ನಮಿಪೆ ಮುದದಿ ಮಾತೇ
ಬಂಟ್ವಾಳ ರಘುನಾಥ ಗುರುಕುಲ ಖ್ಯಾತೇ,
ನಮಿಪೆ ಮುದದಿ ಮಾತೇ
ಪುಣ್ಯಮಯೀ ತವ ಪಾವನ ನಾಮ
ಗಣ್ಯವಿಹುದು ನಿನ್ನ ಕೀರ್ತಿಪ್ರಭಾವ
ಪ್ರೇಮಕುವರರನು ಕರೆಸೀ
ನೀಡು ಜ್ಞಾನವನು ಹರಸೀ
ಹಿಂದು ಮುಸಲ್ಮಾನರ ಐಕ್ಯತೆಯ
ಹಿಂದುಳಿದ ಬಂಧುಗಳ ಏಳಿಗೆಯ
ಮುಂದಡಿಯಿಡುವುದೆ ಧ್ಯೇಯಾ
ಕಂದಗಳೆಲ್ಲರಾಭ್ಯುದಯಾ
ಯಾವುದೆಂತ ಮಾಡಿದಿರಿ? ನಮ್ಮ ಕುಂದಾಪುರದಲ್ಲಿನ ಬಂಟ್ವಾಳ ರಘುನಾಥರಾಯರ ಹಿಂದೂ ಎಲಿಮೆಂಟರಿ ಶಾಲೆಯ ಪ್ರಾರ್ಥನಾಗೀತೆ! ನಮಿಪೆ (`ವಂದಿಸುವೆ~ ಎನ್ನುವುದೂ ಇತ್ತು) ಮುದದಿ ಮಾತೇ ಎನ್ನುವಾಗ ಕಣ್ಣಮುಂದೆ ಶಾಲೆಯೆಂಬ ಮಾತೆ ದೇವಿಯಂತೆ ಆಶೀರ್ವಾದದ ಭಂಗಿಯಲ್ಲಿ ನಿಂತಿರುತ್ತಿದ್ದಳು.
ಸುಕೋಮಲ ದಿನಗಳಲ್ಲಿ ಶಾಲಾಗೀತೆಗಳನ್ನು ಹೇಗೆ ಜೀವವಿಟ್ಟು ಹಾಡುತ್ತೇವೆ. ಅದರ ರಾಗವೋ; ಧ್ವನಿಯು ಎಲ್ಲ ಸ್ವರಮೆಟ್ಟಲುಗಳನ್ನೂ ಹಾದು ಕಂಠಬಂಧನ ಪೂರ್ತಾ ಹರಿದು ಹೊರಬರುವಂತೆ ಇತ್ತು.
ಆಗ ನಾಟಕಕ್ಕೂ ಗಾಯನಕ್ಕೂ ರಚನೆಗೂ ಯಾರಪ್ಪಾ ಅಂದರೆ ಸಂಜೀವ ಮಾಸ್ಟರು- ಬಸರೂರು ಸಂಜೀವ ರಾಯರು. ಹಾಡಿನ ಕೊನೇಚರಣದಲ್ಲಿನ ಹಿಂದೂ ಮುಸಲ್ಮಾನರ ಐಕ್ಯತೆಯ ಹಿಂದುಳಿದ ಬಂಧುಗಳ ಏಳಿಗೆಯ...! ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶವಿಡೀ ಅನುಭವಿಸಿದ ಅತಿದಾರುಣ ನೋವಿನಲ್ಲಿ ಒಬ್ಬ ಶಾಲೆಮಾಸ್ಟರ ಮನದಲ್ಲಿ ಹುಟ್ಟಿ, ಶಾಲಾ ಮಕ್ಕಳಿಂದ ಹಾಡಿಸುತಿದ್ದ ಸಾಲು ಅದು.
ಅವರವರ ಪ್ರಾಥಮಿಕಶಾಲೆ ಅವರವರಿಗೆ ತಾಯಿಯಂತೆ, ನೆನೆದೊಡನೆ ಕರುಳು ಮೀಟುವಂಥದು. ನಮ್ಮ ಶಾಲೆಯನ್ನು ಸ್ಥಾಪಿಸಿದವರು ಕುಂದಾಪುರ ಹೈಸ್ಕೂಲಿನ ಹೆಸರಾಂತ ಹೆಡ್‌ಮಾಸ್ಟರು, ಬಂಟ್ವಾಳ ರಘುನಾಥರಾಯರು.
ಹೆಂಡತಿಮಕ್ಕಳು ಇಲ್ಲದ ಅವರು ಈ ಶಾಲೆಯನ್ನು ಸ್ಥಾಪಿಸಿದರಂತೆ. ಅವರ ಕುರಿತು ಹೇಳಲು ಈಗ ತೊಂಬತ್ತುವರ್ಷದ ನನ್ನ ದೊಡ್ಡ ಅಕ್ಕನನ್ನು ಬಿಟ್ಟರೆ ಹೆಚ್ಚು ಮಂದಿಯಿಲ್ಲ.
