‘ಒಳ್ಳೆಯ ದಿನ ಬರುತ್ತದೆ ಎನ್ನುತ್ತಿದ್ದರು. ಅದು ಹೇಗೂ ಬರಲಿಲ್ಲ. ಈಗ ಒಳ್ಳೆಯ ರಾತ್ರಿಗಳನ್ನೂ ಇಲ್ಲವಾಗಿಸಿದರಲ್ಲ...’
‘ಬಿಜೆಪಿ ಸರ್ಕಾರ ಕಾಂಗ್ರೆಸ್ಸನ್ನು ಎಷ್ಟು ವಿರೋಧಿಸುತ್ತದೆ ಎಂದರೆ ‘ಕೈ’ಗೆ ಸಂಬಂಧಿಸಿದ್ದೆಲ್ಲವನ್ನೂ ಅದು ನಿಷೇಧಿಸಲು ಹೊರಟಿದೆ’
‘ಇನ್ನು ಆಲ್ಕೋಹಾಲ್ ಮತ್ತು ಹಂದಿ ಮಾಂಸವನ್ನು ನಿಷೇಧಿಸಿಬಿಟ್ಟರೆ ಭಾರತವೂ ಒಂದು ಶರೀಯಾ ಆಡಳಿತದ ದೇಶವಾಗಿಬಿಡುತ್ತದೆ’
‘ಪೋರ್ನೋಗ್ರಫಿಯನ್ನು ನೋಡಬಾರದವರು ನೋಡುತ್ತಾರೆ ಎಂಬ ಕಾರಣಕ್ಕೆ ನಿಷೇಧಿಸುವುದು ಆಕ್ಸಿಡೆಂಟ್ ಆಗುತ್ತದೆಂದು ವಾಹನಗಳನ್ನು ನಿಷೇಧಿಸಿದಂತೆ’
ಇವೆಲ್ಲಾ ಕಾಮಪ್ರಚೋದಕ ಸಾಹಿತ್ಯ, ಚಿತ್ರ ಮತ್ತು ವಿಡಿಯೊಗಳನ್ನು (ಪೋರ್ನೋಗ್ರಫಿ) ನಿಷೇಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಬಂದ ಪ್ರತಿಕ್ರಿಯೆಗಳ ಸಣ್ಣ ಝಲಕ್.
ಟ್ವಿಟ್ಟರ್, ಫೇಸ್‌ಬುಕ್, ವಾಟ್ಸ್ಆ್ಯಪ್‌ನಂತ ವೇದಿಕೆಗಳಲ್ಲಿ ಬಂದಿರುವ ಇಂಥ ಪ್ರತಿಕ್ರಿಯೆಗಳ ಪ್ರಮಾಣವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ರಾಮ್‌ಗೋಪಾಲ್ ವರ್ಮ, ಸೋನಂ ಕಪೂರ್, ಚೇತನ್ ಭಗತ್‌ರಂತಹ ಪ್ರಖ್ಯಾತರಿಂದ ಆರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಜ ಹೆಸರು ಮತ್ತು ಫೋಟೊಗಳೊಂದಿಗೇ ಗುರುತಿಸಿಕೊಳ್ಳುವ ಲಕ್ಷಾಂತರ ಮಂದಿ ಸರ್ಕಾರದ ‘ಕಾಮಪ್ರಚೋದಕ ತಾಣಗಳ ನಿಷೇಧ’ಕ್ಕೆ ಖಾರವಾಗಿ ಪ್ರತಿಕ್ರಿಯಿಸುತ್ತಲೇ ಇದ್ದಾರೆ.
ಕಾಮಪ್ರಚೋದಕ ಸಾಹಿತ್ಯ, ವಿಡಿಯೊ ಮತ್ತು ಚಿತ್ರಗಳಿರುವ 857 ಜಾಲತಾಣಗಳನ್ನು ಜನರು ನೋಡದಂತೆ ತಡೆಯಬೇಕು ಎಂದು ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜುಲೈ 31ರಂದು ಇಂಟರ್‌ನೆಟ್ ಸೇವಾದಾತ ಕಂಪೆನಿಗಳಿಗೆ ಆದೇಶಿಸಿತ್ತು. ಅವು ಸಹಜವಾಗಿಯೇ ಸರ್ಕಾರದ ಆದೇಶವನ್ನು ಪಾಲಿಸಿದವು.
