ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ 1857ರಲ್ಲಿ ‘ಅಶ್ಲೀಲ ಪ್ರಕಟಣೆಗಳ ಕಾಯ್ದೆ’ಯನ್ನು ಮಂಡಿಸಿದ ಲಾರ್ಡ್ ಕ್ಯಾಂಪ್‌ಬೆಲ್ ‘ಕಾಮಪ್ರಚೋದಕ ಸಾಹಿತ್ಯ ಹೈಡ್ರೋಕ್ಲೋರೈಡ್ ಮತ್ತು ಸಯನೈಡ್‌ಗಳು ಸೇರಿರುವ ಆಮ್ಲಕ್ಕಿಂತ, ಸ್ಟ್ರಿಕ್ನೀನ್ (ಸಸ್ಯ ಜನ್ಯ ವಿಷಕಾರಿ ರಾಸಾಯನಿಕ) ಅಥವಾ ಅರ್ಸೆನಿಕ್‌ಗಿಂತ ಹೆಚ್ಚು ಘೋರವಾದ ವಿಷ’ ಎಂದಿದ್ದ. ಆತನ ಈ ಮಾತುಗಳಿಗೆ ಪ್ರೇರಣೆ ನೀಡಿದ್ದು ಬೆತ್ತಲಾಗಿ ಸ್ನಾನ ಮಾಡುವುದನ್ನೂ ಅಶ್ಲೀಲವೆಂದು ಭಾವಿಸುತ್ತಿದ್ದ ‘ವಿಕ್ಟೋರಿಯನ್ ನೈತಿಕತೆ’.
ಕಾಮವೆಂಬುದು ಪಾಪವೆಂಬ ಮನಃಸ್ಥಿತಿಯಿಂದ ಪ್ರೇರಿತವಾಗಿದ್ದ ಈ ಹುಸಿ ಮೌಲ್ಯಗಳಿಗೆ ಪ್ರಾಚೀನ ರೋಮ್ ನಾಗರಿಕತೆಯ ಹಿನ್ನೆಲೆಯನ್ನೂ ಆರೋಪಿಸಲಾಗಿತ್ತು. ರೋಮ್ ಸಾಮ್ರಾಜ್ಯದ ಬೌದ್ಧಿಕ ಉತ್ತರಾಧಿಕಾರಿ ತಾನೆಂದು ಭಾವಿಸಿದ್ದ ಅಂದಿನ ಬ್ರಿಟನ್‌ಗೆ ಆಘಾತ ನೀಡುವ ಐತಿಹಾಸಿಕ ಸತ್ಯಗಳು ‘ಅಶ್ಲೀಲ ಪ್ರಕಟಣೆಗಳ ಕಾಯ್ದೆ’ ಜಾರಿಗೆ ಬಂದ ಮೂರೇ ವರ್ಷದಲ್ಲಿ ಬಯಲಾದವು.
1860ರಲ್ಲಿ ಪೊಂಪೈಯಲ್ಲಿ ನಡೆದ ಉತ್ಖನನದಲ್ಲಿ ರೋಮ್ ಸಾಮ್ರಾಜ್ಯದ ಕಾಲದ ಹಲವು ಲೈಂಗಿಕ ಶಿಲ್ಪಗಳು ಪತ್ತೆಯಾದವು. ಸಾಗಿಸಲು ಸಾಧ್ಯವಿದ್ದ ಎಲ್ಲಾ ಶಿಲ್ಪಗಳನ್ನೂ ಇಟಲಿಯ ನೇಪಲ್ಸ್‌ನಲ್ಲಿರುವ ‘ಸೀಕ್ರೆಟ್ ಮ್ಯೂಸಿಯಂ’ನಲ್ಲಿ ಬೀಗ ಹಾಕಿ ಇಡಲಾಯಿತು. ಹೀಗೆ ಸಾಗಿಸಲು ಸಾಧ್ಯವಿಲ್ಲದ ಎಲ್ಲವುಗಳನ್ನೂ ಮುಚ್ಚಿಟ್ಟು ‘ಹೆಂಗಸರು, ಮಕ್ಕಳು ಮತ್ತು ಕಾರ್ಮಿಕರ ಮನಸ್ಸು ಚಂಚಲವಾಗದಂತೆ’ ನೋಡಿಕೊಳ್ಳಲಾಯಿತು.
