ADVERTISEMENT

ಪ್ರಗತಿಗೆ ಮುಖ್ಯಮಂತ್ರಿಗಳ ಪಾತ್ರವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:16 IST
Last Updated 16 ಜೂನ್ 2018, 9:16 IST

2011ರ ಆ ಬೇಸಿಗೆಯ ತಿಂಗಳು­ಗಳಲ್ಲಿ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ಗಳು ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರ ನ್ಯೂನತೆಗಳನ್ನು ಇನ್ನಿಲ್ಲ­ದಂತೆ ಟೀಕಿಸತೊಡಗಿದ್ದವು. ಅವರ ಸ್ಥಾನವನ್ನು ಸೋನಿಯಾ ಗಾಂಧಿ ತುಂಬಲಾರರು ಎಂಬುದೇ ಎಲ್ಲರ ನಂಬಿಕೆಯಾಗಿತ್ತು. ಮುಂದಿನ ಮಹಾ ಚುನಾ­ವಣೆಗೆ ಇನ್ನೂ ಮೂರು ವರ್ಷ ಬಾಕಿ ಇತ್ತು. ಆದರೂ ಮುಂದಿನ ಪ್ರಧಾನಿ ಯಾರಾ­ಗು­ತ್ತಾರೆ ಮತ್ತು ಯಾರಾಗಬೇಕು ಎಂಬ ಬಗ್ಗೆ ಅದಾಗಲೇ ಚರ್ಚೆಗಳು ಆರಂಭವಾಗಿದ್ದವು.

2012 ಮತ್ತು 2013ರಲ್ಲಿ ಮುಂಬೈ, ಕೋಲ್ಕತ್ತ, ಅಹಮದಾಬಾದ್‌, ಕೊಚ್ಚಿ ಮತ್ತಿತರ ನಗರಗಳಿಗೆ ಭೇಟಿ ನೀಡಿದ್ದ ನಾನು, ರಾಜಕೀಯಕ್ಕೆ ಸಂಬಂಧಿಸಿದಂತೆ ಅಲ್ಲಿ ನಡೆದ ಹತ್ತಾರು ಚರ್ಚೆ­ಗಳಲ್ಲಿ ಪಾಲ್ಗೊಂಡಿದ್ದೆ. ಅವುಗಳಲ್ಲಿ ಬಹುತೇಕ ಸಂವಾದಗಳು ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಅವರ ಸುತ್ತಲೇ ಕೇಂದ್ರೀಕೃತ­ವಾಗಿದ್ದವು. ಪ್ರಧಾನಿ ದುರ್ಬಲರಾಗಿದ್ದರಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯತೊಡಗಿತ್ತು. ಇದರಿಂದ ತೀವ್ರ ನಿರಾಶರಾಗಿದ್ದ ಮಧ್ಯಮ ವರ್ಗದ ಜನ, ಅವರು ಅಧಿಕಾರದಿಂದ ಕೆಳಗಿಳಿ­ಯುವುದನ್ನೇ ಕಾಯುತ್ತಿದ್ದರು. ಹೆಚ್ಚು ಕ್ರಿಯಾ­ಶೀಲವಾದ ಯುವ ಪ್ರಧಾನಿ ಅಧಿಕಾರಕ್ಕೆ ಬಂದರೆ ಆರ್ಥಿಕ ಬೆಳವಣಿಗೆಗೆ ಚಾಲನೆ ದೊರೆಯ­ಬ­ಹುದು, ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯವಾಗ­ಬಹುದು ಎಂಬ ಆಶಯ ಹೊಂದಿದ್ದರು.

ಇಲ್ಲಿ ಗಮನಾರ್ಹವಾಗಿದ್ದ ಒಂದು ಅಂಶ­ವೆಂದರೆ, ಕೊಚ್ಚಿಯಲ್ಲಿ ಕೇರಳಕ್ಕೆ ಸಂಬಂಧಿಸಿದ ಅಥವಾ ಮುಂಬೈನಲ್ಲಿ ಮಹಾರಾಷ್ಟ್ರದ ಬಗ್ಗೆ ಕಾಳಜಿ ವಹಿಸುವ ಸಂಗತಿಗಳ ಕುರಿತಂತೆ ಯಾವ ಪ್ರಶ್ನೆಯೂ ನನಗೆ ಎದುರಾಗಲಿಲ್ಲ. 30 ರಾಜ್ಯಗಳ­ನ್ನೊಳಗೊಂಡ ಒಕ್ಕೂಟವಾದ ಭಾರತ­ದಲ್ಲಿನ ಹಲವು ರಾಜ್ಯಗಳು ವಿಸ್ತೀರ್ಣ ಅಥವಾ ಜನಸಂಖ್ಯೆ­ಯಲ್ಲಿ ಯೂರೋಪ್‌ನ ಪ್ರಮುಖ ದೇಶದಷ್ಟೇ ಪ್ರಾಮುಖ್ಯ ಪಡೆದಿವೆ. ಆದರೂ ಆ ದಿನಗಳಲ್ಲಿ ನಾನು ಹೋದ ಕಡೆಯಲ್ಲೆಲ್ಲ ರಾಜಕೀಯಕ್ಕೆ ಸಂಬಂಧಿಸಿದ  ಸಂವಾದಗಳೆಲ್ಲ ದೆಹಲಿಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು.

