ಸಾಮಾನ್ಯವಾಗಿ ಮತದಾನದ ದಿನ ಹಕ್ಕು ಚಲಾಯಿಸಿ ಬರುವುದಕ್ಕಷ್ಟೇ ಚುನಾವಣಾ ಪ್ರಕ್ರಿಯೆಯಲ್ಲಿನ ನಾಗರಿಕರ ಪಾಲ್ಗೊಳ್ಳುವಿಕೆ ಸೀಮಿತವಾಗುತ್ತದೆ. ಜನ ತಮ್ಮ ಪಾತ್ರವನ್ನು ಅತ್ಯಂತ ಮಿತಿಗೊಳಪಟ್ಟ ದೃಷ್ಟಿಕೋನದಿಂದ ನೋಡುತ್ತಾರೆ. ಚುನಾವಣೆ ನಂತರವೂ ತಮ್ಮ ಪಾಲ್ಗೊಳ್ಳುವಿಕೆಯನ್ನು ಮುಂದುವರಿಸುವುದು, ಕಾವಲುಪಡೆಯ ಪಾತ್ರ ನಿರ್ವಹಿಸುವುದು ಮತ್ತು ಶಾಸಕರ ಸಾಧನೆಯ ಮೇಲ್ವಿಚಾರಣೆ ಮಾಡುವುದು ಅತ್ಯವಶ್ಯಕ ಎಂಬ ಅರಿವು ಬಹುತೇಕರಿಗೆ ಇಲ್ಲ. ಈ ಹಿನ್ನೆಲೆಯಲ್ಲಿ, ಶಾಸಕರ ನಿಜವಾದ ಕರ್ತವ್ಯಗಳ ಬಗ್ಗೆ ವಿವಿಧ ವರ್ಗಗಳ ಜನರಿಗೆ ಎಷ್ಟು ತಿಳಿದಿದೆ ಎಂದು ಅರಿಯಲು ನಾನು ಪ್ರಯತ್ನಿಸಿದೆ. ಆಗ ಸಿಕ್ಕ ಪ್ರತಿಕ್ರಿಯೆಯಿಂದ, ನಮ್ಮ ಚುನಾಯಿತ ಪ್ರತಿನಿಧಿಗಳ ನಿಖರ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ ಜನ ಎಷ್ಟೊಂದು ಕಡಿವೆು ತಿಳಿದುಕೊಂಡಿದ್ದಾರೆ ಎಂಬುದು ಅರಿವಿಗೆ ಬಂತು.
ಉತ್ತಮ ರಸ್ತೆ, ಕುಡಿಯುವ ನೀರು, ಬೀದಿ ದೀಪ ಮತ್ತು ಒಳ್ಳೆಯ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಮ್ಮ ಶಾಸಕರು ಖಚಿತ ಭರವಸೆ ನೀಡಬೇಕು ಎಂದು ಬಹುತೇಕರು ತಿಳಿಸಿದರು. ಕೆಲವರು ಮಹಿಳೆಯರ ಸುರಕ್ಷತೆಯನ್ನು ಪ್ರಸ್ತಾಪಿಸಿದರು. ಇನ್ನು ಕೆಲವರು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿದರು. ಜನರೇನೋ ತಮಗೆ ಅತ್ಯಂತ ಮುಖ್ಯವಾದ ನಾಗರಿಕ ಸೌಲಭ್ಯಗಳಿಗೆ ಬೇಡಿಕೆ ಇಡುತ್ತಾರಾದರೂ, ಶಾಸಕರ ಪಾತ್ರವನ್ನು ನಾವು ಇಷ್ಟಕ್ಕೇ ಸೀಮಿತಗೊಳಿಸಬೇಕೇ?
ಅಭ್ಯರ್ಥಿಯೊಬ್ಬರು ಕಳೆದ ಐದು ವರ್ಷಗಳ ತಮ್ಮ ಸಾಧನೆಗೆ ಸಂಬಂಧಿಸಿದ ಕಿರು ಹೊತ್ತಿಗೆಯೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ತಾವು ಅಭಿವೃದ್ಧಿಪಡಿಸಿದ ರಸ್ತೆಗಳು, ಸ್ವಚ್ಛಗೊಳಿಸಿದ ಚರಂಡಿಗಳು, ಸ್ಥಾಪಿಸಿದ ಬೀದಿ ದೀಪಗಳಿಂದ ಹಿಡಿದು, ನಗರಕ್ಕಾಗಿ ತಾವು ಕೈಗೊಂಡ ಇತರ ಸಣ್ಣಪುಟ್ಟ ಕಾರ್ಯಗಳು, ವಿವಿಧ ಯೋಜನೆಗಳಿಗಾಗಿ ಆಯ್ಕೆ ಮಾಡಿದ ಫಲಾನುಭವಿಗಳು ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಮೊದಲ ಬಾರಿ ಸ್ಪರ್ಧಿಸುತ್ತಿರುವವರು ಮತ್ತು ಮರು ಆಯ್ಕೆ ಬಯಸಿದ ಬಹಳಷ್ಟು ಅಭ್ಯರ್ಥಿಗಳೊಟ್ಟಿಗೆ ನಾನು ಚರ್ಚಿಸಿದೆ.
ಇವರಲ್ಲಿ ಬಹುತೇಕರಿಗೆ, ಒಬ್ಬ ಶಾಸಕನಿಗೆ ಇರಬೇಕಾದ ಜವಾಬ್ದಾರಿಗಳ ಬಗ್ಗೆ ಪೂರ್ಣ ಅರಿವೇ ಇರದಿದ್ದುದು ನನ್ನನ್ನು ಆತಂಕಕ್ಕೆ ಈಡು ಮಾಡಿತು. ಹಲವರು ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಮನೆಗಳನ್ನು ಮಂಜೂರು ಮಾಡುವುದು ಅಥವಾ ವಿವಿಧ ಸರ್ಕಾರಿ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಮಂಜೂರಾತಿ ನೀಡುವಂತಹ ಸೀಮಿತ ಕರ್ತವ್ಯಗಳನ್ನಷ್ಟೇ ಪ್ರಸ್ತಾಪಿಸಿದರು. ಕೇವಲ ಸರ್ಕಾರಿ ಸೇವೆಯನ್ನು ಒದಗಿಸುವುದಷ್ಟೇ ಶಾಸಕರ ಕೆಲಸ ಎಂದು ಸ್ವತಃ ಜನರೇ ತಿಳಿದುಕೊಂಡಿರುವಾಗ, ಸಹಜವಾಗಿಯೇ ಶಾಸಕರು ಸಹ ತಮ್ಮ ಪಾತ್ರವನ್ನು ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿದ್ದಾರೆ.
ಒಬ್ಬ ಸಾರ್ವಜನಿಕ ಸೇವಕ ಮಾಡಬೇಕಾದ ಕರ್ತವ್ಯಗಳೇನು ಎಂಬುದೇ ನಮಗೆ ತಿಳಿಯದಿದ್ದರೆ, ಅವನ ಯೋಗ್ಯತೆಯನ್ನು ನಾವು ಅಳೆಯುವುದಾದರೂ ಹೇಗೆ? ವಿಧಾನಸಭೆಯ ಚುನಾಯಿತ ಪ್ರತಿನಿಧಿಯ ನಿರ್ದಿಷ್ಟ ಕರ್ತವ್ಯಗಳ ಅರಿವೇ ನಮಗಿರದಿದ್ದಾಗ, ಅವರ ಸಾಮರ್ಥ್ಯಗಳನ್ನು ನಾವು ಹೇಗೆ ಒರೆಗೆ ಹಚ್ಚಲು ಸಾಧ್ಯ?
ದೇಶದ ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲ ಶಾಸಕರೂ ಮತದಾರರಿಂದ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಒಂದು ಕ್ಷೇತ್ರದಿಂದ ಒಬ್ಬ ಸದಸ್ಯ ವಯಸ್ಕ ಮತದಾರರ ಮೂಲಕ ಆರಿಸಿಬರುತ್ತಾನೆ. ವಿಧಾನಸಭಾ ಸದಸ್ಯರಾಗಲು ಇರಬೇಕಾದ ಅರ್ಹತೆಗಳು ಹೀಗಿರುತ್ತವೆ:
ಅವರು ದೇಶದ ನಾಗರಿಕರಾಗಿರಲೇಬೇಕು.
ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ವತಃ ಮತದಾರನಾಗದ ಹೊರತು ಯಾವುದೇ ವ್ಯಕ್ತಿ ವಿಧಾನಸಭೆ ಅಥವಾ ವಿಧಾನಪರಿಷತ್‌ನ ಸದಸ್ಯನಾಗಲು ಸಾಧ್ಯವಿಲ್ಲ. ವಿಧಾನಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು.
ನಮ್ಮ ಶಾಸಕರಿಗೆ ಸಾಕಷ್ಟು ಕೆಲಸಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ಕಾನೂನು ರಚನೆ. ದೇಶದ ಸಂವಿಧಾನದ 7ನೇ ಪರಿಚ್ಛೇದದಲ್ಲಿ (246ನೇ ವಿಧಿ) ವಿವರಿಸಿರುವಂತೆ, ರಾಜ್ಯ ಪಟ್ಟಿ ಮತ್ತು ಸಹವರ್ತಿ ಪಟ್ಟಿಯಲ್ಲಿರುವ ಎಲ್ಲ ವಿಷಯಗಳ ಬಗ್ಗೆಯೂ ಕಾನೂನು ರಚಿಸುವ ಅಧಿಕಾರವನ್ನು ಶಾಸಕರು ಹೊಂದಿರುತ್ತಾರೆ. ಇವುಗಳಲ್ಲಿ ಪೊಲೀಸ್, ಕಾರಾಗೃಹ, ನೀರಾವರಿ, ಕೃಷಿ, ಸ್ಥಳೀಯ ಸರ್ಕಾರಗಳು, ಸಾರ್ವಜನಿಕ ಆರೋಗ್ಯ, ಯಾತ್ರಾಸ್ಥಳಗಳು, ಸ್ಮಶಾನ ಇತ್ಯಾದಿ ವಿಷಯಗಳು ಸೇರಿವೆ. ಶಿಕ್ಷಣ, ಮದುವೆ, ವಿಚ್ಛೇದನ, ಅರಣ್ಯ, ವನ್ಯಜೀವಿ, ಪಕ್ಷಿ ಸಂರಕ್ಷಣೆಯಂತಹ ವಿಷಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಎರಡೂ ಕಾನೂನು ರಚಿಸಬಹುದಾಗಿದೆ.
ವಿಧಾನಸಭೆ ಮತ್ತು ಶಾಸಕರ ಮತ್ತೊಂದು ಬಹು ಮುಖ್ಯವಾದ ಪಾತ್ರ ಆರ್ಥಿಕ ಹೊಣೆಗಾರಿಕೆ. ರಾಜ್ಯದ ಹಣಕಾಸು ಸ್ಥಿತಿಗತಿಯ ಮೇಲೆ ಶಾಸನಸಭೆ ನಿಯಂತ್ರಣ ಹೊಂದಿರುತ್ತದೆ. ಸರ್ಕಾರ ಮಂಡಿಸುವ ಬಜೆಟ್‌ಗೆ ಅಂಗೀಕಾರ ನೀಡುವುದರ ಜೊತೆಗೆ, ಆಡಳಿತ ನಿರ್ವಹಣೆಗೆ ಅವಶ್ಯಕವಾದ ಹಣ ಸೂಕ್ತ ರೀತಿಯಲ್ಲಿ ಬಿಡುಗಡೆ ಆಗುವಂತೆ ನೋಡಿಕೊಳ್ಳುತ್ತದೆ. ಕಾರ್ಯಾಂಗದ ಮೇಲ್ವಿಚಾರಣೆಯನ್ನೂ ಅದು ಮಾಡುತ್ತದೆ. ಕಾರ್ಯಾಂಗ ಜಾರಿಗೆ ತರುವ ಎಲ್ಲ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೇಲುಸ್ತುವಾರಿಯನ್ನು ನಡೆಸಬೇಕಾಗುತ್ತದೆ.
