ADVERTISEMENT

ಪೌರರ ಅಸ್ಮಿತೆಯನ್ನು ತಂತ್ರಜ್ಞಾನಕ್ಕೆ ಒತ್ತೆಯಿಟ್ಟರೆ?

ಎ.ಎನ್‌ ಎಮ ಇಸ್ಮಾಯಿಲ್
Published 8 ಅಕ್ಟೋಬರ್ 2018, 20:29 IST
Last Updated 8 ಅಕ್ಟೋಬರ್ 2018, 20:29 IST
   

‘ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಪರ್ಕಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದು ಕೇವಲ ನಿಯಮಗಳಲ್ಲಿರುವ ಗೊಂದಲ ಕಾರಣಕ್ಕಾಗಿ. ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದರೆ ಆಧಾರ್ ಜೋಡಣೆಯನ್ನು ಮುಂದುವರಿಸಬಹುದು’. ಇದು ‘ಹಿಂದುಸ್ತಾನ್ ಟೈಮ್ಸ್‌’ ನಾಯಕತ್ವ ಶೃಂಗ’ದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ ಮಾತುಗಳು.ಕಳೆದ ತಿಂಗಳ ಕೊನೆಯ ವಾರದಲ್ಲಿ ಆಧಾರ್‌ನ ಸಾಂವಿಧಾನಿಕತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಸರ್ಕಾರ ಗ್ರಹಿಸುತ್ತಿರುವ ಬಗೆ ಇದು. ಈ ಕಾರಣದಿಂದಾಗಿಯೇ ಆಧಾರ್‌ ವಿಚಾರದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ಭಿನ್ನಮತದ ತೀರ್ಪುಬಹಮುಖ್ಯವಾಗುತ್ತದೆ.

ಸುಪ್ರೀಂ ಕೋರ್ಟ್‌ನ ಬಹುಮತದ ಈ ತೀರ್ಪು ಆಧಾರ್ ಬಳಕೆಗೆ ಕೆಲವು ಮಿತಿಗಳನ್ನು ಹೇರಿದೆ. ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಅಮಾನ್ಯ ಮಾಡಿ ಖಾಸಗಿಯವರು ಗುರುತು ಪರಿಶೀಲನೆಗಾಗಿ ಆಧಾರ್ ಬಳಸುವುದಕ್ಕೆ ತಡೆಯೊಡ್ಡಿದೆ. ಆದರೆ ಸರ್ಕಾರ ಅದನ್ನು ಅರ್ಥ ಮಾಡಿಕೊಳ್ಳುತ್ತಿರುವ ರೀತಿಯೇ ಭಿನ್ನ. ಅದರ ಮಟ್ಟಿಗೆ ಇದು ನಿಯಮಾವಳಿಗಳ ಗೊಂದಲ ಮಾತ್ರ. ಅಗತ್ಯಕ್ಕಿಂತ ಹೆಚ್ಚಾಗಿ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ವ್ಯಕ್ತಿಯ ಖಾಸಗಿತನದ ಮೇಲಿನ ದಾಳಿ ಎಂದು ಅದಕ್ಕೆ ಅನ್ನಿಸುತ್ತಿಲ್ಲ. ಆಧಾರ್ ಕುರಿತ ಬಹುಮತದ ತೀರ್ಪಿನಲ್ಲಿ ಹೇಳಿರುವ ಖಾಸಗಿ ಮಾಹಿತಿ ಸಂರಕ್ಷಣೆಯ ಕುರಿತಂತೆ ಹೇಳಿರುವ ಮಾತುಗಳೂ ಸರ್ಕಾರಕ್ಕೆ ಮುಖ್ಯವಲ್ಲ.

