ADVERTISEMENT

ಮುಕ್ತ ಚುನಾವಣೆಗೆ ತಂತ್ರಜ್ಞಾನದ ಸವಾಲು

ಚುನಾವಣಾ ಆಯೋಗದ ಸ್ಥಿತಿ, ಬೆಕ್ಕಿಗೆ ಗಂಟೆ ಕಟ್ಟಲು ಹೊರಟ ಇಲಿಯಂತಾಗಿದೆ

ಎ.ಎನ್‌ ಎಮ ಇಸ್ಮಾಯಿಲ್
Published 21 ಮಾರ್ಚ್ 2019, 20:31 IST
Last Updated 21 ಮಾರ್ಚ್ 2019, 20:31 IST
   

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಹಿಂದಿನ ದಿನ ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪತ್ರವನ್ನು ಕಳುಹಿಸಿತ್ತು. 2013ರಲ್ಲಿ ಆಯೋಗ ಹೊರಡಿಸಿದ್ದ ಸುತ್ತೋಲೆಯೊಂದನ್ನು ನೆನಪಿಸಿದ್ದ ಈ ಪತ್ರ, ಭಾರತೀಯ ಸೇನೆಯನ್ನು ಮತ ಯಾಚನೆಗೆ ಬಳಸಕೂಡದು ಎಂದು ತಾಕೀತು ಮಾಡಿತ್ತು. ಅದೇ ದಿನ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂಬ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಸಂಘಟನೆಯೊಂದರ ಪ್ರಮುಖರೊಬ್ಬರು ವಿಂಗ್ ಕಮಾಂಡರ್ ಅಭಿನಂದನ್ ಅವರ ಚಿತ್ರ ಮತ್ತು ಮತಯಂತ್ರ ಚಿತ್ರವಿರುವ ಪೋಸ್ಟರ್ ಒಂದರಲ್ಲಿ ‘ವೋಟಿಂಗ್ ಮಿಷನ್‌ನಲ್ಲಿ ಕಮಲದ ಚಿಹ್ನೆ ಒತ್ತಿ, ಏರ್ ಸ್ಟ್ರೈಕ್‌ನ ಅನುಭವ ಪಡೆಯಿರಿ’ ಎಂಬ ಸಂದೇಶವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ರಾಜಕೀಯ ಪಕ್ಷವೊಂದು ಇದನ್ನು ಹಂಚಿಕೊಂಡಿದ್ದರೆ ಇದು ಆಚಾರ ಸಂಹಿತೆಯ ಉಲ್ಲಂಘನೆಯಾಗುತ್ತಿತ್ತು. ಆದರೆ ಇದನ್ನು ಹಂಚಿಕೊಂಡ ವ್ಯಕ್ತಿ ‘ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಪದವಿಗೇರಿಸಬೇಕು’ ಎನ್ನುತ್ತಿದ್ದಾರೆಯೇ ಹೊರತು ಅವರು ಅಧಿಕೃತವಾಗಿ ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಚರ್ಚೆ ನಡೆಯಿತು. ಹಲವರು ಖಂಡಿಸಿದರು. ಇನ್ನು ಕೆಲವರು ಬೆಂಬಲಿಸಿದರು. ರಾಜಕೀಯ ಪಕ್ಷವೊಂದು ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿತು. ಆದರೆ ಈ ತನಕ ಚುನಾವಣಾ ಆಯೋಗ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ. ನೂರಾರು ಮಂದಿ ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

2014ರ ಚುನಾವಣೆಯನ್ನು ಬಹುತೇಕರು ‘ಭಾರತದ ಮೊದಲ ಸಾಮಾಜಿಕ ಮಾಧ್ಯಮ ಚುನಾವಣೆ’ ಎಂದು ಕರೆದಿದ್ದರು. ಆಗ ಸಾಮಾಜಿಕ ಮಾಧ್ಯಮಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಚುನಾವಣಾ ಆಯೋಗಕ್ಕೆ ಯಾವ ಪರಿಕಲ್ಪನೆಯೂ ಇರಲಿಲ್ಲ. ಸಾಮಾಜಿಕ ಮಾಧ್ಯಮಗಳ ಅತಿಪ್ರಸರಣದ ಹೊತ್ತಿನಲ್ಲಿ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಬದ್ಧವಾಗಿ ನಡೆಸುವುದಕ್ಕೆ ಚುನಾವಣಾ ಆಯೋಗಕ್ಕೆ ಸಾಮರ್ಥ್ಯವಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ನಿರಾಶೆಯಾಗುತ್ತದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಏನೂ ಬದಲಾಗಿಲ್ಲ ಎಂಬುದಕ್ಕೆ ಮೇಲೆ ವಿವರಿಸಲಾದ ಘಟನೆಯೇ ಸಾಕ್ಷಿ.

