ಬ್ರಿಟನ್‍ನ ಪ್ರಕಾಶಕ ಆರ್.ಇ. ಹಾಕಿನ್ಸ್ ಭಾರತದಲ್ಲಿಯೇ ನೆಲೆಯಾದರು ಎಂಬುದು ಮಹತ್ವದ ವಿಚಾರವಾಗಿದ್ದರೂ ಹೆಚ್ಚು ಜನರಿಗೆ ತಿಳಿದಿಲ್ಲ. ದೆಹಲಿಯ ಶಾಲೆಯೊಂದರ ಶಿಕ್ಷಕನಾಗಿ ಹಾಕಿನ್ಸ್ 1930ರಲ್ಲಿ ಭಾರತಕ್ಕೆ ಬಂದರು. ಅಸಹಕಾರ ಚಳವಳಿ ಸಂದರ್ಭದಲ್ಲಿ ಈ ಶಾಲೆ ಮುಚ್ಚಿದ ಬಳಿಕ ಅವರು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‍ಗೆ (ಒಯುಪಿ) ಬಾಂಬೆಯಲ್ಲಿ ಸೇರಿದರು.
1937ರಲ್ಲಿ ಅವರು ಅದರ ಪ್ರಧಾನ ವ್ಯವಸ್ಥಾಪಕರಾದರು. ಮುಂದಿನ ಮೂವತ್ತು ವರ್ಷ ಒಯುಪಿಯ ಭಾರತ ವಿಭಾಗವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಲಾಭದಾಯಕವಾಗಿ ನಡೆಸಿದರು. ಪಠ್ಯಪುಸ್ತಕಗಳು, ಪದಕೋಶಗಳ ಜತೆಗೆ ಜಿಮ್ ಕಾರ್ಬೆಟ್, ಸಲೀಂ ಅಲಿ, ವೆರಿಯರ್ ಎಲ್ವಿನ್ ಅವರಂತಹ ಪ್ರಸಿದ್ಧರ ಕೃತಿಗಳನ್ನು ಪ್ರಕಟಿಸಿದರು.
ಹಾಕಿನ್ಸ್‌ಗೆ ಮಹಾತ್ಮ ಗಾಂಧಿ ಬಗ್ಗೆ ಬಹಳ ಅಭಿಮಾನ ಇತ್ತು. ಬಾಂಬೆಗೆ ಸ್ಥಳಾಂತರಗೊಂಡ ಕೆಲವೇ ಸಮಯದಲ್ಲಿ ಅವರು ಖಾದಿ ಧರಿಸಲು ಆರಂಭಿಸಿದ್ದರು. ಗಾಂಧಿಯ ‘ಸತ್ಯ ಶೋಧನೆ’ ಕೃತಿಯನ್ನು ಸಂಕ್ಷಿಪ್ತ ರೂಪಕ್ಕೆ ಇಳಿಸಿ ಶಾಲಾ ಮಕ್ಕಳಿಗಾಗಿ ಪ್ರಕಟಿಸುವಂತೆ ಗಾಂಧಿಯ ಆಪ್ತ ಸಹಾಯಕರಾಗಿದ್ದ ಮಹಾದೇವ ದೇಸಾಯಿ ಅವರ ಮನವೊಲಿಸಿದರು.
ಗಾಂಧಿ ಮತ್ತು ಹಾಕಿನ್ಸ್ ನಡುವಣ ಆಸಕ್ತಿದಾಯಕವಾದ ಕೆಲವು ಪತ್ರಗಳು (ಈತನಕ ಪ್ರಕಟವಾಗಿಲ್ಲದವು) ಪತ್ರಾಗಾರದಲ್ಲಿ ಹುಡುಕಾಡುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದವು. 1942ರಲ್ಲಿ ನಡೆದ ಭಾರತ ಬಿಟ್ಟು ತೊಲಗಿ ಚಳವಳಿ ಸಂದರ್ಭದಲ್ಲಿ ಹಾಕಿನ್ಸ್ ಅವರು ಬಾಂಬೆಯಲ್ಲಿ ಇದ್ದರು. ಗಾಂಧಿಯನ್ನು ಬಂಧಿಸಿ ಪುಣೆ ಜೈಲಿಗೆ ಕಳುಹಿಸಲಾಗಿತ್ತು.
