ಇತ್ತೀಚಿನ ದಿನಗಳು ನನ್ನ ಪಾಲಿಗಂತೂ ಅತ್ಯಂತ ಬೋಧಪ್ರದವಾಗಿದ್ದವು. ಇಡೀ ಮೈಸೂರು ಜಿಲ್ಲೆಯನ್ನು ಸುತ್ತಾಡಿ ಯುವಜನರು, ವಿದ್ಯಾರ್ಥಿಗಳು, ಸ್ವಯಂಸೇವಾ ಸಂಘಟನೆಗಳ ಸದಸ್ಯರು, ರೈತರು, ಸಾಫ್ಟ್‌ವೇರ್ ಎಜಿನಿಯರುಗಳು, ಕಾರ್ಮಿಕರು ಮತ್ತು ಗೃಹಿಣಿಯರನ್ನೆಲ್ಲ ನಾನು ಭೇಟಿ ಮಾಡಿದೆ. ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಕೆಲಸ ಮಾಡಬೇಕಾದರೆ ನಾಗರಿಕರ ಸಹಭಾಗಿತ್ವ ಎಷ್ಟು ಮುಖ್ಯ ಎಂಬ ಬಗ್ಗೆ ಜನಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿ ಭರವಸೆ, ಆಶೋತ್ತರ, ಬದಲಾವಣೆಗಾಗಿ ಆಗ್ರಹ, ಅಸಹಾಯಕತೆ, ದುರ್ಬಲಗೊಳ್ಳುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ವಿರಕ್ತ ಭಾವ ಎಲ್ಲವೂ ವ್ಯಕ್ತವಾಯಿತು. ಜನ ಪ್ರಶ್ನೆ ಕೇಳಿದ ರೀತಿಯು, ಜನಸಾಮಾನ್ಯರ ಭರವಸೆ ಮತ್ತು ಆಶೋತ್ತರಗಳನ್ನು ಪ್ರತಿನಿಧಿಸುವಂತಿತ್ತು.
ಅಸಹಾಯಕತೆಯಿಂದ ಒಡಮೂಡಿದ ನಿರಾಶೆ; ಬದಲಾವಣೆ ಮಾಡಲಾಗದ ಅಸಾಮರ್ಥ್ಯ, ಮತದಾರರು- ಅಭ್ಯರ್ಥಿಗಳಿಬ್ಬರಲ್ಲೂ ಇರುವ ಭ್ರಷ್ಟಾಚಾರ, ಅನಾದರ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿತು.
ನಾವು ಕೈಯಾರೆ ಮಾಡಿಕೊಂಡಿರುವುದನ್ನು ಬದಲಾವಣೆ ಮಾಡಲಾಗದ ಅಸಾಧ್ಯತೆಯನ್ನು ಹಲವರು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ಎಂದಾದರೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವೇ ಎಂಬ ಸಂದೇಹ ಅವರಲ್ಲಿತ್ತು. ಇಂತಹ ಕಾರ್ಯಕ್ಕಾಗಿ ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳನ್ನು ಮಾಧ್ಯಮಗಳು ವರದಿ ಮಾಡುತ್ತಿರುವುದರ ನಡುವೆಯೂ, ಜನರಿಗೆ ಅದರಲ್ಲಿ ನಂಬಿಕೆ ಬಂದಂತೆ ಕಾಣಲಿಲ್ಲ.
