ಸ್ಯಾಮ್‌ಸಂಗ್ ಫೋನ್‌ಗೆ ಅದರದೇ ಆದ ಭಕ್ತಗಣವಿದೆ. ಅವರು ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು. ಸ್ಯಾಮ್‌ಸಂಗ್ ಫೋನ್ ಸ್ವಲ್ಪ ದುಬಾರಿ. ಅದಕ್ಕೆ ನೀಡುವ ಹಣಕ್ಕಿಂತ ಶೇ 60ರಿಂದ 70ಬೆಲೆಗೆ ಬಹುಮಟ್ಟಿಗೆ ಅದೇ ಗುಣವೈಶಿಷ್ಟ್ಯ ಮತ್ತು ಶಕ್ತಿಯ ಬೇರೆ ಫೋನ್‌ಗಳು ದೊರೆಯುತ್ತವೆ. ಆದರೆ ಉತ್ತಮ ಗ್ರಾಹಕ ಸೇವೆ ಬೇಕಿದ್ದರೆ ಸ್ಯಾಮ್‌ಸಂಗ್ ಕೊಳ್ಳುವುದು ಉತ್ತಮ ತೀರ್ಮಾನ. ಸ್ಯಾಮ್‌ಸಂಗ್‌ನವರ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 6+ (Samsung Galaxy A6+) ಎಂಬ ಫೋನನ್ನು.
ಇದರ ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಲೋಹದ ದೇಹವಿದೆ. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ. ಈ ಕವಚ ಸ್ವಲ್ಪ ದೊರಗಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಬಲಭಾಗದಲ್ಲಿ ವಾಲ್ಯೂಮ್ ಬಟನ್‌ನ ಮೇಲೆ ಚಿಕ್ಕ ಕಿಂಡಿಯಲ್ಲಿ ಸ್ಪೀಕರ್ ಇದೆ. ಇದು ಸ್ಪೀಕರಿಗೆ ಖಂಡಿತವಾಗಿಯೂ ಹೇಳಿದ ಸ್ಥಳವಲ್ಲ. ವಿಡಿಯೊ ನೋಡುವಾಗ ಎಚ್ಚರವಹಿಸದಿದ್ದರೆ ಅದನ್ನು ಬೆರಳು ಮುಚ್ಚಬಹುದು. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇಗಳು ಇವೆ. ಇದರಲ್ಲಿ ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲೆ ಕ್ಯಾಮೆರಾ ಇದೆ. ಅದರ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ.
F/1.7, 16 ಮೆಗಾಪಿಕ್ಸೆಲ್‌ನ ಮತ್ತು F/1.9, 5 ಮೆಗಾಪಿಕ್ಸೆಲ್‌ನ ಎರಡು ಲೆನ್ಸ್‌ಗಳ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ ಎಲ್‌ಇಡಿ ಫ್ಲಾಶ್ ಇದೆ. ಇದರ ಕ್ಯಾಮೆರಾದ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ತೃಪ್ತಿದಾಯಕವಾಗಿಲ್ಲ. ಚೆನ್ನಾಗಿ ಬೆಳಕು ಇದ್ದಾಗ ಮಾತ್ರ ಉತ್ತಮ ಫೋಟೊ ಮೂಡಿಬರುತ್ತದೆ. ಫೋಕಸ್ ಮಾಡಲು ಕೆಲವೊಮ್ಮೆ ಒದ್ದಾಡುತ್ತದೆ. ಕಡಿಮೆ ಬೆಳಕಿನಲ್ಲಿ ಅಷ್ಟೇನೂ ಚೆನ್ನಾಗಿ ಮೂಡಿಬರುವುದಿಲ್ಲ. ಇದು ಹೈಡೆಫಿನಿಶನ್ ವಿಡಿಯೊ ರೆಕಾರ್ಡಿಂಗ್ ಮಾಡಬಲ್ಲುದು. ಆದರೆ ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೊ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. 24 ಮೆಗಾಪಿಕ್ಸೆಲ್ ರೆಸ್ಯೂಲೂಷನ್‌ನ ಸೆಲ್ಫೀ ಕ್ಯಾಮೆರಾ ಇದೆ. ಜೊತೆಗೆ ಫ್ಲಾಶ್ ಕೂಡ. ಇದೆ. ಸೆಲ್ಫೀ ಫ್ಲಾಶ್ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಸೆಲ್ಫೀ ಫಲಿತಾಂಶ ಪರವಾಗಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮೆರಾಕ್ಕೆ ಪೂರ್ತಿ ಪಾಸು ಮಾರ್ಕು ನೀಡಲು ಮನಸ್ಸಾಗುತ್ತಿಲ್ಲ.