ಜಾಗತಿಕ ಯುದ್ಧ ಆರಂಭವಾಗಿತ್ತು ಮತ್ತು ಬ್ರಿಟನ್ ಮಾಧ್ಯಮವು ಗಾಂಧಿ ಹಾಗೂ ಕಾಂಗ್ರೆಸ್ ಅನ್ನು ತೆಗಳುವುದರಲ್ಲಿ ನಿರತವಾಗಿತ್ತು. ಬ್ರಿಟಿಷ್ ಸರ್ಕಾರವನ್ನು ವಿರೋಧಿಸುವ ಮೂಲಕ ಗಾಂಧಿಯು ಹಿಟ್ಲರ್ ಹಾಗೂ ಆತನ ಜೊತೆಗಾರರ ಕೈಗೊಂಬೆಯಾಗಿದ್ದಾರೆ ಎಂದು ಈ ಮಾಧ್ಯಮಗಳು ಆರೋಪಿಸುತ್ತಿದ್ದವು. ಈ ಸನ್ನಿವೇಶದಲ್ಲಿ, ಗಾಂಧಿಯ ಬರಹಗಳ ಸಂಕಲನ ತರುವ ಮೂಲಕ ತಪ್ಪು ಗ್ರಹಿಕೆಯನ್ನು ಸರಿಪಡಿಸಲು ಹಾಕಿನ್ಸ್ ಮುಂದಾದರು.
1909ರಲ್ಲಿ ಗಾಂಧೀಜಿ ತಮ್ಮ ಮೊದಲ ಪುಸ್ತಕ ‘ಹಿಂದ್ ಸ್ವರಾಜ್’ ಪ್ರಕಟಿಸಿದರು. ಅದರಲ್ಲಿ ಅವರು ‘ಯಾವ ಹಕ್ಕನ್ನೂ ಕಾದಿರಿಸಲಾಗಿಲ್ಲ’ ಎಂದು ಬರೆದಿದ್ದರು. ಕೃತಿಸ್ವಾಮ್ಯದ ಬಗ್ಗೆ ಆ ಹಂತದಲ್ಲಿ ಗಾಂಧಿಗೆ ನಂಬಿಕೆ ಇರಲಿಲ್ಲ. ಕ್ರಮೇಣ ಅವರು ಈ ವಿಚಾರದಲ್ಲಿ ಸ್ವಲ್ಪ ಭಿನ್ನವಾದ ನಿಲುವು ತಳೆದರು ಎಂದು ಕಾನೂನು ಪಂಡಿತ ಶ್ಯಾಮಕೃಷ್ಣ ಬಾಲಗಣೇಶ್ ಅವರು ತಮ್ಮ ಪ್ರಬಂಧ ‘ಗಾಂಧಿ ಅಂಡ್ ಕಾಪಿರೈಟ್ ಪ್ರಾಗ್ಮಾಟಿಸಂ’ನಲ್ಲಿ (ಕ್ಯಾಲಿಫೋರ್ನಿಯಾ ಲಾ ರಿವ್ಯೂ, 2013) ಹೇಳಿದ್ದಾರೆ. ಗಾಂಧಿ ಹೆಚ್ಚು ಬರೆದದ್ದು ಗುಜರಾತಿ ಭಾಷೆಯಲ್ಲಿ.
ಬೇರೆಯವರು ಇವನ್ನು ಭಾಷಾಂತರ ಮಾಡಿದರೆ ಅರ್ಥದಲ್ಲಿ ವ್ಯತ್ಯಾಸವಾಗಬಹುದು ಎಂಬ ಚಿಂತೆ ಗಾಂಧಿಗೆ ಇತ್ತು. 1920ರ ದಶಕದ ಕೊನೆಯ ಹೊತ್ತಿಗೆ ಗಾಂಧಿ ತಮ್ಮ ಆತ್ಮಚರಿತ್ರೆ ಪ್ರಕಟಿಸಿದರು. ಗಾಂಧಿಯ ಅಮೆರಿಕನ್ ಶಿಷ್ಯ ಜಾನ್ ಹೇನ್ಸ್ ಹೋಮ್ಸ್ ಅವರು ಈ ಕೃತಿಯ ಜಾಗತಿಕ ಹಕ್ಕುಗಳನ್ನು ಮ್ಯಾಕ್‍ಮಿಲನ್ ಪ್ರಕಾಶನಕ್ಕೆ ಕೊಡುವಂತೆ ಗಾಂಧಿಯ ಮನವೊಲಿಸಿದರು. ಜಾಗತಿಕವಾಗಿ ಪ್ರಸಿದ್ಧವಾಗಿರುವ ಪ್ರಕಾಶನ ಸಂಸ್ಥೆಯು ಈ ಕೃತಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇನ್ಸ್ ವಾದಿಸಿದ್ದರು. ‘ಕೃತಿ ಸ್ವಾಮ್ಯಕ್ಕಾಗಿ ಹಣ ಪಡೆದು ಅದನ್ನು ಚರಕ ಪ್ರಚಾರ ಅಥವಾ ಶೋಷಿತರ ಹಿತಕ್ಕಾಗಿ ಬಳಸುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂಬ ಕಾರಣಕ್ಕೆ ಈ ಪ್ರಸ್ತಾವಕ್ಕೆ ಗಾಂಧಿ ಒಪ್ಪಿಗೆ ಕೊಟ್ಟಿದ್ದರು.