ADVERTISEMENT

ಮೋದಿ ಮತ್ತು ರಾಹುಲ್‌ ಅವರಲ್ಲಿ ಯಾರನ್ನು ಆಯ್ದುಕೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಲು ನಾನು ನಿರಾಕರಿಸಿದೆ. ಮೋದಿ ಅವರ ಜಬರದಸ್ತು ಮತ್ತು ಪಂಥಾಭಿಮಾನದ ಹಿನ್ನೆಲೆ ನನಗೆ ಸರಿಕಂಡಿರಲಿಲ್ಲ. ಜವಾಬ್ದಾರಿಗೆ ಹೆಗಲು ಕೊಡದ ರಾಹುಲ್‌ ಒಬ್ಬ ಸೋಮಾರಿ­ಯಂತೆ ಕಾಣುತ್ತಿದ್ದರಲ್ಲದೆ, ಕಾಂಗ್ರೆಸ್‌ನ ಪರಂಪ­ರಾಗತ ಆಳ್ವಿಕೆ ಸಹ ನನ್ನನ್ನು ಹತಾಶನನ್ನಾಗಿಸಿತ್ತು. ರಾಷ್ಟ್ರದ ರಾಜಧಾನಿಯಲ್ಲಿ ಏಕೈಕ ದೇಶೋದ್ಧಾ­ರಕ ಮತ್ತು ವರ್ಚಸ್ವಿ ನಾಯಕ ಇರುವುದಕ್ಕಿಂತ ರಾಜ್ಯಗಳಲ್ಲಿ ಉತ್ತಮ ಮುಖ್ಯಮಂತ್ರಿಗಳ ಅಗತ್ಯ ನಮಗಿದೆ ಎಂಬುದು ನನ್ನ ತರ್ಕಬದ್ಧ ನಿಲುವಾ­ಗಿತ್ತು. ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಎಲ್ಲವೂ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳೇ ಆಗಿವೆ. ಆರ್ಥಿಕ ಉದಾರೀಕರಣ­ದಿಂದಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಮತ್ತು ಉದ್ಯೋಗ ಸೃಷ್ಟಿಸುವುದ­ರಲ್ಲಿ ರಾಜ್ಯಗಳಿಗೆ ಈಗ ಕೇಂದ್ರಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆ ಇದೆ. ಹೀಗಾಗಿ ನವದೆಹಲಿಗಿಂತ ಹೆಚ್ಚಾಗಿ ರಾಜ್ಯಗಳ ಚುಕ್ಕಾಣಿ ಹಿಡಿಯುವವರ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಬೇಕಾಗುತ್ತದೆ.

ದೇಶದ ಒಕ್ಕೂಟ ಸಂರಚನೆಯನ್ನೇ ಗಮನ­ದಲ್ಲಿಟ್ಟು ರಾಜಕೀಯ ವಿಶ್ಲೇಷಣೆ ಮಾಡುವು­ದಾ­ದರೆ, ಕೆಲವು ಉತ್ತಮ ಮುಖ್ಯಮಂತ್ರಿಗಳನ್ನು ನಾನಿಲ್ಲಿ ಪಟ್ಟಿ ಮಾಡುತ್ತೇನೆ. ಆದರೆ ಇದು ಯಾವುದೇ ಕ್ರಮಬದ್ಧವಾದ ಸಂಶೋಧನೆಯನ್ನು ಆಧರಿಸಿದ್ದಲ್ಲ; ಬದಲಿಗೆ ನಾಲ್ಕು ದಶಕಗಳ ಕಾಲ ದೇಶದಾದ್ಯಂತ ಸಂಚರಿಸಿದ ಸಂದರ್ಭದಲ್ಲಿ ಧ್ವನಿ­ಸಿದ ಜನಾಭಿಪ್ರಾಯಗಳ ಅನುಭವವನ್ನು ಆಧರಿ­ಸಿದೆ. ಅಭಿವೃದ್ಧಿಯನ್ನು ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳನ್ನು ಗಮನದಲ್ಲಿಟ್ಟು ಸ್ಥೂಲವಾಗಿ ಅಳೆಯುವುದಾದರೆ, ಬಹುಶಃ ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇ­ಶವನ್ನು ದೇಶದ ಅತ್ಯಂತ ಪ್ರಗತಿಶೀಲ ರಾಜ್ಯ­ಗಳು ಎನ್ನಬಹುದು.  ಹಾಗಿದ್ದರೆ ಈ ರಾಜ್ಯಗಳ ಪ್ರಗತಿಗೆ ಅಲ್ಲಿನ ಯಾವ ಮುಖ್ಯಮಂತ್ರಿಗಳ ಕೊಡುಗೆ ಕಾರಣ ಇರಬಹುದು?

