ADVERTISEMENT

ಅಭಿವೃದ್ಧಿಯ ಗುರಿ: ಬದಲಾಗಲಿ ವ್ಯಾಖ್ಯೆ

ಡಾ.ಆರ್.ಬಾಲ ಸುಬ್ರಹ್ಮಣ್ಯಂ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST
ಅಭಿವೃದ್ಧಿಯ ಗುರಿ: ಬದಲಾಗಲಿ ವ್ಯಾಖ್ಯೆ
ಅಭಿವೃದ್ಧಿಯ ಗುರಿ: ಬದಲಾಗಲಿ ವ್ಯಾಖ್ಯೆ   

ಜಾರ್ಖಂಡ್ ರಾಜ್ಯದಲ್ಲಿರುವ ಸಾಹೇಬ್ ಗಂಜ್ ಜಿಲ್ಲೆ ಪಶ್ಚಿಮ ಬಂಗಾಳದ ಗಡಿಗೆ ಹೊಂದಿಕೊಂಡಂತಿದೆ. ಸಂಥಾಲ್ ಪರಗಣ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ನೆಲೆಸಿರುವವರಲ್ಲಿ ಬಹುತೇಕರು ಆದಿವಾಸಿಗಳು. ಇದು ಗಂಗಾ ನದಿ ಹರಿಯುವ ಜಾರ್ಖಂಡ್ ರಾಜ್ಯದ ಏಕೈಕ ಜಿಲ್ಲೆ ಸಹ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಹುಪಾಲು ಇಂಗ್ಲಿಷರು ರೈಲು ನಿಲ್ದಾಣದ ಆಸುಪಾಸಿನಲ್ಲೇ ವಾಸಿಸುತ್ತಿದ್ದರು. ಹೀಗಾಗಿ ಇಲ್ಲಿನ ಪಟ್ಟಣ ಮತ್ತು ಜಿಲ್ಲೆಗೆ ಸಾಹೇಬ್‌ಗಂಜ್ (ಸಾಹೇಬರ ಪ್ರದೇಶ) ಎಂಬ ಹೆಸರು ಬಂದಿದೆ.

ಒಂದು ದಶಕಕ್ಕೂ ಹಿಂದೆ, ಈ ಜಿಲ್ಲೆಯಲ್ಲಿರುವ ರಮಣೀಯವಾದ ರಾಜಮಹಲ್ ಬೆಟ್ಟದ ಮೂಲಕ ಸಂಚರಿಸುವ ಅವಕಾಶ ನನಗೆ ಒದಗಿಬಂದಿತ್ತು. ಆ ಸಂದರ್ಭದಲ್ಲಿ ನನಗಾದ ಮನ ಕಲಕುವ ಅನುಭವವೊಂದು ನನ್ನ ಮನಸ್ಸಿನಲ್ಲಿ ಈಗಲೂ ಅಚ್ಚೊತ್ತಿದಂತಿದೆ. ಮಲ್ ಪಹಾರಿಯ ಎಂಬ ಆದಿವಾಸಿ ಜನಾಂಗ ನೆಲೆಸಿದ್ದ ಗ್ರಾಮವೊಂದಕ್ಕೆ ನಾನು ತೆರಳಿದಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲೇ ಸಮೀಪದಲ್ಲಿದ್ದ ಮನೆಯೊಂದಕ್ಕೆ ಭೇಟಿ ನೀಡಲು ನಾನು ನಿರ್ಧರಿಸಿದೆ.