1920ರ ಕೊನೆಯ ಹೊತ್ತಿನಿಂದಲೇ ಗಾಂಧಿಯ ಕೃತಿಗಳ ಕೃತಿಸ್ವಾಮ್ಯ ನವಜೀವನ ಟ್ರಸ್ಟ್‌ನ ಬಳಿ ಇದೆ. 1943ರಲ್ಲಿ ಒಯುಪಿ ಮೂಲಕ ಗಾಂಧಿಯ ಕೃತಿಗಳ ಸಂಕಲನವೊಂದನ್ನು ತರಲು ಹಾಕಿನ್ಸ್ ಮುಂದಾದಾಗ ಗಾಂಧಿ ಜೈಲಲ್ಲಿದ್ದರು. ಆ ಆಗಸ್ಟ್‌ನಲ್ಲಿ ಗಾಂಧೀಜಿಗೆ ಪತ್ರ ಬರೆದ ಹಾಕಿನ್ಸ್, ತಮ್ಮ ನಂಬಿಕಸ್ಥ ವಿದ್ವಾಂಸ ಆರ್.ಕೆ. ಪ್ರಭು ಎಂಬುವರು ಲೇಖನಗಳನ್ನು ಆಯ್ಕೆ ಮಾಡುವರು ಎಂದು ಹೇಳಿ
ದ್ದರು. ದಕ್ಷಿಣ ಕನ್ನಡದವರಾಗಿದ್ದ ಪ್ರಭು ಅವರನ್ನು 1930-31ರಲ್ಲಿ ನಡೆದ ಕಾಯ್ದೆ ಭಂಗ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲಿಗೆ ಹಾಕಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಅವರು ಪತ್ರಕರ್ತರಾಗಿ ಕೆಲಸ ಮಾಡುತ್ತಾ ಗಾಂಧಿಯ ಬರಹಗಳ ಅಧ್ಯಯನವನ್ನೂ ನಡೆಸಿದ್ದರು.
ಜೈಲಿನಲ್ಲಿದ್ದ ಗಾಂಧಿಗೆ ಪತ್ರ ದೊರೆಯಲಿಲ್ಲ. ಹಾಗಾಗಿ ನವಜೀವನ ಟ್ರಸ್ಟ್‌ಗೆಹಾಕಿನ್ಸ್ ಪತ್ರ ಬರೆದರು. ಟ್ರಸ್ಟ್ ಅನುಮತಿ ನಿರಾಕರಿಸಿತು. ‘ಕೃತಿ ಸ್ವಾಮ್ಯ ಸಹಜವಾಗಿಯೇ ಬರುವ ವಿಚಾರ ಅಲ್ಲ’ ಹಾಗಾಗಿ, ಪತ್ರಿಕೆಯಲ್ಲಿ ತಾವು ಪ್ರಕಟಿಸಿದ ಎಲ್ಲ ಲೇಖನಗಳು ಸಾರ್ವಜನಿಕ ಆಸ್ತಿ ಎಂದು ಗಾಂಧಿ ಹೇಳಿದ್ದಾರೆ ಎಂಬುದನ್ನು ಹಾಕಿನ್ಸ್ ಉಲ್ಲೇಖಿಸಿದರು. ಗಾಂಧಿಯಲೇಖನಗಳ ಸಂಕಲನವನ್ನು ಪ್ರಕಟಿಸುವುದಾಗಿ ನವಜೀವನಟ್ರಸ್ಟ್‌ಗೆ ಹಾಕಿನ್ಸ್ ಹೇಳಿದರು.
‘ಗಾಂಧೀಜಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಪಾಶ್ಚಿಮಾತ್ಯರಿಗೆ ಮತ್ತು ಭಾರತೀಯರಿಗೆ ವ್ಯಾಖ್ಯಾನಿಸಿ ತಿಳಿಸಲು ಇದು ಮುಖ್ಯ ಎಂಬುದು ನನ್ನ ಭಾವನೆ, ಇದರ ಪ್ರಕಟಣೆಗೆ ಇದು ಸಕಾಲ ಎಂಬುದು ಕೂಡ ಮುಖ್ಯ ಕಾರಣ’ ಎಂದು ಹಾಕಿನ್ಸ್ ತಿಳಿಸಿದ್ದರು.
ನವಜೀವನ ಟ್ರಸ್ಟ್‌ಗೆ ಇದು ಮನವರಿಕೆ ಆಗಲಿಲ್ಲ. ಗಾಂಧಿಯ ಅಭಿಪ್ರಾಯವನ್ನು ಹಾಕಿನ್ಸ್ ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಟ್ರಸ್ಟ್‌ನವರು ಹೇಳಿದರು. ‘ಇದೊಂದು ಆಧುನಿಕ ವ್ಯವಸ್ಥೆ, ಹಾಗಾಗಿ ಇದು (ಕೃತಿ ಸ್ವಾಮ್ಯ) ಬಹುಶಃ ಕೆಲಮಟ್ಟಿಗೆ ಅಪೇಕ್ಷಣೀಯ’ ಎಂದು ಹಾಕಿನ್ಸ್ ಉಲ್ಲೇಖಿಸಿದ ವಾಕ್ಯದ ನಂತರದ ವಾಕ್ಯದಲ್ಲಿ ಗಾಂಧಿ ಹೇಳಿದ್ದರು ಎಂದು ಟ್ರಸ್ಟ್‌ನವರು ಹೇಳಿದರು.
1944ರ ಮೇಯಲ್ಲಿ ಗಾಂಧಿ ಜೈಲಿನಿಂದ ಬಿಡುಗಡೆಯಾದರು. ಈ ಹೊತ್ತಿಗೆ ಮಹಾದೇವ ದೇಸಾಯಿ ನಿಧನರಾಗಿದ್ದರು. ಗಾಂಧಿಯ ಆಪ್ತ ಸಹಾಯಕರಾಗಿ ಪ್ಯಾರೇಲಾಲ್ ನಯ್ಯರ್ ನೇಮಕವಾಗಿದ್ದರು. ನವಜೀವನ ಟ್ರಸ್ಟ್ ಜತೆಗಿನ ತಮ್ಮ ಪತ್ರ ವ್ಯವಹಾರವನ್ನು ಲಗತ್ತಿಸಿ ನಯ್ಯರ್ ಅವರಿಗೆ ಹಾಕಿನ್ಸ್ ಮತ್ತೆ ಪತ್ರ ಬರೆದರು. ‘ತಮ್ಮ ಬರಹಗಳಿಗೆ ಗಾಂಧಿ ಕೃತಿಸ್ವಾಮ್ಯ ಕೇಳುವುದಾದರೆ ಮತ್ತು ಸಂಕಲನದ ಪ್ರಕಟಣೆಗೆ ಆಕ್ಷೇಪ ಎತ್ತುವುದಾದರೆ ಕೃತಿ ಪ್ರಕಟಣೆಯ ಯೋಚನೆಯನ್ನೇ ಖಂಡಿತವಾಗಿ ಕೈಬಿಡುತ್ತೇವೆ.