20ನೇ ಶತಮಾನದ ಆರಂಭದಲ್ಲಿ ಕೇರಳ ಅತ್ಯಂತ ಅಸಮಾನತೆ ಇದ್ದ ದೇಶದ ಪ್ರದೇಶ­ಗಳಲ್ಲಿ ಒಂದಾಗಿತ್ತು. ಭೂ ಮಾಲೀಕತ್ವಕ್ಕೆ ಅಲ್ಲಿ ಅತಿ ಹೆಚ್ಚು ಮನ್ನಣೆ ನೀಡಲಾಗುತ್ತಿತ್ತು. ಜಾತಿ ತಾರ­ತಮ್ಯ ಮಿತಿಮೀರಿತ್ತು. ಕೆಲವು ಜಾತಿಗಳ ಜನರ­ನ್ನಂತೂ ಮುಟ್ಟುವುದಿರಲಿ ನೋಡುವುದೂ ಅಪವಿತ್ರ ಎಂಬಂತಹ ಸ್ಥಿತಿ ಇತ್ತು. ಮಹಾನ್‌ ಸುಧಾ­ರಣಾವಾದಿ ನಾರಾಯಣ ಗುರು ಮತ್ತು ಸಂಘಟಿತ ಎಡಪಂಥೀಯರು ಸಾಮಾಜಿಕ ನ್ಯಾಯ­ಕ್ಕಾಗಿ ಹೋರಾಟ ಆರಂಭಿಸಿದ್ದರು. ಜನ­ಪ್ರಿಯ ಸಾಮಾಜಿಕ ಚಳವಳಿಗಳು ತೀವ್ರಗೊಂಡಿ­ದ್ದವು. ಇಂತಹ ಹೋರಾಟಗಳ ಫಲವಾಗಿ ಚುನಾ­ಯಿತ ನಾಯಕರ ಮೇಲೆ ನಿರೀಕ್ಷೆಯ ಭಾರ ಹೆಚ್ಚಾ­ಗಿತ್ತು. ಅವರ ಪ್ರತಿ ಕಾರ್ಯವೂ ಸುಶಿಕ್ಷಿತ ವರ್ಗ ಮತ್ತು ಪ್ರಜ್ಞಾವಂತ ನಾಗರಿಕರಿಂದ  ನಿಷ್ಠುರವಾದ ವಿಮರ್ಶೆಗೆ ಒಳಗಾಗುತ್ತಿತ್ತು.