ಅಲ್ಲಿನವರ ಪ್ರಧಾನ ಆಹಾರ ಅನ್ನ ಎಂಬುದನ್ನು ಅರಿತಿದ್ದ ನಾನು, ಮನೆಯೊಡತಿಯಿಂದ ನನಗೂ ಊಟದ ಆಹ್ವಾನ ಬರಬಹುದು ಎಂಬ ನಿರೀಕ್ಷೆಯಲ್ಲೇ ಅಲ್ಲಿಗೆ ಹೋಗಿದ್ದೆ. ಒಳಗೆ ಮೂವರು ಮಕ್ಕಳು ಆಟವಾಡಿಕೊಳ್ಳುತ್ತಿದ್ದುದು ಕಣ್ಣಿಗೆ ಬಿತ್ತು. ಹೆಂಗಸೊಬ್ಬಳು 6 ತಿಂಗಳ ಮಗುವಿಗೆ ಎದೆ  ಹಾಲುಣಿಸುತ್ತಾ ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಳು. ಸುಮಾರು 2 ವರ್ಷದ ಮತ್ತೊಂದು ಮಗು ಅವಳ ಪಕ್ಕದಲ್ಲೇ ನೆಲದ ಮೇಲೆ ಮಲಗಿತ್ತು. ಈ ಮಹಿಳೆ ಮಾತನಾಡುತ್ತಿದ್ದ ಬಂಗಾಳಿ ಭಾಷೆ ಅರಿತಿದ್ದ ವ್ಯಕ್ತಿಯೊಬ್ಬ ನನ್ನ ಜೊತೆಗಿದ್ದುದರಿಂದ ನಾನು ಅವಳ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಲು ಸಾಧ್ಯವಾಯಿತು.

ಆ ಎಲ್ಲ ಐವರು ಮಕ್ಕಳೂ ಅವಳವು ಎಂಬುದು ತಿಳಿಯಿತು. ಕೆಲಸ ಹುಡುಕಿಕೊಂಡು ಹೊರಗೆ ಹೋಗುವ ಆಕೆಯ ಗಂಡ ಸಂಜೆ ವೇಳೆಗೆ ಮನೆಗೆ ವಾಪಸಾಗುತ್ತಿದ್ದ. 25 ವರ್ಷ ಪ್ರಾಯದ ಆಕೆ ಅದಕ್ಕಿಂತಲೂ ಹೆಚ್ಚು ವಯಸ್ಸಾದವಳಂತೆ ಕಾಣುತ್ತಿದ್ದಳು.  ಅದಾಗಲೇ ಅವಳಿಗೆ ಐವರು ಮಕ್ಕಳಿದ್ದುದು, ಒಬ್ಬ ವೈದ್ಯನಾಗಿ ನನ್ನಲ್ಲಿ ಕಳಕಳಿ ಉಂಟು ಮಾಡಿತು. ಹಿರಿಯ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವಂತೆ ಕಾಣುತ್ತಿದ್ದರು. ಆದ್ದರಿಂದ ಆಕೆ ತಿನ್ನಲು ಅವರಿಗಾಗಿ ಏನನ್ನು ಸಿದ್ಧಪಡಿಸುತ್ತಿದ್ದಾಳೆ ಎಂದು ತಿಳಿಯುವ ಕುತೂಹಲ ಉಂಟಾಯಿತು.

ಒಂದಷ್ಟು ಅನ್ನವನ್ನು ಬೇಯಿಸಿಟ್ಟಿದ್ದ ಅವಳು, ಅದರ ಜೊತೆಗೆ ಸೇರಿಸಿಕೊಂಡು ತಿನ್ನಲು ನೀರಿನಂತಹ ರಸವೊಂದನ್ನು ತಯಾರಿಸುತ್ತಿದ್ದಳು. ತರಕಾರಿ ತರುವುದು ಈ ಕುಟುಂಬಕ್ಕೆ ದುಬಾರಿ ಆಗಿದ್ದರಿಂದ, ಸಮೀಪದ ಅರಣ್ಯದಿಂದ ಕಿತ್ತು ತಂದಿದ್ದ ಎಂಥದ್ದೋ ಎಲೆಗಳನ್ನು ಹಾಕಿ ಕುದಿಸುತ್ತಿದ್ದಳು. ಬಹುತೇಕ ಎಲ್ಲ ದಿನಗಳಲ್ಲೂ ಇದೇ ಅವರ ಪ್ರಮುಖ ಆಹಾರವಾಗಿತ್ತು ಮತ್ತು ಮಕ್ಕಳು ಉಂಡ ನಂತರ ಉಳಿಯುವುದನ್ನಷ್ಟೇ ಅವಳು ತಿನ್ನುತ್ತಾಳೆ ಎಂಬುದನ್ನು ತಿಳಿದು ನನಗೆ ನೋವಾಯಿತು.