ಇದರ ಆಡಿಯೊ ಎಂಜಿನ್ ಸುಮಾರಾಗಿದೆ. ನೀಡುವ ಹಣಕ್ಕೆ ಹೋಲಿಸಿದರೆ ಇದೇ ಬೆಲೆಗೆ ಇದಕ್ಕಿಂತ ಉತ್ತಮ ಆಡಿಯೊ ಇರುವ ಹಲವು ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಇಯರ್‌ಫೋನ್ ನೀಡಿದ್ದಾರೆ. ಇಯರ್‌ಬಡ್ ಅಲ್ಲ. ಅದರೆ ಅದರ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ಆಡಿಯೊ ವಿಭಾಗದಲ್ಲೂ ಪೂರ್ತಿ ಪಾಸು ಮಾರ್ಕು ನೀಡಲು ಕಷ್ಟವಾಗುತ್ತಿದೆ.
ಇದರಲ್ಲಿರುವುದು ಸ್ವಲ್ಪ ಕಡಿಮೆ ಶಕ್ತಿಯ ಪ್ರೊಸೆಸರ್. ಈ ಬೆಲೆಗೆ ಇದಕ್ಕಿಂತ ಹೆಚ್ಚು ಶಕ್ತಿಯ ಪ್ರೊಸೆಸರ್ ಖಂಡಿತ ಬಳಸಬಹುದಿತ್ತು. ಇದರ ಅಂಟುಟು ಬೆಂಚ್‌ಮಾರ್ಕ್ 70,695 ಇದೆ. ಅಂದರೆ ಮಧ್ಯಮ ವೇಗದ ಫೋನ್ ಎನ್ನಬಹುದು. ಕೆಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಆದರೆ ಆಸ್ಫಾಲ್ಟ್ 8 ನಮೂನೆಯ ಆಟಗಳನ್ನು ಈ ಫೋನಿನಲ್ಲಿ ಆಡಿದರೆ ಪೂರ್ತಿ ತೃಪ್ತಿ ದೊರೆಯಲಾರದು. ಅತಿ ವೇಗದ ಫೋನ್ ಬೇಕಿದ್ದಲ್ಲಿ ನೀವು ಇದನ್ನು ಖಂಡಿತ ಕೊಳ್ಳಬಾರದು.
ಇದರ ಬೆರಳಚ್ಚು ಸ್ಕ್ಯಾನರ್ ತೃಪ್ತಿದಾಯಕವಾಗಿದೆ. ನಿಮ್ಮ ಬೆರಳಚ್ಚನ್ನೇ ನೀವು ಪಾಸ್‌ವರ್ಡ್ ಮಾಡಿಟ್ಟುಕೊಳ್ಳಬಹುದು. ಜೊತೆಗೆ ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಆದರೆ ಬೆರಳಚ್ಚು ಮತ್ತು ಮುಖಚಹರೆ ಪತ್ತೆಹಚ್ಚುವಿಕೆ ಎರಡೂ ಅತಿ ವೇಗವಾಗಿ ಕೆಲಸ ಮಾಡುವುದಿಲ್ಲ.
ಎಲ್ಲ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರಲ್ಲೂ ಕನ್ನಡದ ತೋರುವಿಕೆ ಸರಿಯಾಗಿದೆ. ಜೊತೆಗೆ ಅವರದೇ ಕೀಲಿಮಣೆ ಇದೆ. ಅದು ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.
ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡದ ಫೋನ್ ಎನ್ನಬಹುದು.
