ಚೈನಾ ದೇಶ ಎಲೆಕ್ಟ್ರಾನಿಕ್ ಯಂತ್ರಾಂಶ ತಯಾರಿಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ. ಐಫೋನ್ ಸೇರಿದಂತೆ ಬಹುತೇಕ ಎಲ್ಲ ಕಂಪೆನಿಗಳೂ ತಮ್ಮ ಉತ್ಪನ್ನಗಳ ಮೂಲ ಯಂತ್ರಭಾಗಗಳನ್ನು ಚೈನಾದಲ್ಲೇ ತಯಾರಿಸುವುದು. ಹೀಗಾಗಿ ಚೈನಾ ದೇಶದಲ್ಲಿ ಫೋನ್ ತಯಾರಿಕಾ ಕಂಪೆನಿಗಳು ಬೇಕಾದಷ್ಟಿವೆ. ಅಂತಹ ಒಂದು ಕಂಪೆನಿ ಒಪ್ಪೊ. ಇದು 2008ರಿಂದಲೇ ಫೋನ್ ತಯಾರಿಸುತ್ತಿದೆ. ಚೈನಾದ ಮಾರುಕಟ್ಟೆಯ ಸುಮಾರು 15% ಭಾಗವನ್ನು ಇದು ಕಬಳಿಸಿದೆ. ತಿರುಗಬಲ್ಲ ಕ್ಯಾಮೆರಾವನ್ನು ಒಳಗೊಂಡ ಆಂಡ್ರಾಯ್ಡ್ ಫೋನನ್ನು ಮೊದಲ ಬಾರಿಗೆ ತಯಾರಿಸಿದ್ದು ಒಪ್ಪೊ ಕಂಪೆನಿ. ಭಾರತದಲ್ಲೂ ಅವರ ಫೋನ್‌ಗಳು ಲಭ್ಯವಿವೆ. ಒಪ್ಪೊ ಜಾಯ್ 3 (Oppo Joy 3) ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
1.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Mediatek MT6582), 1 + 4 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 480 x 854 ಪಿಕ್ಸೆಲ್ ರೆಸೊಲೂಶನ್‌ನ 4.5 ಇಂಚು ಗಾತ್ರದ ಬಹುಸ್ಪರ್ಶ ಸ್ಪರ್ಶಸಂವೇದಿ ಪರದೆ, 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ (f/2.4) ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾ, 720p ವಿಡಿಯೊ ರೆಕಾರ್ಡಿಂಗ್, ಎರಡು ಮೈಕ್ರೊಸಿಮ್ ಕಾರ್ಡ್‌ಗಳು (2ಜಿ ಮತ್ತು 3ಜಿ), ವೈಫೈ, ಬ್ಲೂಟೂತ್, ಜಿಪಿಎಸ್, ಎಕ್ಸೆಲೆರೋಮೀಟರ್, ಎಫ್‌ಎಂ ರೇಡಿಯೊ, 132.8 x 66.6 x 9 ಮಿ.ಮೀ. ಗಾತ್ರ, 135 ಗ್ರಾಂ ತೂಕ, 2000 mAh ಬ್ಯಾಟರಿ, ಆಂಡ್ರಾಯ್ಡ್ 4.4 + ಕಲರ್‌ಓಎಸ್, ಇತ್ಯಾದಿ. ಎರಡು ಬಣ್ಣಗಳಲ್ಲಿ ಲಭ್ಯ. ಬೆಲೆ ಸುಮಾರು 8,000 ರೂಪಾಯಿ.
ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಬಲಭಾಗದಲ್ಲಿ ಆನ್/ಆಫ್ ಬಟನ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಬಟನ್ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಲೋಹ ಎನಿಸುವಂಥ ಫ್ರೇಂ ಇದೆ. ಹಿಂದುಗಡೆಯ ಕವಚ ತೆಗೆಯಬಹುದು. ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಈ ಕವಚ ತೆಗೆಯಬೇಕು. ಬ್ಯಾಟರಿ ತೆಗೆಯಬಹುದು ಮತ್ತು ಬದಲಿಸಬಹುದು. ಮೆಮೊರಿ ಮತ್ತು ಸಿಮ್ ಕಾರ್ಡ್ ಹಾಕಲು ಬ್ಯಾಟರಿ ತೆಗೆಯಬೇಕು.
