ಕ್ಯಾಮೆರಾಗಳಲ್ಲಿ ಹಲವು ನಮೂನೆ ಇವೆ. ಏಮ್-ಆಂಡ್-ಶೂಟ್ ಮತ್ತು ಎಸ್‌ಎಲ್‌ಆರ್ ಎಂಬುದು ಎರಡು ಪ್ರಮುಖ ವಿಭಾಗಗಳು. ಸಾಮಾನ್ಯವಾಗಿ ಎಸ್‌ಎಲ್‌ಆರ್ ಕ್ಯಾಮೆರಾ ಎಂದರೆ ವೃತ್ತಿನಿರತರು ಬಳಸುವುದು. ಏಮ್-ಆಂಡ್-ಶೂಟ್ ಹವ್ಯಾಸಿಗಳಿ ಗಾಗಿ ಎನ್ನಬಹುದು.
ಚಿಕ್ಕ ಏಮ್-ಆಂಡ್-ಶೂಟ್ ಕ್ಯಾಮೆರಾಗಳಲ್ಲಿ ತುಂಬ ಆಯ್ಕೆಗಳು ಇರುವುದಿಲ್ಲ. ಕ್ಯಾಮೆರಾ ತನಗಿಷ್ಟಬಂದಂತೆ ಆಯ್ಕೆಗಳನ್ನು ಮಾಡಿಕೊಂಡು ಫೋಟೊ ತೆಗೆಯುತ್ತದೆ. ಕ್ಯಾನನ್ ಕಂಪೆನಿಯ ಇಂತಹ ಕ್ಯಾಮೆರಾಗಳಲ್ಲಿ ಮತ್ತಷ್ಟು ವಿಭಾಗಗಳಿವೆ. ಐಎಕ್ಸ್‌ಯುಎಸ್ ಶ್ರೇಣಿಯ ಕ್ಯಾಮೆರಾಗಳು ಅತಿ ಚಿಕ್ಕದಾಗಿರುತ್ತವೆ. ಅಂತಹ ಒಂದು ಪುಟಾಣಿ ಕ್ಯಾಮೆರಾ ನಮ್ಮ ಈ ವಾರದ ಅತಿಥಿ. ಅದುವೇ ಕ್ಯಾನನ್ ಐಎಕ್ಸ್‌ಯುಎಸ್ 275 ಎಚ್‌ಎಸ್ (Canon IXUS 275 HS).
ಗುಣವೈಶಿಷ್ಟ್ಯಗಳು
ಏಮ್-ಆಂಡ್-ಶೂಟ್ ನಮೂನೆ, 12x ಆಪ್ಟಿಕಲ್ ಝೂಮ್, 35ಮಿ.ಮೀ. ಕ್ಯಾಮೆರಾಕ್ಕೆ ಹೋಲಿಸುವು ದಾದರೆ 25 ಮಿ.ಮೀ.ಯಿಂದ 300 ಮಿ.ಮೀ. ಫೋಕಲ್ ಲೆಂತ್, 20 ಮೆಗಾಪಿಕ್ಸೆಲ್ ರೆಸೊಲೂಶನ್, ಹೈಡೆಫಿನಿಶನ್ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ, 75 ಮಿ.ಮೀ. ಎಲ್‌ಸಿಡಿ ಪರದೆ, ಸಿಎಂಓಎಸ್ (CMOS) ತಂತ್ರಜ್ಞಾನ, F/3.6 ರಿಂದ F/10, 1 ಸೆಕೆಂಡಿನಿಂದ 1/2000 ಸೆಕೆಂಡು ಷಟರ್ ವೇಗ, 80 ರಿಂದ 1600 ಐಎಸ್‌ಓ ಆಯ್ಕೆ, ಹೆಚ್ಚಿಗೆ ಮೆಮೊರಿಗಾಗಿ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಣೆ, ವಿಡಿಯೊಗಾಗಿ ಚಿಕ್ಕ ಎಚ್‌ಡಿಎಂಐ ಕಿಂಡಿ, ಸಂಪೂರ್ಣ ಆಟೋಮ್ಯಾಟಿಕ್, ಹಲವು ನಮೂನೆಯ ದೃಶ್ಯ ಮತ್ತು ಪರಿಣಾಮಗಳ ಆಯ್ಕೆ, ವೈಫೈ, ಎನ್‌ಎಫ್‌ಸಿ, 99.6 x 59.0 x 22.8 ಮಿ.ಮೀ. ಗಾತ್ರ, 147 ಗ್ರಾಂ ತೂಕ, ಇತ್ಯಾದಿ. ಹಲವು ಬಣ್ಣಗಳಲ್ಲಿ ಲಭ್ಯ. ಇದರ ಮಾರುಕಟ್ಟೆ ಬೆಲೆ ಸುಮಾರು ₹11,000.
