ಎಲ್ಲ ರಾಜಕೀಯ ನಾಯಕರು ವೈಫಲ್ಯದಲ್ಲಿಯೇ ಕೊನೆಯಾಗುತ್ತಾರೆ- ಅಂಕಣಕಾರರು ಸಾಮಾನ್ಯವಾಗಿ ಉದ್ಧರಿಸುವ ಈ ಸಾಲುಗಳು ಬ್ರಿಟಿಷ್ ರಾಜಕಾರಣಿ ಮತ್ತು ಲೇಖಕ ಇನಾಕ್ ಪೊವೆಲ್ ಅವರದ್ದು. ಪೊವೆಲ್ ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ: ‘ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅರ್ಧದಲ್ಲಿಯೇ ಮರೆಯಾಗದಿದ್ದರೆ ಅವರು ವೈಫಲ್ಯದಲ್ಲಿಯೇ ಕೊನೆಯಾಗುತ್ತಾರೆ. ಯಾಕೆಂದರೆ, ರಾಜಕಾರಣ ಮತ್ತು ಮಾನವ ವ್ಯವಹಾರಗಳ ಸ್ವರೂಪವೇ ಆ ರೀತಿಯಾಗಿದೆ’.
ಪೊವೆಲ್ ಹೇಳಿಕೆಯ ಸಂಕ್ಷಿಪ್ತ ರೂಪ ಭಾರತದ ನಾಲ್ವರು ಮಾಜಿ ಪ್ರಧಾನಿಗಳಿಗೆ ಅತ್ಯಂತ ಸಮರ್ಪಕವಾಗಿ ಅನ್ವಯವಾಗುತ್ತದೆ; ಜವಾಹರಲಾಲ್ ನೆಹರೂ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಈ ನಾಲ್ವರು ಪ್ರಧಾನಿಗಳು. ಈ ನಾಲ್ವರೂ ಗಣನೀಯವಾದ ಸಾಧನೆ ಮಾಡಿರುವ ರಾಜಕಾರಣಿಗಳು.
ನೆಹರೂ ಅವರು ಸ್ವಾತಂತ್ರ್ಯ ಹೋರಾಟದ ಪ್ರತಿಮೆ; 1947ರ ನಂತರ ದೇಶದಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿಸುವಲ್ಲಿ ಮತ್ತು ದೇಶಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ನೆಲೆ ಒದಗಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಧಾನಿಯಾಗಿ ರಾವ್ ಅವರು ಆರ್ಥಿಕ ಉದಾರೀಕರಣವನ್ನು ಜಾರಿಗೆ ತಂದದ್ದಲ್ಲದೆ, ಹೊಸ ಮತ್ತು ಬಹು ಸ್ತರಗಳ ವಿದೇಶಾಂಗ ನೀತಿಯನ್ನೂ ರೂಪಿಸಿದರು.
ವಿರೋಧ ಪಕ್ಷದ ಆಕರ್ಷಕ ನಾಯಕ, ಚೈತನ್ಯಯುತ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ, ಪ್ರಧಾನಿಯಾಗಿ ಐದು ವರ್ಷ ಆಡಳಿತ ನಡೆಸಿದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣದ ಉಸ್ತುವಾರಿ ನೋಡಿಕೊಂಡ ಸಿಂಗ್, ಪ್ರಧಾನಿಯಾಗಿ ಒಂದು ದಶಕ ಕಾಲ ಸಮೃದ್ಧ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾದರು.
ಆದರೆ ಈ ಎಲ್ಲಾ ರಾಜಕೀಯ ನಾಯಕರ ಕೊನೆಯ ದಿನಗಳು ವೈಫಲ್ಯ ಕಂಡಿವೆ. ನೆಹರೂ ಅವರ ಮೇಲೆ ಚೀನಾ ಯುದ್ಧದ ಕರಿಛಾಯೆ ಕವಿದರೆ, ರಾವ್ ಅವರನ್ನು ಪಕ್ಷದಿಂದಲೇ ಬಹುತೇಕ ಹೊರಗೆ ತಳ್ಳಲಾಯಿತು. ನಿರಾಯಾಸವಾಗಿ ಗೆಲ್ಲಬಹುದು ಎಂದು ಭಾವಿಸಲಾಗಿದ್ದ ಚುನಾವಣೆಯಲ್ಲಿ ವಾಜಪೇಯಿ ಸೋತರು. ತಮ್ಮ ಸಂಪುಟದ ಸಚಿವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ನಕಾರಾತ್ಮಕ ಪ್ರಚಾರದ ನಡುವೆ ಸಿಂಗ್ ಅಧಿಕಾರದಿಂದ ಕೆಳಗಿಳಿದರು.
