ADVERTISEMENT

ಡಿಜಿಟಲ್ ಇಂಡಿಯಾಕ್ಕೆ ಪಿಡಿಎಫ್ ಗ್ರಹಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:24 IST
Last Updated 16 ಜೂನ್ 2018, 9:24 IST

ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಿಸಿ ಮಾಹಿತಿ ಹೆದ್ದಾರಿಗೆ ಜೋಡಿಸಿಬಿಟ್ಟರೆ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಕೆಲಸ ಮುಕ್ಕಾಲು ಪಾಲು ಮುಗಿದಂತೆ ಎಂಬುದು ಸಾಮಾನ್ಯ ನಂಬಿಕೆ. ಸರ್ಕಾರಿ ಕಚೇರಿಗಳ ಕಂಪ್ಯೂಟರೀಕರಣ ಆರಂಭಗೊಂಡು ಏನಿಲ್ಲವೆಂದರೂ ಒಂದೂವರೆ ದಶಕಗಳೇ ಉರುಳಿ ಹೋದವು. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇದೇ ಜೂನ್ ತಿಂಗಳಿಗೆ ಒಂದು ದಶಕ ತುಂಬಿತು.

ಈ ಕಾಯ್ದೆ ಹೇಳುವಂತೆ ಸರ್ಕಾರಿ ಕಚೇರಿಗಳು ಬಹಳಷ್ಟು ಮಾಹಿತಿಗಳನ್ನು ಸ್ವಯಂ ಪ್ರೇರಿತವಾಗಿ ತಮ್ಮ ವೆಬ್‌ಸೈಟ್‌ಗಳಲ್ಲಿ ಒದಗಿಸಬೇಕು. ಇದೆಲ್ಲಾ ಆದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಸರ್ಕಾರಿ ಇಲಾಖೆಗಳ ಬಳಿ ಇರುವ ಭಾರತದ ಪ್ರಜೆಗಳೆಲ್ಲರೂ ನೋಡಬಹುದಾದ ಮಾಹಿತಿಗಳು ಸುಲಭ ಲಭ್ಯವಾಗಬೇಕು ಎಂದು ಯಾರಾದರೂ ಭಾವಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ವಾಸ್ತವ ಮಾತ್ರ ಬಹಳ ವಿಚಿತ್ರವಾಗಿದೆ.

ಮಾಹಿತಿಗಳನ್ನು ಮುಚ್ಚಿಡುವ ತಂತ್ರವೊಂದು ಸರ್ಕಾರಿ ಇಲಾಖೆಗಳಿಗೆ  ಅದು ಹೇಗೋ ಸಿದ್ಧಿಸಿ ಬಿಟ್ಟಿದೆ. ಕಂಪ್ಯೂಟರೀಕರಣದ ಆಚೆಗಿನ ಮತ್ತೊಂದು ಸೌಲಭ್ಯ ಬಂದರೂ ಅವು ಮಾಹಿತಿಗಳನ್ನು ಪ್ರಜೆಗಳಿಂದ ದೂರವಿಡುವುದರಲ್ಲಿ ಯಶಸ್ವಿಯಾಗಿಬಿಡುತ್ತವೆಯೇನೋ? ಈಗ ಸರ್ಕಾರಿ ಇಲಾಖೆಗಳು ತಮ್ಮಲ್ಲಿರುವ ಮಾಹಿತಿಯನ್ನು ಸ್ವತಂತ್ರ ವಿಶ್ಲೇಷಣೆಗಳಿಂದ ದೂರವಿಡುವುದಕ್ಕೆ ‘ಪಿಡಿಎಫ್’ ತಂತ್ರ ಬಳಸುತ್ತಿವೆ. ಒಂದು ದಾಖಲೆಯನ್ನು ಪಿಡಿಎಫ್ ರೂಪಕ್ಕೆ ಪರಿವರ್ತಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಕ್ಕೂ ಆ ದಾಖಲೆಯನ್ನು ಮುದ್ರಿಸಿ ಕಡತವೊಂದರಲ್ಲಿ ಹಾಕಿ ಸರ್ಕಾರಿ ಕಚೇರಿಯೊಂದರ ಕಪಾಟಿನಲ್ಲಿ ಇಡುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ.

