ತಂತ್ರಜ್ಞಾನದ ವಿಷಯಕ್ಕೆ ಬಂದರೆ ಯಾವತ್ತೂ ಬಿಜೆಪಿಯೇ ಮುಂದು! ಹೌದು ಬಿಜೆಪಿಯ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ನೋಡಿದರೆ ಇದು ತಿಳಿಯುತ್ತದೆ. ರಕ್ಷಾಕವಚವೂ ಸೇರಿದಂತೆ 52 ಪುಟಗಳಷ್ಟಿರುವ ಬಿಜೆಪಿಯ ಪ್ರಣಾಳಿಕೆಯಲ್ಲಿ ‘technology’ ಎಂಬ ಪದ 58 ಬಾರಿ ಬಳಕೆಯಾಗಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಈ ಪದ ಒಂಬತ್ತು ಬಾರಿ ಬಳಕೆಯಾಗಿದೆ.
ಇದರ ಜೊತೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಚುಟುಕಾಗಿ ಹೇಳಲು ಬಳಸುವ ICT ಎರಡು ಬಾರಿ ಬಳಕೆಯಾಗಿದೆ. ಅಂದರೆ ರಕ್ಷಾಕವಚವೂ ಸೇರಿ 52 ಪುಟಗಳಷ್ಟಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಂತ್ರಜ್ಞಾನ ಎಂಬ ಪದ 11 ಬಾರಿ ಬಳಕೆಯಾಗಿದೆ ಎನ್ನಬಹುದು. ಈ ಬಾರಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡನ್ನೂ ಎದುರಾಳಿಯಾಗಿ ಪರಿಗಣಿಸಿ ಕಣಕ್ಕೆ ಇಳಿದಿರುವ ಆಮ್ ಆದ್ಮಿ ಪಾರ್ಟಿಯ 28 ಪುಟದ ಪ್ರಣಾಳಿಕೆಯಲ್ಲಿ ತಂತ್ರಜ್ಞಾನ ಆರು ಕಡೆ ಕಾಣಿಸಿಕೊಂಡಿದೆ.
ಪ್ರಣಾಳಿಕೆಯ ವಿಷಯಕ್ಕೆ ಬಂದರೆ ಬಿಜೆಪಿಯ ತಂತ್ರಜ್ಞಾನದ ಒಲವು ಸ್ವಲ್ಪ ಹಳೆಯ ವಿಚಾರವೇ. ‘ಪ್ರಕಾಶಿಸುವ ಭಾರತ’ ಘೋಷಣೆಯೊಂದಿಗೆ 2004ರಲ್ಲಿ ಚುನಾವಣೆಗೆ ಇಳಿದಾಗ ಬಿಜೆಪಿಯ ಪ್ರಣಾಳಿಕೆಯಲ್ಲಿ 10 ಕಡೆ ತಂತ್ರಜ್ಞಾನದ ಪ್ರಸ್ತಾಪವಿತ್ತು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದ್ದ ‘ತಂತ್ರಜ್ಞಾನ’ದ ಸಂಖ್ಯೆ ಒಂಬತ್ತು. ಈ ಹೊತ್ತಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಣಾಳಿಕೆಯಲ್ಲಿ 20 ಕಡೆ ತಂತ್ರಜ್ಞಾನದ ಪ್ರಸ್ತಾಪವಿತ್ತು. 2009ರ ಬಿಜೆಪಿ ಪ್ರಣಾಳಿಕೆಯಲ್ಲಿ 14 ಬಾರಿ ತಂತ್ರಜ್ಞಾನದ ಪ್ರಸ್ತಾಪವಿದ್ದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 12 ಕಡೆ ತಂತ್ರಜ್ಞಾನವೆಂಬ ಪದ ಕಾಣಿಸಿಕೊಂಡಿತ್ತು.
