ADVERTISEMENT

ಬಿಗ್ ಬಾಸ್ ಮನೆಯೊಳಗಿನ ಕ್ರಾಂತಿ

ಎ.ಎನ್‌ ಎಮ ಇಸ್ಮಾಯಿಲ್
Published 24 ಮೇ 2015, 19:30 IST
Last Updated 24 ಮೇ 2015, 19:30 IST

ಐದು ವರ್ಷಗಳ ಹಿಂದೆ ಈ ಹೊತ್ತಿಗೆ ಟ್ಯುನೀಷಿಯಾದಲ್ಲಿ ಕ್ರಾಂತಿಯೊಂದಕ್ಕೆ ಬೇಕಿರುವ ವಾತಾವರಣ ರೂಪುಗೊಂಡಿತ್ತು. ಅಷ್ಟೇ ಅಲ್ಲ, ಇಡೀ ಅರಬ್ ಜಗತ್ತಿನಲ್ಲಿ ತಮ್ಮನ್ನು ಆಳುತ್ತಿರುವ ಸರ್ವಾಧಿಕಾರಿ ಅಥವಾ ರಾಜ ಪ್ರಭುತ್ವಗಳ ವಿರುದ್ಧ ಸಿಡಿದೇಳಲು ಬೇಕಿರುವ ಸಂಪರ್ಕ ಜಾಲವೊಂದು ರೂಪುಗೊಂಡಿತ್ತು. ಹೊರ ಜಗತ್ತು ಈ ಜಾಲವನ್ನು ವೆಬ್ 2.0 ತಂತ್ರಜ್ಞಾನ ಎಂದು ಕರೆಯುತ್ತಿತ್ತು.

ತಥಾಕಥಿತ ಪ್ರಜಾತಾಂತ್ರಿಕ ಆಡಳಿತವಿರುವ ದೇಶಗಳಲ್ಲಿ ಈ ತಂತ್ರಜ್ಞಾನದ ಬಳಕೆದಾರರನ್ನು ಹೇಗೆ ತಮ್ಮ ಗ್ರಾಹಕರನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂಬುದರ ಕುರಿತಂತೆ ಪ್ರತಿಯೊಂದು ವಾಣಿಜ್ಯ ಸಂಸ್ಥೆಯೂ ಆಲೋಚಿಸುತ್ತಿತ್ತು. 2010ರ ಡಿಸೆಂಬರ್‌ ಉತ್ತರಾರ್ಧದಲ್ಲಿ ಟ್ಯುನಿಷಿಯಾದಲ್ಲಿ ಹುಟ್ಟಿಕೊಂಡ ಪ್ರಭುತ್ವ ವಿರೋಧಿ ಪ್ರತಿಭಟನೆಯ ಅಲೆ ಇಡೀ ಅರಬ್ ಜಗತ್ತನ್ನು ವ್ಯಾಪಿಸಿತು. ಈಜಿಪ್ಟ್, ಲಿಬಿಯಾ, ಯೆಮನ್ ಹೀಗೇ ಒಂದೊಂದೇ ಸರ್ವಾಧಿಕಾರಿ ಮತ್ತು ರಾಜಪ್ರಭುತ್ವಗಳನ್ನು ಜನರೇ ಉರುಳಿಸುವುದಕ್ಕೆ ಜಗತ್ತು ಸಾಕ್ಷಿಯಾಯಿತು.