ಪಿಡಿಎಫ್‌ ಕಡತದಲ್ಲಿರುವ ಮಾಹಿತಿ ಇಂಗ್ಲಿಷ್‌ನಲ್ಲಿದ್ದರೆ, ಅದನ್ನು ಪಿಡಿಎಫ್ ಆಗಿ ಪರಿವರ್ತಿಸುವಾಗ ಅದರೊಳಗಿನ ಪಠ್ಯವನ್ನು ಓದಲು ಅನುವಾಗುವಂತೆ ನೋಡಿಕೊಂಡಿದ್ದರೆ ಪರವಾಗಿಲ್ಲ. ಇಲ್ಲವಾದರೆ ಕಂಪ್ಯೂಟರುಗಳ ಮಟ್ಟಿಗೆ ಪಿಡಿಎಫ್ ಕಡತ ಒಂದು ಚಿತ್ರ ಮಾತ್ರ. ಬಳಕೆದಾರರು ಮುದ್ರಿಸಿಕೊಂಡು ತುಂಬಿಸಬೇಕಾದ ಅರ್ಜಿ ನಮೂನೆಯಂಥ ಕೆಲವು ದಾಖಲೆಗಳನ್ನು ಹೊರತು ಪಡಿಸಿದರೆ ಸರ್ಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಾದ ಮಾಹಿತಿ ಪಿಡಿಎಫ್ ರೂಪದಲ್ಲಿ ಇರಬೇಕಾಗಿಲ್ಲ.

ಆದರೆ ಯಾವ ಸರ್ಕಾರಿ ವೆಬ್‌ಸೈಟ್ ನೋಡಿದರೂ ಅದರಲ್ಲಿರುವ ಬಹುತೇಕ ಮಾಹಿತಿಗಳು ಪಿಡಿಎಫ್ ರೂಪದಲ್ಲಿರುತ್ತವೆ. ಇವುಗಳಲ್ಲಿರುವ ಮಾಹಿತಿಯನ್ನು ಅರಿಯುವುದಕ್ಕೆ ಇರುವ ಏಕೈಕ ಮಾರ್ಗ ಒಂದೊಂದೇ ಕಡತಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬೇಕು. ಭಾರಿ ಪ್ರಮಾಣ ಅಂಕಿ–ಅಂಶಗಳಿದ್ದರೆ ಅವುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇಕಿರುವ ಸಾಫ್ಟ್‌ವೇರ್‌ಗಳಲ್ಲಿ ಇವುಗಳನ್ನು ಬಳಸಲು ಸುಲಭ ಸಾಧ್ಯವಲ್ಲ. ಅದಕ್ಕಾಗಿ ಮತ್ತೊಂದಿಷ್ಟು ಸರ್ಕಸ್ ನಡೆಸಬೇಕು. ಈ ಕಡತಗಳು ಕನ್ನಡದಂತಹ ಭಾರತೀಯ ಭಾಷೆಗಳಲ್ಲಿದ್ದರಂತೂ ಅದನ್ನು ಮರು ಟೈಪಿಸಿದರಷ್ಟೇ ಕಂಪ್ಯೂಟರ್ ಬಳಸಿ ವಿಶ್ಲೇಷಣೆ ನಡೆಸಲು ಸಾಧ್ಯ.

ಕಂಪ್ಯೂಟರೀಕರಣವನ್ನು ‘ಪಿಡಿಎಫ್‌ಕರಣ’ವಾಗಿ ಬದಲಾಯಿಸಿರುವ ವಿದ್ಯಮಾನದ ಕುರಿತು ಡಿಜಿಟಲ್ ಇಂಡಿಯಾ ಯೋಜನೆಯ ಅಧಿಕೃತ ಘೋಷಣೆಯ ನಾಲ್ಕೇ ದಿನಗಳ ನಂತರ ಲೇಖನವೊಂದರಲ್ಲಿ  ಐಬಿಎನ್ ಲೈವ್‌ನ ಸೌಮ್ಯದೀಪ್ ಚೌಧುರಿ ಚರ್ಚಿಸಿದ್ದರು. ‘ಡಿಜಿಟಲ್ ಭಾರತ ಮತ್ತು ಪಿಡಿಎಫ್ ತೇಪೆ’ ಎಂಬ ಶೀರ್ಷಿಕೆಯ ಈ ಲೇಖನ ನಮ್ಮ  ಅಧಿಕಾರ ಶಾಹಿಯ ‘ಡಿಜಿಟಲ್’ ಪರಿಕಲ್ಪನೆ ಹೇಗೆ ‘ಪಿಡಿಎಫ್’ ಕಡತಗಳ ಮಟ್ಟಿಗೆ ಸೀಮಿತವಾಗಿದೆ ಎಂಬುದನ್ನು ಚರ್ಚಿಸಿತ್ತು.