ರಘುನಾಥರಾಯರ ಕಥೆಯೆಂದರೆ ಒಬ್ಬ ಅಪ್ಪಟ ಶಿಕ್ಷಣಪ್ರೇಮಿಯ ಕಥೆ. ಭಾರೀ ಇಂಗ್ಲಿಷ್‌ಪ್ರಿಯ ಮಾಸ್ಟರಂತೆ ಅವರು. ಶಿವರಾಮ ಕಾರಂತರು ಹೇಳುತ್ತಿದ್ದರಲ್ಲ ಇಂಗ್ಲಿಷ್‌ನಲ್ಲಿ ನಗುವ ಜೋಕು, ಅದು ಈ ಹೆಡ್‌ಮಾಸ್ಟರದೇ ಅಂತೆ. ಅವರು ಎಷ್ಟೊತ್ತಿಗೆ ಏನು ಕೇಳಿದರೂ ಹೇಳಿಕೊಡುವುದು, ಬೀಯೆ ಎಮ್ಯೆ ಕಲಿಯುವವರೂ ಬಂದು ಅವರಿಂದ ಪಾಠ ಹೇಳಿಸಿಕೊಳ್ಳುವುದು,
ಮಕ್ಕಳು ಓದುತ್ತಿದ್ದಾರೋ ಇಲ್ಲವೋ ಅಂತ ಬೆಳಿಗ್ಗೆ ಊರಲ್ಲಿ ಗಸ್ತು ತಿರುಗಿ ಪತ್ತೆ ಹಚ್ಚುವುದು, ಅವರ ಶಿಷ್ಯನೊಬ್ಬ ದೊಡ್ಡ ಹುದ್ದೆಗೇರಿದವ ಹೈಸ್ಕೂಲಿನ ಸ್ಕೂಲ್‌ಡೇ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಕಾರಲ್ಲಿ ಬರುವಾಗ ರಸ್ತೆಯಲ್ಲಿ ರಘುನಾಥರಾಯರನ್ನು ಕಂಡು ಥಟ್ಟನೆ ಕಾರು ನಿಲ್ಲಿಸಿ ಕೆಳಗಿಳಿದು ಅಲ್ಲಿಯೇ ಸಾಷ್ಟಾಂಗ ನಮಸ್ಕಾರ ಮಾಡಿದ್ದು,
ದತ್ತಾತ್ರೇಯ ದೇವಸ್ಥಾನದ ಎದುರಿನ ಅವರ ಸಣ್ಣಮನೆ, ಅಡುಗೆಗೊಂದು ಜನ, ಮನೆಯ ಚಾವಡಿಯ ಒಂದು ಮೂಲೆಯಲ್ಲಿ ಬೆಂಚಿನ ಮೇಲೆ ಕುಳಿತು ಅವರು ಎಣ್ಣೆ ನೀವಿಕೊಳ್ಳುತ್ತ ಬೊಚ್ಚುಬಾಯಲ್ಲಿ ಸಂಸ್ಕೃತ ಹೇಳಿಕೊಡುವುದು, ಶಾಲೆಯ ಮಕ್ಕಳನ್ನೇ ತನ್ನ ಮಕ್ಕಳೆಂದು ಭಾವಿಸಿದ ಅವರು ತನಗೆ ಸಾವಿರ ಮಕ್ಕಳೆಂದು ಹೇಳುತ್ತಿದ್ದದ್ದು... ಕತೆ ಕತೆ ಕತೆ.
ಹೇಳಹೊರಟೊಡನೆ ದೊಡ್ಡಕ್ಕ ಸಣ್ಣ ಹುಡುಗಿಯಂತಾಗುತ್ತಾಳೆ. ತನ್ನ ಮದುವೆಯ ಕೇವಲ ಎರಡು ದಿನದ ಮೊದಲು, ಎಂದರೆ ಜನವರಿ ಇಪ್ಪತ್ತಾರರಂದು, (ಅದಿನ್ನೂ ಪ್ರಜಾಪ್ರಭುತ್ವದ ದಿನ ಆಗಿರಲಿಲ್ಲ) ಮುದಿತನವೇ ಕಾರಣವಾಗಿ ಅವರು ಅಸುನೀಗಿದರೆಂದು ನೆನೆವಾಗ ಪ್ರತಿಸಲವೂ ಭಾವಾವಿಷ್ಠಳಾಗುತ್ತಾಳೆ.
ನಾವು ಅವರನ್ನು ಕಂಡದ್ದು ಮಾತ್ರ ಫೋಟೋದಲ್ಲಿ. ಶಾಲೆಯ ಗೋಡೆಯ ಮೇಲೆ ಅವರದೊಂದು ದೊಡ್ಡ ಫೋಟೋ; ಪಂಚೆ ಕೋಟು ರುಮಾಲು ತೊಟ್ಟ ಹಳೆಯಕಾಲದ ಮಾಸ್ಟರ ಧೀರಗಂಭೀರ ಮಾದರಿ ಫೊಟೋ... ಫೋಟೋವೋ ಅಥವಾ `ಡ್ರಾಯಿಂಗ್ ಮಾಸ್ಟ್ರು~ ಎಂದೇ ಕರೆಸಿಕೊಂಡ, ಅಂದು ನಮ್ಮೂರಲ್ಲಿದ್ದ ವ್ಯಕ್ತಿಚಿತ್ರ ನಿಷ್ಣಾತ ದಿ. ಬಿ.ಪಿ. ಬಾಯರಿ ಅವರು ಬಿಡಿಸಿದ ವರ್ಣಚಿತ್ರವೋ ಅದು...
ಹಿಂದೆ `ಹಾಡಿಶಾಲೆ~ಯಾಗಿ ಹಾಡಿಯ ನಡುವೆ ಅರಳಿದ, ಊರು ಬೆಳೆದಂತೆ ಆಚೀಚಿನ ಎರಡು ಮುಖ್ಯರಸ್ತೆಯ ನಡುವಲ್ಲಿ ಸಿಕ್ಕಿ ಅಷ್ಟಗಲಕೆ ಉದ್ದಕೆ ಮಾತ್ರ ಇರುವ, ಶತಮಾನ ಕಳೆದ ಶಾಲೆ ನಮ್ಮದು.