ಐಎಎಸ್ ಅಧಿಕಾರಿಗಳ ಇತ್ತೀಚಿನ ವರ್ಗಾವಣೆ, ಕೇಂದ್ರ ಮೇಲ್ಮನವಿ ನ್ಯಾಯಮಂಡಳಿಯ ನಿರ್ಧಾರ, ನಂತರದ ಹೈಕೋರ್ಟ್ ಆದೇಶ ಎಲ್ಲದರಿಂದ ಕೆಲವರು ಗೊಂದಲಕ್ಕೆ ಒಳಗಾಗಿದ್ದರು. ತಮ್ಮ ದೃಷ್ಟಿಕೋನದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಯಾವ ಅಂಶಗಳು ಕೊಡುಗೆ ನೀಡಬಲ್ಲವು ಎಂದು ನಾನು ಜನರನ್ನು ಪ್ರಶ್ನಿಸಿದೆ. ನನಗೆ ಸಿಕ್ಕ ಉತ್ತರಗಳು ಅತ್ಯಂತ ಮಾಹಿತಿಪೂರ್ಣವಾಗಿದ್ದವು. ಅಂತಹ ಸಂಗತಿಗಳನ್ನು ಜನಸಾಮಾನ್ಯರು ಗಮನಿಸುವುದಷ್ಟೇ ಅಲ್ಲ, ಚುನಾವಣಾ ವ್ಯವಸ್ಥೆಯನ್ನು ಅಳೆಯಲು ಅವರಿಗೂ ತಮ್ಮದೇ ಆದ ಮಾನದಂಡಗಳಿವೆ ಎಂಬುದು ಸ್ಪಷ್ಟವಾಯಿತು.
ಕ್ಷುಲ್ಲಕ ಕಾರಣಗಳಿಗಾಗಿ ಹೇಗೆ ನಿರಂತರವಾಗಿ ಮಾಂಸಾಹಾರದ ಔತಣಕೂಟಗಳನ್ನು ಏರ್ಪಡಿಸಲಾಗಿತ್ತು ಎಂಬುದನ್ನು ಕೆಲವು ಗ್ರಾಮಸ್ಥರು ವಿವರಿಸಿದರು. ತಮ್ಮ ಹಳ್ಳಿಯಲ್ಲಿ ಯಾರೊಬ್ಬರ ಪರಿಚಯ ಇಲ್ಲದವರೂ ತಮಗೆ ಊಟ ಹಾಕಿಸಲು ನೆಪ ಹುಡುಕಿಕೊಂಡದ್ದು ಹೇಗೆ? ಏನೇ ಕಾರಣ ಇದ್ದರೂ ಒಂದೇ ಸ್ಥಳದಲ್ಲಿ 25ಕ್ಕಿಂತ ಹೆಚ್ಚು ಜನ ಗುಂಪುಗೂಡುವುದನ್ನು ನಿಷೇಧಿಸುವ ಮೂಲಕ, ಯಥೇಚ್ಛವಾಗಿ ಖರ್ಚು ಮಾಡುವ ಔತಣಕೂಟಗಳನ್ನು ನಿಷೇಧಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲವೇ ಎಂಬುದು ಅವರ ಪ್ರಶ್ನೆಯಾಗಿತ್ತು.
ಹಳ್ಳಿಹಳ್ಳಿಗಳಲ್ಲೂ ಇದ್ದಕ್ಕಿದ್ದಂತೆ ಕ್ರಿಕೆಟ್ ತಂಡಗಳು ತಲೆ ಎತ್ತಿದ ಬಗೆಯನ್ನು ಯುವಕರ ಗುಂಪೊಂದು ವಿವರಿಸಿತು. ಎಲ್ಲ ಯುವಕರಿಗೂ ಬ್ಯಾಟು, ಬಾಲು ವಿಕೆಟ್ ಮಾತ್ರವಲ್ಲ ಟಿ- ಶರ್ಟುಗಳು, ಕ್ಯಾಪ್‌ಗಳೂ ಸಿಕ್ಕಿದ್ದವು. ಜೊತೆಗೆ ಅವರ ಆಟದ ಖರ್ಚು ಮತ್ತು ಬಹುಮಾನಗಳಿಗೆ ಪ್ರಾಯೋಜಕರೂ ದಕ್ಕಿದ್ದರು.
ಆದರೆ ಈ ಪ್ರಾಯೋಜಕರು ಯಾರು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಯಾಕೆ ತಿಳಿಯಲಿಲ್ಲ ಎಂದು ಅವರು ಕೇಳಿದ್ದರು. ಐಪಿಎಲ್ ಆಟಗಾರರಷ್ಟೇ ಅಲ್ಲ, ಹಲವು ಹಳ್ಳಿಗಳ ಈ ಹವ್ಯಾಸಿ ಆಟಗಾರರೂ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಈ ಚುನಾವಣೆ ಅನುವು ಮಾಡಿಕೊಟ್ಟಿದೆ.
