ಮಂಡ್ಯ: ಜಮ್ಮುವಿನ ಕಠುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದ ಸಂಜಯ ವೃತ್ತದಲ್ಲಿ ಅರುಣಜ್ಯೋತಿ ಟ್ರಸ್ಟ್ ಸದಸ್ಯರು ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ಮಾಡಿದರು.
ಅಲೆಮಾರಿ ಜನಾಂಗದ 8 ವರ್ಷದ ಬಾಲಕಿಯನ್ನು ಅಪಹರಿಸಿ ನಿರಂತರವಾಗಿ ಏಳು ದಿನ ಕಾಲ ಅತ್ಯಾಚಾರವೆಸಗಿ ಕೊಲೆಗೈದಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೊಳಿಸಬೇಕು. 2016ರಿಂದ ಈಚೆಗೆ 19 ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ. ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ಹಲವು ದಿನಗಳಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಭದ್ರತೆ ಹಾಗೂ ಸ್ವತಂತ್ರದಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿಯ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು. ಅತ್ಯಾಚಾರ ಪ್ರಕರಣವನ್ನು ಸ್ತ್ರೀ ಕುಲವೇ ಖಂಡಿಸುತ್ತದೆ. ಇಂತಹ ಅಮಾನವೀಯ ಕೃತ್ಯ ಎಸಗುವ ಎಲ್ಲರಿಗೂ ಕಡ್ಡಾಯ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಅರುಣೋದಯ ಟ್ರಸ್ಟ್ ಅಧ್ಯಕ್ಷೆ ಬಿ.ಕೆ.ಅರುಣಜ್ಯೋತಿ, ಮಹಿಳಾ ಮುಖಂಡರಾದ ಶಶಿಕಲಾ, ಪದ್ಮಹರೀಶ್, ಸೌಭಾಗ್ಯಾ, ಪುಷ್ಪಾ, ಅನಿತಾ, ಶೃತಿ, ರೇಖಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.