ಡಿಜಿಟಲ್ ಮಾಹಿತಿಯನ್ನು ನಮಗೆ ತೋರಿಸಲು ಬಳಕೆಯಾಗುವುದು ಪರದೆ ಮತ್ತು ಮುದ್ರಕಗಳು. ಪ್ರಿಂಟರ್ ಅರ್ಥಾತ್ ಮುದ್ರಕಗಳಲ್ಲಿ ಹಲವು ನಮೂನೆಗಳಿವೆ. ಕೆಲವು ಉದಾಹರಣೆಗಳು - ಅತಿ ಕಡಿಮೆ ಗುಣಮಟ್ಟದ ಮುದ್ರಣಕ್ಕೆ ಡಾಟ್‌ಮ್ಯಾಟ್ರಿಕ್ಸ್ ಮುದ್ರಕ, ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಕಡಿಮೆ ಖರ್ಚಿನಲ್ಲಿ ಮತ್ತು ಮಧ್ಯಮ ಗುಣಮಟ್ಟದಲ್ಲಿ ಮುದ್ರಿಸಲು ಇಂಕ್‌ಜೆಟ್ ಮುದ್ರಕ ಹಾಗೂ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಲೇಸರ್ ಮುದ್ರಕ. ಇವಲ್ಲದೆ ಇನ್ನೂ ಒಂದು ನಮೂನೆ ಇದೆ. ಅದು ಬಹೂಪಯೋಗಿಗಳು. ಇವುಗಳಲ್ಲಿ ಮುದ್ರಕ, ಸ್ಕ್ಯಾನರ್, ಕಾಪಿಯರ್ ಮತ್ತು ಫ್ಯಾಕ್ಸ್ ಎಲ್ಲ ಒಂದರಲ್ಲೇ ಇರುತ್ತವೆ. ಇಂತಹವುಗಳಲ್ಲಿ ಹೆಚ್ಚಿನವು ಇಂಕ್‌ಜೆಟ್ ಮುದ್ರಕಗಳಾಗಿರುತ್ತವೆ. ಅಂತಹ ಒಂದು ಬಹೂಪಯೋಗಿ ಸಾಧನ ಎಪ್ಸನ್ ಕಂಪನಿಯ ಎಲ್ 6190 (Epson L6190 Wi-Fi All-in-One Ink Tank Printer). ಇದು ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು
ಸ್ಕ್ಯಾನರ್, ಕಾಪಿಯರ್, ಇಂಕ್‌ಜೆಟ್ ಮುದ್ರಕ ಮತ್ತು ಫ್ಯಾಕ್ಸ್, ಬಣ್ಣ ಮತ್ತು ಕಪ್ಪು ಬಿಳುಪು ಮುದ್ರಣ, 4800 x 1200 dpi ಮುದ್ರಣದ ರೆಸೊಲೂಶನ್, 1.44 ಇಂಚು ಗಾತ್ರದ ಎಲ್‌ಸಿಡಿ ಪರದೆ, ನಿಮಿಷಕ್ಕೆ 8 ಪುಟದ ತನಕ ಮುದ್ರಣ ವೇಗ, ಫ್ಲಾಟ್‌ಬೆಡ್ ಸ್ಕ್ಯಾನರ್, 1,200 x 2,400 dpi ಸ್ಕ್ಯಾನರ್‌ನ ರೆಸೊಲೂಶನ್, ಎ4 ಗಾತ್ರದ ಪುಟವನ್ನು ಸ್ಕ್ಯಾನ್ ಮಾಡಬಹುದು, ಎತರ್‌ನೆಟ್, ಯುಎಸ್‌ಬಿ ಮತ್ತು ವೈಫೈ ಸಂಪರ್ಕ, 250ರ ತನಕ ಕಾಗದ ಇಡಬಹುದು, 200 x 200 dpi ಫ್ಯಾಕ್ಸ್ ರೆಸೊಲೂಶನ್, 50 x 41 x 30.8 ಸೆ.ಮೀ. ಗಾತ್ರ, 9.14 ಕಿ.ಗ್ರಾಂ. ತೂಕ, ಇತ್ಯಾದಿ. ನಿಗದಿತ ಬೆಲೆ ₹24,099.
