ADVERTISEMENT

ಆಂಡ್ರಾಯಿಡ್‌ನಲ್ಲಿ ಕನ್ನಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:57 IST
Last Updated 16 ಜೂನ್ 2018, 8:57 IST

ನನಗೆ ಬರುವ ಹಲವು ಇಮೇಲ್‌ಗಳಲ್ಲಿ ಕೆಲವುಗಳ ಕೋರಿಕೆ ಬಹುತೇಕ ಒಂದೇ ಆಗಿರುತ್ತದೆ. ನಾನು ಇಂತಹ ಆಂಡ್ರಾಯಿಡ್‌ ಫೋನ್ ಕೊಂಡುಕೊಂಡಿದ್ದೇನೆ. ಇದರಲ್ಲಿ ಕನ್ನಡ ಮೂಡಿಸುವುದು ಹೇಗೆ? ಎಂದು. ಇದಕ್ಕೆ ಈ ಬಾರಿ ಉತ್ತರ ನೀಡಲು ಪ್ರಯತ್ನಿಸುತ್ತಿದ್ದೇನೆ. ಇನ್ನೂ ಕೆಲವರು ಕೇಳುವ ಪ್ರಶ್ನೆ ಉತ್ತರಿಸಲು ಸ್ವಲ್ಪ ಕಷ್ಟಕರವಾದುದು - ಇಂತಹ ಫೋನಿನಲ್ಲಿ ಕನ್ನಡದ ಬೆಂಬಲ ಇದೆಯೇ ಎಂದು.

ಎಲ್ಲರಲ್ಲಿಯೂ ಒಂದು ಕೋರಿಕೆ. ನೀವು ಅಂಗಡಿಯಲ್ಲಿ ಫೋನ್ ಕೊಳ್ಳುವಾಗ -ಕೊಳ್ಳುವ ಫೋನಿನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಮೂಡಿಬರುತ್ತದೆಯೇ? ಕನ್ನಡವನ್ನು ಊಡಿಸಬಹುದೇ? ಕನ್ನಡದಲ್ಲಿ ಎಸ್‌ಎಂಎಸ್ ಕಳುಹಿಸಬಹುದೇ? -ಇತ್ಯಾದಿ ಪ್ರಶ್ನೆಗಳನ್ನು ಅಂಗಡಿಯಾತನಿಗೆ ಕೇಳಿರಿ. ಫೋನ್ ಕೊಂಡ ನಂತರ ಫೋನ್ ತಯಾರಕರ ಗ್ರಾಹಕ ಸೇವೆಗೆ ಫೋನ್ ಮಾಡಿ ಅಥವಾ ಇಮೇಲ್ ಮಾಡಿ ಇವೇ ಪ್ರಶ್ನೆಗಳನ್ನು ಕೇಳಿ. ಹೀಗೆ ಎಲ್ಲರೂ ಮತ್ತೆ ಮತ್ತೆ ಕೇಳಿದರೆ ಆಗ ಫೋನ್ ತಯಾರಕರಿಗೆ ಎಚ್ಚರವಾಗುತ್ತದೆ. ಕನ್ನಡಕ್ಕೂ ಮಾರುಕಟ್ಟೆ ಇದೆ ಎಂದು ಗೊತ್ತಾಗುತ್ತದೆ. ನಂತರ ಎಲ್ಲ ಫೋನ್‌ಗಳೂ ಕನ್ನಡಮಯವಾಗುತ್ತವೆ. ಹೀಗೆ ಮಾಡುತ್ತೀರಿ ತಾನೆ?