ಹಿಂದುಗಡೆಯ ಕವಚ ಪ್ಲಾಸ್ಟಿಕ್ಕಿನದ್ದಾಗಿದ್ದು ಅಂತಹ ಮೇಲ್ಮಟ್ಟದ್ದಲ್ಲ. ಬೇರೆ ಬೇರೆ ಕವಚಗಳು ದೊರೆಯುತ್ತವೆಯೇ ಎಂಬುದು ತಿಳಿದಿಲ್ಲ. ಪರದೆಯ ಕೆಳಭಾಗದಲ್ಲಿ ಮೂರು ಸಾಫ್ಟ್‌ಬಟನ್‌ಗಳಿವೆ. ಕೈಯಲ್ಲಿ ಹಿಡಿಯುವ ಅನುಭವ ತೃಪ್ತಿದಾಯಕವಾಗಿದೆ. ಹಿಂಭಾಗದ ಕವಚ ನಯವಾಗಿದೆ. ಅದರೆ ಕೈಯಿಂದ ಜಾರಿಬೀಳುವ ಭಯವಿಲ್ಲ. ಯಾಕೆಂದರೆ ಇದರ ಗಾತ್ರ ಅಷ್ಟೇನೂ ದೊಡ್ಡದಾಗಿಲ್ಲ.
ಆಂಡ್ರಾಯ್ಡ್ ಫೋನ್‌ಗಳಿಗೆ 1 ಗಿಗಾಬೈಟ್ ಮೆಮೊರಿ ಸ್ವಲ್ಪ ಕಡಿಮೆಯೇ ಎನ್ನಬಹುದು. ಜೊತೆಗೆ ಸಂಗ್ರಹ ಮೆಮೊರಿ ಕೂಡ 4 ಗಿಗಾಬೈಟ್ ಮಾತ್ರ. ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸವಲತ್ತು ಇದೆ ಎಂಬುದು ಸಮಾಧಾನಕರ ಅಂಶ. ಗ್ರಾಫಿಕ್ಸ್‌ಗೆ ಪ್ರತ್ಯೇಕ ಪ್ರೊಸೆಸರ್ ಇದೆ. ಆದ್ದರಿಂದ ಬಳಕೆಯ ವೇಗಕ್ಕೆ ಅಷ್ಟೇನೂ ತೊಂದರೆಯಿಲ್ಲ ಎಂದುಕೊಳ್ಳಬಹುದು. ಕೆಲವು ಮೂರು ಆಯಾಮಗಳ ಆಟವನ್ನು ಆಡಿ ನೋಡಿದಾಗ ಅನ್ನಿಸಿದ್ದೇನೆಂದರೆ ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ, ಆದರೆ ಅಧಿಕ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಇದು ಸೂಕ್ತವಲ್ಲ ಎಂದು.
ಈಗಿನ ಕಾಲದಲ್ಲಿ ಆಪ್‌ಗಳು ದೊಡ್ಡ ದೊಡ್ಡವಾಗುತ್ತಿವೆ. ಹಾಗಿರುವಾಗ 1 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಖಂಡಿತ ಕಡಿಮೆಯೇ. ಕಂಪೆನಿಯ ಜಾಲತಾಣದಲ್ಲಿ ಯುಎಸ್‌ಬಿ ಓಟಿಜಿ ಬೆಂಬಲ ಇದೆ ಎಂದು ನಮೂದಿಸಿದ್ದಾರೆ. ಆದರೆ ನನಗೆ ಅದು ಬಳಕೆಯಲ್ಲಿ ಕಂಡುಬರಲಿಲ್ಲ. ವಿಡಿಯೊಗಳನ್ನು ಪ್ಲೇ ಮಾಡಲು ಅಂತಹ ತೊಂದರೆಯೇನೂ ಆಗಲಿಲ್ಲ. ಹೈಡೆಫಿನಿಶನ್ ವಿಡಿಯೊ ಕೂಡ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಆಡಿಯೊ ಪರವಾಗಿಲ್ಲ.
