ಖಾಸಗಿ ಸಂಸ್ಥೆಗಳು ಆಧಾರ್ ಅನ್ನು ಬಳಸುವುದಕ್ಕೆ ಅನುಕೂಲಕರ ಕಾನೂನೊಂದನ್ನು ರೂಪಿಸುವುದಕ್ಕೆ ಕೇಂದ್ರ ಸರ್ಕಾರ ಪಣ ತೊಟ್ಟು ನಿಂತಿದೆ. ಇದಕ್ಕಾಗಿಯೇ ಆಧಾರ್ ತಿದ್ದುಪಡಿ ಮಸೂದೆಯೊಂದನ್ನು ಕಾನೂನು ಸಚಿವ ರವಿಶಂಕರ ಪ್ರಸಾದ್ ಲೋಕಸಭೆಯಲ್ಲಿ ಬುಧವಾರ (ಜ.2) ಮಂಡಿಸಿದರು. ಸಹಜವಾಗಿಯೇ ವಿರೋಧ ಪಕ್ಷಗಳಿಂದ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವ ಮಸೂದೆ ಇದು ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯ.
ಆಧಾರ್ ಕಾಯ್ದೆಯ ತಿದ್ದುಪಡಿಗೆ ಸರ್ಕಾರ ಏಕೆ ಆತುರಪಡುತ್ತಿದೆ ಎಂಬುದು ಈಗ ರಹಸ್ಯವೇನೂ ಅಲ್ಲ. ಬ್ಯಾಂಕುಗಳಿಂದ ಆರಂಭಿಸಿ ಮೊಬೈಲ್ ಸೇವೆ ನೀಡುವವರ ತನಕ ಎಲ್ಲರೂ ಆಧಾರ್ ಬಳಸಿ ಕ್ಷಣಾರ್ಧದಲ್ಲಿ ನಡೆಸುತ್ತಿರುವ ಕೆವೈಸಿ ಈಗ ಕನಿಷ್ಠ ಎರಡು ದಿನ ತಗಲುವ ವ್ಯವಹಾರವಾಗಿದೆ. ಏರ್‌ಟೆಲ್ ಎಂಬ ಮೊಬೈಲ್ ಸೇವಾ ಸಂಸ್ಥೆಯಂತೂ ಇನ್ನಷ್ಟು ಚಾಲಾಕುಗಿರಿ ತೋರಿಸಿ ಮೊಬೈಲ್ ಫೋನ್‌ಗಳಿಗೆ ಆಧಾರ್ ಸಂಪರ್ಕ ಕಲ್ಪಿಸಿಕೊಂಡವರಿಗೆಲ್ಲಾ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಒಂದು ಖಾತೆಯನ್ನೂ ತೆರೆದು ಅದಕ್ಕೆ ಗ್ಯಾಸ್ ಸಬ್ಸಿಡಿಯ ಹಣವೂ ಬರುವಂತೆ ಮಾಡಿಕೊಂಡಿತ್ತು. ಹಣಕಾಸು ಕ್ಷೇತ್ರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಲಿಟ್ಟಿರುವ ಅನೇಕ ಸಂಸ್ಥೆಗಳ ಮಟ್ಟಿಗೆ ‘ನಿಮ್ಮ ಗ್ರಾಹಕರನ್ನು ಅರಿಯಿರಿ’ ಅಥವಾ ಕೆವೈಸಿ ಕಡ್ಡಾಯ. ಇದನ್ನು ಸುಲಭದಲ್ಲಿ ಸಾಧಿಸಿಕೊಳ್ಳುವುದಕ್ಕೆ ಆಧಾರ್ ಒಂದು ಮಾರ್ಗವಾಗಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪು ಖಾಸಗಿಯವರು ಆಧಾರ್ ಅನ್ನು ಬಳಸುವುದನ್ನೇ ನಿರ್ಬಂಧಿಸಿತು.
