ಇಂಟೆಲ್ ಕಂಪೆನಿಯವರು ಚಿಕ್ಕ ಗಣಕದ ವಿನ್ಯಾಸವನ್ನು ಮಾಡಿದ್ದಾರೆ. ಒಂದೆರಡು ಕಂಪೆನಿಗಳು ಆ ವಿನ್ಯಾಸದ ಪ್ರಕಾರ ಚಿಕ್ಕ ಗಣಕ ತಯಾರಿಸಿದ್ದಾರೆ. ಈ ಗಣಕಗಳು ಅಂಗೈಯೊಳಗೆ ಹಿಡಿಸುವಷ್ಟು ಚಿಕ್ಕವು. ಅವುಗಳನ್ನು ಮಾನಿಟರ್‌ಗೆ ಅಥವಾ ಟಿ.ವಿಗೆ ಎಚ್‌ಡಿಎಂಐ ಮೂಲಕ ಜೋಡಿಸಲಾಗುತ್ತದೆ. ಕೀಲಿಮಣೆ ಮತ್ತು ಮೌಸ್ ಪ್ರತ್ಯೇಕ ಜೋಡಿಸಬೇಕು. ಅಂತಹ ಒಂದು ಅತಿ ಚಿಕ್ಕ ಗಣಕ ಪನಾಚೆ ಏರ್ ಪಿಸಿ (Panache Air PC). ಇದು ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
1.33 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel Z3735F), 2 ಗಿಗಾಬೈಟ್ ಮೆಮೊರಿ, 32 (ಅಥವಾ 16) ಗಿಗಾಬೈಟ್ ಸಂಗ್ರಹ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ವೈಫೈ, ಬ್ಲೂಟೂತ್, ಎಚ್‌ಡಿಎಂಐ, ಯುಎಸ್‌ಬಿ, ಮೈಕ್ರೊಯುಎಸ್‌ಬಿ, 110.9 x 38 x 9.8 ಮಿ.ಮೀ. ಗಾತ್ರ, 46 ಗ್ರಾಂ ತೂಕ, ವಿಂಡೋಸ್ 10, ಇತ್ಯಾದಿ. ನಿಗದಿತ ಬೆಲೆ ₹10,999. ಮಾರುಕಟ್ಟೆ ಬೆಲೆ ಸುಮಾರು ₹8800.
ಇದು ನೋಡಲು ದೊಡ್ಡ ಗಾತ್ರದ ಯುಎಸ್‌ಬಿ ಡ್ರೈವ್‌ನಂತೆ ಕಾಣಿಸುತ್ತದೆ. ಮಾನಿಟರ್‌ಗೆ ಅಥವಾ ಆಧುನಿಕ ಟಿ.ವಿಗೆ ಜೋಡಿಸಲು ಮುಂದಿನ ಬದಿಯಲ್ಲಿ ಎಚ್‌ಡಿಎಂಐ ಕನೆಕ್ಟರ್ ಇದೆ. ಬಲದ ಬದಿಯಲ್ಲಿ ಆನ್/ಆಫ್ ಬಟನ್, ಕೆಲಸ ಮಾಡಲು ವಿದ್ಯುತ್‌ಗಾಗಿ ಮೈಕ್ರೊಯುಎಸ್‌ಬಿ ಕಿಂಡಿ ಮತ್ತು ಮಾಮೂಲಿ ಯುಎಸ್‌ಬಿ ಕಿಂಡಿಗಳಿವೆ. ಎಡದ ಬದಿಯಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಲು ಕಿಂಡಿ ಮತ್ತು ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಇದಕ್ಕೆ ಹೊರಗಿನಿಂದ ವಿದ್ಯುತ್ ಸರಬರಾಜು ನೀಡಬೇಕು.
