ADVERTISEMENT

ಬನ್ನಿ, ಬದಲಾವಣೆಯ ಕಾಲ ಇದೆನ್ನಿ

ಡಾ.ಆರ್.ಬಾಲ ಸುಬ್ರಹ್ಮಣ್ಯಂ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ಬನ್ನಿ, ಬದಲಾವಣೆಯ ಕಾಲ ಇದೆನ್ನಿ
ಬನ್ನಿ, ಬದಲಾವಣೆಯ ಕಾಲ ಇದೆನ್ನಿ   

ಮತ್ತೆ ಚುನಾವಣೆ ಬಂದಿದೆ. ಆಕರ್ಷಣೆ ಕೇಂದ್ರ ಬಿಂದುವಾಗಿರುವ ಜನಸಾಮಾನ್ಯ ಇನ್ನೊಮ್ಮೆ `ಕೊಡುವವನ' ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾನೆ. ಕೊಡುವುದನ್ನು ಕೊಡಲೇಬೇಕು; ಆದರೆ ಅದಕ್ಕೆ ಮುನ್ನ ಅತ್ಯಂತ ಜಾಗರೂಕನಾಗಿ, ವಿಶ್ಲೇಷಣಾತ್ಮಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಶ್ನೆಗಳನ್ನು ಒಡ್ಡುವ ಮೂಲಕ `ಕೊಡುವ' ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹೀಗೆ ಅವನು ಈಗ ಕೊಡುವ ಮತ, ಕರ್ನಾಟಕದ ಮುಂದಿನ ಐದು ವರ್ಷಗಳ ಹಣೆಬರಹವನ್ನಷ್ಟೇ ನಿರ್ಧರಿಸುವುದಿಲ್ಲ; ಇನ್ನೂ ಹೆಚ್ಚು ಕಾಲ ರಾಜ್ಯದ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಿ ಮುಗಿಸಲು ಐದು ವರ್ಷ ಸಾಕಾಗದೇ ಇರಬಹುದು; ಆದರೆ ಅಲ್ಪಸ್ವಲ್ಪವಾದರೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಿದೆಯೋ ಅದೆಲ್ಲವನ್ನೂ ಹಾಳು ಮಾಡಿ ಮುಗಿಸಲು ನಿರ್ಲಜ್ಜರಿಗೆ ಇಷ್ಟು ಸಮಯ ಸಾಕು ಎಂಬುದನ್ನು ಜನ ಮರೆಯಬಾರದು.

ಕಳೆದ ಕೆಲ ವಾರಗಳಿಂದ ನಾನು ವಿವಿಧ ಕ್ಷೇತ್ರಗಳ ಹಲವಾರು ಜನರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಇವರಲ್ಲಿ ಹಲವರು ಈಗಷ್ಟೇ 18 ವರ್ಷ ತುಂಬಿದ ವಿದ್ಯಾರ್ಥಿಗಳಾಗಿದ್ದು, ಇತ್ತೀಚೆಗೆ ಮತದಾನದ ಹಕ್ಕು ಪಡೆದಿದ್ದಾರೆ. ರಾಜಕಾರಣಿಗಳ ಬಗ್ಗೆ ಹತಾಶ ಮನೋಭಾವ ಹೊಂದಿರುವ ಬಹುತೇಕರು, ಇದೇ ಕಾರಣವನ್ನು ಮುಂದಿಟ್ಟು ಮುಂಬರುವ ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ. ಅವರೆಲ್ಲ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ `ಯಾವ ಅಭ್ಯರ್ಥಿಗೂ ನಮ್ಮ ಮತ ಮತ್ತು ಬೆಂಬಲ ಪಡೆಯುವ ಅರ್ಹತೆ ಇಲ್ಲವೆಂದ ಮೇಲೆ ನಾವ್ಯಾಕೆ ಮತ ಹಾಕಬೇಕು?'