ಪ್ರಾಯಶಃ ಕೇರಳದ ಉತ್ತಮ ಮುಖ್ಯಮಂತ್ರಿಗಳಲ್ಲಿ ಇ.ಎಂ.ಎಸ್‌. ನಂಬೂದಿರಿಪಾಡ್‌ ಮತ್ತು ಸಿ.ಅಚ್ಯುತ ಮೆನನ್‌ ಅವರನ್ನು ಹೆಸರಿಸ­ಬಹುದು. ಆತ್ಮನಿಗ್ರಹದ ತತ್ವಾದರ್ಶಕ್ಕೆ ಬದ್ಧ­ರಾಗಿದ್ದ ಇ.ಎಂ.ಎಸ್‌., ಅದಕ್ಕೆ ಪೂರಕವಾಗಿ ಪಿತ್ರಾರ್ಜಿತ ಆಸ್ತಿಯನ್ನೇ ತ್ಯಾಗ ಮಾಡಿದ್ದರು. ಅವರ ಈ ಕ್ರಮಕ್ಕೆ ಗಾಂಧೀಜಿ ಕೂಡ ಹೆಮ್ಮೆ ಪಟ್ಟಿದ್ದಿರಬಹುದು. ಆಡಳಿತದ ವಿಕೇಂದ್ರೀಕರ­ಣವು ಲೆನಿನ್‌ ಪ್ರತಿಪಾದಿಸಿದ ‘ಪ್ರಜಾಪ್ರಭುತ್ವ ಕೇಂದ್ರೀ­ಕರಣ ಸಿದ್ಧಾಂತ’ಕ್ಕೆ ವಿರುದ್ಧವಾದ ಚಲನೆಯಂತೆ ಕಂಡುಬಂದರೂ, ಈ ಪ್ರಕ್ರಿಯೆ­ಯನ್ನು ಅವರು ಸಕ್ರಿಯವಾಗಿ ಉತ್ತೇಜಿಸಿದ್ದರು.
ಮತ್ತೊಬ್ಬ ಕಮ್ಯುನಿಸ್ಟರಾದ ಅಚ್ಯುತ ಮೆನನ್‌ 1969–75ರ ನಡುವೆ ಕೇರಳದ ಮುಖ್ಯ­ಮಂತ್ರಿಯಾಗಿದ್ದವರು. ಇವರು ಸಹ ಇ.ಎಂ.ಎಸ್‌. ಅವರಷ್ಟೇ ಪ್ರಾಮಾಣಿಕ­ರಾಗಿ­ದ್ದರಲ್ಲದೆ ಉತ್ತಮ ಆಡಳಿತಗಾರರೂ ಆಗಿದ್ದರು. ಇವರ ಆಡಳಿತಾವ­ಧಿಯಲ್ಲೇ ದೂರಗಾಮಿ ಪರಿಣಾಮ ಬೀರುವ ಭೂ ಸುಧಾರಣಾ ಕ್ರಮಗಳು ಜಾರಿಗೆ ಬಂದವು. ಅಷ್ಟೇ ಅಲ್ಲದೆ ಗುಣಮಟ್ಟದ ಸಮಾಜ ವಿಜ್ಞಾನ ಸಂಶೋಧನೆ­ಗಳನ್ನು ಆಡಳಿತದಲ್ಲಿ ಅಳವಡಿಸಿ­ಕೊಂಡ ಮೊತ್ತ ಮೊದಲ ಮುಖ್ಯಮಂತ್ರಿ ಸಹ ಅವರಾಗಿದ್ದರು. ತಾವು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಖ್ಯಾತ ಆರ್ಥಿಕ ತಜ್ಞ ಕೆ.ಎನ್‌.­ರಾಜ್‌ ಅವರು ಆರಂಭಿಸಿದ ‘ಅಭಿವೃದ್ಧಿ ಅಧ್ಯ­ಯನ ಕೇಂದ್ರ’ದ ಮೂಲಕ ಅವರು ಈ ಕಾರ್ಯ­ವನ್ನು ಸಾಧಿಸಿ­ದರು. ಕೇರಳ ರಾಜಕಾರಣದ ಇಂತಹ ಸಮಾಜವಾದಿ ಗುಣಲಕ್ಷಣಗಳೇ ಮುಂದೆ ಅಲ್ಲಿ ಜಾತಿ ಮತ್ತು ವರ್ಗ ಅಸಮಾನತೆ ತಗ್ಗು­ವು­ದಕ್ಕೆ ಬುನಾದಿಯಾದವು. ಆದರೆ ಇನ್ನೊಂದೆಡೆ ಇದೇ ಬೆಳವಣಿಗೆ ಹೊಸ ಬದಲಾವಣೆಗಳು ಮತ್ತು ವಾಣಿಜ್ಯೋದ್ಯಮದ ನಿಗ್ರಹಕ್ಕೂ ಕಾರಣ­ವಾಯಿತು.  ಅತ್ಯಧಿಕ ಪ್ರಮಾಣದಲ್ಲಿ ಸುಶಿಕ್ಷಿತ ನಾಗರಿಕರನ್ನು ಒಳಗೊಂಡಿರುವ ರಾಜ್ಯವೊಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ---ತಂತ್ರ­ಜ್ಞಾನದ ಮುಂಚೂಣಿಯಲ್ಲಿ ನಿಲ್ಲಬೇಕಾಗಿತ್ತು. ದುರಂತವೆಂದರೆ, ಕೇರಳದ ಆರ್ಥಿಕತೆ ಈ ದಿನ­ಗಳಲ್ಲಿ ತವರು ನೆಲದ  ಕೈಗಾರಿಕೆಗಳಿಗೆ ಬದಲಾಗಿ ವಿದೇಶಗಳಿಂದ ಬರುವ ಹಣವನ್ನೇ ಆಧರಿಸು­ವಂತಾಗಿದೆ.

ಸಾಮಾಜಿಕ ಪ್ರಗತಿಯನ್ನು ಆರ್ಥಿಕ ಸಾಮ­ರ್ಥ್ಯದ ಜೊತೆ ಯಶಸ್ವಿಯಾಗಿ ಒಗ್ಗೂಡಿಸಿಕೊಂಡ ರಾಜ್ಯ ತಮಿಳುನಾಡು. ಇಲ್ಲಿನ ರಾಜಕೀಯ ಮತ್ತು ಆಡಳಿತ ಬಹುಕಾಲ ಬ್ರಾಹ್ಮಣರ ಅಧೀನ­ದಲ್ಲಿತ್ತು. ಈ ಆಧಿಪತ್ಯವನ್ನು ನಂತರ ಬಂದ ಇ.ವಿ. ರಾಮಸ್ವಾಮಿ ನೇತೃತ್ವದ ದ್ರಾವಿಡ ಚಳವಳಿ ಮತ್ತು ಕೆ.ಕಾಮರಾಜ್ ಅವರ ನಾಯಕತ್ವ ಹಿಮ್ಮೆ­ಟ್ಟಿಸಿತು. ಕಾಮರಾಜ್‌ ಅವರು ರಾಜ್ಯದಲ್ಲಿ ಕಾಂಗ್ರೆ­ಸ್‌ನ ಮೊದಲ ಹಿಂದುಳಿದ ವರ್ಗದ ನಾಯಕ ಸಹ. 1954 ಮತ್ತು 1963ರ ಅವ­ಧಿ­ಯಲ್ಲಿ ತಮಿಳುನಾಡಿನ ಮುಖ್ಯ­ಮಂತ್ರಿಯಾ­ಗಿದ್ದ ಅವರು ದಕ್ಷ ಆಡಳಿತ ನಡೆಸಿದರು. ಮಧ್ಯಾಹ್ನದ ಬಿಸಿಯೂಟ ಯೋಜ­ನೆಯನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆ­ಯೂ ಅವರಿಗೆ ಸಲ್ಲುತ್ತದೆ.