ಈ ನಮೂನೆಯ ಚಿಕ್ಕ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿ ಹಲವು ರೀತಿಯ ದೃಶ್ಯಗಳ ಆಯ್ಕೆ ಇರುತ್ತದೆ. ಇದರಲ್ಲೂ ಇವೆ. ಪೋರ್ಟ್ರೈಟ್, ಕತ್ತಲೆ, ಫಿಶ್ ಐ, ಹಳೆಯ ಆಟಿಕೆ ಕ್ಯಾಮೆರಾ, ಅತಿ ಹತ್ತಿರ (ಮ್ಯಾಕ್ರೊ), ಕಪ್ಪು-ಬಿಳುಪು, ಇತ್ಯಾದಿ ಹಲವು ಆಯ್ಕೆಗಳಿವೆ. ದೃಶ್ಯದಲ್ಲಿರುವ ವ್ಯಕ್ತಿಗಳ ಮುಖಗಳನ್ನು ಗುರುತಿಸಿ ಅಲ್ಲಿಗೆ ಸರಿಯಾಗಿ ಫೋಕಸ್ ಮಾಡು ವುದು, ಮುಖದ ಮೇಲೆ ಇರುವ ಬೆಳಕಿಗೆ ಸರಿಯಾಗಿ ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳುವುದು ಎಲ್ಲ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಬೆಳಕು ಚೆನ್ನಾಗಿದ್ದಾಗ ಮತ್ತು ವಸ್ತು ಚಲನೆಯಲ್ಲಿಲ್ಲದಾಗ, ಫೋಟೊಗಳು ಚೆನ್ನಾಗಿಯೇ ಬರುತ್ತವೆ. ಆದ್ದರಿಂದ ಇದು ಹವ್ಯಾಸಿಗಳಿಗಾಗಿ ತಯಾರಿಸಿದ ಕ್ಯಾಮೆರಾ ಎನ್ನಬಹುದು.
ಇದರಲ್ಲಿ ವಿವಿಧ ಪರಿಣತ ಆಯ್ಕೆಗಳು, ಅಂದರೆ ಷಟ್ಟರ್ ವೇಗ, ಅಪೆರ್ಚರ್, ಇತ್ಯಾದಿ ಆಯ್ಕೆಗಳಿಲ್ಲ. ಐಎಸ್‌ಒ ಮಾತ್ರ ಬದಲಾಯಿಸ ಬಹುದು. ಫ್ಲಾಶ್ ಬಳಸಿದಾಗ ರಾತ್ರಿ ಹೊತ್ತಿನಲ್ಲಿ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ಫ್ಲಾಶ್‌ನ ವ್ಯಾಪ್ತಿಯೂ ಚೆನ್ನಾಗಿದೆ.
ಅತಿ ಹತ್ತಿರದಿಂದ ಫೋಟೊ ತೆಗೆಯಲು ಇದು ಚೆನ್ನಾಗಿದೆ. ಅಂದರೆ ಒಂದು ಮಟ್ಟಿನ ಮ್ಯಾಕ್ರೋ ಫೋಟೊಗ್ರಫಿ ಮಾಡಬಹುದು. ಆದರೆ ವಸ್ತು ಚಲನೆಯಲ್ಲಿರಬಾರದು. ಜೊತೆಗೆ ಬೆಳಕೂ ಚೆನ್ನಾಗಿರಬೇಕು. ಯಾಕೆಂದರೆ ಇದರ ಫ್ಲಾಶ್‌ನ ಬೆಳಕಿನ ಪ್ರಖರತೆಯನ್ನು ಹೆಚ್ಚು ಕಡಿಮೆ ಮಾಡಲು ಆಗುವುದಿಲ್ಲ. ಇಂತಹ ಸೌಲಭ್ಯ ಇರುವುದು ದುಬಾರಿ ವೃತ್ತಿನಿರತರ ಕ್ಯಾಮೆರಾಗಳಲ್ಲಿ ಮಾತ್ರ.
