ಸ್ಮಾರ್ಟ್‌ಫೋನ್ ಅಲ್ಲದ ಸಾದಾ ಫೋನ್‌ಗಳಲ್ಲಿ ಯಾವತ್ತಿಗೂ ನೋಕಿಯ ಪ್ರಥಮ ಸ್ಥಾನದಲ್ಲಿತ್ತು, ಇದೆ. ಆ ಕ್ಷೇತ್ರದಲ್ಲಿ ಅದಕ್ಕೆ ಸರಿಯಾದ ಸ್ಪರ್ಧಿಗಳೇ ಇಲ್ಲ. ಇತ್ತೀಚೆಗೆ ಹಲವು ಅತಿ ಕಡಿಮೆ ಬೆಲೆಯ ಆಂಡ್ರೋಯಿಡ್ ಫೋನ್‌ಗಳು ಮಾರುಕಟ್ಟೆಗೆ ದಾಳಿ ಇಟ್ಟು ನೋಕಿಯಕ್ಕೆ ಸವಾಲೊಡ್ಡುತ್ತಿವೆ. ಈ ಸವಾಲನ್ನೆದುರಿಸಲೆಂದೇ ನೋಕಿಯ ತಯಾರಿಸಿದ್ದು ಆಶಾ ಶ್ರೇಣಿಯ ಫೋನ್‌ಗಳು. ಇವು ಬಹುಮಟ್ಟಿಗೆ ಸ್ಮಾರ್ಟ್‌ಫೋನ್‌ನ ಹಲವು ಗುಣಗಳನ್ನು ಒಳಗೊಂಡಿವೆ. ಆದರೂ ಇವುಗಳಿಗೆ ಸ್ಮಾರ್ಟ್‌ಫೋನ್ ಎಂಬ ಹಣೆಪಟ್ಟಿ ಮಾತ್ರ ಇಲ್ಲ. ಅಂತಹ ಒಂದು ಅತಿ ಕಡಿಮೆ ಬೆಲೆಯ ಆದರೆ ಅತ್ಯುತ್ತಮ ಫೋನ್ ನೋಕಿಯ ಆಶಾ ೫೦೧ (Nokia Asha 501) ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
ಎರಡು ಜಿಎಸ್‌ಎಂ ಸಿಮ್ ಹಾಕಬಲ್ಲ ಫೋನ್, 2ಜಿ ಮಾತ್ರ ಇದೆ, 3ಜಿ ಇಲ್ಲ, 240 x320 ಪಿಕ್ಸೆಲ್ ರೆಸಲೂಶನ್‌ನ 3 ಇಂಚು (7.62 ಸೆ.ಮೀ.) ಗಾತ್ರದ ದ್ವಿಸ್ಪರ್ಶಪರದೆ, ಒಂದು ಇಂಚಿಗೆ 133 ಪಿಕ್ಸೆಲ್ ಸಾಂದ್ರತೆ, 64 ಮೆಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಉದ್ದ:ಅಗಲ ಅನುಪಾತ 4:3, ಮೈಕ್ರೋ ಸಿಮ್, 3.15 ಮೆಗಾಪಿಕ್ಸೆಲ್ ಕ್ಯಾಮೆರಾ, ವೈಫೈ ಮತ್ತು ಬ್ಲೂಟೂತ್ ಸಂಪರ್ಕ, ಎಕ್ಸಲರೋಮೀಟರ್, ಮೈಕ್ರೋ ಯುಎಸ್‌ಬಿ ಕಿಂಡಿ, 3.5 ಮಿ.ಮೀ. ಇಯರ್‌ಫೋನ್ ಕಿಂಡಿ, ವಾಲ್ಯೂಮ್ ಬಟನ್, ಎಫ್‌ಎಂ ರೇಡಿಯೊ, 1200 mAh ಬ್ಯಾಟರಿ, 99.2 x 58 x12.1ಮಿ.ಮೀ. ಗಾತ್ರ, 98.2 ಗ್ರಾಂ ತೂಕ, ಇತ್ಯಾದಿ.
