್ಮೃತಿಯಲ್ಲಿ ಹೇಳಿರುವಂತೆ ಕ್ಷತ್ರಿಯ ರಾಜನ ಕೈಯಲ್ಲಿ ಇದ್ದವು. ಆದರೆ ನೇಪಾಳ ಅಷ್ಟರಮಟ್ಟಿಗೆ ಮಾತ್ರ ಹಿಂದೂ ರಾಷ್ಟ್ರ ಆಗಿತ್ತು. ಹಿಂದೂ ಗ್ರಂಥಗಳಿಂದ ಬೇರೆ ಏನನ್ನೂ ಅಲ್ಲಿ ಅನ್ವಯಿಸಲು ಆಗುತ್ತಿರಲಿಲ್ಲ. ಅವು ವಿಶ್ವಸಂಸ್ಥೆಯು ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ಹೊರಡಿಸಿದ ಘೋಷಣೆಗೆ ವಿರುದ್ಧ.

ಅಂದರೆ, ಹಿಂದೂ ರಾಷ್ಟ್ರ ರಚಿಸಲು ಸಂವಿಧಾನಕ್ಕೆ ಯಾವ ರೀತಿಯ ಬದಲಾವಣೆ ತರಬಹುದು? ಹಿಂದೂಗಳಲ್ಲದವರ ವಿರುದ್ಧ ತಾರತಮ್ಯದ ಧೋರಣೆ ಅನುಸರಿಸಬಹುದು, ಅವರ ಹಕ್ಕುಗಳನ್ನು ನಿರಾಕರಿಸಬಹುದು. ಇವುಗಳಲ್ಲಿ
ಕೆಲವನ್ನು ನಾವು ಈಗಾಗಲೇ ಮಾಡಿ ಆಗಿದೆ. ಬಿಹಾರದಲ್ಲಿ ಮತ್ತು ಗುಜರಾತಿನಲ್ಲಿ ಕ್ರೈಸ್ತರು ಧಾರ್ಮಿಕ ಮಹತ್ವದ (sacramental wine) ವೈನ್‌ ಸೇವಿಸುವಂತೆ ಇಲ್ಲ. ಹಾಗೆಯೇ, ದೇಶದ ಬಹುತೇಕ ಕಡೆ ಮುಸ್ಲಿಮರು ಗೋಹತ್ಯೆ ಮಾಡುವಂತೆ ಇಲ್ಲ. ಇತರ ಹಕ್ಕುಗಳನ್ನು ನಾವು ಅಧಿಕೃತವಾಗಿ ಕಿತ್ತುಕೊಂಡಿಲ್ಲ. ಆದರೆ, ವಾಸ್ತವದಲ್ಲಿ ಆ ಹಕ್ಕುಗಳು ಜಾರಿಯಲ್ಲಿ ಇಲ್ಲ. ಮುಸ್ಲಿಮರು ನಮ್ಮಲ್ಲಿ ಪ್ರಧಾನಿ ಆಗಬಾರದು ಎಂದೇನೂ ಇಲ್ಲ. ಆದರೆ, ಸನಿಹದ ಭವಿಷ್ಯದಲ್ಲಿ ಅಂಥದ್ದೊಂದು ಸಾಧ್ಯವಾಗುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ವಾಸ್ತವದಲ್ಲಿ, ಸ್ವಾತಂತ್ರ್ಯಾನಂತರ ನಮ್ಮಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಈಗ ಬಹಳ ಕಡಿಮೆ ಇದೆ. ಆದರೆ ಅದೊಂದು ಚರ್ಚೆಯ ವಸ್ತುವೂ ಆಗಿಲ್ಲ.

ನಾವು ಹೀಗೆಯೇ ಮುಂದುವರಿದು, ಮುಸ್ಲಿಮರು ಮತ್ತು ಕ್ರೈಸ್ತರಿಗೆ ಕೆಲವು ರಾಜಕೀಯ ಹಕ್ಕುಗಳನ್ನು ಹಿಂದೂ ರಾಷ್ಟ್ರದಲ್ಲಿ ಅಧಿಕೃತವಾಗಿ ನಿರಾಕರಿಸಬಹುದು. ಆದರೆ, ಹಿಂದೂ ರಾಷ್ಟ್ರವು ಹಿಂದೂಗಳಲ್ಲಿ ಬಹುಸಂಖ್ಯಾತರಾದವರ ಹಕ್ಕುಗಳು ಮತ್ತು ಅಧಿಕಾರವನ್ನು ಕೂಡ ಕಿತ್ತುಕೊಳ್ಳುತ್ತದೆಯಾದ ಕಾರಣ, ಹಿಂದೂ ರಾಷ್ಟ್ರ ಸ್ಥಾಪನೆ ಬಿಜೆಪಿ ಅಥವಾ ಇನ್ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಹಿಂದೂ ರಾಷ್ಟ್ರದ ಪರಿಕಲ್ಪನೆ ಏನು, ವಾಸ್ತವದಲ್ಲಿ ಅದು ಹೇಳುವುದು ಏನು ಎಂಬುದು ಅಸ್ಪಷ್ಟವಾಗಿರುವುದು, ಮುಂದೆಯೂ ಅದು ಅಸ್ಪಷ್ಟವಾಗಿಯೇ ಇರಲಿರುವುದು ಈ ಕಾರಣಕ್ಕೆ!

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.