ಈ ವರ್ಷದ ಆಗಸ್ಟ್ 29ರಂದು ಭಾರತದ ಸುಪ್ರೀಂ ಕೋರ್ಟ್ ‘ತಂತ್ರಜ್ಞಾನ ಯಾವಾಗಲೂ ಕಾನೂನಿಗಿಂತ ವೇಗವಾಗಿ ಸಾಗುತ್ತಿರುತ್ತದೆ. ಆದರೂ ಕಾಮಪ್ರಚೋದಕ ಅಭಿವ್ಯಕ್ತಿಗಳನ್ನು ನಿಯಂತ್ರಿಸುವುದಕ್ಕಾಗಿ ಅತಿವೇಗದಲ್ಲಿ ಸಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾನೂನು ಮತ್ತು ಆಡಳಿತವೂ ಬದಲಾಗಬೇಕು’ ಎಂದು ಅಭಿಪ್ರಾಯ ಪಟ್ಟಿತು. ಈ ಸುದ್ದಿ ಪ್ರಕಟವಾಗುವ ಹೊತ್ತಿಗಾಗಲೇ ಕರ್ನಾಟಕದ ಸುದ್ದಿ ಚಾನೆಲ್‌ನ ಸ್ಟುಡಿಯೋದಲ್ಲಿ ಕುಳಿತಿದ್ದ ಚಲನಚಿತ್ರ ನಟಿ ಪ್ರಮುಖ ರಾಜಕಾರಣಿಯೊಬ್ಬರ ಮಗನೊಂದಿಗೆ ತನಗಿದ್ದ ಲೈಂಗಿಕ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದುದು ಪ್ರಸಾರವಾಗುತ್ತಿತ್ತು.
ಆಕೆ ತನ್ನ ಋತುಚಕ್ರ ತಪ್ಪಿರುವುದರ ಬಗ್ಗೆ ಹೇಳುತ್ತಿದ್ದಳು. ಇವನ್ನೆಲ್ಲಾ ಇಷ್ಟೇ ಹಸಿಯಾಗಿ ಚಲನಚಿತ್ರವೊಂದರಲ್ಲಿ ನಟಿಯೊಬ್ಬಳು ಹೇಳಿದ್ದರೆ ಅದಕ್ಕೆ ಸೆನ್ಸಾರ್ ಬೋರ್ಡ್ ಖಂಡಿತವಾಗಿಯೂ ವಯಸ್ಕರು ಮಾತ್ರ ವೀಕ್ಷಿಸಬಹುದಾದ ಚಿತ್ರವೆಂಬ ಪ್ರಮಾಣ ಪತ್ರ ನೀಡುತ್ತಿತ್ತೇನೋ? ಇಂಟರ್‌ನೆಟ್ ‘ಅಶ್ಲೀಲ’ವಾಗಿರುವುದನ್ನು ತಡೆಗಟ್ಟುವುದಕ್ಕೆ ನ್ಯಾಯಾಧೀಶರು ಸರ್ಕಾರಕ್ಕೆ ಸಲಹೆ ಕೊಟ್ಟದ್ದು ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ತನ್ನ ಲೈಂಗಿಕ ಸಂಬಂಧದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮವೊಂದರಲ್ಲಿ ನಟಿಯೊಬ್ಬಳು ಮಾತನಾಡುತ್ತಿದ್ದಳು ಎಂಬುದೇ ನಮ್ಮ ಕಾಲಕ್ಕೆ ಕನ್ನಡಿಯಾಯಿತು. ವಿಕ್ಟೋರಿಯನ್ ನೈತಿಕತೆಯ ಬೆಲೂನಿಗೆ ಸೂಜಿ ಚುಚ್ಚುವುದಕ್ಕೆ ಇತಿಹಾಸವಿತ್ತು. ಲೈಂಗಿಕತೆಯ ಕುರಿತ ನಮ್ಮ ನಿಲುವುಗಳಿಗೆ ಸೂಜಿ ಚುಚ್ಚುವುದಕ್ಕೆ ವರ್ತಮಾನವೇ ಸಾಕಾಯಿತು.
ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ನಂತರ ‘ಕಾಮಪ್ರಚೋದಕ ಅಭಿವ್ಯಕ್ತಿ’ ಅಥವಾ ಪೋರ್ನೋಗ್ರಫಿ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ. ಪೋರ್ನೋಗ್ರಫಿಯಿಂದಾಗಿಯೇ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ ಎಂದು ಇಂದೋರ್‌ನ ಕಮಲೇಶ್ ವಾಸ್ವಾನಿ 2013ರಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. ಕಳೆದ ಹದಿನೆಂಟು ತಿಂಗಳಿನಿಂದಲೂ ಈ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗಳು ನಡೆಯುತ್ತಿವೆ.
ಇಂಟರ್‌ನೆಟ್ ಸೇವೆಯನ್ನು ಒದಗಿಸುವ ಸಂಸ್ಥೆಗಳು ಪೋರ್ನೋಗ್ರಫಿಯನ್ನು ಹಂಚುವ ವೆಬ್‌ಸೈಟ್‌ಗಳನ್ನು ತಮ್ಮಿಂದ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸರ್ಕಾರವೇ ಏನಾದರೂ ಕಾನೂನು ಮಾಡಬೇಕು ಎಂದಿವೆ. ಸರ್ಕಾರ ಕೂಡಾ ಇವುಗಳನ್ನು ನಿಯಂತ್ರಿಸುವುದು ಸಾಧ್ಯವಿಲ್ಲದ ಮಾತು. ಪೋರ್ನೋಗ್ರಫಿಯನ್ನು ಬಡಿಸುವ ನಾಲ್ಕು ಕೋಟಿ ವೆಬ್‌ಸೈಟ್‌ಗಳಿವೆ. ಒಂದನ್ನು ತಡೆದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ಎನ್ನುತ್ತಿದೆ.
ಹೆಚ್ಚುತ್ತಿರುವ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಲ್ಲವನ್ನೂ ನಿಯಂತ್ರಿಸಬೇಕಾದುದು ಸರ್ಕಾರದ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಟರ್‌ನೆಟ್‌ನಲ್ಲಿರುವ ‘ಅಶ್ಲೀಲ ಅಥವಾ ಕಾಮಪ್ರಚೋದಕ ಅಭಿವ್ಯಕ್ತಿ’ಯ ಮೇಲೆ ನಿಯಂತ್ರಣ ಹೇರಿದರೆ ಇದು ಸಾಧ್ಯವಾಗುತ್ತದೆಯೇ? ಇಂಟರ್‌ನೆಟ್‌ನ ಫಲವಾಗಿ ಮೂಡಿರುವ ಅಭಿವ್ಯಕ್ತಿ ಮಾಧ್ಯಮಗಳನ್ನು ಹಳೆಯ ಮಾಧ್ಯಮಗಳ ಜೊತೆ ಹೋಲಿಸಲೂ ಸಾಧ್ಯವಿಲ್ಲ.