ಅದರ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ವಿರೋಧಿಸುವ ಪ್ರತಿಕ್ರಿಯೆಗಳು ತುಂಬಿಕೊಂಡವು. ಆಗಸ್ಟ್ 4ರ ಮಧ್ಯಾಹ್ನದ ಹೊತ್ತಿಗೆ ಸರ್ಕಾರ ಸುಸ್ತಾಗಿತ್ತು. ಈ ಜಾಲತಾಣಗಳನ್ನು ಶಾಶ್ವತವಾಗಿ ನಿಷೇಧಿಸಿಲ್ಲ. ಮಕ್ಕಳನ್ನು ಬಳಸಿಕೊಂಡಿರುವ ಕಾಮಪ್ರಚೋದಕ ವಿಡಿಯೊ ಮತ್ತು ಚಿತ್ರಗಳನ್ನು ಪ್ರಕಟಿಸುವ ತಾಣಗಳ ನಿಯಂತ್ರಣಕ್ಕಾಗಿ ಹೀಗೆ ಮಾಡಲಾಗಿದೆ. ನಿಷೇಧವನ್ನು ಸಡಿಲಿಸಲಾಗುವುದು ಎಂದು ಸ್ಪಷ್ಟೀಕರಣವನ್ನೂ ನೀಡಬೇಕಾಯಿತು. ಮಾಹಿತಿ ತಂತ್ರಜ್ಞಾನ ಸಚಿವರಂತೂ ‘ತಾಲೀಬಾನೀಕರಣ’ ಎಂಬ ಕಟಕಿಯನ್ನು ಗಂಭೀರವಾಗಿ ಪರಿಗಣಿಸಿ, ‘ನಾವು ಹಾಗೆಲ್ಲಾ ಮಾಡುತ್ತಿಲ್ಲ’ ಎಂದು ವಿವರಿಸಲು ಪ್ರಯತ್ನಿಸಿದರು.
ಇಂಟರ್‌ನೆಟ್ ಭಾರತಕ್ಕೆ ಬರುವುದಕ್ಕೆ ಮುಂಚೆಯೂ ಪೋರ್ನೋಗ್ರಫಿ ಇತ್ತು. ವಿಡಿಯೊ ಕ್ಯಾಸೆಟ್, ಸಿ.ಡಿ. ಡಿವಿಡಿ ಹಾಗೂ ನಿಯತಕಾಲಿಕೆಗಳು ಮತ್ತು ಪುಸ್ತಕಗಳ ರೂಪದಲ್ಲಿ ಇದು ಚಲಾವಣೆಯಲ್ಲಿತ್ತು. ಇಂಥವುಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ, ಇಂಥವುಗಳನ್ನು ಪೂರೈಸುವ ಜಾಲದ ಮೇಲೆ ಪೊಲೀಸರು ದಾಳಿ ನಡೆಸುವುದು, ಬಂಧಿಸುವುದು, ಕೇಸು ದಾಖಲಿಸುವುದು ಎಲ್ಲವೂ ನಡೆಯುತ್ತಿತ್ತು.
ಆಗ ಯಾರೂ ಪೋರ್ನೋಗ್ರಫಿಯ ಬಳಕೆ ತಮ್ಮ ಹಕ್ಕು ಎಂಬಂತೆ ಪ್ರತಿಕ್ರಿಯಿಸಿದಂತೆ ಕಾಣಿಸುವುದಿಲ್ಲ. ಈಗ ಪೋರ್ನೋಗ್ರಫಿಯನ್ನು ಉಣಬಡಿಸುವ ಕೆಲವು ವೆಬ್‌ಸೈಟುಗಳನ್ನು ನಿಷೇಧಿಸಿದ್ದಕ್ಕೆ ಬಾಲಿವುಡ್ ಪ್ರಸಿದ್ಧರಿಂದ ಆರಂಭಿಸಿ ಸಾಮಾನ್ಯ ನೆಟಿಝನ್‌ಗಳ ತನಕದ ಎಲ್ಲರೂ ಪ್ರತಿಕ್ರಿಯಿಸಿದ್ದೇಕೆ?
ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ಭಾರತೀಯ ಸಮಾಜದಲ್ಲಿ ಸಂಭವಿಸಿರುವ ಸ್ಥಿತ್ಯಂತರ ಗೋಚರಿಸುತ್ತದೆ. ತೊಂಬತ್ತರ ದಶಕದ ಮಧ್ಯದವರೆಗೂ ಮಲಯಾಳಂ ಸಿನಿಮಾಗಳ ಕೇರಳದಾಚೆಗಿನ ಪ್ರಸಿದ್ಧಿ ‘ಕಾಮಪ್ರಚೋದಕ ದೃಶ್ಯ’ಗಳಿಗೆ ಸೀಮಿತವಾಗಿತ್ತು. ಈ ಬಗೆಯ ಚಿತ್ರಗಳನ್ನೇ ತಯಾರಿಸುವವರ ದಂಡೇ ಅಲ್ಲಿತ್ತು. ಇವುಗಳಲ್ಲಿ ನಟಿಸಿದ ನಾಯಕಿಯೊಬ್ಬಳು ಮುಖ್ಯವಾಹಿನಿಯ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದನ್ನು ಆಗ ಊಹಿಸಲೂ ಸಾಧ್ಯವಿರಲಿಲ್ಲ.
ಆದರೆ ಈಗ ‘ವಿಶ್ವವಿಖ್ಯಾತ’ ಪೋರ್ನ್ ತಾರೆ ಸನ್ನಿ ಲಿಯೋನ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿಯಾಗಿದೆ. ಇದಕ್ಕೂ ಮೊದಲೇ ‘ಕಿನ್ನಾರ ತುಂಬಿಗಳ್’ ತಾರೆ ಶಕೀಲಾ ಕೂಡಾ ಕನ್ನಡಕ್ಕೆ ಬಂದಾಗಿತ್ತು. ಜ್ಯೋತಿಲಕ್ಷ್ಮಿ, ಅನುರಾಧಾ, ಡಿಸ್ಕೊ ಶಾಂತಿ, ಸಿಲ್ಕ್ ಸ್ಮಿತಾ ಮುಂತಾದವರಷ್ಟೇ ನರ್ತಿಸುತ್ತಿದ್ದ ‘ಕ್ಯಾಬರೆ’ ದೃಶ್ಯಗಳು ಮರೆಯಾಗಿ ಅವುಗಳ ಸ್ಥಾನದಲ್ಲಿ ಬಂದ ‘ಐಟಂ ಸಾಂಗ್’ಗಳಲ್ಲಿ ಮುಖ್ಯವಾಹಿನಿ ನಾಯಕಿಯರೇ ಕಾಣಿಸಿಕೊಳ್ಳತೊಡಗಿದರು. ಈಗಲೂ ಅದು ಮುಂದುವರಿಯುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಸಂವಹನದ ಹೊಸ ಸಾಧ್ಯತೆಗಳಿಗೆ ತೆರೆಯುವ ಇಂಟರ್ನೆಟ್ ಬಂತು. ಮಾಹಿತಿ ಹೆದ್ದಾರಿಯಲ್ಲಿ ಭಾರತದೊಳಕ್ಕೆ ವಿದೇಶಿ ಪೋರ್ನೋಗ್ರಫಿಯೂ ಬಂತು. ಅಭಿವೃದ್ಧಿ ಹೊಂದಿದ ದೇಶಗಳೆಂದು ನಾವು ಕರೆಯುವ ಎಲ್ಲೆಡೆಯೂ ಮೊದಲೇ ಇಂಟರ್ನೆಟ್ ಇತ್ತು. ಅಲ್ಲೆಲ್ಲೂ ಪೋರ್ನೋಗ್ರಫಿ ಕಾನೂನು ಬಾಹಿರವಲ್ಲ. ಅದು ಭಾರತೀಯ ಇಂಟರ್ನೆಟ್ ಬಳಕೆದಾರನಿಗೂ ಲಭ್ಯವಾಯಿತು. ಗಲೀಜು ವಾತಾವರಣದ ವಿಡಿಯೊ ಪಾರ್ಲರುಗಳಲ್ಲಿ ಗುಟ್ಟಾಗಿ ನೋಡುತ್ತಿದ್ದ ವಿಡಿಯೊಗಳು ಮನೆಯಲ್ಲೂ ಕಚೇರಿಯಲ್ಲೂ ಇದ್ದ ಡೆಸ್ಕ್‌ಟಾಪ್‌ಗಳಲ್ಲಿ ನೋಡುವ ಅವಕಾಶ ಸೃಷ್ಟಿಯಾಯಿತು. ವೆಬ್ 2.0 ತಂತ್ರಜ್ಞಾನ, ವೆಬ್ ಕ್ಯಾಮರಾ, ಡಿಜಿಟಲ್ ವಿಡಿಯೊ ಇತ್ಯಾದಿಗಳು ಪೋರ್ನೋಗ್ರಫಿಯ ಬಳಕೆದಾರನೇ ಅದರ ಉತ್ಪಾದಕನೂ ಆಗುವ ಸಾಧ್ಯತೆಯೂ ತೆರೆದುಕೊಂಡಿತು.
