ಒಬ್ಬ ಮೇಷ್ಟ್ರು ವೃತ್ತಿ ಮೋಹಿಯಾದರೆ ವಿದ್ಯಾರ್ಥಿಗಳಷ್ಟೇ ಬದಲಾಗುತ್ತಾರೆ. ಪಿ.ಟಿ. ಮಾಸ್ತರ್ ಉತ್ಸಾಹಿಯಾದರೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಮುಖ್ಯ ಶಿಕ್ಷಕ ಬದ್ಧತೆ ಉಳ್ಳವರಾದರೆ ಶಾಲೆ ಪ್ರಗತಿ ಹೊಂದುತ್ತದೆ. ಅದೇ ಮೇಷ್ಟ್ರು ತಾವು ಕೆಲಸ ಮಾಡುವ ಊರಿನ ಅಭಿವೃದ್ಧಿಯ ಬಗ್ಗೆ ಕಣ್ಣುಗಳ ತುಂಬ ಕನಸುಗಳನ್ನು ತುಂಬಿಕೊಂಡಿದ್ದರೆ, ಹಳ್ಳಿಯ ಚಿತ್ರಣವೇ ಬದಲಾಗುತ್ತದೆ.
ಅಂತಹ ಅಪರೂಪದ ಮಾಸ್ತರ್ ಪರಸಂಗ ಇದು.
ಹದಿಮೂರು ವರ್ಷಗಳ ಹಿಂದಿನ ಮಾತು. ಎಚ್.ಎಂ.ಕೊಟ್ರೇಶ ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಗೊಣ್ಣಿಗನೂರು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕಗೊಂಡರು. ಆ ಊರಿಗೆ ಸಂಪರ್ಕ ರಸ್ತೆ ಕೂಡಾ ಇರಲಿಲ್ಲ. ಹಳ್ಳ ತುಂಬಿ ಹರಿದರೆ ಕಾಲ್ನಡಿಗೆ ಹಾದಿಯೂ ಬಂದ್ ಆಗುತ್ತಿತ್ತು.
ಕೊಟ್ರೇಶ ಮಾಸ್ತರ್ ಪಕ್ಕದೂರಿನಲ್ಲಿ ವಾಸವಿದ್ದರು. ಮಳೆಗಾಲದ ಒಂದು ದಿನ ಹಳ್ಳ ಉಕ್ಕಿ ಹರಿಯುತ್ತಿತ್ತು. ದಡದಲ್ಲಿ ನಿಂತು ಯೋಚಿಸುತ್ತಿದ್ದರು. ಮತ್ತೊಂದು ದಡದಲ್ಲಿ ಇದ್ದವರು ವಾಪಸು ಹೋಗುವಂತೆ ಕೂಗಿ ಹೇಳಿದರು. ಆದರೆ, ಕೊಟ್ರೇಶ ಅವರ ಮನಸ್ಸು ಒಪ್ಪಲಿಲ್ಲ. ಅಷ್ಟರಲ್ಲಿ ಒಬ್ಬರು ಬಟ್ಟೆಯನ್ನು ಬಿಚ್ಚಿ ಒಂದು ಕೈಯಲ್ಲಿ ಹಿಡಿದುಕೊಂಡು ಈಜುತ್ತಾ ದಡ ಸೇರಿದರು. ಅದನ್ನು ನೋಡಿದ ಇವರು ಹಾಗೇ ಮಾಡಿದರು!
ತಮ್ಮೂರಿನ ಹಳ್ಳ ಉಕ್ಕಿದರೆ ಶಾಲೆಗೆ ಸ್ವಯಂ ರಜೆ ಘೋಷಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಮೈದಾನದಲ್ಲಿ ಖುಷಿಯಿಂದಲೇ ಆಟವಾಡುತ್ತಿದ್ದರು. ಆದರೆ, ಮಾಸ್ತರ್ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದನ್ನು ಕಂಡು ಅಚ್ಚರಿಗೊಂಡರು.
