ADVERTISEMENT

ಬಂಡಾಯ ಚಿತ್ರಸಾಹಿತಿ ಗೀತಪ್ರಿಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:05 IST
Last Updated 16 ಜೂನ್ 2018, 9:05 IST

ಕಳೆದ ವಾರ ಬೆಂಗಳೂರಿನಲ್ಲಿ ಒಂದು ಹೃದಯಸ್ಪರ್ಶಿ ಸಮಾರಂಭ ನಡೆಯಿತು. ಕಳೆದ 56 ವರ್ಷಗಳಿಂದ ಚಲನಚಿತ್ರ ಸಾಹಿತಿಯಾಗಿ, ನಿರ್ದೇಶರಾಗಿ, ಪ್ರಾಮಾಣಿಕರಾಗಿ ದುಡಿದಿರುವ ನಿರ್ದೇಶಕ ಗೀತಪ್ರಿಯ ಅವರನ್ನು ಅಭಿಮಾನಿಗಳು ಸನ್ಮಾನಿಸಿದರು. ಜೊತೆಗೆ ಒಂದು ಲಕ್ಷ ರೂಪಾಯಿ ಗೌರವಧನವನ್ನೂ ನೀಡಿದರು.

ರಾಜ್ಯೋತ್ಸವ ಸಮಾರಂಭದಲ್ಲೋ, ಇನ್ನಿತರ ಸಮಾರಂಭದಲ್ಲೋ ಕರೆದು ಹಾರ, ಶಾಲು ಹಾಕಿ ಆಟೋ ಚಾರ್ಜನ್ನೂ ನೀಡದೆ ಮನೆಗೆ ಕಳುಹಿಸುವ ಸಂಪ್ರದಾಯ ಇರುವ ವ್ಯವಸ್ಥೆಯಲ್ಲಿ ಒಂದು ಲಕ್ಷ ಕೊಟ್ಟು ಗೌರವಿಸುವ ಸತ್ಸಂಪ್ರದಾಯ ನಿಜಕ್ಕೂ ಸ್ವಾಗತಾರ್ಹ. ಸುದೀರ್ಘ ಸೇವೆ ಮಾಡಿದ ನಿರ್ದೇಶಕರಿಗೆ ಇಂಥದೊಂದು ಗೌರವ ಈಗ ಬೇಕೇ ಬೇಕು.

ಸನ್ಮಾನ ನಡೆಯುವವರೆಗೂ ಈ ಅಭಿಮಾನಿಗಳು ಯಾರು ಎಂಬುದು ಗೀತಪ್ರಿಯ ಅವರಿಗೆ ಗೊತ್ತೇ ಇರಲಿಲ್ಲವಂತೆ. ಸನ್ಮಾನ ಮಾಡಿದವರು ಹೇಳಿದ್ದು ಒಂದೇ ಮಾತು. ‘ನಿಮ್ಮ ಹಾಡುಗಳನ್ನು ಈಗಲೂ ರೇಡಿಯೋನಲ್ಲಿ ಕೇಳುತ್ತೇವೆ. ಅಂಥ ಅದ್ಭುತ ಹಾಡು ಬರೆದಿದ್ದೀರಲ್ಲಾ.... ಅದಕ್ಕೆ ನಿಮಗೆ ಸನ್ಮಾನಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರಂತೆ.

ಒಬ್ಬ ಕವಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೇನು ಬೇಕು? ಚಿತ್ರಗೀತೆಗಳಲ್ಲಿ ಬಂಡಾಯದ ಬಾವುಟ ಹಾರಿಸಿದ ವ್ಯಕ್ತಿ ಗೀತಪ್ರಿಯ. ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೇ ಆಗಿದೆ. 32 ಚಿತ್ರಗಳ ನಿರ್ದೇಶಕರಾದರೂ, ಅವರ ಗಟ್ಟಿತನ ಕಾಣುವುದು ಪರಿಣಾಮಕಾರಿಯಾದ ಅವರ ಸಾಹಿತ್ಯದಲ್ಲಿ. ಅಂತಹ ಸಾಹಿತ್ಯ ಅವರಲ್ಲಿ ಮೂಡಲು ಸಾಧ್ಯವಾದದ್ದು ಕೂಡ ಅವರು ಜೀವನದಲ್ಲಿ ಅನುಭವಿಸಿದ ಕಷ್ಟಕೋಟಲೆ ಪರಂಪರೆಯಿಂದಲೇ. ಲಕ್ಷ್ಮಣರಾವ್ ಮೋಹಿತೆ (ಗೀತಪ್ರಿಯ) ಅವರ ತಂದೆ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು. ಗೀತಪ್ರಿಯ ಸೀನಿಯರ್ ಇಂಟರ್ ಮೀಡಿಯಟ್ ಓದುವಾಗ ತಂದೆಯ ನಿಧನ. ಇದು ಸಂಸಾರದ ನೊಗವನ್ನು ಅವರ ಮೇಲೆ ಹೊರಿಸಿತು. ಅಂದಿನಿಂದ ಅವರದು ಹೋರಾಟದ ಜೀವನ. ನಾಟಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಚಿಕ್ಕವಯಸ್ಸಿನ ತಂಗಿಯರು. ಶ್ರೀರಾಮಪುರದ ಮನೆಯಲ್ಲಿ ಊದುಬತ್ತಿ ಹೊಸೆಯುವ ಕೆಲಸ.

