ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳ ಬಾಯಿಗೆ ಸಿಕ್ಕಿ ನಲುಗಿದ ಯಂತ್ರವೊಂದಿದ್ದರೆ ಅದು ಎಲೆಕ್ಟ್ರಾನಿಕ್ ಮತ ಯಂತ್ರ ಅಥವಾ ಇವಿಎಂ. 2014ರಲ್ಲಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಕೂಡಾ ಅಭೂತಪೂರ್ವ ಎನಿಸುವಂಥ ವಿಜಯ ದಾಖಲಿಸಿದ ಕ್ಷಣದಿಂದ ವಿರೋಧ ಪಕ್ಷದ ರಾಜಕಾರಣಿಗಳೆಲ್ಲರೂ ಅದರ ವಿರುದ್ಧ ಮುಗಿಬಿದ್ದರು. ಇದಕ್ಕೂ ಬಿಜೆಪಿಯ ಎಲ್.ಕೆ. ಅಡ್ವಾಣಿಯವರೂ ಈ ಯಂತ್ರದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರು. ಮತ್ತು ಆಗ ಕಾಂಗ್ರೆಸ್‌ನ ಘಟಾನುಘಟಿಗಳೆಲ್ಲರೂ ಅದನ್ನು ತಮಾಷೆ ಮಾಡಿದ್ದರು ಎಂಬುದು ಮತ್ತೊಂದು ಸಂಗತಿ.
ಎಲೆಕ್ಟ್ರಾನಿಕ್ ಮತ ಯಂತ್ರಗಳು ನಿಜಕ್ಕೂ ಸಂಪೂರ್ಣ ಸುರಕ್ಷಿತವೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರಗಳನ್ನು ಸಮರ್ಥವಾಗಿ ಮಂಡಿಸಲು ಸಾಧ್ಯ. ಈ ಯಂತ್ರದಲ್ಲಿರುವ ಕೊರತೆಗಳನ್ನು ಈಗಾಗಲೇ ವೈಜ್ಞಾನಿಕ ವಿಷ್ಲೇಷಣೆಗಳ ಮೂಲಕ ಮಂಡಿಸಲಾಗಿದೆ. ಇದರ ವಿವರಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಆದರೆ ಈ ಕೊರತೆಗಳನ್ನು ಅಭ್ಯರ್ಥಿ ಅಥವಾ ಪಕ್ಷವೊಂದರ ಪರವಾಗಿ ಬಳಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುವುದಕ್ಕೆ ಬಹಳ ಕಷ್ಟ. ಒಂದಷ್ಟು ಸಂಚಿನ ಸಿದ್ಧಾಂತಗಳು ಈಗಾಗಲೇ ಪ್ರಚಾರದಲ್ಲಿವೆಯಾದರೂ ಇವುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಅವೆಲ್ಲವೂ ಅಪ್ರಾಯೋಗಿಕವಾದ ಸಿದ್ಧಾಂತಗಳಷ್ಟೇ ಎಂಬ ತೀರ್ಮಾನಕ್ಕೆ ಬರಬಹುದು.
ಇವಿಎಂಗಳ ತಾಂತ್ರಿಕತೆಯನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತಾಂತ್ರಿಕವಾಗಿ ವಿವರಿಸುವ ಮೂರು ಪ್ರಮುಖ ಪ್ರಯತ್ನಗಳು ನಡೆದಿವೆ. ಈ ಮೂರು ಪ್ರಯತ್ನಗಳಲ್ಲಿ ವಿವರಿಸಲಾಗಿರುವಂತೆ ಇವಿಎಂ ಅನ್ನು ಹ್ಯಾಕ್ ಮಾಡುವುದಕ್ಕೆ ಯಂತ್ರವನ್ನು ಹ್ಯಾಕರ್‌ಗಳು ಬಿಚ್ಚಬೇಕಾದುದು ಅಗತ್ಯ. ಸದ್ಯ ಚುನಾವಣಾ ಆಯೋಗ ಅನುಸರಿಸುವ ನಿರ್ವಹಣಾ ಮಾದರಿಯಲ್ಲಿ ಹ್ಯಾಕರ್‌ಗಳ ಕೈಗೆ ಈ ಯಂತ್ರಗಳು ಸಿಗುವುದೇ ಅಸಾಧ್ಯ. ಒಂದು ವೇಳೆ ಸಿಕ್ಕರೂ ಅದು ಯಾರದೇ ಗಮನ ಸೆಳೆಯದೇ ಇರುವ ಸಾಧ್ಯತೆ ಇಲ್ಲ ಎನ್ನುವಷ್ಟು ಕಡಿಮೆ. ಈ ಅಂಶಗಳನ್ನಿಟ್ಟುಕೊಂಡು ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಒಂದು ಸುದೀರ್ಘ ವಿಶ್ಲೇಷಣೆಯನ್ನೇ ನಡೆಸಿ ಫೇಸ್‌ಬುಕ್ ಪೋಸ್ಟ್ ಆಗಿ ಪ್ರಕಟಿಸಿದ್ದಾರೆ. ಅದನ್ನು ಇಲ್ಲಿರುವ ಲಿಂಕ್‌ನಲ್ಲಿ ನೋಡಬಹುದು: https://goo.gl/LqU8vt
ಇವಿಎಂ ಅನ್ನು ಹ್ಯಾಕ್ ಮಾಡಬಹುದಾದ ವಿಧಾನಗಳು ಮೂರು. ಮೊದಲನೆಯದ್ದು ಮತಪತ್ರ ಘಟಕ ಅಥವಾ ವಿವಿಧ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿರುವ ಮತಯಂತ್ರದ ಭಾಗವನ್ನು ಹ್ಯಾಕ್ ಮಾಡುವುದು. ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಹ್ಯಾಕರ್ ಉದ್ದೇಶಿಸಿರುವ ಅಭ್ಯರ್ಥಿಗೆ ಮತ ಚಲಾವಣೆಯಾಗುವಂತೆ ಗುಂಡಿಗಳನ್ನು (button) ಮಾರ್ಪಡಿಸುವುದು. ಎರಡನೆಯದ್ದು ಮತಗಳ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಚಿಪ್ ಅನ್ನು ಹ್ಯಾಕ್ ಮಾಡಿ ಚಲಾವಣೆಯಾದ ಮತಗಳಲ್ಲಾ ಅಥವಾ ಹೆಚ್ಚಿನವು ಉದ್ದೇಶಿತ ಅಭ್ಯರ್ಥಿಯೊಬ್ಬನಿಗೆ ದೊರೆಯುವಂತೆ ಮಾಡುವುದು. ಮೂರನೆಯದ್ದು ಮತಗಳ ಸಂಖ್ಯೆಯನ್ನು ತೋರಿಸುವ ಡಿಸ್‌ಪ್ಲೇ ಯೂನಿಟ್ ಅನ್ನು ಹ್ಯಾಕ್ ಮಾಡಿ ನಿರ್ದಿಷ್ಟ ಅಭ್ಯರ್ಥಿಗೆ ಹೆಚ್ಚು ಮತಗಳು ಅಥವಾ ಎಲ್ಲಾ ಮತಗಳು ದೊರೆತಿವೆ ಎಂದು ತೋರಿಸುವಂತೆ ಮಾಡುವುದು.
ಈ ಮೂರು ವಿಧಾನಗಳಲ್ಲಿ ಇವಿಎಂ ಅನ್ನು ಹ್ಯಾಕ್ ಮಾಡುವುದು ಹೇಗೆ ಅಸಾಧ್ಯ ಎಂಬುದು ಮಣಿವಣ್ಣನ್ ಬಹಳ ವಿವರವಾಗಿಯೇ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಂಡಿಸಿದ್ದಾರೆ. ಅವರ ಪ್ರಕಾರ ಈ ಮೂರರಲ್ಲಿ ಯಾವ ವಿಧಾನವನ್ನು ಬಳಸುವುದಕ್ಕೂ ಇವಿಎಂ ಹ್ಯಾಕರ್ ಕೈಗೆ ದೊರೆಯಬೇಕು. ಚುನಾವಣಾ ಆಯೋಗ ರೂಢಿಸಿಕೊಂಡಿರುವ ವಿಧಾನದಲ್ಲಿ ಹ್ಯಾಕರ್‌ಗಳ ಕೈಗೆ ಒಂದು ಇವಿಎಂ ದೊರೆಯುವುದು ಕಷ್ಟ. ಒಂದು ವೇಳೆ ದೊರೆತರೂ ಅದನ್ನು ಬಿಚ್ಚಿ ತಮಗೆ ಬೇಕಿರುವಂತೆ ಹ್ಯಾಕ್ ಮಾಡುವುದು ಇನ್ನೂ ಕಷ್ಟ. ಇನ್ನು ಯಾವ ಹಂತದಲ್ಲಿ ಮತಯಂತ್ರವನ್ನು ಹ್ಯಾಕ್ ಮಾಡಬೇಕು ಎಂಬ ಪ್ರಶ್ನೆಯಿದೆ.