ಟ್ವಿಟ್ಟರ್‌ನ ಹ್ಯಾಷ್ ಟ್ಯಾಗ್‌ಗಳಲ್ಲಿ ಟ್ರೆಂಡ್‌ಗಳನ್ನು ನೋಡುತ್ತಾ ಜಗತ್ತಿನ ಪ್ರಜಾಪ್ರಭುತ್ವದ ರಫ್ತುದಾರರೆಲ್ಲರೂ ಅರಬ್ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗುವುದಕ್ಕೆ ಇನ್ನುಳಿದಿರುವುದು ಕೆಲವೇ ಕ್ಷಣಗಳು ಎಂದು ಭಾವಿಸುತ್ತಿದ್ದರು. ಫೇಸ್‌ಬುಕ್, ಟ್ವಿಟ್ಟರ್‌ಗಳು ಹೇಗೆ ಪ್ರಜಾಪ್ರಭುತ್ವ ಸ್ಥಾಪನೆಯ ಪರಿಕರಗಳಾಗುತ್ತಿವೆ ಎಂಬ ವಿಶ್ಲೇಷಣೆಗಳ ಮಹಾಪೂರವೇ ಹರಿಯಿತು. ಇಂಟರ್‌ನೆಟ್ ಇಡೀ ಜಗತ್ತನ್ನು ವಿಮೋಚಿಸುತ್ತಿದೆ ಎಂಬ ಮಟ್ಟಿಗಿನ ಮಾತುಗಳು ಎಲ್ಲೆಲ್ಲೂ ಕೇಳಿಸಿದವು. ಇದೆಲ್ಲಾ ಆಗಿ ಐದು ವರ್ಷವಾಗುತ್ತಾ ಬಂದಿದೆ ಅರಬ್ ವಸಂತವೀಗ ಕೇವಲ ಅರಬ್ ಮಾಗಿಯಾಗಿ ಬದಲಾಗಿದೆ. ವೆಬ್ 2.0 ಕ್ರಾಂತಿ ನಡೆದ ಯಾವ ದೇಶದಲ್ಲೂ ನಿಜವಾದ ಅರ್ಥದ ಪ್ರಜಾಪ್ರಭುತ್ವ ಸ್ಥಾಪನೆಯಾಗಿಲ್ಲ. ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಹದಗೆಟ್ಟಿದೆ. ಐಎಸ್ಐಎಸ್‌ನಂಥ ನೇತ್ಯಾತ್ಮಕ ಶಕ್ತಿಗಳು ಉದಯಿಸಿ ಜಾಗತಿಕ ಶಾಂತಿಗೇ ಸವಾಲೊಡ್ಡುತ್ತಿವೆ.

ಇತ್ತ ಇಂಟರ್‌ನೆಟ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಕೇವಲ ಐದು ವರ್ಷಗಳ ಹಿಂದೆ ಜಗತ್ತನ್ನು ವಿಮೋಚಿಸುವುದಕ್ಕೆ ಇಂಟರ್‌ನೆಟ್ ಇದೆ ಎಂದು ಮಾತನಾಡುತ್ತಿದ್ದವರೆಲ್ಲಾ ಈಗ ಇಂಟರ್‌ನೆಟ್ ಅನ್ನು ಸ್ಥಾಪಿತ ಹಿತಾಸಕ್ತಿಗಳ ಕೈಯ್ಯಿಂದ ವಿಮೋಚಿಸುವುದು ಹೇಗೆ ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸುವ ಪರಿಸ್ಥಿತಿ ಉದ್ಭವಿಸಿದೆ. ಉತ್ತರಾರ್ಧಗೋಳದ ಅಮೆರಿಕದ ಆರಂಭಿಸಿ ದಕ್ಷಿಣಾರ್ಧಗೋಳದ ಭಾರತದ ತನಕ ಎಲ್ಲೆಡೆಗೂ ವ್ಯಾಪಿಸಿದ ‘ನೆಟ್ ನ್ಯೂಟ್ರಾಲಿಟಿ’ಯ ಚರ್ಚೆಯೇ ಇದಕ್ಕೊಂದು ಸಂಕೇತ. ತಂತ್ರಜ್ಞಾನದ ‘ಕ್ರಾಂತಿಕಾರಕ’ ಶಕ್ತಿಯ ಬಗೆಗಿನ ಅನುಮಾನ ಈ ಅವಧಿಯಲ್ಲಿಯೇ ಹೆಚ್ಚಿತು ಎಂಬುದು ಮತ್ತೊಂದು ಕುತೂಹಲಕರ ಸಂಗತಿ.