ಶಾಲೆಯ ಸುತ್ತಲೂ ಬಣವೆಗಳಿದ್ದವು. ಅವುಗಳನ್ನು ತೆರವು ಮಾಡುವಂತೆ ವಿನಂತಿಸಿದರೆ ಯಾರೂ ಕೇಳಲಿಲ್ಲ. ಕೋಪಗೊಂಡು ಬಣವೆಗಳಿಗೆ ಬೆಂಕಿ ಹಚ್ಚಿದರು! ಗ್ರಾಮಸ್ಥರು ಹಲ್ಲೆ ಮಾಡಲು ಬಂದರು. ಅವರಲ್ಲಿ ಇಬ್ಬರು ಮಾಸ್ತರ್ ಬೆಂಬಲಕ್ಕೆ ನಿಂತರು.
ಅವರನ್ನೇ ಕರೆದುಕೊಂಡು ಆವರಣಕ್ಕೆ ತಂತಿಬೇಲಿ ಹಾಕಿದರು. ಅದಕ್ಕೂ ಜನ ತಕರಾರು ತೆಗೆದರು. ಆವರಣವನ್ನು ಖಾಲಿ ಬಿಡದೆ ತೆಂಗು, ಮಾವು, ಸಪೋಟ ಸಸಿಗಳನ್ನು ನೆಟ್ಟರು. ಅವುಗಳಿಗೆ ನೀರು ಬಿಟ್ಟುಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಹಟಕ್ಕೆ ಬಿದ್ದು ಗ್ರಾಮ ಪಂಚಾಯಿತಿಯಿಂದ ಶಾಲೆಗೆ ಪ್ರತ್ಯೇಕ ನಲ್ಲಿ ಹಾಕಿಸಿದರು.
ಕೊಟ್ರೇಶ ಅವರು ಚೆನ್ನಾಗಿ ಕಲಿಸುತ್ತಿದ್ದರು. ಆದ್ದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಕ್ಕಳು ಆಯ್ಕೆಯಾಗ ತೊಡಗಿದವು. ‘ಪರವಾಗಿಲ್ಲ, ಮಾಸ್ತರ್ ಚಲೋ ಓದಿಸ್ತಾನ’ ಎಂದು ಪೋಷಕರು ಮೆಚ್ಚಿ ಮಾತನಾಡಿದರು.
ವರ್ಷಗಳು ಕಳೆದವು. ಶಾಲೆಯ ಆವರಣ ಹಸಿರು ಹೊದ್ದುಕೊಂಡಿತು. 2014 ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಇದೊಂದೇ ಶಾಲೆ ‘ಪರಿಸರ ಮಿತ್ರ ಪ್ರಶಸ್ತಿ’ ಗೆ ಆಯ್ಕೆ ಆಯಿತು. ಆ ಪ್ರಶಸ್ತಿಯು ಶಾಲೆ ಹಾಗೂ ಕುಗ್ರಾಮದ ಚಹರೆಯನ್ನು ಬದಲಾಯಿಸಲು ಪ್ರೇರಣೆ ಆಯಿತು.
ಊರಿನ ಜನ ಜಾಗೃತರಾಗದೇ ಹೋದರೆ, ನಿಮ್ಮ ಪರಿಸರ ಮಿತ್ರ ಶಾಲೆ ಅರ್ಥ ಕಳೆದುಕೊಳ್ಳುತ್ತದೆ. ಅದನ್ನು ಉಳಿಸಿಕೊಳ್ಳಲು ನೀವು ಗ್ರಾಮವನ್ನೇ ಪರಿಸರ ಮಿತ್ರವಾಗಿ ರೂಪಿಸಿ ಎಂದು ಆಯ್ಕೆ ಸಮಿತಿಯ ಸದಸ್ಯ ಹಫೀಜುಲ್ಲಾ ಸಲಹೆ ನೀಡಿದರು. ಕೊಟ್ರೇಶ ಚಿಂತೆಯಲ್ಲಿ ಮುಳುಗಿದರು.