ಸೋನಿಯಾ ಗಾಂಧಿ ಯಾವತ್ತೂ ಪ್ರಧಾನಿಯಾಗಿರಲಿಲ್ಲ; ಆದರೆ ಪೂರ್ಣ ಹತ್ತು ವರ್ಷ ಅವರು ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದರು. ಈಗ ಉತ್ತರಪ್ರದೇಶ ಚುನಾವಣೆಯ ಬಳಿಕ ಅವರ ಪಕ್ಷ ಪೂರ್ಣವಾಗಿ ಸೋತು ಹೋದ ನಂತರ ಅವರೀಗ ತಮ್ಮ ರಾಜಕೀಯ ಜೀವನದ ಅಂಚಿನಲ್ಲಿದ್ದಾರೆ. ವಾರಾಣಸಿಯಲ್ಲಿ ಒಂದು ರೋಡ್‌ಶೋದಲ್ಲಿ ಅವರು ಬಿದ್ದು ಗಂಭೀರವಾಗಿ ಗಾಯಗೊಂಡರು.
ಮತ ಎಣಿಕೆ ಆರಂಭವಾದ ಸ್ವಲ್ಪ ಹೊತ್ತಿನಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರು. ಅವರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಚುನಾವಣೆಗೆ ಸ್ಪರ್ಧಿಸಿ ಗೆದ್ದ ಭಾರತದ ಅತ್ಯಂತ ದೊಡ್ಡ ರಾಜ್ಯದಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿದೆ. ಸೋನಿಯಾ ಅವರ ರಾಜಕೀಯ ಜೀವನ ಬಹುಪಾಲು ಕೊನೆಗೊಂಡಿದೆ. ಹಾಗಾಗಿ ಅವರ ಇಡೀ ರಾಜಕೀಯ ಜೀವನವನ್ನು, ಅದರ ಗೆಲುವು ಸೋಲುಗಳನ್ನು, ಯಶಸ್ಸು, ವೈಫಲ್ಯಗಳನ್ನು ವಿಶ್ಲೇಷಿಸುವುದಕ್ಕೆ ಇದು ಸೂಕ್ತ ಸಮಯ.
ಅತ್ಯಂತ ಉನ್ನತ ಮಟ್ಟದಲ್ಲಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಅವರು ಪಕ್ಷ ರಾಜಕಾರಣ ಪ್ರವೇಶಿಸಿ ಈಗ ಬಹುತೇಕ ಇಪ್ಪತ್ತು ವರ್ಷಗಳಾಗಿವೆ. ಮೊದಲಿಗೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1967ರಲ್ಲಿ ಇಂದಿರಾ ಗಾಂಧಿ ಅವರು ಅನಿರೀಕ್ಷಿತವಾಗಿ ಪ್ರಧಾನಿಯಾದಾಗ ಅವರನ್ನು ಪರಿಗಣಿಸಿದಂತೆ ಸೋನಿಯಾ ಅವರನ್ನೂ ‘ಮೂಕ ಬೊಂಬೆ’ ಎಂದು ನಿರ್ಲಕ್ಷಿಸಿದರು.