ADVERTISEMENT

ಕಳೆದ ಎಪ್ಪತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಅನೇಕ. ತಂತ್ರಜ್ಞಾನವು ಚುನಾವಣಾ ಆಯೋಗದ ಕೆಲಸವನ್ನು ಬಹಳ ಮಟ್ಟಿಗೆ ಸರಳಗೊಳಿಸಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ತೊಡಗಿ ಮತದಾರರ ನೋಂದಣಿಯ ತನಕದ ಅನೇಕ ಕೆಲಸಗಳು ಈಗ ಮೊದಲಿಗಿಂತ ಸುಲಭ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳೂ ಸಾಕಷ್ಟು ಬದಲಾಗಿವೆ. ತಂತ್ರಜ್ಞಾನ ವೇಗವಾಗಿ ಮುಂದಕ್ಕೆ ಸಾಗುತ್ತಿದ್ದಾಗ ಅದೇ ವೇಗದಲ್ಲಿ ಹಿಂದಕ್ಕೆ ಸರಿದದ್ದು ನೈತಿಕತೆ. ಚುನಾವಣಾ ವೆಚ್ಚಕ್ಕೆ ಒಂದು ಮಿತಿ ಇದೆ. ಈ ಮಿತಿಯೊಳಗೆ ಯಾರೂ ಖರ್ಚು ಮಾಡುವುದಿಲ್ಲ ಎಂಬುದು ಸ್ವತಃ ಚುನಾವಣಾ ಆಯೋಗಕ್ಕೂ ತಿಳಿದಿರುವ ಸಂಗತಿ. ಅಭ್ಯರ್ಥಿ ಸಲ್ಲಿಸುವ ಖರ್ಚಿನ ಲೆಕ್ಕಾಚಾರವನ್ನು ಪುನರ್‌ಪರಿಶೀಲಿಸುವುದಕ್ಕೆ ಬೇಕಿರುವ ವ್ಯವಸ್ಥೆಯೇನೂ ಆಯೋಗದ ಬಳಿ ಇಲ್ಲ. ಚುನಾವಣೆಗೆ ನಡೆಸುವ ಖರ್ಚುಗಳೆಲ್ಲವೂ ಕಪ್ಪು ಹಣದಲ್ಲಿಯೇ ಇರುವುದರಿಂದ ಇದರ ಲೆಕ್ಕಾಚಾರವನ್ನು ಕಂಡುಕೊಳ್ಳುವುದು ಆಯೋಗಕ್ಕೂ ಕಷ್ಟ. ಈ ಪರಿಸ್ಥಿತಿಗೆ ನಮ್ಮ ಚುನಾವಣೆಗಳಷ್ಟೇ ದೊಡ್ಡ ಇತಿಹಾಸವಿದೆ. ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸುವ ವ್ಯವಸ್ಥೆ ಬಂದರೂ ಈ ಸಮಸ್ಯೆಯೇನೂ ನಿವಾರಣೆಯಾಗುವ ಸಾಧ್ಯತೆಯಿಲ್ಲ.