ಪ್ರಪಂಚದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಭೂಪಟದಲ್ಲಿ ಭಾರತಕ್ಕೊಂದು ಸ್ಥಾನ ದೊರಕಿಸಿಕೊಟ್ಟದ್ದು ತಾನು ಎಂಬುದನ್ನು ಹೇಳಿಕೊಳ್ಳಲು ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಕಾಂಗ್ರೆಸ್ ರಾಜೀವ್ ಗಾಂಧಿ ಕಾಲಕ್ಕೆ ಹೋಗಿ ನಾವೇ ಎಲ್ಲದಕ್ಕೂ ಕಾರಣರು ಎಂದರೆ, ಬಿಜೆಪಿ ಎನ್‌ಡಿಎ ಆಡಳಿತಾವಧಿಯ ಕಾಲಕ್ಕೆ ಹೋಗಿ ಇದು ನಮ್ಮ ಆಡಳಿತಾವಧಿಯಲ್ಲಿ ಸಂಭವಿಸಿದ್ದು ಎನ್ನುತ್ತದೆ.
ಈ ವಿಷಯದಲ್ಲಿ ಸಾಕಷ್ಟು ರೋಮ ವಿದಳನ ಕ್ರಿಯೆ ನಡೆದಿರುವುದರಿಂದ ಅದನ್ನು ಮತ್ತೆ ಚರ್ಚಿಸುವುದರ ಅಗತ್ಯವೇನೂ ಇಲ್ಲ. ಈ ಎರಡೂ ಪಕ್ಷಗಳು ಕಳೆದ ಹತ್ತು ವರ್ಷಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಹೊಸತೇನನ್ನೂ ಹೇಳುತ್ತಿಲ್ಲ ಎಂಬುದು ಮಾತ್ರ ಸದ್ಯದ ಮಟ್ಟಿಗೆ ಹೊಸ ವಿಚಾರ. ಹಳ್ಳಿಗಳಿಗೆ ಇಂಟರ್‌ನೆಟ್ ತಲುಪಿಸುವುದು, ಮೊಬೈಲ್ ಬಳಕೆದಾರರನ್ನೆಲ್ಲಾ ಇಂಟರ್ನೆಟ್ ಬಳಕೆದಾರರನ್ನಾಗಿಸುವುದು, ಇ–ಆಡಳಿತದಂಥ ಅದೇ ಚರ್ವಿತ ಚರ್ವಣಗಳನ್ನು ಮತ್ತೆ ಮತ್ತೆ ಪ್ರಣಾಳಿಕೆಯಲ್ಲಿ ಜನರೆದುರು ಇಡುತ್ತಿವೆಯಷ್ಟೇ.
ಎರಡೂ ಪಕ್ಷಗಳೂ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಸೃಷ್ಟಿಸುತ್ತಿರುವ ವರ್ತಮಾನದ ಬಿಕ್ಕಟ್ಟುಗಳಿಗೆ ತಮ್ಮಲ್ಲಿ ಏನು ಪರಿಹಾರವಿದೆ ಎಂದು ಹೇಳುತ್ತಿಲ್ಲ. ಇದು ಜಾಣ ಮೌನವೋ ಅಥವಾ ಈ ಬಿಕ್ಕಟ್ಟಿನ ಕುರಿತ ಅರಿವೇ ಇಲ್ಲದಿರುವುದರಿಂದ ಹೀಗಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ತಂತ್ರಜ್ಞಾನಾಧಾರಿತವಾದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಂಬಂಧಿಸಿದಂತೆಯೂ ಇಂಥದ್ದೊಂದು ಜಾಣ ಮೌನ ಮತ್ತು ಮರೆವುಗಳು ಪ್ರಣಾಳಿಕೆಯಲ್ಲಿ ಕಾಣಸಿಗುತ್ತವೆ.