ಸೋನಿಯಾ ಅವರು ಒಳ್ಳೆಯ ಮಾತುಗಾರರಲ್ಲ; ಅವರ ಹಿಂದಿ ವ್ಯಾಕರಣಬದ್ಧವಾಗಿದೆ; ಆದರೆ ಅವರು ಇಟಲಿ ಮೂಲದವರು ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಿದ್ದರೂ ಅವರು ಜನರನ್ನು ಆಕರ್ಷಿಸಿದರು. 1998ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಾಗ ಪಕ್ಷ ಇನ್ನೇನು ಕೊನೆಯುಸಿರೆಳೆಯುವ ಮಟ್ಟದಲ್ಲಿತ್ತು. ಆದರೆ ನಂತರ ಪ್ರಮುಖ ರಾಜ್ಯಗಳಾದ ಕರ್ನಾಟಕ, ರಾಜಸ್ತಾನ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಗೆಲುವು ಪಡೆಯಿತು. ಸೋನಿಯಾ ಬಗೆಗಿನ ಸಂದೇಹ ಮತ್ತು ಅಸಡ್ಡೆ ಗೊಣಗಾಟದೊಂದಿಗಿನ ಶ್ಲಾಘನೆಯಾಗಿ ಬದಲಾಯಿತು.
ಸೋನಿಯಾ ಅವರ ಆರಂಭಿಕ ಯಶಸ್ಸಿಗೆ ಮೂರು ಕಾರಣಗಳಿವೆ. ಅವರ ಬಗ್ಗೆ ಜನರಲ್ಲಿ ಸಾಕಷ್ಟು ಅನುಕಂಪ ಇತ್ತು; ತಮ್ಮ ಅತ್ತೆ ಹತ್ಯೆಯಾಗಿದ್ದನ್ನು ಅವರು ತಮ್ಮ ಕಣ್ಣ ಮುಂದೆಯೇ ಕಂಡಿದ್ದರು. ಅವರ ಪ್ರೀತಿಯ ಗಂಡ ಕೂಡ ಹಾಗೆಯೇ ಹತ್ಯೆಯಾಗಿದ್ದರು. ಆ ಎಲ್ಲ ದುರಂತಗಳನ್ನು ಬದಿಗೆ ಸರಿಸಿ ಅವರು ಕಠಿಣವಾದ, ಪ್ರತಿಕೂಲವಾದ, ನಿರ್ದಯವಾದ ಭಾರತದ ರಾಜಕೀಯ ರಂಗ ಪ್ರವೇಶಿಸಿದ್ದರು.
1990ರ ದಶಕದಲ್ಲಿ ಸೋನಿಯಾ ಅವರು ರಾಜಕೀಯ ಪ್ರವೇಶಿಸಿದಾಗ ದೇಶದಲ್ಲಿ ನೆಹರೂ-ಗಾಂಧಿ ಕುಟುಂಬದ ಹೆಸರಿಗೆ ಇನ್ನೂ ಸ್ವಲ್ಪ ಮಾಂತ್ರಿಕತೆ ಇತ್ತು. ಕೆಲವರಿಗೆ ಇನ್ನೂ ನೆಹರೂ ನೆನಪಿದ್ದರೆ ಹಲವು ಜನರು ಇಂದಿರಾ ಮತ್ತು ರಾಜೀವ್ ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಕೊನೆಯದಾಗಿ, ಸೋನಿಯಾ ಅವರು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು, ದೇಶದಾದ್ಯಂತ ಸಂಚರಿಸಿ ಹಗಲಿರುಳೆನ್ನದೆ ಪ್ರಚಾರ ಮಾಡುತ್ತಿದ್ದರು ಮತ್ತು ದೆಹಲಿಯಲ್ಲಿದ್ದಾಗ ರಾಜಕೀಯ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದರು.
ಸೋನಿಯಾ ಗಾಂಧಿ ಅವರು ಪಟ್ಟು ಹಿಡಿದು ಮಾಡಿದ ಕೆಲಸದಿಂದಾಗಿ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಚ್ಚರಿಯ ಗೆಲುವು ದಾಖಲಿಸಿತು. ಐದು ವರ್ಷಗಳ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಯುಪಿಎ ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡವು. ರಾಜಕೀಯ ಯಶಸ್ಸನ್ನು ಚನಾವಣಾ ಗೆಲುವಿನ ಕಣ್ಣಿನಿಂದ ಮಾತ್ರ ನೋಡುವ ಪ್ರವೃತ್ತಿಯನ್ನು ಭಾರತದ ಮಾಧ್ಯಮ ಹೊಂದಿದೆ.