ಶಾಲಾಕಟ್ಟಡದ ಗೋಡೆ ಮಾಡು ಎಲ್ಲ ಎತ್ತರೆತ್ತರ. ಪರೀಕ್ಷೆ ಸಮಯದಲ್ಲಿ ಬಾಯಿಲೆಕ್ಕದಂತಹ ಪರೀಕ್ಷೆಗೆ ನಮ್ಮನ್ನು ಆಗ ಪಕ್ಕದಲ್ಲೇ ಇದ್ದ ಎಡ್ವರ್ಡ್ ಮೆಮೋರಿಯಲ್ ಕ್ಲಬ್‌ನ ಜಗಲಿಗೆ ಕರೆದೊಯ್ಯುತ್ತಿದ್ದರು.
ಆಟಕ್ಕೆ ಬಯಲಿಲ್ಲದೆ ಆಗಲೂ ಗಂಡುಮಕ್ಕಳನ್ನು ಸನಿಹದ ದತ್ತಾತ್ರೇಯ ದೇವಸ್ಥಾನದ ಅಂಗಳಕ್ಕೆ ಕಳಿಸುತ್ತಿದ್ದರು. ನಮಗೆ ಶಾಲೆಯ ಎದುರಂಗಳ ಅಥವಾ ಹಿಂದಿನಂಗಳದಲ್ಲಿ ಟೊಪ್ಪಿಯಾಟವನ್ನೋ `ಕೋಟೆಯಲ್ಲಿ ದನವುಂಟಾ?~ ಆಟವನ್ನೋ ಆಡಿಸುತ್ತಿದ್ದರು.
ಎತ್ತರದ ಕ್ಲಾಸುಬಾಗಿಲಿನ ತಲೆಗಟ್ಟಲ್ಲಿ ಬಿಳೀ ವೈಟ್‌ವಾಶ್ ಗೋಡೆಯ ಮೇಲೆ ಕಮಾನಾಕೃತಿಯಲ್ಲಿ ತಿಳಿನೀಲ ಸುಂದರ ಅಕ್ಷರದಲ್ಲಿ ಒಂದೊಂದು ವಿವೇಕನುಡಿ;
ದೇವರ ಭಯವೇ ಜ್ಞಾನದ ಮೂಲ, ಸತ್ಯಮೇವ ಜಯತೇ, ಒಗ್ಗಟ್ಟಿನಲ್ಲಿ ಬಲವಿದೆ, ಕೈ ಕೆಸರಾದರೆ ಬಾಯ್ ಮೊಸರು, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?, ಸಾಧಿಸಿದರೆ ಸಬಳ (= ಕಬ್ಬಿಣ) ನುಂಗಬಹುದು ಮುಂತಾಗಿ. ಅಯಾಚಿತವಾಗಿ ಅವು ಕಣ್ಣಿಗೆ ಬಿದ್ದೂಬಿದ್ದೂ ಬಾಯಿಪಾಠವಾಗಿ ಬಿಟ್ಟಿದ್ದವು.
ಕಲ್ನಾರು ಹೊಸತಾಗಿ ಬರುತ್ತಿದ್ದ ಕಾಲವದು. ಕ್ಲಾಸುಕ್ಲಾಸುಗಳ ನಡುವೆ ವಿಭಾಜಕಗಳಾಗಿ ಇದ್ದ ತಟ್ಟಿಯ ಸ್ಟಾಂಡುಗಳನ್ನು ತೆಗೆದು ಕಲ್ನಾರಿನ ಸ್ಟಾಂಡುಗಳನ್ನು ಮಾಡಿಸಿದ್ದು ನಾವಿದ್ದಾಗಲೇ. ಆ ಹೊಸಸ್ಟಾಂಡುಗಳಿಗೆ ನಾವು ಆನಿಸಿ ನಿಲ್ಲುವೆವು, ಅದಕ್ಕೆ ಪರಿಮಳವೇ ಇಲ್ಲದೆಯೂ ಮೂಸುವೆವು. ಹೊಸ ಪುಸ್ತಕಗಳ ಪರಿಮಳವಾದರೂ ಹೌದು, ಸಾಟಿಯಿಲ್ಲದ್ದು.
ಆದರೆ ಅಂದೆಲ್ಲ ಹೊಸಪುಸ್ತಕ ಕೊಳ್ಳುವವರು (ಕೊಡಿಸುವರು) ಯಾರು? ಎಲ್ಲ ಸೆಕೆಂಡ್‌ಹ್ಯಾಂಡ್, ಅಲ್ಲ ಅದೆಷ್ಟೋ ಹ್ಯಾಂಡ್‌ಗಳನ್ನು ದಾಟಿ ನಾಯಿ ಕಿವಿಯೂ ಉದುರಿದ ಪುಸ್ತಕಗಳನ್ನು ಆ ಚಿಕ್ಕವಯಸ್ಸಿನಲ್ಲಿಯೇ ಎಂತಹ ಚೌಕಾಶಿ ಮಾಡಿ `ಖರೀದಿಸು~ತ್ತಿದ್ದೆವು! ಅವುಗಳ ಎದುರುಪುಟದಲ್ಲಿ ಮಾತ್ರವಲ್ಲ, ಒಳಪುಟಗಳಲ್ಲಿಯೂ ರಾರಾಜಿಸಿಕೊಂಡಿರುತ್ತಿದ್ದ ಹಿಂದಣ ವಾರಸುದಾರರ ನಾಮಾಂಕಿತಗಳು.