ಇಂಟರ್ನೆಟ್ ಪೂರ್ವ ಯುಗದ ಪೋರ್ನೋಗ್ರಫಿಯನ್ನು ಇಂಟರ್ನೆಟ್ ನಂತರದ ಕಾಲದ ಪೋರ್ನೋಗ್ರಫಿಯೊಂದಿಗೆ ಹೋಲಿಸಲು ಸಾಧ್ಯವೇ ಇಲ್ಲ. ಆಗಲೂ ಈಗಲೂ ಪೋರ್ನೋಗ್ರಫಿಯನ್ನು ಸೃಷ್ಟಿಸುವ ಉದ್ಯಮವೊಂದಿದೆ ಎಂಬುದು ನಿಜ. ಆದರೆ ಈ ಕಾಲದ ಪೋರ್ನೋಗ್ರಫಿ ಉದ್ಯಮ ಪಡೆದುಕೊಂಡಿರುವ ಸ್ವರೂಪವೇ ಬೇರೆ.
ಇಂಟರ್ನೆಟ್‌ನಲ್ಲಿ ಬಳಕೆದಾರನೇ ಸೃಷ್ಟಿಸುವ ಉತ್ಪನ್ನಗಳನ್ನೇ ಆಧಾರವಾಗಿಟ್ಟುಕೊಂಡ ದೊಡ್ಡ ಉದ್ಯಮವೊಂದಿದೆ. ಇ–ಮೇಲ್, ಬ್ಲಾಗ್‌ಗಳಿಂದ ತೊಡಗಿ ಸಕಲ ಸಾಮಾಜಿಕ ಮಾಧ್ಯಮಗಳೂ ನಂಬಿರುವುದು ಬಳಕೆದಾರನ ಸಂವಹನೋತ್ಪನ್ನಗಳನ್ನು ಫೇಸ್‌ಬುಕ್‌ನಲ್ಲಿ ತಾನು ಬೆಳಿಗ್ಗೆ ತಿಂದದ್ದೇನು ಎಂಬಲ್ಲಿಂದ ತೊಡಗಿ ರಾತ್ರಿ ಮಲಗುವ ತನಕ ಏನೇನು ಮಾಡಿದೆ ಎಂಬುದನ್ನು ಬರೆದುಕೊಳ್ಳುವವರು ಇದ್ದಂತೆಯೇ ತಮ್ಮ ಲೈಂಗಿಕಾಸಕ್ತಿಗಳನ್ನೂ ಸಾಹಸಗಳನ್ನೂ ಹಂಚಿಕೊಳ್ಳುವ ಆಸೆಯುಳ್ಳವರೂ ಇದ್ದಾರೆಂಬುದನ್ನು ಉದ್ಯಮ ಗಮನಿಸಿತು. ಅದಕ್ಕೆ ವೇದಿಕೆಗಳೂ ಸೃಷ್ಟಿಯಾದವು.
ಇಂದು ಪೋರ್ನೋಗ್ರಫಿಯ ಬಹುದೊಡ್ಡ ಪಾಲು ಉತ್ಪಾದನೆಯಾಗುವುದು ಇಂಥ ವೇದಿಕೆಗಳಲ್ಲೇ. ಕ್ಯಾಮೆರಾ ಎಂಬುದು ಈಗ ಬಹುದೊಡ್ಡ ಖರ್ಚಿನ ಬಾಬತ್ತಲ್ಲ. ಸಾಮಾನ್ಯ ಮೊಬೈಲ್ ಫೋನ್‌ನಿಂದ ಲೇಖನಿಯ ತನಕದ ವಸ್ತುಗಳ ಭಾಗವಾಗಿಯೇ ಇದು ದೊರೆಯುತ್ತದೆ. ಇಷ್ಟಕ್ಕೂ ಬಳಕೆದಾರರೇ ಸೃಷ್ಟಿಸುವ ಪೋರ್ನ್ ವಿಡಿಯೊಗಳಲ್ಲಿ ರಹಸ್ಯಾತ್ಮಕವಾದುದೇನೂ ಇರುವುದಿಲ್ಲ. ಬಹಿರಂಗವಾಗಿಯೇ ಇದು ನಮ್ಮ ಸಾಹಸ ಎಂದು ಹೇಳಿಕೊಳ್ಳುವವರ ಪಾಲೇ ದೊಡ್ಡದು.