ಕೃತಿ ಸ್ವಾಮ್ಯ ಕೇಳುವುದಿಲ್ಲ ಎಂದಾದರೆ, ಅವರು ಹಾಗೆಯೇ ಮಾಡುತ್ತಾರೆ ಮತ್ತು ಪ್ರಕಟಣೆಗೆ ನಮಗೆ ಹಕ್ಕು ನೀಡುತ್ತಾರೆ ಎಂಬ ಸ್ಪಷ್ಟ ಭರವಸೆ ನಮಗೆ ಇದೆ. ಲೇಖನಗಳ ಸಂಕಲನವು ಅತ್ಯುತ್ತಮವಾಗಿದೆ ಎಂಬ ಭಾವನೆ ನಮ್ಮದು. ವಿಶೇಷವಾಗಿ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಗಾಂಧೀಜಿಯ ಚಿಂತನೆಗಳ ಪೂರ್ವಗ್ರಹ ಪೀಡಿತ ಅಭಿಪ್ರಾಯಗಳು ಪ್ರಚಲಿತದಲ್ಲಿವೆ. ಹಾಗಾಗಿ ಪುಸ್ತಕದ ಪ್ರಕಟಣೆ ಈಗ ಸಕಾಲಿಕ’ ಎಂದು ಪತ್ರದಲ್ಲಿ ಹಾಕಿನ್ಸ್ ಬರೆದಿದ್ದರು.
ತಮ್ಮ ಲೇಖನಗಳ ಸಂಕಲನವನ್ನು ಒಯುಪಿ ಪ್ರಕಟಿಸಬಹುದು ಎಂದು 1944ರಲ್ಲಿ ಗಾಂಧಿ ಅವರು ಹಾಕಿನ್ಸ್‌ಗೆ ಪತ್ರ ಬರೆದರು. ಆದರೆ ಕೆಲವು ಷರತ್ತುಗಳನ್ನು ಹಾಕಿದರು- ನವಜೀವನ ಟ್ರಸ್ಟ್‌ನ ಕೃತಿ ಸ್ವಾಮ್ಯಕ್ಕೆ ಮಾನ್ಯತೆ ನೀಡಬೇಕು, ಕೃತಿಯ ನೂರು ಪ್ರತಿಗಳನ್ನು ಟ್ರಸ್ಟ್‌ಗೆ ಉಚಿತವಾಗಿ ನೀಡಬೇಕು, ಇಂಗ್ಲಿಷ್ ಆವೃತ್ತಿಯನ್ನು ಪ್ರಕಟಿಸಲು ಟ್ರಸ್ಟ್‌ಗೆ ಅವಕಾಶ ಇರಬೇಕು ಮತ್ತು ಭಾರತೀಯ ಭಾಷೆಗಳಲ್ಲಿ ಪ್ರಕಟಿಸುವ ಹಕ್ಕು ಟ್ರಸ್ಟ್‌ನಲ್ಲಿಯೇ ಉಳಿಯಬೇಕು ಎಂಬುದು ಈ ಷರತ್ತುಗಳಾಗಿದ್ದವು. ಪ್ರತ್ಯೇಕ ಇಂಗ್ಲಿಷ್ ಆವೃತ್ತಿ ತರಲು ಟ್ರಸ್ಟ್‌ಗೆ ಅವಕಾಶ ನೀಡುವುದನ್ನು ಬಿಟ್ಟು ಇತರ ಎಲ್ಲ ಷರತ್ತುಗಳಿಗೆ ಹಾಕಿನ್ಸ್ ಒಪ್ಪಿದರು. ಯಾಕೆಂದರೆ, ಟ್ರಸ್ಟ್ ಇಂಗ್ಲಿಷ್‍ನಲ್ಲಿ ಆವೃತ್ತಿ ಹೊರತಂದರೆ ವ್ಯಾವಹಾರಿಕವಾಗಿ ಒಯುಪಿಗೆ ನಷ್ಟವಾಗುತ್ತದೆ ಎಂಬುದು ಅವರ ನಿಲುವಾಗಿತ್ತು.
ಗಾಂಧೀಜಿ ತಮ್ಮ ನಿಲುವು ಬದಲಾಯಿಸಲಿಲ್ಲ. ‘ಆರ್.ಕೆ.ಪ್ರಭು ಅವರು ಮಾಡಿರುವ ಸಂಕಲನವನ್ನು ನೀವು ಪ್ರಕಟಿಸುವುದರ ಬಗ್ಗೆ ನವಜೀವನ ಟ್ರಸ್ಟ್ ಮತ್ತು ತಮಗೆ ಕೂಡ ಇರುವ ಏಕೈಕ ಆಸಕ್ತಿ ಎಂದರೆ ಭಾರತದ ಹೊರಗೆ ವ್ಯಾಪಕ ಪ್ರಚಾರ ಸಿಗಲಿ ಎಂಬುದೇ ಆಗಿದೆ. ಹಾಗಿದ್ದರೂ, ಒಯುಪಿ ಪ್ರಕಟಣೆಗೆ ಮುಂದಾಗುತ್ತದೆ ಎಂದಾದರೆ, ‘ಅದರ ಕಡಿಮೆ ದರದ ಭಾರತೀಯ ಆವೃತ್ತಿ ಹೊರತರಲು ನವಜೀವನ ಟ್ರಸ್ಟ್‌ಗೆ ಅನುಮತಿ ಇರಲೇಬೇಕು’ ಎಂದು ಹಾಕಿನ್ಸ್‌ಗೆ ಗಾಂಧಿ ಸ್ಪಷ್ಟವಾಗಿ ಬರೆದರು.