ವರ್ಷ ಮುಗಿಯುತ್ತ ಬರುವಾಗ ಮುಂದಿನ ಕ್ಲಾಸಿನವರ ಬಳಿ ಪುಸ್ತಕದ `ಸೆಟ್~ ಅನ್ನು ರಿಸರ್ವ್ ಮಾಡಿಡುವುದು, ನಾವೆಣಿಸಿದ ಸೆಟ್ ಯಾರಾದರೂ ಮೊದಲೇ ಹಾರಿಸಿ, ಅದು ಸಿಗದೆ ಚಡಪಡಿಸುವುದು ಎಲ್ಲ ತುಂಬಮಕ್ಕಳಿದ್ದ ಮನೆಯ ಸಂಗತಿಯಾದರೆ ಸುಗುಣಾಳ ಮನೆಯಲ್ಲಿ ಅವಳೊಬ್ಬಳೇ ಮಗಳಂತೆ. ಪ್ರತೀಸಲವೂ ಅವಳಿಗೆ ಹೊಸಪುಸ್ತಕ! ಅವಳ ಪುಸ್ತಕದ ಪರಿಮಳವೆಂದರೆ! ಕೇಳಿದರೆ, ದೋಸ್ತಿ ಇದ್ದಲ್ಲಿ, ಮೂಸಿ ನೋಡಲು ಅವಳು ಪುಸ್ತಕ ಕೊಡುತ್ತಿದ್ದಳು.
ಝಾಪಿಲ್ಲ, ಪಾಪ, ಒಳ್ಳೆಯವಳು, ಹಳೆಯ ಪುಸ್ತಕಗಳು ಪರಿಮಳ ಕಳೆಯುವುದು ಹೇಗೆ? ಅದೇ ಒಂದು ಒಗಟು ಆಗ. ಆಯಾಕಾಲಕ್ಕೆ ಆಯಾ ಒಗಟುಗಳು ಹೇಗೆ ಸಿದ್ಧವಾಗಿರುತ್ತವೆ!
ಒಂದೇ ಮನೆಯಲ್ಲಿ ನಾವೆಲ್ಲ ಯಾಕೆ ಹುಟ್ಟಿಕೊಂಡೆವು? ಸುಗುಣಾಳ ಹಾಗೆ ಒಂದೊಂದು ಮನೆಯಲ್ಲಿ ಒಬ್ಬೊಬ್ಬರೇ ಹುಟ್ಟಬಹುದಿತ್ತು. ಅಲ್ಲವನ?
ಹೂಂ.
ಹೆಡ್‌ಮಾಸ್ಟರ್ ಭವಾನಿಶಂಕರರಾಯರು ಪಕ್ಕದಿಂದ ಹಾದುಹೋದರೆ ಸಾಕು, ಗೌರವದಿಂದ ಗಡಗಡ ನಡುಗುವವರು ನಾವು. ಅವರು ಬಾಯಿಲೆಕ್ಕ ಹಾಕಿದರೆಂದರೆ ಆ ನಡುಕದಲ್ಲಿ ಮಿದುಳು ಸ್ತಬ್ಧವಾಗಿ ಕೈಬೆರಳು ಕಾಲ್ಬೆರಳು ಯಾವುವೂ ಕೆಲಸಕ್ಕೆ ಬರದೆ ಎಲ್ಲಾ ಲೆಕ್ಕ ತಪ್ಪೆಂದೇ ಲೆಕ್ಕ.
ಒಂದೂ ನಕ್ಕು ಮಾತಾಡದೆಯೂ ಗೌರವ ನಡುಗಿಸಿಯೂ ಮಕ್ಕಳನ್ನು ಗೆದ್ದುಬಿಟ್ಟ ಅವರು, ಪಾಠವಾಗುವಾಗ ಎದೆಯ ಮೇಲೆ ಕೈಕಟ್ಟಿಕೊಂಡು ಅತ್ತಇತ್ತ ಶತಪಥ ತಿರುಗುವ ಆ ದೃಶ್ಯ..., ಎಲ್ಲ ನಿರಂತರವೆಂದು ತಿಳಿದಿದ್ದೆವಲ್ಲ! ದೇವದಾಸ ಮಾಸ್ಟರು, ಶಾಂತಾ ಟೀಚರು, ಜೆಸ್ಸಿ ಟೀಚರು, ಲೂಸಿ ಟೀಚರು, ಗೋವಿಂದ ಮಾಸ್ಟರು, ನಾಗಪ್ಪ ಮಾಸ್ಟರು, ಕಾಮೇ ಮಾಸ್ಟರು.
ಶಂಕರನಾರಾಯಣ ಮಾಸ್ಟರು..., ಆಮೇಲೆ ಸೇರಿದ ದುರ್ಗಾದಾಸ ಮಾಸ್ಟರು, ಇಂದುಮತಿ ಟೀಚರು, ಸುಲೋಚನಾ ಟೀಚರು, ಶಾರದಾ ಟೀಚರು... ಪ್ರಾಥಮಿಕ ಶಾಲೆಯ ಟೀಚರರು ಹೃದಯದಲ್ಲಿ ಹೇಗೆ ಶಾಶ್ವತವಾಗಿ ನೆಲೆಸಿಬಿಡುತ್ತಾರೆ. ಅಚಾನಕ್ಕಾಗಿ ಅವರು ಸಿಕ್ಕಾಗ ದೇವರೇ ಎದುರು ಬಂದಂತಾಗುತ್ತದೆ.
ಟೀಚರಿಕೆ ಬಿಟ್ಟು ಬೇರೆ ವ್ಯಕ್ತಿತ್ವವೇ ಅವರಿಗಿಲ್ಲವೆಂದು ಎಣಿಸುವೆವಲ್ಲವೆ? ಅವರಲ್ಲೊಬ್ಬ ಉಪಾಧ್ಯಾಯರು ಕುಡಿದು ಕುಡಿದೂ ಬಡತನದಲ್ಲಿಯೂ ಸತ್ತರೆಂದು ಕೇಳಿದಾಗ ಅವರಲ್ಲ ಅವರಲ್ಲವೆಂದು ತಳ್ಳಿಹಾಕುವಂತಾಗಿತ್ತು.