ಇಂಟರ್‌ನೆಟ್ ಪೂರ್ವಯುಗದಲ್ಲಿ ಪೋರ್ನೋಗ್ರಫಿ ರೂಪುಗೊಳ್ಳಲು ಇದ್ದದ್ದು ಎರಡೇ ಮಾಧ್ಯಮಗಳು. ಒಂದು ಮುದ್ರಣ ಮಾಧ್ಯಮ ಮತ್ತೊಂದು ಚಲನಚಿತ್ರ ಮಾಧ್ಯಮ. ಹಸಿಹಸಿಯಾದ ಲೈಂಗಿಕತೆಯನ್ನು ವಿವರಿಸುವ ಪುಸ್ತಕ ಅಥವಾ ನಿಯತಕಾಲಿಕವೊಂದರ ಪ್ರಸರಣಕ್ಕೆ ಅನೇಕ ಮಿತಿಗಳಿದ್ದವು. ಎಷ್ಟೇ ಮುಕ್ತತೆ ಮತ್ತು ಅನಾಮಿಕತೆಯ ಅನುಕೂಲವಿದ್ದರೂ ಅದು ಯಾವುದೋ ಒಂದು ಹಂತದಲ್ಲಿ ಬಯಲಾಗುವ ಸಾಧ್ಯತೆ ಇದ್ದೇ ಇತ್ತು.
ಇನ್ನು ಚಲನಚಿತ್ರ ಮಾಧ್ಯಮಕ್ಕೆ ಬಂದರಂತೂ ಲೈಂಗಿಕತೆಯನ್ನು ಪ್ರದರ್ಶನಕ್ಕಿಡುವ ಪಾತ್ರಧಾರಿಗಳಷ್ಟೇ ಸಾಕಾಗುವುದಿಲ್ಲ. ಅದನ್ನು ಚಿತ್ರೀಕರಿಸಲೂ ಒಂದು ವ್ಯವಸ್ಥೆ ಬೇಕಿತ್ತು. ಇಲ್ಲಿ ಗುಟ್ಟೆಂಬುದು ಇರಲೇ ಇಲ್ಲ. ಇಲ್ಲಿ ರಹಸ್ಯವಾಗಿರುತ್ತಿದ್ದುದು ಅದರ ಮಾರಾಟ ವ್ಯವಸ್ಥೆಯಷ್ಟೇ. ಈ ಕಾಲಕ್ಕೆ ಹೋಲಿಸಿದರೆ ಇದೊಂದು ಬಹಳ ಸುಲಭವಾಗಿ ಬಗ್ಗುಬಡಿಯಲು ಸಾಧ್ಯವಿದ್ದ ವ್ಯವಸ್ಥೆ. ಇದನ್ನೇ ಸಂಪೂರ್ಣವಾಗಿ ಇಲ್ಲವಾಗಿಸಲು ವಿಕ್ಟೋರಿಯನ್ ನೈತಿಕತೆಯ ಪ್ರತಿಪಾದಕರಿಗೂ ಸಾಧ್ಯವಾಗಿರಲಿಲ್ಲ.
ಇಂದು ‘ಕಾಮಪ್ರಚೋದಕ’ವಾದ ಎಲ್ಲಾ ಉತ್ಪನ್ನಗಳನ್ನು ತಯಾರಿಸುತ್ತಿರುವವರು ವೃತ್ತಿಪರರು ಮಾತ್ರ ಅಲ್ಲ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಬಳಕೆದಾರರೇ ಈ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ವೆಬ್ 2.0 ತಂತ್ರಜ್ಞಾನ ಕಲ್ಪಿಸಿಕೊಟ್ಟಿರುವ ಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳೂ ಇದಕ್ಕಾಗಿ ಬಳಕೆಯಾಗುತ್ತಿವೆ. ಗೂಗಲ್‌ನಂತಹ ಕಂಪೆನಿ ನಿರ್ವಹಿಸುವ ‘ಬ್ಲಾಗ್‌ಸ್ಪಾಟ್’ ಸೌಲಭ್ಯವನ್ನು ಬಳಸಿಕೊಳ್ಳುವ ಅನೇಕ ‘ಶೃಂಗಾರ ಸಾಹಿತ್ಯ’ದ ಅಥವಾ ‘ಕಾಮೋತ್ತೇಜಕ ಅಭಿವ್ಯಕ್ತಿಯ’ ಬ್ಲಾಗ್‌ಗಳಿವೆ.