ಈ ಲೆಕ್ಕದಲ್ಲಿ ಸೋನಿಯಾ ಅವರು ತಮ್ಮ ರಾಜಕೀಯ ಜೀವನದ ಮೊದಲ ದಶಕದಲ್ಲಿ ಅತ್ಯಂತ ಯಶಸ್ಸು ಗಳಿಸಿದ್ದಾರೆ. ಆದರೆ ಅವರು ಸಾರ್ವಜನಿಕ ಜೀವನಕ್ಕೆ ಇತರ ಹಲವು ಕೊಡುಗೆಗಳನ್ನೂ ನೀಡಿದ್ದಾರೆ: ಅವರ ನೇತೃತ್ವದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮಗಳು (ನರೇಗಾ) ಜಾರಿಯಾಗಿವೆ. ಅಪಾರದರ್ಶಕತೆಗೆ ಕುಖ್ಯಾತವಾಗಿರುವ ಮತ್ತು ಅತ್ಯಂತ ರಹಸ್ಯ ಸ್ವರೂಪದ ಸರ್ಕಾರದ ವ್ಯವಹಾರಗಳಿಗೆ ಆರ್‌ಟಿಐ ಸ್ವಲ್ಪಮಟ್ಟಿಗೆ ಪಾರದರ್ಶಕತೆಯನ್ನು ತಂದಿದೆ. ಗ್ರಾಮೀಣ ಜನರಿಗೆ ನರೇಗಾ ಸುರಕ್ಷತೆ ಒದಗಿಸಿದೆ.
ಭಾರತದ ರಾಜಕಾರಣದಲ್ಲಿ ಸೋನಿಯಾ ಅವರ ಯಶಸ್ಸು ಗ್ರಹಿಕೆಗೆ ನಿಲುಕದ್ದು ಮತ್ತು ಅನಿರೀಕ್ಷಿತವಾದುದಾಗಿತ್ತು. 2009, ಸೋನಿಯಾ ಅವರ ರಾಜಕೀಯ ಜೀವನದ ಉತ್ತುಂಗವಾಗಿತ್ತು ಎಂಬುದು ಕಣ್ಣಿಗೆ ಕಾಣುವಂತಿದೆ. ನಂತರ ಅದು ಕುಸಿಯಲು ಆರಂಭವಾಯಿತು. ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಯಲ್ಲಿನ ಭ್ರಷ್ಟಾಚಾರದ ಜತೆಗೆ ಕುಸಿತ ಆರಂಭಗೊಂಡಿತು. ನಂತರ ದೂರ ಸಂಪರ್ಕ ಮತ್ತು ಗಣಿಗಾರಿಕೆ ಹಕ್ಕುಗಳಿಗೆ ಸಂಬಂಧಿಸಿದ ದೊಡ್ಡ ಹಗರಣಗಳು ಬಯಲಾದವು. ಒಂದು ಕಾಲಕ್ಕೆ ಅವರ ಮೌನವು ಮಾಂತ್ರಿಕತೆಯ ಸ್ಪರ್ಶ ಹೊಂದಿತ್ತು.
ನಂತರ ಅವರೂ ಹಗರಣಗಳಲ್ಲಿ ಶಾಮೀಲು ಎಂಬ ಸಂಜ್ಞೆಗಳನ್ನು ನೀಡತೊಡಗಿತು. ಸೋನಿಯಾ ಅವರ ಪಕ್ಷದ ಸರ್ಕಾರದ ವಿರುದ್ಧ ಮಾಧ್ಯಮದಲ್ಲಿ ಮತ್ತೆ ಮತ್ತೆ ದೊಡ್ಡ ಧ್ವನಿಯಲ್ಲಿ ಆರೋಪಗಳು ಕೇಳಿಬಂದರೆ, ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಆರಂಭಿಸಿದ ಜನಪ್ರಿಯ ಚಳವಳಿ ಭ್ರಷ್ಟಾಚಾರದ ವಿರುದ್ಧದ ಸಂಕೇತವಾಗಿ ಪರಿವರ್ತಿತವಾಯಿತು.