ಇದೇ ರೀತಿಯ ಪತ್ರವನ್ನು ಪ್ರಭು ಅವರಿಗೂ ಗಾಂಧಿ ಬರೆದರು. ‘ಅತ್ಯಂತ ನ್ಯಾಯಯುತ ಷರತ್ತುಗಳನ್ನಷ್ಟೇ ಒಯುಪಿಗೆ ಹಾಕಿದ್ದೇನೆ’ ಎಂದು ಈ ಪತ್ರದಲ್ಲಿ ಅವರು ಹೇಳಿದರು. ‘ಆದಾಯದ ಪ್ರಮುಖ ಮೂಲ ಭಾರತವೇ ಎಂದಾದರೆ, ವಿದೇಶದಲ್ಲಿ ಪ್ರಸಿದ್ಧವಾಗಿರುವ ಪ್ರಕಾಶಕರನ್ನು ಆಶ್ರಯಿಸುವುದರಲ್ಲಿ ಅರ್ಥ ಇಲ್ಲ. ಭಾರತದಲ್ಲಿ ಈ ಪುಸ್ತಕ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗಬೇಕು ಎಂಬ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲ. ಈತನಕ ಆಗಿರುವ ವೆಚ್ಚವನ್ನು ಟ್ರಸ್ಟ್ ಭರಿಸಿದರೆ ಇಲ್ಲಿತನಕ ಮುದ್ರಣ ಆಗಿರುವುದನ್ನು ಹಸ್ತಾಂತರಿಸಲುಆಕ್ಸ್‌ಫರ್ಡ್ ಪ್ರೆಸ್‍ಗೆ ಒಪ್ಪಿಗೆ ಇದೆಯೇ? ಈ ವಿಚಾರವು ಟ್ರಸ್ಟ್‌ನ ಒಪ್ಪಿಗೆಯನ್ನು ಅವಲಂಬಿಸಿದೆ. ಬೇಸರ ಪಟ್ಟುಕೊಳ್ಳಬೇಡಿ, ಅಗತ್ಯ ಇದ್ದರೆ ನನ್ನನ್ನು ಬಂದು ಕಾಣಬಹುದು’ ಎಂದು ಗಾಂಧೀಜಿ ಪತ್ರದಲ್ಲಿ ಬರೆದರು.
1944ರ ಸೆಪ್ಟೆಂಬರ್‌ನಲ್ಲಿ ಬಾಂಬೆಯಲ್ಲಿದ್ದ ಗಾಂಧೀಜಿ, ಹಾಕಿನ್ಸ್ ಮತ್ತು ಪ್ರಭು ಅವರನ್ನು ಜತೆಯಾಗಿ ಭೇಟಿಯಾಗುವ ವ್ಯವಸ್ಥೆ ಮಾಡಿಕೊಂಡರು. ‘ಯಾವುದಾದರೂ ಮಾರ್ಗವನ್ನು ನೀವು ಕಂಡುಕೊಂಡರೆ ನನಗೆ ಬಹಳ ಖುಷಿಯಾಗುತ್ತದೆ’ ಎಂದು ಅವರಿಗೆ ಗಾಂಧಿ ಪತ್ರ ಬರೆದಿದ್ದರು.