ಅವರು ಒದಗಿಸಿದ ಅಂಕಿ ಅಂಶಗಳಂತೆ “gov.in” ಜೊತೆಗೆ ಕೊನೆಗೊಳ್ಳುವ ಸರ್ಕಾರಿ ವೆಬ್‌ಸೈಟುಗಳಲ್ಲಿರುವ ಪಿಡಿಎಫ್ ಕಡತಗಳ ಸಂಖ್ಯೆ 14.88 ಕೋಟಿ. ಹಾಗೆಯೇ ‘nic.in’ನಲ್ಲಿ ಕೊನೆಗೊಳ್ಳುವ ಸರ್ಕಾರಿ ವೆಬ್‌ಸೈಟುಗಳಲ್ಲಿರುವ ಪಿಡಿಎಫ್ ಕಡತಗಳ ಸಂಖ್ಯೆ 12 ಕೋಟಿ. ಇದು ಸರ್ಕಾರಿ ವೆಬ್‌ಸೈಟುಗಳಲ್ಲಿರುವ ಒಟ್ಟು ಪಿಡಿಎಫ್ ಕಡತಗಳ ಸಂಖ್ಯೆಯೇನೂ ಅಲ್ಲ. ಇದು ಗೂಗಲ್‌ ಸೈಟ್ ಸರ್ಚ್ ಸವಲತ್ತಿನಲ್ಲಿ ದೊರೆಯುವ ಅಂಕಿ ಅಂಶಗಳಷ್ಟೇ. ಸರ್ಚ್‌ ಎಂಜಿನ್‌ಗಳ ಕಣ್ಣಿಗೆ ಕಾಣಿಸದಂತೆ ಇರುವ ಕಡತಗಳ ಸಂಖ್ಯೆಯನ್ನೂ ಸೇರಿಸಿಕೊಂಡರೆ ಇದು ಇನ್ನಷ್ಟು ದೊಡ್ಡದಾಗಿ ಬೆಳೆಯಬಹುದು.

ಕರ್ನಾಟಕವು ವಿದ್ಯುನ್ಮಾನ ಆಡಳಿತಕ್ಕೆ ಬಹಳ ಆರಂಭದಲ್ಲಿಯೇ ತೆರೆದುಕೊಂಡ ರಾಜ್ಯಗಳಲ್ಲಿ ಒಂದು. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೆಯೇ ಕರ್ನಾಟಕ ಸರ್ಕಾರದ ಅಧೀನದಲ್ಲಿ ಬರುವ ಬಹುತೇಕ ಎಲ್ಲಾ ಸಂಸ್ಥೆಗಳಿಗೂ ವೆಬ್‌ಸೈಟ್ ಇದ್ದೇ ಇದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ನಿರ್ವಹಿಸುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಈ ಲೇಖಕ ನಡೆಸಿದ ಗೂಗಲ್ ಜಾಲಾಟದಲ್ಲಿ ದೊರೆತ ಅಂಕಿ ಅಂಶಗಳು ಹೀಗಿವೆ. Karnataka.gov.in ತಾಣದಲ್ಲಿ 41.40 ಲಕ್ಷ ಪಿಡಿಎಫ್ ಕಡತಗಳಿವೆ.