2013-14ರಲ್ಲಿ ನರೇಂದ್ರ ಮೋದಿ ಅವರ ನಾಟಕೀಯ ಮತ್ತು ವಿಜಯೋತ್ಸಾಹದ ಚುನಾವಣಾ ಪ್ರಚಾರ ಆರಂಭವಾಗಿ ಅದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸ್ಥಾನಗಳನ್ನು 44ಕ್ಕೆ ಇಳಿಸಿತು. ನಂತರ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜ್ಯಗಳಾದ ಹರಿಯಾಣ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಚುನಾವಣಾ ಸೋಲು ಕುಸಿತವನ್ನು ಇನ್ನಷ್ಟು ತೀವ್ರಗೊಳಿಸಿತು. ಉತ್ತರಪ್ರದೇಶದಲ್ಲಿನ ಹೀನಾಯ ಸೋಲು ಈ ಕುಸಿತವನ್ನು ತಳಮಟ್ಟಕ್ಕೆ ತಲುಪಿಸಿದೆ.
ಸೋನಿಯಾ ಅವರ ಯಶಸ್ಸಿಗೆ ಇರುವಂತೆಯೇ ಸೋಲಿಗೂ ಹಲವು ಕಾರಣಗಳಿವೆ. ಮತ್ತೆ ಪಕ್ಷದೊಳಗೆ ಅವರು ಹೈಕಮಾಂಡ್ ಸಂಸ್ಕೃತಿಯನ್ನು ಜಾರಿಗೆ ತಂದರು. ಪ್ರಾದೇಶಿಕ ನಾಯಕರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳಿಗಿಂತ ದೆಹಲಿಯಲ್ಲಿರುವ ಅಧ್ಯಕ್ಷರ ಸಲಹೆಗಾರರ ಮೇಲೆಯೇ ಹೆಚ್ಚು ವಿಶ್ವಾಸ ಇರಿಸಲಾಯಿತು. ಕಾಲಕ್ರಮೇಣ ಇದರಿಂದಾಗಿ ರಾಜ್ಯ ಘಟಕಗಳು ಭ್ರಮನಿರಸನಗೊಂಡವು ಮತ್ತು ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಂಡರು. ‘ಪ್ರಥಮ ಕುಟುಂಬ’ವನ್ನು ಮುಂದೊಡ್ಡಲು ಸೋನಿಯಾ ನಡೆಸಿದ ಪ್ರಯತ್ನ ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಿತು.
ಪ್ರತಿಷ್ಠಿತ ಯೋಜನೆಗಳು ಯಾವ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿವೆಯೋ ಅಲ್ಲಿನ ಪ್ರಮುಖ ಕಾಂಗ್ರೆಸ್ ಮುಖಂಡರ ಹೆಸರನ್ನು ಯೋಜನೆಗಳಿಗೆ ಇರಿಸಿದ್ದರೆ ಅದು ರಾಜಕೀಯವಾಗಿ ಹೆಚ್ಚು ಸಮರ್ಪಕ ನಿರ್ಧಾರ ಅನಿಸಿಕೊಳ್ಳಬಹುದಿತ್ತು. ಆದರೆ ಆ ಎಲ್ಲ ಯೋಜನೆಗಳಿಗೆ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಹೆಸರನ್ನೇ ಇರಿಸಲಾಯಿತು.
ಮುಂಬೈ ಸಮುದ್ರ ಸೇತುವೆ ಯೋಜನೆಗೆ ರಾಜೀವ್ ಗಾಂಧಿ ಹೆಸರು ಇರಿಸಲಾಯಿತು. ಆದರೆ ಅದಕ್ಕೆ ವೈ.ಬಿ. ಚವಾಣ್ ಹೆಸರು ಇರಿಸುವುದು ಅರ್ಥಪೂರ್ಣ ಅನಿಸುತ್ತಿತ್ತು. ಹಾಗೆಯೇ ಹೈದರಾಬಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ರಾಜೀವ್ ಗಾಂಧಿ ಹೆಸರನ್ನೇ ಇರಿಸಲಾಯಿತು. ಈ ವಿಮಾನ ನಿಲ್ದಾಣಕ್ಕೆ ಪಿ.ವಿ. ನರಸಿಂಹ ರಾವ್ ಹೆಸರು ಇರಿಸಿದ್ದರೆ ಸೂಕ್ತವಾಗುತ್ತಿತ್ತು.
