ಕಡಿಮೆ ಬೆಲೆಯ ಫೋನ್‌ಗಳಿಗೆ ಭಾರತ ಮತ್ತು ಆಫ್ರಿಕಾ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಹಾಂಗ್‌ಕಾಂಗ್ ಮೂಲದ ಟ್ರಾನ್ಶನ್ ಹೋಲ್ಡಿಂಗ್ ಕಂಪನಿ ಈ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಅದು ಟೆಕ್ನೊ, ಐಟೆಲ್ ಮತ್ತು ಇನ್‌ಫಿನಿಕ್ಸ್ ಹೆಸರಿನಲ್ಲಿ ಕಡಿಮೆ ಮತ್ತು ಮಧ್ಯಮ ಬೆಲೆಯ ಫೋನ್‌ಗಳನ್ನು ಭಾರತವೂ ಸೇರಿದಂತೆ 45 ದೇಶಗಳಲ್ಲಿ ವ್ಯಾಪಾರ ಮಾಡುತ್ತಿದೆ. ಐಟೆಲ್ ಎಸ್ 42 ಎಂಬ ಸ್ಮಾರ್ಟ್‌ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ಮಾಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಇನ್‌ಫಿನಿಕ್ಸ್ ಕಂಪನಿಯ ಸ್ಮಾರ್ಟ್ 2 (Infinix Smart 2) ಎಂಬ ಸ್ಮಾರ್ಟ್‌ಫೋನನ್ನು.
ಈ ಫೋನ್ ಕಡಿಮೆ ಬೆಲೆಯ ಫೋನ್ ಎಂದು ಪ್ರಾರಂಭದಲ್ಲೇ ಹೇಳಿದ್ದೇನೆ. ಇದರ ರಚನೆ ಮತ್ತು ವಿನ್ಯಾಸ ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆಯೇ ಇದೆ. ಹಿಂದೆ ಕವಚ ಸ್ವಲ್ಪ ದೊರಗಾಗಿದೆ ಹಾಗೂ ಅದನ್ನು ತೆಗೆಯಬಹುದು. ಹೀಗೆ ಕವಚ ತೆಗೆದಾಗ ಎರಡು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೊಎಸ್‌ಡಿ ಮೆಮೊರಿ ಹಾಕುವ ಜಾಗಗಳು ಕಂಡುಬರುತ್ತವೆ. ಆದರೂ ಬ್ಯಾಟರಿ ತೆಗಯಲು ಮತ್ತು ಬದಲಿಸಲು ಸಾಧ್ಯವಿಲ್ಲ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಇವೆ. ಕೆಳಗಡೆ 3.5 ಮಿ.ಮೀ. ಇಯರ್‌ಫೋನ್ ಮತ್ತು ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಇದು 18:9 ಅನುಪಾತದ ಪರದೆ ಹೊಂದಿದೆ. ಹಿಂದುಗಡೆ ಬಲಭಾಗದಲ್ಲಿ ಕ್ಯಾಮೆರಾ ಮತ್ತು ಅದರ ಕೆಳಗಡೆ ಫ್ಲಾಶ್ ಇದೆ.
ಇದು ಕಡಿಮೆ ಬೆಲೆಯ ಫೋನ್. ಇದರ ಅಂಟುಟು ಬೆಂಚ್‌ಮಾರ್ಕ್ 44,178 ಇದೆ. ಅಂದರೆ ಇದು ವೇಗದ ಫೋನ್ ಅಲ್ಲ. 2 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇದೆ. ಇದು ಕೆಲವು ಕೆಲಸಗಳಿಗೆ ಸಾಕಾಗುವುದಿಲ್ಲ. ಕೆಲವೊಮ್ಮೆ ಕೆಲಸದ ವೇಗ ಸಾಲದು ಎಂಬ ಭಾವನೆ ಬರುತ್ತದೆ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದಾದರೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿಲ್ಲ. ಇದರ ಸಂಗ್ರಹ ಮೆಮೊರಿ ಕಡಿಮೆ ಎಂದು ಅನ್ನಿಸಬಹುದು. ಆದರೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸವಲತ್ತು ಇರುವ ಕಾರಣ ಅಷ್ಟು ಚಿಂತೆ ಮಾಡಬೇಕಾಗಿಲ್ಲ.