ಈ ಎಲ್ಲಾ ಬೆಳವಣಿಗೆಗಳಾದ ಮೇಲೂ ಪೋರ್ನೋಗ್ರಫಿಯ ಕುರಿತ ನೈತಿಕ ವ್ಯಾಖ್ಯೆ ಎಂಬುದು 25 ವರ್ಷಗಳ ಹಿಂದೆ ಇದ್ದಂತೆ ಈಗಲೂ ಇರಬೇಕೆಂದುಕೊಳ್ಳುವುದು ಹೇಗೆ? ಈ ಪ್ರಶ್ನೆಯ ಜೊತೆಗೇ ಪೋರ್ನೋಗ್ರಫಿ ನಿಯಂತ್ರಣವನ್ನು ಚರ್ಚಿಸಬೇಕಾದ ಅನಿವಾರ್ಯತೆ ನಮ್ಮೆದುರು ಇದೆ. ಸಂಪೂರ್ಣ ಪಾನ ನಿಷೇಧವಿರುವ ನಮ್ಮದೇ ಗುಜರಾತ್‌ನಿಂದ ಶರೀಯಾ ಕಾನೂನು ಇರುವ ಸೌದಿ ಅರೇಬಿಯಾದ ತನಕ ಎಲ್ಲಿಗೇ ಹೋದರೂ ಮದ್ಯ ದೊರೆಯುತ್ತದೆ. ಇದು ನಿಜ ಜಗತ್ತಿನ ಸಮಾಚಾರ. ಇಂಟರ್ನೆಟ್ ಎಂಬ ವರ್ಚುವಲ್ ಜಗತ್ತಿನಲ್ಲಿ ಇದು ಮತ್ತಷ್ಟು ಸಂಕೀರ್ಣವಾಗಿಬಿಡುತ್ತದೆ.
ಇಂಟರ್ನೆಟ್‌ನಲ್ಲಿ ಲಭ್ಯವಿರುವ ಪೋರ್ನೋಗ್ರಫಿಯನ್ನು ತಡೆಯುವುದಕ್ಕೆಂದು ಸರ್ಕಾರ ಫಿಲ್ಟರುಗಳನ್ನು ಸ್ಥಾಪಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆಯೇ? ತಂತ್ರಜ್ಞಾನದ ಸಾಧ್ಯತೆಗಳನ್ನು ಬಲ್ಲವರಿಗೆಲ್ಲಾ ಇದು ಅಸಾಧ್ಯ ಎಂಬುದು ತಿಳಿದಿದೆ. ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಎಂಬ ವ್ಯವಸ್ಥೆಯ ಮೂಲಕ ಈ ನಿಷೇಧಿತ ತಾಣಗಳನ್ನೆಲ್ಲಾ ನೋಡಲು ಸಾಧ್ಯ. ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದಂತೆ ನೋಡಿಕೊಳ್ಳಲಂತೂ ಸಾಧ್ಯವಿಲ್ಲ. ಇಷ್ಟಕ್ಕೂ ಇದನ್ನು ಬಳಸುವುದು ಯಾವುದೇ ಕಾನೂನಿನ ಪ್ರಕಾರ ಅಪರಾಧವಲ್ಲ. ಗೂಗಲ್‌ನಂತಹ ಸಂಸ್ಥೆಗಳು ಒದಗಿಸುವ ಪಬ್ಲಿಕ್ ಡಿಎನ್‌ಎಸ್ ಬಳಸುವುದನ್ನು ತಡೆಯಲೂ ಸಾಧ್ಯವಿಲ್ಲ. ಅಂದರೆ ನಿಷೇಧ ಎಂಬುದು ಇಂಟರ್ನೆಟ್ ಕಾಲದಲ್ಲಿ ಒಂದು ಹಾಸ್ಯಾಸ್ಪದ ವಿಚಾರ.