ಕೆಲವು ಕಿರಾಣಿ ಅಂಗಡಿ ಮಾಲೀಕರನ್ನು ಮಾತನಾಡಿಸಿದಾಗ, ಚುನಾವಣಾ ಸಮಯದಲ್ಲಿ ಅವರ ವ್ಯಾಪಾರದ ಭರಾಟೆ ಹೇಗೆ ಜೋರಾಗುತ್ತದೆ ಎಂಬ ವಿಷಯ ಹೊರಬಿತ್ತು. ಮತದಾರರಿಗೆ ಈಗ ಬಹುಮಾನದ ಕೂಪನ್‌ಗಳು ಮತ್ತು ವೋಚರ್‌ಗಳನ್ನು ಕೊಡಲಾಗಿದೆ. ಅವನ್ನು ಅವರು ಚುನಾವಣೆ ಮುಗಿದ ನಂತರ ಈ ಅಂಗಡಿಗಳಿಗೆ ತಂದುಕೊಟ್ಟು, ಅದಕ್ಕೆ ಬದಲಾಗಿ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಬಹುದು. ಚುನಾವಣಾ ನೀತಿ ಸಂಹಿತೆ ಕೊನೆಗೊಂಡ ಬಳಿಕವಷ್ಟೇ ಈ ಕೂಪನ್‌ಗಳು ಊರ್ಜಿತವಾಗುವಂತೆ ಜಾಣತನದಿಂದ ಅವುಗಳನ್ನು ವಿತರಿಸಲಾಗಿದೆ.
ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆಯ ಮೂಲಕ ಇಂತಹ ಸ್ಥಳಗಳನ್ನು ಗಮನಿಸಿ ಕ್ರಮ ಕೈಗೊಳ್ಳಲು ಯಾಕೆ ಮುಂದಾಗುವುದಿಲ್ಲ? ಯಾವುದೇ ಸಿನಿಮಾ ಅಥವಾ ಪುಸ್ತಕವನ್ನು ತನಗಿಷ್ಟ ಬಂದಾಗಲೆಲ್ಲ ನಿಷೇಧಿಸುವ ಸರ್ಕಾರಕ್ಕೆ ಈ ಬಹುಮಾನದ ಕೂಪನ್‌ಗಳು- ವೋಚರ್‌ಗಳು ಅನೂರ್ಜಿತ ಆಗುವಂತೆ ಮಾಡುವುದು ಕಷ್ಟದ ಕೆಲಸವೇ?
ಮಹಿಳೆಯರ ಜೊತೆ ಚರ್ಚಿಸಿದಾಗಲೆಲ್ಲ ಕೇಳಿಬಂದದ್ದು, ಅಷ್ಟೊಂದು ಸುಲಭವಾಗಿ, ಅದೂ ಉಚಿತವಾಗಿ ಮದ್ಯ ವಿತರಣೆ ಆಗುವುದು ಹೇಗೆ ಎಂಬ ಪ್ರಶ್ನೆ. ಕ್ರಮ ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳುತ್ತಿರುವುದರ ನಡುವೆಯೂ ಅಷ್ಟೊಂದು ಪ್ರಮಾಣದ ಮದ್ಯ, ಚುನಾವಣೆ ನಡೆಯುವವರೆಗೂ ಎಗ್ಗಿಲ್ಲದೇ ಹೇಗೆ ಸಿಗುತ್ತದೆ? ಈ ತಿಂಗಳು ಎಲ್ಲ ಬಗೆಯ ಮದ್ಯ ಮಾರಾಟಕ್ಕೂ ಯಾಕೆ ನಿರ್ಬಂಧ ಹೇರುವುದಿಲ್ಲ ಎಂದು ಅವರು ತಿಳಿದುಕೊಳ್ಳ ಬಯಸಿದ್ದರು. ಇಷ್ಟೊಂದು ಮುಕ್ತವಾಗಿ ಮದ್ಯ ಹಂಚಿಕೆ ಆಗುತ್ತಿರುವಾಗ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂದು ಯಾರಾದರೂ ಊಹೆ ಮಾಡಲು ಸಾಧ್ಯವೇ?