1967ರಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಅಧಿ­ಕಾರಕ್ಕೆ ಬಂತು. ಅದರ ಮೊದಲ ಇಬ್ಬರು ಮುಖ್ಯ­ಮಂತ್ರಿಗಳಾದ ಸಿ.ಎನ್‌. ಅಣ್ಣಾದೊರೈ ಮತ್ತು ಎಂ. ಕರುಣಾನಿಧಿ ಕಲ್ಯಾಣರಾಜ್ಯದ ತತ್ವಗಳು ಹಾಗೂ ಲಿಂಗಸಂವೇದಿ ಆಡಳಿತಕ್ಕೆ ಒತ್ತು ನೀಡಿ­ದರು. ಆದರೆ ರಾಜ್ಯ ಕಂಡ ನಂತರದ ಆಳ್ವಿಕೆಗಳು (ಸ್ವತಃ ಕರುಣಾನಿಧಿ ನೇತೃತ್ವದ ಆಡಳಿತವೂ ಸೇರಿದಂತೆ) ಅತ್ಯಂತ ಭ್ರಷ್ಟವಾಗಿದ್ದರೂ ನಾಗರಿಕ ಸೇವಾ ಆಡಳಿತ ಮಾತ್ರ ಅಲ್ಲಿ ಉತ್ತಮ­ವಾಗಿಯೇ ಮುಂದುವರಿದಿದೆ. ಸರ್ಕಾರಿ ಶಾಲೆ­ಗಳು, ಆಸ್ಪತ್ರೆ­ಗಳು, ರಾಜ್ಯ ಸಾರಿಗೆ, ವಿದ್ಯುತ್‌ ಕಂಪೆನಿಗಳು ಇತರ ರಾಜ್ಯಗಳಿಗಿಂತ ಎಷ್ಟೋ ಪಾಲು ಉತ್ತಮವಾಗಿವೆ. ಇದಕ್ಕೆ ಕಾಮರಾಜ್‌ ಮತ್ತು ಅಣ್ಣಾದೊರೈ ಅವರು ಹಾಕಿಕೊಟ್ಟ ಗಟ್ಟಿ ತಳಹದಿಯೇ ಪ್ರಮುಖ ಕಾರಣ.

ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ಕೂಡ ಖಾಸಗಿ ಉದ್ದಿಮೆಗಳಿಗೆ ಸ್ವಾಗತ ಕೋರಿದ­ವರೇ ಆಗಿದ್ದಾರೆ. ಕೇವಲ ಬೆಂಗಳೂರೊಂದನ್ನೇ ವಾಣಿಜ್ಯ ಕೇಂದ್ರವನ್ನಾಗಿ ಹೊಂದಿರುವ ಕರ್ನಾ­ಟಕ­ದಂತಹ ಸ್ಥಿತಿ ಅಲ್ಲಿ ಇಲ್ಲ. ಸೇಲಂ, ಕೊಯ­ಮತ್ತೂರು, ಮದುರೆ, ಚೆನ್ನೈನ ಸುತ್ತಮುತ್ತ ಹಲವು ಪ್ರಮುಖ ಕೈಗಾರಿಕಾ ಕೇಂದ್ರಗಳಿವೆ.  ದೇಶದ ಬಹುತೇಕ ರಾಜ್ಯಗಳಲ್ಲಿ ಇರುವ ಪ್ರಾದೇ­ಶಿಕ ಅಸಮಾನತೆಯೂ ಇಲ್ಲಿ ಗೌಣವಾಗಿದೆ.