ರೆಸ್ಟೋರೆಂಟ್ ಒಂದರಲ್ಲಿ ಕ್ಲರ್ಕ್ ಆಗಿ ಸೇರಿದರು. ವೃತ್ತಿರಂಗಭೂಮಿಗೆಂದು ಮದುವೆ ಮಾರ್ಕೆಟ್ ಮತ್ತು ಜನ್ಮಭೂಮಿ ಎಂಬ ಎರಡು ನಾಟಕಗಳನ್ನು ರಚಿಸಿಕೊಟ್ಟರು. ಸಿನಿಮಾಗಳಲ್ಲಿ ಅಭಿನಯಿಸಿದರೆ ಹಣ ಸಂಪಾದನೆ ಮಾಡಬಹುದು ಎಂಬ ಆಸೆಯಿಂದ ಮದರಾಸಿಗೆ ತೆರಳಿದ್ದೂ ಆಯಿತು. ನೃತ್ಯಾಭ್ಯಾಸವೂ ಆಯಿತು. ಹೀರಾಲಾಲ್ ಬಳಿ ನೃತ್ಯ ಕಲಿತು ‘ಪ್ರಿಯರಾಲು’ ಎಂಬ ತೆಲುಗು ಚಿತ್ರದಲ್ಲಿ ನೃತ್ಯ ದೃಶ್ಯದಲ್ಲಿ ಕಾಣಿಸಿಕೊಂಡರು. 1954ರಲ್ಲಿ ‘ಶ್ರೀರಾಮಪೂಜ’ ಚಿತ್ರಕ್ಕೆ ಗೀತೆ ಬರೆಯುವ ಮೂಲಕ ‘ಗೀತಪ್ರಿಯ’ ಎಂದು ಬದಲಾದರು. ಆನಂತರವೇ ಗೀತಪ್ರಿಯರ ಗೀತೆಗಳ

‘ವೈಖರಿ’ ಚಿತ್ರರಂಗದಲ್ಲಿ ಪ್ರಖರವಾಯಿತು.
‘ಭಾಗ್ಯ ಚಕ್ರ’ದಲ್ಲಿ (1956) ಗೀತಪ್ರಿಯ ಬರೆದ ಈ ಗೀತೆಯನ್ನು ಗಮನಿಸಿ:
‘ದೇವ ನಿನ್ನ ರಾಜ್ಯದ ನ್ಯಾಯವಿದೇನಾ?
ಬಡವರ ಈ ಗೋಳ ನೋಡಿ ಗುಡಿಗಳಲ್ಲಿ ಅವಿತೆಯಾ?
ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯಾ?
ಅರ್ಚಕರ ಆಶ್ರಯದಿ ಸ್ವೀಕರಿಸಿ ಪೂಜೆಯಾ
ಮರೆತೆಯೇನು ಬಡವರ ಶೋಕ ಜೀವನ...’