ಈ ಬಗೆಯ ಬಿಕ್ಕಟ್ಟಿನ ನಡುವೆ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಸಂಭವಿಸಿತು. ರಾಜಕೀಯ ಪಕ್ಷಗಳು ಇದನ್ನು ರಾಜಕೀಯ ಸಂವಹನದ ಹೊಸ ಮಾರ್ಗವಾಗಿ ಮಾರ್ಪಡಿಸಿಕೊಂಡವು. 2014ರಲ್ಲಿ ಇದನ್ನು ಬಿಜೆಪಿ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಂಡಿತು ಎಂಬುದು ನಿಜ. ನಂತರದ ದಿನಗಳಲ್ಲಿ ಉಳಿದ ರಾಜಕೀಯ ಪಕ್ಷಗಳೂ ಇದನ್ನೇ ಬಳಸಲಾರಂಭಿಸಿವೆ. ಸಾಂಪ್ರದಾಯಿಕ ಮಾಧ್ಯಮಗಳಂತೆ ಈಗ ಸಾಮಾಜಿಕ ಮಾಧ್ಯಮಗಳನ್ನೂ ಜಾಹೀರಾತು ಸಂಹಿತೆಯ ವ್ಯಾಪ್ತಿಗೇನೋ ತರಲಾಗಿದೆ. ಆದರೆ ಅದು ಚುನಾವಣಾ ವೆಚ್ಚಕ್ಕೆ ಇರುವ ಮಿತಿಯಂಥದ್ದೇ ಒಂದು ಪ್ರಯತ್ನವೇ ಹೊರತು ಮತ್ತೇನೂ ಅಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ‘ಜಾಹೀರಾತು’ ಎಂಬುದು ಈಗ ಪಡೆದುಕೊಂಡಿರುವ ಸ್ವರೂಪವೇ ಬೇರೆ. ಫೇಸ್‌ಬುಕ್, ಟ್ವಿಟರ್ ಅಥವಾ ಈ ಬಗೆಯ ವೇದಿಕೆಗಳಲ್ಲಿ ರಾಜಕೀಯ ಪಕ್ಷಗಳು ನೀಡುವ ಜಾಹೀರಾತನ್ನು ನಿಯಂತ್ರಿಸಲು ಸಾಧ್ಯ. ಆದರೆ ‘ಬ್ರಿಗೇಡ್’, ‘ಟೀಮ್’, ‘ಸೇನೆ’ ಇತ್ಯಾದಿ ಹೆಸರಿಟ್ಟುಕೊಂಡು ಕಾರ್ಯಾಚರಿಸುವ ಖಾಸಗಿ ಗುಂಪುಗಳ ಚಟುವಟಿಕೆಯನ್ನು ಜಾಹೀರಾತಿನ ವ್ಯಾಪ್ತಿಯೊಳಕ್ಕೆ ತರುವುದು ಅಸಾಧ್ಯ ಎಂಬ ಸ್ಥಿತಿ ಇದೆ. ಇದರಾಚೆಗೆ ‘ಸೋಷಿಯಲ್ ಇನ್‌ಫ್ಲುಯೆನ್ಸರ್’ ಎಂಬ ಹೊಸ ವರ್ಗವೂ ಹುಟ್ಟಿಕೊಂಡಿದೆ. ಇವರೆಲ್ಲರೂ ವ್ಯಕ್ತಿಗಳು. ನಿರ್ದಿಷ್ಟ ರಾಜಕೀಯ ಪಕ್ಷದ ಒಲವುಗಳು ಇವರಿಗಿದ್ದರೂ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಬರಹಗಳನ್ನು ರಾಜಕೀಯ ಜಾಹೀರಾತು ಎನ್ನಲು ಸಾಧ್ಯವಿಲ್ಲ. ಒಂದು ವೇಳೆ ಅಂಥದ್ದನ್ನು ಮಾಡಲು ಹೊರಟರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿಬಿಡುತ್ತದೆ. ಈ ಬಗೆಯ ನಿಯಂತ್ರಣಗಳು ಪರಿಹಾರಕ್ಕಿಂತ ದೊಡ್ಡ ಸಮಸ್ಯೆಯಾಗಿಬಿಡುತ್ತವೆ.