ಅದಕ್ಕಾಗಿ ಒಂದು ಅಡಾಪ್ಟರ್ ಅನ್ನು ಅವರೇ ನೀಡಿದ್ದಾರೆ. ಕೆಲವು ಟಿ.ವಿ ಅಥವಾ ಮಾನಿಟರ್‌ಗಳಲ್ಲಿ ಎಚ್‌ಡಿಎಂಐ ಕಿಂಡಿ ಸುಲಭವಾಗಿ ಕೈಗೆ ಎಟುಕುವಂತೆ ಇರುವುದಿಲ್ಲ ಅಥವಾ ಇಷ್ಟು ದೊಡ್ಡ ಸಾಧನವನ್ನು ಜೋಡಿಸುವಷ್ಟು ಸ್ಥಳ ಇರುವುದಿಲ್ಲ. ಅಂತಹ ಸಂದರ್ಭಗಳಿಗೆಂದು ಒಂದು ಎಚ್‌ಡಿಎಂಐ ಎಕ್ಸ್‌ಟೆನ್ಷನ್ ಕೇಬಲ್ ನೀಡಿದ್ದಾರೆ. ಮೈಕ್ರೊಯುಎಸ್‌ಬಿ ಕಿಂಡಿ ಮೂಲಕ ಯುಸ್‌ಬಿ ಸಾಧನ ಜೋಡಿಸಲು ಓಟಿಜಿ ಕೇಬಲ್ ನೀಡಿದ್ದಾರೆ. ನೋಡಲು ಸುಂದರವಾಗಿದೆ. ಟಿ.ವಿಯ ಹಿಂದೆ ಇರುವ ಎಚ್‌ಡಿಎಂಐ ಕಿಂಡಿಗೆ ಜೋಡಿಸಿದರೆ ಇದು ಇರುವುದು ಯಾರಿಗೂ ಗೊತ್ತಾಗಲಾರದು.
ಇದಕ್ಕೆ ಹೊರಗಿನಿಂದ ಹಾರ್ಡ್‌ಡಿಸ್ಕ್, ಕೀಬೋರ್ಡ್, ಮೌಸ್, ಮೋಡೆಮ್, ಇತ್ಯಾದಿ ಜೋಡಿಸಬಹುದು. ಇದರಲ್ಲೇ ಇರುವ ಮೈಕ್ರೊಎಸ್‌ಡಿ ಕಿಂಡಿ ಮೂಲಕ ಮೆಮೊರಿ ಜಾಸ್ತಿ ಮಾಡಿಕೊಳ್ಳಬಹುದು. ಇದರಲ್ಲಿ ಬಳಕೆಯಾಗಿರುವುದು ವಿಂಡೋಸ್ ಟ್ಯಾಬ್ಲೆಟ್‌ಗಳಲ್ಲಿ ಬಳಕೆಯಾಗುತ್ತಿರುವ ಪ್ರೊಸೆಸರ್. ಇದು ತುಂಬ ಶಕ್ತಿಶಾಲಿ ಪ್ರೊಸೆಸರ್ ಅಲ್ಲ. ಅಂತರಜಾಲ ವೀಕ್ಷಣೆ, ಕಡತ ತಯಾರಿ, ಸ್ಪ್ರೆಡ್‌ಶೀಟ್ ಬಳಕೆ, ಚಿಕ್ಕಪುಟ್ಟ ಆಟಗಳನ್ನು ಆಡುವುದು, ಪ್ರಸೆಂಟೇಶನ್ ಇತ್ಯಾದಿ ಕೆಲಸಗಳಿಗೆ ಈ ಗಣಕ ಸಾಕು. ಕನಿಷ್ಠ ಕೀಲಿಮಣೆ ಮತ್ತು ಮೌಸ್ ನೀವು ಕೊಳ್ಳಲೇಬೇಕು. ನಿಮ್ಮಲ್ಲಿ ಟಿ.ವಿ ಅಥವಾ ಮಾನಿಟರ್ ಇರಲೇ ಬೇಕು. ತುಂಬ ಕೆಲಸ ಮಾಡುವುದಿದ್ದರೆ ಹಾರ್ಡ್ ಡಿಸ್ಕ್‌ಕೂಡ ಕೊಳ್ಳಬೇಕು. ಇರುವ ಎರಡು ಯುಎಸ್‌ಬಿ ಕಿಂಡಿಗಳು ಸಾಲದಿದ್ದಲ್ಲಿ ಯುಎಸ್‌ಬಿ ಹಬ್ ಕೊಂಡು ಜೋಡಿಸಬಹುದು. ಒಟ್ಟಿನಲ್ಲಿ ಸನ್ಯಾಸಿ ಸಂಸಾರದ ಕಥೆ!