‘ಗ್ರಾಮಕ್ಕೆ ಏನಾದರೂ ಕೆಲಸ ಆಗಬೇಕಿದ್ದರೆ ಹೇಳ್ರಿ, ಮಾಡೋಣ’ ಎಂದು ಸಿಂಧನೂರಿನ ನೇತ್ರತಜ್ಞ ಡಾ.ಚನ್ನನಗೌಡ ಆರ್.ಪಾಟೀಲ ಹೇಳಿದ್ದ ಮಾತು ನೆನಪಿಗೆ ಬಂದಿತು. ಅವರಿಗೆ ಕರೆ ಮಾಡಿ ‘ದಯವಿಟ್ಟು ನಮ್ಮ ಹಳ್ಳಿಗಿ ಬನ್ರಿ’ ಎಂದು ಆಹ್ವಾನಿಸಿದರು.
ಗ್ರಾಮದ ಹೆಣ್ಣು ಮಕ್ಕಳು ಬಹಿರ್ದೆಸೆಗಾಗಿ ಕತ್ತಲಾಗುವುದನ್ನೇ ಕಾಯುವುದು, ಗಂಡಸರು ಬಂದರೆ ಮುಜುಗರಕ್ಕೆ ಒಳಗಾಗುವುದನ್ನು ಕೊಟ್ರೇಶ ಅವರು ನೋಡಿದ್ದರು. ಆದ್ದರಿಂದ ಎಲ್ಲಾ ಮನೆಗಳಿಗೂ ಶೌಚಾಲಯವನ್ನು ನಿರ್ಮಿಸಿ ಕೊಡಿ ಎಂದು ಡಾ.ಚನ್ನನಗೌಡ ಅವರಿಗೆ ಮನವಿ ಮಾಡಿದರು. ಅವರು ತಮ್ಮ ಟ್ರಸ್ಟ್‌ನಿಂದ ನೆರವು ನೀಡಲು ಒಪ್ಪಿಕೊಂಡರು. ಏಕಕಾಲಕ್ಕೆ 90 ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡವು. ಆದರೆ, ಜನ ಅವುಗಳನ್ನು ಬಚ್ಚಲುಮನೆ ಮಾಡಿಕೊಂಡರು!
ಮಾಸ್ತರ್ ಮತ್ತೆ ಡಾ.ಚನ್ನನಗೌಡ ಅವರನ್ನು ಸಂಪರ್ಕಿಸಿ ‘ಗ್ರಾಮದ ಮಹಿಳೆಯರು ಮನೆ ಹೊರಗೆ ತೆಂಗಿನಗರಿಗಳ ಮರೆಯಲ್ಲಿ ಸ್ನಾನ ಮಾಡುತ್ತಾರೆ. ಎಷ್ಟೋ ವೇಳೆ ಅದನ್ನು ಕಂಡು ನಾಚಿಕೆಯಿಂದ ತಲೆತಗ್ಗಿಸಿಕೊಂಡು ಹೋಗಿದ್ದೇನೆ’ ಎಂದು ತಿಳಿಸಿದರು.
ಗೌಡರ ಸಲಹೆಯಂತೆ ಶೌಚಾಲಯಕ್ಕಾಗಿ ಪಂಚಾಯಿತಿಗೆ ಗ್ರಾಮಸ್ಥರಿಂದ ಅರ್ಜಿ ಹಾಕಿಸಿದರು. ಶೌಚಾಲಯಕ್ಕಾಗಿ ಕೊಟ್ಟ ಹಣದಿಂದ ಬಚ್ಚಲುಮನೆ ನಿರ್ಮಿಸಿಕೊಳ್ಳಲು ತಿಳಿಸಿದರು. ಬಚ್ಚಲುಮನೆ ಸಿದ್ಧವಾದ ಬಳಿಕ ಮತ್ತೊಂದು ಸಮಸ್ಯೆ ಎದುರಾಯಿತು! ಮನೆಗಳ ಅಂಗಳದಲ್ಲಿ ಗಲೀಜು ನಿಲ್ಲತೊಡಗಿತು. ಪರಿಹಾರ ಎನ್ನುವಂತೆ ಇಂಗುಗುಂಡಿ ಮಾಡಿಸಿದರು. ಆ ನೀರು ವ್ಯರ್ಥವಾಗದಿರಲಿ ಎಂದು ಸಸಿಗಳನ್ನು ನೆಡಿಸಿದರು.