ವಾರದ ಆಪ್ (app)
ಎಂಎಚ್‌ಎಲ್ ಇದೆಯೇ ಎಂದು ಪರೀಕ್ಷಿಸಿ (Checker for MHL (HDMI)
ನಿಮ್ಮ ಫೋನ್ ಅನ್ನು ನಿಮ್ಮ ಮನೆಯ ಟಿವಿಗೆ ಎರಡು ವಿಧದಲ್ಲಿ ಸಂಪರ್ಕಿಸಿ ಫೋನಿನ ಪರದೆಯನ್ನು ಟಿವಿಯಲ್ಲಿ ವೀಕ್ಷಿಸಬಹುದು. ನಿಮ್ಮ ಟಿವಿ ಸ್ಮಾರ್ಟ್‌ಟಿವಿಯಾಗಿದ್ದು ಅದರಲ್ಲಿ ವೈಫೈ ಸವಲತ್ತು ಇದ್ದಲ್ಲಿ ಫೋನಿನಲ್ಲಿ ಕಾಸ್ಟಿಂಗ್ ಸವಲತ್ತು ಇದ್ದಲ್ಲಿ ಅದನ್ನು ಬಳಸಬಹುದು. ನಿಮ್ಮದು ಚಪ್ಪಟೆ ಟಿವಿ (Flat TV) ಆದರೆ ಅದು ಸ್ಮಾರ್ಟ್ ಟಿವಿ ಅಲ್ಲ ಅಥವಾ ಅದಕ್ಕೆ ವೈಫೈ ಸಂಪರ್ಕ ಇಲ್ಲ ಎಂದಾದಲ್ಲಿ ಮೊಬೈಲ್ ಫೋನನ್ನು ಯುಎಸ್‌ಬಿ - ಎಚ್‌ಡಿಎಂಐ ಎಂಎಚ್‌ಎಲ್ ಕೇಬಲ್ ಮೂಲಕ ಜೋಡಿಸಿ ಫೋನಿನ ಪರದೆಯನ್ನು ಟಿವಿಯಲ್ಲಿ ವೀಕ್ಷಿಸಬಹುದು. ಇಂತಹ ಕೇಬಲ್‌ಗಳು ಸುಮಾರು ₹1200 ಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಎಲ್ಲ ಫೋನ್‌ಗಳಲ್ಲಿ ಎಂಎಚ್‌ಎಲ್ ಸವಲತ್ತು ಇರುವುದಿಲ್ಲ. ಹಣ ಕೊಟ್ಟು ಕೇಬಲ್ ಕೊಂಡುಕೊಂಡು ನಂತರ ನಿಮ್ಮ ಫೋನಿನಲ್ಲಿ ಎಂಎಚ್‌ಎಲ್ ಸವಲತ್ತು ಇಲ್ಲ ಎಂದು ತಿಳಿದು ಬಂದರೆ ಬೇಸರವಾಗಬಹುದು. ನಿಮ್ಮ ಫೋನಿನಲ್ಲಿ ಎಂಎಚ್‌ಎಲ್ ಸವಲತ್ತು ಇದೆಯೇ ಇಲ್ಲವೋ ಎಂದು ತಿಳಿಯಲು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Checker for MHL (HDMI) ಎಂಬ ಕಿರುತಂತ್ರಾಂಶವನ್ನು (ಆಪ್) ಹುಡುಕಿ ಹಾಕಿಕೊಳ್ಳಿ ಅಥವಾ http://bit.ly/gadgetloka338 ಜಾಲತಾಣಕ್ಕೆ ಭೇಟಿ ನೀಡಿ.