ಹಾಗಿದ್ದಲ್ಲಿ ಇದರ ಉಪಯೋಗಗಳೇನು? ನಿಮ್ಮ ಟಿ.ವಿಗೆ ಇದನ್ನು ಜೋಡಿಸಿ ಮನರಂಜನೆಯ ಸಾಧನವನ್ನಾಗಿಸಬಹುದು. ಫೇಸ್‌ಬುಕ್, ಟ್ವಿಟ್ಟರ್, ಸಿನಿಮಾ ವೀಕ್ಷಣೆ, ಇತ್ಯಾದಿಗಳಿಗೆ. ಕಚೇರಿಯಲ್ಲಿ ಮಾನಿಟರ್ ಇದಲ್ಲಿ ಅದಕ್ಕೆ ಜೋಡಿಸಿ ಸಾಮಾನ್ಯ ಕೆಲಸಗಳಿಗೆ ಬಳಸಬಹುದು. ಸ್ಪರ್ಶಸಂವೇದಿ ಪರದೆಯಾದರೆ ಇನ್ನೂ ಅನುಕೂಲ. ಶಾಲೆಗಳಲ್ಲಿ ಶಿಕ್ಷಣಕ್ಕೆ ಬಳಕೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಾಗಿ ಬಳಸಬಹುದು.
ಇದರಲ್ಲಿ ವಿಂಡೋಸ್ 10 ಕಾರ್ಯಾಚರಣ ವ್ಯವಸ್ಥೆ ಇರುವುದು. ವಿಂಡೋಸ್ 10 ಇಂತಹ ಅತಿ ಚಿಕ್ಕ ಗಣಕಗಳಲ್ಲಿ ಇನ್ನೂ ಪೂರ್ತಿಯಾಗಿ ಪರೀಕ್ಷೆಗೊಳಪಟ್ಟಿಲ್ಲ. ನನ್ನಲ್ಲಿರುವ ಡೆಲ್ ಮಾನಿಟರ್‌ಗೆ ಜೋಡಿಸಿ, ಕೀಲಿಮಣೆ ಮತ್ತು ಮೌಸ್ ಜೋಡಿಸಿ ಆನ್ ಮಾಡಿದೆ. ಪ್ರಾರಂಭವಾದೊಡನೆ ಮನೆಯ ವೈಫೈ ಪಾಸ್‌ವರ್ಡ್‌ಕೇಳಿತು. ಕೊಟ್ಟೆ. ಅದು ವಿಂಡೋಸ್ 10 ಅನ್ನು ನವೀಕರಿಸುತ್ತೇನೆ ಎಂದಿತು. ಎಷ್ಟು ಗಂಟೆಗಳು ಕಳೆದರೂ ಏನು ಮಾಡುತ್ತಿದೆ ಎಂದೇ ಗೊತ್ತಾಗಲಿಲ್ಲ. ಕಾದು ಕಾದು ಸುಸ್ತಾಯಿತು. ಆಫ್ ಆನ್ ಮಾಡಿದರೆ ಪ್ರಾರಂಭದ ಪರದೆಯಲ್ಲೇ ತಟಸ್ಥವಾಯಿತು. ಕಂಪೆನಿಗೆ ತಿಳಿಸಿದಾಗ ಇನ್ನೊಂದು ಹೊಸ ಉತ್ಪನ್ನವನ್ನು ನೀಡಿದರು. ಅದನ್ನು ಆನ್ ಮಾಡಿದಾಗ ಪ್ರಾರಂಭದಲ್ಲಿ ವೈಫೈ ಪಾಸ್‌ವರ್ಡ್ ಕೇಳಿದಾಗ ಬುದ್ಧಿವಂತಿಕೆಯಿಂದ ಅದನ್ನು ನೀಡಲಿಲ್ಲ.
