ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ‘ಹ್ಯಾಕಥಾನ್’ ಒಂದು ನಡೆಯಿತು. ಜೂನ್ 3ರಂದು ನಡೆದ ಕಾರ್ಯಕ್ರಮವನ್ನು ಹ್ಯಾಕಥಾನ್ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಇನ್ನೂ ಸಂಶಯದ ವಿಷಯವೇ. ಚುನಾವಣಾ ಆಯೋಗದ ಸವಾಲವನ್ನು ಸ್ವೀಕರಿಸಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಹ್ಯಾಕ್ ಮಾಡಲು ಹೋದದ್ದು ಸಿಪಿಐಎಂ ಮತ್ತು ಎನ್‌ಸಿಪಿ ಪಕ್ಷದ ಪ್ರತಿನಿಧಿಗಳು. ಯಂತ್ರವನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯ ಎಂದು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಹೋಗಿದ್ದ ಎರಡೂ ಪಕ್ಷಗಳ ಪ್ರತಿನಿಧಿಗಳು ಅಂಥದ್ದೇನನ್ನೂ ಮಾಡಲಿಲ್ಲ. ಬದಲಿಗೆ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನಷ್ಟೇ ಅರಿತುಕೊಂಡು ಹೋದರು ಎಂದು ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯೇ ಹೇಳಿತು. ಈ ಪ್ರಕ್ರಿಯೆಯ ಮೂಲಕ ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸಾರ್ಹತೆ ಸಾಬೀತಾಯಿತು ಎಂದುಕೊಳ್ಳಬಹುದೇ?
ಈ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಏಕೆಂದರೆ ಚುನಾವಣಾ ಆಯೋಗ ಮುಂದಿಟ್ಟಿದ್ದ ಷರತ್ತು ಗಳು ಒಂದು ‘ಹ್ಯಾಕಥಾನ್’ಗೆ ಅನ್ವಯಿಸುವಂಥವುಗಳಾಗಿರಲಿಲ್ಲ. ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಪ್ರತಿನಿಧಿಗಳಿಗೆ ಮಾತ್ರ ಸೀಮಿತ. ಒಂದೊಂದು ಗುಂಪಿಗೂ ನಾಲ್ಕುಗಂಟೆಗಳ ಅವಧಿಯನ್ನು ನೀಡಲಾಗುತ್ತದೆ. ಈ ಅವಧಿಯೊಳಗೆ ಹ್ಯಾಕ್ ಮಾಡಿ ತೋರಿಸಬೇಕು. ವಿದೇಶಿ ತಜ್ಞರನ್ನು ಇದಕ್ಕೆ ಬಳಸಿಕೊಳ್ಳುವಂತಿಲ್ಲ. ಈ ಬಗೆಯ ಷರತ್ತುಗಳನ್ನು ಮುಂದಿಟ್ಟರೆ ಅದು ‘ಹ್ಯಾಕಥಾನ್’ ಆಗುವುದಿಲ್ಲ. ಹೆಚ್ಚೆಂದರೆ ಇದು ಎಂಜಿನಿ ಯರಿಂಗ್ ಅಥವಾ ಆ ಬಗೆಯ ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಯಷ್ಟೇ ಆಗುತ್ತದೆ.