ವಿಡಿಯೊ ವೀಕ್ಷಣೆ ಪರವಾಗಿಲ್ಲ. ಹೈಡೆಫಿನೇಷನ್ ವಿಡಿಯೊಗಳ ವೀಕ್ಷಣೆ ಮಾಡಬಹುದು. 4k ವಿಡಿಯೊ ಪ್ಲೇ ಆಗುವುದಿಲ್ಲ. ಸ್ವಲ್ಪ ಆಶ್ಚರ್ಯದ ಸಂಗತಿಯೆಂದರೆ ಇದರ ಆಡಿಯೊ ಎಂಜಿನ್ ಒಂದು ಮಟ್ಟಿಗೆ ಉತ್ತಮವಾಗಿಯೇ ಇದೆ. ಇಯರ್‌ಫೋನ್ ನೀಡಿಲ್ಲ. ಈ ಫೋನಿನಲ್ಲಿರುವ ಎಫ್‌ಎಂ ರೇಡಿಯೊದ ಗ್ರಾಹಕ ಶಕ್ತಿ ನಿಜಕ್ಕೂ ಚೆನ್ನಾಗಿದೆ. ನಮ್ಮ ಮನೆಯ ಒಳಗೆ ಬಹುತೇಕ ಫೋನ್‌ಗಳಲ್ಲಿ ಬಹುತೇಕ ಎಫ್‌ಎಂ ರೇಡಿಯೊ ಚಾನೆಲ್‌ಗಳು ಸರಿಯಾಗಿ ಕೇಳುವವುದಿಲ್ಲ. ಈ ಫೋನಿನಲ್ಲಿ ಹಲವು ಚಾನೆಲ್‌ಗಳು ಚೆನ್ನಾಗಿ ಕೇಳಿಸಿದವು. ರೇಡಿಯೊ ಕೇಳುವುದು ಮತ್ತು ಸಂಗೀತ ಆಲಿಸುವುದು ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಈ ಫೋನ್ ಕೊಳ್ಳಬಹುದು.
ಕ್ಯಾಮೆರಾದ ವಿಷಯದಲ್ಲಿ ಇದು ಕಾಸಿಗೆ ತಕ್ಕ ಕಜ್ಜಾಯ ಎನ್ನಬಹುದು. ಇದರಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾಗಳಿವೆ. ಸರಿಯಾದ ಬೆಳಕಿದ್ದಲ್ಲಿ ಫೋಟೊ ತೆಗೆದರೆ ಒಂದು ಮಟ್ಟಿಗೆ ತೃಪ್ತಿ ನೀಡುವಂತಹ ಫೋಟೊ ತೆಗೆಯುತ್ತದೆ. ಸೆಲ್ಫೀಗೂ ಇದರಲ್ಲಿ ಫ್ಲಾಶ್ ಇದೆ. ವಿಡಿಯೊ ಚಿತ್ರೀಕರಣ ತೃಪ್ತಿದಾಯಕವಾಗಿಲ್ಲ. ಇದರ ಬೆಲೆ ಕಡಿಮೆ ಎಂದು ಗಮನಿಸಿದಾಗ ಈ ಗುಣಮಟ್ಟ ನೀಡುವ ಹಣಕ್ಕೆ ತೃಪ್ತಿ ನೀಡುವಂತಹದು ಎನ್ನಬಹುದು.
ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಸವಲತ್ತು ಇಲ್ಲ. ಆದರೆ ಮುಖವನ್ನು ಗುರುತು ಹಿಡಿಯುವ ಸೌಲಭ್ಯ (face recognition) ನೀಡಿದ್ದಾರೆ. ಈ ಸವಲತ್ತು ಚೆನ್ನಾಗಿಯೇ ಕೆಲಸ ಮಾಡುತ್ತಿದೆ.
ಕನ್ನಡದ ತೋರುವಿಕೆ ಸರಿಯಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡಬಹುದಾದ ಫೋನ್ ಎನ್ನಬಹುದು.