ಇಷ್ಟಕ್ಕೂ ಸರ್ಕಾರ ಸ್ಥಾಪಿಸುವ ಫಿಲ್ಟರ್‌ಗಳು ಶೋಧಿಸುವುದು ಕೇವಲ ಪೋರ್ನೋಗ್ರಫಿಯನ್ನೇ ಎಂಬ ಮತ್ತೊಂದು ಪ್ರಶ್ನೆಯೂ ಇಲ್ಲಿದೆ. ಇಂಥದ್ದೊಂದು ಶೋಧನಾಕ್ರಿಯೆಗೆ ಒಮ್ಮೆ ಕಾನೂನು ಸಮ್ಮತಿ ದೊರೆತರೆ ಅದು ಏನನ್ನು ತಡೆಯಲು ಹೊರಡಬಹುದು ಎಂಬುದು ಮತ್ತೊಂದು ಸಮಸ್ಯೆ.
ಸದ್ಯ 857 ವೆಬ್‌ಸೈಟುಗಳನ್ನು ನಿಷೇಧಿಸಲು ಅದು ಬಳಸಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆಯ 79(3)(ಬಿ) ಕಲಂ ಅನ್ನು. ಇದನ್ನು ಸಂವಿಧಾನದ 19ನೇ ಪರಿಚ್ಛೇದದ 2ನೇ ಕಲಂನ ಪ್ರಕಾರ ನೈತಿಕತೆ ಮತ್ತು ಗೌರವಕ್ಕೆ ಧಕ್ಕೆ ತರುವಂಥದ್ದನ್ನು ಮಾಡಿದಾಗ ಮಾತ್ರ ಬಳಸಬಹುದು. ಆದರೆ ನೈತಿಕತೆ ಮತ್ತು ಗೌರವಕ್ಕೆ ಧಕ್ಕೆ ಎಂಬುದು ನಿರ್ದಿಷ್ಟ ವ್ಯಕ್ತಿಯ ಸಂದರ್ಭದಲ್ಲಿ ಸ್ಪಷ್ಟವಾಗಿರುತ್ತದೆಯೇ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಅಲ್ಲ. ಇಂಥ ಅಸ್ಪಷ್ಟತೆಗಳಿಂದಾಗಿ ಸರ್ಕಾರ ತನಗೆ ವಿರುದ್ಧವಾದ ಎಲ್ಲವನ್ನೂ ನಿಷೇಧಿಸುವುದಕ್ಕೆ ಈ ಕಾನೂನನ್ನು ಬಳಸಿಕೊಳ್ಳಬಹುದು. ಪೋರ್ನೋಗ್ರಫಿಯ ನಿಷೇಧ ಹುಟ್ಟುಹಾಕುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಇದು.
ಸದ್ಯ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ ಒಂದಂಶವಂತೂ ಸ್ಪಷ್ಟ. ಯಾರೂ ಅನಿಯಂತ್ರಿತ ಪೋರ್ನೋಗ್ರಫಿ ಬೇಕೆಂದು ವಾದಿಸುತ್ತಿಲ್ಲ. ಈಗ ಪ್ರಶ್ನೆಗೆ ಒಳಗಾಗುತ್ತಿರುವುದು ನಿಯಂತ್ರಣದ ಸ್ವರೂಪ. ಸರ್ಕಾರವೂ ಇದನ್ನು ಅರಿತು ಮುಂದುವರಿಯಬೇಕು.
ಪೋರ್ನೋಗ್ರಫಿ ಅಧಿಕೃತವಾಗಿರುವ ದೇಶಗಳಲ್ಲಿಯೂ ಮಕ್ಕಳನ್ನು ಬಳಸಿಕೊಳ್ಳುವ ಪೋರ್ನೋಗ್ರಫಿಯ ವಿರುದ್ಧ ಕಠಿಣ ಕಾನೂನುಗಳಿವೆ. ಅಂಥದ್ದನ್ನು ಭಾರತವೂ ಜಾರಿಗೆ ತರಬೇಕು. ಯಾರೋ ಕಾಮಪ್ರಚೋದಕ ವೆಬ್‌ಸೈಟುಗಳ ಪಟ್ಟಿಕೊಟ್ಟರೆಂದು ಅವನ್ನೆಲ್ಲಾ ನಿಷೇಧಿಸಲು ಹೊರಟರೆ ಅದನ್ನು ಮರುಮಾತನಾಡದೆ ಒಪ್ಪಿಕೊಳ್ಳುವಂಥ ಲೈಂಗಿಕತೆಯ ಕುರಿತ ಮಡಿವಂತಿಕೆ ಈಗ ಇಲ್ಲ ಎಂಬುದನ್ನೂ ಸರ್ಕಾರ ಅರಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.