ಹಾಗೆಯೇ kar.nic.inನಲ್ಲಿ ಕೊನೆಗೊಳ್ಳುವ ಸರ್ಕಾರಿ ವೆಬ್‌ಸೈಟುಗಳಲ್ಲಿ 5.25 ಕೋಟಿ ಪಿಡಿಎಫ್ ಕಡತಗಳಿವೆ. ಕರ್ನಾಟಕದ ಸರ್ಕಾರದ ಅಧೀನದಲ್ಲಿರುವ ಕೆಲವು ಸಂಸ್ಥೆಗಳು ಸರ್ಕಾರಿ ಡೊಮೈನ್‌ಗಳಾದ gov.in ಮತ್ತು kar.nic.inಗಳನ್ನು ಕೈಬಿಟ್ಟು ತಮ್ಮದೇ ಆದ ‘org’, ‘.ac.in’ ಇತ್ಯಾದಿಗಳಲ್ಲಿ ಕೊನೆಗೊಳ್ಳುವ ಡೊಮೈನ್ ನೇಮ್‌ಗಳನ್ನೂ ಹೊಂದಿವೆ. ಇವುಗಳಲ್ಲಿ ಇರುವ ಪಿಡಿಎಫ್ ಕಡತಗಳನ್ನು ಈ ಲೆಕ್ಕಾಚಾರದಲ್ಲಿ ಸೇರಿಸಿಕೊಂಡಿಲ್ಲ.

ಮಾಹಿತಿ ತಂತ್ರಜ್ಞಾನ ಒದಗಿಸಿರುವ ಸವಲತ್ತಿನ ಮೂಲಕ ಸರ್ಕಾರ, ಕಚೇರಿಗಳ ಕಪಾಟುಗಳಲ್ಲಿದ್ದ ಕಾಗದದಲ್ಲಿದ್ದ ಕಡತಗಳನ್ನೆಲ್ಲಾ ಡಿಜಿಟಲ್ ಕಪಾಟುಗಳಿಗೆ ವರ್ಗಾಯಿಸಿದೆ. ಕಚೇರಿಗಳಲ್ಲಿ ಈ ಕಡತಗಳನ್ನು ಜನಸಾಮಾನ್ಯರು ತೆರೆಯದಂತೆ ಸರ್ಕಾರಿ ನೌಕರರು ನೋಡಿಕೊಳ್ಳುತ್ತಿದ್ದರು. ವೆಬ್‌ಸೈಟುಗಳಲ್ಲಿ ಭಾರಿ ಸಂಖ್ಯೆಯ ಕಡತಗಳನ್ನು ಹುಡುಕಲಾಗದಂತೆ ಪೇರಿಸಿಟ್ಟು ಎಲ್ಲಾ ಮಾಹಿತಿಯನ್ನೂ ಪಾರದರ್ಶಕವಾಗಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ ಅಷ್ಟೇ.

ಸರ್ಕಾರಿ ಇಲಾಖೆಗಳು ಮತ್ತು ಕಚೇರಿಗಳು ಸ್ವಯಂ ಪ್ರೇರಿತವಾಗಿ ಬಹಿರಂಗ ಪಡಿಸಬೇಕಾದ ಮಾಹಿತಿಯ ಪಟ್ಟಿಯೊಂದು ಮಾಹಿತಿ ಹಕ್ಕು ಕಾಯ್ದೆಯ ಭಾಗವಾಗಿಯೇ ರೂಪುಗೊಂಡಿತ್ತು. ಸರ್ಕಾರಿ ವೆಬ್‌ಸೈಟುಗಳನ್ನೊಮ್ಮೆ ಇಣುಕಿದರೆ ‘ಸ್ವಯಂ ಪ್ರೇರಿತ ಮಾಹಿತಿ ಒದಗಣೆ’ಯ ತಮಾಷೆ ಬಯಲಾಗುತ್ತದೆ. ಹೆಚ್ಚಿನ ಸರ್ಕಾರಿ ಕಚೇರಿಗಳು ಮಾಹಿತಿ ಹಕ್ಕು ಅಧಿನಿಯದ ಪ್ರತಿಗಳನ್ನಷ್ಟೇ ಪಿಡಿಎಫ್ ರೂಪದಲ್ಲಿ ವೆಬ್‌ಸೈಟಿನಲ್ಲಿ ಪ್ರಕಟಿಸಿವೆ. ಇದಕ್ಕೆ ಅಪವಾದವೆನ್ನಬಹುದಾದ ಸರ್ಕಾರಿ ವೈಬ್‌ಸೈಟುಗಳ ಸಂಖ್ಯೆ ಬಹಳ ಸಣ್ಣದು.