ಕ್ಯಾಮೆರಾ ಹೆಸರಿಗೆ 5 ಮೆಗಾಪಿಕ್ಸೆಲ್‌ನದ್ದು. ಮೆಗಾಪಿಕ್ಸೆಲ್‌ಗೂ ಕ್ಯಾಮೆರಾದ ಗುಣಮಟ್ಟಕ್ಕೂ ಅಂತಹ ಸಂಬಂಧ ಇರಲೇಬೇಕಾಗಿಲ್ಲ ಎಂದು ಹಲವು ಸಲ ನಾನು ಬರೆದಿದ್ದೇನೆ. ಈ ಫೋನಿನ ಕ್ಯಾಮೆರಾದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಅತಿ ಹತ್ತಿರದ ವಸ್ತುಗಳ ಫೋಟೊ, ಕಡಿಮೆ ಬೆಳಕಿನಲ್ಲಿ ತೆಗೆದ ಫೋಟೊ, ಎಲ್ಲ ತೃಪ್ತಿದಾಯಕವಾಗಿ ಬರಲಿಲ್ಲ.
ಇನ್ನೂ ಒಂದು ಕೊರತೆಯೆಂದರೆ ಇದು 4:3 ಅನುಪಾತದಲ್ಲಿ ಮಾತ್ರ ಫೋಟೊ ತೆಗೆಯುತ್ತದೆ. ವಿಡಿಯೊ ಗುಣಮಟ್ಟ ಪರವಾಗಿಲ್ಲ. ಪೂರ್ತಿ ಹೈಡೆಫಿನಶನ್ ವಿಡಿಯೊ ತೆಗೆಯಲು ಸಾಧ್ಯವಿಲ್ಲ. ಅರ್ಧ ಹೈಡೆಫಿನಿಶನ್ ವಿಡಿಯೊ ಮಾತ್ರ ತೆಗೆಯಬಹುದು. ಒಂದೇ ಮೈಕ್ರೋಫೋನ್ ಇರುವುದರಿಂದ ಆಡಿಯೊ ಮೋನೊ ವಿಧಾನದಲ್ಲಿ ರೆಕಾರ್ಡ್ ಆಗುತ್ತದೆ, ಸ್ಟಿರಿಯೊ ವಿಧಾನದಲ್ಲಲ್ಲ.
ಒಪ್ಪೊದವರು ಆಂಡ್ರಾಯ್ಡ್ ಅನ್ನು ಸ್ವಲ್ಪ ಬದಲಾವಣೆ ಮಾಡಿ ಕಲರ್‌ಓಎಸ್ ಎಂಬ ಹೆಸರಿನಲ್ಲಿ ಬಳಸುತ್ತಿದ್ದಾರೆ. ಈ ಫೋನಿನಲ್ಲೂ ಅದೇ ಇರುವುದು. ಅದರಲ್ಲಿ ಕೆಲವು ಸವಲತ್ತುಗಳಿವೆ. ಫೋನನ್ನು ಎರಡು ಸಲ ತಟ್ಟಿದಾಗ ಎಬ್ಬಿಸುವುದು. ಪರದೆಯ ಮೇಲೆ ಬೆರಳಿನಿಂದ ವೃತ್ತ ಮಾಡಿದರೆ ಕ್ಯಾಮೆರಾ ಚಾಲೂ ಅಗುವುದು, ಬೆರಳುಗಳಿಂದ ಪರದೆಯಲ್ಲಿ ಮೇಲಕ್ಕೆ ಸವರಿದರೆ ವಾಲ್ಯೂಮ್ ಹೆಚ್ಚಾಗುವುದು, ಅಲ್ಲದೆ ಇನ್ನೂ ಕೆಲವು ಇಂಥದ್ದೇ ಸವಲತ್ತುಗಳಿವೆ.
