ADVERTISEMENT

ಟಿ.ವಿಯನ್ನು ಇನ್ನಷ್ಟು ಸ್ಮಾರ್ಟ್‌ ಮಾಡಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:57 IST
Last Updated 16 ಜೂನ್ 2018, 8:57 IST

ನಿಮ್ಮದು ಸ್ಮಾರ್ಟ್ ಟಿ.ವಿ ಅಲ್ಲ, ಆದರೆ ಅದರಲ್ಲಿ ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳಿವೆ ಎಂದಿಟ್ಟುಕೊಳ್ಳೋಣ. ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಹಲವು ವಿಡಿಯೊ, ಫೋಟೊ, ಸಂಗೀತ ಎಲ್ಲ ಇವೆ. ಅವುಗಳನ್ನು ಟಿ.ವಿಯಲ್ಲಿ ನೋಡಲು ಏನು ಮಾಡಬೇಕು? ಅವುಗಳನ್ನು ಒಂದು ಯುಎಸ್‌ಬಿ ಡ್ರೈವ್‌ಗೆ ಪ್ರತಿ ಮಾಡಿಕೊಂಡು ನಂತರ ಆ ಯುಎಸ್‌ಬಿ ಡ್ರೈವ್ ಅನ್ನು ಟಿ.ವಿಯಲ್ಲಿರುವ ಯುಎಸ್‌ಬಿ ಕಿಂಡಿಗೆ ಚುಚ್ಚಿ ಅಲ್ಲಿಂದ ಪ್ಲೇ ಮಾಡುವುದು ಅತಿ ಸರಳ ವಿಧಾನ. ಪ್ರತಿ ಸಲವೂ ಫೈಲುಗಳನ್ನು ಪ್ರತಿ ಮಾಡುವುದು, ಇಲ್ಲಿಂದ ತೆಗೆದು ಅಲ್ಲಿಗೆ ಚುಚ್ಚುವುದು ಎಲ್ಲ ಕಿರಿಕಿರಿಯ ಕೆಲಸ.

ಲ್ಯಾಪ್‌ಟಾಪ್‌ ಅನ್ನು ಟಿ.ವಿಗೆ ಎಚ್‌ಡಿಎಂಐ ಕೇಬಲ್ ಮೂಲಕ ಜೋಡಿಸಿ ಪ್ಲೇ ಮಾಡಬಹುದು. ಇವೆಲ್ಲಕ್ಕಿಂತ ನಿಸ್ತಂತು (ವಯರ್‌ಲೆಸ್‌) ವಿಧಾನದಲ್ಲಿ ಸಂಪರ್ಕಿಸಿ, ಬೇಕಾದ ವಿಡಿಯೊ ಪ್ಲೇ ಮಾಡುವುದು ಇನ್ನೂ ಉತ್ತಮ ವಿಧಾನ. ಈ ರೀತಿ ಮಾಡಲು ಅನುವು ಮಾಡಿಕೊಡುವ ಜೊತೆಗೆ ಇನ್ನೂ ಹೆಚ್ಚು ಸವಲತ್ತುಗಳನ್ನು ಒದಗಿಸಿ ಕೊಡುವ ಒಂದು ಭಾರತೀಯ ಉತ್ಪನ್ನ ಟೀವಿ (Teewe). ಹೋದ ವರ್ಷ ಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಈ ಉತ್ಪನ್ನದ ಎರಡನೇ ಆವೃತ್ತಿ ಈಗ ಬಂದಿದೆ. ಇದು ನಮ್ಮ ಈ ವಾರದ ಗ್ಯಾಜೆಟ್. 