ಗಣಕದಲ್ಲಿ ಇರಲಿ, ಸ್ಮಾರ್ಟ್‌ಫೋನಿನಲ್ಲಿರಲಿ, ಕನ್ನಡದ ಬೆಂಬಲ ಮೂರು ಹಂತಗಳಲ್ಲಿರುತ್ತದೆ. ಅವುಗಳೆಂದರೆ – ಕನ್ನಡ ಅಕ್ಷರಗಳ ಸೂಕ್ತ ತೋರುವಿಕೆ (ರೆಂಡರಿಂಗ್), ಕನ್ನಡವನ್ನು ಊಡಿಸಲು ಸವಲತ್ತು (ಕೀಲಿಮಣೆ ಅರ್ಥಾತ್  ಕೀಬೋರ್ಡ್) ಮತ್ತು ಕನ್ನಡದಲ್ಲೇ ಮೆನು (ಯೂಸರ್ ಇಂಟರ್‌ಫೇಸ್). ಕನ್ನಡದ ಯೂಸರ್ ಇಂಟರ್‌ಫೇಸ್ ನೀಡುತ್ತಿರುವ ಆಂಡ್ರಾಯಿಡ್‌ ಫೋನ್ ಇಲ್ಲವೇ ಇಲ್ಲ ಎನ್ನಬಹುದು. ಹಲವು ಸ್ಮಾರ್ಟ್‌ಫೋನ್‌ಗಳು ಮೊದಲನೆಯವನ್ನು ನೀಡುತ್ತಿವೆ. ಅಂದರೆ ಆ ಫೋನ್‌ಗಳಲ್ಲಿ ಕನ್ನಡದ ಪಠ್ಯವನ್ನು ಓದಬಹುದು.

ಆಂಡ್ರಾಯಿಡ್‌ ಆವೃತ್ತಿ 4.1 ಮತ್ತು ನಂತರದವುಗಳಲ್ಲಿ ಕನ್ನಡದ ರೆಂಡರಿಂಗ್ ಇರತಕ್ಕದ್ದು. ಆದರೂ ಕೆಲವು ತಯಾರಕರು ಕನ್ನಡದ ಸೌಲಭ್ಯವನ್ನು ಸರಿಯಾಗಿ ನೀಡಿರುವುದಿಲ್ಲ. ಕನ್ನಡದ ರೆಂಡರಿಂಗ್ ಸರಿಯಾಗಿರುವ ಫೋನ್‌ಗಳಿಗೆ ಕನ್ನಡವನ್ನು ಊಡಿಸಲು ಹಲವು ಕೀಲಿಮಣೆಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವು – ಎನಿಸಾಫ್ಟ್‌ಕೀಬೋರ್ಡ್ ಮತ್ತು ಅದಕ್ಕೆ ಕನ್ನಡ, ಜಸ್ಟ್‌ಕನ್ನಡ, ಪದ, ಸ್ಪರ್ಶ, ಮಲ್ಟಿಲಿಂಗ್, ಪಾಣಿನಿ, ಲಿಪಿಕಾರ್ ಇತ್ಯಾದಿ. ಪೂರ್ತಿ ಪಟ್ಟಿಯನ್ನು ವಿಕಾಸ ಹೆಗಡೆ ತಮ್ಮ ಬ್ಲಾಗಿನಲ್ಲಿ ನೀಡಿದ್ದಾರೆ (vikasavada.blogspot.in).

ಇಷ್ಟೆಲ್ಲ ಕೀಲಿಮಣೆಯ ಸೌಲಭ್ಯಗಳಿರುವಾಗ ಅವುಗಳಲ್ಲಿ ಯಾವುದು ಉತ್ತಮ ಅಥವಾ ಯಾವುದನ್ನು ಬಳಸಬಹುದು? ಈ ಪ್ರಶ್ನೆಗೆ ಉತ್ತರ ನಿಮಗಿಷ್ಟವಾದುದನ್ನು ಬಳಸಿ ಎಂಬುದು. ಈ ಲೇಖನದಲ್ಲಿ ನಾನು ಎನಿಸಾಫ್ಟ್ ಕೀಬೋರ್ಡ್ ಬಗ್ಗೆ ವಿವರಣಾತ್ಮಕವಾಗಿ ಬರೆಯುತ್ತಿದ್ದೇನೆ. ಇದೇ ಯಾಕೆ? ಎರಡು ಪ್ರಮುಖ ಕಾರಣಗಳು – ನಾನು ಇದನ್ನೇ ಬಳಸುತ್ತಿರುವುದು ಮೊದಲನೆಯದು. ಎರಡನೆಯದಾಗಿ ಇದರಲ್ಲಿ ZWJ ಮತ್ತು ZWNJ ಎಂಬ ಎರಡು ಅಕ್ಷರಗಳನ್ನು ಊಡಿಸುವ ಸೌಲಭ್ಯ ಇದೆ. ಇವುಗಳು ಸಾಫ್ಟ್‌ವೇರ್, ರ್‍ಯಾಲಿ ಬರೆಯುವಾಗ ಅಗತ್ಯವಿವೆ. ಇನ್ನೂ ಒಂದು, ಅಷ್ಟೇನೂ ಪ್ರಮುಖವಲ್ಲದ ಕಾರಣವಿದೆ. ಎನಿಸಾಫ್ಟ್‌ಗೆ ದೇವನಾಗರಿ, ತಮಿಳು, ತೆಲುಗು ಇತ್ಯಾದಿ ಲಿಪಿಗಳ ಕೀಲಿಮಣೆಗಳನ್ನೂ ಸೇರಿಸಿಕೊಳ್ಳಬಹುದು. 