ವೆಬ್ 2.0 ತಂತ್ರಜ್ಞಾನ ಇಂಟರ್‌ನೆಟ್ ಎಂಬ ಮಾಧ್ಯಮದ ಸ್ವರೂಪವನ್ನು ಬದಲಾಯಿಸಿದ್ದು ನಿಜ. ಇದು ಸಂವಹನಕ್ಕೆ ಒಂದು ಬಹುಮುಖೀ ಆಯಾಮವನ್ನು ನೀಡಿತು. ಬ್ಲಾಗ್‌ಗಳು, ಸಾಮಾಜಿಕ ಜಾಲ ತಾಣಗಳು ಅಭಿವ್ಯಕ್ತಿಯ ಹೊಸ ಸಾಧ್ಯತೆಯನ್ನು ತೆರೆದಿಟ್ಟವು. ಈ ಅವಕಾಶವನ್ನು ಒದಗಿಸುವುದಕ್ಕಾಗಿ ವೇದಿಕೆಗಳನ್ನು ಸೃಷ್ಟಿಸಿದವರು ಇದನ್ನು ಮಾಡಿದ್ದು ಸಾಮಾಜಿಕ ಬದಲಾವಣೆಗೋ ಅಥವಾ ಪ್ರಜಾಪ್ರಭುತ್ವವನ್ನು ಹರಡುವುದಕ್ಕಾಗಿಯೋ ಅಲ್ಲ. ಅವರ ಗುರಿ ಇದ್ದದ್ದು ಒಂದು ವ್ಯಾಪಾರಿ ಸಾಧ್ಯತೆ. ಈ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿಯೂ ತಂತ್ರಜ್ಞಾನ ಬೆಳೆಯುತ್ತಾ ಹೋಯಿತು. ಪ್ರತಿಯೊಬ್ಬ ಬಳಕೆದಾರ ಏನನ್ನು ಓದುತ್ತಾನೆ. ಯಾವುದಕ್ಕೆ ಪ್ರತಿಕ್ರಿಯಿಸುತ್ತಾನೆ. ಯಾರೊಂದಿಗೆಲ್ಲಾ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ವೆಬ್ 2.0 ವೇದಿಕೆಗಳಾದ ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಹಾಗೂ ಇಂಥದ್ದೇ ಸೇವೆಗಳನ್ನು ಒದಗಿಸುವ ಎಲ್ಲಾ ಕಂಪೆನಿಗಳ ಮಟ್ಟಿಗೆ ಒಂದು ವ್ಯಾಪಾರಿ ಅನಿವಾರ್ಯತೆ.

ಈ ಅನಿವಾರ್ಯತೆಯನ್ನು ಬಳಕೆದಾರರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡದ್ದು ಪ್ರಭುತ್ವಗಳು. ನಿರ್ದಿಷ್ಟ ಹುಡುಕಾಟವೊಂದರ ಫಲಿತಾಂಶದವೊಂದರ ಪಕ್ಕದಲ್ಲಿ ಅದಕ್ಕೆ ಹೊಂದಿಕೊಳ್ಳುವ ಜಾಹೀರಾತುಗಳನ್ನು ನೀಡುವ ತಂತ್ರಜ್ಞಾನದಿಂದ ಏನೆಲ್ಲಾ ಸಾಧ್ಯವಾಗಬಹುದು ಎಂಬುದು ಪ್ರಭುತ್ವಕ್ಕೆ ಅರ್ಥವಾದಷ್ಟು ಬೇಗ ಬಳಕೆದಾರರಿಗೆ ಅರ್ಥವಾಗಲಿಲ್ಲ ಎಂಬುದು ವಾಸ್ತವ. ಜಗತ್ತು ಅರಬ್‌ ವಸಂತದ ಸಂಭ್ರಮದಲ್ಲಿರುವಾಗಲೇ ಯೆವ್ಗೆನಿ ಮೊರೊಜೊವ್ ಅವರಂಥ ಲೇಖಕರು ಈ ಅಂಶವನ್ನು ವಿವರಿಸಲು ಪ್ರಯತ್ನಿಸಿದ್ದರು. ಈ ಹೊತ್ತಿಗಾಗಲೇ ಪ್ರಭುತ್ವಗಳು ತಮ್ಮ ಪ್ರಜೆಗಳ ಮೇಲೆಯೇ ನಡೆಸುತ್ತಿರುವ ಗೂಢಚರ್ಯೆಯ ಕುರಿತ ಚರ್ಚೆಗಳೂ ಆರಂಭವಾಗಿದ್ದವು. ಒಂದು ದಶಕದ ಹಿಂದೆ ಇದ್ದ ಸರ್ವಾಧಿಕಾರಿ ಪ್ರಭುತ್ವಗಳು ಸಂವಹನದ ಮೇಲೆಯೇ ನಿಷೇಧ ಹೇರಿ ತಮ್ಮ ವಿರುದ್ಧದ ಕ್ರಾಂತಿಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ ವೆಬ್ 2.0 ಕಾಲದ ಸರ್ವಾಧಿಕಾರಿಗಳು ಸಂವಹನದ ಮೇಲೆ ನಿಗಾ ಇರಿಸುವ ಸಾಧ್ಯತೆಗಳನ್ನು ಹೆಚ್ಚು ಬಳಸಲು ತೀರ್ಮಾನಿಸಿದರು.