ಯುಪಿಎ ಸರ್ಕಾರ ಜಾರಿಗೆ ತಂದ ‘ಆಧಾರ್’ ಎಂಬ ವಿಶಿಷ್ಟ ಗುರುತು ಸಂಖ್ಯೆಯನ್ನು ಬಿಜೆಪಿ ಖಂಡತುಂಡವಾಗಿ ವಿರೋಧಿಸುತ್ತಿದೆ. ಕೇವಲ ಒಂದು ಚುನಾವಣೆಯಷ್ಟು ಹಿಂದಕ್ಕೆ ಹೋಗಿ, ಅಂದರೆ 2009ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳನ್ನು ನೋಡಿದರೆ ಒಂದು ವಿಶಿಷ್ಟ ವಿಚಾರ ಕಾಣಸಿಗುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ 10ನೇ ಪುಟದಲ್ಲಿ ‘ಪೌರತ್ವ ಎಂಬುದು ಹಕ್ಕು ಮತ್ತು ಹೆಮ್ಮೆಯ ಸಂಗತಿ. ನಮ್ಮ ದೇಶದಲ್ಲಿ ಲಭ್ಯವಿರುವ ಮಾಹಿತಿ ತಂತ್ರಜ್ಞಾನ ಪರಿಣಿತಿಯನ್ನು ಬಳಸಿಕೊಂಡು 2011ರ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಿಯ ಪ್ರಕಟಣೆಯ ನಂತರ ಎಲ್ಲಾ ಪೌರರಿಗೂ ಒಂದು ವಿಶಿಷ್ಟ ಗುರುತಿನ ಚೀಟಿಯನ್ನು ಕೊಡಲು ಸಾಧ್ಯವಿದೆ’ ಎಂಬ ಸಾಲುಗಳಿವೆ.
ಇದೇ ಚುನಾವಣೆಗೆ ಬಿಜೆಪಿ ರೂಪಿಸಿದ ಪ್ರಣಾಳಿಕೆಯ 12ನೇ ಪುಟದಲ್ಲಿ ‘ರಾಷ್ಟ್ರೀಯ ಭದ್ರತೆ, ಕಲ್ಯಾಣ ಕಾರ್ಯಕ್ರಮಗಳ ಜಾರಿ, ನಿಖರವಾದ ತೆರಿಗೆ ಸಂಗ್ರಹ, ವಿತ್ತೀಯ ಒಳಗೊಳ್ಳುವಿಕೆಗಾಗಿ ದೇಶವ್ಯಾಪಿಯಾಗಿ ಬಹೂಪಯೋಗಿ ರಾಷ್ಟ್ರೀಯ ಗುರುತಿನ ಚೀಟಿ (ಎಂಎನ್ಐಸಿ) ಯೋಜನೆಯೊಂದನ್ನು ಆರಂಭಿಸುತ್ತದೆ’. ಅಂದರೆ ಈಗ ವಿರೋಧಿಸುತ್ತಿರುವ ‘ಆಧಾರ್’ ಬಗೆಯ ಯೋಜನೆಯೊಂದನ್ನು 5 ವರ್ಷಗಳ ಹಿಂದೆ ಬಿಜೆಪಿ ತಾನು ಜಾರಿಗೆ ತರುತ್ತೇನೆ ಎಂದಿತ್ತು. ಹಾಗೆ ನೋಡಿದರೆ ಈ ವಿಶಿಷ್ಟ ಗುರುತು ಚೀಟಿ ಯೋಜನೆಯೇ ಎನ್‌ಡಿಎ ಕಾಲದ್ದು. ಇದಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿತ್ತು.
ಈಗ ಬಿಜೆಪಿ ‘ಆಧಾರ್’ಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಸಕಾರಣವೇ ಇರಬಹುದೆಂದು ಭಾವಿಸಿ 2014ರ ಅದರ ಪ್ರಣಾಳಿಕೆಯಲ್ಲಿ ಈ ಸಂಬಂಧ ಏನಾದರೂ ಮಾಹಿತಿ ದೊರೆಯಬಹುದೇ ಎಂದು ಹುಡುಕಿದರೆ ನಿರಾಶೆಯಾಗುತ್ತದೆ. 2009ರಲ್ಲಿ ಬಿಜೆಪಿಗೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬಹೂಪಯೋಗಿ ರಾಷ್ಟ್ರೀಯ ಗುರುತಿನ ಚೀಟಿಯ ಪ್ರಸ್ತಾಪವೇ ಈಗ ಇಲ್ಲ. ಈ ಮಧ್ಯೆ ಅಂಗವಿಕಲರಿಗೆ ಇಂಥದ್ದೊಂದು ‘ರಾಷ್ಟ್ರೀಯ ಗುರುತಿನ ಚೀಟಿ’ಯನ್ನು ಕೊಡುವ ಭರವಸೆಯನ್ನು ಪ್ರಣಾಳಿಕೆ ನೀಡುತ್ತದೆ. ಈಗಾಗಲೇ ಭಾರೀ ಸಂಖ್ಯೆಯ ಜನರಿಗೆ ವಿತರಿಸಲಾಗಿರುವ ‘ಆಧಾರ್’ನ ಭವಿಷ್ಯವೇನು ಎಂಬ ಪ್ರಶ್ನೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉತ್ತರವಿಲ್ಲ.