ಇದು ನೋಡಲು ಸ್ವಲ್ಪ ದೊಡ್ಡ ಗಾತ್ರದ ಯುಎಸ್‌ಬಿ ಡ್ರೈವ್ ಅಥವಾ ಡಾಂಗಲ್ ಮಾದರಿಯಲ್ಲಿ ಕಾಣಿಸುತ್ತದೆ. ಎಲ್ಲ ಬದಿಗಳೂ ಚೌಕಾಕಾರದಲ್ಲಿದ್ದು, ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಇದು ನಿಮ್ಮ ಮನೆಯ ಟಿ.ವಿಯ ಎಚ್‌ಡಿಎಂಐ ಕಿಂಡಿಗೆ ಜೋಡಣೆಯಾಗುತ್ತದೆ. ಇದರಲ್ಲಿ ಒಂದು ಮೈಕ್ರೊ ಯುಎಸ್‌ಬಿ ಕಿಂಡಿ ಇದೆ. ಈ ಕಿಂಡಿಗೆ ಯುಎಸ್‌ಬಿ ಕೇಬಲ್ ಜೋಡಿಸಿ ಈ ಸಾಧನಕ್ಕೆ ವಿದ್ಯುತ್ ಸರಬರಾಜು ಪ್ಲಗ್ ಪಾಯಿಂಟ್‌ಗೆ ಹಾಕುವ ಯುಎಸ್‌ಬಿ ಚಾರ್ಜರ್ ಮತ್ತು ಯುಎಸ್‌ಬಿ ಕೇಬಲ್ ಜೊತೆ ನೀಡಿದ್ದಾರೆ. ನಿಮ್ಮ ಟಿ.ವಿಯಲ್ಲಿ ಯುಎಸ್‌ಬಿ ಕಿಂಡಿ ಇದ್ದಲ್ಲಿ (ಈಗಿನ ಎಲ್ಲ ಟಿ.ವಿಗಳಲ್ಲಿ ಇದು ಇದ್ದೇ ಇದೆ) ಅದಕ್ಕೂ ಜೋಡಿಸಬಹುದು.

ಇದನ್ನು ಬಳಸಬೇಕಾದರೆ ಸ್ಮಾರ್ಟ್ಫೋನ್ ಅಥವಾ ಲ್ಯಾಪ್‌ಟಾಪ್‌ ಅಗತ್ಯ. ಮನೆಯಲ್ಲಿ ವೈಫೈ ಜಾಲ ಇದ್ದರೆ ಒಳ್ಳೆಯದು. ಟೀವಿಯನ್ನು ಟಿ.ವಿಗೆ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಂಡು ಸೂಕ್ತ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ ಅನ್ನು ಹುಡುಕುತ್ತದೆ. ಆಂಡ್ರಾಯ್ಡ್, ಐಒಎಸ್ (ಐಫೋನ್ ಮತ್ತು ಐಪ್ಯಾಡ್) ಮತ್ತು ವಿಂಡೋಸ್ ಫೋನ್‌ಗಳಿಗೆ ಟೀವಿಯ ಕಿರುತಂತ್ರಾಂಶ (ಆಪ್‌) ಲಭ್ಯವಿದೆ. ನಿಮ್ಮ ಫೋನಿಗೆ ಅದನ್ನು ಹಾಕಿಕೊಂಡು ಟೀವಿ ತಂತ್ರಾಂಶಕ್ಕೆ ಸಂಪರ್ಕ ಮಾಡಬೇಕು. ಇದು ಬಹು ಸರಳ. ಟಿ.ವಿ ಪರದೆಯಲ್ಲಿ ಕಂಡುಬರುವ ಸೂಚನೆಗಳನ್ನು ಪಾಲಿಸಿ ಸ್ಮಾರ್ಟ್‌ಫೋನಿನಲ್ಲಿ ಸೂಕ್ತ ಆಯ್ಕೆಗಳನ್ನು ಮಾಡಿಕೊಂಡರೆ ಸಾಕು. ಲ್ಯಾಪ್‌ಟಾಪ್‌ ಆದರೆ ಕ್ರೋಮ್ ಬ್ರೌಸರ್ ಬಳಸಿ ಅಥವಾ ಪ್ರತ್ಯೇಕ ತಂತ್ರಾಂಶ ಬಳಸಿಯೂ ಟೀವಿ ಜೊತೆ ಸಂಪರ್ಕ ಕಲ್ಪಿಸಿ ಕೆಲಸ ಮಾಡಬಹುದು. ಮನೆಯ ವೈಫೈ ಜಾಲಕ್ಕೆ ಟೀವಿಯನ್ನು ತಂದರೆ ಆಗ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ಗಳೂ ಅದೇ ಜಾಲದಲ್ಲಿದ್ದರೆ ಎಲ್ಲವನ್ನೂ ಸಂಪರ್ಕಿಸಿ ಕೆಲಸ ಮಾಡುವುದು ಸುಲಭ. ಟೀವಿ ತನ್ನದೇ ವೈಫೈ ಜಾಲ ಸೃಷ್ಟಿ ಮಾಡುತ್ತದೆ. ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪನ್ನು ಈ ಜಾಲಕ್ಕೆ ಜೋಡಿಸಿಯೂ ಕೆಲಸ ಮಾಡಬಹುದು.