ಆಮ್ ಆದ್ಮಿ ಪಾರ್ಟಿ ಈ ವಿಚಾರಗಳನ್ನು ಜನರ ಮುಂದಿಡಲು ಪ್ರಯತ್ನಿಸಿದ್ದೇನೋ ನಿಜವೇ. ಆದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬ ಇಮೇಜ್ ಈ ಪಕ್ಷಕ್ಕೆ ಇರುವುದರಿಂದ ನಿಜಕ್ಕೂ ಚರ್ಚೆಯಾಗಬೇಕಾದ ವಿಚಾರಗಳು ಜನರ ಗಮನಕ್ಕೆ ಬರಲಿಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳ ವಿಚಾರದಲ್ಲಿ ಮೊದಲಿನಿಂದಲೂ ಸಂಭವಿಸುತ್ತಿರುವುದು ಇದುವೇ. ನಿರ್ದಿಷ್ಟ ಚುನಾವಣಾ ಫಲಿತಾಂಶವೊಂದರ ನಂತರ ಕೆಲವು ಪಕ್ಷಗಳು ಮತಯಂತ್ರದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದಷ್ಟೇ ನಡೆಯುತ್ತಾ ಬಂದಿದೆ. ಈ ನಡುವೆ ಕೆಲವು ತಜ್ಞರು ಈ ಯಂತ್ರದಲ್ಲಿ ಇರಬಹುದಾದ ಹುಳುಕುಗಳ ಬಗ್ಗೆ ವಿದ್ವತ್ ಪ್ರಬಂಧಗಳನ್ನೇ ರಚಿಸಿದ್ದರೂ ಅದನ್ನು ಚರ್ಚಿಸುವುದಕ್ಕೆ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳ ತನಕ ಯಾರೂ ಸಿದ್ಧರಿಲ್ಲ. ಈ ಬಾರಿ ಚುನಾವಣಾ ಆಯೋಗವೇ ಒಂದು ಸವಾಲಿನ ಜೊತೆಗೆ ಮುಂದೆ ಬಂದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವ ಕೆಲಸವನ್ನು ರಾಜ ಕೀಯ ಪಕ್ಷಗಳು ಮಾಡಲಿಲ್ಲ. ಕನಿಷ್ಠ ಚುನಾವಣಾ ಆಯೋಗ ನಡೆಸುತ್ತಿರುವುದು ‘ಹ್ಯಾಕಥಾನ್’ ಅಲ್ಲ ಎಂದು ಜನರಿಗೆ ಹೇಳುವ ಕೆಲಸವನ್ನೂ ಮಾಡಲಿಲ್ಲ.
ಇವೆಲ್ಲವುಗಳ ಪರಿಣಾಮವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡುವ ಅವಕಾಶವೊಂದನ್ನು ಕಳೆದುಕೊಂಡೆವು. ಅಥವಾ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಇರಬಹುದಾದ ಒಂದು ಕೊರತೆಗಳನ್ನು ಅರಿಯುವಲ್ಲಿಯೂ ನಾವಾಗಿಯೇ ಸೋತೆವು. ಚುನಾವಣಾ ಆಯೋಗ ಈ ಯಂತ್ರಗಳನ್ನು ಸಮರ್ಥಿಸುವುದಕ್ಕೆ ಬಳಸುವ ವಾದಗಳಲ್ಲಿ ಬಹುಮುಖ್ಯವಾದುವುದು ಮೂರು. ಮೊದಲನೆಯದ್ದು ಎಲೆಕ್ಟ್ರಾನಿಕ್ ಮತ ಯಂತ್ರ ಗಳನ್ನು ಕಂಪ್ಯೂಟರ್‌ಗಳ ಜಾಲಕ್ಕೆ ಅಳವಡಿಸಲಾಗಿಲ್ಲ. ಇವು ಸ್ವತಂತ್ರ ಯಂತ್ರಗಳು. ಹಾಗಾಗಿ ಇವುಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ. ಎರಡನೆಯದ್ದು: ಭಾರೀ ಸಂಖ್ಯೆಯಲ್ಲಿ ಬಳಸಲಾಗುವ ಈ ಯಂತ್ರಗಳನ್ನು ಒಂದೊಂದಾಗಿ ಬಿಚ್ಚಿ ತಮಗೆ ಬೇಕಾದಂತೆ ಮಾರ್ಪಡಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಮೂರನೆಯದ್ದು ಈ ಯಂತ್ರಗಳಲ್ಲಿ ಅಳವಡಿಸಲಾಗಿರುವ ತಂತ್ರಾಂಶದ ಗೌಪ್ಯತೆ. ಇದು ಹೊರಗೆ ಲಭ್ಯವಿಲ್ಲದೇ ಇರುವುದರಿಂದ ಇದನ್ನು ಹ್ಯಾಕ್ ಮಾಡಲು ಅಸಾಧ್ಯ.