ಈ ತೀರ್ಪು ಹೊರಬಂದ ದಿನದಿಂದಲೂ ಹಣಕಾಸು ಸೇವೆಗಳನ್ನು ನೀಡುವ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿವೆ. ಆಧಾರ್‌ನ ಸಾಧ್ಯತೆಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಹಲವು ಸೇವೆಗಳನ್ನು ರೂಪಿಸಿಕೊಂಡಿದ್ದವರಂತೂ ತಮ್ಮ ಅಸ್ತಿತ್ವದ ಸಮಸ್ಯೆಯನ್ನೇ ಎದುರಿಸುತ್ತಿದ್ದಾರೆ. ವಾಣಿಜ್ಯ ವಲಯದ ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಆಧಾರ್ ಕಾಯ್ದೆಗೆ ತಿದ್ದುಪಡಿ ತರುವುದು ಮಾರ್ಗ ಎಂದು ಸರ್ಕಾರ ಭಾವಿಸಿದೆ. ಆದರೆ ಅದು, ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದಕ್ಕೆ ದತ್ತಾಂಶ ಸಂರಕ್ಷಣಾ ಕಾಯ್ದೆಯೊಂದು ಅಗತ್ಯ ಎಂದು ಭಾವಿಸುವುದಿಲ್ಲ. ಮಾದರಿ ಕಾಯ್ದೆಯೊಂದು ತಯಾರಾಗಿದ್ದರೂ ಅದನ್ನು ಮಂಡಿಸುವುದಕ್ಕೆ ಬೇಕಿರುವ ಉತ್ಸಾಹವನ್ನು ಸರ್ಕಾರ ತೋರುತ್ತಿಲ್ಲ. ಆದರೆ ಆಧಾರ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಾತ್ರ ಉತ್ಸಾಹದಿಂದ ಮಂಡಿಸಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಅಧಿಕಾರಕ್ಕೇರುವ ಮುನ್ನ ಆಧಾರ್ ಅನ್ನು ವಿರೋಧಿಸುತ್ತಿದ್ದ ಬಿಜೆಪಿ, ಅಧಿಕಾರಕ್ಕೇರಿದ ಮೇಲೆ ತನ್ನ ವರಸೆಯನ್ನು ಬದಲಾಯಿಸಿಕೊಂಡಿತು. ಎಷ್ಟರಮಟ್ಟಿಗೆ ಎಂದರೆ ಆಧಾರ್ ಪರಿಕಲ್ಪನೆಗೆ ಜನ್ಮ ನೀಡಿದ್ದ ಕಾಂಗ್ರೆಸ್‌ಗಿಂತ ದೊಡ್ಡ ಆಧಾರ್ ಪ್ರತಿಪಾದಕ ಈಗ ಬಿಜೆಪಿ. ಈ ಹಿಂದೆ ವೈಯಕ್ತಿಕ ಮಾಹಿತಿ ಸೋರಿಕೆ, ಖಾಸಗಿತನ ಇತ್ಯಾದಿಗಳನ್ನೆಲ್ಲಾ ಮುಂದಿಟ್ಟು ಆಧಾರ್ ವಿರೋಧಿಸುತ್ತಿದ್ದ ಸಂಘ ಪರಿವಾರದ ಸಂಘಟನೆಗಳೆಲ್ಲಾ ಈಗ ಆಧಾರ್ ಪರವಾಗಿ ವಾದಿಸುತ್ತಿವೆ. ಖಾಸಗಿ ಮಾಹಿತಿಯ ಕುರಿತು ಮಾತನಾಡುವವರನ್ನು ತೆರಿಗೆ ವಂಚನೆ, ಭಯೋತ್ಪಾದನೆಗೆ ಬೆಂಬಲ ನೀಡುವವರು ಎಂಬಂತೆ ಚಿತ್ರಿಸಲಾಗುತ್ತಿದೆ. ರಹಸ್ಯ ಮತ್ತು ಖಾಸಗಿತನಗಳ ನಡುವೆ ವ್ಯತ್ಯಾಸವೇ ಇಲ್ಲ ಎಂಬಂತೆ ವಾದ ಮಂಡಿಸುವ ಪ್ರವೃತ್ತಿಯೊಂದು ವ್ಯಾಪಕಗೊಂಡಿದೆ. ಪರಿಣಾಮವಾಗಿ ಆಧಾರ್ ಬಳಸುವುದು ಒಳ್ಳೆಯದು ಎಂದು ವಾದಿಸುವ ಜನಸಾಮಾನ್ಯರ ವರ್ಗವೊಂದು ಸೃಷ್ಟಿಯಾಗಿದೆ.