ಈ ಕ್ಯಾಮೆರಾ ಒಂದು ವಿಷಯದಲ್ಲಿ ಮೇಲುಗೈ ಸಾಧಿಸುತ್ತದೆ. ಅದೆಂದರೆ ಅತಿ ಕಡಿಮೆ ಬೆಳಕಿನಲ್ಲಿ ಫೋಟೊ ತೆಗೆಯುವುದು. ಅದಕ್ಕೆಂದೇ ಇದರಲ್ಲಿ ವಿಶೇಷ ಆಯ್ಕೆ ಇದೆ. ಆದರೆ ಹಾಗೆ ತೆಗೆದ ಫೋಟೊ ಸ್ವಲ್ಪ ಜಾಳು ಜಾಳಾಗಿ (grainy) ಮೂಡಿಬರುತ್ತದೆ.
ವಿಡಿಯೊ ಪರವಾಗಿಲ್ಲ. ಪೂರ್ತಿ ಹೈಡೆಫಿನಿಶನ್ ವಿಡಿಯೊ ಮಾಡಬಹುದು (1920 x 1080). ಒಂದು ಸಲಕ್ಕೆ ಸುಮಾರು 30 ನಿಮಿಷದ ವಿಡಿಯೊ ಮಾಡಬಹುದು. ವಿಡಿಯೊ ಚಿತ್ರೀಕರಣ ಮಾಡುತ್ತಿರುವಾಗ ಕ್ಯಾಮೆರಾ ಅಥವಾ ವಸ್ತು ಫೋಕಸ್ ವ್ಯಾಪ್ತಿಯಿಂದ ತುಂಬ ದೂರ ಅಥವಾ ಹತ್ತಿರ ಬಂದರೆ ಇದು ಅಷ್ಟೇ ವೇಗವಾಗಿ ಹೊಸ ದೂರಕ್ಕೆ ಫೋಕಸ್ ಮಾಡಿಕೊಳ್ಳುವುದಿಲ್ಲ.
ಇದರಲ್ಲಿ ಇರುವುದು ರೀಚಾರ್ಜೆಬಲ್ ಬ್ಯಾಟರಿ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 200 ರಿಂದ 350 ಫೋಟೊ ತೆಗೆಯಬಹುದು. ಹೆಚ್ಚು ಫ್ಲಾಶ್ ಬಳಸಿದರೆ ಕಡಿಮೆ ಫೋಟೊ ತೆಗೆಯಬಹು ದಷ್ಟೆ. ಮಾಮೂಲಿ ಬ್ಯಾಟರಿ ಹಾಕುವ ಸೌಲಭ್ಯ ಇಲ್ಲ.
ಇದರಲ್ಲಿ ವೈಫೈ ಮತ್ತು ಎನ್‌ಎಫ್‌ಸಿ ಸೌಲಭ್ಯಗಳಿವೆ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಅದಕ್ಕೆಂದೇ ವಿಶೇಷ ಕ್ಯಾನನ್ ಆಪ್ ಉಚಿತವಾಗಿ ದೊರೆಯುತ್ತದೆ. ಅದರ ಮೂಲಕ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿಗೆ ಸಂಪರ್ಕಿಸಿ ಫೋಟೊಗಳನ್ನು ಕ್ಯಾಮೆರಾದಿಂದ ಸ್ಮಾರ್ಟ್‌ಫೋನಿಗೆ ವರ್ಗಾಯಿಸಬಹುದು.
ನಂತರ ಫೋನಿನಿಂದ ಇಮೈಲ್ ಮೂಲಕ ಕಳುಹಿಸುವುದು, ಫೇಸ್‌ಬುಕ್‌ಗೆ ಸೇರಿಸುವುದು. ಟ್ವೀಟ್ ಮಾಡುವುದು, ಇತ್ಯಾದಿ ಮಾಡಬಹುದು. ಆದರೆ ಈ ಕ್ಯಾಮೆರಾದ ಪೆಟ್ಟಿಗೆಯಲ್ಲಿ ಇವನ್ನೆಲ್ಲ ಹೇಗೆ ಮಾಡುವುದು ಎಂದು ವಿವರಿಸುವ ಕೈಪಿಡಿ ಇಲ್ಲ.
ಅದಕ್ಕಾಗಿ ಕ್ಯಾನನ್ ಕಂಪೆನಿಯ ಜಾಲತಾಣದಲ್ಲಿ ಹುಡುಕಾಡಬೇಕು. ಒಟ್ಟಿನಲ್ಲಿ ಇದು ಕಿಸೆಯಲ್ಲಿ ಹಿಡಿಸಬಹುದಾದ ಪುಟಾಣಿ ಕ್ಯಾಮೆರಾ. ಇದು ಹವ್ಯಾಸಿಗಳಿಗೆ ಮಾತ್ರ. ಯಾವುದೇ ಪರಿಣತ ಆಯ್ಕೆಗಳು ಇದರಲ್ಲಿಲ್ಲ.