‘ಆಧಾರ್’ ಯೋಜನೆಯ ರೂವಾರಿ ನಂದನ್ ನಿಲೇಕಣಿಯವರ ವಿರುದ್ಧ ಸ್ಪರ್ಧೆಗಿಳಿದಿರುವ ಅನಂತಕುಮಾರ್ ಮಾತ್ರ ‘ನಾವು ಅಧಿಕಾರಕ್ಕೆ ಬಂದರೆ ಆಧಾರ್ ರದ್ದುಪಡಿಸುತ್ತೇವೆ’ ಎಂಬರ್ಥದ ಮಾತನ್ನಾಡುತ್ತಿದ್ದಾರೆ. ನಂದನ್ ನಿಲೇಕಣಿ ಅವರ ಎದುರಾಳಿಯಾಗದೇ ಇದ್ದಿದ್ದರೆ ಅವರೂ ತಮ್ಮ ಪಕ್ಷದ ಪ್ರಣಾಳಿಕೆಯಂತೆಯೇ ಈ ವಿಷಯದಲ್ಲಿ ಮೌನವಾಗಿರುತ್ತಿದ್ದರೇನೋ?
2009ರಲ್ಲಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಂತೆ ಕಾಂಗ್ರೆಸ್ ವಿಶಿಷ್ಟ ಗುರುತು ಚೀಟಿಯೊಂದನ್ನು ‘ಆಧಾರ್’ ಎಂಬ ಹೆಸರಿನಲ್ಲಿ ಕೊಡಲಾರಂಭಿಸಿತು. ಈ ಬಾರಿಯ ಪ್ರಣಾಳಿಕೆಯಲ್ಲಿ ಅದನ್ನು ಮುಂದುವರಿಸುವ ಭರವಸೆಯನ್ನು ಮತ್ತೆ ನೀಡಿದೆ. ಆದರೆ ಈ ‘ವಿಶಿಷ್ಟ ಗುರುತು’ ಈಗಾಗಲೇ ಸೃಷ್ಟಿಸಿದ ಸಮಸ್ಯೆಗಳು ಮತ್ತು ಅದರ ಕಾನೂನು ಬದ್ಧತೆಯ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಮೌನವಾಗಿದೆ.
ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಣ ನಿಜವಾದ ಭಿನ್ನತೆ ಕಾಣಿಸುವುದು ಬಿಜೆಪಿಯ ‘ಇ–ಭಾಷಾ’ ಮತ್ತು ‘ಮುಕ್ತ ತಂತ್ರಾಂಶಕ್ಕೆ ಪ್ರೋತ್ಸಾಹ’ ಎಂಬ ಎರಡು ಪ್ರಸ್ತಾಪಗಳಲ್ಲಿ.