ನಿಮ್ಮ ಫೋನಿನಲ್ಲಿ ಕನ್ನಡದ ಕೀಲಿಮಣೆ ಅಳವಡಿಸಿಕೊಳ್ಳುವ ಮೊದಲು ನೀವು ಮಾಡಬೇಕಾದುದು ಏನೆಂದರೆ ಅದರಲ್ಲಿ ಕನ್ನಡ ಪಠ್ಯದ ಸರಿಯಾದ ತೋರುವಿಕೆ (ರೆಂಡರಿಂಗ್) ಇದೆಯೇ ಎಂಬುದು. ಇದನ್ನು ಎರಡು ಹಂತಗಳಲ್ಲಿ ಪರೀಕ್ಷಿಸಬೇಕು. ಮೊದಲನೆಯದಾಗಿ ಬ್ರೌಸರ್‌ನ ಕಿರುತಂತ್ರಾಂಶ (ಆಪ್) ತೆರೆಯಿರಿ. ಅದರಲ್ಲಿ ಕನ್ನಡದ ಯಾವುದಾದರೂ ಜಾಲತಾಣ (ಉದಾ – prajavani.net) ತೆರೆಯಿರಿ. ಈ ಜಾಲತಾಣ ಯುನಿಕೋಡ್‌ನಲ್ಲಿರತಕ್ಕದ್ದು. ಜಾಲತಾಣದಲ್ಲಿನ ಕನ್ನಡ ಅಕ್ಷರಗಳು ಸರಿಯಾಗಿ ಮೂಡಿಬರುತ್ತಿವೆಯೇ ಎಂಬುದನ್ನು ಗಮನಿಸಿ. ಎರಡನೆಯದಾಗಿ ಎಸ್‌ಎಂಎಸ್‌ನಲ್ಲಿ ಕನ್ನಡ ಮೂಡಿಬರುತ್ತಿದೆಯೇ ಎಂಬುದನ್ನು ಪರೀಕ್ಷಿಸುವುದು. ಇದಕ್ಕಾಗಿ ಕನ್ನಡದ ಸೌಲಭ್ಯ ಇರುವ ನಿಮ್ಮ ಸ್ನೇಹಿತರಿಗೆ ಹೇಳಿ ನಿಮ್ಮ ಫೋನಿಗೆ ಕನ್ನಡ ಅಕ್ಷರಗಳಲ್ಲಿ ಸಂದೇಶ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡದ ಸಂದೇಶ ಅಲ್ಲ) ಕಳುಹಿಸಲು ಹೇಳಿ. ಅದು ಸರಿಯಾಗಿ ಮೂಡಿಬರುತ್ತಿದೆ ಎಂದಾದಲ್ಲಿ ನೀವು ಕನ್ನಡದ ಕೀಲಿಮಣೆ ಹಾಕಿಕೊಂಡು ಕನ್ನಡವನ್ನು ಊಡಿಸಬಹುದು. ಅದು ಹೇಗೆ ಎಂಬುದನ್ನು ಈಗ ತಿಳಿಯೋಣ.