ಬಹಳಷ್ಟು ಮಂದಿಯ ಜೀವನೋಪಾಯಕ್ಕೂ ಚುನಾವಣೆ ದಾರಿ ಮಾಡಿಕೊಡುತ್ತದೆ. ಜನರನ್ನು ಒಟ್ಟುಗೂಡಿಸಲು, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯ ಜೊತೆ ತೆರಳಲು, ಪ್ರಚಾರಕ್ಕೆ ಹೊರಟಾಗ ಜೊತೆಗೂಡಲು, ಮತಗಟ್ಟೆಗಳ ಮೇಲೆ ನಿಗಾ ಇಡಲು ಎಲ್ಲದಕ್ಕೂ ಅವರಿಗೆ ಹಣ ಸಿಗುತ್ತದೆ. ಇಷ್ಟೇ ಅಲ್ಲ, ತಮ್ಮ ವಿಜಯೋತ್ಸವ ಆಚರಿಸಲು ಬರುವ ಜನರಿಗೂ ಹಣ ಕೊಡಬೇಕಾಗುತ್ತದೆ ಎಂದು ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಹೇಳಿಕೊಂಡರು. ಅಭ್ಯರ್ಥಿಯ ನಿಜವಾದ ಬೆಂಬಲಿಗರು ಮಾತ್ರ ಪ್ರಚಾರಕ್ಕೆ ತೆರಳುವಂತೆ ಆಯೋಗ ಮಿತಿ ಹಾಕಬಾರದೇಕೆ? ಪಕ್ಷದ ಕಾರ್ಯಕರ್ತರು ಮತ್ತು ಇತರರು ತಮ್ಮ ಸೇವೆಗಾಗಿ ದುಡ್ಡು ಪಡೆಯುತ್ತಿದ್ದಾರೆಯೇ ಎಂಬುದರ ಮೇಲ್ವಿಚಾರಣೆ ಮಾಡಬಾರದೇಕೆ?
ವಾಹನಗಳ ಸಂಖ್ಯೆ, ಅವು ಓಡಿದ ಕಿಲೊ ಮೀಟರ್‌ಗಳ ಲೆಕ್ಕ, ಖರ್ಚಾದ ಇಂಧನ ಎಲ್ಲದರ ಬಗ್ಗೆಯೂ ಜಿಲ್ಲಾಧಿಕಾರಿ ನಿಗಾ ವಹಿಸುತ್ತಿದ್ದರೂ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಜನರಿಗೆ ಸಂಶಯವಂತೂ ಇದ್ದೇ ಇದೆ. ಇಂತಹ ವ್ಯವಸ್ಥೆ ನಿಜವಾಗಲೂ ಪರಿಣಾಮಕಾರಿ ಆಗಿದ್ದೇ ಆದರೆ, ಚುನಾವಣಾ ಸಮಯದಲ್ಲಿ ಸ್ಥಳೀಯ ಟ್ಯಾಕ್ಸಿಗಳು ಕೈಗೆ ಸಿಗುವುದೇ ಇಲ್ಲ ಯಾಕೆ ಎಂದು ಅವರು ಕೇಳುತ್ತಾರೆ. ಒಬ್ಬ ಟ್ಯಾಕ್ಸಿ ಚಾಲಕನ ಪ್ರಕಾರ, ಆತನ ವಾಹನ ತನಗೆ ಯಾರೆಂದೇ ತಿಳಿಯದವರ ಹೆಸರಿನಲ್ಲಿ ಈ ತಿಂಗಳಿಡೀ ಬುಕ್ ಆಗಿದೆ. ಆದರೂ ದಿನದ ಖರ್ಚನ್ನು ಅವನಿಗೆ ಕೊಡಲಾಗುತ್ತದೆ. ಅದೂ ಮಾಮೂಲಿ ದಿನಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಹಣ.