ಇವೆರಡೂ ಬಿಜೆಪಿಯ 2009ರ ಪ್ರಣಾಳಿಕೆಯಲ್ಲಿದ್ದವು. ಇಲ್ಲಿಯೂ ಕಾಣಿಸಿಕೊಂಡಿದೆ. ಇ–ಭಾಷಾ ಭಾರತೀಯ ಭಾಷೆಗಳಿಗೆ ಬೇಕಿರುವ ತಂತ್ರಜ್ಞಾನಭಿವೃದ್ಧಿಯನ್ನು ಪ್ರಸ್ತಾಪಿಸುತ್ತದೆ. ಈ ಕುರಿತಂತೆ ಈಗಿನ ಮತ್ತು ಹಿಂದಿನ ಪ್ರಣಾಳಿಕೆ ಹೆಚ್ಚಿನ ವಿವರಗಳನ್ನೇನೂ ನೀಡುವುದಿಲ್ಲ. ಮುಕ್ತ ತಂತ್ರಾಂಶಕ್ಕೆ ಪ್ರೋತ್ಸಾಹ ಎಂಬುದು ಕೂಡಾ ಹಿಂದಿನಷ್ಟೇ ಅಸ್ಪಷ್ಟವಾಗಿ ಉಳಿದುಕೊಂಡಿದೆ. ತಂತ್ರಜ್ಞಾನದಲ್ಲಿ ಭಾರತೀಯ ಭಾಷೆಗಳು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಗಳ ಕುರಿತಂತಾಗಲೀ, ಮುಕ್ತ ತಂತ್ರಾಂಶವನ್ನು ಸರ್ಕಾರದಲ್ಲಿ ಬಳಸಿಕೊಳ್ಳುವುದರ ಬಗ್ಗೆಯಾಗಲೀ ಪ್ರಣಾಳಿಕೆ ರೂಪಿಸಿದ ತಜ್ಞರಿಗೆ ಹೆಚ್ಚಿನದ್ದೇನೂ ತಿಳಿದಿಲ್ಲ ಅಥವಾ ಅವರಿಗೆ ಅಗತ್ಯ ಎನಿಸಿಲ್ಲ ಎಂದು ಭಾವಿಸಬಹುದು.
ಫೇಸ್‌ಬುಕ್‌ನಂಥ ಸಾಮಾಜಿಕ ಜಾಲ ತಾಣಗಳ ಬಳಕೆಯಲ್ಲಿ ಜಾಗತಿಕ ದೈತ್ಯರ ಜೊತೆಗೆ ಸ್ಪರ್ಧೆಗಿಳಿದಿರುವ ಭಾರತಕ್ಕೆ ಈಗ ಅಗತ್ಯವಾಗಿ ಬೇಕಿರುವುದು ಬಳಕೆದಾರನ ಖಾಸಗಿ ಮಾಹಿತಿಯ ಭದ್ರತೆಗೆ ಬೇಕಿರುವ ಕಾನೂನು. ದಾಖಲೆ ಸಂಖ್ಯೆಯ ಫೇಸ್‌ಬುಕ್ ಅಭಿಮಾನಿಗಳನ್ನೂ ಟ್ವಿಟ್ಟರ್ ಹಿಂಬಾಲಕರನ್ನೂ ಹೊಂದಿರುವ ಪ್ರಧಾನಿ ಅಭ್ಯರ್ಥಿಯ ಪಕ್ಷವಾದ ಬಿಜೆಪಿ ಈ ಬಗ್ಗೆ ಏನನ್ನೂ ಹೇಳಿಲ್ಲ.
ಇಂಟರ್‌ನೆಟ್ ಮತ್ತು ಭದ್ರತೆ ಎಂದರೆ ಬಿಜೆಪಿಗೆ ನೆನಪಾಗುವುದು ‘ಭಯೋತ್ಪಾದನೆ’ ಮಾತ್ರ. ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಭಿನ್ನವಲ್ಲ. ಬಿಜೆಪಿಯ ‘ಭಯ’ ಇಲ್ಲಿ ಬೇರೊಂದು ಬಗೆಯಲ್ಲಿ ‘ಉತ್ಪಾದನೆ’ಯಾಗಿದೆ. ಅಂದ ಹಾಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು ಕಳೆದ ಹತ್ತು ವರ್ಷಗಳಲ್ಲಿ ರೂಪಿಸಿರುವ ಮೂರು ಲೋಕಸಭಾ ಚುನಾವಣೆಗಳ ಪ್ರಣಾಳಿಕೆಯಲ್ಲಿ ಎಲ್ಲಿಯೂ ಪ್ರೈವೆಸಿ ಎಂಬ ಪದ ಕಾಣಸಿಗುವುದಿಲ್ಲ. ಆಮ್ ಆದ್ಮಿ ಪಾರ್ಟಿಯ ಪ್ರಣಾಳಿಕೆಯೂ ಇದಕ್ಕೆ ಹೊರತಲ್ಲ.