ಚುಟುಕ ಬರೆಸಿದ, ಬಿರುಗಾಳಿ ಬೀಸಿ ಗೂಡಿನ ಮೇಲೆ ಮರಬಿದ್ದ ಪುರುಲೆಹಕ್ಕಿಯ ಕಥೆಹೇಳಿ ಕ್ಲಾಸಿನ ಎಲ್ಲರನ್ನೂ ಸೇರಿಸಿಕೊಂಡು ಅದನ್ನು ಆಡಿಸಿದ, ಬಣ್ಣದ ಕಡ್ಡಿಯ ಇನಾಮು ಕೊಡುತ್ತಿದ್ದ, ಬಿ. ಶಂಕರಭಟ್ಟರು ಹೊರತಂದ `ಪ್ರಪಂಚದ ಮಕ್ಕಳ ಕಥೆ~ಗಳನ್ನು ಕೊಟ್ಟು ಓದಿಸಿದ,
ಶಾಲೆಯ ಹೊರಗೆ ತಾನೇ ಮಾಡಿದ `ಮಾದರಿ ಹೂದೋಟ~ದಲ್ಲಿ ಜೂಲಿಯಿಂದ ನೀರು ಹನಿಸುತ್ತ ನಮಗೆ ತೋಟಗಾರಿಕೆಯ ಅ ಆ ಪಾಠ ಮಾಡಿದ, ಅತ್ತ ಕಾಗದದ ಹೂವು ಮಾಡಲೂ ಕಲಿಸಿದ, ಗೋವಿಂದಮಾಸ್ಟರ ಸಾವಂತೂ... ನೆನೆಯಲೇ ಹೋಗುವುದಿಲ್ಲ. ಅವರು ಬ್ರಹ್ಮಾಂಡದಲ್ಲಿ ಎಲ್ಲಿದ್ದರೂ ಕೇಳಿಸುವ ಹಾಗಿದ್ದಿದ್ದರೆ? ಮಕ್ಕಳ ನಾಟಕ ಬರೆಯುವಾಗೆಲ್ಲ ನಿಮ್ಮ ನೆನಪು ಎಷ್ಟು ಆಗುತ್ತದೆ ಸರ್ ಅಂತ ಕೂಗಿ ನುಡಿಯುತಿದ್ದೆ.
*
ಅಂದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮದ್ರಾಸುಪ್ರಾಂತ್ಯಕ್ಕೆ ಸೇರಿತ್ತಷ್ಟೆ? ಶಾಲಾಪಠ್ಯ, ಶಾಲಾನಿಯಮಗಳೆಲ್ಲ ಮದ್ರಾಸು ಸರಕಾರದ್ದು. ರಾಜಾಜಿಯವರು ಮಂತ್ರಿಯಾಗಿದ್ದ ಕಾಲದಲ್ಲಿ, ಬಹುಶಃ ನಾನಾಗ ನಾಲ್ಕನೇ ಕ್ಲಾಸು, ಒಪ್ಪತ್ತು ಶಾಲೆಯ ಪದ್ಧತಿ ತಂದರು.
ಕೇವಲ ಶಾಲಾಶಿಕ್ಷಣದಲ್ಲಿ ಮಕ್ಕಳು ತಮ್ಮ ಕಸುಬನ್ನೂ ಮೈಬಗ್ಗಿ ದುಡಿಯುವುದನ್ನೂ ಮರೆಯಬಾರದು. ಅದಕ್ಕೂ ಶಿಕ್ಷಣರಂಗ ವೇಳೆ ನೀಡಬೇಕು ಎಂಬ ಆಶಯವಿತ್ತೇನೋ. ಸ್ವಾತಂತ್ರ್ಯ ಸಿಕ್ಕಿ ಇನ್ನೂ ಬಹಳ ಕಾಲವಾಗಿಲ್ಲ. ಹೆಚ್ಚಿನ ಜನ ಇನ್ನೂ ದೈಹಿಕ ದುಡಿಮೆಯನ್ನೇ, ಮುಖ್ಯವಾಗಿ ಕೃಷಿಯನ್ನು, ನೆಚ್ಚಿಕೊಂಡವರು.
ಮಕ್ಕಳನ್ನೂ ಅದರಲ್ಲೇ ತೊಡಗಿಸಿಕೊಂಡ ಅವರು ಮಕ್ಕಳನ್ನು ಶಾಲೆಗೆ ಕಳಿಸಲು ಮನಸುಮಾಡುವಂತೆ ಯೋಜಿಸಿದ ಉಪಾಯವೂ ಇರಬಹುದು ಅದು. ಒಪ್ಪತ್ತು ಶಾಲೆಯೆಂದರೆ ಬೆಳಿಗ್ಗೆ ಮಾತ್ರ ಶಾಲೆ. ಮಧಾಹ್ನ ರಜೆ! ಆದರೆ ಅದು ಆಡಲಿಕ್ಕಲ್ಲ.
ಕೆಲಸ ಮಾಡಲಿಕ್ಕೆ. ತಂದೆತಾಯಿಯರ ಕೆಲಸದಲ್ಲಿ ನೆರವಾಗಲಿಕ್ಕೆ. ನೆರವಾದರೆ ಸಾಲದು, ಅದನ್ನು ಮರುದಿನ ಬರೆದುಕೊಂಡು ಬರಬೇಕು. ಅದಕ್ಕೆ ಕ್ಲಾಸುಟೀಚರು ಸಹಿ ಹಾಕಬೇಕು. ಅದಕ್ಕಾಗಿ ನಾವೊಂದು ಪುಟ್ಟ ನೋಟ್ಬುಕ್ ತೆಗೆದುಕೊಳ್ಳಬೇಕಾಯ್ತು. ಸರಿ. ಅದರಲ್ಲಿ ಏನು ಬರೆಯುವುದು? ಬರೆಯುವವರು ಬರೆಯುತ್ತಿದ್ದರು. ಆದರೆ ಮನೆತುಂಬ ಜನವಿದ್ದ ಅಂದಿನ ಮನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆವವರಾರು?