ಖಾಸಗಿ ಮಾಹಿತಿ ಎಂದರೆ ಏನು ಎಂದು ಅರ್ಥ ಮಾಡಿಕೊಂಡರೆ ಅದರ ರಕ್ಷಣೆಯ ಅಗತ್ಯ ತಿಳಿಯುತ್ತದೆ. ಬ್ಯಾಂಕ್ ಖಾತೆ ಸಂಖ್ಯೆ, ಹುಟ್ಟಿದ ದಿನಾಂಕ, ಪಾನ್ ಸಂಖ್ಯೆ, ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು, ಹುಟ್ಟಿದ ಊರು, ತಂದೆ- ತಾಯಿಯ ಹೆಸರು, ಮಕ್ಕಳ ಹೆಸರು, ಅವರ ಹುಟ್ಟಿದ ದಿನಾಂಕ ಇವ್ಯಾವೂ ಮುಚ್ಚಿಡಬೇಕಾದ ರಹಸ್ಯಗಳಲ್ಲ. ಆದರೆ ಇವೆಲ್ಲಾ ಖಾಸಗಿ ಮಾಹಿತಿಗಳು. ಈ ಮಾಹಿತಿಗಳನ್ನೆಲ್ಲಾ ಒಂದು ಕರಪತ್ರದಲ್ಲಿ ಮುದ್ರಿಸಿ ಊರಿಡೀ ಹಂಚಬೇಕೇ? ಈ ಪ್ರಶ್ನೆಗೆ ಹೌದು ಎಂದು ಸರ್ಕಾರ ಉತ್ತರಿಸುತ್ತಿದೆ. ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯನ್ನು ತರದೆ ಆಧಾರ್ ತಿದ್ದುಪಡಿ ಮಸೂದೆ ಮಂಡಿಸಿರುವುದನ್ನು ಹೀಗೆ ಮಾತ್ರ ಅರ್ಥ
ಮಾಡಿಕೊಳ್ಳಲು ಸಾಧ್ಯ.
ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಅರ್ಥಾತ್ ಅವನ ಅಸ್ತಿತ್ವವನ್ನೇ ಒಂದು ಸಂಖ್ಯೆಯೊಂದಿಗೆ ಜೋಡಿಸಲು ಹೊರಟಾಗ ಅದಕ್ಕೆ ಬೇಕಿರುವ ಸುರಕ್ಷೆಯನ್ನು ಕಲ್ಪಿಸುವುದು ಅಗತ್ಯ ಎಂಬುದು ಎಂಥವರಿಗೂ ಅರ್ಥವಾಗುವ ವಿಚಾರ. ಇದೇ ಪ್ರಶ್ನೆ ಲೋಕಸಭೆಯಲ್ಲಿ ಬಂದಾಗ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಉತ್ತರ ‘ಆಧಾರ್ ದತ್ತಾಂಶ ಸುರಕ್ಷಿತ. ಯಾರೂ ಭಯಪಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ತರಲಿದ್ದೇವೆ’. ಆಧಾರ್ ದತ್ತಾಂಶ ಎಷ್ಟರಮಟ್ಟಿಗೆ ಅಸುರಕ್ಷಿತ ಎಂಬುದನ್ನು ಇಲ್ಲಿಯತನಕ ನಡೆದಿರುವ ಹಣಕಾಸು ವಂಚನೆಗಳೇ ಹೇಳುತ್ತಿವೆ. ಇನ್ನು ಇ-ಕೆವೈಸಿ ಅರ್ಹತೆ ಪಡೆದಿರುವ ಸಂಸ್ಥೆಗಳು ಈ ಮಾಹಿತಿಯನ್ನು ಹೇಗೆಲ್ಲಾ ಬಳಸಿಕೊಳ್ಳುತ್ತವೆ ಎಂಬುದು ಗ್ರಾಹಕರಿಗೆ ಅರಿಯುವ ಸಾಧ್ಯತೆಯೇ ಇಲ್ಲ ಎಂಬಂಥ ಅನೇಕ ವಿಚಾರಗಳು ಈಗಾಗಲೇ ಬಯಲಿಗೆ ಬಂದಿವೆ.