ಮಹಿಳೆಯರು ಉರುವಲು ತರಲು ಹೆಣಗಾಡುವುದು ಹಾಗೂ ಹೊಗೆಯಿಂದ ಆರೋಗ್ಯ ಕೆಡಿಸಿಕೊಳ್ಳುವುದು ಕೊಟ್ರೇಶ ಅವರಿಗೆ ಗೊತ್ತಿತ್ತು. ಹೀಗಾಗಿ ಗ್ಯಾಸ್ ಏಜೆನ್ಸಿಯವರು ಹೊಗೆ ಮುಕ್ತ ಗ್ರಾಮ ಮಾಡುವ ಯೋಜನೆ ಅನುಷ್ಠಾನಕ್ಕಾಗಿ ಕೋರಿದಾಗ ಒಪ್ಪಿಕೊಂಡರು. ತಲಾ ₹1 ಸಾವಿರದಲ್ಲೆ ಎಲ್ಲ ಮನೆಗಳೂ ಗ್ಯಾಸ್ ಸಂಪರ್ಕ ಸಿಕ್ಕಿತು.
ಈ ವಿಷಯ ತಿಳಿದ ಸೆಲ್ಕೊ ಸೋಲಾರ್ ಕಂಪೆನಿಯವರು ಬಂದರು. ಚಿಮಣಿ ದೀಪದಿಂದಾಗಿ ಪ್ರತಿ ವರ್ಷ ಒಂದಾದರೂ ಗುಡಿಸಲು ಹಾನಿಗೊಳಗಾಗುತ್ತಿತ್ತು. ಆದ್ದರಿಂದ ಸೋಲಾರ್ ದೀಪ ಹಾಕುವುದು ಸೂಕ್ತ ಎನಿಸಿತು. ಒಂದು ಮನೆಗೆ ₹10 ಸಾವಿರ ಕೊಡಬೇಕಿತ್ತು. ಮಾತುಕತೆ ಬಳಿಕ ₹3 ಸಾವಿರ ಸಹಾಯಧನ ಕಡಿತ ಮಾಡಿದರು. ದಾನಿಯೊಬ್ಬರು 2.7 ಲಕ್ಷ ನೆರವು ನೀಡಿದರು. ಉಳಿದ ಹಣವನ್ನು ತುಂಬಲು ಜನರಲ್ಲಿ ಶಕ್ತಿ ಇರಲಿಲ್ಲ.
ಕೊಟ್ರೇಶ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ಫಲಾನುಭವಿಗಳಿಗೆ ಜಾಮೀನುದಾರರಾಗಿ ತಲಾ ₹3 ಸಾವಿರ ಸಾಲ ಮಂಜೂರು ಮಾಡಿಸಿದರು.
ಈಗ ಗೊಣ್ಣಿಗನೂರು ಹೊಗೆ ಮುಕ್ತ, ಕತ್ತಲು ಮುಕ್ತ, ಬಯಲು ಶೌಚ ಮುಕ್ತ ಹಾಗೂ ಇಂಗುಗುಂಡಿ ಹೊಂದಿದ ಗ್ರಾಮವಾಗಿದೆ. ಪ್ರತಿ ಮನೆ ಮುಂದೆಯೂ ಗಿಡಗಳು ನಳನಳಿಸುತ್ತಿವೆ.