ಕೇರಳ ಮತ್ತು ತಮಿಳುನಾಡು ಎರಡೂ ಕರಾ­ವಳಿ ರಾಜ್ಯಗಳು. ಬಲವಾದ ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಿಗೆ ಉಭಯ ರಾಜ್ಯಗಳೂ ಸಾಕ್ಷಿಯಾಗಿವೆ. ಹೀಗಾಗಿ ಅವುಗಳ ಸಾಧನೆ ಸಂಪೂರ್ಣ ಅನಿರೀಕ್ಷಿತವೇನೂ ಅಲ್ಲ. ಆದರೆ ಹಿಮಾಚಲ ಪ್ರದೇಶದ ಅದ್ಭುತ ಅಭಿವೃದ್ಧಿ ದಾಖಲೆ ಮಾತ್ರ ಖಂಡಿತವಾಗಿಯೂ ಅನಿರೀಕ್ಷಿತ­ವಾ­­ದದ್ದು. ಇದು ಸಂಪೂರ್ಣ ಭೂ ಪ್ರದೇಶ­ಗ­ಳಿಂದ ಸುತ್ತುವರಿದಿರುವ ಕಣಿವೆ ರಾಜ್ಯ. ಇಲ್ಲಿನ ಪ್ರಭಾವಿ ರಜಪೂತ ಸಂಸ್ಕೃತಿ ಭಾರಿ ಪ್ರತಿಗಾಮಿ­ಯಾ­ಗಿದ್ದು, ಮಹಿಳೆಯರು ಮತ್ತು ಸೃಜನಾತ್ಮಕ ಚಿಂತನೆಗಳ ವಿರೋಧಿ ಸಹ. ಸ್ವಾತಂತ್ರ್ಯ ಹೋರಾ­ಟ­ದಲ್ಲೂ ಈ ಪ್ರದೇಶ ಹೆಚ್ಚು ಸಕ್ರಿಯವಾ­ಗಿರಲಿಲ್ಲ. ಹೇಳಿಕೊಳ್ಳುವಂತಹ ಗಂಭೀರ ಇತಿಹಾಸವೂ ಅದಕ್ಕಿಲ್ಲ.

ಇಷ್ಟಾದರೂ ಶಿಕ್ಷಣ, (ವಿಶೇಷವಾಗಿ ಮಹಿಳಾ ಶಿಕ್ಷಣ) ಆರೋಗ್ಯ ಸೇವೆ ಮತ್ತು ಆರ್ಥಿಕ ಪ್ರಗ­ತಿಯಲ್ಲಿ ಇತ್ತೀಚಿನ ವರ್ಷಗಳಲ್ಲೇ ದೇಶದ ಅತ್ಯು­ತ್ತಮ ರಾಜ್ಯಗಳಲ್ಲಿ ಒಂದು ಎಂದು ಈ ರಾಜ್ಯ ಗುರುತಿಸಿಕೊಂಡಿದೆ. ಅಲ್ಲಿನ ಇಂತಹ ಸಕಾರಾ­ತ್ಮಕ ಬೆಳವಣಿಗೆಗಳ ಶ್ರೇಯ ರಾಜ್ಯದ ಮೊದಲ ಮುಖ್ಯ­ಮಂತ್ರಿ ಡಾ.ವೈ.ಎಸ್‌. ಪರಮಾರ್‌ ಅವರಿಗೇ ಸಲ್ಲ­ಬೇಕು ಎನ್ನುವುದು ಸ್ಥಳೀಯರ ಅಭಿಮತ. ಮೊದಲು ಕೇಂದ್ರಾಡಳಿತ ಪ್ರದೇಶ­ವಾಗಿದ್ದ ಹಿಮಾ­ಚಲ 1971ರಲ್ಲಿ ಸ್ವತಂತ್ರ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು. ಪರಮಾರ್‌ ಈ ಎರಡು ಅವಧಿಯಲ್ಲೂ ಸುಮಾರು ಎರಡು ದಶಕಗಳ ಕಾಲ ಆಡಳಿತ ನಡೆ­ಸಿದ್ದಾರೆ. ಸ್ವತಃ ವಿದ್ವಾಂಸರಾದ ಅವರು ಶಿಕ್ಷಣಕ್ಕೆ ಮಹತ್ವ ಕೊಟ್ಟಿದ್ದರು. ಗ್ರಾಮೀಣ ಭಾಗಕ್ಕೆ ಅದನ್ನು ಪಸರಿ­ಸಲು ಹೆಚ್ಚಿನ ಆದ್ಯತೆ ನೀಡಿದ್ದರು. ಇದರಿಂದ ರಾಜ್ಯದ ತೋಟಗಾರಿಕಾ ಉದ್ಯಮಕ್ಕೆ ಸಾಕಷ್ಟು ಉತ್ತೇಜನ ದೊರೆಯಿತು. ಮಾರುಕಟ್ಟೆ ಅಭಿವೃ­ದ್ಧಿ­ಯಾಗಿ ಸಣ್ಣ ವರಮಾನದವರಿಗೂ ಆರ್ಥಿಕ ಬಲ ತಂದುಕೊಟ್ಟಿತು. (ಬಹುಶಃ ಪರಮಾರ್‌ ಅವರು ಈ ವಲಯದ ಮಹತ್ವ ಅರಿತದ್ದಕ್ಕೆ, ಅಮೆರಿಕ ಮೂಲದ ಜಾತಿ ವಿರೋಧಿ ಸುಧಾರಕ ಮತ್ತು ಈ ಕಣಿವೆ ರಾಜ್ಯದಲ್ಲಿ ಮೊದಲ ಬಾರಿಗೆ ಸೇಬಿನ ಗಿಡ­ಗಳನ್ನು ನೆಟ್ಟ ಖ್ಯಾತಿ ಹೊಂದಿರುವ ಸತ್ಯಾನಂದ (ಮೊದಲು ಸಾಮ್ಯುಯೆಲ್‌) ಸ್ಟೋಕ್‌್ಸ ಅವರ ಪುತ್ರಿ­-ಯನ್ನು ವಿವಾಹವಾಗಿದ್ದೂ ಕಾರಣ ಇರಬಹುದು).