ಬಹುತೇಕ ಜನರು ಇದನ್ನು ಮುದ್ರಕವಾಗಿಯೇ ಬಳಸುತ್ತಾರೆ. ಆದುದರಿಂದ ಮೊದಲನೆಯದಾಗಿ ಮುದ್ರಕವಾಗಿ ಇದನ್ನು ಗಮನಿಸೋಣ. ಇದು ಬಣ್ಣದ ಇಂಕ್‌ಜೆಟ್ ಮುದ್ರಕ. ಅತಿ ಹೆಚ್ಚಿನ, ಅಂದರೆ ಪ್ರತಿ ಇಂಚಿಗೆ 4800 x 1200 ಚುಕ್ಕಿಗಳ (DPI = dots per inch) ರೆಸೊಲೂಶನ್. ಬಣ್ಣದಲ್ಲಿ ಮುದ್ರಿಸಿದರೆ ನಿಮಿಷಕ್ಕೆ ಅಂದಾಜು 8 ಪ್ರತಿ ಮುದ್ರಣ ವೇಗ ಎಂದು ಹೇಳಿಕೊಂಡಿದ್ದಾರೆ. ಆದರೆ ನನಗೆ ಇದಕ್ಕಿಂತ ಕಡಿಮೆ ವೇಗ ಎಂದು ಅನ್ನಿಸಿತು. ಇದು ಬಣ್ಣ ಹಾಗೂ ಕಪ್ಪು ಬಿಳುಪು ಮುದ್ರಕ. ಪಠ್ಯ, ಚಿತ್ರ, ಫೋಟೊ ಎಲ್ಲ ಮುದ್ರಿಸಿ ನೋಡಿದೆ. ಕಪ್ಪು ಬಿಳುಪು ಮುದ್ರಣ ಪರವಾಗಿಲ್ಲ. ಬಣ್ಣದ ಗ್ರಾಫಿಕ್ಸ್ (vector art work) ಮುದ್ರಣ ಚೆನ್ನಾಗಿದೆ. ಬಣ್ಣದ ಫೋಟೊ ಮುದ್ರಣ ತೃಪ್ತಿದಾಯಕವಾಗಿದೆ. ಇಂಕ್‌ಜೆಟ್ ಮುದ್ರಕ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಇದಕ್ಕೆ ಪಾಸು ಮಾರ್ಕು ನೀಡಬಹುದು. ಇಂಕ್‌ಜೆಟ್ ಮುದ್ರಕವಾಗಿರುವುದರಿಂದ ಕಡಿಮೆ ತೂತುಗಳಿರುವ (less porous) ಉತ್ತಮ ಹೊಳಪಿನ (glossy) ಕಾಗದ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಇದನ್ನು ಸ್ಕ್ಯಾನರ್ ಆಗಿಯೂ ಬಳಸಬಹುದು. ನಿಮ್ಮಲ್ಲಿ ಹಳೆಯ ಫೋಟೊಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಗಣಕಕ್ಕೆ ವರ್ಗಾಯಿಸಲು, ಇಮೇಲ್ ಮೂಲಕ ಕಳುಹಿಸಲು, ಫೇಸ್‌ಬುಕ್‌ಗೆ ಏರಿಸಲು ಇದನ್ನು ಬಳಸಬಹುದು. ಹಾಗೆಯೇ ನಿಮ್ಮಲ್ಲಿರುವ ಹಳೆಯ ಪುಸ್ತಕ ಅಥವಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕದಲ್ಲಿ ಸಂಗ್ರಹಿಸಿಡಲು ಇದು ಉತ್ತಮ. ಸ್ಕ್ಯಾನರ್ ಆಗಿ ಇದರ ರೆಸೊಲೂಶನ್ ಪ್ರತಿ ಇಂಚಿಗೆ 1200 x 2400 ಚುಕ್ಕಿ. ಅಂದರೆ ಒಂದು ಮೇಲ್ಮಟ್ಟದ ಸ್ಕ್ಯಾನರ್‌ನ ಗುಣಮಟ್ಟ ಇದೆ ಎಂದು ತೀರ್ಮಾನಿಸಬಹುದು. ಇದು ಹೆಚ್ಚು ಅಂದರೆ ಎ4 ಗಾತ್ರದ ಹಾಳೆಯನ್ನು ಸ್ಕ್ಯಾನ್ ಮಾಡಬಲ್ಲುದು. ಇದು ಬಣ್ಣದಲ್ಲೂ ಸ್ಕ್ಯಾನ್ ಮಾಡಬಲ್ಲುದು. ಸ್ಕ್ಯಾನರ್ ಆಗಿ ಇದರ ಗುಣಮಟ್ಟ ತೃಪ್ತಿದಾಯಕವಾಗಿದೆ. ಎಲ್ಲ ಬಣ್ಣಗಳನ್ನು ಸರಿಯಾಗಿ ಗುರುತಿಸಿದೆ.