‘ಎಲ್ಲಕ್ಕಿಂತಲೂ ನಂಬಿಕೆ ಮುಖ್ಯ. ಜನ ಒಮ್ಮೆ ನಂಬಿದರೆ, ನಾವು ಹೇಳುವ ಎಲ್ಲ ಮಾತುಗಳನ್ನು ಕೇಳುತ್ತಾರೆ. ನಾನು ಅವರ ಕಷ್ಟ–ಸುಖಗಳಲ್ಲಿ ಭಾಗಿಯಾಗುತ್ತೇನೆ. ಸಣ್ಣಪುಟ್ಟ ಔಷಧಿ ಖರ್ಚನ್ನು ನೋಡಿಕೊಳ್ಳುತ್ತೇನೆ. ಹೀಗಾಗಿ ಗ್ರಾಮಸ್ಥರೊಂದಿಗೆ ಆತ್ಮೀಯತೆ ಬೆಳೆದಿದೆ. ಇದಕ್ಕಾಗಿ ಹತ್ತು ವರ್ಷ ಬೆವರು ಸುರಿಸಿದ್ದೇನೆ’ ಎಂದು ಕೊಟ್ರೇಶ ಭಾವುಕರಾದರು.
ಆ ಊರಲ್ಲಿ ಬಡತನ ಹೆಚ್ಚಾಗಿದ್ದು, ಜನ ಗುಳೆ ಹೋಗುತ್ತಾರೆ. ಇದರಿಂದಾಗಿ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತವೆ. ಆರೋಗ್ಯ ಸಮಸ್ಯೆಯೂ ಕಾಡುತ್ತದೆ. ಪೋಷಕರನ್ನು ಸ್ವಾವಲಂಬಿಯನ್ನಾಗಿ ಮಾಡಿದರೆ, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುವುದು ಮಾಸ್ತರರ ಪರ್ಯಾಯ ಚಿಂತನೆ.
‘ನಾನು ಎಲ್ಲರಲ್ಲೂ ಕನಸಿನ ಬೀಜಗಳನ್ನು ಬಿತ್ತುತ್ತಾ ಹೋಗುತ್ತೇನೆ. ಎಲ್ಲವೂ ಫಲ ಕೊಡಬೇಕು ಎನ್ನುವ ಹಟವಿಲ್ಲ. ಆದರೆ, ನಾನು ಒಳ್ಳೆಯ ಕನಸುಗಳನ್ನು ಬಿತ್ತುವುದನ್ನು ಮಾತ್ರ ಬಿಡುವುದಿಲ್ಲ’ ಎನ್ನುತ್ತಾರೆ ಕೊಟ್ರೇಶ.
ಇವರಂತೆ ‘ಸಮುದಾಯಮುಖಿ’ ಕೆಲಸ ಮಾಡಲು ಬೇರೆಯದೇ ಮನಸ್ಥಿತಿ ಬೇಕಾಗುತ್ತದೆ. ಇಲ್ಲದೇ ಹೋದರೆ ಅಡೆತಡೆ, ನಿಂದನೆ, ಕುಹುಕ, ಚಾರಿತ್ರ್ಯವಧೆಯನ್ನು ಮೀರಿ ಸಮಾಜ ಮೆಚ್ಚುವಂತಹ ಕೆಲಸ ಮಾಡುವುದು ಕಷ್ಟ.
ಗ್ರಾಮಸ್ಥರೊಂದಿಗೆ ಬಾಂಧವ್ಯ, ಶಾಲೆ ಮತ್ತು ಊರಿನ ಅಭಿವೃದ್ಧಿಯ ಕಾಳಜಿ, ದೂರದೃಷ್ಟಿ, ಕನಸುಗಳನ್ನು ಹೊಂದಿರುವವರು ಕೆಲಸದ ಮೂಲಕವೇ ‘ಜನಮೆಚ್ಚುವ ಶಿಕ್ಷಕ’ರಾಗುತ್ತಾರೆ. ಅಂಥವರು ವರ್ಗವಾದರೆ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾರೆ. ನಿವೃತ್ತರಾದರೆ ಜನ ಊರು ತುಂಬ ಮೆರವಣಿಗೆ ಮಾಡುತ್ತಾರೆ.
ಒಬ್ಬ ಮೇಷ್ಟ್ರು ಕನಸುಗಾರನಾದರೆ, ಇಡೀ ಊರು ಉದ್ಧಾರವಾಗುತ್ತದೆ. ಭವಿಷ್ಯದ ಜನಾಂಗ ಪ್ರಜ್ವಲಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.