ಇದೊಂದು ಅತ್ಯಂತ ಸಾಮಾನ್ಯವಾದ ಹೇಳಿಕೆ ಮತ್ತು ಜನರಲ್ಲಿ ಈಗ ಇರುವ ಸಾಧಾರಣ ಗ್ರಹಿಕೆ. ಆದರೆ, ಎಲ್ಲ ಸಂದರ್ಭಗಳಲ್ಲೂ ಇದು ನಿಜ ಆಗಿರುವುದಿಲ್ಲ. ನಮ್ಮ ಯೋಗ್ಯತೆಗೆ ತಕ್ಕ ಸರ್ಕಾರವನ್ನು ನಾವು ಪಡೆಯುತ್ತೇವೆ ಎಂಬುದನ್ನು ನಾವು ಮರೆಯಬಾರದು. ಚುನಾಯಿತ ಪ್ರತಿನಿಧಿಗಳು ನಮ್ಮ ಸಮಾಜವನ್ನು ಪ್ರತಿಫಲಿಸುತ್ತಾರೆ ಅಷ್ಟೆ; ಹೀಗಾಗಿ ಕೇವಲ ಅವರನ್ನು ತೆಗಳುವುದರಿಂದ ಇಂದಿನ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ.

ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಮತವನ್ನು ಯಾರಿಗೆ ಕೊಡಬೇಕು ಎಂದು ನಾವು ನಿರ್ಧರಿಸುವುದಾದರೂ ಹೇಗೆ? ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಲವು ಅಭ್ಯರ್ಥಿಗಳನ್ನು ಅಳೆದೂ ತೂಗಿ ಅವರಲ್ಲಿ ಉತ್ತಮವಾದವರನ್ನು ಆಯ್ಕೆ ಮಾಡುವ ಮಾರ್ಗ ಯಾವುದು? ನಾನು ಮಾತನಾಡಿಸಿದ ಬಹುತೇಕರು `ಅಯ್ಯೋ ಒಳ್ಳೆಯವರನ್ನು ಆರಿಸಲು ನಮ್ಮ ಮುಂದೆ ಹೆಚ್ಚಿನ ಆಯ್ಕೆಗಳೇ ಇಲ್ಲ' ಎಂದು ಹಲುಬುತ್ತಾರೆ. ನಮ್ಮ ರಾಜಕೀಯ ವ್ಯವಸ್ಥೆಯ ಗುಣಮಟ್ಟ ಎಷ್ಟು ಅಧೋಗತಿಗೆ ಇಳಿದಿದೆಯೆಂದರೆ, ಉತ್ತಮ ಆಡಳಿತ ನೀಡುವ ನಿಜವಾದ ಸಾಮರ್ಥ್ಯ ಯಾರೊಬ್ಬರಲ್ಲಿಯೂ ಇಲ್ಲ ಎಂದೇ ಅವರೆಲ್ಲ ಭಾವಿಸಿದ್ದಾರೆ. ಇದು ನಮಗೆ ನಾವು ಕೊಟ್ಟುಕೊಳ್ಳುವ ವಿನಾಯಿತಿ ಎಂಬುದು ನನ್ನ ಭಾವನೆ. ಇಂತಹ ನಮ್ಮ ಅಸಹಜ ನಡವಳಿಕೆಯು ಪ್ರಜಾಪ್ರಭುತ್ವವನ್ನು ಇನ್ನಷ್ಟು ಅಧೋಗತಿಗೆ ತಂದಿಡುತ್ತದೆ. `ಕೆಟ್ಟ ಪ್ರಜಾಪ್ರಭುತ್ವ'ಕ್ಕೆ ಇರುವ ಏಕೈಕ ಪರಿಹಾರವೆಂದರೆ `ಸಕ್ರಿಯ ಪ್ರಜಾಪ್ರಭುತ್ವ' ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಪೂರ್ಣವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ತೊಡಗಿಕೊಂಡಾಗಷ್ಟೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ. ಇಂತಹದ್ದೊಂದು ಕಾರ್ಯಕ್ಕೆ ಚುನಾವಣೆಗಳು ನಮಗೆ ಬಹಳ ಪ್ರಶಸ್ತವಾದ ಕಾಲ. ಬದಲಾವಣೆಯ ಆರಂಭಕ್ಕೆ ಇದು ನಮಗೆ ಸಿಗುವ ಅತ್ಯುತ್ತಮ ಅವಕಾಶವೂ ಹೌದು. ಹಾಗಿದ್ದರೆ ಇದನ್ನೆಲ್ಲ ಸಾಧಿಸುವ ಮಾರ್ಗ ಯಾವುದು?