ಹಾಗೆಂದ ಮಾತ್ರಕ್ಕೆ ಬರೀ ಸಮಿತಿಗಳಲ್ಲಿ ಕುಳಿತು ಫಲಾನುಭವಿಗಳ ಪಟ್ಟಿ ಮತ್ತು ಮನೆಗಳನ್ನು ಮಂಜೂರು ಮಾಡುವುದು, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಹೇಗೆ ಖರ್ಚು ಮಾಡುವುದು ಎಂಬುದನ್ನು ನೋಡಿಕೊಳ್ಳುವುದಷ್ಟೇ ಶಾಸಕರ ಕೆಲಸವಲ್ಲ. ಸರ್ಕಾರದ ಕಾರ್ಯ ನಿರ್ವಹಣೆ ವಿಭಾಗವು ತನ್ನ ಕಾರ್ಯವನ್ನು ಹೊಣೆಗಾರಿಕೆಯಿಂದ, ಸಂವೇದನಶೀಲವಾಗಿ, ಪಾರದರ್ಶಕವಾಗಿ, ತಾರತಮ್ಯರಹಿತವಾಗಿ ನಿರ್ವಹಿಸುತ್ತಿದೆಯೇ ಎಂಬುದನ್ನು ಸಹ ಅದು ಖಚಿತಪಡಿಸಿಕೊಳ್ಳಬೇಕು. ಕಾನೂನು ರಚನೆಯ ಜೊತೆಗೆ, ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನೂ ರಾಜ್ಯ ಶಾಸಕಾಂಗ ಹೊಂದಿರುತ್ತದೆ. ಶಾಸಕಾಂಗ ಮತ್ತು ಸಂಸತ್ತಿನ ಚುನಾಯಿತ ಸದಸ್ಯರಿಬ್ಬರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅರ್ಧದಷ್ಟು ರಾಜ್ಯ ಶಾಸಕಾಂಗಗಳ ಒಪ್ಪಿಗೆಯ ಮೇರೆಗೆ ಸಂಸತ್ತು, ಸಂವಿಧಾನದ ಕೆಲ ಅಂಶಗಳಿಗೆ ತಿದ್ದುಪಡಿಯನ್ನೂ ತರಬಹುದಾಗಿದೆ. ಹೀಗೆ ಶಾಸಕಾಂಗಗಳು ಸಂವಿಧಾನದ ತಿದ್ದುಪಡಿ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳುತ್ತವೆ.
ನಮ್ಮ ಶಾಸಕರು ತಾವು ಮಾಡುವ ಸೇವೆಗಳಿಗೆ ತಕ್ಕ ವೇತನವನ್ನು ಪಡೆಯುತ್ತಾರೆ. ತಮಗಾಗಿ ವೇತನವನ್ನು ಭಾರಿ ಪ್ರಮಾಣದಲ್ಲಿ ಏರಿಸಿಕೊಳ್ಳುವಲ್ಲಿ ಮತ್ತು ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಅವರು ಹಿಂದೆ ಬಿದ್ದಿಲ್ಲ. ರಾಜ್ಯ ವಿಧಾನಸಭೆಯು 2011ರಲ್ಲಿ ತನ್ನ ಶಾಸಕರು ಮತ್ತು ಸಚಿವರ ವೇತನವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಸಾಂಪ್ರದಾಯಿಕ ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯವೇಳೆಯ ನಂತರ ಆಗಿನ ಕಾನೂನು ಸಚಿವ ಸುರೇಶ್ ಕುಮಾರ್ `ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) 2011' ಹಾಗೂ `ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಹಾಗೂ ಭತ್ಯೆ (ಎರಡನೇ ತಿದ್ದುಪಡಿ) 2011' ಎಂಬ ಎರಡು ಮಸೂದೆಗಳನ್ನು ಮಂಡಿಸಿದರು. ವಿರೋಧ ಪಕ್ಷದವರ ಕುರ್ಚಿಗಳೆಲ್ಲವೂ ಖಾಲಿ ಇದ್ದದ್ದರಿಂದ ಯಾವ ಚರ್ಚೆಯೂ ಇಲ್ಲದೆ ಈ ಮಸೂದೆಗಳು ಅಂಗೀಕಾರಗೊಂಡವು. ಇದರಿಂದ ಶಾಸಕರ ವೇತನ ಸರಾಸರಿ ಶೇ 73ರಷ್ಟು ಹೆಚ್ಚಾಗಿ, ಅವರು ತಿಂಗಳಿಗೆ 95 ಸಾವಿರ ರೂಪಾಯಿಗೂ ಹೆಚ್ಚು ಸಂಬಳ ಪಡೆಯುವಂತಾಯಿತು.