ಕರೆಯದೆ ಒಂದು ವೇಳೆ ನಾವು `ಟೀಚರು ಹೇಳಿದ್ದಾರೆ~ ಅಂತ ನೆರವಿಗೆ ಹೋದರೂ ಕೈಕಾಲಿಗೆ ಅಡ್ಡ ಬರಬೇಡಿ ಎಂದು ಬೈಸಿಕೊಂಬ ಪೆಟ್ಟುತಿಂಬ ಪರಿಸ್ಥಿತಿ. `ರಜೆಕೊಟ್ಟ ಮಾಸ್ಟರಿಗೆ ಬುದ್ಧಿಯಿಲ್ಲ~, `ಹ್ಹೆ, ಆ ರಾಜಾಜಿಗೆ ಮಂಡೆ ಸಮ ಇಲ್ಲ~ ಇತ್ಯಾದಿಯಾಗಿ ಚರ್ಚೆ ವಿಮರ್ಶೆಯಲ್ಲಿ ಅವರಿದ್ದರೆ ನಾವು ಸಲೀಸಾಗಿ ಆಟದಲ್ಲಿ ಮುಳುಗಿದೆವು.
ಆದರೆ ಪುಸ್ತಕದಲ್ಲಿ ಆಟವಾಡಿದೆ ಅಂತ ಬರೆಯಲುಂಟೆ? ಊಟ ಮಾಡಿದ ಬಟ್ಟಲು ತೊಳೆದೆ, ತಿಂಡಿ ತಿಂದ ತಟ್ಟೆ ತೊಳೆದೆ, ಮನೆ ಗುಡಿಸಿದೆ (ಯಾವಾಗ?), ಮನೆ ವರೆಸಿದೆ (ಸುಳ್ಳೆ), ತಾಯಿ ಹೇಳಿದ ಕೆಲಸಗಳನ್ನೆಲ್ಲ ಮಾಡಿದೆ (ತಾಯಿ ಹೇಳಿದ ಕೆಲಸ `ಗಲಾಟೆ ಮಾಡಬೇಡಿ~ ಎಂಬುದೊಂದೇ) ಹೀಗೆ ಬರಕೊಂಡು ಹೋಗುತ್ತಿದ್ದೆವು.
ಟೀಚರಿಗೂ ಇದೆಲ್ಲ ಏನಂತ ಗೊತ್ತಿದ್ದರೂ ತನಿಖೆ ಮಾಡದೆ ಸಹಿ ಹಾಕುತ್ತಿದ್ದರು. ಕೇವಲ ಆರೇ ತಿಂಗಳು ಅದು ನಡೆದಿರಬೇಕೆಂದು ನೆನಪು, ಅಂತೂ ಆ ಒಪ್ಪತ್ತುಶಾಲೆಯ ರೂಲು ರದ್ದಾಯಿತು. ಶಾಲೆ ಮುಂಚಿನಂತಾಯಿತು, ಮನೆಮಂದಿ ಬಚಾವಾದರು.
*
ನಾನೋದುವಾಗ ಹಿಂದೂಶಾಲೆಯಲೊಮ್ಮೆ ಅಧ್ಯಾಪಕರೆಲ್ಲ ಸೇರಿ `ರತ್ನ ಮೆಚ್ಚಿದ ಗಂಡ~ ಎಂಬೊಂದು ನಾಟಕವಾಡಿದ್ದರು. ಅವರಲ್ಲೇ ಒಬ್ಬರ ರಚನೆಯಿರಬೇಕು ಅದು. ಸಂಜೀವರಾಯರು ಬರೆದು ರಾಗಹಾಕಿದ ಆರಂಭಗೀತೆಯಲ್ಲಿ ನಾಟಕದಲ್ಲಿ ಪಾತ್ರವಹಿಸುವ ಅಧ್ಯಾಪಕರ ಹೆಸರುಗಳೂ ಇದ್ದುವು. ಪರದೆಯ ಹಿಂದಲ್ಲ, ಎದುರು ನಿಂತು ನಾವು-
ಶುಭವಾಗಲಿ ಅಧ್ಯಾಪಕ ವಂದ
ಅಭಯದ ಹಸ್ತವ ನೀಡುತ ಮುಂದ
ಅಭಿನಯಿಪ ರತ್ನ ಮೆಚ್ಚಿದ ಗಂಡ
ಅಭಿನಯಿಸುವರು ಸಿರಿಗುರು ವಂದ
ಚಕ್ರಪಾಣಿ ಅವ ರುಜಾರಿ ಲೀಮ
ಜಾನಕಮ್ಮನೇ ಪತಿ ರಘುರಾಮ
ರಾಜಪಾತ್ರದಲಿ ಎಸ್. ಜತ್ತನ್ನ
ರತ್ನ ಮೆಚ್ಚಿದ ಕೆ. ಗೋವರ್ಧನ
ಮುಂತಾಗಿ ಹಾಡಿದ್ದೆವು. ಬಹುಶಃ ಇದು ಪಾತ್ರಧಾರಿ ಉಪಾಧ್ಯಾಯರ ಹೆಸರುಗಳು ಇನಿಶಿಯಲ್ ಸಮೇತ ಹಾಡಿನಲ್ಲಿ ನೇಯ್ದುಕೊಂಡು ಬಂದ ಏಕೈಕ ಉದಾಹರಣೆ ಇರಬಹುದೇನೋ. ಮಕ್ಕಳು ಹಾಡಿದ ಹಾಡುಗಳೆಲ್ಲವೂ ಬಾಯಿಪಾಠವಾಗಿ ಮನೆಮಂದಿಯೂ ಗುಣುಗುಣಿಸುತಿದ್ದ ದಿನಗಳವು.