ಇವುಗಳ ಭಾಷಿಕ ವ್ಯಾಪ್ತಿ ಕನ್ನಡದ ತನಕವೂ ವ್ಯಾಪಿಸಿವೆ. ಇನ್ನು ಫೇಸ್‌ಬುಕ್, ಗೂಗಲ್‌ಪ್ಲಸ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗೆಯ ಅಭಿವ್ಯಕ್ತಿಗೆ ಎಷ್ಟೇ ಮಿತಿಗಳಿದ್ದರೂ ಅಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಇಲ್ಲಿರುವವರೆಲ್ಲಾ ವೃತ್ತಿಪರರಲ್ಲ. ಇವರಲ್ಲನೇಕರು ಇದನ್ನು ಹಣಕಾಸಿನ ಲಾಭಕ್ಕಾಗಿಯೂ ಮಾಡುತ್ತಿಲ್ಲ. ಆದರೂ ಬಹಳ ಖಾಸಗಿಯಾಗಿರುವ ಎಲ್ಲವನ್ನೂ ಇವರೇಕೆ ಜಗತ್ತಿನೆದುರು ತೆರೆದಿಡುತ್ತಿದ್ದಾರೆ? ಹೊಸ ಸಂವಹನ ಮಾಧ್ಯಮ ನಮ್ಮಲ್ಲಿರುವ ಪ್ರದರ್ಶಕ ಕಾಮಿಗಳ ಅಭಿವ್ಯಕ್ತಿಗೆ ವೇದಿಕೆಯಾಗುತ್ತಿದೆಯೇ?
ಟಿ.ವಿ.ಸ್ಟುಡಿಯೋದಲ್ಲಿ ಕುಳಿತು ತೀರಾ ಖಾಸಗಿಯಾಗಿರುವ ವಿಚಾರಗಳನ್ನು ಧೈರ್ಯವಾಗಿ ಹೇಳುವ ನಟಿಯೊಬ್ಬಳನ್ನು ನಾವೆಲ್ಲರೂ ಮನೆಗಳಲ್ಲಿ ಕುಳಿತು ನೋಡುತ್ತಿದ್ದೆವು. ಒಂದರ್ಥದಲ್ಲಿ ಹೀಗೆ ನೋಡುವ ನಾವೂ ಇಣುಕು ಕಾಮಿಗಳೇ ಅಲ್ಲವೇ? ‘ನಾವು ನೋಡುತ್ತಿರಲಿಲ್ಲ’ ಎಂದು ಸಣ್ಣ ಸಂಖ್ಯೆಯ ಕೆಲವರು ಹೇಳಬಹುದಾದರೂ ಟಿ.ವಿ. ವಾಹಿನಿಗಳು ಇಂಥ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುವುದಕ್ಕೆ ಕಾರಣವಾಗಿರುವುದು ಹೆಚ್ಚಿನ ಸಂಖ್ಯೆಯ ಜನರು ಇದನ್ನು ನೋಡುತ್ತಿರುವುದು ಎಂಬುದೂ ಸತ್ಯವಲ್ಲವೇ?