ಗೂಗ್ಲ್ ಪ್ಲೇ ಸ್ಟೋರ್‌ನಿಂದ Anysoftkeyboard ಮತ್ತು Kannada for Anysoftkeyboard ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಫೋನಿನ ಸೆಟಿಂಗ್ಸ್‌ಗೆ ಹೋಗಿ. ಅಲ್ಲಿ ನೀಡಿರುವ ಹಲವು ಆಯ್ಕೆಗಳಲ್ಲಿ Language and input ಎಂಬುದನ್ನು ಪತ್ತೆಹಚ್ಚಿ ಅದನ್ನು ಆಯ್ಕೆ ಮಾಡಿ. ಅಲ್ಲಿ ಕಂಡುಬರುವ ಕೀಲಿಮಣೆಗಳಲ್ಲಿ AnySoftKeyboard ಎಂದು ಬರೆದಿರುವುದರ ಪಕ್ಕದಲ್ಲಿ ಕಂಡುಬರುವ ಚಿಕ್ಕ ಚೌಕದ ಮೇಲೆ ಕ್ಲಿಕ್ ಮಾಡುವ ಮೂಲಕ ಅದನ್ನು ಆಯ್ಕೆ ಮಾಡಿಕೊಳ್ಳಿ. ಅದೇ ಸ್ಕ್ರೀನ್‌ನಲ್ಲಿ ಕಂಡುಬರುವ Default ಎಂದು ಬರೆದ ಪಠ್ಯದ ಮೇಲೆ ಕ್ಲಿಕ್ ಮಾಡಿ. ಈಗ ಮೂಡಿಬಂದ ಆಯ್ಕೆಗಳಲ್ಲಿ AnySoftKeyboard ಅನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಈಗ Default ಕೆಳಗಡೆ AnySoftKeyboard ಎಂದಿರಬೇಕು.

ಈಗ ನೀವು ಕನ್ನಡದ ಕೀಲಿಮಣೆಯನ್ನು ಬಳಸಿ ಬೆರಳಚ್ಚು ಮಾಡಬಹುದು. ಯಾವುದಾದರೂ ಆಪ್ ತೆರೆಯಿರಿ. ಎಸ್‌ಎಂಎಸ್ ಕೂಡ ಆಗಬಹುದು. ಅದರಲ್ಲಿ ಪಠ್ಯ ಊಡಿಸುವ ಜಾಗದಲ್ಲಿ ಒತ್ತಿದರೆ ಕೀಲಿಮಣೆ ಮೂಡಿಬರುತ್ತದೆ. ಕೀಲಿಮಣೆ ಪ್ರಾರಂಭದಲ್ಲಿ ಇಂಗ್ಲಿಷ್‌ನಲ್ಲಿರುತ್ತದೆ. ಕೀಲಿಮಣೆಯ ಮೇಲೆ ಬಲಗಡೆಯಲ್ಲಿ ‘ಕನ್ನಡ’ ಎಂದು ಕಂಡುಬರುವಲ್ಲಿ ಒತ್ತಿ. ಈಗ ಕೀಲಿಮಣೆ ಕನ್ನಡಕ್ಕೆ ಬದಲಾಗಿರುತ್ತದೆ. ಈ ಕೀಲಿಮಣೆ ವಿನ್ಯಾಸ (keyboard layout) ಭಾರತೀಯ ಭಾಷೆಗಳನ್ನು ಪ್ರಪ್ರಥಮ ಬಾರಿಗೆ ಗಣಕದಲ್ಲಿ ಅಳವಡಿಸಿದ ಖ್ಯಾತಿಯ ಕೆ.ಪಿ. ರಾವ್ ಅವರು ತಯಾರಿಸಿರುವ ವಿನ್ಯಾಸ ಆಗಿರುತ್ತದೆ. ಇದನ್ನೇ ನುಡಿ ತಂತ್ರಾಂಶದಲ್ಲಿ ಅಳವಡಿಸಿರುವ ಕಾರಣ ಹಲವು ಮಂದಿ ಇದನ್ನು ನುಡಿ ಕೀಲಿಮಣೆ ವಿನ್ಯಾಸ ಎಂದು ಕರೆಯುತ್ತಾರೆ. ಇದು ಬಳಸಲು ತುಂಬ ಸರಳವಾಗಿದೆ. ಗಣಕದಲ್ಲಿ ಶಿಫ್ಟ್ ಕೀ ಒತ್ತಿ ಹೆಚ್ಚಿನ ಅಕ್ಷರಗಳನ್ನು ಪಡೆಯಬಹದು. ಆಂಡ್ರಾಯಿಡ್‌ನಲ್ಲಿ ನೀವು ‘ಕ’ ಎಂದು ಬರೆದ ಅಕ್ಷರವನ್ನು ಒತ್ತಿ ಹಿಡಿದುಕೊಂಡರೆ ನಿಮಗೆ ‘ಕ’ ಮತ್ತು ‘ಖ’ ಎಂಬ ಆಯ್ಕೆಗಳು ಕಾಣಿಸುತ್ತವೆ. ಈ ರೀತಿಯಲ್ಲಿ ನೀವು ‘ಖ’ ಪಡೆಯಬಹುದು. ಕೆಲವು ಅಕ್ಷರಗಳನ್ನು ಒತ್ತಿ ಹಿಡಿದುಕೊಂಡರೆ ಹಲವು ಆಯ್ಕೆಗಳು ಕಾಣಿಸುತ್ತವೆ. ಉದಾಹರಣೆಗೆ ‘ಒ’. ಇದನ್ನು ಒತ್ತಿ ಹಿಡಿದರೆ ‘ಒ’, ‘ಓ’ ಜೊತೆ ಇವುಗಳ ಸ್ವರ ಚಿಹ್ನೆಗಳೂ ಕಾಣಿಸುತ್ತವೆ.  