ವಿಂಡೋಸ್ ಪ್ರಾರಂಭವಾದಾಗ, ಮೊದಲನೆಯದಾಗಿ ವಿಂಡೋಸ್ ಅನ್ನು ನವೀಕರಿಸಬೇಡ ಎಂದು ಆಯ್ಕೆ ಮಾಡಿಕೊಂಡು ನಂತರ ವೈಫೈ ಪಾಸ್‌ವರ್ಡ್‌ನೀಡಿ ಕೆಲಸ ಮಾಡಿದೆ. ಎಲ್ಲ ಸುಸೂತ್ರವಾಗಿ ಕೆಲಸ ಮಾಡಿತು. ನನ್ನಲ್ಲಿರುವ ಹಳೆಯ ಮೈಕ್ರೋಸಾಫ್ಟ್ ಯುಎಸ್‌ಬಿ ಕೀಲಿಮಣೆ ಅದಕ್ಕೆ ಪ್ರಾರಂಭದಲ್ಲಿ ಹಿಡಿಸುತ್ತಿಲ್ಲ. ಅದನ್ನು ಜೋಡಿಸಿ ಬೂಟ್ ಮಾಡಿದರೆ ತಟಸ್ಥವಾಗುತ್ತದೆ. ಬೂಟ್ ಆದ ಮೇಲೆ ಜೋಡಿಸಿದರೆ ಕೆಲಸ ಮಾಡುತ್ತದೆ. ಲೋಜಿಟೆಕ್‌ನವರ ವಯರ್‌ಲೆಸ್ ಕೀಲಿಮಣೆ ಮತ್ತು ಮೌಸ್ ಅನ್ನು ಅದಕ್ಕಾಗಿಯೇ ಇರುವ ಚಿಕ್ಕ ಯುಎಸ್‌ಬಿ ಡಾಂಗಲ್ ಮೂಲಕ ಜೋಡಿಸಿದರೆ ಏನೂ ತೊಂದರೆಯಿಲ್ಲದೆ ಕೆಲಸ ಮಾಡುತ್ತದೆ.
ಕೆಲಸದ ವೇಗ ಪರವಾಗಿಲ್ಲ. ಹೆಚ್ಚು ಪ್ರೊಸೆಸರ್ ಶಕ್ತಿಯನ್ನು ಬೇಡುವ ವಿಡಿಯೊ ಎಡಿಟಿಂಗ್, ಆಟಗಳು, ಗ್ರಾಫಿಕ್ಸ್, ಇತ್ಯಾದಿಗಳಿಗೆ ಇದು ಹೇಳಿ ಮಾಡಿಸಿದ್ದಲ್ಲ. ಸಿನಿಮಾ ವೀಕ್ಷಣೆ ಮಾಡಬಹುದು. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳೂ ಪ್ಲೇ ಆಗುತ್ತವೆ. ಇದರ ಒಂದು ಪ್ರಮುಖ ಕೊರತೆಯೆಂದರೆ ಇದರಲ್ಲಿ ಆಡಿಯೊ ಔಟ್ ನೀಡಿಲ್ಲ ಎಂಬುದು. ಎಚ್‌ಡಿಎಂಐ ಮೂಲಕ ಟಿ.ವಿಗೆ ಜೋಡಿಸಿದರೆ ಟಿ.ವಿಯಲ್ಲಿ ಧ್ವನಿ ಬರುತ್ತದೆ. ಮಾನಿಟರ್‌ನಲ್ಲಿ ಆಡಿಯೊ ಔಟ್ ಇದ್ದರೆ (ನಮ್ಮ ಡೆಲ್ ಮಾನಿಟರ್‌ನಲ್ಲಿ ಇದೆ) ಆಗ ಅದರ ಮೂಲಕ ಸ್ಪೀಕರಿಗೆ ಜೋಡಿಸಬಹುದು.
ಬ್ಲೂಟೂತ್ ಸ್ಪೀಕರ್ ಇದ್ದರೂ ಜೋಡಿಸಬಹುದು. ನಮ್ಮಲ್ಲಿರುವ ಕ್ರಿಯೇಟಿವ್ ಬ್ಲೂಟೂತ್ ಸ್ಪೀಕರ್ ಜೋಡಿಸಿದಾಗ ಧ್ವನಿ ಸರಿಯಾಗಿ ಬರಲಿಲ್ಲ. ಟಿ.ವಿಯಲ್ಲಿ ಸರಿಯಾಗಿ ಬಂತು. ಡೆಲ್ ಮಾನಿಟರ್‌ನ ಆಡಿಯೊ ಔಟ್‌ಪುಟ್ ಮೂಲಕವೂ ಧ್ವನಿ ಸರಿಯಾಗಿ ಬಂತು. ಹೆಚ್ಚಿನ ಕೆಲಸಗಳು ಸರಿಯಾಗಿಯೇ ಆದವು. ಆದರೂ ಕೆಲವೊಮ್ಮೆ ತಡೆತಡೆದು ಕೆಲಸ ಮಾಡಿತು. ತುಂಬ ಹೊತ್ತು ಬಳಸಿದರೆ ಸ್ವಲ್ಪ ಬಿಸಿಯಾಗುತ್ತದೆ. ಇನ್ನೂ ಸ್ವಲ್ಪ ಸರಿಯಾಗಿ ಪರೀಕ್ಷಿಸಿ ಸುಧಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರೆ ಒಳ್ಳೆಯದಿತ್ತು ಎನ್ನಬಹುದು. ಬೆಲೆಯೂ ಸ್ವಲ್ಪ ಹೆಚ್ಚೇ ಆಯಿತು ಎಂದು ನನ್ನ ಅನಿಸಿಕೆ.