ಮತ್ತೊಬ್ಬರ ಖಾಸಗಿ ಬದುಕಿನಲ್ಲಿ ಇಣುಕುವ ಗುಣ ನಮಗೆ ಹಿಂದಿನಿಂದಲೂ ಇತ್ತು. ಹಿಂದೆಲ್ಲಾ ಕೇವಲ ಗಾಳಿ ಮಾತುಗಳ ರೂಪದಲ್ಲಿ ಇರುತ್ತಿದ್ದುದು ಈಗ ಹೆಚ್ಚು ಮೂರ್ತವಾಗುತ್ತಿದೆಯಷ್ಟೆ. ಎರಡು ಹೂವುಗಳು ಪರಸ್ಪರ ಸ್ಪರ್ಶಿಸುವ ಮೂಲಕ ಶೃಂಗಾರವನ್ನು ಹೇಳುತ್ತಿದ್ದ ನಮ್ಮ ಸಿನಿಮಾಗಳು ಕ್ಯಾಬರೆಗೂ ಅಲ್ಲಿಂದಾಂಚೆಗೆ ‘ಐಟಂ ಸಾಂಗ್’ಗಳಿಗೂ ಇನ್ನೂ ಮುಂದುವರಿದು ‘ಲಿಪ್‌ಲಾಕ್’ ಮಾಡುವ ಹಂತಕ್ಕೆ ತಲುಪಿದನ್ನೂ ನಾವಿಲ್ಲಿ ಪರಿಗಣಿಸಲೇ ಬೇಕಲ್ಲವೇ? ಈ ದೃಷ್ಟಿಯಲ್ಲಿ ತೀರಾ ಖಾಸಗಿಯಾಗಿ ನೋಡುವ ಇಂಟರ್‌ನೆಟ್‌ನಲ್ಲಿ ಸಹಜವಾಗಿಯೇ ‘ಅಶ್ಲೀಲ’ವಾದುದು ಹೆಚ್ಚಾಗಿರುತ್ತದೆಯಲ್ಲವೇ?
ಇನ್ನೂ ಸೂಕ್ಷ್ಮವಾಗಿ ನೋಡಿದರೆ ಸಂವಹನ ತಂತ್ರಜ್ಞಾನದ ಬೆಳವಣಿಗೆಯ ಉದ್ದಕ್ಕೂ ಎರಡು ಕ್ಷೇತ್ರಗಳು ಬಹಳ ಮುಖ್ಯಪಾತ್ರವಹಿಸಿವೆ. ಒಂದು ಸೇನೆ ಮತ್ತೊಂದು ‘ಕಾಮೋತ್ತೇಜಕ ಅಭಿವ್ಯಕ್ತಿ’. ಸೇನೆಗೆ ತ್ವರಿತ ಸಂವಹನದ ಅಗತ್ಯವಿದ್ದದ್ದು ಶತ್ರುವನ್ನು ಸದೆಬಡಿಯಲು. ಈ ತಂತ್ರಜ್ಞಾನ ಜನಸಾಮಾನ್ಯರಿಗೆ ಲಭ್ಯವಾದ ಕ್ಷಣವೇ ಅದು ‘ಕಾಮೋತ್ತೇಜಕ ಅಭಿವ್ಯಕ್ತಿ’ಯ ಪ್ರಸಾರಕ್ಕೂ ಬಳಕೆಯಾಯಿತು. ಇಡೀ ಚಲನಚಿತ್ರ ತಂತ್ರಜ್ಞಾನ ಇದರಿಂದಾಗಿಯೇ ಹೆಚ್ಚು ಜನಪ್ರಿಯವಾಯಿತೆಂದು ಹೇಳುವ ವಾದಗಳೂ ಇವೆ.
‘1970ರ ದಶಕದಲ್ಲಿ ಫೋಟೋತೆಗೆದ ತಕ್ಷಣ ಮುದ್ರಿಸಿಕೊಡುವ ಪೊಲರಾಯ್ಡ್ ಕ್ಯಾಮೆರಾ ಬಂದಾಗ ಸಾಧ್ಯವಾದದ್ದು ದಿಢೀರ್ ಫೋಟೋಗ್ರಫಿ ಮಾತ್ರ ಅಲ್ಲ ದಿಢೀರ್ ಪೋರ್ನೋಗ್ರಫಿಯೂ ಹೌದು’ ಎಂದು ಮಾಧ್ಯಮ ತಜ್ಞ ಡಿ.ವಾಸ್ಕುಲ್ ಹೇಳಿದ್ದ. ಡಿಜಿಟಲ್ ತಂತ್ರಜ್ಞಾನವೂ ಇದೇ ಪರಂಪರೆಯನ್ನು ಮುಂದುವರಿಸುತ್ತಿದೆ. ಇಂಥದ್ದೊಂದು ಪರಿಸ್ಥಿತಿಯಲ್ಲಿ ನಾವು ಕಂಡುಕೊಳ್ಳಬಹುದಾದ ಪರಿಹಾರವೇನು?