ಈ ಕೀಲಿಮಣೆಯ ಕೆಳಗಡೆ ಎಡ ಮೂಲೆಯಲ್ಲಿ zwnj ಎಂದು ಬರೆದುದನ್ನು ಕಾಣಬಹುದು. ಇದನ್ನು ಒತ್ತಿಹಿಡಿದುಕೊಂಡರೆ zwj ದೊರೆಯುತ್ತದೆ. ಯುನಿಕೋಡ್‌ನಲ್ಲಿ ಇವು ಎರಡು ವಿಶೇಷ ಅಕ್ಷರಗಳು. “ಸಾಫ್ಟ್‌ವೇರ್’, ‘ರ್‍ಯಾಲಿ’ ಇತ್ಯಾದಿ ಬರೆಯಲು ಇವುಗಳ ಬಳಕೆ ಆಗುತ್ತದೆ. ‘ಸಾಫ್ಟ್‌ವೇರ್’ ಎಂದು ಊಡಿಸಬೇಕಾದರೆ ‘ಸಾಫ್ಟ್‌’ ಟೈಪ್ ಮಾಡಿದ ನಂತರ zwnj ಟೈಪ್ ಮಾಡಿ ನಂತರ ‘ವೇರ್’ ಟೈಪ್ ಮಾಡಿ. ‍‘ರ್‍ಯ’ ಪಡೆಯಬೇಕಿದ್ದರೆ ‘ರ್’ ನಂತರ zwj ಟೈಪ್ ಮಾಡಿ ನಂತರ ‘ಯ’ ಟೈಪ್ ಮಾಡಿ.

ಎನಿಸಾಫ್ಟ್‌ಗೆ ಈ ಕನ್ನಡದ ಕೀಲಿಮಣೆ ವಿನ್ಯಾಸ ಅಳವಡಿಸಿದ ಶ್ರೀಧರ್ ಅವರೇ ತಯಾರಿಸಿದ ಜಸ್ಟ್‌ಕನ್ನಡ ಕೀಲಿಮಣೆ ಕೂಡ ಇದೇ ರೀತಿ ಕೆಲಸ ಮಾಡುತ್ತದೆ. ಅದನ್ನೂ ಬಳಸಬಹುದು. ನಿಮ್ಮ ಫೋನಿನಲ್ಲಿ ಕನ್ನಡದ ರೆಂಡರಿಂಗ್ ಇದೆ ಎಂದಾದಲ್ಲಿ ಕನ್ನಡದ ಕೀಲಿಮಣೆ ಹಾಕಿಕೊಂಡು ಕನ್ನಡದಲ್ಲೇ ಸಂದೇಶ ಕಳುಹಿಸಿ, ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಪ್‌ಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಿ. 