ಅರಬ್ ವಸಂತವೆಂಬ ಸಂಭ್ರಮ ಅರಬ್ ಮಾಗಿ ಎಂಬ ದುರಂತವಾಗಿ ಪರಿಣಮಿಸುವುದಕ್ಕೆ ಐದು ವರ್ಷವೂ ಬೇಕಾಗಿಲ್ಲ. ತೆಹ್ರೀರ್ ಚೌಕದಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡುವವರು ಬಳಸಿಕೊಂಡ ಅದೇ ಸಾಮಾಜಿಕ ಮಾಧ್ಯಮಗಳಲ್ಲಿಯೇ ಐಎಸ್ಐಎಸ್‌ನ ಸಂದೇಶಗಳೂ, ವಿಡಿಯೋಗಳೂ ಬಿತ್ತರವಾಗುತ್ತಿವೆ. ಚೈನಾದ ಉಕ್ಕಿನ ಗೋಡೆಯೊಳಕ್ಕೆ ಅಮೆರಿಕ ಮೂಲದ ಸಾಮಾಜಿಕ ಜಾಲ ತಾಣಗಳು ಪ್ರವೇಶ ಪಡೆಯಲಿಲ್ಲ ಎಂಬುದೇನೋ ನಿಜ. ಆದರೆ ಅಲ್ಲಿನ ಸರ್ಕಾರವೇನೂ ಸಾಮಾಜಿಕ ಜಾಲ ತಾಣಗಳನ್ನು ಜನರು ಬಳಸದಂತೆ ತಡೆಯಲಿಲ್ಲ. ಅದು ತನ್ನದೇ ಆದ ಸಾಮಾಜಿಕ ಜಾಲ ತಾಣಗಳನ್ನು ನಿರ್ಮಿಸಿ ಬಳಸುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅಲ್ಲಿನ ಸರ್ಕಾರ ತನ್ನ ಪ್ರಜೆಗಳ ಸಾಮಾಜಿಕ ಜಾಲ ತಾಣದ ಚಟುವಟಿಕೆಗಳನ್ನು ಗಮನಿಸುವುದಕ್ಕೆ ಹೀಗೆ ಮಾಡಿದೆ ಎಂದು ತಥಾಕಥಿತ ‘ಉದಾರವಾದಿ ವಿಶ್ವ’ ಹೇಳುತ್ತಿರುವಾಗಲೇ ಎಡ್ವರ್ಡ್ ಸ್ನೋಡೆನ್ ಬಯಲು ಮಾಡಿದ ಸತ್ಯಗಳು ಪಾಶ್ಚಾತ್ಯ ಅರ್ಥಾತ್ ಅಮೆರಿಕ ಮೂಲದ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ರಫ್ತುದಾರನಾದ ಅಮೆರಿಕ ಏನು ಮಾಡುತ್ತಿದೆ ಎಂಬುದನ್ನು ವಿವರಿಸಿದವು. ಚೀನಾದ ಪ್ರಭುತ್ವ ಏಕಾಧಿಪತ್ಯದ ಹೆಸರಿನಲ್ಲಿ ಮಾಡುತ್ತಿರುವುದನ್ನು ಅಮೆರಿಕ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಾಡುತ್ತಿತ್ತು. ಭಾರತದ ಪ್ರಭುತ್ವವೂ ‘ನೇತ್ರ’ದ ಹೆಸರಿನಲ್ಲಿ ತನ್ನ ಪ್ರಜೆಗಳನ್ನೂ ಹಾಗೆಯೇ ಗಮನಿಸುತ್ತಿದೆ.

ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಂಬಂಧದಲ್ಲಿ ಯಾವತ್ತೂ ಒಂದು ಬಗೆಯ ಅಸಮಾನತೆ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಹೀಗಾಗಬಾರದು ಎಂಬುದು ಆದರ್ಶ ಮಾತ್ರ. ಸರ್ವಾಧಿಕಾರಿ ಪ್ರಭುತ್ವಗಳು ತಮ್ಮ ಏಕಪಕ್ಷೀಯ ನಿರ್ದಾರಗಳ ಮೂಲಕ ಪ್ರಜೆಗಳ ಮೇಲೆ ನಿಗಾ ಇರಿಸುತ್ತದೆ. ಪ್ರಜಾಪ್ರಭುತ್ವ ಇರುವಲ್ಲಿ ಇದನ್ನು ಮಾಡುವುದಕ್ಕೆ ‘ರಾಷ್ಟ್ರೀಯ ಸುರಕ್ಷತೆ’ಯಂಥ ನೆಪಗಳನ್ನು ಬಳಸಲಾಗುತ್ತದೆ ಎಂಬುದಷ್ಟೇ ವ್ಯತ್ಯಾಸ. ಒಟ್ಟಿನಲ್ಲಿ ಪ್ರಭುತ್ವ ವ್ಯಕ್ತಿಯ ಖಾಸಗಿ ವೃತ್ತದೊಳಕ್ಕೆ ಪ್ರವೇಶ ಪಡೆಯುತ್ತದೆ ಎಂಬುದು ಮಾತ್ರ ನಿಜ. ಮಾಹಿತಿ ತಂತ್ರಜ್ಞಾನ ಕಾಲದ ಇನ್ನೂ ದೊಡ್ಡ ದುರಂತವೆಂದರೆ ಈ ಕೆಲಸವನ್ನು ಪ್ರಭುತ್ವ ನೇರವಾಗಿಯೂ ಮಾಡುವುದಿಲ್ಲ. ಈ ಕೆಲಸವನ್ನೂ ಅದು ‘ಹೊರ ಗುತ್ತಿಗೆ’ ನೀಡುತ್ತದೆ.

ಗೂಗಲ್ ಬಳಸಿ ನಡೆಸುವ ಹುಡುಕಾಟದ ಫಲಿತಾಂಶಗಳು ಇತ್ತೀಚೆಗೆ ವ್ಯಕ್ತಿ ನಿರ್ದಿಷ್ಟವಾಗಿರುತ್ತವೆ. ಅಂದರೆ ಹುಡುಕಾಟ ನಡೆಸುತ್ತಿರುವರು ಹಿಂದೆ ಏನನ್ನು ಹುಡುಕಿದ್ದರು. ಅವರ ಆಸಕ್ತಿಗಳೇನು ಎಂಬುದನ್ನೆಲ್ಲಾ ಅರಿತು ಅದು ಫಲಿತಾಂಶವನ್ನು ಕಂಪ್ಯೂಟರ್ ತೆರೆಯ ಮೇಲೆ ಮೂಡಿಸುತ್ತದೆ. ಹುಡುಕಾಟ ನಡೆಸುತ್ತಿರುವವರು ಯಾರೆಂಬುದನ್ನು ಅರಿಯುವುದಕ್ಕೆ ಅನೇಕ ತಂತ್ರಗಳನ್ನು ಬಳಸುತ್ತದೆ. ‘ಅಪ್‌ವರ್ದಿ’ ಅಂತರ್ಜಾಲ ಪತ್ರಿಕೆಯ ಸ್ಥಾಪಕ ಎಲಿ ಪಿಯರಿಸ್ಸರ್ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ‘ಟೆಡ್’ ಭಾಷಣದಲ್ಲಿ ಗೂಗಲ್ ಹುಡುಕಾಟ ಫಲಿತಾಂಶ ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದರು (https://goo.gl/382G3N). ಗೂಗಲ್ ಹೀಗೆ ಹುಡುಕಾಟದ ನಡೆಸುತ್ತಿರುವ ವ್ಯಕ್ತಿಯನ್ನು ಹೆಚ್ಚು ಕಡಿಮೆ ಸರಿಯಾಗಿಯೇ ಗುರುತಿಸುವ ತಂತ್ರಜ್ಞಾನ ಹೊಂದಿದೆ ಎಂದಾದರೆ ಜನರೇನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಪ್ರಭುತ್ವ ಮಾಡಬೇಕಾಗಿರುವುದು ಗೂಗಲ್ ಸಂಸ್ಥೆಯನ್ನು ಬಳಸಿಕೊಳ್ಳುವ ಕೆಲಸವನ್ನಷ್ಟೇ. ಅಮೆರಿಕ ಮೂಲದ ವೆಬ್ ಕಂಪೆನಿಗಳೆಲ್ಲವೂ ಎನ್‌ಎಸ್ಎಗೆ ಮಾಹಿತಿಯನ್ನು ಒದಗಿಸುತ್ತವೆ ಎಂಬುದನ್ನು ಎಡ್ವರ್ಡ್ ಸ್ನೋಡೆನ್ ಬಹಿರಂಗ ಪಡಿಸಿದ ವಿವರಗಳೂ ಹೇಳುತ್ತಿವೆ.