ಒಂದು ಸಂಜೆ ಸುಮಾರು ನಾಲ್ಕು ಗಂಟೆ. ಮಾಸ್ಟರು ನಮ್ಮನೆಲ್ಲ ಶಾಲೆಯ ಹಿಂದಿನ ಅಂಗಳದಲ್ಲಿ ಕೂಡಿಸಿದರು. `ಈಗ ಇಂಥವರೆಂಬವರು (ಹೆಸರು ಮರೆತಿದೆ) ಬರುತ್ತಾರೆ. ಅವರು ನಿಮ್ಮ ಮುಂದೆ ಕಾವ್ಯ ಹಾಡುತ್ತಾರೆ. ಮಾತಾಡದೆ ಕೈಕಟ್ಟಿ ಕುಳಿತುಕೊಳ್ಳಿ~ ಅಂತ ಹೇಳಿದರು. ನಾವು ಅಕ್ಷರಶಃ ಕೈಕಟ್ಟಿ ಚಟ್ಟಾಮುಟ್ಟ ಕುಳಿತುಕೊಂಡೆವು.
ತುಸು ಹೊತ್ತಿನಲ್ಲಿಯೇ ಕಚ್ಚೆಪಂಚೆ ಕಿತ್ತಳೆವರ್ಣದ ಮೇಲಂಗಿ ಧರಿಸಿದವರೊಬ್ಬರು ಬಂದರು. ಮೊದಲು ಸಂಕ್ಷಿಪ್ತವಾಗಿ ಹರಿಶ್ಚಂದ್ರನ ಕಥೆ ಹೇಳಿ, ರೋಹಿತಾಶ್ವ ಸತ್ತಲ್ಲಿಗೆ ಬರುತ್ತಲೂ ಚಂದ್ರಮತೀವಿಲಾಪ ಕಾವ್ಯಭಾಗವನ್ನು ರಾಗವಾಗಿ ಹೇಳುತ್ತ ಅಭಿನಯಿಸತೊಡಗಿದರು.
ಅವರು ಬಾಡುತ್ತ ಬಳುಕುತ್ತ `ಏನೆಲೇ ಎನಲೇ ಮಗನೇ ಸಾವೇಕಾಯಿತ್ತೆಲೆ ಚೆನ್ನಿಗನೇ...~ ಎಂದು ಶೋಕಾರ್ತತೆ ಅಭಿನಯಿಸುತ್ತ ಹಾಡತೊಡಗಿದಂತೆ ನಮಗೆ ಗಂಟಲು ಬಿಗಿಬಿಗಿದು ಬಂತು. ಹೇಳಿಕೇಳಿ ಪ್ರಾಥಮಿಕ ಶಾಲೆಯ ಮಕ್ಕಳು ನಾವು. ನಮ್ಮ ಮುಂದೆ (ದೊಡ್ಡವರಾದ ಮೇಲೆ ತಿಳಿದು ಬಂದಂತೆ) ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯಭಾಗ! ಆ ದುಃಖ ಆ ಶೋಕ!
ಸಾವು ಕಾದಿದ್ದ ಚೆನ್ನಿಗಮಗನನ್ನು ಕಳೆದುಕೊಂಡು ವಿಲಾಪಿಸುತ್ತಿದ್ದ ಅಷ್ಟುಹೊತ್ತಿನಲ್ಲಿ ಸ್ವತಃ ಚಂದ್ರಮತಿಯೇ ಆಗಿದ್ದ, ಬಾಲರೆದುರು ಹೇಗೆ ಹೇಳಬೇಕೋ ಹಾಗೆ ಹೇಳಿ ಪುಟ್ಟ ಕಾವ್ಯಾನುಸಂಧಾನ ನಡೆಸಿಯೇ ಬಿಟ್ಟ ಆ ಮಹಾನುಭಾವ ಯಾರಿರಬಹುದು? ಮುಂದೆ ಯಾರೊಡನೆ ಕೇಳಿದರೂ ತಿಳಿಯಲಿಲ್ಲ.
ಅವರ ಉಡುಗೆತೊಡುಗೆ ಅದರ ಬಣ್ಣ, ಮಸುಕಾಗಿ ಅವರ ರೂಪುರೇಷೆ ಆ ಅಂಗಳ ಅಲ್ಲವರು ಕತ್ತುಬಾಗಿ ಬಳುಕಿ ಹಾಡಿದ್ದು ಎಲ್ಲವೂ ಅವರು ಯಾರೆಂದು ತಿಳಿಯದೆಯೂ ಒಡಲಲ್ಲಿ ಹೇಗೆ ಕುಳಿತೇಬಿಟ್ಟಿದೆ.
ಸಣ್ಣಮಕ್ಕಳೆದುರು ಅವಕ್ಕೆ ಅರ್ಥವಾಗುವಂಥ ಸಣ್ಣಸಣ್ಣ ಸರಳಪದ್ಯಗಳು ಇರಬೇಕು ಎನ್ನುತ್ತಾರಲ್ಲ? ಅಂದಂತೂ ಅತಿಚಿಕ್ಕ ಕ್ಲಾಸಿನಲ್ಲಿಯೇ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಹಂತದಲ್ಲಿಯೇ ವಾರ್ಧಕ ಷಟ್ಪದಿ, ಭಾಮಿನೀ ಷಟ್ಪದಿಯಲ್ಲಿನ ಕಾವ್ಯಭಾಗಗಳು ಪಠ್ಯವಾಗಿ ಬಾಯಿಪಾಠವಿದ್ದುವು.