ಮಾಹಿತಿ ತಂತ್ರಜ್ಞಾನಪೂರ್ವ ಯುಗದಲ್ಲಿ ಮತಗಟ್ಟೆ ವಶಪಡಿಸಿಕೊಂಡು ತಮಗೆ ಬೇಕಿರುವ ಅಭ್ಯರ್ಥಿಗೆ ಅಷ್ಟೂ ಮತಗಳನ್ನು ಚಲಾಯಿಸುವ ತಂತ್ರವೊಂದನ್ನು ಅನುಸರಿಸಲಾಗುತ್ತಿತ್ತು. ಇಂಥದ್ದು ಸಂಭವಿಸಿದಾಗ ಕನಿಷ್ಠ ಮರುಮತದಾನ, ಮರುಚುನಾವಣೆಯ ಅವಕಾಶವಾದರೂ ಇರುತ್ತಿತ್ತು. ಚುನಾವಣಾ ರಾಜಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಪ್ರವೇಶಿಸುವುದರ ಜೊತೆಗೆ ಮತಗಟ್ಟೆ ವಶದಂಥ ಪ್ರಕರಣಗಳು ನಗಣ್ಯವೆಂಬಷ್ಟರ ಮಟ್ಟಿಗೆ ಕಡಿಮೆಯಾದವು. ಆದರೆ ರಾಜಕೀಯ ಪಕ್ಷಗಳು ನೇರವಾಗಿ ಮತದಾರನನ್ನೇ ವಶೀಕರಿಸುವ ತಂತ್ರಗಳನ್ನು ರೂಢಿಸಿಕೊಂಡವು. ಇದಕ್ಕೆ ಬಹುಮುಖ್ಯವಾಗಿ ಬಳಕೆಯಾಗುತ್ತಿರುವುದು ಸಾಮಾಜಿಕ ಮಾಧ್ಯಮಗಳು. ಸುಳ್ಳು ಸುದ್ದಿ, ಪ್ರಚೋದನಕಾರಿ ಸಂದೇಶಗಳು ಇತ್ಯಾದಿಗಳನ್ನು ನೇರವಾಗಿ ಮತದಾರರಿಗೆ ತಲುಪಿಸುವುದಕ್ಕೆ ಈಗ ಸುಲಭದ ಪರಿಕರಗಳು ರಾಜಕೀಯ ಪಕ್ಷಗಳಿಗೆ ಸಿಕ್ಕಿವೆ. ಅದನ್ನು ಕಾನೂನಿನ ಕೈಗೆ ಸಿಕ್ಕಿಬೀಳದಂತೆ ಮಾಡುವುದಕ್ಕೆ ಅಗತ್ಯವಿರುವ ಮಾರ್ಗಗಳನ್ನೂ ಇದೇ ತಂತ್ರಜ್ಞಾನ ಒದಗಿಸುತ್ತದೆ. ವಾಟ್ಸ್‌ಆ್ಯಪ್‌ನಲ್ಲಿ ನಡೆಯುವ ಸಂವಹನವನ್ನು ಯಾರೂ ಪರಿಶೀಲಿಸಲು ಸಾಧ್ಯವಿಲ್ಲ. ತಾಂತ್ರಿಕವಾಗಿರುವ ಅಡ್ಡಿಗಳನ್ನು ನಿವಾರಿಸಿಕೊಂಡರೂ ಈ ಸಂವಹನವನ್ನು ಪರಿಶೀಲಿಸುವುದು ವ್ಯಕ್ತಿಯ ಖಾಸಗಿತನದ ಮೇಲಿನ ಹಲ್ಲೆಯಾಗಿಬಿಡುತ್ತದೆ. ತಾಂತ್ರಿಕವಾಗಿ ಇದು ವ್ಯಕ್ತಿಗಳ ನಡುವಣ ಸಂವಹನ. ಆದ್ದರಿಂದ ಇದನ್ನುಸಮೂಹ ಮಾಧ್ಯಮದ ವ್ಯಾಪ್ತಿಗೆ ತರಲೂ ಸಾಧ್ಯವಿಲ್ಲ. ಅಂದರೆ ಚುನಾವಣಾ ಆಯೋಗ ಬೆಕ್ಕಿಗೆ ಗಂಟೆ ಕಟ್ಟಲು ಹೊರಟ ಇಲಿಯಂತೆ ಇರಬೇಕಷ್ಟೆ.

ಹಾಗಿದ್ದರೆ ಈಗಿನ ಬಿಕ್ಕಟ್ಟಿಗೆ ಏನು ಪರಿಹಾರ? ಇದಕ್ಕೆ ಸರಳ ಉತ್ತರವಿಲ್ಲ.ತಂತ್ರಜ್ಞಾನದ ತೀವ್ರಗತಿಯ ಊರ್ಧ್ವಮುಖಿ ಬೆಳವಣಿಗೆಯ ಜೊತೆಯಲ್ಲೇ ನೈತಿಕತೆಯ ಅಧೋಮುಖಿ ಚಲನೆಯೂ ಸಂಭವಿಸಿತು ಎಂಬ ಅಂಶವನ್ನು ಗಮನಿಸಿದರೆ ಉತ್ತರವೊಂದು ಹೊಳೆಯುತ್ತದೆ. ಚುನಾವಣೆಯೊಂದು ಮುಕ್ತ, ನ್ಯಾಯಬದ್ಧವಾಗಿರುವುದಕ್ಕೆ ಕೇವಲ ಕಾನೂನುಗಳು ಸಾಕಾಗುವುದಿಲ್ಲ. ಇದಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಮತದಾರರೆಲ್ಲರೂ ನೈತಿಕತೆಯನ್ನು ಪಾಲಿಸಬೇಕಾಗುತ್ತದೆ. ಇದನ್ನು ಖಾತರಿಪಡಿಸುವ ತಂತ್ರಜ್ಞಾನವೊಂದನ್ನು ಈತನಕ ಆವಿಷ್ಕರಿಸಲಾಗಿಲ್ಲ ಎಂಬುದನ್ನು ಅರಿತರೆ ಪರಿಹಾರ ಗೋಚರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.