ಇತ್ತೀಚೆಗೆ ಮಕ್ಕಳು ಪೋರ್ನೋಗ್ರಫಿ ನೋಡದಂತೆ ತಡೆಯುವುದಕ್ಕಾಗಿ ಬ್ರಿಟನ್ ಒಂದು ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿತು. ಇದು ರೋಗಕ್ಕಿಂತ ಔಷಧವೇ ಮಾರಕವಾಗಿ ಪರಿಣಮಿಸುವ ಸ್ಥಿತಿಯನ್ನು ಹುಟ್ಟು ಹಾಕಿತು. ಶೃಂಗಾರ, ಅಶ್ಲೀಲತೆ, ಲೈಂಗಿಕ ಶಿಕ್ಷಣ ಎಲ್ಲದರ ನಡುವಣ ಗೆರೆಯೇ ಅಳಿಸಿಹೋಯಿತು. ‘ಮಿಶನರಿ ಪೊಸಿಶನ್’ ಎಂಬ ಪದಕ್ಕೆ ಇರುವ ಸಹಜಾರ್ಥವೇ ಇಲ್ಲವಾಗಿ ಲೈಂಗಿಕತೆಯ ಸಂದರ್ಭದಲ್ಲಿ ಬಳಕೆಯಾಗುವ ರೂಪಕಾರ್ಥವೇ ತಂತ್ರಜ್ಞಾನದ ಮಟ್ಟಿಗೆ ನಿಜಾರ್ಥವಾಗಿಬಿಟ್ಟಿತು. ಪರಿಣಾಮವಾಗಿ ಅಶ್ಲೀಲತೆಯ ಸುಳಿವೇ ಇಲ್ಲದ ವೆಬ್‌ಪುಟಗಳೂ ಬಳಕೆದಾರರಿಗೆ ಕಾಣದಾದವು.
ಭಾರತ ಸರ್ಕಾರ ಕಾಮಪ್ರಚೋದಕ ಅಭಿವ್ಯಕ್ತಿಯನ್ನು ತಡೆಯಲು ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಹೊರಟರೂ ಇದೇ ಸಂಭವಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ‘ಕಾಮಪ್ರಚೋದಕ’, ‘ಅಶ್ಲೀಲ’ ಎಂಬ ಪರಿಕಲ್ಪನೆಗಳು ಸ್ಥಳಕಾಲ ನಿರ್ದಿಷ್ಟವಾದವು. ಒಂದು ಕಾಲದಲ್ಲಿ ಅಶ್ಲೀಲವೆನಿಸಿದ್ದು ಮತ್ತೊಂದು ಕಾಲದಲ್ಲಿ ಅಶ್ಲೀಲವಲ್ಲದೇ ಇರಬಹುದು.
ಲೈಂಗಿಕ ಶಿಲ್ಪಗಳ ಉಜ್ವಲ ಪರಂಪರೆಯಿರುವ ಭಾರತದಲ್ಲಿ ಕಾಮ ಯಾವತ್ತೂ ಪಾಪವೆಂಬಂತೆ ಬಿಂಬಿತವಾಗಿರಲಿಲ್ಲ. ಆದರೆ ಈ ಅಭಿವ್ಯಕ್ತಿಗೆ ಒಂದು ಬಗೆಯ ಸಾಮಾಜಿಕ ನಿಯಂತ್ರಣಗಳಿದ್ದವು. ಈ ಬಗೆಯ ಸಾಮಾಜಿಕ ನಿಯಂತ್ರಣಗಳಿಗೂ ಒಂದು ಬಗೆಯ ಕಾಲಬದ್ಧತೆ ಇರುತ್ತದೆ. ನಮ್ಮ ಕಾಲದ ಸಾಮಾಜಿಕ ನಿಯಂತ್ರಣದ ಎಲ್ಲೆಗಳು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಅರಿತುಕೊಳ್ಳುವುದಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.