ರಾಜ್ಯದ ನಾಗರಿಕ ಸೇವಾ ವಲಯದೊಂದಿಗೆ ಪರ­ಮಾರ್‌ ಅತ್ಯಂತ ನಿಕಟ ಸಂಪರ್ಕ ಹೊಂದಿ­ದ್ದರು. ಇಲ್ಲಿನ ಐಎಎಸ್‌ ಅಧಿಕಾರಿಗಳು ದೇಶದ ಇತರ ಭಾಗಗಳಿಗಿಂತ ಹೆಚ್ಚು ಪ್ರೇರಣೆಯಿಂದ ಕೆಲಸ ಮಾಡುವುದನ್ನು ನಾನು ಕಂಡಿದ್ದೇನೆ. ರಾಜ್ಯ­ದೊಂದಿಗೆ ಪ್ರಖರವಾಗಿ ಗುರುತಿಸಿ­ಕೊ­ಳ್ಳುವ ಅವರು, ಅದರ ಸಾಧನೆಗಳ ಹೆಮ್ಮೆಯ ಬಾಧ್ಯಸ್ಥ­ರಂತೆ ಕಂಡುಬರುತ್ತಾರೆ.

ಈ ಮೂರು ರಾಜ್ಯಗಳ ಹೊರತಾಗಿ ಇತರೆ­ಡೆಯೂ ಹಲವು ಮುಖ್ಯಮಂತ್ರಿಗಳು ಉತ್ತಮ ಆಡಳಿತ ನಡೆಸಿದ್ದಾರೆ. ಈಚೆಗಿನ ನೀತಿಗೆಟ್ಟ ಪರಿ­ಸ್ಥಿತಿಯಲ್ಲೂ ಮಹಾರಾಷ್ಟ್ರದ ನಾಗರಿಕರು, ಸಹ­ಕಾರಿ ವಲಯ ಮತ್ತು ಕೃಷಿಗೆ ಪ್ರಾಮುಖ್ಯ ನೀಡಿದ್ದ ವೈ.ಬಿ. ಚವ್ಹಾಣ್‌ ಹಾಗೂ ದೇಶದ ಮೊದಲ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದ ವಸಂತರಾವ್‌ ನಾಯಕ್‌ ಅವರ ಆಡಳಿ­ತಾ­ವಧಿಯನ್ನು ಗತಕಾಲದ ವೈಭವವೇನೋ ಎಂಬಂತೆ ಭಾವುಕವಾಗಿ ಸ್ಮರಿಸುತ್ತಾರೆ. ಅದೇ ರೀತಿ ಕರ್ನಾಟಕದ ನಾಗರಿಕರು ಸಹ, ಭೂ ಸುಧಾ­-­ರಣೆಯನ್ನು ಜಾರಿಗೆ ತಂದ ದೇವರಾಜ ಅರಸು ಹಾಗೂ ಪಂಚಾಯತ್‌ ರಾಜ್ ವ್ಯವಸ್ಥೆ­ಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಮಕೃಷ್ಣ ಹೆಗಡೆ ಅವರಂತೆಯೇ ಈಗಿನ ಮುಖ್ಯಮಂತ್ರಿ­ಗಳೂ ಇರಬೇಕೆಂದು ಬಯಸುತ್ತಾರೆ.

ಕಳೆದ ದಶಕದ ಉತ್ತಮ ಮುಖ್ಯಮಂತ್ರಿ ಯಾರು? ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಸಾಧನೆಗಳು ಚುನಾ­ವಣಾ ಪ್ರಚಾರದ ಸಮಯದಲ್ಲಿ  ಹೆಚ್ಚಾಗಿ ಪ್ರಸ್ತಾಪ ಆಗಿದ್ದವು. ಮೋದಿ ಅವರ ಸಮಕಾ­ಲೀ­ನರಲ್ಲಿ ಕೆಲವರು ಕಷ್ಟದ ಸಂದರ್ಭಗಳನ್ನು ಸಮ­ರ್ಥವಾಗಿ ಎದುರಿಸಿದ್ದಾರೆ. ಅಪರಾಧಗಳ ತಾಣ ಮತ್ತು ಹಿಂದುಳಿದ ರಾಜ್ಯ ಎಂಬ ಬಿಹಾರದ ಅನ್ವರ್ಥನಾಮವನ್ನು ಬದಲಿಸಲು ಶ್ರಮಿಸಿದವರು ನಿತೀಶ್‌ ಕುಮಾರ್‌. ಶಿಕ್ಷಣ, ಕಾನೂನು ಸುವ್ಯ­ವಸ್ಥೆ, ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕೆ ಅವರು ಆದ್ಯತೆ ನೀಡಿದರು.