ಮಧ್ಯಮ ವರ್ಗದ ಹಿರಿಯ ನಾಗರಿಕರ ಗುಂಪೊಂದು ಟಿ.ಎನ್.ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗಿನ ಸಮಯವನ್ನು ಸ್ಮರಿಸಿಕೊಂಡಿತು. ಈಗಿರುವ ಕಾನೂನನ್ನೇ ಬಳಸಿಕೊಂಡು ಹಲವು ವರ್ಷಗಳ ಹಿಂದೆಯೇ ಶೇಷನ್ ಆ ಪರಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಹೇಗೆ ಎಂಬುದೇ ಅವರೆಲ್ಲರಿಗೆ ಸೋಜಿಗದ ಸಂಗತಿಯಾಗಿತ್ತು. ಈಗಿನ ವ್ಯವಸ್ಥೆಯಲ್ಲೂ ಕಾನೂನಿನ ಬಗ್ಗೆ ಭಯ ಮೂಡಿಸಬೇಕು, ಯಾವುದೇ ಚುನಾವಣಾ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಹಲವು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಈಗಿನ ಚುನಾವಣಾ ಆಯುಕ್ತರೊಬ್ಬರೊಂದಿಗೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಯತ್ನಿಸಿದವರು ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ವಿಭಿನ್ನ ಪ್ರಕ್ರಿಯೆಗಳ ಮೂಲಕ ವ್ಯವಸ್ಥೆಯನ್ನು ಶುದ್ಧೀಕರಿಸಲು, ಚುನಾವಣೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ನಡೆಸಲು ಎಲ್ಲರೂ ಯತ್ನಿಸಿದ್ದಾರೆ.
ಒಬ್ಬ ದಾರಿಹೋಕ ನೀಡುವ ಹಲವು ಸಲಹೆಗಳು ಅವಾಸ್ತವಿಕ ಸಂಗತಿಗಳಂತೆ ನಮಗೆ ಭಾಸವಾಗಬಹುದು. ಆದರೆ ಅವನ ಆ ವಿಶ್ವಾಸವನ್ನು ಇನ್ನಷ್ಟು ವರ್ಧಿಸಬೇಕಾದ ಅಗತ್ಯ ಇದೆ ಎಂಬುದನ್ನು ನಾವೆಲ್ಲ ಮನಗಾಣಬೇಕು. ಆಗುತ್ತಿರುವ ಬದಲಾವಣೆಗಳೆಲ್ಲ ಒಳ್ಳೆಯದಕ್ಕೆ ಎಂಬ ಭರವಸೆ ಸಾಮಾನ್ಯ ಮತದಾರನಿಗೆ ಸಿಗುವಂತಾಗಬೇಕು. ದೋಷರಹಿತ ಮತದಾರರ ಪಟ್ಟಿ, ಸತ್ತವರು- ದೀರ್ಘಕಾಲದಿಂದ ಕಾಣೆಯಾದವರ ಹೆಸರುಗಳು ಹಾಗೂ ಸಂಶಯಾಸ್ಪದ ಹೆಸರುಗಳ ನೋಂದಣಿ ರದ್ದು... ಇತ್ಯಾದಿ ಕ್ರಮಗಳ ಮೂಲಕ ಇಂತಹದ್ದೊಂದು ಭರವಸೆ ಮೂಡಿಸಲು ಆಯೋಗ ತನ್ನ ಪರವಾಗಿ ಅಲ್ಪ ಕಾಣಿಕೆ ಸಲ್ಲಿಸಬಹುದು.
ಯಾವುದೇ ದೋಷಕ್ಕೆ ಆಯಾ ಜಿಲ್ಲಾಧಿಕಾರಿ ಮತ್ತು ಅಧೀನ ಅಧಿಕಾರಿಗಳನ್ನು ಹೊಣೆ ಮಾಡಿ, ಹಿಂಜರಿಕೆಯಿಲ್ಲದೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಐದು ವರ್ಷಗಳಿಗೂ ಹೆಚ್ಚು ಕಾಲ ಕ್ರಿಮಿನಲ್ ಪ್ರಕರಣ ಇತ್ಯರ್ಥವಾಗದೆ ಉಳಿದಿದ್ದರೆ ಆಯೋಗವು ಅಂತಹವರು ಸ್ಪರ್ಧಿಸದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಸ್ಪರ್ಧಿಸಿದರೂ ಈ ವಿಷಯದ ಬಗ್ಗೆ ಮತದಾರರಲ್ಲಿ ಅಧಿಕೃತವಾಗಿ ಜಾಗೃತಿ ಮೂಡಿಸಬೇಕು.