ವಾರದ ಆಪ್
ಆಟೋರಾಜ
ಆಟೊರಿಕ್ಷಾಗಳು ಅಡ್ಡಾದಿಡ್ಡಿ ಓಡುವಾಗ ಹಾಗೆಯೇ ನಾವೂ ಓಡಿಸಿದರೆ ಹೇಗೆ ಎಂಬ ಆಸೆ ನಿಮಗೆ ಯಾವತ್ತಾದರೂ ಮೂಡಿತ್ತೇ? ಹಾಗಿದ್ದಲ್ಲಿ ಈಗ ನಿಮಗಾಗಿ ಆಟೊರಿಕ್ಷಾ ಓಡಿಸುವ ಆಟ ಬಂದಿದೆ. ಗೂಗ್ಲ್ ಪ್ಲೇ ಸ್ಟೋರಿನಲ್ಲಿ Auto Rickshaw Rash ಎಂದು ಹುಡುಕಿದರೆ ಇದು ನಿಮಗೆ ದೊರೆಯುತ್ತದೆ. ಅಸ್ಫಾಲ್ಟ್ ಅಥವಾ ಎನ್‌ಎಫ್‌ಎಸ್‌ಗಳಷ್ಟು ಉತ್ತಮ ಮಟ್ಟದ ಆಟ ಇದಲ್ಲ. ಹಲವು ಹಂತಗಳೂ ಇದರಲ್ಲಿಲ್ಲ. ಈ ಆಟದ ವೈಶಿಷ್ಟ್ಯ ಇರುವುದು ಇದು ಕನ್ನಡಿಗರು ಕನ್ನಡಿಗರಿಗಾಗಿ ತಯಾರಿಸಿದ ಆಟ ಎಂಬುದು. ಆಗಾಗ ಕನ್ನಡದಲ್ಲಿ ಬೈಯುತ್ತದೆ! ಉದಾಹರಣೆಗೆ ರಿಕ್ಷಾ ಸರಿಯಾಗಿ ಓಡಿಸದಿದ್ದಾಗ ಇದು ‘ಏನ್ ಮಗಾ ಸರಿಯಾಗಿ ಓಡ್ಸಕ್ಕೆ ಬರಲ್ವಾ’ ಎಂದು ಹೇಳುತ್ತದೆ. ಬೋರ್ ಆದಾಗ ಸ್ವಲ್ಪ ಸಮಯ ಆಡಬಹುದಾದ ಆಟ ಇದು.
ಗ್ಯಾಜೆಟ್ ಸುದ್ದಿ
ಸ್ವಂತೀಗೊಂದು ಡ್ರೋನ್ನಿ
ಮ್ಮದೇ ಫೋಟೊ ನೀವೇ ತೆಗೆಯುವುದಕ್ಕೆ ಸ್ವಂತೀ (ಸೆಲ್ಫೀ) ಎನ್ನುತ್ತಾರೆ. ಇದಕ್ಕೆಂದು ಸ್ವಂತೀ ಕೋಲುಗಳೂ ಲಭ್ಯವಿವೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಂತೀ ತೆಗೆಯಲೆಂದೇ ಡ್ರೋನ್ ಕೂಡ ತಯಾರಾಗಿದೆ. ಈ ಡ್ರೋನ್ (ಪುಟಾಣಿ ಹೆಲಿಕಾಪ್ಟರ್ ಎನ್ನಬಹುದು) ನೀವು ಹೋದಲ್ಲೆಲ್ಲ ನಿಮ್ಮನ್ನು ಹಿಂಬಾಲಿಸಿ ನಿಮ್ಮ ಫೋಟೊ ತೆಗೆಯುತ್ತದೆ. ನೀವು ಸೈಕಲ್ ಓಡಿಸುವಾಗ, ಹಿಮದಲ್ಲಿ ಸ್ಕೀಯಿಂಗ್ ಮಾಡುವಾಗ, ಈಜುವಾಗ, ಕಡಿದಾದ ಜಾಗದಲ್ಲಿ ನದಿಯಲ್ಲಿ ತೆಪ್ಪದಲ್ಲಿ ಸಾಹಸ ಮಾಡುವಾಗ-ಇಂತಹ ಸಂದರ್ಭಗಳಲ್ಲಿ ಇದು ಸಹಾಯಕ್ಕೆ ಬರುತ್ತದೆ.