ಕಾಂಗ್ರೆಸ್‌ನ ಇತಿಹಾಸ ಆಳವಾದುದಾಗಿದೆ ಮತ್ತು ನಿಜಕ್ಕೂ ಭಾರತದಾದ್ಯಂತ ವ್ಯಾಪಿಸಿದೆ. ಈ ಸಮೃದ್ಧ ಮತ್ತು ಸಂಕೀರ್ಣ ಇತಿಹಾಸದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ನಾಯಕ ಅಥವಾ ನಾಯಕಿ ದೇಶದ ವಿವಿಧ ಭಾಗಗಳಲ್ಲಿನ ಕಾಂಗ್ರೆಸ್ ನಾಯಕರನ್ನು ಮುನ್ನೆಲೆಗೆ ತರುವ ಕೆಲಸ ಮಾಡುತ್ತಿದ್ದರು. ಸೋನಿಯಾ ಅವರು ತಮ್ಮ ಕುಟುಂಬದ ಬಗ್ಗೆ ಹೊಂದಿದ್ದ ಅತಿಯಾದ ವ್ಯಾಮೋಹ, ತಮ್ಮ ಕುಟುಂಬದ ಚರಿತ್ರೆಯನ್ನು ಪಕ್ಷದ ಚರಿತ್ರೆಯೊಂದಿಗೆ ಸಮೀಕರಿಸಿದ್ದು ಇತಿಹಾಸ ಮತ್ತು ಭವಿಷ್ಯಗಳೆರಡನ್ನೂ ವ್ಯಾಪಿಸಿದೆ.
ತಮ್ಮದೇ ತಲೆಮಾರಿನ ಇತರ ಕಾಂಗ್ರೆಸ್ ಮುಖಂಡರಿಗಿಂತ ಸಾಮರ್ಥ್ಯ ಕಡಿಮೆ ಎಂಬುದು ಸ್ಪಷ್ಟವಾಗಿಯೇ ಗೋಚರಿಸುತ್ತಿದ್ದರೂ ಮಗ ರಾಹುಲ್ ಗಾಂಧಿ ಅವರನ್ನು ಪಕ್ಷದ ಉಪಮುಖ್ಯಸ್ಥ ಹುದ್ದೆಗೆ ನೇಮಿಸಲಾಯಿತು. ಯಶಸ್ವಿ ರಾಜಕೀಯ ನಾಯಕನಾಗಬಲ್ಲ ಚೈತನ್ಯ ಮತ್ತು ಮಹತ್ವಾಕಾಂಕ್ಷೆ ಅವರಿಗೆ ಇಲ್ಲ ಎಂಬುದೂ ಸ್ಪಷ್ಟ.
ಸೋನಿಯಾ ಈಗಲೂ ಸಂಸತ್ ಸದಸ್ಯೆ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ. ಆದರೆ 2014ರ ಲೋಕಸಭೆ ಚುನಾವಣೆ ಮತ್ತು 2017ರ ಉತ್ತರಪ್ರದೇಶ ಚುನಾವಣೆಯನ್ನು ಗಮನಿಸಿದರೆ ಅವರು ಭಾರತದ ರಾಜಕಾರಣದಲ್ಲಿ ಮುಖ್ಯವಾದ ಸ್ಥಾನವೊಂದನ್ನು ಮರಳಿ ಪಡೆದುಕೊಳ್ಳುವುದು ಅಸಾಧ್ಯ. ಹಾಗಾಗಿಯೇ ಅವರ ಎರಡು ದಶಕಗಳ ರಾಜಕೀಯ ಜೀವನದ ಬಗ್ಗೆ ಈ ಅಂಕಣದಲ್ಲಿ ವಿಶ್ಲೇಷಣೆ ನಡೆಸಲಾಗಿದೆ.
