ADVERTISEMENT

ಆದಿವಾಸಿಗಳ ಹಕ್ಕುಗಳ ದಮನ

ಡಾ.ಚಂದ್ರಶೇಖರ್ ಹರಿಹರನ್
Published 8 ನವೆಂಬರ್ 2011, 19:30 IST
Last Updated 8 ನವೆಂಬರ್ 2011, 19:30 IST
ಆದಿವಾಸಿಗಳ ಹಕ್ಕುಗಳ ದಮನ
ಆದಿವಾಸಿಗಳ ಹಕ್ಕುಗಳ ದಮನ   

ಸ್ಥಳೀಯ ಸಮುದಾಯಗಳ ಮೌಲ್ಯಗಳು, ಸಂಸ್ಕೃತಿ, ಧಾರ್ಮಿಕ ಭಾವನೆ   ಗೌರವಿಸುವ ಮತ್ತು   ರಕ್ಷಿಸುವ ಯಾವುದೇ  ವ್ಯವಸ್ಥೆಯನ್ನು ಇದುವರೆಗೆ ರೂಪಿಸದೆ ಇರುವುದೇ  ನೈಸರ್ಗಿಕ ಸಂಪನ್ಮೂಲಗಳು ನಾಶವಾಗಲು ಕಾರಣ.  

 ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ಅವರ ಬದುಕಿನ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದರ ವಿರುದ್ಧ ಇದುವರೆಗೆ ಪ್ರಬಲ ಹೋರಾಟ ನಡೆದೇ ಇಲ್ಲ.

ಕಬ್ಬಿಣದ ಅದಿರು, ಕಲ್ಲಿದ್ದಲು, ಬಾಕ್ಸೈಟ್, ಮರಳು, ಯುರೇನಿಯಂ, ಮೊನೊಸೈಟ್‌ನಂತಹ ಖನಿಜಗಳ   ಗಣಿಗಾರಿಕೆ ವಿಚಾರ ಬಂದಾಗ ಆದಿವಾಸಿಗಳ ಬದುಕನ್ನು  ನಿರ್ದಯವಾಗಿ ಹೊಸಕಿ  ಹಾಕಲಾಗುತ್ತಿದೆ. ಸ್ಥಳೀಯ ಜನರ ಭಾವನೆಗಳಿಗೆ  ಸ್ಪಂದಿಸದೆ ಅವರನ್ನು ಅನಾಮತ್ತಾಗಿ   ಸ್ಥಳಾಂತರಿಸಲಾಗುತ್ತಿದೆ...

                                         ====

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಅಕ್ಟೋಬರ್ 9ರಿಂದ 12ರವರೆಗೆ `ಸಮುದಾಯ ಹಕ್ಕುಗಳ ಸಂಗಮ 2011~ ಹೆಸರಿನ ಪ್ರಮುಖ ರಾಷ್ಟ್ರೀಯ ಸಮಾವೇಶ ನಡೆಯಿತು. ಇದಕ್ಕೆ ಅಂತಹ ಪ್ರಚಾರ ಸಿಗಲಿಲ್ಲ, ಸಮಾವೇಶದಲ್ಲಿ ಯಾ ವ ವಿಷಯಗಳನ್ನು ಚರ್ಚಿಸಲಾಯಿತು ಎಂಬುದು ಅಷ್ಟಾಗಿ ಗೊತ್ತಾಗಲೂ ಇಲ್ಲ.

ಭೂಮಿ, ನೀರು ಮತ್ತು ಅರಣ್ಯಗಳ ಮೇಲಿನ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಲವಾರು ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಸಮುದಾಯಗಳ ಹಕ್ಕುಗಳನ್ನು ಸಾಧಿಸುವ ನಿಟ್ಟಿನಲ್ಲಿ ಅವರೆಲ್ಲ ಚರ್ಚಿಸಿದರು, ಕಾರ್ಯತಂತ್ರ ರೂಪಿಸಿದರು ಮತ್ತು ಹಕ್ಕುಗಳ ರಕ್ಷಣೆಗಾಗಿ ಕ್ರಮಕ್ಕೆ ಮುಂದಾಗುವ ಸಂಕಲ್ಪ ಮಾಡಿದರು.