ಈ ಕಾರ್ಯಸಾಧನೆಗೆ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, 18 ವರ್ಷ ತುಂಬಿದ ಎಲ್ಲ ಅರ್ಹ ವ್ಯಕ್ತಿಗಳೂ ಮೊದಲು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದು ಸಮಯ ತಿಂದು ಹಾಕುವ ತೊಡಕಿನ ಕಾರ್ಯ ಎನಿಸಿದರೂ, ಈ ಕೆಲಸಕ್ಕೆ ಆದ್ಯತೆ ನೀಡಿ ಒಂದಷ್ಟು ಸಮಯವನ್ನು ನಾವು ಅದಕ್ಕಾಗಿ ಮೀಸಲಿಡಲೇಬೇಕು. ಮತದಾರರ ನೋಂದಣಿ ವಿಷಯದಲ್ಲಿ ಚುನಾವಣಾ ಆಯೋಗ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆದರೆ, ಒಮ್ಮೆ ಮತದಾರರಾಗಿ ನೋಂದಣಿ ಮಾಡಿಸಿದ ಬಳಿಕ `ಯಾರೋ ಒಬ್ಬರಿಗೆ ಮತ ಚಲಾಯಿಸಿ ಬಂದರಾಯಿತು' ಎಂದುಕೊಳ್ಳದೆ, ಅತ್ಯಂತ ಜಾಣತನದಿಂದ ಮತದಾನ ಮಾಡಬೇಕಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಯೋಗ್ಯತೆ ಅಳೆಯುವುದು ಕಷ್ಟದ ಕೆಲಸವೇ ಸರಿ. ಆದರೆ ಆಯ್ಕೆಗೆ ಮುನ್ನ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿ, ವಿವಿಧ ಅಭ್ಯರ್ಥಿಗಳನ್ನು ಹೋಲಿಕೆ ಮಾಡಿ ನೋಡಬೇಕು. ಇದರಿಂದ ನಮ್ಮ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು, ನೀತಿ ನಿರೂಪಣೆ, ರಾಜಕೀಯ ಹಾಗೂ ಆಡಳಿತದ ಬಗ್ಗೆ ಅವರೆಷ್ಟು ಅರಿತಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳು ಯಾವ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ, ಅವರ ಸಿದ್ಧಾಂತ ಯಾವುದು, ಆಡಳಿತದ ಬಗ್ಗೆ ಅವರ ದೃಷ್ಟಿಕೋನ ಏನು, ಪ್ರಣಾಳಿಕೆಯಲ್ಲಿನ ಬದ್ಧತೆಗಳೇನು, ತಮ್ಮ ಚುನಾವಣಾ ಭರವಸೆಗಳನ್ನು ಅವರು ಎಷ್ಟರ ಮಟ್ಟಿಗೆ ಈಡೇರಿಸಬಲ್ಲರು, ಅವರ ಶೈಕ್ಷಣಿಕ ಅರ್ಹತೆ ಏನು, ರಾಜಕೀಯ ಅನುಭವ ಎಷ್ಟಿದೆ, ಯಾವುದಾದರೂ ಹಗರಣದಲ್ಲಿ ಪಾಲ್ಗೊಂಡಿದ್ದಾರೆಯೇ, ಅಪರಾಧ ಹಿನ್ನೆಲೆ ಉಳ್ಳವರೇ, ಅವರ ಆದಾಯ ಮತ್ತು ಆಸ್ತಿಪಾಸ್ತಿಯ ಮೂಲ ಯಾವುದು ಎಂಬುದನ್ನೆಲ್ಲ ನಾವು ತಿಳಿದುಕೊಳ್ಳಬೇಕು.