ಇವಿಎಂಗಳನ್ನು ಜಿಲ್ಲೆಗಳಿಗೆ ಕಳುಹಿಸುವದಕ್ಕೆ ಮೊದಲು ಹ್ಯಾಕ್ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಯಾವ ಯಂತ್ರ ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಅಭ್ಯರ್ಥಿಗಳ ಹೆಸರನ್ನು ಅಕಾರಾದಿಯಲ್ಲಿ ಯಂತ್ರಕ್ಕೆ ಊಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಯಂತ್ರವನ್ನೂ ಪರೀಕ್ಷಿಸಲಾಗುತ್ತದೆ. ಯಾವುದಾದರೂ ಮತಯಂತ್ರದಲ್ಲಿ ದೋಷ ಕಂಡುಬಂದರೆ ಅದನ್ನು ಮತದಾನಕ್ಕೆ ಬಳಸಲಾಗುವುದಿಲ್ಲ. ಇನ್ನು ಕ್ಷೇತ್ರಗಳಿಗೆ ಅನುಗುಣವಾಗಿ ಇವುಗಳನ್ನು ಸಿದ್ಧಪಡಿಸಿದ ನಂತರ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್‌ಗೆ ಇವುಗಳನ್ನು ಪರೀಕ್ಷಿಸುವ ಹಕ್ಕಿರುತ್ತದೆ. ಇನ್ನು ಮತಗಟ್ಟೆ ಅಧಿಕಾರಿಗಳನ್ನೂ ಆರಿಸುವುದೂ ಇಂಥದ್ದೇ ಒಂದು ಪ್ರಕ್ರಿಯೆಯಲ್ಲಿ. 24 ಗಂಟೆಗೆ ಮುನ್ನ ಯಾವ ಅಧಿಕಾರಿಗೂ ತನ್ನ ಮತಗಟ್ಟೆ ಯಾವುದು ಎಂದು ಗೊತ್ತಿರುವುದಿಲ್ಲ. ಇನ್ನು ಮತದಾನ ಆರಂಭವಾಗುವ ಮೊದಲು ಮತಯಂತ್ರವನ್ನು ಪರೀಕ್ಷಿಸುವ ಪ್ರಕ್ರಿಯೆ ಇರುತ್ತದೆ. ಮತಯಂತ್ರದಲ್ಲಿ ತೊಂದರೆ ಇದ್ದರೆ ಆಗ ಕಂಡುಬರುತ್ತದೆ. ಒಂದು ವೇಳೆ ಮತಯಂತ್ರವನ್ನು ಹ್ಯಾಕ್ ಮಾಡಬೇಕೆಂದರೆ ಇಡೀ ಚುನಾವಣಾ ವ್ಯವಸ್ಥೆಯನ್ನೇ ವಶಕ್ಕೆ ಪಡೆಯಬೇಕಾದ ಅಗತ್ಯವಿದೆ ಎಂಬುದು ಮಣಿವಣ್ಣನ್ ಅವರ ವಿಶ್ಲೇಷಣೆಯ ಸಾರ.
ಭಾರತದಲ್ಲಿ ಅದೆಷ್ಟೇ ಭ್ರಷ್ಟಾಚಾರವಿದೆ ಎಂದು ಹೇಳಿದರೂ ಇಡೀ ವ್ಯವಸ್ಥೆಯನ್ನೇ ನಿರ್ದಿಷ್ಟ ಪಕ್ಷ ತನಗೆ ಬೇಕಾದಂತೆ ನಿಯಂತ್ರಿಸುವುದು ಬಹಳ ಕಷ್ಟ. ಇಡೀ ಸರ್ಕಾರಿ ನೌಕರ ವರ್ಗ ಒಂದು ಪಕ್ಷಕ್ಕೆ ನಿಷ್ಠವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುವುದು ಹಾಸ್ಯಾಸ್ಪದ. ಆದ್ದರಿಂದ ಇವಿಎಂಗಳನ್ನು ಹ್ಯಾಕ್ ಮಾಡಿ ನಿರ್ದಿಷ್ಟ ಪಕ್ಷ ಗೆಲ್ಲುತ್ತದೆ ಎಂದು ಹೇಳುವುದನ್ನೂ ಈ ಹಾಸ್ಯಾಸ್ಪದ ವಾದಗಳ ಪಟ್ಟಿಗೆ ಸೇರಿಸಬೇಕಾಗುತ್ತದೆ. ಇನ್ನು ಭ್ರಷ್ಟ ಅಧಿಕಾರಿಗಳು ಒಂದು ಪಕ್ಷದ ಹ್ಯಾಕಿಂಗ್‌ಗೆ ಸಹಾಯ ಮಾಡುವಷ್ಟೇ ಮತ್ತೊಂದು ಪಕ್ಷ ಅದನ್ನು ಬಯಲಿಗೆಳೆಯಲೂ ಸಹಕರಿಸುವ ಸಾಧ್ಯತೆ ಇದೆ.