ಎಲ್ಲದಕ್ಕಿಂತ ಹೆಚ್ಚಾಗಿ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಅನುಸರಿಸುವ ಅಪಾರದರ್ಶಕ ನೀತಿಯೇ ಆಧಾರ್ ಸುರಕ್ಷತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಎಷ್ಟು ಸಂಸ್ಥೆಗಳ ಇ-ಕೆವೈಸಿ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂಬ ಪ್ರಶ್ನೆಗೆ ಯುಐಡಿಎಐ ಈ ತನಕ ಉತ್ತರ ಕೊಟ್ಟಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದಕ್ಕೆ ನೀಡಿರುವ ಕಾರಣ ಈ ಸಂಸ್ಥೆಗಳ ವ್ಯಾಪಾರಿ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬುದು. ತನ್ನ ಸ್ಥಾಪನೆಯ ದಿನದಿಂದ ಈ ತನಕವೂ ಅಪರಾದರ್ಶಕವಾಗಿ ಕೆಲಸ ಮಾಡುತ್ತಿರುವ ಒಂದು
ವ್ಯವಸ್ಥೆಯನ್ನು ಅದೇ ಸ್ಥಿತಿಯಲ್ಲಿ ಉಳಿಸುವುದಕ್ಕೇಕೆ ಸರ್ಕಾರ ಪ್ರಯತ್ನಿಸುತ್ತಿದೆ?
ಈ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಆಧಾರ್ ತಿದ್ದುಪಡಿ ಮಸೂದೆಯ ಹಿಂದೆ ಅನೇಕ ವಾಣಿಜ್ಯ ಸಂಸ್ಥೆಗಳ ಒತ್ತಡವಿದೆ ಎಂಬುದು ಸದ್ಯದ ಮಟ್ಟಿಗೆ ಕಾಣಿಸುತ್ತಿರುವ ಒಂದು ಮುಖ್ಯ ಕಾರಣ. ಜನಸಾಮಾನ್ಯರ ಖಾಸಗಿ ಮಾಹಿತಿಯ ರಕ್ಷಣೆ ಕುರಿತು ಮಾತನಾಡುತ್ತಿರುವವರು ಬೆರಳೆಣಿಕೆಯ ಸಂಸದರು ಮಾತ್ರ. ಅದರಾಚೆಗೆ ಇರುವುದು ಖಾಸಗಿ ಮಾಹಿತಿಯ ಸಂರಕ್ಷಣೆಗಾಗಿ ಹೋರಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು.
ಭಾರತದಲ್ಲಿ ಇಲ್ಲಿಯ ತನಕ ಖಾಸಗಿ ಮಾಹಿತಿಯ ಸಂರಕ್ಷಣೆ ಎಂಬುದು ಒಂದು ಸಾರ್ವತ್ರಿಕ ಚರ್ಚೆಯ ವಿಷಯವಾಗಿಯೇ ಇಲ್ಲ. ಇದೇ ವೇಳೆ ಇ-ಕೆವೈಸಿಯ ಪರವಾಗಿರುವ ಲಾಬಿ ಬಹಳ ಪ್ರಬಲವಾದುದು. ಸರ್ಕಾರವು ಸಹಜವಾಗಿಯೇ ಜನಸಾಮಾನ್ಯರ ಹಿತವನ್ನು ಬದಿಗಿಟ್ಟು ವಾಣಿಜ್ಯಾಸಕ್ತಿಗಳಿಗೆ ಮಣೆ ಹಾಕುತ್ತಿದೆ. ಇದರಿಂದ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ತಾತ್ಕಾಲಿಕ ಲಾಭವಾಗಬಹುದು. ಇದರ ದೂರಗಾಮಿ ಪರಿಣಾಮಗಳು ಬಹಳ ನಕರಾತ್ಮಕವಾಗಿರುತ್ತವೆ. ಯುನೈಟೆಡ್ ಕಿಂಗ್‌ಡಂ ತನ್ನ ಗುರುತು ಚೀಟಿ ಯೋಜನೆಯನ್ನು ಆರಂಭಿಸಿ ಕೊನೆಗೊಳಿಸಿದ್ದು ಇದೇ ಕಾರಣಕ್ಕೆ. ಅಮೆರಿಕ ತನ್ನ ಸೋಷಿಯಲ್ ಸೆಕ್ಯುರಿಟಿ ಸಂಖ್ಯೆಯ ಬಳಕೆಗೆ ಸ್ಪಷ್ಟ ನಿಬಂಧನೆಗಳನ್ನು ವಿಧಿಸಿರುವುದೂ ಇದೇ ಕಾರಣಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.