ತಾವು ಇಂತಹ ಜನರಿಗೆ ಸೇವೆ ಒದಗಿಸುತ್ತಿದ್ದೇವೆ ಎಂದು ಸರ್ಕಾರ ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಹೇಳಿಕೊಳ್ಳುವುದರ ನಡುವೆಯೂ, ಆರೋಗ್ಯ ಸೇವೆಯಾಗಲೀ ಶಿಕ್ಷಣವಾಗಲೀ ಆ ಹಳ್ಳಿಯ ಹತ್ತಿರಕ್ಕೂ ಸುಳಿದಿರಲಿಲ್ಲ. ಬದುಕನ್ನು ಹೇಗೆ ಬರುತ್ತದೋ ಹಾಗೆ ಸ್ವೀಕರಿಸಿದ್ದ ಆ ಸರಳ ವ್ಯಕ್ತಿತ್ವದ ಮಹಿಳೆಗೆ, ಹೊತ್ತುಹೊತ್ತಿಗೆ ತನ್ನ ಮಕ್ಕಳ ಹೊಟ್ಟೆ ತುಂಬಿಸುವುದೊಂದೇ ಏಕೈಕ ಕಾಯಕವಾಗಿತ್ತು. ಇದು ನನ್ನನ್ನು ಚಿಂತೆಗೀಡು ಮಾಡಿತಾದರೂ ತನ್ನ ಸಾಮಾಜಿಕ, ಆರ್ಥಿಕ ಸ್ಥಿತಿಯಿಂದ ಆಕೆಯೇನೂ ವಿಚಲಿತಳಾದಂತೆ ಕಾಣಲಿಲ್ಲ.

ಅಷ್ಟೇ ಅಲ್ಲದೆ ಆಕೆಯ ಮುಖದಲ್ಲಿ ವಿಶಿಷ್ಟವಾದ ಶಾಂತಿ ನೆಲೆಸಿದ್ದುದನ್ನು ನಾನು ಗಮನಿಸಿದೆ. ಒಂದೆಡೆ ಸರ್ಕಾರಗಳು, ನಾಗರಿಕ ಸಮಾಜದ ಗುಂಪುಗಳು, ಅಭಿವೃದ್ಧಿ ತಜ್ಞರು ಮತ್ತು ದೇಣಿಗೆ ಸಂಸ್ಥೆಗಳು ಆಹಾರ ಭದ್ರತೆ, ಆರೋಗ್ಯ ಸೇವೆ, ಶಿಕ್ಷಣ ಮತ್ತಿತರ ಸಾರ್ವಜನಿಕ ಸೇವೆ ಒದಗಿಸುವ, ಬಡತನದ ಅಂಚಿನಲ್ಲಿರುವವರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಕಲ್ಪಿಸುವ ಭರವಸೆ ನೀಡುತ್ತಿದ್ದರೆ, ಇನ್ನೊಂದೆಡೆ ಇಲ್ಲಿನ ಆದಿವಾಸಿಗಳು ಅಂತಹ ಯಾವುದೇ ಚರ್ಚೆಯ ಅಥವಾ ಅಭಿವೃದ್ಧಿಯ ಪಾಲುದಾರರು ಆಗಿರದಿದ್ದುದು ವ್ಯವಸ್ಥೆಯ ವ್ಯಂಗ್ಯಕ್ಕೆ ಕನ್ನಡಿ ಹಿಡಿದಂತೆ ತೋರುತ್ತಿತ್ತು.

ಆ ಘಟನೆಯನ್ನು ನೆನೆಸಿಕೊಂಡರೆ ಈಗಲೂ ನನಗೆ ಭ್ರಮನಿರಸನ ಆಗುತ್ತದೆ. ಹಾಗಿದ್ದರೆ ನಿಜಕ್ಕೂ ಅಭಿವೃದ್ಧಿ ಎಂದರೆ ಏನು ಎಂಬ ಗೊಂದಲ ಉಂಟಾಗುತ್ತದೆ. ಕೇವಲ ಆರೋಗ್ಯ, ಶಿಕ್ಷಣ, ಆಹಾರ, ಪೌಷ್ಟಿಕಾಂಶ, ಜೀವನೋಪಾಯಕ್ಕೆ ಅವಕಾಶ, ನೀರು, ನೈರ್ಮಲ್ಯ, ರಸ್ತೆ ಮತ್ತು ಇತರ ಮೂಲ ಸೌಲಭ್ಯಗಳನ್ನು ಒದಗಿಸುವುದು ಮಾತ್ರ ಅಭಿವೃದ್ಧಿಯೇ ಅಥವಾ ಇವೆಲ್ಲವುಗಳ ಜೊತೆಗೆ ಇನ್ನೂ ಹೆಚ್ಚಿನದೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.