ಅಭ್ಯರ್ಥಿಗಳ ಆಸ್ತಿಪಾಸ್ತಿ, ಆರ್ಥಿಕ ಹೊಣೆಗಾರಿಕೆ, ಅಪರಾಧ ಹಿನ್ನೆಲೆಯನ್ನು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ನಿರ್ವಹಣಾ ಘಟಕ, ಕಂದಾಯ ಬೇಹುಗಾರಿಕಾ ಘಟಕ, ಸ್ಥಳೀಯ ಪೊಲೀಸರಂತಹ ಎಲ್ಲ ಕಾನೂನು ಜಾರಿ ಸಂಸ್ಥೆಗಳ ಜೊತೆ ಹಂಚಿಕೊಳ್ಳಬೇಕು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು, ಯಾವುದೇ ಬಗೆಯ ಉಲ್ಲಂಘನೆಯ ವಿರುದ್ಧ ಅಗತ್ಯ ಕ್ರಮ ಜರುಗಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆ ಎಲ್ಲ ಕ್ರಮಗಳನ್ನೂ ಸಾರ್ವಜನಿಕರ ಮುಂದಿಡಬೇಕು. ಇದರಿಂದ ಬಹುತೇಕರು ತಮ್ಮ ಪ್ರಮಾಣಪತ್ರದಲ್ಲಿ ಘೋಷಿಸಿಕೊಳ್ಳುವ ಅಸಮಾನ ಆಸ್ತಿಪಾಸ್ತಿಯ ಸ್ಥಿತಿಗತಿ ಚಿತ್ರಣ ಎಲ್ಲರಿಗೂ ಸಿಗುವಂತೆ ಆಗುತ್ತದೆ.
ಅಕ್ರಮದ ಆರೋಪ ಹೊತ್ತ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ನ್ಯಾಯಾಂಗ ಪ್ರಕ್ರಿಯೆ ಸಮಯಾಧಾರಿತ ಆಗಿರಬೇಕು. ಶಾಸಕರೊಬ್ಬರ ಜಾತಿಯ ಪೂರ್ವೇತಿಹಾಸ ಪ್ರಶ್ನೆಗೆ ಒಳಪಟ್ಟರೂ, ಅದಾಗಲೇ ಅವರು ಒಂದು ಅವಧಿಯನ್ನು ಪೂರೈಸಿ ಈಗ ಮತ್ತೊಮ್ಮೆ ಅದೇ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಚುನಾವಣೆ ಎದುರಿಸಲು ಹೊರಟಿದ್ದಾರೆ. ಧನಿಕರು ಮತ್ತು ಪ್ರಬಲರು ಹೀಗೆ ಶಿಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳುವ ವ್ಯವಸ್ಥೆಯ ಬಗ್ಗೆ ಜನರಿಗೆ ನಂಬಿಕೆ ಹುಟ್ಟುವುದಾದರೂ ಹೇಗೆ?
ಸಮಸ್ಯೆ ಮತ್ತು ಪರಿಹಾರ ಬೇರೆಲ್ಲೋ ಇದೆ, `ಉದ್ಧಾರಕ'ನೊಬ್ಬ ಎಲ್ಲಿಂದಲೋ ಬಂದು ಈ ಅವ್ಯವಸ್ಥೆಗಳಿಂದೆಲ್ಲ ನಮ್ಮನ್ನು ಪಾರು ಮಾಡುತ್ತಾನೆ ಎಂಬ ಭ್ರವೆುಯನ್ನು ನಮ್ಮಂತಹ ಜನಸಾಮಾನ್ಯರು ಬಿಡಬೇಕು. ಇರುವ ಕಾನೂನು ಚೌಕಟ್ಟುಗಳ ಒಳಗೇ ಪರಿಹಾರ ಹುಡುಕಿಕೊಳ್ಳಬೇಕು. ಅವಶ್ಯಕ ಕಾನೂನುಗಳು ಈಗಾಗಲೇ ಇವೆ. ಆದರೆ ಧೈರ್ಯದಿಂದ, ಇಚ್ಛಾಪೂರ್ವಕವಾಗಿ ಮತ್ತು ಗಾಢ ನಂಬಿಕೆಯಿಂದ ಅವುಗಳ ಜಾರಿಗೆ ಜನ ಮುಂದಾಗಬೇಕಾಗಿದೆ ಅಷ್ಟೆ.