ಆಧಾರ್ ಕಾಯ್ದೆಯನ್ನು ಸರ್ಕಾರ ಒಂದು ಹಣಕಾಸು ಮಸೂದೆಯ ಸ್ವರೂಪದಲ್ಲಿ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಿತು. ಈ ತಂತ್ರವನ್ನು ಬಳಸುವುದಕ್ಕೆ ಮುಖ್ಯ ಕಾರಣ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಮಸೂದೆಯೊಂದಕ್ಕೆ ಒಪ್ಪಿಗೆ ಪಡೆಯುವಷ್ಟು ಸಂಖ್ಯೆ ಇಲ್ಲದೇ ಇದ್ದದ್ದು. ಇದನ್ನು ಭಿನ್ನಮತದ ತೀರ್ಪನ್ನು ಬರೆದ ಚಂದ್ರಚೂಡ್ ಅವರು ‘ಆಧಾರ್ ಕಾಯ್ದೆ ಎಂಬುದು ಸಂವಿಧಾನಕ್ಕೆ ಮಾಡಿದ ಮೋಸ’ ಎಂದು ಹೇಳಿದ್ದಾರೆ.

ADVERTISEMENT

ಬಹುಮತದ ತೀರ್ಪು ಆಧಾರ್‌ ಕಾಯ್ದೆಗೆ ಸಾಂವಿಧಾನಿಕ ಮಾನ್ಯತೆ ಇದೆ ಎಂದ ಮಾತ್ರಕ್ಕೆ ಖಾಸಗಿ ಮಾಹಿತಿಯ ಸಂರಕ್ಷಣೆಯೇನೂ ಗೌಣವಾಗಿಲ್ಲ. ಇನ್ನೂ ರೂಪುಗೊಳ್ಳದ ಖಾಸಗಿ ಮಾಹಿತಿ ಸಂರಕ್ಷಣೆ ಮತ್ತು ದತ್ತಾಂಶ ಸಂರಕ್ಷಣಾ ಕಾಯ್ದೆಯ ಮಹತ್ವವೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಆಲೋಚಿಸಿದಾಗ ಭಿನ್ನಮತೀಯ ತೀರ್ಪಿನ ಪ್ರಾಮುಖ್ಯವೆಷ್ಟು ಎಂಬುದು ತಿಳಿಯುತ್ತದೆ. ಹಾಗಾಗಿಯೇ ತೀರ್ಪನ್ನು ವಿಶ್ಲೇಷಿಸಿರುವ ಸುಪ್ರೀಂ ಕೋರ್ಟ್‌ನ ವಕೀಲರಾದ ಸಂಜಯ್ ಹೆಗಡೆ ಮತ್ತು ಪ್ರಾಂಜಲ್ ಕಿಶೋರ್ ‘ಭಿನ್ನಮತೀಯ ತೀರ್ಪು ಬಹುಮತದ ತೀರ್ಪಿಗಿಂತ ಹೆಚ್ಚುಕಾಲ ಪ್ರಸ್ತುತವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದರ್ಥದಲ್ಲಿ ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ದೊರೆತ ನಂತರದ ಕಾಲಘಟ್ಟದಲ್ಲಿ ಆಧಾರ್ ಅಸ್ತಿತ್ವವನ್ನು ವ್ಯಾಖ್ಯಾನಿಸುವುದಕ್ಕೆ ಭಿನ್ನಮತೀಯ ತೀರ್ಪು ನಮಗೆ ದಿಕ್ಸೂಚಿಯಾಗಬೇಕಿದೆ.