ಗ್ಯಾಜೆಟ್ ಸಲಹೆ
ಮಾರುತಿ ರಾವ್ ಅವರ ಪ್ರಶ್ನೆ: ಸ್ಮಾರ್ಟ್‌ಫೋನ್‌ಗಳಲ್ಲಿ ಧ್ವನಿ ಆಧಾರದಲ್ಲಿ ಕೆಲಸ ಮಾಡುವ ತಂತ್ರಾಂಶ ಇರುವ ವ್ಯವಸ್ಥೆ ಇದೆಯೆ? ನನ್ನ ಗೆಳೆಯನಿಗೆ ದೃಷ್ಟಿ ಇರುವುದಿಲ್ಲ ಆದರೂ JAWS ತಂತ್ರಾಂಶ ಬಳಸಿ ಕಂಪ್ಯೂಟರ್ ಕೆಲಸ ಸಮಾಡಿ ಅನುಭವ ಇರುತ್ತದೆ. ಆತನಿಗೆ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸಬೇಕೆಂಬ ಆಸೆ ಇದೆ. ದಯವಿಟ್ಟು ಈ ಬಗೆಯ ಸ್ಮಾರ್ಟ್‌ಫೋನ್ ಇದ್ದರೆ ತಿಳಿಸಿ.
ಉ: ದೃಷ್ಟಿವಂಚಿತರು ಸಹ ಇತರರಂತೆ ಸ್ಮಾರ್ಟ್‌ಫೋನ್ ಬಳಸಬಹುದು. ‘ಸ್ಕ್ರೀನ್ ರೀಡರ್’ ತಂತ್ರಾಂಶಗಳು ಸ್ಮಾರ್ಟ್ ಫೋನ್‌ಗಳಿಗೂ ಲಭ್ಯವಿವೆ. ಆಪಲ್ ಕಂಪನಿಯ ಐಫೋನ್ ಹಾಗು ಆಂಡ್ರಾಯಿಡ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಲ್ಲ ವಿವಿಧ ಸ್ಕ್ರೀನ್ ರೀಡರ್‌ಗಳು ಉಚಿತವಾಗಿಯೇ ಲಭ್ಯವಿವೆ. ಐಓಎಸ್‌ಗೆ ‘voice over’ಎಂಬ ಸ್ಕ್ರೀನ್ ರೀಡರ್ ತಂತ್ರಾಂಶವನ್ನು ಆಪಲ್ ಕಂಪೆನಿಯೇ ಒದಗಿಸುತ್ತದೆ. ಆಂಡ್ರಾಯಿಡ್‌ಗೆ ‘talk back’ ಎಂಬ ಸ್ಕ್ರೀನ್ ರೀಡರ್ ಅನ್ನು ಗೂಗ್ಲ್ ಕಂಪೆನಿಯೇ ನೀಡಿದೆ. ಆಂಡ್ರಾಯಿಡ್ 4.4 ಕ್ಕಿಂತ ನಂತರದ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ದೃಷ್ಟಿವಂಚಿತರು ಯಾವುದೇ ಸಮಸ್ಯೆಯಿಲ್ಲದೇ ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ inclusiveandroid.tk ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಮಾಹಿತಿ ನೀಡಿದವರು ಸ್ವತಃ ದೃಷ್ಟಿ ವಂಚಿತರಾಗಿದ್ದು ಗಣಕ ಮತ್ತು ಸ್ಮಾರ್ಟ್‌ಫೋನ್ ಗಳನ್ನು ಸಮರ್ಥವಾಗಿ ಬಳಸುತ್ತಿರುವ ಟಿ.ಎಸ್. ಶ್ರೀಧರ್ ಅವರು.
ಗ್ಯಾಜೆಟ್ ತರ್ಲೆ
ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದ ರೋಗಿಯೊಬ್ಬ ಸತ್ತುಹೋದ. ಯಾಕೆ ಸತ್ತ ಎಂದು ತನಿಖೆ ನಡೆಸಿದಾಗ ಪತ್ತೆಯಾದ ಸಂಗತಿಯೇನೆಂದರೆ ರೋಗಿಯನ್ನು ನೋಡಲು ಬಂದಿದ್ದ ಸ್ನೇಹಿತನೊಬ್ಬ ಐಸಿಯು ಯಂತ್ರದ ಪ್ಲಗ್ ಅನ್ನು ಗೋಡೆಯಿಂದ ಕಿತ್ತು ಅಲ್ಲಿ ತನ್ನ ಮೊಬೈಲ್ ಚಾರ್ಜರ್ ಜೋಡಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.