ಡಿಜಿಟಲ್ ತಂತ್ರಜ್ಞಾನ ಮಾಹಿತಿಯ ಸಂಸ್ಕರಣೆಗೆ ಕಲ್ಪಿಸಿರುವ ಅನುಕೂಲಗಳು ಹಲವು. ಆದರೆ ಇದಕ್ಕೆ ಮಾಹಿತಿ ಸಂಸ್ಕರಣೆಗೆ ಅನುಕೂಲವಾಗುವ ಸ್ವರೂಪದಲ್ಲಿ ಸಿಗಬೇಕು. ಈಗ ಹೆಚ್ಚಿನ ಸರ್ಕಾರಿ ವ್ಯವಹಾರಗಳು ಕಂಪ್ಯೂಟರ್‌ನ ಮೂಲಕವೇ ನಡೆಯುತ್ತವೆ. ಉದಾಹರಣೆಗೆ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಭಾಗ್ಯ’ ಯೋಜನೆಯ ಅನ್ವಯ ವಿತರಿಸುವ ಅಕ್ಕಿಯ ಲೆಕ್ಕಾಚಾರ ಸಂಪೂರ್ಣವಾಗಿ ಕಂಪ್ಯೂಟರೀಕೃತ ವ್ಯವಹಾರ. ಮಿಲ್ಲುಗಳಿಂದ ಪಡೆಯುವ ಲೆವಿ ಅಕ್ಕಿಯ ಪ್ರಮಾಣ, ಹೊರ ರಾಜ್ಯಗಳಿಂದ ಖರೀದಿಸುವ ಅಕ್ಕಿಯ ಪ್ರಮಾಣ, ಯಾವ ದಿನ ಎಷ್ಟು ಅಕ್ಕಿ ಖರೀದಿಸಲಾಯಿತು.

ಯಾವೆಲ್ಲಾ ಅಂಗಡಿಗಳಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಯಿತು ಎಂಬುದೆಲ್ಲವೂ ಕಂಪ್ಯೂಟರಿನ ದತ್ತಸಂಚಯದಲ್ಲಿ ಅಡಕವಾಗಿರುತ್ತದೆ. ಈ ಮಾಹಿತಿಯನ್ನು ದತ್ತಸಂಚಯವೊಂದರ ರೂಪದಲ್ಲಿ ಒದಗಿಸಿದರೆ ಈ ಕ್ಷೇತ್ರವನ್ನು ಅಧ್ಯಯನ  ಮಾಡುವ ತಜ್ಞರಿಗೆ ಅನುಕೂಲವಾಗುತ್ತದೆ. ಇಡೀ ವ್ಯವಹಾರದ ಕುರಿತಂತೆ ಒಂದು ಸ್ವತಂತ್ರ ಮೌಲ್ಯಮಾಪನ ಸಾಧ್ಯವಾಗುತ್ತದೆ. ಆದರೆ ಅದನ್ನು ಕಾಗದದ ದಾಖಲೆಗೆ ಸಮಾನವಾದ ಪಿಡಿಎಫ್ ರೂಪದಲ್ಲಿ ಯಾವತ್ತೋ ಒಮ್ಮೆ ಪ್ರಕಟಿಸಿದರೆ ಏನು ಪ್ರಯೋಜನ?