ವಾರದ ಆಪ್ (app)
ವಿಕಿಪೀಡಿಯ ಬೀಟ

ಜಗತ್ತಿನ ಅತಿ ಜನಪ್ರಿಯ ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ ಗೊತ್ತು ತಾನೆ? ಅದನ್ನು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಓದಬಹುದು. ನಿಮ್ಮ ಆಂಡ್ರಾಯಿಡ್‌ ಫೋನ್ ಬಳಸಿ ಅದರಲ್ಲಿಯ ಲೇಖನಗಳನ್ನು ಸಂಪಾದನೆ ಕೂಡ ಮಾಡಬಹುದು. ಅದಕ್ಕಾಗಿ ಈಗ ಒಂದು ಕಿರುತಂತ್ರಾಂಶ (ಆಪ್) ದೊರೆಯುತ್ತಿದೆ. ಈ ವಿಕಿಪೀಡಿಯ ಬೀಟ (Wikipedia Beta) ಕಿರುತಂತ್ರಾಂಶವನ್ನು ಆಂಡ್ರಾಯಿಡ್‌ ಸ್ಮಾರ್ಟ್‌ಫೋನಿನಲ್ಲಿ ಬಳಸಬಹುದು. ವಿಕಿಪೀಡಿಯದ ಲೇಖನಗಳನ್ನು ಓದುವುದು, ಪರಿವಿಡಿ ಬಳಸಿ ಲೇಖನದ ಭಾಗಗಳಿಗೆ ಲಂಘನ ಮಾಡುವುದು, ಎಲ್ಲ ಮಾಡಬಹುದು. ಎಲ್ಲಕ್ಕಿಂತ ವಿಶೇಷ ಎಂದರೆ ಲೇಖನಗಳನ್ನು ಸಂಪಾದನೆ ಮಾಡಬಹುದು ಎನ್ನುವುದು. ಆದರೆ ಇದರಲ್ಲಿ ವಿಕಿಪೀಡಿಯದಲ್ಲೇ ಅಡಕವಾಗಿರುವ ಕನ್ನಡದ ಕೀಲಿಮಣೆ ಕೆಲಸ ಮಾಡುವುದಿಲ್ಲ. ನಿಮ್ಮ ಆಂಡ್ರಾಯಿಡ್‌ ಫೋನಿನಲ್ಲೇ ಇರುವ ಕನ್ನಡದ ಕೀಲಿಮಣೆ ಬಳಸಬಹುದು.

ಗ್ಯಾಜೆಟ್ ಸುದ್ದಿ
ಅತಿ ಕಡಿಮೆ ಬೆಲೆಯ ಆಂಡ್ರಾಯಿಡ್‌ ಫೋನ್

ಭಾರತದ ಸೆಲ್‌ಕಾನ್ ಕಂಪೆನಿ ಎ35ಕೆ (A35K) ಎಂಬ ಹೆಸರಿನ ಅತ್ಯಂತ ಕಡಿಮೆ ಬೆಲೆಯ ಆಂಡ್ರಾಯಿಡ್‌ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು snapdeal.com ಜಾಲತಾಣದಲ್ಲಿ ಮಾತ್ರ ಲಭ್ಯ. 1 ಗಿಗಾಹರ್ಟ್ಸ್ ಪ್ರೊಸೆಸರ್, 3.2 ಮೆಗಾಪಿಕ್ಸೆಲ್ ಕ್ಯಾಮೆರಾ, 3ಜಿ, ವೈಫೈ, ಬ್ಲೂಟೂತ್, ಆಂಡ್ರಾಯಿಡ್‌ ಕಿಟ್‌ಕ್ಯಾಟ್ (4.4), 1400 mAH ಬ್ಯಾಟರಿ, 8.9 ಸೆ.ಮೀ. (3.5 ಇಂಚು) ಪರದೆ ಇತ್ಯಾದಿ ಗುಣವೈಶಿಷ್ಟ್ಯಗಳ ಈ ಫೋನಿನ ಮೆಮೊರಿ ಕೇವಲ 512 ಮೆಗಾಬೈಟ್. ಹೆಚ್ಚಿಗೆ ಮೆಮೊರಿಗೆ ಮೈಕ್ರೋಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯವಿದೆ. ಇದರ ಬೆಲೆ ಕೇವಲ ₹2,999. ಈ ಫೋನಿನಲ್ಲಿ ಕನ್ನಡದ ಸೌಲಭ್ಯವಿಲ್ಲ. ಹಿಂದಿ, ತಮಿಳು, ಬಾಂಗ್ಲಾ, ತೆಲುಗು ಭಾಷೆಗಳಿವೆ.