ಗುಜರಾತ್‌ ಮತ್ತು ತಮಿಳುನಾಡಿನಂತೆ ನೈಸ­ರ್ಗಿಕ ಅಥವಾ ಐತಿಹಾಸಿಕ ಹಿನ್ನೆಲೆ ಹೊಂದಿಲ್ಲದೆ ಬರೀ ಭೂಭಾಗದಿಂದ ಆವೃತವಾಗಿರುವ ಮತ್ತೊಂದು ರಾಜ್ಯ ಮಧ್ಯಪ್ರದೇಶ. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಆಡಳಿತದಲ್ಲಿ ಕೃಷಿ ಸಾಧನೆ ಮತ್ತು ಸಮರ್ಥ ನಾಗರಿಕ ಸೇವೆಗೆ ಅದು ಹೆಸರಾಯಿತು. ಈ ರಾಜ್ಯಕ್ಕಿಂತಲೂ ಭೌಗೋಳಿ­ಕ­ವಾಗಿ ಅವಕೃಪೆಗೆ ಒಳಗಾಗಿರುವ ತ್ರಿಪುರಾದಲ್ಲಿ ಮಾಣಿಕ್‌ ಸರ್ಕಾರ್‌ ಅವರ ಸರ್ಕಾರ ಸ್ಥಳೀಯ ಬಂಡಾಯವನ್ನು ಹತ್ತಿಕ್ಕಿ ಆಡಳಿತ ಹಾಗೂ ರಾಜ­ಕೀಯ ಪ್ರಕ್ರಿಯೆಯಲ್ಲಿ ಜನರಿಗೆ ನಂಬಿಕೆ ಮರುಕಳಿ­ಸುವಂತೆ ಮಾಡಿದೆ.

ನಾನು ಈ ಮೊದಲೇ ಹೇಳಿರುವಂತೆ, ಕೆಲವು ಪ್ರಭಾವಿ ನಾಯಕರನ್ನಷ್ಟೇ ನಾನಿಲ್ಲಿ ಉಲ್ಲೇಖಿಸಿ­ದ್ದೇನೆ. ಇದಕ್ಕೆ ಯಾವುದೇ ನಿಖರವಾದ ಸಂಶೋ­ಧನೆಗಳು ಆಧಾರವಾಗಿಲ್ಲ. ದೇಶದ ವಿವಿಧ ರಾಜ್ಯ­ಗಳ ಪ್ರಗತಿಗೆ (ಅಥವಾ ವೈಫಲ್ಯಕ್ಕೆ) ಕಾರಣರಾದ ನಾಯಕರು ಮತ್ತು ನಾಯಕತ್ವದ ಬಗ್ಗೆ ಇತಿಹಾಸ ತಜ್ಞರು, ರಾಜಕೀಯ ವಿಜ್ಞಾನಿಗಳಿಂದ ಕ್ರಮಬದ್ಧ­ವಾದ ವಿಸ್ತೃತ ಅಧ್ಯಯನಗಳು ನಡೆಯಬೇಕಾದ ಅಗತ್ಯ ಇದೆ. ಇದರ ನಡುವೆಯೂ, ಮಾಧ್ಯಮ­ಗಳು ಮತ್ತು ನಾಗರಿಕರು ದೇಶದ ಎಲ್ಲ ವಿಮೋಚ­ನೆಗೂ ದೆಹಲಿಯತ್ತಲೇ ಮುಖ ಮಾಡುವುದನ್ನು ಬಿಟ್ಟು, ತವರು ರಾಜ್ಯದ ರಾಜಕಾರಣಿಗಳ ಸಾಧ­ನೆ­ಯನ್ನು ಗಂಭೀರವಾಗಿ ಒರೆಗೆ ಹಚ್ಚಬೇಕು ಎಂಬ ನಿಲುವಿಗೆ ನಾನು ಬದ್ಧನಾಗಿದ್ದೇನೆ. ದೆಹಲಿಯಲ್ಲಿ-­ರುವ ಪ್ರಧಾನಮಂತ್ರಿಗಿಂತಲೂ ಹತ್ತರಿಂದ ಹನ್ನೆ­ರಡು ಮುಖ್ಯಮಂತ್ರಿಗಳು ಈ ದೇಶಕ್ಕೆ ಮತ್ತು ಇಲ್ಲಿನ ನಾಗರಿಕರಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಲ್ಲರು ಎಂಬುದೇ  ನನ್ನ ಅಭಿಮತ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.