ಇಂತಹ ಕುಟುಂಬಗಳಿಗೂ ಸಭ್ಯವಾಗಿ ಮತ್ತು ಘನವಾಗಿ ಬದುಕುವ ಹಕ್ಕಿಲ್ಲವೇ? ಅವರ ಆಶೋತ್ತರಗಳು ಹೊಟ್ಟೆಪಾಡಿಗಿಂತ ಆಚೆಗಿನ ಸಂಗತಿಗಳನ್ನು ಒಳಗೊಳ್ಳುವುದು ಬೇಡವೇ? ಅವರಿಗೆ ಮೂಲ ಸಾರ್ವಜನಿಕ ಸೇವೆ ಒದಗಿಸುವ ಖಾತರಿಯನ್ನು ಸರ್ಕಾರ ಮತ್ತು ಇತರ ಸಂಸ್ಥೆಗಳು ನೀಡಬಾರದೇ? ಒಂದು ಕಡೆ ನಾವು ಹಕ್ಕುಗಳನ್ನು ಆಧರಿಸಿದ ಸಮಾಜದ ಬಗ್ಗೆ ಮಾತನಾಡುತ್ತೇವೆ.

ಇನ್ನೊಂದೆಡೆ, ಬಡತನದ ಅಂಚಿನಲ್ಲಿರುವ ಲಕ್ಷಾಂತರ ಜನರನ್ನು ಆರ್ಥಿಕ ಅಭಿವೃದ್ಧಿಯ ಫಲದಿಂದ ಹೊರಗಿಡುತ್ತಿದ್ದೇವೆ ಎನಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯ ಬಜೆಟ್ ಸಿದ್ಧಪಡಿಸುತ್ತೇವೆ. ಆದರೆ, ತಮ್ಮ ಅಭಿವೃದ್ಧಿ ಹೇಗೆ ಆಗಬೇಕು ಎಂಬುದನ್ನು ನಿರ್ಧರಿಸಲು ಇಂತಹ ಜನರಿಗೆ ಅವಕಾಶ ಒದಗಿಸಿಕೊಡಲು ವಿಫಲರಾಗುತ್ತೇವೆ.

ಅಭಿವೃದ್ಧಿ ಕುರಿತ ಚರ್ಚೆ ಕಳೆದ ಮೂರ‌್ನಾಲ್ಕು ದಶಕಗಳಿಂದ ಈಚೆಗೆ ಆವೇಗ ಪಡೆದುಕೊಂಡಿದೆ. ವಿಶ್ವಸಂಸ್ಥೆಯು `ಸಹಸ್ರಮಾನದ ಅಭಿವೃದ್ಧಿ ಗುರಿ' (ಎಂ.ಡಿ.ಜಿ) ಎಂಬ ಘನ ಉದ್ದೇಶವನ್ನು ಘೋಷಣೆ ಮಾಡಿದ ಬಳಿಕವಂತೂ ಚರ್ಚೆ ನಿಜಕ್ಕೂ ಕಾವೇರಿದೆ. ವಿಶ್ವಸಂಸ್ಥೆಯ ಘೋಷಣೆ 8 ಅಂತರ ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಹೊಂದಿದೆ. 2000ದಲ್ಲಿ ನಡೆದ ವಿಶ್ವಸಂಸ್ಥೆಯ ಸಹಸ್ರಮಾನದ ಶೃಂಗಸಭೆಯು `ಸಹಸ್ರಮಾನದ ಘೋಷಣೆ'ಯನ್ನು ಅಳವಡಿಸಿಕೊಂಡ ಬಳಿಕ ಅಧಿಕೃತವಾಗಿ ಈ ಗುರಿಗಳನ್ನು ಅಂಗೀಕರಿಸಲಾಗಿದೆ.