ತೀವ್ರ ಬಡತನದಲ್ಲಿದ್ದಾಗ ಗೀತಪ್ರಿಯ ಬರೆದ ಗೀತೆ ಇದು. ರೆಸ್ಟೋರೆಂಟ್‌ನಲ್ಲಿ ಕೆಲಸ ಮುಗಿಸಿ ಮುನಿರೆಡ್ಡಿ ಪಾಳ್ಯದಲ್ಲಿರುವ ಮನೆಗೆ ನಿರ್ಜನ ರಾತ್ರಿಯಲ್ಲಿ ಹೋಗುವಾಗ ಕಷ್ಟಗಳನ್ನು ನೆನೆಸಿಕೊಂಡು ಬರೆದ ಕಣ್ಣೀರ ಗೀತೆ ಇದು. ಆಗಿನ್ನೂ ವಿಧಾನ ಸೌಧದ ಕಾಮಗಾರಿ ನಡೆಯುತ್ತಿತ್ತಂತೆ. ಅದರ ಮುಂದೆ ಹಾದು ಹೋಗುವಾಗ ಹೊಳೆದ ಸಾಲಿದು. ಸಿನಿಮಾದಲ್ಲಿ ಈ ಹಾಡಿಗೆ ದೇವಸ್ಥಾನದ ದೃಶ್ಯಗಳನ್ನು ತೋರಿಸಿದ್ದರಂತೆ. ಸೆನ್ಸಾರ್ ಅಧಿಕಾರಿ ಹಾಡು ಮತ್ತು ದೇಗುಲದ ದೃಶ್ಯವೆರಡಕ್ಕೂ ಕತ್ತರಿ ಹಾಕುವ ಬೆದರಿಕೆ ಹಾಕಿದರಂತೆ. ಕೊನೆಗೆ ದೇವಸ್ಥಾನದ ದೃಶ್ಯಗಳನ್ನು ತೆಗೆದು ಹಾಡನ್ನಷ್ಟೇ ಉಳಿಸಲಾಯಿತಂತೆ. ಹಾಡು ಅಪಾರ ಜನಪ್ರಿಯವಾಯಿತು. ನಂತರದ ದಿನಗಳಲ್ಲಿ ಗೀತಪ್ರಿಯ ತಮಿಳಿನ ಬಂಡಾಯ ಹಾಡುಗಾರ ಕುಯಿಲನ್, ತೆಲುಗು ಕ್ರಾಂತಿಕಾರಿ ಕವಿ ಶ್ರೀ ಶ್ರೀ ಅವರೊಡನೆ ಕೆಲಸ ಮಾಡಿದ್ದು ಅವರಿಗೆ ಮುಂದಿನ ದಿನಗಳಲ್ಲಿ ದೇವರುಗಳ ಮೇಲೆ ಚಾಲೆಂಜ್ ಮಾಡುವ ಗೀತರಚನೆ ಮಾಡಲು ಹೆಚ್ಚು ಪ್ರೇರೇಪಣೆ ನೀಡಿತು.

ದುಡ್ಡು ಇದ್ರೆ ಜಗವೆಲ್ಲ
ದುಡ್ಡು ಇಲ್ದೆ ಜಗವಿಲ್ಲ
ಹೇದೇವ ನೀನೇತಕೋ?

ಎಂಬ ಹಾಡನ್ನು ಗೀತಪ್ರಿಯ ಬೆಟ್ಟದ ಹುಲಿಗಾಗಿ ಬರೆದಿದ್ದಾರೆ. ‘ನನ್ನ ಮನದಾಳದ ಭಾವನೆಗಳನ್ನು ಸಾಹಿತ್ಯದ ಮೂಲಕ ಪ್ರಕಟಿಸಲು ನನಗೆ ಸ್ವಾತಂತ್ರ್ಯವಿತ್ತು. ಅಂತೆಯೇ ನನ್ನಲ್ಲಿ ಮಡುಗಟ್ಟಿದ ವಿಚಾರಾತ್ಮಕ ವಿಷಯ ರಾಶಿ ಗೀತೆಗಳಲ್ಲಿ ಹೊರಹೊಮ್ಮಿತು’ ಎಂದು ಅಂದಿನ ಗೀತರಚನಕಾರರ ಸ್ವಾತಂತ್ರ್ಯವನ್ನು ಗೀತಪ್ರಿಯ ನೆನಪಿಸಿಕೊಳ್ಳುತ್ತಾರೆ.