ಬಹುಮತದ ತೀರ್ಪಿನ ಹಿಂದಿನ ತರ್ಕ ಸರಳವಾಗಿದೆ. ಮೊದಲನೆಯದ್ದು ‘ಬಹುಜನ ಹಿತಾಯ’ ಎಂಬ ತತ್ವ. ಆಧಾರ್ ವ್ಯವಸ್ಥೆ ಹೆಚ್ಚಿನವರಿಗೆ ಒಳಿತನ್ನು ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಹಾಯ ಮಾಡುತ್ತಿದೆ ಎಂಬ ನಿಲುವು ಈ ತರ್ಕದ ಹಿಂದಿದೆ. ಎರಡನೆಯದ್ದು ‘ಅಪವಾದಗಳನ್ನು ಸಾಮಾನ್ಯೀಕರಿಸಬಾರದು’ ಎಂಬ ತತ್ವ. ಆಧಾರ್ ದತ್ತಾಂಶ ಸೋರಿಕೆಯಿಂದ ಆರಂಭಿಸಿ ವ್ಯಕ್ತಿ ವಿಶಿಷ್ಟತೆಯನ್ನು (De-duplication) ಕಣ್ಣಿನ ಪಾಪೆ ಮತ್ತು ಬೆರಳಚ್ಚಿನ ಮೂಲಕ ಗುರುತಿಸುವ ತಂತ್ರಜ್ಞಾನದ ಮಿತಿಯೂ ಸೇರಿದಂತೆ ಹಲವು ಸಂಗತಿಗಳನ್ನು ‘ಅಪವಾದ’ಗಳಾಗಿ ಮಾತ್ರ ಪರಿಗಣಿಸಲಾಗಿದೆ. ಇವರೆಡರ ಆಚೆಗೆ ಕೆಲಸ ಮಾಡಿರುವ ಮತ್ತೊಂದು ಸಂಗತಿಯೆಂದರೆ ಬಹುತೇಕ ದೇಶದ ಎಲ್ಲಾ ನಾಗರಿಕರೂ ಆಧಾರ್‌ಗೆ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಗಾಗಿ ಬಹಳಷ್ಟು ವೆಚ್ಚವಾಗಿದೆ ಎಂಬುದು.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕಾಗುತ್ತದೆ. ದೇಶದ ಬಹುತೇಕರು ಆಧಾರ್‌ ನೋಂದಣಿ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಯೊಂದನ್ನು ಸೃಷ್ಟಿಸಲಾಗಿತ್ತು. ನ್ಯಾಯಾಲಯದಲ್ಲಿ ಆಧಾರ್ ವಿರುದ್ಧ ಹಲವು ಮೊಕದ್ದಮೆಗಳು ದಾಖಲಾಗಿದ್ದರೂ ನೋಂದಣಿಯನ್ನು ತಡೆಯಲು ನ್ಯಾಯಾಲಯ ಮುಂದಾಗಲಿಲ್ಲ. ಮಧ್ಯಂತರ ಆದೇಶದಲ್ಲಿ ‘ಆಧಾರ್‌ಗಾಗಿ ಒತ್ತಾಯಿಸಬಾರದು’ ಎಂದು ನ್ಯಾಯಾಲಯ ಹೇಳಿದ್ದರೂ ಸರ್ಕಾರ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸುತ್ತಲೇ ಹೋಯಿತು. ಇದನ್ನೂ ನ್ಯಾಯಾಲಯ ತಡೆಯಲಿಲ್ಲ. ಆಧಾರ್ ಕುರಿತ ಮೊಕದ್ದಮೆಗಳ ವಿಚಾರಣೆಗಳು ನಡೆಯುತ್ತಿರುವಾಗಲೇ ‘ಆಧಾರ್ ಅನಿವಾರ್ಯ’ ಎಂಬಂಥ ಸ್ಥಿತಿ ಸೃಷ್ಟಿಯಾಗುತ್ತಲೇ ಹೋಯಿತು.

‘ಆಧಾರ್’ನ ಭವಿಷ್ಯ ಜನಸಾಮಾನ್ಯರ ಮಟ್ಟಿಗೂ ಸುರಕ್ಷಿತವಾಗಿರುವಂತೆ ಮಾಡುವುದಕ್ಕೆ ಮುಖ್ಯವಾಗಿ ಬೇಕಿರುವುದು ಖಾಸಗಿ ಮಾಹಿತಿಯ ಸಂರಕ್ಷಣೆ ಮತ್ತು ಪ್ರಭುತ್ವದ ಅನಗತ್ಯ ನಿಗಾವಣೆಯನ್ನು ತಡೆಯುವುದಕ್ಕೆ ಬೇಕಿರುವ ಕಾಯ್ದೆಗಳು. ಈ ಅಗತ್ಯವನ್ನು ಬಹುಮತದ ತೀರ್ಪೂ ಸ್ಪಷ್ಟವಾಗಿ ಹೇಳಿದೆ. ಆದರೆ ಇದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಬೇಕಿರುವ ಎಲ್ಲಾ ಹೊಳಹುಗಳಿರುವುದು ಚಂದ್ರಚೂಡ್ ಅವರ ಭಿನ್ನಮತದ ತೀರ್ಪಿನಲ್ಲಿ.