ಜಗತ್ತಿನ ಕಡು ಬಡ ರಾಷ್ಟ್ರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ಗುರಿಗಳ ಉದ್ದೇಶ. ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳು ಹಾಗೂ ಕನಿಷ್ಠ 23 ಅಂತರ ರಾಷ್ಟ್ರೀಯ ಸಂಸ್ಥೆಗಳು 2015ರ ಹೊತ್ತಿಗೆ ಗುರಿ ಸಾಧನೆಗೆ ಸಮ್ಮತಿ ನೀಡಿವೆ.ಆ ಗುರಿಗಳು ಹೀಗಿವೆ:
 

  •  ಕಡು ಬಡತನ ಮತ್ತು ಹಸಿವೆಯ ನಿರ್ಮೂಲನೆ
  •  ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಸಾಧನೆ
  • ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ
  •  ಶಿಶು ಮರಣ ಪ್ರಮಾಣ ಇಳಿಕೆ
  • ತಾಯಂದಿರ ಆರೋಗ್ಯ ಸುಧಾರಣೆ
  • ಎಚ್‌ಐವಿ/ ಏಡ್ಸ್, ಮಲೇರಿಯಾ ಮತ್ತಿತರ ಕಾಯಿಲೆಗಳ ವಿರುದ್ಧ ಹೋರಾಟ
  •  ಪರಿಸರ ಸಮತೋಲನ
  • ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ

2015ಕ್ಕೆ ನಾವು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಅತ್ಯಂತ ಮಹತ್ವಾಕಾಂಕ್ಷಿಯಾದ ಇಂತಹ ಗುರಿಗಳ ಸಾಧನೆಗೆ ನಾವು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎಂಬ ವಾಸ್ತವ, ವಿಶ್ವಸಂಸ್ಥೆ ಮತ್ತು ಜಗತ್ತಿನ ಇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಮನವರಿಕೆಯಾಗಿದೆ. ಕೆಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧನೆ ಆಗಿರುವುದರ ನಡುವೆಯೂ, ಅಭಿವೃದ್ಧಿ ಕುರಿತ ನಮ್ಮ ನಿಲುವಿಗೇ ಅಂಟಿಕೊಳ್ಳದೆ ವಿಶ್ವದಾದ್ಯಂತದ ಸುಮಾರು 7 ಶತಕೋಟಿ ಜನರಿಗಾಗಿ ಅದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ನಾವು ಚಿಂತಿಸಬೇಕಾಗಿದೆ.

`ಆದಾಯ ವೃದ್ಧಿ'ಗಿಂತ ಮುಂದೆ ಹೋಗಿ, ಈ 8 ಗುರಿಗಳ ಜೊತೆಗೆ ಇನ್ನೂ ವ್ಯಾಪಕವಾದುದನ್ನು ಒಳಗೊಳ್ಳುವ ಮೂಲಕ, ಅಭಿವೃದ್ಧಿಯ ಪುನರ್ ವ್ಯಾಖ್ಯಾನವನ್ನು ಮಾಡಬೇಕಾಗಿದೆ. ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಅಭಿವೃದ್ಧಿಯ ಮಾದರಿಗಳನ್ನು ಅನುಕರಿಸಿದ ಮಾತ್ರಕ್ಕೆ ನಮ್ಮ ನಾಗರಿಕರಿಗೆ ಉತ್ತಮ ಬದುಕು ಕಟ್ಟಿಕೊಟ್ಟಂತೆ ಆಗುವುದಿಲ್ಲ ಎಂಬ ಅರಿವು ನಮ್ಮಲ್ಲಿ ಇರಬೇಕಾಗುತ್ತದೆ.

ADVERTISEMENT

`ಭಾರತವು ಆರ್ಥಿಕ ಪ್ರಗತಿಯಿಂದ ದೊರೆಯುವ ಸಾಮಾಜಿಕ ಲಾಭಗಳ ಬಗ್ಗೆ ಭರವಸೆ ಇಟ್ಟುಕೊಳ್ಳಬಾರದು; ಅದಕ್ಕಿಂತಲೂ ಮಿಗಿಲಾಗಿ, ಸಾಮಾಜಿಕ ಪ್ರಗತಿಯಿಂದ ಆಗುವ ಆರ್ಥಿಕ ಪರಿಣಾಮಗಳತ್ತ ದೃಷ್ಟಿ ಹರಿಸಬೇಕು' ಎಂಬ ಅಮರ್ತ್ಯ ಸೆನ್ ಅವರ ಮಾತನ್ನು ನಾವು ನೆನಪಿಡಬೇಕಾಗುತ್ತದೆ.