ಮೊದಲ ನಿರ್ದೇಶನದ ‘ಮಣ್ಣಿನ ಮಗ’ ಚಿತ್ರದಲ್ಲೂ ಇಂತಹ ಪ್ರಯೋಗವೇ ಗೀತಪ್ರಿಯ ಅವರಿಂದಾಯಿತು. ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯದಿಂದ ಸ್ಫೂರ್ತಿಗೊಂಡು ಮಣ್ಣಿನ ಮಗ ಸಿದ್ಧವಾಯಿತು. ರೈತರ ಜೀವನ, ನಗರ ಸಂಸ್ಕೃತಿಯ ವಿಕೃತಿ ಇವೆಲ್ಲವನ್ನು ‘ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ......’ ಹಾಡಿನ ಮೂಲಕ ಚುಚ್ಚಿದರು. ‘ಭಗವಂತ ಕೈ ಕೊಟ್ಟ ದುಡಿಯೋಕಂತ, ಅದನ್ಯಾಕೆ ಎತ್ತುವೆ ಹೊಡೆಯೋಕಂತ...’ ಎಂದು ಮತ್ತೊಂದು ನೀತಿ ಹೇಳಿದರು. ಇಂತಹ ಹಾಡುಗಳಿಂದ, ಹೊಸ ಕಲ್ಪನೆಯ ಕತೆಯಿಂದ ಜನಪ್ರಿಯವಾದ ‘ಮಣ್ಣಿನ ಮಗ’ ಯಶಸ್ಸು ಗಳಿಸಿತು.

‘ಒಂದೇ ಬಳ್ಳಿಯ ಹೂಗಳು’ ಚಿತ್ರದಲ್ಲಿ ಮಹಮದ್ ರಫಿ ಅವರಿಂದ ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ, ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ?... ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ....’ ಎಂಬ ಹಾಡು, ‘ಅಣ್ಣ ನಿನ್ನ ಸೋದರಿಯನ್ನ.... ಮರೆಯದಿರು ಎಂದೆಂದೂ...’ ಎಂಬ ಹಾಡಂತೂ ಜನಪದವೇ ಆಯಿತು. ಭೂಪತಿ ರಂಗ ಚಿತ್ರದಲ್ಲಿ-

‘ಮಾನವಾ ಮಾನವಾ ನಾಗರೀಕ ಮಾನವಾ,
ಗಗನದಲ್ಲಿ ಮೇಲೆ ಮೇಲೆ ಹಾರುವುದನು ಕಲಿತೆ
ನೀರಿನಲ್ಲಿ ಮೀನಿನಂತೆ ಈಜುವುದನು ಕಲಿತೆ
ಭೂಮಿಯಲ್ಲಿ ಬಾಳುವುದನು ಕಲಿಯಲಿಲ್ಲವೇಕೆ?’
ಎಂದು ಪ್ರಶ್ನಿಸುತ್ತಾರೆ.
ಆಸೆಯು ಜೊತೆಯಲಿ ಹೆಣೆದಿರೆ ಬಾಳು
ಅದಕೇ ಜೀವನದಲಿ ಈ ಗೋಳು’

ಎಂದು ‘ಮಕ್ಕಳೇ ಮನೆಗೆ ಮಾಣಿಕ್ಯ’ ಚಿತ್ರದಲ್ಲಿ ಹೇಳುತ್ತಾರೆ. ‘ಎಲ್ಲಾರ್ನ್‌ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದಿ’ ಎಂದು ‘ಬೆಳುವಲದ ಮಡಿಲಲ್ಲಿ’ ಚಾಲೆಂಜ್ ಮಾಡುತ್ತಾರೆ. ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು’ ಎಂಬ ಮಾತುಗಳನ್ನು ‘ಹೊಂಬಿಸಿಲು’ ಚಿತ್ರದ ಗೀತೆಯಲ್ಲಿ ಬರೆದಿದ್ದಾರೆ.

ಗೀತೆಗಳಲ್ಲಿ ಬಂಡಾಯದ ದನಿ ಮೆರೆದಂತೆಯೇ ನಿರ್ದೇಶನದಲ್ಲೂ ಗೀತಪ್ರಿಯ ಅವರ ವಿಶಿಷ್ಟ ಪ್ರಯೋಗಗಳನ್ನು ಗಮನಿಸಲೇಬೇಕು. ಅವರ ನಿರ್ದೇಶನದ ಎರಡನೇ ಚಿತ್ರ ‘ಕಾಡಿನ ರಹಸ್ಯ’ ಟಾರ್ಜಾನ್ ಚಿತ್ರ. ‘ಯಾವ ಜನ್ಮದ ಮೈತ್ರಿ’ (1972) ಅತ್ಯಂತ ಜನಪ್ರಿಯಗೊಂಡು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ರೀಮೇಕ್ ಆಗಿ ಅಪಾರ ಜನಪ್ರಿಯತೆ ಪಡೆಯಿತು. ಅವರ ಬಹುತೇಕ ಎಲ್ಲ ಚಿತ್ರಗಳೂ ಕಾದಂಬರಿ ಆಧಾರಿತ ಎನ್ನುವುದೂ ಒಂದು ವಿಶೇಷವೇ.