ಆಧಾರ್ ಸಂಖ್ಯೆಯನ್ನು ಸೃಷ್ಟಿಸುವಲ್ಲಿ ಬಳಕೆಯಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗೆ ಸಂಬಂಧಿಸಿದ ಸರ್ಕಾರದ ನಿಲುವು ಸಂಪೂರ್ಣವಾಗಿ ತಂತ್ರಜ್ಞಾನಾಧಾರಿತವಾದದ್ದು. ಇದನ್ನು ತಂತ್ರಜ್ಞಾನ ವಿಧಿವಾದ ಅಥವಾ Technological determinism ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನದ ಮೂಲಕ ನಡೆಯುವುದೆಲ್ಲವೂ ಸುರಕ್ಷಿತ ಮತ್ತು ಇದೊಂದೇ ನಾವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಎಂಬ ನಿಲುವಿದು. ಚಂದ್ರಚೂಡ್ ಅವರ ತೀರ್ಪು ಈ ನಿಲುವನ್ನೇ ಪ್ರಶ್ನಿಸುತ್ತಿದೆ.

ಆಧಾರ್ ನೋಂದಣಿಯಲ್ಲಿ ವ್ಯಕ್ತಿ ವಿಶಿಷ್ಟತೆಯನ್ನು ಗುರುತಿಸುವುದಕ್ಕೆ ಎರಡು ತಂತ್ರಗಳನ್ನು ಬಳಸಲಾಗುತ್ತದೆ. ಮೊದಲನೆಯದ್ದು ಬೆರಳಚ್ಚು. ಎರಡನೆಯದ್ದು ಕಣ್ಣಿನ ಪಾಪೆ. ವ್ಯಕ್ತಿಗಳ ಗುರುತನ್ನು ಸಾಬೀತು ಪಡಿಸುವುದಕ್ಕೆ ಇವುಗಳಷ್ಟೇ ಸಾಕಾಗದು ಎಂದು ಈಗ ಸರ್ಕಾರವೇ ಒಪ್ಪಿಕೊಂಡಿದೆ. ಮೂರನೆಯದಾಗಿ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳುತ್ತಿದೆ. ವ್ಯಕ್ತಿ ವಿಶಿಷ್ಟತೆಯನ್ನು ದಾಖಲಿಸಿಕೊಳ್ಳುವುದಕ್ಕೆ ವಿಶಿಷ್ಟ ಗುರುತು ಪ್ರಾಧಿಕಾರ ಬಳಸುವುದು ವಿದೇಶಿ ತಂತ್ರಜ್ಞಾನವನ್ನು. ಇದನ್ನು ಬಳಸುವುದಕ್ಕಾಗಿ ಲೈಸೆನ್ಸ್ ಪಡೆಯಲಾಗಿದೆ. ಅಂದರೆ ತಂತ್ರಜ್ಞಾನದ ಮಾಲೀಕತ್ವ ಅದನ್ನು ಒದಗಿಸಿರುವ ವಿದೇಶಿ ಕಂಪನಿಗೇ ಇದೆಯೇ ಹೊರತು ವಿಶಿಷ್ಟ ಗುರುತು ಪ್ರಾಧಿಕಾರಕ್ಕಲ್ಲ. ಈ ವಿರೋಧಾಭಾಸವನ್ನು ಚಂದ್ರಚೂಡ್ ಅವರು ಪ್ರಶ್ನಿಸಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಅನ್ನು ಬಳಸುವುದರ ಮೂಲಕ ಅದನ್ನು ನಿಜವಾದ ಅರ್ಹರಿಗೆ ಪರಿಣಾಮಕಾರಿಯಾಗಿ ತಲುಪಿಸಬಹುದು ಎಂಬ ಸರ್ಕಾರದ ವಾದವನ್ನೂ ಭಿನ್ನಮತೀಯ ತೀರ್ಪು ವಿಮರ್ಶಿಸುತ್ತದೆ. ಮಲ ಹೊರುವ ವೃತ್ತಿಯಲ್ಲಿರುವವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಾಗಿ ಅವರ ಆಧಾರ್ ಸಂಖ್ಯೆಯನ್ನು ಬಳಸಿದರೆ ಏನಾಗಬಹುದು? ಸರ್ಕಾರದ ಮಟ್ಟಿಗೆ ಇದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮಾರ್ಗವಾಗಿರಬಹುದು. ಆದರೆ ದತ್ತ ಸಂಚಯವೊಂದರಲ್ಲಿ ಒಬ್ಬಾತ ಅಥವಾ ಒಬ್ಬಾಕೆ ಮಲ ಹೊರುವ ವೃತ್ತಿಯಲ್ಲಿದ್ದದ್ದು ಶಾಶ್ವತವಾಗಿ ದಾಖಲಾಗುತ್ತದೆ. ಅಷ್ಟೇ ಅಲ್ಲ, ಆ ವೃತ್ತಿಯಿಂದಾಗಿ ಅವರಿಗೆ ಅಂಟಿಕೊಳ್ಳುವ ಕಳಂಕ ಶಾಶ್ವತವಾಗಿ ಉಳಿದುಹೋಗುತ್ತದೆ. ಇನ್ನು ಪ್ರತಿಯೊಂದಕ್ಕೂ ಆಧಾರ್ ಜೋಡಿಸಬೇಕೆಂಬ ನಿಯಮವನ್ನು ಚಂದ್ರಚೂಡ್ ಕಟುವಾಗಿ ವಿಮರ್ಶಿಸಿದ್ದಾರೆ. ಒಬ್ಬೊಬ್ಬರ ವಿವರಗಳನ್ನೂ ಹೀಗೆ ಸಂಗ್ರಹಿಸುತ್ತಾ ಹೋಗುವುದು ಅವರ ಚುನಾವಣಾ ಆಯ್ಕೆಗಳ ಮೇಲೆಯೂ ಪರಿಣಾಮ ಬೀರುವ ಮಟ್ಟಕ್ಕೆ ಹೋಗಬಹುದು ಎಂದವರು ಸಂಶಯ ವ್ಯಕ್ತಪಡಿಸಿದ್ದಾರೆ.

