ADVERTISEMENT

ಘನತೆ ಕಾಯಲು ನ್ಯಾಯಾಲಯವೇ ಬರಬೇಕಾಯಿತು

ಆಕಾರ್ ಪಟೇಲ್
Published 9 ಸೆಪ್ಟೆಂಬರ್ 2018, 19:30 IST
Last Updated 9 ಸೆಪ್ಟೆಂಬರ್ 2018, 19:30 IST

ನಾವು 'ಟ್ಯುರಿಂಗ್ ಟೆಸ್ಟ್' ಎಂದು ಕರೆಯುವ ಪರೀಕ್ಷೆಯನ್ನು 1950ರಲ್ಲಿ ಅಭಿವೃದ್ಧಿಪಡಿಸಿದ್ದು ಬ್ರಿಟಿಷ್ ವಿಜ್ಞಾನಿ ಅಲನ್ ಟ್ಯುರಿಂಗ್. ಕಂಪ್ಯೂಟರ್‌ಗಳು ಎಷ್ಟು ಚೂಟಿಯಾಗಿ ವರ್ತಿಸುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಅಳೆಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ವ್ಯಕ್ತಿಯೊಬ್ಬ, ಮನುಷ್ಯ ಹಾಗೂ ಯಂತ್ರದ ಮೂಲಕ ನಡೆಯುವ ಪಠ್ಯ ಸಂಭಾಷಣೆಯನ್ನು ಗಮನಿಸಬೇಕು. ಪಠ್ಯ ಸಂಭಾಷಣೆಯ ಮಾಡುತ್ತಿರುವುದು ಮನುಷ್ಯನೋ, ಯಂತ್ರವೋ ಎಂಬುದನ್ನು ಖಚಿತವಾಗಿ ಹೇಳಲು ಅದನ್ನು ಗಮನಿಸುತ್ತಿರುವ ವ್ಯಕ್ತಿಗೆ ಸಾಧ್ಯವಾಗದಿದ್ದರೆ, ಯಂತ್ರವು ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ತೀರ್ಮಾನಿಸಲಾಗುತ್ತದೆ. ಕಂಪ್ಯೂಟರ್‌ಗಳ ಕ್ಷಮತೆಯ ವಿಚಾರದಲ್ಲಿ ನಾವು ಆ ಹಂತವನ್ನು ತಲುಪಿಯಾಗಿದೆ ಎಂಬುದು ನಿಜ. ಆದರೆ, ಈ ಹಂತವನ್ನು ಕಾಣಲು ಟ್ಯುರಿಂಗ್ ಇರಲಿಲ್ಲ.

ಟ್ಯುರಿಂಗ್ ಅವರು 41ನೆಯ ವಯಸ್ಸಿನಲ್ಲಿ, 1954ರಲ್ಲಿ ಮೃತಪಟ್ಟರು. ಸಲಿಂಗಕಾಮದ ‘ಅಪರಾಧ’ಕ್ಕಾಗಿ ಟ್ಯುರಿಂಗ್ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಪ್ರಯೋಗಿಸಿ, ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನು ಬ್ರಿಟನ್‌ನಲ್ಲಿ ವಿಧಿಸಲಾಯಿತು (ಬ್ರಿಟನ್‌ನಲ್ಲಿ ಜೈಲು ಶಿಕ್ಷೆಗೆ ಬದಲಿಯಾಗಿ ಈ ಬಗೆಯ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು). ಇದಾದ ಎರಡು ವರ್ಷಗಳ ನಂತರ ಟ್ಯುರಿಂಗ್ ಆತ್ಮಹತ್ಯೆ ಮಾಡಿಕೊಂಡರು.