ಮತ ಯಾಚನೆಗೆ ಬರುವ ಅಭ್ಯರ್ಥಿಗಳಿಗೆ ಕೆಲವು ಪ್ರಶ್ನೆಗಳನ್ನಾದರೂ ನಾವು ಒಡ್ಡಬೇಕಾಗುತ್ತದೆ. ತಮ್ಮ ಕ್ಷೇತ್ರದ  ಆಗುಹೋಗು ಮತ್ತು ಜನಸಂಖ್ಯೆಯ ಸಂಪೂರ್ಣ ಪರಿಚಯ ಅವರಿಗಿದೆಯೇ, ಅಲ್ಲಿ ಇರುವ ಮತ್ತು ಇಲ್ಲದಿರುವ ನಾಗರಿಕ ಸೌಲಭ್ಯಗಳು, ರಾಜ್ಯದ, ಅದರಲ್ಲೂ ಹೆಚ್ಚಾಗಿ ಅವರ ಕ್ಷೇತ್ರದ ಸಮಸ್ಯೆಗಳ ಅರಿವಿದೆಯೇ, ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಅವರಿಗೆಷ್ಟು ತಿಳಿದಿದೆ, ಬಡತನ, ಗ್ರಾಮೀಣ ಮತ್ತು ನಗರದ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಏನೆನ್ನುತ್ತಾರೆ, ಬೀದಿ ವ್ಯಾಪಾರಿಗಳು, ನಿರ್ಗತಿಕರ ಸಮಸ್ಯೆಗಳ ಮಾಹಿತಿ ಅವರ ಬಳಿ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ವಸತಿ, ಕುಡಿಯುವ ನೀರು, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ನಗರಗಳಿಗೆ ವಲಸೆ, ಸಾಗಣೆ, ರಸ್ತೆ ಮತ್ತು ರಸ್ತೆ ಸುರಕ್ಷತೆ, ಕೊಳೆಗೇರಿಗಳು, ವಲಸಿಗರ ಸಮಸ್ಯೆ ನಿವಾರಣೆಗೆ ಅವರೇನು ಯೋಜನೆ ಹಾಕಿಕೊಂಡಿದ್ದಾರೆ, ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಏನು ಎಂಬುದನ್ನು ಹೊರಗೆಡವುವಂತೆ ಮಾಡಬೇಕು. ದೇಶದ ಸಂವಿಧಾನ ಹಾಗೂ ಇತ್ತೀಚಿನ ಕೆಲವು ಕಾಯ್ದೆಗಳಾದ ಆರ್‌ಟಿಇ, ಕೌಟುಂಬಿಕ ದೌರ್ಜನ್ಯ ತಡೆ, ಎನ್‌ಆರ್‌ಇಜಿಎ ಅಂತಹವುಗಳನ್ನು ಅವರು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ, ಆಹಾರ ಭದ್ರತೆ, ಜಾಗತಿಕ ಆರೋಗ್ಯ ಸೇವೆ, ಇಂಧನ ಸಮಸ್ಯೆ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ, ಆದಿವಾಸಿಗಳ ಸಮಸ್ಯೆ ಬಗೆಹರಿಸಿ  ಅವರಿಗೆ ಅರಣ್ಯ ಹಕ್ಕುಗಳನ್ನು ಒದಗಿಸಲು, ಗ್ರಾಮೀಣ ಪ್ರದೇಶಗಳಿಗೆ ನಗರಗಳ ಸೌಲಭ್ಯ ಕಲ್ಪಿಸಲು ಯಾವ ಬಗೆಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕು. ಕೃಷಿ ಆರ್ಥಿಕತೆ ಉತ್ತೇಜನಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯವನ್ನು ಅವರು ಜನರೆದುರು ಮಂಡಿಸುವಂತೆ ಮಾಡಬೇಕು. ತೆರಿಗೆ ಹಾಗೂ ಎಲ್ಲ ಸಾರ್ವಜನಿಕ ಸೇವೆಗಳು ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತೆ ಮಾಡುವಲ್ಲಿ ಅವರ ಅಭಿಪ್ರಾಯವೇನು, ಭೂ ವಿವಾದ, ಒತ್ತುವರಿ, ಭೂಗಳ್ಳರ ನಿಗ್ರಹಕ್ಕೆ ಯಾವ ಯೋಜನೆ ರೂಪಿಸಿದ್ದಾರೆ, ನಮ್ಮಂತಹ ಸಾಮಾನ್ಯ ನಾಗರಿಕರೂ ಆಡಳಿತದಲ್ಲಿ ಪಾಲ್ಗೊಳ್ಳುವ ಅಧಿಕಾರ ಒದಗಿಸುವ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಅರಿವು ಅವರಿಗಿದೆಯೇ, ಗ್ರಾಮ ಸಭೆಗಳು ಹಾಗೂ ವಾರ್ಡ್ ಸಭೆಗಳ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆಯೇ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬೇಕು.