*
ವಾರದ ಆ್ಯಪ್ (app)
ರೇಖೆಗಳ ಸಮಸ್ಯೆ (Line Puzzle: String Art)
ಮೆದುಳಿಗೆ ಕೆಲಸ ಕೊಡುವ ಆಟಗಳು ಎಂದರೆ ನನಗೆ ಯಾವಾಗಲೂ ಇಷ್ಟ. ನನ್ನ ಓದುಗರಿಗೂ ಹಾಗೆಯೇ ಎಂದು ನಾನು ಭಾವಿಸುತ್ತೇನೆ. ಅಂತಹ ಹಲವು ಆಟಗಳ ಕೊಂಡಿಗಳನ್ನು ನಾನು ಸತತ ನೀಡುತ್ತಲೇ ಬಂದಿದ್ದೇನೆ. ಈ ಸಲ ಅಂತಹ ಒಂದು ಆಟದ ಬಗೆಗೆ ನೋಡೋಣ. ಅದು ಗೂಗಲ್ ಪ್ಲೇ ಸ್ಟೋರಿನಲ್ಲಿ Line Puzzle: String Art ಎಂದು ಹುಡುಕಿದರೆ ಸಿಗುತ್ತದೆ. ಅಥವಾ http://bit.ly/gadgetloka343 ಕೊಂಡಿಯ ಮೂಲಕವೂ ಪಡೆಯಬಹುದು. ಇದೊಂದು ಸರಳ ಆಟ. ಅದರಲ್ಲಿ ನೀಡಿರುವ ಚಿತ್ರವನ್ನು ಅಲ್ಲಿ ನೀಡಿರುವ ರೇಖೆಗಳನ್ನು ಬದಲಾಯಿಸುವ ಮೂಲಕ ಪಡೆಯಬೇಕು. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳಿವೆ.
ಗ್ಯಾಜೆಟ್ ಪದ: Hotspot = ಹಾಟ್‌ಸ್ಪಾಟ್
ಸ್ಮಾರ್ಟ್‌ಫೋನಿನ ಅಂರ್ತಜಾಲ ಸಂಪರ್ಕವನ್ನು ಇನ್ನೊಂದು ಸಾಧನದ (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಇತ್ಯಾದಿ) ಜೊತೆ ವೈಫೈ ವಿಧಾನದ ಮೂಲಕ ಹಂಚಿಕೊಳ್ಳಲು ಅದನ್ನು ಸಂಪರ್ಕ ಕೇಂದ್ರವನ್ನಾಗಿಸುವುದು. ಹಾಗೆ ಮಾಡುವಾಗ ಈ ಹಾಟ್‌ಸ್ಪಾಟ್‌ಗೆ ಒಂದು ಹೆಸರು ಮತ್ತು ಅದಕ್ಕೆ ಸಂಪರ್ಕ ಪಡೆಯಲು ಒಂದು ಪ್ರವೇಶಪದ ನಿಗದಿ ಮಾಡಬೇಕು. ಈ ರೀತಿ ಸಂಪರ್ಕ ಪಡೆಯುವುದನ್ನು ಟೆದರಿಂಗ್ ಎನ್ನುತ್ತಾರೆ.
*
ಗ್ಯಾಜೆಟ್ ಸುದ್ದಿ:ಬ್ರೇಸ್‌ಲೆಟ್ ಕೇಬಲ್
ನಿಮ್ಮ ಫೋನಿನ ಚಾರ್ಜ್ ಮುಗಿದಾಗ ಅದನ್ನು ಚಾರ್ಜ್ ಮಾಡಲು ಕೇಬಲ್ ಹುಡುಕಾಡುವುದು ನಿಮ್ಮ ಮಾಮೂಲಿ ಹವ್ಯಾಸವೇ? ಹಾಗಿದ್ದಲ್ಲಿ ನಿಮಗೆ ಈ ಹೊಸ ನಮೂನೆಯ ಕೇಬಲ್ ಬೇಕು. ಅದನ್ನು ನೀವು ಬ್ರೇಸ್‌ಲೆಟ್ ಮಾದರಿಯಲ್ಲಿ ಕೈಗೆ ಸುತ್ತಿಕೊಳ್ಳಬಹುದು. ನೋಡಲೂ ಸುಂದರ. ಅದು ಕೇಬಲ್ ಎಂದು ಕೂಡಲೆ ಗೊತ್ತೂ ಆಗುವುದಿಲ್ಲ. ಹಲವು ಬಣ್ಣಗಳಲ್ಲೂ ಲಭ್ಯ. ಆದರೆ ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.
ಗ್ಯಾಜೆಟ್ ಸಲಹೆ
ಎಸ್. ಹರೀಶರ ಪ್ರಶ್ನೆ: ನನ್ನಲ್ಲಿ ಲೆನೊವೊ ಝಡ್ 2 ಪ್ಲಸ್ ಫೋನ್ ಇದೆ. ಅದರಲ್ಲಿ ಅವಕೆಂಪು (Infrared) ಸೌಲಭ್ಯ ಇಲ್ಲ. ಅದನ್ನು ಟಿ.ವಿ.ಗೆ ದೂರನಿಯಂತ್ರಕವಾಗಿ ಬಳಸುವುದು ಹೇಗೆ?
ಉ: ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.