ಅವರು ಒಂದು ಮಾರ್ಗ ಕಂಡುಕೊಂಡರು ಎಂಬುದು ಈ ಭೇಟಿಯ ಬಳಿಕ ನವಜೀವನ ಟ್ರಸ್ಟ್‌ನ ಕಾರ್ಯದರ್ಶಿಗೆ ಹಾಕಿನ್ಸ್ ಬರೆದ ಪತ್ರದಿಂದ ತಿಳಿಯುತ್ತದೆ. ಈ ಪತ್ರದಲ್ಲಿ ಒಯುಪಿ ಪ್ರಕಾಶಕರು ಹೀಗೆ ಹೇಳಿದ್ದಾರೆ: ‘ಈ ಸಂಜೆ ನಡೆದ ಮಾತುಕತೆಯಲ್ಲಿ ಒಪ್ಪಿತವಾದ ನಿಯಮಗಳ ಬಗ್ಗೆ ನಿಮಗೆ ಪತ್ರ ಬರೆಯಲು ಗಾಂಧೀಜಿ ಹೇಳಿದ್ದಾರೆ. ಒಯುಪಿ ಪ್ರಕಟಿಸುವ ಪ್ರತಿ ಆವೃತ್ತಿಯ ನೂರು ಪ್ರತಿಗಳನ್ನು ನವಜೀವನಕ್ಕೆ ನೀಡಬೇಕು ಎಂಬುದು ಒಂದು ಷರತ್ತು (ನವಜೀವನ ಟ್ರಸ್ಟ್‌ನ ಅನುಮತಿಯೊಂದಿಗೆ ಪುಸ್ತಕ ಪ್ರಕಟಿಸಲಾಗಿದೆ ಎಂಬುದನ್ನು ಇದುವೇ ಸ್ಪಷ್ಟಪಡಿಸುತ್ತದೆ); ಯಾವುದೇ ದರದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಪ್ರಕಟಿಸಲು ಟ್ರಸ್ಟ್‌ಗೆ ಹಕ್ಕು ಇದೆ ಮತ್ತು ಭಾರತೀಯ ಭಾಷೆಗಳಿಗೆ ಅನುವಾದ ಮಾಡುವ ಹಕ್ಕು ಕೂಡ ಟ್ರಸ್ಟ್‌ನಲ್ಲಿಯೇ ಇರುತ್ತದೆ. ಆದರೆ, ವಿದೇಶಿ ಆವೃತ್ತಿಯ ಸಂಪೂರ್ಣ ಹಕ್ಕು ಒಯುಪಿಯದ್ದಾಗಿರುತ್ತದೆ’.
ಹಾಕಿನ್ಸ್ ಬಹಳ ಇಷ್ಟಪಟ್ಟು ರೂಪಿಸಿದ ಸಂಕಲನ 1945ರ ಮಾರ್ಚ್‍ನಲ್ಲಿ ಪ್ರಕಟವಾಯಿತು. ‘ದ ಮೈಂಡ್ ಆಫ್ ಮಹಾತ್ಮ’ ಎಂಬ ಹೆಸರಿನ ಈ ಕೃತಿಗೆ ಪ್ರಭು ಮತ್ತು ಅವರ ಸಹೋದ್ಯೋಗಿ ಯು.ಆರ್.ರಾವ್ ಸಂಪಾದಕರಾಗಿದ್ದರು. ಗಾಂಧಿ ಅವರಿಗೆ ಸಂಬಂಧಿಸಿದ ಇತರ ಕೃತಿಗಳತ್ತಲೂ ಪ್ರಭು ಅವರು ಗಮನ ಹರಿಸಿದರು. ರವೀಂದ್ರನಾಥ ಟ್ಯಾಗೋರ್ ಮತ್ತು ಗಾಂಧಿ ನಡುವಣ ಪತ್ರ ವಿನಿಮಯದ ಮೊದಲ ಸಂಕಲನವನ್ನು ಅವರೇ ರೂಪಿಸಿದರು. ‘ಟ್ರುತ್ ಕಾಲ್ಡ್ ದೆಮ್ ಡಿಫರೆಂಟ್ಲಿ’ ಅದರ ಹೆಸರು.