ಕಾರ್ಕೋಟಕ ಸರ್ಪಕಚ್ಚಿ ನಳಚಕ್ರವರ್ತಿ `ಅಡ್ಡಮೋರೆಯ ಗಂಟುಮೂಗಿನ ಗಿಡ್ಡುದೇಹದ ಗುಜ್ಜುಕೊರಲಿನ...~ ಬಾಹುಕನಾದ ಭಾಗವನ್ನು ಥಟ್ಟಂತ ಹೇಳು ಎಂದರೂ ಹೇಳುತಿದ್ದೆವು. ಸಂಸ್ಕೃತ ಪಾಠಕ್ರಮದಲ್ಲಂತೂ ಬಾಯಿಪಾಠಕ್ಕೆ ಬಹಳ ಮಹತ್ವವಿದೆಯಷ್ಟೆ? ಇಂದು ಜಾರಿಯಲ್ಲಿರುವಂಥ ಒಣಬಾಯಿಪಾಠವಲ್ಲವದು.
ಅಂದು ಅರ್ಥವೇ ಆಗದೆಯೂ ಉರುಹೊಡೆದ ಎಷ್ಟೋ ಕಾವ್ಯಭಾಗಗಳು, ಸುಭಾಷಿತಗಳು ಬದುಕಿನ ದಾರಿಯಲ್ಲಿ ನಮ್ಮ ನಮ್ಮ ಸಂತೋಷ-ಸಂಕಟಗಳ ಸಂದರ್ಭಕ್ಕೆ ಅನುಗುಣವಾಗಿ ಮೆಲ್ಲನೆ ನೆನಪಿನ ಕೋಶದಿಂದ ಹೊರಬರುತ್ತ, ಅರ್ಥಹೊಳೆಸುತ್ತ ಮಾತಾಡುವ, ಕೈಹಿಡಿದು ನಡೆಸುವ ಪರಿ, ಹೇಗೆಂದು ಹೇಳುವುದು?
ಈ ಕ್ಷಣ ಅರ್ಥವಾಗುವವು ಬೇರೆ, ಇನ್ಯಾವಾಗಲೋ ಅರ್ಥವಾಗುವ ಸಂವಾದಿಸುವ ವಿಚಾರಗಳು ಬೇರೆ. ಎರಡಕ್ಕೂ ನಮ್ಮ ಕಾಲದ ಪಠ್ಯದಲ್ಲಿ ಸ್ಥಾನವಿತ್ತು. ಮಕ್ಕಳಿಗೆ ಕಷ್ಟವಾಗುವ ಭಾಗ ಇರಬಾರದು ಸರಿಯೆ.
ಆದರೆ ಎಲ್ಲಿ ಕಷ್ಟ, ಏನು ಕಷ್ಟ, ಅವು ಮುಂದೆ ಲಾಭಕರವಾಗುತ್ತವೆಯೆ ಎಂಬ ಕಲ್ಪನೆಯೂ ಬೇಕಷ್ಟೆ? ಅಂದಿನ ಅಧ್ಯಾಪನಕ್ರಮದಲ್ಲಿ ಆ ಕಲ್ಪನೆ ಇದ್ದಿರಬೇಕು. ಇಲ್ಲವಾದರೆ ಚಂದ್ರಮತಿಯ ದುಃಖವನ್ನು ಕಾವ್ಯರೂಪದಲ್ಲಿ ಕೇಳುವ ಅವಕಾಶ ನಮಗೆಲ್ಲಿ ಸಿಗುತಿತ್ತು?
*
ವಿನ್ಯಾಸ ಬದಲಾಯಿಸದೆ ಹಳೆಯ ಮಾದರಿಯ ಇಳಿಮಾಡಿನ ಪ್ರಾಥಮಿಕಶಾಲೆಗಳು ಕಣ್ಣಿಗೆ ಬಿದ್ದಾಗೆಲ್ಲ ಮನಸ್ಸು ತೇವಗೊಳ್ಳುತ್ತದೆ. ಅಲ್ಲಿಂದ ಹೊರಬರುವ ಒಕ್ಕೊರಲಿನ ಒಂದೊಂದ್ಲೊಂದೋ `ಕನ್ನಡ ರಾಗ~ವೋ...
ಎಲ್ಲ ಯಾಕೀಗ, ಕನ್ನಡಶಾಲೆಗಳು ಉಸಿರಾಡುವುದೇ ಕಷ್ಟವಾಗಿರುವಾಗ?
ಕನ್ನಡವು ಇಡಿಇಡಿಯಾಗಿ ಪ್ರಾಥಮಿಕದಲ್ಲೇ `ಸೆಕೆಂಡರಿ~ಯಾಗುತಿರುವಾಗ?
ತಬ್ಬಲಿಯಾಗುವೆವೆ ನಾವು? ಇಬ್ಬರಾ ಋಣ ತೀರಿಹೋಗಲು ಬಿಟ್ಟುಬಿಡಬಹುದೆ?
ಧರಣಿ ಮಂಡಲ ಮಧ್ಯದೊಳಗೆ ಭಾರತಜನನಿಯ ಕನ್ನಡವೆಂಬೊ ಮುದ್ದಿನಕರುವನ್ನು, ಅವಳ ಇತರ ತನುಜಾತೆಯರನೂ ನಿರ್ಮಮಕಾರದಿಂದ ವಿಸರ್ಜಿಸಿ ಬರಲು ಸನ್ನೆ-ಸನ್ನಾಹವಾಗುತಿರುವ
ಈ ಹೊತ್ತಿನಲ್ಲಿ-
ನಮ್ಮ ನಾಗಪ್ಪ ಮಾಸ್ಟರು ಮಾತ್ರ, ಅಗೋ ಅಲ್ಲಿ, ಮಾಸದ ನಸುನಗುವಿನಲ್ಲಿ, ನಿಂತಲ್ಲೇ ಮೈದೂಗುತ್ತ ಹಾಡುತಿರುವರು, ಕಾಣುತಿದೆಯೆ...
ನೀನಾರಿಗಾದೆಯೋ ಎಲೆ ಮಾನವಾ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.