‘ನಾರಿ ಮುನಿದರೆ ಮಾರಿ’ ಚಿತ್ರದಲ್ಲಿ ಕಲ್ಪನಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ನಿರೂಪಣೆಯಿಂದ ಚಿತ್ರ ಯಶಸ್ಸಾಯಿತು. (ಇದೇ ರೀತಿಯ ಕತೆಯನ್ನಾಧರಿಸಿ ಮುಂದೆ ‘ಸೀತಾ ರಾಮು’ ಎಂಬ ಸಿನಿಮಾ ನಿರ್ಮಾಣವಾಯಿತು). ಚಲನಚಿತ್ರ ವಾಣಿಜ್ಯ ಮಂಡಳಿಯ ಇಂದಿನ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹೀರೋ ಆಗಿ ಅಭಿನಯಿಸಿದ್ದ ‘ಅನುರಾಗ ಬಂಧನ’ ಚಿತ್ರವನ್ನು ಗೀತಪ್ರಿಯ ಅವರೇ ನಿರ್ದೇಶಿಸಿದ್ದರು. 1978ರಲ್ಲಿ ‘ಪುಟಾಣಿ ಏಜೆಂಟ್ಸ್ 1-2-3’ ಚಿತ್ರ ನಿರ್ದೇಶಿಸುವುದರೊಂದಿಗೆ ಕನ್ನಡದಲ್ಲಿ ಮಕ್ಕಳ ಚಿತ್ರದ ಟ್ರೆಂಡನ್ನು ಪುನರಾರಂಭಿಸಿದರು.

‘ಬೆಸುಗೆ’ ಒಂದು ಯಶಸ್ವಿ ಚಿತ್ರ. ಈ ಚಿತ್ರದಲ್ಲಿ ಬರುವ ‘ಬೆಸುಗೆ... ಬೆಸುಗೆ... ಬೆಸುಗೆ...’ ಎಂಬ ಹಾಡು ಜನಪದವೇ ಆಯಿತು. ಬೆಸುಗೆ ಎನ್ನುವ ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎನ್ನುವ ‘ಕ್ವಿಜ್’ ಕೂಡ ಸಿನಿಪ್ರಿಯರ ನಡುವೆ ನಡೆಯುವಷ್ಟು ಈ ಹಾಡು ಜನಪ್ರಿಯವಾಯಿತು. ‘ಶುಭ ಮುಹೂರ್ತ’ ಚಿತ್ರದ ಮೂಲಕ ಕಲ್ಯಾಣ ಕುಮಾರ್ ಅವರಿಗೆ ರೀಎಂಟ್ರಿ ನೀಡಿದ್ದೂ ಗೀತಪ್ರಿಯ. ನಿರ್ದೇಶನದಲ್ಲೂ, ಸಾಹಿತ್ಯ, ಗೀತೆ ರಚನೆಯಲ್ಲೂ ಇಂದಿಗೂ ಗೀತಪ್ರಿಯ ಎಲ್ಲರಿಗೂ ಪ್ರಿಯ.

ವಾಸ್ತು ಪ್ರಕಾರ ಮನೆ ಕಟ್ಟು
ಕುಬೇರ ಮೂಲೇಲಿ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೋಗಿ ಮಲಕ್ಕೋ...
ಎಂಬಂತಹ ಹಾಡುಗಳ ರಚನೆಯಾಗುತ್ತಿರುವ ಕಾಲದಲ್ಲಿ-
ಮನುಜರು ಮನುಜರ ಹಾದಿಯಲಿ
ಮುಳ್ಳನು ಹಾಸಿ ಮೆರೆಯುವನು
ಆಸೆಯಿಂದ ಮನೆ ಕಟ್ಟಿ
ಕಡೆಗೆ ಮಣ್ಣಲಿ ಮಲಗುವನು.
ಎನ್ನುವ ಗೀತಪ್ರಿಯರ ಮಾನವಪ್ರೀತಿಯ ಹಾಡು ಎಷ್ಟು ಚೆನ್ನ ನೋಡಿ. g

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.