ಭಾರತೀಯ ಪೌರರ ಖಾಸಗಿತನ ಅಥವಾ ಪ್ರೈವೆಸಿಗೆ ಸಂಬಂಧಿಸಿದ ವಿಚಾರದಲ್ಲಿ ಯಾವ ರಾಜಕೀಯ ಪಕ್ಷಕ್ಕೆ ಕಾಳಜಿ ಇದೆ ಎಂದು ಹುಡುಕಾಡಿದಾಗ ಸಿಕ್ಕಿದ್ದು ಸಿಪಿಐ(ಎಂ)ನ ಪ್ರಣಾಳಿಕೆ. 35 ಪುಟಗಳ ಈ ಪ್ರಣಾಳಿಕೆಯಲ್ಲಿ ತಂತ್ರಜ್ಞಾನ ಎಂಬ ಪದ ಏಳು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಎರಡು ಬಾರಿ ಪ್ರೈವೆಸಿ ಎಂಬ ಪದ ಬಳಕೆಯಾಗಿದೆ. ಆಧಾರ್ ಯೋಜನೆಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ಬಹಳ ಸ್ಪಷ್ಟವಾಗಿ ಸಿಪಿಐ–ಎಂ ಹೇಳಿಕೊಂಡಿದೆ.
‘ಸಂಸತ್ತಿನ ಒಪ್ಪಿಗೆ ದೊರೆಯುವ ತನಕ ಆಧಾರ್ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು. ಅದನ್ನು ಜಾರಿಗೆ ತರುವ ಮೊದಲು ಖಾಸಗಿತನ (ಪ್ರೈವೆಸಿ)ಗೆ ಸಂಬಂಧಿಸಿದ ಕಾನೂನು ಮತ್ತು ದತ್ತಾಂಶ ರಕ್ಷಣೆಗೆ ಅಗತ್ಯವಿರುವ ಕಾನೂನು ರೂಪಿಸಿದ ಮೇಲಷ್ಟೇ ಆಧಾರ್ ಯೋಜನೆಯನ್ನು ಮುಂದುವರಿಸಲಾಗುವುದು.’ ಎಂಬ ಈ ಸಾಲುಗಳು ತಂತ್ರಜ್ಞಾನದ ವರ್ತಮಾನದ ಬಿಕ್ಕಟ್ಟಿಗೆ ಅಗತ್ಯವಿರುವ ಪರಿಹಾರವೊಂದನ್ನು ಪ್ರಸ್ತಾಪಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಸಿಪಿಐ–ಎಂ ತಂತ್ರಜ್ಞಾನದ ಜೊತೆಗೆ ಸರಸವಾಡುವ ಪಕ್ಷವೇನೂ ಅಲ್ಲ. ಆದರೂ ಅದು ಒಂದು ಹೆಜ್ಜೆ ಮುಂದಿದೆ. ಆದರೆ ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ತಂತ್ರಜ್ಞಾನದ ಸಮಸ್ಯೆ ಸಿಪಿಐ–ಎಂಗೆ ಅಷ್ಟೇನೂ ಮುಖ್ಯವಾದಂತೆ ಕಾಣಿಸುವುದಿಲ್ಲ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಭಾರತದ ಸಾಧನೆಗೆ ಹೆಮ್ಮೆ ಪಡುವಾಗಲೇ ಭಾರತೀಯ ಭಾಷೆಗಳ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿರುವುದು. ಹೊಸ ತಂತ್ರಜ್ಞಾನದ ಸಂದರ್ಭದಲ್ಲಿ ಪ್ರೈವೆಸಿಯ ಬಗ್ಗೆ ಚರ್ಚಿಸುತ್ತಿರುವಾಗಲೇ ನಮ್ಮ ರಾಜಕೀಯ ಪಕ್ಷಗಳು ಮಾಹಿತಿ ತಂತ್ರಜ್ಞಾನವನ್ನು ಕೇವಲ ಅಲಂಕಾರಿಕ ಮಾತನ್ನಾಗಿ ಬಳಸುತ್ತಿರುವುದನ್ನು ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಣಾಳಿಕೆಗಳು ತೋರಿಸಿಕೊಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.