ಟೀವಿ ಕೊಂಡುಕೊಂಡರೆ ಅಂತರಜಾಲದ ಮೂಲಕ ಹಲವು ಸಿನಿಮಾ, ಸಂಗೀತ, ಟಿ.ವಿ ಧಾರಾವಾಹಿ, ಸಂಗೀತದ ವಿಡಿಯೊ ಎಲ್ಲವೂ ವೀಕ್ಷಣೆಗೆ ದೊರೆಯುತ್ತವೆ. ಜೊತೆಗೆ ಎರಡು ತಿಂಗಳುಗಳ ಕಾಲಕ್ಕೆ ಎರೋಸ್ ಕಂಪೆನಿಯ ಎಲ್ಲ ಸಿನಿಮಾಗಳೂ ದೊರೆಯುತ್ತವೆ. ಸ್ಮಾರ್ಟ್‌ಫೋನಿನ ಟೀವಿ ಆಪ್‌ನ ಮೂಲಕ ಇವುಗಳನ್ನು ಪಡೆಯಬಹುದು. ಆಪ್‌ನಲ್ಲಿ ಕಾಣಿಸುವ ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಟೀವಿಯಲ್ಲಿ ಪ್ಲೇ ಮಾಡು ಎಂದು ಆಯ್ಕೆ ಮಾಡಿದಾಗ ನಿಮ್ಮ ಟಿ.ವಿಗೆ ಜೋಡಣೆಯಾದ ಟೀವಿಯು ಅದನ್ನು ಟಿ.ವಿಯಲ್ಲಿ ಪ್ಲೇ ಮಾಡುತ್ತದೆ. ಯುಟ್ಯೂಬ್‌ನಲ್ಲಿರುವ ಎಲ್ಲ ವಿಡಿಯೊ, ಸಿನಿಮಾಗಳನ್ನೂ ಇದರ ಮೂಲಕ ವೀಕ್ಷಣೆ ಮಾಡಬಹುದು. ಜೊತೆಗೆ ಟೀವಿ ತಯಾರಿಸಿದ ಕಂಪೆನಿಯವರೂ ಇನ್ನೂ ಹಲವು ಸಿನಿಮಾ, ಧಾರಾವಾಹಿ, ಸಂಗೀತ ವಿಡಿಯೊಗಳನ್ನು ಸೇರಿಸಿದ್ದಾರೆ.

ನಿಮ್ಮಲ್ಲಿ ಇರುವುದು ಸ್ಮಾರ್ಟ್ ಟಿ.ವಿ ಆಗಿದ್ದಲ್ಲಿ, ಮನೆಯಲ್ಲಿ ಅಂತರಜಾಲ ಸಂಪರ್ಕ, ರೌಟರ್ ಎಲ್ಲ ಇದ್ದಲ್ಲಿ ಟಿ.ವಿಯನ್ನು ರೌಟರ್‌ಗೆ ಎಥರ್ನೆಟ್ ಕೇಬಲ್ ಮೂಲಕ ಜೋಡಿಸಿ ಯುಟ್ಯೂಬ್ ವಿಡಿಯೊ ವೀಕ್ಷಿಸಬಹುದು. ಅಷ್ಟೇ ಆದರೆ ಈ ಟೀವಿ ಬೇಕಾಗಿಲ್ಲ. ಆದರೆ ಟೀವಿ ಬಳಸಿ ಇನ್ನೂ ಹೆಚ್ಚಿನ ಕೆಲಸ ಮಾಡಬಹುದು. ಟೀವಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ವಿಡಿಯೊ, ಸಂಗೀತಗಳನ್ನೂ ನಿಮ್ಮ ಟಿ.ವಿ.ಯಲ್ಲಿ ಪ್ಲೇ ಮಾಡುತ್ತದೆ. ಆದರೆ ಸ್ಮಾರ್ಟ್‌ಫೋನಿನ ಪರದೆಯನ್ನು ಟಿ.ವಿ.ಯಲ್ಲಿ ಮೂಡಿಸುವುದಿಲ್ಲ. ಲ್ಯಾಪ್‌ಟಾಪ್‌ನಿಂದ ಟೀವಿಯ ಮೂಲಕ ಟಿ.ವಿ.ಗೆ ಜೋಡಿಸಿದರೆ ಆಗ ನಿಮ್ಮ ಲ್ಯಾಪ್‌ಟಾಪ್‌ನಲ್ಲಿರುವ ವಿಡಿಯೊ, ಸಂಗೀತಗಳನ್ನು ಟೀವಿಯ ಮೂಲಕ ಟಿ.ವಿ.ಯಲ್ಲಿ ಪ್ಲೇ ಮಾಡಬಹುದು ಮಾತ್ರವಲ್ಲ ಲ್ಯಾಪ್‌ಟಾಪ್‌ನ ಪರದೆಯನ್ನು ಟಿ.ವಿಯಲ್ಲಿ ಮೂಡಿಸಬಹುದು. ಇದೇನೂ ದೊಡ್ಡ ಸಾಧನೆಯಲ್ಲ. ಎಚ್‌ಡಿಎಂಐ ಕೇಬಲ್ ಮೂಲಕ ಲ್ಯಾಪ್‌ಟಾಪನ್ನು ಟಿ.ವಿಗೆ ಜೋಡಿಸಿ ಇದೇ ಕೆಲಸ ಮಾಡಬಹುದು. ಟೀವಿಯ ಹೆಚ್ಚುಗಾರಿಕೆಯಿರುವುದು ಅದನ್ನು ಮನೆಯ ರೌಟರ್ ಮೂಲಕ ಅಂತರಜಾಲಕ್ಕೆ ಜೋಡಿಸಿದಾಗ. ಆಗ ನಿಮಗೆ ಬೇಕಾದಷ್ಟು ಸಿನಿಮಾ, ಸಂಗೀತ, ಧಾರಾವಾಹಿ ಎಲ್ಲ ವೀಕ್ಷಿಸಲು ದೊರೆಯುತ್ತವೆ. 