ಈ ಬಗೆಯ ಮಾಹಿತಿಗಳನ್ನು ಮುಕ್ತವಾಗಿ ಎಲ್ಲಾ ಸರ್ಕಾರಗಳೂ ಒದಗಿಸಬೇಕು ಎಂಬುದಕ್ಕಾಗಿಯೇ ‘ಮುಕ್ತ ಸರ್ಕಾರ’, ‘ಮುಕ್ತ ದತ್ತಾಂಶ’ ಮುಂತಾದ ಆಂದೋಲನಗಳೇ ಚಾಲ್ತಿಯಲ್ಲಿವೆ. ಜಗತ್ತಿನ ಬಹುತೇಕ ಸರ್ಕಾರಗಳಂತೆ ಭಾರತ ಸರ್ಕಾರವೂ ‘ಮುಕ್ತ ದತ್ತಾಂಶ’ ಅಥವಾ ಯೋಜನೆಯನ್ನು ಜಾರಿಗೊಳಿಸಿದೆ. ಭಾರತ ಸರ್ಕಾರ ಇದಕ್ಕಾಗಿ ಅತ್ಯಂತ ವೃತ್ತಿಪರ ಎಂದು ಹೇಳುವಂತಹ ಒಂದು ಪೋರ್ಟಲ್ ಅನ್ನು ರೂಪಿಸಿ (data.gov.in) ಮೂರು ವರ್ಷ ಕಳೆಯಿತು. ಇದರಲ್ಲಿರುವ ಒಟ್ಟು ಮಾಹಿತಿಯ ಪ್ರಮಾಣ ಬಹಳ ದೊಡ್ಡದೇನೂ ಅಲ್ಲ. ಕೇವಲ 3600 ಡೇಟಾಸೆಟ್‌ಗಳು ಮಾತ್ರ.

ಆದರೆ, ಇದರಲ್ಲಿರುವ ಬಹುತೇಕ ಮಾಹಿತಿಗಳು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ನೀತಿ ಆಯೋಗ ನಡೆಸುವ ಸಮೀಕ್ಷೆಗಳ ಫಲಿತಾಂಶ ಮುಂತಾದುವುಗಳಿಗೆ ಸೀಮಿತವಾಗಿದೆ. ಬಹಳ ಹಿಂದೆಯೇ ಕಂಪ್ಯೂಟರೀಕರಣವನ್ನು ಅಳವಡಿಸಿಕೊಂಡ ಕರ್ನಾಟಕ ಸರ್ಕಾರ ಇಲ್ಲಿ ಒದಗಿಸಿರುವ ದತ್ತಾಂಶ ಕೇವಲ ಒಂದು ದಾಖಲೆಗೆ ಸೀಮಿತವಾಗಿದೆ.

ಇದರ ಅರ್ಥ, ಕರ್ನಾಟಕ ಸರ್ಕಾರ ಬಳಿ ಮುಕ್ತ ದತ್ತಾಂಶ ಯೋಜನೆಗೆ ಒದಗಿಸಲು ಬೇಕಿರುವ ಸ್ವರೂಪದ ದತ್ತಾಂಶ ಇಲ್ಲ ಎಂದಲ್ಲ. ಇದನ್ನು ಒದಗಿಸುವ ಮನಸ್ಸು ಸರ್ಕಾರಕ್ಕೆ ಇಲ್ಲ ಎಂದು ಹೇಳಬೇಕಾಗುತ್ತದೆ. ಇಡೀ ಪೋರ್ಟಲ್‌ನಲ್ಲಿ ಕಾಣಸಿಗುವ ರಾಜ್ಯಗಳ ಸಂಖ್ಯೆ ಐದು. ಮಧ್ಯಪ್ರದೇಶ 79 ದಾಖಲೆಗಳನ್ನು ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. ತಮಿಳುನಾಡು 18 ದಾಖಲೆಗಳನ್ನು ನೀಡಿದ್ದರೆ, ಮೇಘಾಲಯ 17 ದಾಖಲೆಗಳನ್ನು ಒದಗಿಸಿದೆ.

ಛತ್ತೀಸ್‌ಗಢ ಸರ್ಕಾರ ಐದು ದಾಖಲೆಗಳನ್ನು ಒದಗಿಸಿದೆ. ಈ ಲೆಕ್ಕಾಚಾರದಲ್ಲಿಯೂ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯನ್ನು ಹೊಂದಿರುವ ಕರ್ನಾಟಕ ಸರ್ಕಾರ ಕೊನೆಯಲ್ಲಿದೆ. ‘ಡಿಜಿಟಲ್ ಇಂಡಿಯಾ’ ಯೋಜನೆಯ ಮೂಲಕವಾದರೂ ಸರ್ಕಾರಕ್ಕೆ ಹಿಡಿದಿರುವ ಪಿಡಿಎಫ್ ಗ್ರಹಣ ಬಿಡುಗಡೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.