2014ರ ಲೋಕಸಭಾ ಚುನಾವಣೆ ಮತ್ತು 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪರವಾಗಿ ಇವಿಎಂ ಹ್ಯಾಕ್ ಆಗಿತ್ತು ಎಂಬ ವಾದವನ್ನೇ ಪರಿಶೀಲಿಸೋಣ. ಇದು ನಿಜವಾಗಿದ್ದರೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಪರವಾಗಿ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತೆಂದು ಭಾವಿಸಬಹುದೇ. ಅದಿರಲಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಎಲ್ಲಾ ಸೀಟುಗಳನ್ನು ಉಳಿಸಿಕೊಳ್ಳಲು ಅಥವಾ ಹೆಚ್ಚು ಸೀಟುಗಳನ್ನು ಗಳಿಸುವುದಕ್ಕೆ ಇದೇ ತಂತ್ರವನ್ನು ಬಳಸಿಕೊಳ್ಳಬಹುದಾಗಿತ್ತಲ್ಲವೇ?
ದುರದೃಷ್ಟವಶಾತ್ ಈ ಪ್ರಶ್ನೆಗಳು ಎಲೆಕ್ಟ್ರಾನಿಕ್ ಮತಯಂತ್ರವನ್ನು ಹ್ಯಾಕ್ ಮಾಡುವ ಕುರಿತಂತೆ ಸಂಚಿನ ಸಿದ್ಧಾಂತಗಳನ್ನು ಮಂಡಿಸುವ ಯಾರಿಗೂ ಮುಖ್ಯವಾಗಿ ಕಾಣಿಸುತ್ತಿಲ್ಲ. ಹಾಗೆಂದು ಈ ವಿಷಯದಲ್ಲಿ ಚುನಾವಣಾ ಆಯೋಗ ಹೆಚ್ಚು ಪಾರದರ್ಶಕವಾಗಿರುವ ಅಗತ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಬಾರದೆ? ಖಂಡಿತವಾಗಿಯೂ ಈ ಪ್ರಶ್ನೆಯನ್ನು ಕೇಳಲೇಬೇಕು. ಆದರೆ ಅದು ಸಂಚಿನ ಸಿದ್ಧಾಂತಗಳಿಗೆ ಸೀಮಿತವಾಗಿ ಉಳಿಯಬಾರದು.
ಎಲೆಕ್ಟ್ರಾನಿಕ್ ಮತಯಂತ್ರದ ಚಿಪ್‌ಗಳಲ್ಲಿ ಬಳಕೆಯಾಗುವ ಪ್ರೋಗ್ರಾಮಿಂಗ್ ಕೋಡ್ ಅನ್ನು ಬಹಳ ರಹಸ್ಯವಾಗಿ ಇಡಲಾಗಿದೆ. ಇದು ಕೆಲವೇ ಕೆಲವು ಸಂಖ್ಯೆಯ ಎಂಜಿನಿಯರ್‌ಗಳಿಗೆ ಹೊರತು ಪಡಿಸಿದರೆ ಇನ್ಯಾರಿಗೂ ಗೊತ್ತಿಲ್ಲ ಎಂಬ ವಾದವೊಂದನ್ನು ಚುನಾವಣಾ ಆಯೋಗ ಮಂಡಿಸುತ್ತದೆ. ಬಹುಶಃ ಚುನಾವಣಾ ಆಯೋಗ ಈ ‘ರಹಸ್ಯ’ ಮಾದರಿಯಿಂದ ಹೊರಬಂದು ಯಂತ್ರವನ್ನು ಹೆಚ್ಚು ಪಾರದರ್ಶಕಗೊಳಿಸುವ ಪ್ರಕ್ರಿಯೆಯ ಬಗ್ಗೆ ಯೋಚಿಸಬೇಕು. ಈ ಮೊದಲು ಆಯೋಗ ನಡೆಸಿದ ಹ್ಯಾಕಥಾನ್‌ಗೆ ಕೂಡಾ ಇಂಥದ್ದೇ ಸಮಸ್ಯೆಗಳಿತ್ತು.