ಅಂದರೆ ನಾವೆಲ್ಲರೂ ಬಿಗ್ ಬಾಸ್ ಮನೆಯೊಂದರಲ್ಲಿ ಇದ್ದೇವೆಯೇ? ಈ ಪ್ರಶ್ನೆಗೆ ಹೌದು ಎಂದೇ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಹಾಗಿದ್ದರೆ ಬಿಗ್ ಬಾಸ್‌ನ ಕಣ್ಣು ತಪ್ಪಿಸಿ ಏನೂ ಮಾಡಲು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಭಿನ್ನ ಉತ್ತರಗಳು ಸಾಧ್ಯ. ಪ್ರಭುತ್ವದ ನಿಗಾ ಇರಿಸುವ ಪ್ರವೃತ್ತಿ ಹೆಚ್ಚುತ್ತಾ ಹೋದಂತೆ ಅದರ ಕಣ್ಣು ತಪ್ಪಿಸುವ ತಂತ್ರಗಳೂ ರೂಪುಗೊಳ್ಳುತ್ತವೆ. ಕಳೆದ ವರ್ಷ ಹಾಂಕ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಬಳಕೆಯಾದದ್ದು ‘ಫೈರ್‌ಚಾಟ್’ ಮೊಬೈಲ್ ಆ್ಯಪ್. ಇದನ್ನು ಬಳಸುವುದಕ್ಕೆ ಇಂಟರ್‌ನೆಟ್ ಬೇಕಾಗಿಲ್ಲ. ಅಷ್ಟೇಕೆ ಮೊಬೈಲ್ ನೆಟ್ ವರ್ಕ್ ಕೂಡಾ ಬೇಡ. ಇದು ಮೊಬೈಲ್ ಫೋನ್‌ಗಳ ಬ್ಲೂಟೂತ್ ಬಳಸಿಕೊಂಡು ಒಂದು ಜಾಲವನ್ನು ಸೃಷ್ಟಿಸುತ್ತದೆ. ಇದಕ್ಕೆ ಯಾವುದೇ ಸಂಸ್ಥೆಯ ಸೆಲ್ಯುಲಾರ್ ಸಿಗ್ನಲ್ ಅಗತ್ಯವಿಲ್ಲ. ಇದನ್ನು ಬಳಸುವ ಮೊಬೈಲ್‌ಗಳ ಬ್ಲೂಟೂತ್‌ ಮತ್ತು ವೈಫೈ ಸಾಮರ್ಥ್ಯದಲ್ಲಿಯೇ ಸಂದೇಶ ಪಯಣಿಸುತ್ತದೆ. ಟರ್ಕಿಯಲ್ಲಿ ಪ್ರಭುತ್ವದ ವಿರುದ್ಧದ ಹೋರಾಟಗಾರರು ಸ್ಮಾರ್ಟ್ ಫೋನ್ ಅನ್ನು ವಾಕಿ–ಟಾಕಿಯಾಗಿ ಬದಲಾಯಿಸುವ ಝೆಲ್ಲೋ ಆ್ಯಪ್ ಬಳಸಿದರು.

ಈ ಉದಾಹರಣೆಗಳು ಸ್ವತಂತ್ರ ಇಂಟರ್‌ನೆಟ್‌ನ ಭವಿಷ್ಯವನ್ನು ಸೂಚಿಸುತ್ತಿವೆ. ಪ್ರಭುತ್ವಗಳು ಪ್ರಜೆಗಳ ಮೇಲೆ ಹೆಚ್ಚು ಹೆಚ್ಚು ನಿಗಾ ಇರಿಸುತ್ತಾ ಹೋದಂತೆ ಪ್ರಭುತ್ವದ ಕಣ್ಣು ತಪ್ಪಿಸುವ ಹೊಸ ಹೊಸ ಮಾರ್ಗಗಳೂ ತೆರೆದುಕೊಳ್ಳುತ್ತವೆ. ಈ ಮಾರ್ಗಗಳು ಕೇವಲ ಬಹುರಾಷ್ಟ್ರೀಯ ಕಂಪೆನಿಗಳ ‘ಅತ್ಯುನ್ನತ ತಾಂತ್ರಿಕ’ ಪರಿಣತಿಯ ಉತ್ಪನ್ನಗಳೇ ಆಗಿರಬೇಕೆಂದೇನೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.