ಆಧಾರ್ ಯೋಜನೆಯ ಹಿಂದಿನ ಮುಖ್ಯ ಉದ್ದೇಶವೇ ವ್ಯಕ್ತಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು. ಇದಕ್ಕೆ ಸಂಬಂಧಿಸಿದಂತೆ ಚಂದ್ರಚೂಡ್ ಅವರ ತೀರ್ಪಿನಲ್ಲಿರುವ ಅಂಶ ಆಧಾರ್‌ ಅನ್ನು ಮುಂದಿನ ದಿನಗಳಲ್ಲಿ ಹೇಗೆ ಬಳಸಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಬೇಕಿದೆ. ‘ಸಂವಿಧಾನವು ವ್ಯಕ್ತಿಯ ಅಸ್ಮಿತೆಯನ್ನು ಅದರ ಬಹುರೂಪಗಳಲ್ಲಿ ಮಾನ್ಯ ಮಾಡುತ್ತದೆ. ಆದರೆ ವಿಶಿಷ್ಟ ಗುರುತು ಸಂಖ್ಯೆ ಎಂಬುದು ಇದನ್ನು 12 ಅಂಕೆಗಳ ಸಂಖ್ಯೆಯಾಗಿ ಕೇವಲ ಒಂದು ಸಂಭವನೀಯತೆಯಾಗಿಸುತ್ತಿದೆ. ಅಷ್ಟೇ ಅಲ್ಲ, ಇದನ್ನು ಖಾತರಿಪಡಿಸುವ ಕೆಲಸವನ್ನು ಒಂದು ಅಲ್ಗಾರಿದಮ್‌ಗೆ ಒಪ್ಪಿಸಿಬಿಡುತ್ತದೆ. ವ್ಯಕ್ತಿಯ ಗುರುತು ಎಂಬುದು ತಾಂತ್ರಿಕ ಪರಿಕರವೊಂದರ ನಿರ್ಧಾರಕ್ಕೆ ಬಿಡುವ ವಿಚಾರವಲ್ಲ’ ಎಂಬ ಸಾಲುಗಳು ಆಧಾರ್ ಬಳಕೆಯ ಗಡಿಗಳನ್ನು ಗುರುತಿಸುವುದಕ್ಕೆ ನಿಜಕ್ಕೂ ಮಾರ್ಗದರ್ಶಿ.ಬಹುಮತದ ತೀರ್ಪು ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆಯಿದೆ ಎನ್ನುತ್ತಲೇ ಅದರ ಮಿತಿಗಳನ್ನೂ ಗುರುತಿಸಿದೆ. ಈ ಮಿತಿಗಳನ್ನು ಅರ್ಥ ಮಾಡಿಕೊಳ್ಳಲು ಭಿನ್ನಮತದ ತೀರ್ಪು ದಿಕ್ಸೂಚಿ ಎಂಬುದು ನಿಜವೇ. ಆದರೆ ಪ್ರಭುತ್ವ ಈ ತೀರ್ಪನ್ನು ಹೇಗೆ ಗ್ರಹಿಸುತ್ತಿದೆ ಎಂಬುದನ್ನು ಲೇಖನದ ಆರಂಭದಲ್ಲೇ ಉಲ್ಲೇಖಿಸಿದ ಹಣಕಾಸು ಸಚಿವರ ಹೇಳಿಕೆಯೇ ತಿಳಿಸುತ್ತಿದೆ.

ಅಮೆರಿಕದ ಸಂವಿಧಾನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಬೆಂಜಮಿನ್ ಫ್ರಾಂಕ್ಲಿನ್‌ ‘ತಾತ್ಕಾಲಿಕವಾದ ಸುರಕ್ಷತೆಗಾಗಿ ಅಗತ್ಯವಾದ ಸ್ವಾತಂತ್ರ್ಯವನ್ನು ಮಾರಾಟ ಮಾಡುವವರು ಸ್ವಾತಂತ್ರ್ಯಕ್ಕೂ ಸುರಕ್ಷತೆಗೂ ಅರ್ಹರಲ್ಲ’ ಎನ್ನುತ್ತಾನೆ. ನಮ್ಮ ಕಾಲಕ್ಕೆ ಮತ್ತು ಆಧಾರ್‌ನ ಸಂದರ್ಭಕ್ಕೆ ಅನ್ವಯಿಸಿಕೊಂಡರೆ ಈ ಹೇಳಿಕೆಯನ್ನು ಒಂದು ಪ್ರಶ್ನೆಯನ್ನಾಗಿ ಬದಲಾಯಿಸಿಕೊಳ್ಳಬಹುದು. ಅದು ಹೀಗಿರುತ್ತದೆ: ತಾತ್ಕಾಲಿಕ ಸುರಕ್ಷತೆಗಾಗಿ ಪ್ರಜೆಗಳು ತಮ್ಮ ಸ್ವಾತಂತ್ರ್ಯವನ್ನು ಮಾರಾಟ ಮಾಡುವುದನ್ನು ಅನಿವಾರ್ಯಗೊಳಿಸುವ ಸರ್ಕಾರವನ್ನು ಪ್ರಜಾ ಸರ್ಕಾರ ಎನ್ನಲು ಸಾಧ್ಯವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.