ಕೊಡಗಿನ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರು ಮಾತನಾಡಿ, ಪ್ರಾಕೃತಿಕ ಸಂಪನ್ಮೂಲದ ಮೇಲಿನ ತಮ್ಮ ಹಕ್ಕುಗಳನ್ನು ಉಳಿಸುವ ಸಲುವಾಗಿ ಇತರ ಸಮುದಾಯಗಳು ನಡೆಸಿದ ಹೋರಾಟಗಳಿಗೆ ತುಲನೆ ಮಾಡಿಕೊಂಡು ಹೋರಾಡದೆ ಇದ್ದರೆ ಆದಿವಾಸಿಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಯಶಸ್ವಿ ಹೋರಾಟ ನಡೆಸಲು ಸಾಧ್ಯವಿಲ್ಲ ಎಂಬುದು ಇದೀಗ ಮನವರಿಕೆಯಾಗಿದೆ ಎಂದು ಹೇಳಿದ್ದರು.

ಕರ್ನಾಟಕದಿಂದ ಹಿಡಿದು ಒಡಿಶಾವರೆಗೆ ಸರ್ಕಾರ ಮತ್ತು ಕಂಪೆನಿಗಳು ದಟ್ಟ ಅರಣ್ಯ ಪ್ರದೇಶಗಳಲ್ಲಿ ಲಕ್ಷಾಂತರ ವರ್ಷಗಳಿಂದ ಹುದುಗಿದ್ದ ಖನಿಜ ನಿಕ್ಷೇಪಗಳನ್ನು ಮಾರಾಟ ಮಾಡುವುದರಲ್ಲಿ ತಲ್ಲೆನವಾಗಿವೆ.

ಈ ನೈಸರ್ಗಿಕ ಸಂಪನ್ಮೂಲಗಳ ಒಡೆತನವನ್ನು ಸರ್ಕಾರ ಸಾಧಿಸುವಂತಿಲ್ಲ ಎಂದು ರಾಷ್ಟ್ರೀಯ ಆದಿವಾಸಿ ಸಂಘಟನೆ ಹೇಳಿದೆ. ಸರ್ಕಾರವು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಪೋಷಕ ಮಾತ್ರ, ಹೀಗಾಗಿ ಅದು ಈ ಸಂಪನ್ಮೂಲವನ್ನು ಭವಿಷ್ಯದ ಬಳಕೆಗಾಗಿ ಕಾಪಾಡಿಕೊಂಡು ಹೋಗಬೇಕು ಎಂದು ಸಮಾವೇಶದಲ್ಲಿ ಪಾಲ್ಗೊಂಡ ಮತ್ತೊಬ್ಬರು ಹೇಳಿದರು.

ಆದರೆ, ಹೆಚ್ಚಿನ ಸರ್ಕಾರಗಳು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒಡೆತನ ಸಾಧಿಸಿ ಅವುಗಳನ್ನು ಯಾವ ಕಂಪೆನಿಗೆ ಬೇಕಾದರೂ ಮಾರಾಟ ಮಾಡುತ್ತಿವೆ. ಸರ್ಕಾರದ ಇಂತಹ ಮಾಲೀಕತ್ವದಿಂದಾಗಿಯೇ `ಬಳ್ಳಾರಿ ಗಣರಾಜ್ಯ~ದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ ಮತ್ತು ಗಣಿಗಳ ಲೂಟಿ ನಡೆದಿದೆ.

ಆದಿವಾಸಿಗಳು ಅರಣ್ಯ ಪ್ರದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನೇ ಕಡಲ ಕಿನಾರೆ ಮತ್ತು ನದಿ ತೀರಗಳಲ್ಲಿ ಮೀನುಗಾರರು, ಬೇಸಾಯಗಾರರು ಅನುಭವಿಸುತ್ತಿದ್ದಾರೆ. ನೆಲ, ಜಲ ಮತ್ತು ಅರಣ್ಯವನ್ನು ಲೂಟಿ ಮಾಡುವುದಕ್ಕಾಗಿಯೇ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇಂತಹ ನೂರಾರು ಕಾನೂನುಗಳಿಂದ ಜನರ ನೆಲೆ ತಪ್ಪಿಸಲಾಗುತ್ತಿದೆ.