ಗ್ಯಾಜೆಟ್ ಪದ:MHL = ಎಂಎಚ್‌ಎಲ್
ಎಂಎಚ್ಎಲ್ ಎಂಬುದು ಮೊಬೈಲ್ ಹೈ ಡೆಫಿನಿಶನ್ ಲಿಂಕ್ (Mobile High-Definition Link) ಎನ್ನುವುದರ ಸಂಕ್ಷಿಪ್ತ ರೂಪ. ಮೊಬೈಲ್ ಫೋನಿನಲ್ಲಿರುವ ಯುಎಸ್‌ಬಿ ಕಿಂಡಿಯಿಂದ ಟಿವಿ ಅಥವಾ ಪ್ರೊಜೆಕ್ಟರಿನಲ್ಲಿರುವ ಎಚ್‌ಡಿಎಂಐ (High Definition Multimedia Interface) ಕಿಂಡಿಗೆ ಜೋಡಿಸಲು ಅನುವು ಮಾಡಿಕೊಡುವ ಶಿಷ್ಟತೆ. ಈ ವಿಧಾನದ ಮೂಲಕ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಟಿವಿ ಅಥವಾ ಪ್ರೊಜೆಕ್ಟರಿಗೆ ಜೋಡಿಸಬಹುದು.
ಗ್ಯಾಜೆಟ್ ಸುದ್ದಿ:ಸ್ಮಾರ್ಟ್ ಎಲ್‌ಇಡಿ ಬಲ್ಬ್
ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಲುಮಿನಸ್ ಕಂಪೆನಿ ಸ್ಮಾರ್ಟ್‌ಎಲ್‌ಇಡಿ ಬಲ್ಬುಗಳನ್ನು ತಯಾರಿಸಿದೆ. ಇವು ಬ್ಲೂಟೂತ್ ವಿಧಾನದಲ್ಲಿ ಸ್ಮಾರ್ಟ್‌ಫೋನಿಗೆ ಸಂಪರ್ಕ ಹೊಂದುತ್ತವೆ. ಈ ಬಲ್ಬುಗಳನ್ನು ನಿಯಂತ್ರಸಲು ಕಂಪೆನಿಯವರದೇ ಕಿರುತಂತ್ರಾಂಶ ಇದೆ. ಅದರ ಮೂಲಕ ಬಲ್ಬಿನ ಪ್ರಖರತೆಯನ್ನು ಹೆಚ್ಚು ಕಡಿಮೆ ಮಾಡಬಹುದು. ನಿಮ್ಮ ಮೂಡಿಗೆ ಹೊಂದುವಂತೆ ಪ್ರಖರತೆ ಮತ್ತು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋನಿನಲ್ಲಿ ಸಂಗೀತ ಪ್ಲೇ ಮಾಡಿದರೆ ಬಲ್ಬಿನ ಪ್ರಖರತೆ ಮತ್ತು ಬಣ್ಣ ಸಂಗೀತಕ್ಕೆ ತಾಳಹಾಕುವಂತೆ ಬದಲಾಗುತ್ತಿರುತ್ತದೆ. ಹಲವು ಬಲ್ಬುಗಳನ್ನು ಜೊತೆ ಮಾಡಿ ಒಂದು ತಂಡವನ್ನಾಗಿಸಲೂಬಹುದು. ಆಗ ಎಲ್ಲ ಬಲ್ಬುಗಳನ್ನು ಏಕಕಾಲಕ್ಕೆ ಒಂದೇ ಫೋನಿನಿಂದ ನಿಯಂತ್ರಿಸಬಹುದು. ಈ ಬಲ್ಬು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಬಣ್ಣ ಬದಲಿಸುವ ಬಲ್ಬಿಗೆ ಒಂದಕ್ಕೆ ₹1499 ಬೆಲೆ ಇದೆ. ಬಣ್ಣ ಬದಲಿಸದ ಆದರೆ ಪ್ರಖರತೆ ಮಾತ್ರ ಹೆಚ್ಚು ಕಡಿಮೆ ಮಾಡುವ ಇನ್ನೊಂದು ಮಾದರಿಯ ಬಲ್ಬಿಗೆ ₹1399 ಬೆಲೆ ಇದೆ.
ಗ್ಯಾಜೆಟ್ ಸಲಹೆ:ನಿಖಿಲ್ ಕಡೆಮನಿ ಅವರ ಪ್ರಶ್ನೆ: ಒಪ್ಪೊ ರಿಯಲ್‌ಮಿ1 ಮತ್ತು ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಇವುಗಳಲ್ಲಿ ಯಾವುದು ಉತ್ತಮ?
ಉ: ರಿಯಲ್‌ಮಿ1.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.