ಗಮನಾರ್ಹ ಕೊರತೆಗಳು (ಇಲ್ಲದಿರುವಿಕೆಗಳು) –3ಜಿ, ಜಿಪಿಎಸ್, ಎನ್‌ಎಫ್‌ಸಿ, ಎರಡನೇ ಕ್ಯಾಮೆರಾ, ಫ್ಲಾಶ್, ಬೆಲೆ ಸುಮಾರು ರೂ. 5,000.
ಮೊತ್ತಮೊದಲನೆಯದಾಗಿ ನಾವು ಗಮನಿಸಬೇಕಾಗಿರುವುದು ಈ ಫೋನ್‌ನ ಬೆಲೆ. ಈ ಬೆಲೆಗೆ ಇಷ್ಟೆಲ್ಲ ಸವಲತ್ತು ನೀಡುವ ಹಾಗೂ ಅವೆಲ್ಲ ಉತ್ತಮವಾಗಿ ಕೆಲಸ ಮಾಡುವ ಫೋನ್ ಬಹುಶಃ ಇದೇ ಇರಬೇಕು. ಕಡಿಮೆ ಬೆಲೆಯಲ್ಲಿ ಹಲವು ಸವಲತ್ತುಗಳನ್ನು ಕಾಗದದಲ್ಲಿ ನೀಡುವ ಫೋನ್‌ಗಳು ಹಲವಿವೆ. ಆದರೆ ಅವುಗಳನ್ನು ಕೊಂಡು ಬಳಸಿದಾಗಲೇ ಅವುಗಳ ಹಣೆಬರಹ ಗೊತ್ತಾಗುವುದು. ನೋಕಿಯ ಆಶಾ ಸ್ಮಾರ್ಟ್‌ಫೋನ್ ಎಂದೆನಿಸಕೊಳ್ಳದಿದ್ದರೂ ಬಹುಮಟ್ಟಿಗೆ ಅವುಗಳ ಕೆಲಸ ಮಾಡುತ್ತದೆ. ನಮ್ಮ ಈ ವಿಮರ್ಶೆಯಲ್ಲಿ ಇದರ ಬೆಲೆ ಅತಿ ಕಡಿಮೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು.
ಇದರಲ್ಲಿ ಅಂತರಜಾಲತಾಣ ವೀಕ್ಷಣೆ, ಇಮೈಲ್, ಟ್ವಿಟ್ಟರ್, ಫೇಸ್‌ಬುಕ್ ಎಲ್ಲ ಬಳಸಬಹುದು. ಗಮನಾರ್ಹ ಕೊರತೆ ಎಂದರೆ ಯುಟ್ಯೂಬ್ ಇಲ್ಲದಿರುವುದು. ನೋಕಿಯದವರು ತಮ್ಮದೇ ಕಾರ್ಯಾಚರಣ ವ್ಯವಸ್ಥೆ (Operating system) ಆಶಾವನ್ನು ಈ ಫೋನಿನಲ್ಲಿ ಬಳಸಿದ್ದಾರೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಹಲವು ಕಿರು ತಂತ್ರಾಂಶಗಳನ್ನು (app) ನೋಕಿಯದವರ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದು ನೋಕಿಯ ಫೋನ್. ಒಂದು ಫೋನ್ ಆಗಿ ನೋಡಿದರೆ ನೋಕಿಯಕ್ಕೆ ಯಾರೂ ಹತ್ತಿರ ಬರಲಾರರು. ಅದು ಇಲ್ಲೂ ಸಾಬೀತಾಗಿದೆ. ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ. ಚಾರ್ಜಿಂಗ್ ಮಾಡಲು ನೋಕಿಯದ್ದೇ ಚಿಕ್ಕ ಪಿನ್ ಚಾರ್ಜರ್ ನೀಡಿದ್ದಾರೆ. ಒಳ್ಳೆಯ ಸಂಗತಿ ಎಂದರೆ ಯುಎಸ್‌ಬಿ ಕೇಬಲ್ ಮೂಲಕವೂ ಚಾರ್ಜ್ ಮಾಡಬಹುದು. ಕರೆಯ ಗುಣಮಟ್ಟ ಉತ್ತಮವಾಗಿದೆ.
ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಗಾತ್ರ ಚಿಕ್ಕದಾಗಿದ್ದು ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ. ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯ. ಇದರ ಕವಚ ಬದಲಿಸಬಹುದು. ಅಂದರೆ ಒಂದು ಬಣ್ಣ ಬೋರ್ ಆದಾಗ ಇನ್ನೊಂದು ಬಣ್ಣದ ಕವಚ ಕೊಂಡುಕೊಂಡು ಅದನ್ನು ಬದಲಿಸಬಹುದು. ಕಡಿಮೆ ಬೆಲೆ ಆಗಿದ್ದರೂ ಇದರ ತಯಾರಿಗೆ ಬಳಸಿದ ವಸ್ತುವಿನ ಗುಣಮಟ್ಟ ಉತ್ತಮವಾಗಿದೆ. ಸಾಮಾನ್ಯವಾಗಿ ನೋಕಿಯ ಫೋನ್‌ಗಳು ಗಟ್ಟಿಮುಟ್ಟಾಗಿರುತ್ತವೆ. ಇದೂ ಅಂತೆಯೇ ಇದೆ. ವಾಲ್ಯೂಮ್ ಬಟನ್ ಇದೆ. ಪರದೆಯ ಕೆಳಗೆ ಏಕೈಕ ಬಟನ್ ಇದೆ.
ಇದರ ಪರದೆಯ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಇದರ ಪರದೆ ಕೇವಲ ದ್ವಿಸ್ಪರ್ಶಪರದೆ. ಇತರೆ ದುಬಾರಿ ಫೋನ್‌ಗಳಂತೆ ಬಹುಸ್ಪರ್ಶಪರದೆ (multitouch) ಅಲ್ಲ. ಅಂದರೆ ಏಕಕಾಲದಲ್ಲಿ ಎರಡು ಬೆರಳುಗಳ ಸ್ಪರ್ಶಕ್ಕೆ ಮಾತ್ರ ಸಂವೇದನೆ ನೀಡುತ್ತದೆ. ಈ ಫೋನ್‌ನ ಪರದೆಯ ರೆಸೊಲೂಶನ್ ತುಂಬ ಕಡಿಮೆಯೇ ಎನ್ನಬಹುದು. ಆದರೂ ಪರದೆಯಲ್ಲಿ ಮೂಡುವ ಚಿತ್ರಗಳ, ಐಕಾನ್‌ಗಳ ಗುಣಮಟ್ಟ ಅಷ್ಟೇನೂ ಕೆಟ್ಟದಾಗಿ ಕಾಣಿಸುವುದಿಲ್ಲ. ಇದರ ಯೂಸರ್ ಇಂಟರ್‌ಫೇಸ್ ಸ್ವಲ್ಪ ಭಿನ್ನವಾಗಿದೆ. ಎಡಕ್ಕೆ, ಬಲಕ್ಕೆ, ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ, ಪರದೆಯನ್ನು, ಐಕಾನ್‌ಗಳನ್ನು ಸರಿಸಿ ಕೆಲಸ ಮಾಡಬೇಕು. ಒಮ್ಮೆ ಅಭ್ಯಾಸವಾದರೆ ಅನುಭವ ಚೆನ್ನಾಗಿದೆ.
ಕ್ಯಾಮರ ಮಾತ್ರ ಏನೇನೂ ಚೆನ್ನಾಗಿಲ್ಲ. ಅತಿ ಕಡಿಮೆ ಬೆಲೆಗೆ ಇನ್ನೇನು ತಾನೆ ದೊರೆಯಬಹುದು? ಆದರೆ ಆಶ್ಚರ್ಯ ಎಂದರೆ ಇದರ ಆಡಿಯೋ ಗುಣಮಟ್ಟ. ನೀಡುವ ಹಣಕ್ಕೆ ಹೋಲಿಸಿದರೆ ಇದರ ಆಡಿಯೋ ಗುಣಮಟ್ಟ ನಿಜಕ್ಕೂ ಉತ್ತಮವಾಗಿದೆ. ಆದರೆ ಜೊತೆಗೆ ನೀಡಿದ ಇಯರ್‌ಫೋನ್ ಮಾತ್ರ ಅಷ್ಟಕ್ಕಷ್ಟೆ. ಎಫ್‌ಎಂ ರೇಡಿಯೋದ ಗುಣಮಟ್ಟ ಪರವಾಗಿಲ್ಲ. ಮನೆಯ ಒಳಗೆ ಸರಿಯಾಗಿ ಕೆಲಸ ಮಾಡುವುದಿಲ್ಲ.