ಮೇಲಿನ ಮೂರೂ ವಾದಗಳು ಮೇಲ್ನೋಟಕ್ಕೆ ಸರಿಯಾಗಿಯೇ ಇವೆ. ಆದರೆ ಇವುಗಳನ್ನು ಸೂಕ್ಮವಾಗಿ ಗಮನಿಸಿದಾಗ ಇವುಗಳೆಲ್ಲವೂ ತಾಂತ್ರಿಕ ಬಲಕ್ಕಿಂತ ಹೆಚ್ಚಾಗಿ ಸಾಂದರ್ಭಿಕ ತರ್ಕವನ್ನೇ ಅವಲಂಬಿಸಿವೆ. ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮುಕ್ತ ಪರಿಶೀಲನೆಗೆ ಇಟ್ಟು ಅದರ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುವುದು ಪ್ರಜಾಪ್ರಭುತ್ವದ ಅಗತ್ಯವಾಗಿತ್ತು. ಒಂದು ವೇಳೆ ಇದು ಸಾಧ್ಯವಾಗಿದ್ದರೆ ಅತ್ಯಂತ ದಕ್ಷ ಚುನಾವಣಾ ವ್ಯವಸ್ಥೆಯನ್ನು ಹೊಂದಿರುವ ದೇಶ ಎಂಬ ಭಾರತದ ಹೆಗ್ಗಳಿಕೆಗೆ ಪಾರದರ್ಶಕ ತಂತ್ರಜ್ಞಾನವನ್ನು ಅಳವಡಿಸಿ ಕೊಂಡಿದೆ ಎಂಬ ಗರಿಯೂ ಸೇರಿಕೊಳ್ಳುತ್ತಿತ್ತು.
ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳಿಗೆ ಮುಖ್ಯ ಪಾತ್ರವಿದೆ. ಆದರೆ ಈ ಪ್ರಕ್ರಿಯೆ ಯಲ್ಲಿ ಬಳಕೆಯಾಗುವ ಯಂತ್ರದ ವಿಶ್ವಾಸಾರ್ಹತೆ ಯನ್ನು ಖಾತರಿ ಪಡಿಸಿಕೊಳ್ಳುವ ಜವಾ ಬ್ದಾರಿಯೂ ಅವುಗಳಿಗೆ ಇದೆ. ಆದರೆ ಅದರ ತಾಂತ್ರಿಕ ವಿವರಗಳು ರಾಜಕಾರಣಿಗಳಿಗೆ ಅರ್ಥ ವಾಗುವ ವಿಚಾರವಲ್ಲ. ಅದನ್ನು ತಂತ್ರಜ್ಞರಿಗೆ ಬಿಟ್ಟುಕೊಡುವ ಕೆಲಸ ರಾಜಕಾರಣಿಗಳಿಂದ ಆಗ ಬೇಕಾಗಿದೆ. ಏಕೆಂದರೆ ಪ್ರತೀ ಬಾರಿಯೂ ಸೋತ ವರಷ್ಟೇ ಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆ. ಅವರ ಮಾತುಗಳು ಅದೆಷ್ಟೇ ಪ್ರಾಮಾಣಿಕವಾಗಿದ್ದಾದರೂ ಅದರ ಹಿಂದೆ ಸೋಲಿನ ಕಹಿ ಅನುಭವ ಇರುತ್ತದೆ ಎಂಬುದು ವಾಸ್ತವ. ಒಂದು ವೇಳೆ ಗೆದ್ದಿದ್ದರೆ ಅವರ ಬಾಯಿಂದ ಈ ಮಾತುಗಳು ಬರುತ್ತಿರಲಿಲ್ಲ ಎಂಬುದೂ ಖಚಿತವೇ. ಇದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ. ದೆಹಲಿಯ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಎಎಪಿ ಪಕ್ಷಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳೇ ಇರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಒಮ್ಮೆ ರಾಜಕಾರಣದಿಂದ ಹೊರಬಂದು ಯೋಚಿಸಿದರೆ ಮತಯಂತ್ರಗಳನ್ನು ಹೇಗೆ ಪರೀಕ್ಷಿಸಬೇಕು ಎಂಬ ಪ್ರಶ್ನೆಗೂ ಉತ್ತರ ದೊರೆಯುತ್ತದೆ. ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಉದ್ದೇಶಿತ ಕೆಲಸಕ್ಕಿಂತ ಭಿನ್ನವಾಗಿಯೂ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿಕೊಡುವುದಕ್ಕೆ ಅಥವಾ ಅದರೊಳಗಿನ ದೌರ್ಬಲ್ಯವನ್ನು ಬಯಲು ಮಾಡುವುದಕ್ಕೆ ಹ್ಯಾಕಿಂಗ್ ಎನ್ನುತ್ತಾರೆ. ಇದನ್ನು ವ್ಯವಸ್ಥಿತವಾಗಿ ನಿರ್ದಿಷ್ಟ ಅವಧಿಯೊಳಗೆ ನಡೆಸುವ ಕ್ರಿಯೆಯನ್ನು ಹ್ಯಾಕಥಾನ್ ಎನ್ನುತ್ತಾರೆ. ಚುನಾವಣಾ ಆಯೋಗ ಈ ಬಗೆಯ ಹ್ಯಾಕಥಾನ್ ಒಂದನ್ನು ಆಯೋಜಿಸಬೇಕು. ಎಲೆಕ್ಟ್ರಾನಿಕ್ ಮತ ಯಂತ್ರದ ಯಂತ್ರಾಂಶ ಮತ್ತು ತಂತ್ರಾಂಶಗಳ ಕೆಲಸವನ್ನು ಅರ್ಥ ಮಾಡಿಕೊಳ್ಳಬಲ್ಲ ತಂತ್ರಜ್ಞ ರನ್ನು ಈ ಹ್ಯಾಕಥಾನ್‌ಗೆ ಆಹ್ವಾನಿಸಬೇಕು. ಈ ಹ್ಯಾಕಥಾನ್ ಕೆಲವು ಗಂಟೆಗಳಿಗೆ ಸೀಮಿತ ವಾಗಿದ್ದರೆ ಅಥವಾ ಕೇವಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗಷ್ಟೇ ಸೀಮಿತವಾಗಿದ್ದರೆ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.
ಈ ಬಗೆಯ ತಜ್ಞತೆ ಇರುವ ವ್ಯಕ್ತಿಗಳೆಲ್ಲರೂ ಯಾವುದಾದರೊಂದು ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರಬೇಕಾಗಿಲ್ಲ. ಅವರಿಗೆ ಕೇವಲ ಪ್ರಜಾಪ್ರಭುತ್ವದ ಬಗ್ಗೆಯಷ್ಟೇ ಕಾಳಜಿ ಇರಬಹುದು ಎಂಬು ಸಾಧ್ಯತೆಯನ್ನು ಅರಿಯುವ ಅಗತ್ಯವಿದೆ. ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಸಂಬಂಧಿಸಿದ ಸಂಶಯಗಳು ಕೇವಲ ಭಾರತಕ್ಕೆ ಸೀಮಿತವಾದುದೇನೂ ಅಲ್ಲ. ಮುಂದುವರಿದ ದೇಶಗಳಿಂದ ಆರಂಭಿಸಿ ಈಗಷ್ಟೇ ಪ್ರಜಾ ಪ್ರಭು ತ್ವಕ್ಕೆ ತೆರೆದುಕೊಂಡಿರುವ ದೇಶಗಳ ತನಕ ಎಲ್ಲೆಡೆ ಯೂ ಈ ಸಂಶಯಗಳಿವೆ. ಮತದಾನವನ್ನು ಪಾರದರ್ಶಕವಾಗಿಸುವುದಕ್ಕೆ ಹಲವು ಬಗೆಯ ಪ್ರಯತ್ನಗಳು ಎಲ್ಲೆಡೆಯೂ ನಡೆಯುತ್ತಿದೆ. ಮತಯಂತ್ರದ ಕಾರ್ಯನಿರ್ವಹಣೆಯನ್ನು ಹೆಚ್ಚು ಪಾರದರ್ಶಕಗೊಳಿಸುವುದೂ ಈ ಪ್ರಯತ್ನದ ಒಂದು ಭಾಗ ಎಂದು ನಾವು ಅರಿಯಬೇಕಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಕುರಿತಂತೆ ನಡೆಯುತ್ತಿರುವ ಅಷ್ಟೂ ಚರ್ಚೆಗಳು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ವಾಗಿಸುವು ದಕ್ಕಿಂತ ಹೆಚ್ಚಾಗಿ ‘ಸಾಂಸ್ಥಿಕ ಅಹಂ’ಗಳ ಚರ್ಚೆಯಾಗಿ ಬದಲಾಗುತ್ತಿದೆ. ಮತಯಂತ್ರಗಳನ್ನು ಟೀಕಿಸುವವರ ಮಾತುಗಳು ಚುನಾವಣಾ ಆಯೋಗವೆಂಬ ಸಾಂವಿಧಾನಿಕ ಸಂಸ್ಥೆಯ ಮೇಲಿನ ದಾಳಿಯಾಗಿ ಪರಿಣಮಿಸಿಬಿಟ್ಟಿತು. ಪರಿಣಾಮವಾಗಿ ಉತ್ತರಾಖಂಡ ಹೈಕೋರ್ಟ್ ಮಧ್ಯ ಪ್ರವೇಶಿಸಿ ಈ ಬಗೆಯ ಮಾತುಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಸದ್ಯ ಹತ್ತಿರದಲ್ಲಿ ಯಾವ ಚುನಾವಣೆಗಳೂ ಇಲ್ಲ. ಮುಂದೆ ನಡೆಯುವ ಚುನಾವಣೆಗಳಲ್ಲಿ ಚಲಾವಣೆಯಾದ ಮತವನ್ನು ಕಾಗದದಲ್ಲಿ ಮುದ್ರಿಸಿ ಮತದಾರನಿಗೆ ತೋರಿಸಿಕೊಡುವ ವ್ಯವಸ್ಥೆಯೊಂದನ್ನೂ ಮತಯಂತ್ರಗಳಿಗೆ ಅಳವಡಿ ಸಲಾಗುತ್ತಿದೆ. ವಿವಾದಗಳು ತಣ್ಣಗಾಗಿರುವ ಈ ಕಾಲದಲ್ಲಿ ಮತಯಂತ್ರವನ್ನು ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಆರಂಭಿಸುವುದು ಸೂಕ್ತ. ಇದನ್ನು ಸವಾಲು–ಜವಾಬಿನ ರೀತಿ ಆಯೋಜಿಸುವುದಕ್ಕಿಂತ ಮುಕ್ತ ಮನಸ್ಥಿತಿಯಲ್ಲಿ ಯಂತ್ರವನ್ನು ಪರೀಕ್ಷೆಗೊಡ್ಡಬೇಕಿದೆ. ಎಪ್ಪತ್ತು ವರ್ಷಗಳ ಅವಧಿಯ ಪ್ರಜಾಪ್ರಭುತ್ವಕ್ಕೆ ಮತ್ತು ಈ ಅವಧಿಯಲ್ಲಿ ನೂರಾರು ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿರುವ ಚುನಾವಣಾ ಆಯೋಗಕ್ಕೆ ಈ ಪ್ರಬುದ್ಧತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.