ಇದರ ಮೂರನೆಯ ಉಪಯೋಗ ಕಾಪಿಯರ್ ಆಗಿ. ಅಂದರೆ ಇದನ್ನು ನೆರಳಚ್ಚು ಯಂತ್ರವಾಗಿ ಬಳಸಬಹುದು. ಕಾಪಿಯರ್ ಆಗಿ ಇದರ ಗುಣಮಟ್ಟ ತೃಪ್ತಿಕರವಾಗಿದೆ. ಕಾಪಿಯರ್ ಕೆಲಸ ಮಾಡಲು ಮೂಲ ದಾಖಲೆಯ ಹಾಳೆಯನ್ನು ಫ್ಲಾಟ್‌ಬೆಡ್ ಸ್ಕ್ಯಾನರ್ ಮೇಲೆ ಇಡಬೇಕು. ಇದು ಕಪ್ಪು ಬಿಳುಪು ಹಾಗೂ ಬಣ್ಣದಲ್ಲಿ ಪ್ರತಿ ಮಾಡುತ್ತದೆ. ಕಾಪಿಯರ್ ಆಗಿಯೂ ಇದಕ್ಕೆ ಪಾಸ್ ಮಾರ್ಕು ನೀಡಬಹುದು.
ಇದನ್ನು ಫ್ಯಾಕ್ಸ್ ಆಗಿಯೂ ಬಳಸಬಹುದು. ಆದರೆ ಇತ್ತೀಚೆಗೆ ಫ್ಯಾಕ್ಸ್ ಬಳಸುವವರೇ ಇಲ್ಲವಾಗಿದೆ. ಇದು ಫ್ಯಾಕ್ಸ್ ಆಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾನು ಪರಿಶೀಲಿಸಲಿಲ್ಲ.
ಈ ಬಹೂಪಯೋಗಿ ಮುದ್ರಕವನ್ನು ಎತರ್‌ನೆಟ್, ಯುಎಸ್‌ಬಿ ಮೂಲಕ ಗಣಕಕ್ಕೆ ಅಥವಾ ವೈಫೈ ಮೂಲಕ ಗಣಕಜಾಲಕ್ಕೆ ಜೋಡಿಸಬಹುದು. ವೈಫೈ ಸೌಲಭ್ಯ ನೀಡಿರುವುದು ನಿಜಕ್ಕೂ ಉತ್ತಮ. ಇದಕ್ಕೆ ಸ್ಮಾರ್ಟ್‌ಫೋನ್‌ಗಳಿಗೆ ಅಗತ್ಯ ಕಿರುತಂತ್ರಾಂಶ (ಆ್ಯಪ್) ಲಭ್ಯವಿದೆ. ಅದನ್ನು ಬಳಸಿ ವೈಫೈ ಮೂಲಕ, ಅಂತರಜಾಲದ ಮೂಲಕವೂ ಮುದ್ರಿಸಬಹುದು, ಸ್ಕ್ಯಾನ್ ಮಾಡಬಹುದು.