*
ವಾರದ ಆ್ಯಪ್
ಅಂಗೈಯಲ್ಲಿ ನರ್ಸ್
ನಿಮಗೆ ಅಥವಾ ನಿಮ್ಮ ಹೆತ್ತವರಿಗೆ ದಿನಾ ಔಷಧಿ ತೆಗೆದುಕೊಳ್ಳುವ ಅಗತ್ಯವಿದೆ. ಆದರೆ ಹೊತ್ತು ಹೊತ್ತಿಗೆ ಯಾವ ಯಾವ ಔಷಧಿ ತೆಗೆದುಕೊಳ್ಳಬೇಕೆಂಬುದೇ ಮರೆತು ಹೋಗುತ್ತಿದೆ. ಇಂತಹವರಿಗಾಗಿ ಈ ಕಿರುತಂತ್ರಾಂಶ ಬಂದಿದೆ. ಇದಕ್ಕಾಗಿ Health-PIE Mobile Nurse ಎಂದು ಗೂಗಲ್ ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ದೊರೆಯುತ್ತದೆ. ಔಷಧಿ ತೆಗೆದುಕೊಳ್ಳಲು ನೆನಪಿಸುವುದಷ್ಟೇ ಆಗಿದ್ದರೆ ಅಂತಹ ಕಿರುತಂತ್ರಾಂಶಗಳು ನೂರಾರಿವೆ. ಇದು ನಿಮ್ಮ ವೈದ್ಯರು ನೀಡಿದ ಔಷಧಿ ಚೀಟಿ, ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ, ಫೋಟೊ, ಔಷಧಿಗಳ ಪಟ್ಟಿ, ರಕ್ತದೊತ್ತಡ, ಸಕ್ಕರೆ ಅಂಶ, ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.
ಇವುಗಳನ್ನು ನಿಮ್ಮ ಕುಟುಂಬದವರೊಡನೆ ಮತ್ತು ವೈದ್ಯರೊಡನೆ ಹಂಚಿಕೊಳ್ಳಬಹುದು. ದೂರದೂರಿನಲ್ಲಿರುವ ನಿಮ್ಮ ಕುಟಂಬದವರ ಆರೋಗ್ಯದ ವಿವರಗಳು ನಿಮಗೆ ಈ ಮೂಲಕ ಕಾಲಕಾಲಕ್ಕೆ ಲಭ್ಯ. ಯಾರೊಡನೆ ಹಂಚಿಕೊಳ್ಳುತ್ತೀರೋ ಅವರಿಗೆ ಮಾತ್ರ ಈ ವಿವರ ಲಭ್ಯ. ಈ ಕಿರುತಂತ್ರಾಂಶ ತಯಾರಿಸಿದ್ದು ನಮ್ಮ ಬೆಂಗಳೂರಿನ ಕಂಪೆನಿ. ಆದರೆ ಅವರು ಇದರಲ್ಲಿ ಇಂಗ್ಲಿಷ್ ಭಾಷೆ ಜೊತೆ ಹಿಂದಿ ಭಾಷೆಯ ಸೌಲಭ್ಯ ಮಾತ್ರ ನೀಡಿ ಕನ್ನಡವನ್ನು ಕಡೆಗಣಿಸಿದ್ದಾರೆ. ಭಾರತೀಯ ಭಾಷೆ ಎಂದರೆ ಹಿಂದಿ ಮಾತ್ರವಲ್ಲ ಎಂದು ಇನ್ನೂ ಹಲವರಿಗೆ ತಿಳಿಸುತ್ತಲೇ ಇರಬೇಕಾಗಿದೆ.