ಸಾಂಸ್ಕೃತಿಕವಾಗಿ ಸೂಕ್ತವಾದ ಮತ್ತು ಸಾಂದರ್ಭಿಕವಾಗಿ ಪ್ರಸ್ತುತವಾಗುವ ರೀತಿಯಲ್ಲಿ ತನ್ನ ಪ್ರಗತಿ ಮತ್ತು ಅಭಿವೃದ್ಧಿಯನ್ನು ಅಳೆಯುವ ಮಾನದಂಡಗಳನ್ನು ಸ್ವಯಂ ವ್ಯಾಖ್ಯಾನಿಸಿಕೊಳ್ಳುವ ಅಗತ್ಯ ಈಗ ದೇಶಕ್ಕಿದೆ. ಬಹುಪಕ್ಷೀಯ ಸಂಸ್ಥೆಗಳು ನೀಡುವ ಅಭಿವೃದ್ಧಿ ಮಾದರಿಗಳ ನಿರ್ದೇಶನಕ್ಕೆ ಬದಲಾಗಿ ಥಾಯ್ಲೆಂಡ್, ಇಂಡೊನೇಷ್ಯ ಹಾಗೂ ಬ್ರೆಜಿಲ್‌ನಂತಹ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳ ಯಶಸ್ಸಿನತ್ತ ನಮ್ಮ ಚಿತ್ತ ಹರಿಯಬೇಕು.

ಅಭಿವೃದ್ಧಿ ಎಂಬುದು ಮನುಷ್ಯನ ನಿರಂತರ ಸಾಮರ್ಥ್ಯ ವಿಸ್ತರಣೆಯ ಪ್ರತಿಫಲನದಂತೆ ಇರಬೇಕು ಎಂಬುದನ್ನು ಗ್ರಹಿಸಬೇಕು. ಇಂತಹ ಸಾಮರ್ಥ್ಯ ವಿಸ್ತರಣೆಯು ನಮ್ಮ ನಾಗರಿಕರಿಗೆ ಎಲ್ಲ ಬಗೆಯ ಭದ್ರತೆಯನ್ನೂ ಒದಗಿಸಬಲ್ಲದು. ಹೀಗೆ ಭಾರತವು ಅಭಿವೃದ್ಧಿಗೆ ಸಂಬಂಧಿಸಿದ ಈ ಬಗೆಯ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ಪ್ರವರ್ತಕ ಆದರೆ, ಆಗ ಕಾನೂನಿನ ಪ್ರಭುತ್ವ ಅಪವಾದವಾಗದೆ ಮಾದರಿಯಾಗುತ್ತದೆ.

ಯಾವ ಭಾರತೀಯರೂ ಹಸಿದುಕೊಂಡು ಇರಬೇಕಾದ ಪ್ರಮೇಯ ಬರುವುದಿಲ್ಲ. ಮಾನವ ಹಕ್ಕುಗಳು ಕೇವಲ ಘೋಷಣೆಗಳಾಗದೆ ಬದುಕಿನ ಮಾರ್ಗವಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆಯು ಬರೀ ತೋರಿಕೆಯಾಗದೆ ದಿನನಿತ್ಯದ ನಾಗರಿಕತ್ವದ ಅಭಿವ್ಯಕ್ತಿ ಆಗುತ್ತದೆ.

ಆಹಾರ, ಪೌಷ್ಟಿಕತೆ, ಜೀವನೋಪಾಯ, ಮೂಲಸೌಲಭ್ಯ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ರಾಜಕೀಯ ಭರವಸೆಗಳಾಗದೆ ಶಕ್ತ ನಾಗರಿಕರ ಹಕ್ಕುಗಳಾಗುತ್ತವೆ. ಇವೆಲ್ಲವೂ ಸಾಕಾರಗೊಂಡಾಗಷ್ಟೇ ನಾವು ಭಾರತವನ್ನು `ಅಭಿವೃದ್ಧಿ ಹೊಂದಿದ ರಾಷ್ಟ್ರ' ಎಂದು ಕರೆಯಲು ಸಾಧ್ಯ.

  ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.