ಆದಿವಾಸಿಗಳನ್ನು ಸ್ಥಳಾಂತರಿಸುವುದರ ಜತೆಗೆ ಅವರ ಪರಂಪರೆಯನ್ನು ನಿಧಾನವಾಗಿ ನಿರ್ಮೂಲನೆ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಮೀನುಗಾರರು, ರೈತರು, ಮಹಿಳೆಯರು ಮತ್ತು ಮಕ್ಕಳು ದೊಡ್ಡ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿದ್ದಾರೆ.

ಬುಡಕಟ್ಟು ಜನಾಂಗದವರ ಹಕ್ಕುಗಳ ರಕ್ಷಣೆಗಾಗಿ ಏನಾದರೂ ಹೋರಾಟ ನಡೆಸುವುದು ಅಗತ್ಯ ಎಂಬ ಸ್ಪಷ್ಟ ಸಂದೇಶವನ್ನು ಕುಶಾಲನಗರದಲ್ಲಿ ನಡೆದ ಸಮುದಾಯ ಹಕ್ಕುಗಳ ಸಂಗಮ ನೀಡಿದೆ. ಅಲ್ಲಿ ವಿಚಾರ ಸಂಕಿರಣಗಳು ಇದ್ದವು, ಚಲನಚಿತ್ರ ಪ್ರದರ್ಶನಗಳಿದ್ದವು, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು ಮತ್ತು ಸಾಂಪ್ರದಾಯಿಕ ಉತ್ಪನ್ನಗಳ ವಿತರಣಾ ವ್ಯವಸ್ಥೆ ಇತ್ತು.

ದೇಶದಾದ್ಯಂತದಿಂದ ಆಗಮಿಸಿದ 2 ಸಾವಿರಕ್ಕೂ ಹೆಚ್ಚು ಆದಿವಾಸಿಗಳು ಅಲ್ಲಿ ಸೇರಿದ್ದರು. 5 ಸಾವಿರಕ್ಕೂ ಅಧಿಕ ಜನರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅ.12ರಂದು ಸಾಂಪ್ರದಾಯಿಕ ಸಮುದಾಯಗಳ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ಸಾಂಸ್ಕೃತಿಕ ರ‌್ಯಾಲಿಯೊಂದನ್ನು ಸಹ ಹಮ್ಮಿಕೊಳ್ಳಲಾಯಿತು.
 
ಆ ದಿನದ ವಿಶೇಷವೇನೆಂದರೆ ಅದು ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕಕ್ಕೆ ಬಂದು ಇಳಿದ ದಿನ. ದೇಸಿ ಜನರ ನೈಸರ್ಗಿಕ ಸಂಪನ್ಮೂಲಗಳನ್ನು ವಸಾಹತುಶಾಹಿಗಳು ಲೂಟಿ ಮಾಡಲು ಆರಂಭಿಸಿದ ದಿನ ಎಂಬ ಕಾರಣಕ್ಕೆ ಈ ದಿನಾಂಕಕ್ಕೆ ವಿಶೇಷ ಮಹತ್ವ ಕಲ್ಪಿಸಲಾಗಿದೆ.

ಅರಣ್ಯ ಹಕ್ಕುಗಳ ಕಾಯ್ದೆಯಿಂದ ಆರಂಭಿಸಿ ಹಲವು ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಿತು ಮತ್ತು ಅವುಗಳನ್ನು ಅಕ್ಷರಶಃ ಏಕೆ ಜಾರಿಗೆ ತರಲಾಗಿಲ್ಲ ಎಂಬುದರ ಬಗ್ಗೆ ಪರಾಮರ್ಶೆ ನಡೆಯಿತು. ದೇಶದಾದ್ಯಂತ ಈಗಲೂ ಕೂಡ ಕಾಯ್ದೆಯ ಉಲ್ಲಂಘನೆ ನಡೆಯುತ್ತಲೇ ಇದೆ.

ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ನಿರಂತರವಾಗಿ ಸಾಗಿದ್ದು, ಕಾಯ್ದೆಯ ಔಚಿತ್ಯವನ್ನೇ ಪ್ರಶ್ನಿಸುವಂತಾಗಿದೆ. ಕರಾವಳಿ ನಿಯಂತ್ರಣ ವಲಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಹ ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ.

`ಪರಿಸರ ಪರಿಣಾಮ ಅಂದಾಜು~ ವಿಚಾರ ಮತ್ತೊಂದು ಚರ್ಚೆಯ ಭಾಗ ಎಂದೇ ಬಿಂಬಿಸಲಾಗುತ್ತಿದೆ. ಮಾನವ ಹಕ್ಕುಗಳು ಮತ್ತು ಸ್ಥಳೀಯ ಪರಿಸರವನ್ನು ಗಣನೆಗೆ ತೆಗೆದುಕೊಳ್ಳದೆ ಎಸ್‌ಇಜೆಡ್‌ಗಳು ಮತ್ತು ಎಸ್‌ಟಿಎಗಳ ಹೆಸರಲ್ಲಿ ವಿಶೇಷ ಆರ್ಥಿಕ ವಲಯ, ಪ್ರವಾಸೋದ್ಯಮ ವಲಯ ಎಂದೆಲ್ಲ ಹೇಳುತ್ತ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ.

ತಮ್ಮ ಉದ್ದೇಶ ಈಡೇರಿಕೆಗಾಗಿ ಪರಿಸರ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ಹೊಣೆಗಾರಿಕೆಯ ಪ್ರವಾಸೋದ್ಯಮ ಮೊದಲಾಗಿ ಕರೆಯುತ್ತ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ.

ಪರಿಸರಕ್ಕೆ, ಸ್ಥಳೀಯ ಸಂಪನ್ಮೂಲಕ್ಕೆ, ಸಂಸ್ಕೃತಿಗೆ ಯಾವುದೇ ಹಾನಿಯನ್ನೂ ಮಾಡದೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಸುಳ್ಳುಪ್ರಚಾರ ನೀಡಲಾಗುತ್ತಿದೆ. ಧ್ವನಿಯನ್ನೇ ಕಳೆದುಕೊಂಡು ಆದಿವಾಸಿಗಳಿಗೆ ಧ್ವನಿಯಾಗುವ ರೀತಿಯಲ್ಲಿ ಕುಶಾಲನಗರದ ಈ ಸಮಾವೇಶ ನಡೆದಿದೆ.

ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಧಾಮಗಳು, ಹುಲಿಧಾಮಗಳು, ಆನೆ ಸಂಚಾರದ ಕಾರಿಡಾರ್‌ಗಳು, ಹವಳ ದ್ವೀಪಗಳು ಅಥವಾ ಆಲಿವ್ ರಿಡ್ಲೇ ಆಮೆಗಳ ವಲಯಗಳ ಸಂರಕ್ಷಣೆಯ ನೆಪದಲ್ಲೂ ಆದಿವಾಸಿಗಳ, ಸಾಂಪ್ರದಾಯಿಕ ಮೀನುಗಾರರ ಜೀವನವನ್ನು ದುಸ್ತರಗೊಳಿಸುವ ಪ್ರಯತ್ನಗಳು ಇಂದು ನಡೆಯುತ್ತಿವೆ.

ಸ್ಥಳೀಯ ಸಮುದಾಯಗಳ ಮೌಲ್ಯಗಳು, ಸಂಸ್ಕೃತಿ, ಧಾರ್ಮಿಕ ಭಾವನೆ  ಗೌರವಿಸುವ ಮತ್ತು ರಕ್ಷಿಸುವ ಯಾವುದೇ ವ್ಯವಸ್ಥೆಯನ್ನು ಇದುವರೆಗೆ ರೂಪಿಸದೆ ಇರುವುದೇ ನೈಸರ್ಗಿಕ ಸಂಪನ್ಮೂಲಗಳು ನಾಶವಾಗಲು ಕಾರಣವಾಗಿದೆ.

ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ಅವರ ಬದುಕಿನ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದರ ವಿರುದ್ಧ ಇದುವರೆಗೆ ಪ್ರಬಲ ಹೋರಾಟ ನಡದೇ ಇಲ್ಲ. ಕಬ್ಬಿಣದ ಅದಿರು, ಕಲ್ಲಿದ್ದಲು, ಬಾಕ್ಸೈಟ್, ಮರಳು, ಯುರೇನಿಯಂ, ಮೊನೊಸೈಟ್‌ನಂತಹ ಖನಿಜಗಳ ಗಣಿಗಾರಿಕೆ ವಿಚಾರ ಬಂದಾಗ ಆದಿವಾಸಿಗಳ ಬದುಕನ್ನು ನಿರ್ದಯವಾಗಿ ಹೊಸಕಿ ಹಾಕಲಾಗುತ್ತಿದೆ.

ಸ್ಥಳೀಯ ಜನರ ಭಾವನೆಗಳಿಗೆ ಸ್ಪಂದಿಸದೆ ಅವರನ್ನು ಅನಾಮತ್ತಾಗಿ ಸ್ಥಳಾಂತರಿಸಲಾಗುತ್ತಿದೆ. ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವುದು ಹೇಗೆ ಎಂಬುದು ಸಹ ಸಮಾವೇಶದಲ್ಲಿ ನಡೆದ ಚರ್ಚೆಯ ವಿಚಾರವಾಗಿತ್ತು. ಬೃಹತ್ ಅಣೆಕಟ್ಟುಗಳಿಂದ ಅದೆಷ್ಟೋ ಆದಿವಾಸಿ ಕುಟುಂಬಗಳು ನಿರ್ಗತಿಕವಾಗಿವೆ.

ಇಂತಹ ಅಣೆಕಟ್ಟುಗಳಿಂದ ಜನರ ಸಮುದಾಯ ಹಕ್ಕುಗಳು ಉಲ್ಲಂಘನೆಯಾಗಿವೆ. ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವಾಗ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಲಾಗಿಲ್ಲ. ವಿಶ್ವಬ್ಯಾಂಕ್, ಎಡಿಬಿಯಂತಹ ಸಂಸ್ಥೆಗಳ ಹಣಕಾಸು ನೆರವಿನಿಂದ ಇಂತಹ ಇನ್ನಷ್ಟು ಅಣೆಕಟ್ಟುಗಳನ್ನು   ನಿರ್ಮಿಸಲು ಸರ್ಕಾರ ಈಗಲೂ ಯತ್ನಿಸುತ್ತಲೇ ಇದೆ.

ನೀರು ಇಂದು ವೇಗವಾಗಿ ಜಾಗತೀಕರಣಗೊಳ್ಳುತ್ತಿರುವ ನೈಸರ್ಗಿಕ ಸಂಪನ್ಮೂಲವಾಗಿದೆ. ಚಿನ್ನ ಅಥವಾ ಸಾಫ್ಟ್‌ವೇರ್ ಉದ್ಯಮಕ್ಕಿಂತಲೂ ಮಿಗಿಲಾಗಿ ಲಾಭಾಂಶ ತಂದುಕೊಡುವ ಉದ್ಯಮವಾಗಿ ಈ ನೀರು ಬದಲಾಗಿದೆ. ಹಲವು ಪ್ರದೇಶಗಳಲ್ಲಿ ಸ್ವಚ್ಛ ಮತ್ತು ಸುರಕ್ಷಿತ ನೀರು ಒದಗಿಸುವ ಹಕ್ಕನ್ನೂ ನಿರಾಕರಿಸಲಾಗುತ್ತಿದೆ.
 
ಪ್ರಮುಖ ನೀರಿನ ಮೂಲಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ ಗಂಗಾ ಕಾವೇರಿ ಯೋಜನೆಯಡಿಯಲ್ಲಿ 10 ನಗರಗಳಲ್ಲಿ ಖಾಸಗಿ ಕಂಪೆನಿಗಳಿಗೆ ನೀರಿನ ಸರಬರಾಜು ಮಾಡುವ ಗುತ್ತಿಗೆ ನೀಡಲಾಗಿದೆ.