ಈ ಪ್ರಶ್ನೆಗಳಿಗೆಲ್ಲ ಅವರು ನೀಡುವ ಉತ್ತರವನ್ನು ಆಧರಿಸಿ, ನಮ್ಮ ಅಮೂಲ್ಯವಾದ ಮತವನ್ನು ಯಾರಿಗೆ ಕೊಡಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಈ ಬಗೆಯಲ್ಲಿ ನಾವು ಪಾಲ್ಗೊಂಡಾಗ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ `ಬಿ' ಫಾರ್ಮ್ ವಿತರಿಸುವ ಮಾನದಂಡಗಳನ್ನು ಪುನರ್ ಪರಿಶೀಲಿಸುವಂತೆ ಆಗುತ್ತದೆ. ರಾಜಕೀಯ ಸಹ `ಬೇಡಿಕೆ' ಮತ್ತು `ಪೂರೈಕೆ'ಯ ತತ್ವವನ್ನೇ ಅನುಸರಿಸುತ್ತದೆ. ಒಮ್ಮೆ ನಾವು ಉತ್ತಮ, ಅರ್ಹ, ಬದ್ಧತೆಯುಳ್ಳ, ಪ್ರಾಮಾಣಿಕ ಅಭ್ಯರ್ಥಿಗಳಿಗಾಗಿ ಬೇಡಿಕೆ ಇಟ್ಟರೆ, ಪಕ್ಷಗಳು ಕೂಡ ಅಂತಹ ಅಭ್ಯರ್ಥಿಗಳನ್ನೇ ಪೂರೈಸಲು ಒತ್ತು ನೀಡುತ್ತವೆ.

ಚುನಾವಣೆ ಮುಗಿದ ಮೇಲೂ ನಾಗರಿಕರು ಶಾಸಕರೊಟ್ಟಿಗೆ ಸಂಪರ್ಕ ಮುಂದುವರಿಸಿದರೆ ಮಾತ್ರ ಪ್ರಜಾಪ್ರಭುತ್ವ ಕೆಲಸ ಮಾಡಲು ಸಾಧ್ಯ. ಹೀಗಾಗಿ, ಆಡಳಿತದ ಮೇಲೆ ಕಣ್ಗಾವಲಿಡುವ `ನಾಗರಿಕ ತಂಡ'ಗಳನ್ನು ರಚಿಸುವ ಮೂಲಕ, ಅವರ ಮೇಲಿನ ನಮ್ಮ ಒತ್ತಡವನ್ನು ಮುಂದುವರಿಸಬೇಕು. ಪ್ರತಿ ಕ್ಷೇತ್ರದಲ್ಲೂ ಹೊಸತನ ಅಳವಡಿಸಿಕೊಂಡು `ನಾಗರಿಕರ ರಿಪೋರ್ಟ್ ಕಾರ್ಡ್'ಗಳನ್ನು ಹೊರತರುವುದರ ಜೊತೆಗೆ, ನಿರಂತರವಾಗಿ ನಮ್ಮ ಪ್ರತಿನಿಧಿಗಳ ಸಾಧನೆಯ ಮೌಲ್ಯಮಾಪನ ಮಾಡಬೇಕು. ಹೀಗೆ ನಾವು ಒತ್ತಡ ಸೃಷ್ಟಿ ಮಾಡಿ ಅವರನ್ನು ಹೊಣೆಗಾರರನ್ನಾಗಿ ಮಾಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಲು, ಉತ್ತಮ ಆಡಳಿತವು ರಾಜಕಾರಣಿಗಳು ಹಾಗೂ ನಾಗರಿಕರು ಇಬ್ಬರ ಬದುಕಿನ ಮಾರ್ಗವೂ ಆಗುವಂತೆ ಮಾಡಲು ಸಾಧ್ಯ.

ಬನ್ನಿ, ನಾವೆಲ್ಲರೂ ಕೈಜೋಡಿಸೋಣ ಮತ್ತು ಬದಲಾವಣೆಗೆ ಇದು ಸಕಾಲ ಎಂದು ನಮಗೆ ನಾವೇ ಭರವಸೆ ಕೊಟ್ಟುಕೊಳ್ಳೋಣ. ಇಂತಹದ್ದೊಂದು ಬದಲಾವಣೆಯ ಫಲಾನುಭವಿಗಳಾದ ನಮ್ಮಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡೋಣ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.