`ನಡತೆ'ಯು ಎಲ್ಲಿಂದಲೋ ಬರುವುದಿಲ್ಲ, ಅದು ನಮ್ಮಳಗೇ ಇರುತ್ತದೆ. ಯಾವ ಆಶಯ ನಮ್ಮದಾಗಿರುತ್ತದೋ ಅದಕ್ಕೆ ಪೂರಕವಾಗಿ ಬದುಕಲು ಮೊದಲು ನಾವು ಮುಂದಾಗಬೇಕು. ಪ್ರಜಾಪ್ರಭುತ್ವದಲ್ಲಿ ಒಬ್ಬರಾಗಿರುವುದಕ್ಕೆ ಹೆಮ್ಮೆ ಪಡಬೇಕು.
ಉತ್ತಮ ಆಡಳಿತಕ್ಕೆ ಅಡಿಗಲ್ಲು ಹಾಕಿ, ಅದರ ಫಲ ಉಣ್ಣುವುದು ವಿಲಕ್ಷಣ ಸಂಗತಿಯಲ್ಲ. ಅದು ಪ್ರಗತಿಗೆ ಅನಿವಾರ್ಯವಾದ ಅಂಶ. ವಿಫಲ ರಾಜಪ್ರಭುತ್ವ ಅಥವಾ ವಸಾಹತುಶಾಹಿಯ ದೃಷ್ಟಿಕೋನದಿಂದ ನಾವು ಪ್ರಜಾಪ್ರಭುತ್ವವನ್ನು ಅಳೆಯಬಾರದು.
ಬಣ್ಣದ ಗಾಜಿನ ಮೂಲಕ ನೋಡದೆ, ಕಾಲಕ್ಕೆ ತಕ್ಕಂತೆ ಅದನ್ನು ನೋಡುವ ಮತ್ತು ನಮಗಾಗಿ ನಾವು ಸೃಷ್ಟಿಸಿಕೊಳ್ಳುವ ಭವಿಷ್ಯದಂತೆ ನಾವು ಅದನ್ನು ಕಾಣಬೇಕು. ನಮ್ಮ ನೈತಿಕ ಅಧಃಪತನದ ಮೂಲಕ ಆಡಳಿತ ವೈಫಲ್ಯವು ನಿರಾಶಾವಾದದತ್ತ ತಿರುಗುವಂತೆ ಆಗಬಾರದು. ಈ ಅಧಃಪತನವನ್ನು `ಸಕ್ರಿಯ ಪಾಲ್ಗೊಳ್ಳುವಿಕೆ'ಯನ್ನಾಗಿ ಪುನರ್ ರೂಪಿಸಬೇಕು. ಆಗ ಮಾತ್ರ ದೇಶದ ಇಂದಿನ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಕೆಲಸ ಮಾಡಬಲ್ಲದು.
ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಅತ್ಯಂತ ಪ್ರಮುಖವಾದ ಹಂತ. ಇಂತಹದ್ದೊಂದು ಭರವಸೆ ಮೂಡಿಸುವಲ್ಲಿ ನಮ್ಮಂತಹ ಜನಸಾಮಾನ್ಯರು ನಮ್ಮ ಕೈಲಾದ ಪ್ರಯತ್ನ ಮಾಡದಿದ್ದರೆ, ಮುಂದೆ ನಮ್ಮನ್ನು ನಾವೇ ಬೈಯ್ದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಅಷ್ಟೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.