*
ಗ್ಯಾಜೆಟ್ ಸುದ್ದಿ
ತೊಳೆಯಬಲ್ಲ ಫೋನ್
ಕೈಗಡಿಯಾರಗಳು ವಾಟರ್‌ಪ್ರೂಫ್ ಆಗಿರುವುದು ಗೊತ್ತು ತಾನೆ? ಅದೇ ಮಾದರಿಯಲ್ಲಿ ಫೋನ್ ಕೂಡ ಇರಬಾರದೇಕೆ ಎಂದು ಆಲೋಚಿಸುತ್ತಿದ್ದರೆ ಅಂಥವರಿಗೆಂದೇ ಬಂದಿದೆ ನೂತನ ಫೋನ್. ಅಂದರೆ ಇದು ತೊಳೆಯಬಲ್ಲ ಫೋನ್. ಫೋನ್ ಬಳಸಿ ಬಳಸಿ ಅದರಲ್ಲಿ ಕೊಳೆಯಾಗಿದ್ದಲ್ಲಿ ಸಾಬೂನು ಹಾಕಿ ತೊಳೆಯಬಹುದು. ಅಂದ ಮೇಲೆ ದಿನಬಳಕೆಯಲ್ಲಿ ಒದ್ದೆ ಕೈಯಲ್ಲೂ ಬಳಸಬಹುದು ಎಂದು ತೀರ್ಮಾನಿಸಬಹುದು. ಈ ಫೋನಿನ ಬೆಲೆ ಸುಮಾರು ₹32,000. ಸದ್ಯಕ್ಕೆ ಜಪಾನಿನಲ್ಲಿ ಲಭ್ಯ.
*
ಗ್ಯಾಜೆಟ್ ಸಲಹೆ
ರಾಮ ರಾವ್ ಅವರ ಪ್ರಶ್ನೆ: ನಾನು ಲೆನೊವೊ ಆಂಡ್ರಾಯ್ಡ್ ಟ್ಯಾಬ್ಲೆಟ್ ಖರೀದಿಸಿದ್ದೇನೆ. ಇದರಲ್ಲಿ ನುಡಿ ತಂತ್ರಾಂಶ ಬಳಸಿ ಕೆಲಸ ಮಾಡಲು ಆಗುತ್ತಿಲ್ಲ. ಇದಕ್ಕೆ ಏನು ಪರಿಹಾರ?
ಉ: ನೀವು ಕನ್ನಡ ಯುನಿಕೋಡ್ ಬಳಸಲು ಕಲಿಯಿರಿ. ಜಸ್ಟ್ ಕನ್ನಡ ಅಥವಾ ಇನ್ಯಾವುದಾದರೂ ಕನ್ನಡದ ಕೀಲಿಮಣೆಯ ಕಿರುತಂತ್ರಾಂಶ ಹಾಕಿಕೊಂಡು ಕನ್ನಡ ಯುನಿಕೋಡ್‌ನಲ್ಲಿ ಮಾಹಿತಿ ಊಡಿಸುವುದನ್ನು ಮಾಡಬಹುದು. ನುಡಿ ತಂತ್ರಾಂಶ ವಿಂಡೋಸ್ 7 ಮತ್ತು ಹಳೆಯ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.
*
ಗ್ಯಾಜೆಟ್ ತರ್ಲೆ
14 ವರ್ಷಕ್ಕಿಂತ ಕಡಿಮೆ ಪ್ರಾಯದ, ಇತ್ತೀಚೆಗಷ್ಟೆ ಗಣಕ, ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸಿದವರಿಗೆ ಕೆಲವೇ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಫ್ಲಾಪಿ ನೋಡಿ ಗೊತ್ತಿರಲಿಕ್ಕಿಲ್ಲ. ಅಂತಹವರಿಗೆ ಒಂದು ನಿಜವಾದ ಫ್ಲಾಪಿ ತೋರಿಸಿದರೆ ಅವರು ಏನು ಅಂದುಕೊಳ್ಳುತ್ತಾರೆ ಗೊತ್ತಾ? ಇದು ಸೇವ್ ಐಕಾನ್‌ನ ಮಾದರಿ ಎಂದುಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.