ಇದರ ಕಾರ್ಯಾಚರಣ ವ್ಯವಸ್ಥೆ ಉತ್ತಮವಾಗಿದೆ. ಕೆಲಸ ಚೆನ್ನಾಗಿ ವೇಗವಾಗಿ ಮಾಡುತ್ತದೆ. ಬಳಕೆಯ ಅನುಭವ ಅತ್ಯುತ್ತಮವಾಗಿದೆ.
ಸಂಪೂರ್ಣ ಕನ್ನಡಮಯ
ನಾನು ತುಂಬ ಹಿಂದೊಮ್ಮೆ ಎಲ್ಲೋ ಬರೆದಿದ್ದೆ –ಅತಿ ಕಡಿಮೆ ಬೆಲೆಯ ಫೋನಿನಲ್ಲೂ ಅತಿ ಹೆಚ್ಚು ಬೆಲೆಯ ಫೋನ್‌ಗಳಲ್ಲೂ ಕನ್ನಡವಿದೆ ಎಂದು. ಈ ಕಡಿಮೆ ಬೆಲೆಯ ಫೋನಿನಲ್ಲಿ “ಸಂಪೂರ್ಣ” ಕನ್ನಡವಿದೆ. ಕನ್ನಡದ ಬೆಂಬಲ ಎಂದರೆ ಹಲವು ಹಂತಗಳಲ್ಲಿ ಸಾಧ್ಯ. ಮೊದಲ ಹಂತ ಕನ್ನಡ ಪಠ್ಯದ ರೆಂಡರಿಂಗ್. ಇದು ಹಲವು ಫೋನ್‌ಗಳಲ್ಲಿ ಇವೆ.
ಎರಡನೆ ಹಂತ ಕನ್ನಡದ ಕೀಲಿಮಣೆ. ಆಂಡ್ರೋಯಿಡ್‌ಫೋನ್‌ಗಳಿಗೆ ಕನ್ನಡ ಕೀಲಿಮಣೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೂರನೆಯ ಹಂತ ಎಲ್ಲ ಮೆನು, ಐಕಾನ್, ಸಂದೇಶಗಳು (ಯೂಸರ್ ಇಂಟರ್‌ಫೇಸ್) ಕನ್ನಡದಲ್ಲಿರುವುದು. ಇವು ಮೂರೂ ಇದ್ದರೆ ಸಂಪೂರ್ಣ ಕನ್ನಡ ಎನ್ನಬಹುದು. ಈ ಫೋನ್ ಸಂಪೂರ್ಣ ಕನ್ನಡ ಬೆಂಬಲವಿರುವ ಫೋನ್. ಇದೊಂದೇ ಕಾರಣ ಸಾಕು ಇದನ್ನು ಕೊಂಡುಕೊಳ್ಳಲು. ಇದರ ಕನ್ನಡ ಕೀಲಿಮಣೆ ಮಾತ್ರ ಸ್ವಲ್ಪ ವಿಚಿತ್ರವಾಗಿದೆ. ಹಲವರು ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಮಾಡುವಾಗ ಇಂಗ್ಲಿಶಿನಿಂದ ಕೆಟ್ಟ ಅನುವಾದ ಮಾಡಿ ಬಳಸುತ್ತಾರೆ. ಆದರೆ ಈ ಫೋನಿನಲ್ಲಿ ಬಳಸಿದ ಕನ್ನಡ ಚೆನ್ನಾಗಿದೆ.
ಗ್ಯಾಜೆಟ್ ಸಲಹೆ
ಸಂಜಯ ಬಾಬು ಅವರ ಪ್ರಶ್ನೆ: ನನ್ನ ಲ್ಯಾಪ್‌ಟಾಪ್‌ನಲ್ಲಿರುವುದು ಅಧಿಕೃತ ವಿಂಡೋಸ್ ಹೌದೇ ಅಲ್ಲವೇ ಎಂದು ತಿಳಿಯುವುದು ಹೇಗೆ?
ಉ: www.microsoft.com/genuine/validate/ ಜಾಲತಾಣಕ್ಕೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.