ADVERTISEMENT

ಗ್ಯಾಜೆಟ್ ತರ್ಲೆ
ಜೋಕುಗಳಲ್ಲೂ ಹಲವು ಕಾಲಘಟ್ಟಗಳಿವೆ. ಸಂತಾ-ಬಂತಾ ಕಾಲ ಮುಗಿದು ರಜನೀಕಾಂತ್ ಜೋಕುಗಳ ಕಾಲ ಮುಗಿದು ಈಗ ಅಲಿಯಾ ಭಟ್ ಜೋಕುಗಳ ಕಾಲ. ಅಲಿಯಾ ಭಟ್ ಜೋಕುಗಳು ಟ್ವಿಟ್ಟರ್ ಮತ್ತು ವಾಟ್ಸ್‌ಆಪ್‌ಗಳಲ್ಲಿ ತುಂಬ ಜನಪ್ರಿಯವಾಗಿವೆ. ಒಂದರೆಡು ಸ್ಯಾಂಪಲ್‌ಗಳು:

1.ಪ್ರ: ನಿನಗೆ ಮೈಕ್ರೋಸಾಫ್ಟ್ ಆಫೀಸ್ ಗೊತ್ತಿದೆಯೇ?
ಅಲಿಯಾ ಭಟ್: ವಿಳಾಸ ನೀಡಿದರೆ ಅಲ್ಲಿಗೆ ಹೋಗಬಲ್ಲೆ.
2. ಅಲಿಯಾ ಭಟ್‌ ಒಮ್ಮೆ ತನ್ನ ವಾಟ್ಸ್‌ಆಪ್ ಪಾಸ್‌ವರ್ಡ್ ಮರೆತಳಂತೆ. ಆಗ ಆಕೆ ತನ್ನ ಪಾಸ್‌ವರ್ಡ್‌ ಅನ್ನು ಗೂಗ್ಲ್‌ನಲ್ಲಿ ಹುಡುಕಿದಳಂತೆ.
3.ದೀಪಿಕಾ: ನನ್ನ ಚೆನ್ನೈ ಎಕ್ಸ್‌ಪ್ರೆಸ್ ನೋಡಲು ಬರುತ್ತೀಯಾ?
ಅಲಿಯಾ ಭಟ್: ನನ್ನ ಮೊಬೈಲ್‌ನಲ್ಲಿ IRCTC ಆಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಗ್ಯಾಜೆಟ್ ಸಲಹೆ
ಮೋಹನ ಪ್ರಕಾಶರ ಪ್ರಶ್ನೆ:
ನಾನು ಸೋನಿ ಕ್ಯಾಮೆರಾದಲ್ಲಿ ವಿಡಿಯೊ ಶೂಟಿಂಗ್ ಮಾಡಿದ್ದೇನೆ. ಅದನ್ನು ಕಂಪ್ಯೂಟರಿಗೆ ಪ್ರತಿ ಮಾಡಿಕೊಂಡು ವೀಕ್ಷಿಸುವಾಗ ಅದು 90 ಡಿಗ್ರಿ ತಿರುಗಿದೆ. ಅದನ್ನು ಸರಿಯಾಗುವಂತೆ ತಿರುಗಿಸುವುದು ಹೇಗೆ? ಸ್ಥಿರ ಚಿತ್ರಗಳನ್ನು ತಿರುಗಿಸುವುದು ಹೇಗೆ ಎಂದು ನನಗೆ ತಿಳಿದಿದೆ. ಆದರೆ ವಿಡಿಯೊ ತಿರುಗಿಸುವುದು ಹೇಗೆ?

ಉ: ಕೇವಲ ವೀಕ್ಷಣೆಗಾಗಿಯಾದರೆ ನೀವು ವಿಎಲ್‌ಸಿ ಪ್ಲೇಯರ್ ಬಳಸಬಹುದು. ಶಾಶ್ವತವಾಗಿ ವಿಡಿಯೊವನ್ನು ತಿರುಗಿಸಬೇಕಾದರೆ ವಿಂಡೋಸ್ ಲೈವ್ ಮೂವೀ ಮೇಕರ್ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.