ಈ ಕಲರ್‌ಓಎಸ್‌ಗೆ ಒಪ್ಪೊ ಕಂಪೆನಿಯವರು ಕಾಲಕಾಲಕ್ಕೆ ನವೀಕರಣಗಳನ್ನು ನೀಡುತ್ತಾರೆ. ಕೆಲವೊಮ್ಮೆ ವಾರದಲ್ಲಿ ಎರಡು ಸಲ ಇವುಗಳು ಬರುವುದೂ ಉಂಟು. ಕನ್ನಡದ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಿದೆ. ಕನ್ನಡದ ಕೀಲಿಮಣೆ (ಜಸ್ಟ್‌ಕನ್ನಡ, ಎನಿಸಾಫ್ಟ್, ಇತ್ಯಾದಿ) ಹಾಕಿಕೊಂಡರೆ ಕನ್ನಡದ ಪಠ್ಯವನ್ನು ಊಡಿಸಬಹುದು. ಯೂಸರ್ ಇಂಟರ್‌ಫೇಸ್ ಮಾತ್ರ ಕನ್ನಡದಲ್ಲಿಲ್ಲ. ಹಿಂದಿ, ಬಾಂಗ್ಲಾ ಮತ್ತು ತಮಿಳು ಭಾಷೆಗಳಲ್ಲಿವೆ.
***
ವಾರದ ಆಪ್
ಪ್ರಾಕ್ಟೊ
ನೀವು ಬೆಂಗಳೂರಿನ ಬಸವನಗುಡಿಯ ಹತ್ತಿರ ಇದ್ದೀರಿ. ಇದ್ದಕ್ಕಿದ್ದಂತೆ ನಿಮಗೆ ದಂತವೈದ್ಯರ ಭೇಟಿ ಮಾಡಬೇಕಾಗಿದೆ ಅಥವಾ ಹೃದಯತಜ್ಞರ ಅಗತ್ಯವಿದೆ. ಆಗ ಏನು ಮಾಡುತ್ತೀರಿ? ಇಂತಹ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡುವ ಕಿರುತಂತ್ರಾಂಶ (ಆಪ್) ಪ್ರಾಕ್ಟೊ (Practo - Your Health App). ಇದು ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯ.
ನೀವು ಇರುವ ಸ್ಥಳವನ್ನು ಜಿಪಿಎಸ್ ಮೂಲಕ ಪತ್ತೆಹಚ್ಚಿ ನಿಮಗೆ ಬೇಕಾದ ವೈದ್ಯರು ನಿಮಗೆ ಎಷ್ಟು ದೂರದಲ್ಲಿದ್ದಾರೆ ಎಂದು ತಿಳಿಸುತ್ತದೆ. ಈ ಕಿರುತಂತ್ರಾಂಶದ ಮೂಲಕವೇ ನೀವು ಅವರೊಡನೆ ಭೇಟಿಯನ್ನು ಕಾಯ್ದಿರಿಸಬಹುದು ಕೂಡ. ಲ್ಯಾಬೊರೇಟರಿಗಳ ಪಟ್ಟಿಯನ್ನೂ ಅವುಗಳಲ್ಲಿಯ ದರಪಟ್ಟಿಯನ್ನೂ ನೀಡುತ್ತದೆ. ಸದ್ಯಕ್ಕೆ ಕರ್ನಾಟಕದಲ್ಲಿ ಬೆಂಗಳೂರಿನವರಿಗೆ ಮಾತ್ರ ಇದು ಉಪಯುಕ್ತ.
***
ಗ್ಯಾಜೆಟ್ ಸುದ್ದಿ
ಅಮೆಝಾನ್‌ನಿಂದ ನವೀಕರಿಸಿದ ಗ್ಯಾಜೆಟ್‌ಗಳ ಮಾರಾಟ
ಬಳಸಿದ ಕಾರುಗಳ ವ್ಯಾಪಾರ ಗೊತ್ತು ತಾನೆ? ಅದೇ ಮಾದರಿಯಲ್ಲಿ ಬಳಸಿದ ಗ್ಯಾಜೆಟ್‌ಗಳ ಮಾರಾಟಕ್ಕೆ ಅಮೆಝಾನ್ ಇಂಡಿಯ ಸಿದ್ಧವಾಗುತ್ತಿದೆ. ಇವು ಬಳಸಿದ ಮಾಮೂಲಿ ಗ್ಯಾಜೆಟ್‌ಗಳಲ್ಲ. ಬಳಸಿ ಅಲ್ಪಸ್ವಲ್ಪ ಹಾಳಾದವನ್ನು ಸರಿಪಡಿಸಿ ನವೀಕರಿಸಿದ ಗ್ಯಾಜೆಟ್‌ಗಳು. ನಿಮಗೊಂದು ಅಧಿಕ ಶಕ್ತಿಯ ಫೋನ್ ಬೇಕು. ಅದಕ್ಕೆ ತುಂಬ ಹಣ ನೀಡುವ ತಾಕತ್ತು ನಿಮ್ಮಲ್ಲಿಲ್ಲ. ದೂರದಲ್ಲೊಬ್ಬ ಅಂತಹ ಫೋನ್ ಬಳಸಿ ಅದು ಅಲ್ಪಸ್ವಲ್ಪ ಹಾಳಾಗಿದೆ ಎಂದು ಅದನ್ನು ಮಾರಾಟ ಮಾಡುತ್ತಾನೆ.