ಟ್ಯುರಿಂಗ್ ಅವರಿಗಿಂತ ಒಂದು ಶತಮಾನದಷ್ಟು ಮೊದಲು ಇಂಗ್ಲಿಷ್ ಲೇಖಕ ಆಸ್ಕರ್ ವೈಲ್ಡ್‌ ಅವರಿಗೆ ಕೂಡ ಸಲಿಂಗಕಾಮದ 'ಅಪರಾಧ'ಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು. ಅವರು ಎರಡು ವರ್ಷ ಜೈಲಿನಲ್ಲಿ ಕಳೆದರು. ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ಅವಮಾನ ಎದುರಿಸಿದ್ದರು. ಅವರನ್ನು ಶಿಕ್ಷೆಗೆ ಗುರಿಪಡಿಸಿದ ನ್ಯಾಯಾಧೀಶರು, 'ನಿಮ್ಮನ್ನು ಉದ್ದೇಶಿಸಿ ಮಾತನಾಡುವುದರಲ್ಲಿ ಪ್ರಯೋಜನ ಇಲ್ಲ. ಈ ರೀತಿಯ ಕೆಲಸಗಳನ್ನು ಮಾಡುವ ಜನ ಎಲ್ಲ ರೀತಿಯ ನಾಚಿಕೆಗಳನ್ನೂ ಬಿಟ್ಟಿರುತ್ತಾರೆ. ಅವರ ಮೇಲೆ ಯಾವುದೇ ಪರಿಣಾಮ ಯಾವುದರಿಂದಲೂ ಆಗುವ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ನಾನು ವಿಚಾರಣೆ ನಡೆಸಿದ ಅತಿ ಕೆಟ್ಟ ಪ್ರಕರಣ ಇದು. ಈ ಪರಿಸ್ಥಿತಿಯಲ್ಲಿ ನಾನು ಕಾನೂನಿನ ಅಡಿ ಅವಕಾಶ ಇರುವ ಅತ್ಯಂತ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು. ಆದರೆ ನನ್ನ ಪ್ರಕಾರ, ಇಂತಹ ಪ್ರಕರಣದಲ್ಲಿ ಅದು ಕೂಡ ಸಾಕಾಗುವುದಿಲ್ಲ. ನಿಮ್ಮಲ್ಲಿ ಪ್ರತಿ ವ್ಯಕ್ತಿಯನ್ನು ಜೈಲಿಗೆ ಹಾಕಿ, ಎರಡು ವರ್ಷ ಕಠಿಣವಾಗಿ ದುಡಿಸಬೇಕು' ಎಂದು ಹೇಳಿದ್ದರು.

ADVERTISEMENT

ಆಗ ಆ ನ್ಯಾಯಾಲಯದಲ್ಲಿ ಸೇರಿದ್ದ ಜನ ‘ನಾಚಿಕೆಯಾಗಬೇಕು, ನಾಚಿಕೆಯಾಗಬೇಕು’ ಎಂದು ಕೂಗಿದ್ದರು. ಆಸ್ಕರ್ ವೈಲ್ಡ್ ಅವರು, ‘ನಾನು? ನಾನು ಏನನ್ನೂ ಹೇಳಬಾರದೇ, ನ್ಯಾಯಾಧೀಶರೇ’ ಎಂದು ಕೇಳಿದ್ದರು. ಆದರೆ, ನ್ಯಾಯಾಲಯದ ಕಲಾಪವನ್ನು ಮುಂದೂಡಲಾಯಿತು. ವೈಲ್ಡ್ ಅವರು ಎರಡು ವರ್ಷಗಳ ಶಿಕ್ಷೆ ಅನುಭವಿಸಿದರು.

ಬ್ರಿಟಿಷ್ ಸಂಸತ್ತು 1967ರಲ್ಲಿ 'ಲೈಂಗಿಕ ಅಪರಾಧಗಳ ಕಾಯ್ದೆ'ಯನ್ನು ರೂಪಿಸಿತು. ಇಬ್ಬರು ವಯಸ್ಕರ ನಡುವೆ ನಡೆಯುವ ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎಂದು ಅದು ಹೇಳಿತು. ನಮ್ಮ ಸುಪ್ರೀಂ ಕೋರ್ಟ್‌ ಕಳೆದ ವಾರ ಮಾಡಿದ್ದು ಕೂಡ ಇದನ್ನೇ.

ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರ ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್‌'ನಲ್ಲಿ ಗ್ಲಾಸ್ಗೊದ ಒಬ್ಬ ಓದುಗರಿಂದ ಒಂದು ಪತ್ರ ಪ್ರಕಟವಾಯಿತು. ಪಾಲ್‌ ಬ್ರೌನ್ಸಿ ಎಂಬುದು ಅವರ ಹೆಸರು. ‘ವಸಾಹತುಶಾಹಿ ಕಾಲದ ವಿಷಕಾರಿ ಪಳೆಯುಳಿಕೆಯೊಂದು ಭಾರತದ ಸಲಿಂಗಕಾಮ ವಿರೋಧಿ ಕಾನೂನಿನ ಜೊತೆಯಲ್ಲೇ ಸತ್ತುಹೋಯಿತು ಎಂದು ಭಾರತದ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಕುರಿತ ಬರಹದ ಮೇಲಿನ ಶೀರ್ಷಿಕೆ ಹೇಳುತ್ತದೆ. ಸಲಿಂಗಕಾಮದ ವಿರುದ್ಧದ ಕಾನೂನು ಅಸಂವಿಧಾನಿಕ ಎಂದು ಕೋರ್ಟ್‌ ಹೇಳಿದೆ. ಭಾರತ ಸ್ವಾತಂತ್ರ್ಯ ಪಡೆದು 71 ವರ್ಷಗಳು ಆಗಿವೆ. ವಸಾಹತುಶಾಹಿಯ ಅಡಿ ನರಳುತ್ತಿದ್ದ ಭಾರತದ ಸಂಸ್ಕೃತಿಗೆ ಈ ಕಾನೂನು ವಿರುದ್ಧವಾಗಿತ್ತು ಎಂದಾದರೆ, ಆ ಕಾನೂನು ಬಹಳ ಹಿಂದೆಯೇ ರದ್ದಾಗಬೇಕಿತ್ತಲ್ಲವೇ ಎಂಬ ಆಲೋಚನೆ ಬರಬಹುದು’.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377 ಎಂಬುದು ವಸಾಹತುಶಾಹಿ ಕಾಲದಲ್ಲಿ ಬಂದಿರುವಂಥದ್ದು, ಅದಕ್ಕಾಗಿ ಭಾರತೀಯರು ಹೊಣೆ ಹೊತ್ತುಕೊಳ್ಳಬೇಕಿಲ್ಲ ಎನ್ನುವ ಧಾಟಿಯಲ್ಲಿ ವಿಶ್ವದ ಹಲವೆಡೆ ಪ್ರಕಟವಾಗಿರುವ ಲೇಖನಗಳನ್ನು ಬ್ರೌನ್ಸಿ ಅವರು ಉಲ್ಲೇಖಿಸಿದ್ದರು. ಆದರೆ, ಬ್ರೌನ್ಸಿ ಹೇಳುವಂತೆ, ಸ್ವಾತಂತ್ರ್ಯ ದೊರೆತ ಏಳು ದಶಕಗಳವರೆಗೆ ನಾವು ಈ ಕಾನೂನು ನಮ್ಮಲ್ಲಿ ಜಾರಿಯಲ್ಲಿರುವ ಅವಕಾಶ ಮಾಡಿಕೊಟ್ಟೆವು.

ಇದನ್ನು ಅತ್ಯಂತ ನಾಚಿಕೆಯಿಂದ ನಾವು ಒಪ್ಪಿಕೊಳ್ಳಬೇಕು. ಈ ವಿಚಾರದಲ್ಲಿ ನಾವು ಗಮನಿಸದ ಇನ್ನೊಂದು ಸಂಗತಿ ಇದೆ. ಸಲಿಂಗಕಾಮ ಅಪರಾಧ ಅಲ್ಲ ಎಂದು ಹೇಳಿದ್ದು ನ್ಯಾಯಾಲಯವೇ ವಿನಾ, ಯಾವುದೇ ಶಾಸನ ಅಲ್ಲ. ಆದರೆ, ಬ್ರಿಟನ್ನಿನಲ್ಲಿ ಆ ಕೆಲಸವನ್ನು ಹೊಸ ಕಾನೂನಿನ ಮೂಲಕ ಹೇಳಲಾಯಿತು. ಇಂತಹ ಕಾನೂನುಗಳನ್ನು ನಾಗರಿಕ ಜಗತ್ತು ಕೈಬಿಟ್ಟಿದೆ. ನಮ್ಮಲ್ಲಿ ಇಂತಹ ಕಾನೂನನ್ನು ಐದು ಜನ ತೀರ್ಪು ಕೊಡುವ ಮೂಲಕ ರದ್ದು ಮಾಡುವುದಕ್ಕಿಂತ, ಪ್ರಜಾತಾಂತ್ರಿಕ ರಾಜಕೀಯ ಮಾರ್ಗದ ಮೂಲಕ ರದ್ದು ಮಾಡಿದ್ದರೆ ಹೆಚ್ಚು ಸೂಕ್ತ ಆಗುತ್ತಿತ್ತು.

ಸಲಿಂಗಕಾಮವನ್ನು ಅಪರಾಧ ಎಂದು ಹೇಳುವ ಕಾನೂನಿಗೆ ವಿರುದ್ಧವಾಗಿ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲು ಯತ್ನಿಸಿದ ಅಥವಾ ಅದರ ವಿರುದ್ಧ ಸಂಸತ್ತಿನಲ್ಲಿ ಮಾತನಾಡಿದ ಇಬ್ಬರು ರಾಜಕಾರಣಿಗಳು ಮಾತ್ರ ನನಗೆ ಗೊತ್ತು. ಒಬ್ಬರು ಬಿಜು ಜನತಾದಳದ ತಥಾಗಥ ಸತ್ಪತಿ, ಇನ್ನೊಬ್ಬರು ಕಾಂಗ್ರೆಸ್ಸಿನ ಶಶಿ ತರೂರ್. ತರೂರ್ ಅವರು ಈ ಪ್ರಯತ್ನ ನಡೆಸಿದಾಗ ಕಾಂಗ್ರೆಸ್ಸಿನ ಬಹುಪಾಲು ಸಂಸದರ ಬೆಂಬಲ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ನನಗೆ ಗೊತ್ತು. ಆದರೆ, ನಾನು ಇದನ್ನು ಪ್ರಸ್ತಾಪಿಸುತ್ತಿರುವುದು ಏಕೆ?

ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಹೀಗೆ ಬರೆಯಲಾಗಿದೆ: ‘ಭಾರತದ ವಾಸಿಗಳಾದ ನಾವು, ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶ
ಗಳ ಸಮಾನತೆ ದೊರಕಿಸಿ, ವೈಯಕ್ತಿಕ ಘನತೆ, ದೇಶದ ಒಗ್ಗಟ್ಟು ಮತ್ತು ಏಕತೆಗೆ ಕೆಲಸ ಮಾಡುವ ವಿಧ್ಯುಕ್ತ ನಿರ್ಣಯ ಕೈಗೊಂಡಿದ್ದೇವೆ...'

ಇಲ್ಲಿ ಒಂದು ವಿಚಾರ ಬಹಳ ಸ್ಪಷ್ಟವಾಗಿದೆ. ಭೀತಿ ಮೂಡಿಸುವ ಈ ಕಾನೂನಿನ ಮೂಲಕ ನಾವು ಭಾರತೀಯರ ಘನತೆಗೆ ಚ್ಯುತಿ ತಂದಿದ್ದೇವೆ. ಅವರ ಅಭಿವ್ಯಕ್ತಿಗೆ, ಅವರ ನಂಬಿಕೆಗಳಿಗೆ ಹಾಗೂ ಸಮಾನತೆಗೆ ಚ್ಯುತಿ ತಂದಿದ್ದೇವೆ.

ಈ ಕಾನೂನಿನ ಕಾರಣದಿಂದಾಗಿ ತಮ್ಮ ಅಭಿವ್ಯಕ್ತಿಯನ್ನು ಹೇಳಿಕೊಳ್ಳಲು ಭಯಪಟ್ಟು, ಸಮಾಜದಿಂದ ಬಹಿಷ್ಕೃತರಾಗುವ ಭಯಕ್ಕೆ ಒಳಗಾಗಿ, ತಮ್ಮದಲ್ಲದ ಹಾಗೂ ಆತ್ಮವಂಚನೆಯ ಜೀವನಕ್ಕೆ ಒಗ್ಗಿಕೊಂಡ ಎಷ್ಟು ಜನರನ್ನು ನಾವು ಕಳೆದುಕೊಂಡಿದ್ದೇವೋ? ಸಮಾಜದ ಒತ್ತಾಯಕ್ಕೆ ಅಥವಾ ನಾಚಿಕೆಗೆ ಮಣಿದು, ಮದುವೆಯಾಗಿ, ತಮ್ಮದಲ್ಲದ ಸ್ಥಳದಲ್ಲಿ ಇರುವ ಸಲಿಂಗಿ ಮಹಿಳೆಯರ ಸಂಖ್ಯೆ ಅದೆಷ್ಟೋ? ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ನನಗೆ ಆಗುತ್ತಿಲ್ಲ.

ಸ್ವತಂತ್ರ ಭಾರತದಲ್ಲಿ ಇರಬಾರದಿದ್ದ ಕಾನೂನೊಂದನ್ನು ಅಳಿಸಿಹಾಕಿದ್ದಕ್ಕಾಗಿ ನಾವು ಹೆಮ್ಮೆಪಟ್ಟುಕೊಳ್ಳಬೇಕು. ಇದೇ ವೇಳೆ, ಇಂತಹ ಕಾನೂನು 71 ವರ್ಷ ಇದ್ದಿದ್ದಾದರೂ ಹೇಗೆ, ಅದನ್ನು ತೆಗೆದುಹಾಕಲು ನ್ಯಾಯಾಲಯವೇ ಬರಬೇಕಾಗಿದ್ದು ಏಕೆ ಎಂಬ ಬಗ್ಗೆ ಆಲೋಚಿಸಬೇಕು. ಸಂವಿಧಾನದ ಪೀಠಿಕೆಯಲ್ಲಿ ನಾವು ನೀಡಿರುವ ಭರವಸೆಗೆ ಈ ಕಾನೂನು ಚ್ಯುತಿ ತರುತ್ತಿತ್ತು ಎಂಬ ಕಾರಣಕ್ಕೆ ಇದು ರಾಜಕೀಯದಲ್ಲಿ ಪ್ರಮುಖ ವಿಚಾರ ಆಗಬೇಕಿತ್ತು. ಪ್ರಜಾತಂತ್ರದಲ್ಲಿ ಅಂತಿಮವಾಗಿ ಆಗಬೇಕಿರುವುದು ಜನರ ಹಕ್ಕುಗಳನ್ನು ಜನರೇ ಎತ್ತಿಹಿಡಿಯುವ ಕೆಲಸ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.