ಇನ್ನು ಬಿಇಎಲ್ ಮತ್ತು ಇಸಿಐಎಲ್‌ಗಳು ಸೇರಿಕೊಂಡು ರೂಪಿಸಿರುವ ಈ ಯಂತ್ರದ ಮೈಕ್ರೋಕಂಟ್ರೋಲರ್ ಚಿಪ್‌ಗಳು ತಯಾರಾಗುವುದು ಭಾರತದಲ್ಲಲ್ಲ. ಇವುಗಳನ್ನು ತಯಾರಿಸಲು ಬೇಕಾಗಿರುವ ತಂತ್ರಜ್ಞಾನ ಮತ್ತು ವ್ಯವಸ್ಥೆ ನಮ್ಮಲ್ಲಿಲ್ಲ ಅದಕ್ಕಾಗಿ ಇದನ್ನು ವಿದೇಶದಲ್ಲಿ ಮಾಡಿಸಲಾಗುತ್ತದೆ ಎಂಬ ವಿವರಣೆಯೊಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇದೆ. ಅನೇಕ ಉತ್ಪನ್ನಗಳಿಗೆ ವಿದೇಶಿ ಕಂಪೆನಿಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ ಭಾರತದ ಇವಿಎಂಗಳಿಗೆ ಬೇಕಾದ ಚಿಪ್‌ಗಳನ್ನು ತಯಾರಿಸುವ ಮೈಕ್ರೋಚಿಪ್ ಟೆಕ್ನಾಲಜಿ ಇನ್‌ಕಾರ್ಪೊರೇಷನ್ ಎಂಬ ಸಂಸ್ಥೆಯ ಹಿನ್ನೆಲೆ ಸಂಶಯಾಸ್ಪದವಾಗಿದೆ. ಇತ್ತೀಚೆಗಿನ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿತವಾಗಿ ಜಿಯೋ ಗ್ಲೋಬಲ್ ಎಂಬ ಸಂಸ್ಥೆಯ ಮಾಲೀಕತ್ವ ಮತ್ತು ಮೈಕ್ರೋಚಿಪ್ ಟೆಕ್ನಾಲಜಿಯ ಮಾಲೀಕತ್ವ ಒಂದೇ ಆಗಿದೆ. ಜಿಯೋ ಗ್ಲೋಬಲ್ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ 20,000 ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಮಹಾಲೇಖಪಾಲರ ವರದಿ ಹೇಳಿತ್ತು.
ಹಗರಣವೊಂದರಲ್ಲಿ ಭಾಗಿಯಾಗಿರುವ ಸಂಶಯ ಇರುವ ಕಂಪೆನಿಯ ಮಾಲೀಕತ್ವಕ್ಕೆ ಸೇರಿರುವ ಮತ್ತೊಂದು ಕಂಪೆನಿ ಇವಿಎಂ ಚಿಪ್‌ಗಳನ್ನು ತಯಾರಿಸಿದಾಗ ಸಂಶಯ ಹುಟ್ಟುವುದು ಸಹಜ. ಚುನಾವಣಾ ಆಯೋಗ ಇಂಥ ವಿಷಯಗಳಲ್ಲಿ ತನ್ನ ಅಹಂ ಬಿಟ್ಟು ಹೆಚ್ಚು ಪಾರದರ್ಶಕವಾಗಿರಬೇಕು. ಇನ್ನು ‘ರಹಸ್ಯ’ವಾಗಿರುವ ತಂತ್ರಜ್ಞಾನಕ್ಕಿಂತ ಪಾರದರ್ಶಕವಾಗಿರುವ ತಂತ್ರಜ್ಞಾನ ಹೆಚ್ಚು ಸುರಕ್ಷಿತ ಎಂಬುದನ್ನು ಈ ತನಕದ ಅನೇಕ ಉದಾಹರಣೆಗಳು ಸಾಬೀತು ಮಾಡಿವೆ. ಈ ವಿಷಯವನ್ನೂ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳು ‘ಸಂಚಿನ ಸಿದ್ಧಾಂತ’ಗಳನ್ನು ಬದಿಗಿಟ್ಟು ಇವಿಎಂನಲ್ಲಿ ಬಳಕೆಯಾಗಿರುವ ತಂತ್ರಜ್ಞಾನದ ಕುರಿತಂತೆ ಮುಕ್ತ ಮತ್ತು ಸ್ವತಂತ್ರ ವಿಶ್ಲೇಷಣೆಗೆ ಅನುಕೂಲಕರವಾದ ವಾತಾವರಣವೊಂದನ್ನು ಕಲ್ಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.