ಅದನ್ನು ನವೀಕರಿಸಿ ಅಮೆಝಾನ್‌ನವರು ಮಾರಾಟ ಮಾಡುತ್ತಾರೆ. ಬಹುಮಟ್ಟಿಗೆ ಬಳಸಿದ ಕಾರುಗಳ ಮಾರಾಟದಂತೆಯೇ ಇದೂ ಕೆಲಸ ಮಾಡುತ್ತದೆ. ಸ್ಯಾಮ್‌ಸಂಗ್ ಮತ್ತು ಶಿಯೋಮಿಯವರಿಂದಲೇ ನವೀಕರಿಸಿದ ಫೋನ್‌ಗಳ ಮಾರಾಟದ ಮೂಲಕ ಇದು ಪ್ರಾರಂಭವಾಗಲಿದೆ. ಅಂದ ಹಾಗೆ ಇಂತಹ ವ್ಯಾಪಾರದ ಜಾಲತಾಣಗಳು ಈಗಾಗಲೇ ಇವೆ. ಉದಾಹರಣೆಗೆ: therebootstore.com.
***
ಗ್ಯಾಜೆಟ್ ಸಲಹೆ
ಗೋವಿಂದ ಹೊಸೂರರ ಪ್ರಶ್ನೆ: ನನಗೆ ಒಳ್ಳೆಯ ಸೌಂಡ್ ಸಿಸ್ಟಮ್ (ಹೋಮ್ ಥಿಯೇಟರ್) ಬೇಕು. 2,000 ರೂಪಾಯಿಯ ಒಳಗೆ ಸಿಗುವ ಉತ್ತಮ ಗುಣಮಟ್ಟದ, ಬ್ಲೂಟೂತ್ ಸಂಪರ್ಕ ಇರುವ ಯಾವುದಾದರೂ ಹೋಮ್ ಥಿಯೇಟರ್ ತಿಳಿಸಿ ಮತ್ತು ಯಾವ ಆನ್‌ಲೈನ್‌ನಲ್ಲಿ ಅದನ್ನು ಖರೀದಿಸಬಹುದು ದಯವಿಟ್ಟು ಸೂಚಿಸಿ.
ಉ: ಈ ಬೆಲೆಗೆ ನಿಮಗೆ ಉತ್ತಮ ಹೋಮ್ ಥಿಯೇಟರ್ ಆಗಲಿ ಸೌಂಡ್ ಸಿಸ್ಟಮ್ ಆಗಲಿ ದೊರೆಯುವ ಸಾಧ್ಯತೆಗಳಿಲ್ಲ.
***
ಗ್ಯಾಜೆಟ್ ತರ್ಲೆ
ಶಿಯೋಮಿಯವರು ಉಬರ್ ಟ್ಯಾಕ್ಸಿ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಅವರಿದ್ದಲ್ಲಿಗೇ ಶಿಯೋಮಿ ಸ್ಮಾರ್ಟ್‌ಫೋನ್ ಸರಬರಾಜು ಮಾಡಲು ಪ್ರಾರಂಭಿಸಿದ್ದಾರೆ (ಸದ್ಯಕ್ಕೆ ಈ ಸೇವೆ ಭಾರತದಲ್ಲಿಲ್ಲ). ಆದರೆ ನಮ್ಮ ಸಮಸ್ಯೆ ಏನಪ್ಪಾ ಎಂದರೆ ಇದನ್ನು ಆರ್ಡರ್ ಮಾಡಲು ನಮ್ಮಲ್ಲಿ ಒಂದು ಸ್ಮಾರ್ಟ್‌ಫೋನ್ ಇರಬೇಕಲ್ಲ ಎಂದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.