ನಿಮಗೆ ಫಾಕ್ಸ್ ಅಗತ್ಯವಿಲ್ಲದಿದ್ದಲ್ಲಿ ಇದರ ಬೆಲೆ ಸ್ವಲ್ಪ ಹೆಚ್ಚಾಯಿತು ಎನ್ನಬಹುದು. ಆದರೂ ಎಲ್ಲ ಕೆಲಸಗಳನ್ನು ಗಮನಿಸಿದರೆ ನೀಡುವ ಹಣಕ್ಕೆ ತೊಂದರೆ ಇಲ್ಲ ಎನ್ನಬಹುದು.
ಮ್ಯೂಸಿಕಲಿ
ಯಾರದೋ ಹಾಡಿಗೆ, ನೀವೇ ಅಭಿನಯಿಸಿ ವಿಡಿಯೊ ತಯಾರಿಸುವ ಇಚ್ಛೆ ನಿಮಗಿದೆಯೇ? ಹಾಗಿದ್ದರೆ ನಿಮಗೆ ಗೂಗಲ್ ಪ್ಲೇ ಸ್ಟೋರಿನಲ್ಲಿರುವ musical.ly ಎಂಬ ಹೆಸರಿನ ಕಿರುತಂತ್ರಾಂಶ (ಆ್ಯಪ್) ಬೇಕು. ಇದನ್ನು ನೀವು http://bit.ly/gadgetloka326 ಜಾಲತಾಣದ ಮೂಲಕವೂ ಪಡೆಯಬಹುದು. ಇದರಲ್ಲಿರುವ ಸಾವಿರಾರು ಸಂಗೀತದ ತುಣುಕುಗಳಿಗೆ ನೀವು ಅಭಿನಯಿಸಿ ಸುಮಾರು 15 ಸೆಕೆಂಡುಗಳ ವಿಡಿಯೊ ತಯಾರಿಸಬಹುದು. ನಂತರ ಅದನ್ನು ನಿಮ್ಮ ಸ್ನೇಹಿತರುಗಳಿಗೆ ಇದೇ ಕಿರುತಂತ್ರಾಂಶದ ಮೂಲಕ ಅಥವಾ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಬಹುದು. ಇನ್ನು ತಡವೇಕೆ? ನಿಮ್ಮಲ್ಲಿರುವ ನಟ ಯಾ ನಟಿ ಹೊರಬರಲಿ.
Inkjet = ಇಂಕ್‌ಜೆಟ್
ಕಾಗದದ ಮೇಲೆ ಕಪ್ಪು ಅಥವಾ ಬಣ್ಣದ ಶಾಯಿಯ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಬಳಸುವ ಮುದ್ರಕಗಳನ್ನು (ಪ್ರಿಂಟರ್) ಇಂಕ್‌ಜೆಟ್ ಮುದ್ರಕ ಎಂದು ಕರೆಯುತ್ತಾರೆ.
ಗ್ಯಾಜೆಟ್ ಸಲಹೆ
ನಿಮ್ಮ ಸ್ಮಾರ್ಟ್‌ಫೋನ್ ಬೇಗನೆ ಚಾರ್ಜ್ ಆಗಬೇಕೇ? ಅದನ್ನು ಫ್ಲೈಟ್ ಮೋಡ್‌ನಲ್ಲಿಟ್ಟು ಚಾರ್ಜ್ ಮಾಡಿ.
ಗ್ಯಾಜೆಟ್ ತರ್ಲೆ
ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿತಿಂಡಿಗಳ ಹೆಸರಿರುವುದು ನಿಮಗೆ ತಿಳಿದಿರಬಹುದು. ಮುಂದಿನ ಆವೃತ್ತಿಯ ಹೆಸರು ಇಂಗ್ಲಿಷಿನ P ಅಕ್ಷರದಿಂದ ಪ್ರಾರಂಭವಾಗಬೇಕು. ಆದುದರಿಂದ ಅದಕ್ಕೆ ‘ಪಾಯಸ’ ಎಂಬ ಹೆಸರನ್ನು ಸೂಚಿಸೋಣವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.