ಅವರ ರಾಜಕೀಯ ಜೀವನದ ಪಯಣ ಅವರ ಕುಟುಂಬದ ಇತರ ಮೂವರು ಸದಸ್ಯರ ರಾಜಕೀಯ ಪಯಣವನ್ನೇ ಹೋಲುತ್ತಿದೆ ಎಂಬುದನ್ನೂ ಇಲ್ಲಿ ಹೇಳಬೇಕು. ಹಲವು ವರ್ಷಗಳ ಕಾಲ ನೆಹರೂ ಅವರು ಕಣ್ಣಿಗೆ ರಾಚುವ ರೀತಿಯ ರಾಜಕೀಯ ಯಶಸ್ಸನ್ನು ಗಳಿಸಿದ್ದರು. ಆದರೆ 1959ರ ನಂತರ ಅವರ ಯಶಸ್ಸು ಮುಕ್ಕಾಗತೊಡಗಿತ್ತು.
1969ರಿಂದ 1975ರ ಅವಧಿಯಲ್ಲಿ ಇಂದಿರಾ ಗಾಂಧಿ ಅವರು ತಮ್ಮ ಆರ್ಥಿಕ ಮತ್ತು ಸೇನಾ ನೀತಿಗಳಿಂದಾಗಿ ಭಾರಿ ಜನಪ್ರಿಯತೆ ಗಳಿಸಿದ್ದರು. ಆದರೆ ತುರ್ತುಪರಿಸ್ಥಿತಿ ನಂತರ ಅವರ ಯಶಸ್ಸಿನ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗತೊಡಗಿತು. ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವ ನೀತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಕ್ಕೆ ನೀಡಿದ ಆದ್ಯತೆಯಿಂದಾಗಿ ಆರಂಭಿಕ ವರ್ಷಗಳಲ್ಲಿ ರಾಜೀವ್ ಗಾಂಧಿ ಬಗ್ಗೆಯೂ ಭಾರಿ ಶ್ಲಾಘನೆ ವ್ಯಕ್ತವಾಗಿತ್ತು.
ನಂತರ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳ ಓಲೈಕೆ ಪರ್ವ ಆರಂಭವಾಯಿತು. ಬೊಫೋರ್ಸ್ ಹಗರಣವೂ ಬೆಳಕಿಗೆ ಬಂತು. ಸೋನಿಯಾ ಗಾಂಧಿ ಅವರ ರಾಜಕೀಯ ಜೀವನದಲ್ಲಿ ಇವೆಲ್ಲವೂ ಪ್ರತಿಬಿಂಬಿಸಿವೆ; ಮೊದಲ ಹಂತದಲ್ಲಿ ಯಶಸ್ಸು ಮತ್ತು ಸಾಧನೆಯ ಖ್ಯಾತಿ ಅವರಿಗೆ ದೊರೆತರೆ, ಎರಡನೇ ಹಂತದಲ್ಲಿ ಕುಸಿತ ಮತ್ತು ವೈಫಲ್ಯಕ್ಕೆ ಅವರು ಸಾಕ್ಷಿಯಾಗಬೇಕಾಯಿತು.
ಹೀಗೆ ಸೋನಿಯಾ ಅವರ ರಾಜಕೀಯ ಜೀವನ ಅವರ ಕುಟುಂಬದ ಇತರರ ಜತೆ ಸಾದೃಶ್ಯ ಹೊಂದಿದೆ. ಆದರೆ ತಾನು ಈ ನಿಯಮದಿಂದ ಭಿನ್ನ ಎಂದು ರಾಹುಲ್ ಸಾಧಿಸಿ ತೋರಿಸಬಹುದು. ನೆಹರೂ–ಗಾಂಧಿ ಕುಟುಂಬದಲ್ಲಿ ರಾಜಕೀಯ ಯಶಸ್ಸೇ ದಕ್ಕದ ಮೊದಲ ವ್ಯಕ್ತಿ ಅವರಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.