ಹೆಚ್ಚಿನ ನದಿಗಳನ್ನು ಅಕ್ಷರಶಃ ಮಾರಾಟ ಮಾಡಲಾಗಿದೆ. ನದಿಗಳ ಜೋಡಣೆಗಳಿಂದ ಹಲವಾರು ಬಗೆಯಲ್ಲಿ ಜನರಿಗೆ ತೊಂದರೆಯಾಗುತ್ತದೆ. ಸಾವಿರಾರು ಹಳ್ಳಿಗಳಲ್ಲಿ ಇಂದಿಗೂ ನೀರಿನ ಸಂಪನ್ಮೂಲದ ಮೇಲಿನ ನಿಯಂತ್ರಣವನ್ನು ಮೇಲ್ವರ್ಗದ ಜಾತಿಗಳು ಸಾಧಿಸಿರುವುದರಿಂದ ದಲಿತರು ಮತ್ತು ಸ್ಥಳೀಯ ಸಮುದಾಯಗಳು ಸ್ವಚ್ಛ ಮತ್ತು ಸುರಕ್ಷಿತ ಕುಡಿಯುವ ನೀರಿನಿಂದಲೂ ವಂಚಿತವಾಗುತ್ತಿವೆ.

ಹಲವಾರು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆದ ನಂತರ ಯಾರಿಗಾಗಿ, ಎಂತಹ ವೆಚ್ಚದಲ್ಲಿ, ಯಾವ ರೀತಿಯ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ದೊಡ್ಡ ಪ್ರಶ್ನೆ ಮೂಡುತ್ತದೆ. ದೇಶದಾದ್ಯಂತ ಪ್ರಮುಖ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರತಿ ನಿಮಿಷಕ್ಕೆ ಒಬ್ಬ ಆದಿವಾಸಿಯನ್ನು ಸ್ಥಳಾಂತರಿಸಲಾಗುತ್ತಿದೆ.
 
ಸಮುದಾಯದ ಹಕ್ಕಿನ ಉಲ್ಲಂಘಟನೆ ವಿರುದ್ಧ ಹಲವು ಹೋರಾಟಗಳು ನಡೆದಿದ್ದರೂ, ಯೋಜನೆಗಳ ಹೆಸರು ಹೇಳಿ ಮತ್ತು ಬಂಡವಾಳ ಹೂಡಿಕೆಯ ನೆಪ ಒಡ್ಡಿ ಈತಹ ಪ್ರತಿಭಟನೆಗಳನ್ನು ಸರ್ಕಾರಗಳು ಹತ್ತಿಕ್ಕುತ್ತಿವೆ.

ಕುಶಾಲನಗರದಲ್ಲಿ ನಡೆದಿರುವುದು ಬುಡಕಟ್ಟು ಸಮುದಾಯಗಳ ಹಕ್ಕುಗಳ ರಕ್ಷಣಾ ಸಮಾವೇಶ. ದೇಶದಾದ್ಯಂತದಿಂದ ಆಗಮಿಸಿದ 30ಕ್ಕೂ ಅಧಿಕ ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿದ್ದವು. 

 ಇದು ಅವರ ನೈತಿಕ ಸ್ಥೈರ್ಯ ಹೆಚ್ಚಿಸುವ ವಿಧಾನವೂ ಹೌದು. ಈ ಸಮಾವೇಶದಿಂದ ಏನಾದರೂ ಬದಲಾವಣೆ ಆದೀತೇ?, ಇಲ್ಲಿ ಕೈಗೊಂಡ ನಿರ್ಣಯಗಳು ನೀತಿ ನಿರ್ಧಾರಗಳನ್ನು ಮಾಡುವ ಜನರ ಕಿವಿಗೆ ಬಿದ್ದೀತೇ ಎಂಬುದು ಸಮಾವೇಶದ ಕೊನೆಯಲ್ಲಿ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆಯಾಗಿತ್ತು.  

(ಲೇಖಕರನ್ನು 99010 54321 ಕರೆ ಮಾಡಿ ಸಂಪರ್ಕಿಸಬಹುದು)
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.