ಹಾಕಿನ್ಸ್ ಮತ್ತು ಗಾಂಧೀಜಿ ನಡುವಣ ಪತ್ರ ವ್ಯವಹಾರ ಅವರಿಬ್ಬರನ್ನೂ ಅತ್ಯುತ್ತಮವಾಗಿ ಬಿಂಬಿಸುತ್ತದೆ. ಇಂಗ್ಲಿಷ್ ಭಾಷಿಕ ಜಗತ್ತಿನಲ್ಲಿ ಗಾಂಧಿಯ ಬಗ್ಗೆ ಸರಿಯಾದ ಗ್ರಹಿಕೆ ಮೂಡಬೇಕು ಎಂದು ಬಹಳ ಪ್ರಾಮಾಣಿಕವಾಗಿಯೇ ಹಾಕಿನ್ಸ್ ಬಯಸಿದ್ದರು. ಆದರೆ, ಅದೇ ಹೊತ್ತಿಗೆ ತಾವು ಕೆಲಸ ಮಾಡುವ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‍ನ ಹಿತಾಸಕ್ತಿ ರಕ್ಷಣೆಗೂ ಬದ್ಧರಾಗಿದ್ದರು. ಈ ವಿಚಾರದಲ್ಲಿ ಹಾಕಿನ್ಸ್ ಅವರ ಮೇಲೆ ಬಹಳ ಸಂತೋಷದಿಂದಲೇ ಗಾಂಧಿ ವಿಶ್ವಾಸ ಇರಿಸಿದ್ದರು. ಆದರೆ, ತಮ್ಮ ನವಜೀವನ ಟ್ರಸ್ಟ್‌ನ ಹಿತಾಸಕ್ತಿ ಕಾಯುವ ವಿಚಾರದಲ್ಲಿ ಅವರು ಯಾವುದೇ ಹಿಂಜರಿಕೆ ತೋರಲಿಲ್ಲ. ವ್ಯಕ್ತಿಗತವಾಗಿ ಮತ್ತು ಆರಂಭದಲ್ಲಿ ಭಿನ್ನ ದಾರಿಗಳಿಂದ ಬಂದ ಇಬ್ಬರೂ ಸಮಾನ ಆಸಕ್ತಿಯ ಹಾದಿ ಕಂಡುಕೊಂಡರು. ಗಾಂಧಿ ಯಾವಾಗಲೂ ಹೇಳಲು ಇಷ್ಟಪಡುತ್ತಿದ್ದ ‘ಸಂಧಾನದ ಸೌಂದರ್ಯ’ ಎಂಬುದನ್ನು ಈ ಇಬ್ಬರ ನಡುವಣ ಸಂಬಂಧ ಬಿಂಬಿಸುತ್ತಿತ್ತು.
ಗಾಂಧೀಜಿ ನಿಧನರಾದ 60 ವರ್ಷಗಳ ಬಳಿಕ ಕೃತಿಸ್ವಾಮ್ಯ ಕೊನೆಗೊಂಡಿತು. 2008ರ ಜನವರಿ 30ರ ಬಳಿಕ ಗಾಂಧಿಯ ಕೃತಿಗಳನ್ನು ಯಾರು ಬೇಕಿದ್ದರೂ ಪ್ರಕಟಿಸಬಹುದು. ವಿವಿಧ ಗುಣಮಟ್ಟದ ಹಲವು ಆವೃತ್ತಿಗಳು ಪ್ರಕಟವಾಗಿವೆ ಕೂಡ. ಉತ್ತಮ ಅಭಿರುಚಿ ಮತ್ತು ಸಂವೇದನೆ ಇರುವ ಯಾರಾದರೂ ‘ದ ಮೈಂಡ್ ಆಪ್ ಮಹಾತ್ಮ ಗಾಂಧಿ’ ಕೃತಿಯನ್ನು ಮರು ಮುದ್ರಿಸಬಹುದು. ಭಾರತದ ಇಬ್ಬರು ಅತ್ಯುತ್ತಮ ಪತ್ರಕರ್ತರು ಮತ್ತು ಕೃತಿಯನ್ನು ಪ್ರಕಟಿಸಿದ ಭಾರತ ಪ್ರೇಮಿಯಾಗಿದ್ದ ಬ್ರಿಟಿಷ್ ವ್ಯಕ್ತಿಗೆ ಸಲ್ಲಿಸಬಹುದಾದ ಶ್ರೇಷ್ಠ ನಮನ ಇದಾಗಬಹುದು. ಇದು ಗಾಂಧೀಜಿ ಅವರ ಸಮಗ್ರ ಕೃತಿಗಳಿಗೆ ಅತ್ಯುತ್ತಮವಾದ ಪೀಠಿಕೆಯೂ ಹೌದು. ಮತ್ತೊಮ್ಮೆ ಓದಿಸಿಕೊಳ್ಳಬೇಕಾದ ಎಲ್ಲ ಅರ್ಹತೆಯೂ ಈ ಪುಸ್ತಕಕ್ಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.