ಟೀವಿ ಚೆನ್ನಾಗಿ ಕೆಲಸ ಮಾಡುತ್ತದೆ. ಬಹುಮಟ್ಟಿಗೆ ಎಲ್ಲ ನಮೂನೆಯ ವಿಡಿಯೊ ಮತ್ತು ಸಂಗೀತದ ಫೈಲುಗಳನ್ನು ಇದು ಪ್ಲೇ ಮಾಡುತ್ತದೆ. 720p ಹೈಡೆಫಿನಿಶನ್ ವಿಡಿಯೊವನ್ನು ಆರಾಮವಾಗಿ ಪ್ಲೇ ಮಾಡಿತು. ಆದರೆ ಪೂರ್ತಿ ಹೈಡೆಫಿನಿಶನ್ ಪ್ಲೇ ಮಾಡಲು ಸ್ವಲ್ಪ ಒದ್ದಾಡಿತು. ಫೈಲಿನ ಗಾತ್ರ ತುಂಬ ದೊಡ್ಡದಿರುವುದು ಒಂದು ಕಾರಣವಿರಬಹುದು. ಸಂಗೀತದ ಎಂಪಿ3 ಫೈಲುಗಳನ್ನು ಪ್ಲೇ ಮಾಡುವಾಗ ಒಂದು ದೋಷ ಕಂಡುಬಂತು. 320kbps ನಲ್ಲಿ ತಯಾರಾದ ಫೈಲನ್ನು ಇದು ಪ್ಲೇ ಮಾಡಲೇ ಇಲ್ಲ. ಸ್ಮಾರ್ಟ್‌ಫೋನಿನ ಆಪ್‌ನಲ್ಲೂ ಸಣ್ಣಪುಟ್ಟ ದೋಷಗಳಿವೆ. ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ಟೀವಿ ಸಾಧನವನ್ನು ಪತ್ತೆ ಹಚ್ಚುವುದಿಲ್ಲ. ಆಗ ಅದನ್ನು ನಿಲ್ಲಿಸಿ ಮತ್ತೊಮ್ಮೆ ಪ್ರಾರಂಭಿಸಿದಾಗ ಕೆಲಸ ಮಾಡಿತು.  
ಟೀವಿ ನಿಗದಿತ ಬೆಲೆ ₹2,399. ಜಾಲತಾಣಗಳಲ್ಲಿ ಇದಕ್ಕಿಂತ ತುಂಬ ಕಡಿಮೆ ಬೆಲೆಗೆ ದೊರೆಯುತ್ತಿದೆ. ಟೀವಿ ಕೊಂಡರೆ ಹಲವು ಉಚಿತ ಸಿನಿಮಾ, ಸಂಗೀತ, ಧಾರಾವಾಹಿಗಳ ಜೊತೆ ಎರಡು ತಿಂಗಳುಗಳ ಕಾಲ ಎರೋಸ್ ಚಂದಾ ಮತ್ತು 3 ತಿಂಗಳುಗಳ ಕಾಲ ತಿಂಗಳಿಗೆ 20ಗಿಗಾಬೈಟ್‌ನಷ್ಟು ಏರ್‌ಟೆಲ್ ಅಂತರಜಾಲ ಸಂಪರ್ಕವೂ ಉಚಿತವಾಗಿ ದೊರೆಯುತ್ತದೆ. ಅಂದ ಹಾಗೆ ಇದನ್ನು ತಯಾರಿಸಿದ್ದು ನಮ್ಮ ಬೆಂಗಳೂರಿನ ಕಂಪೆನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.