ಇದರ ಜೊತೆಗೆ ಪ್ರಯಾಣ ಮತ್ತು ತುಟ್ಟಿಭತ್ಯೆ, ತಮ್ಮ ಆಪ್ತ ಸಿಬ್ಬಂದಿಗೆ ವೇತನದಂತಹ ಇತರ ಸೌಲಭ್ಯಗಳನ್ನೂ ಅವರು ಪಡೆಯಬಹುದಾಗಿದೆ. ಆವರೆಗೂ ಶಾಸಕರು ಸುಮಾರು 51 ಸಾವಿರ ರೂಪಾಯಿ ಹಾಗೂ ಸಂಪುಟ ಸಚಿವರು 54 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಹೀಗೆ ಸಚಿವರು ಮತ್ತು ಶಾಸಕರ ವೇತನ ಹೆಚ್ಚಳದಿಂದ ರಾಜ್ಯ ಬೊಕ್ಕಸಕ್ಕೆ ವಾರ್ಷಿಕವಾಗಿ 26 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊಣೆ ಬಿದ್ದಂತಾಯಿತು. ಶಾಸಕಾಂಗದ ಅಧಿಕಾರಿಗಳ ಪ್ರಕಾರ, ವಿಧಾನಸಭಾ ಸದಸ್ಯರಿಗೆ ವೇತನ- ಭತ್ಯೆ ನೀಡುವಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಆರೋಗ್ಯವಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಜನಸಾಮಾನ್ಯರು ಪಾವತಿಸುವ ತೆರಿಗೆ ಹಣದಿಂದ ವೇತನ ಪಡೆಯುವ ನಮ್ಮ ಚುನಾಯಿತ ಪ್ರತಿನಿಧಿಗಳ ಮುಂದೆ ಸಾಧನೆ, ಹೊಣೆಗಾರಿಕೆ, ಪಾರದರ್ಶಕತೆ ಎಲ್ಲಕ್ಕೂ ನಾಗರಿಕರು ಬೇಡಿಕೆ ಇಡಬಹುದಾಗಿದೆ.
ವೇತನ, ಸವಲತ್ತುಗಳ ಜೊತೆಗೆ ಶಾಸಕರು ಇತರ ಕೆಲವು ವಿನಾಯಿತಿಗಳನ್ನೂ ಪಡೆಯುತ್ತಾರೆ. ಸಂಸತ್ ಸದಸ್ಯರಂತೆ ಅವರಿಗೆ ಸಹ ಸದನದಲ್ಲಿ ಮಾತನಾಡುವ ಸ್ವಾತಂತ್ರ್ಯ ಇರುತ್ತದೆ. ಸದನದಲ್ಲಿ ಅವರು ಏನೇ ಹೇಳಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ. ಅಧಿವೇಶನದ ಸಮಯದಲ್ಲಿ ಯಾವುದೇ ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸುವಂತಿಲ್ಲ. ಶಾಸಕರು ಏನು ಮಾಡಬೇಕು ಎಂಬುದನ್ನು ಜನಸಾಮಾನ್ಯರಾದ ನಾವು ಅರಿತುಕೊಂಡಾಗ ಮಾತ್ರ ಅವರ ಸಾಮರ್ಥ್ಯವನ್ನು ಹೇಗೆ ಅಳತೆ ಮಾಡಬೇಕು, ತಮ್ಮ ಪಾತ್ರವನ್ನು ಅವರು ಎಷ್ಟರಮಟ್ಟಿಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನೆಲ್ಲ ನಾವು ತಿಳಿಯಲು ಸಾಧ್ಯ. ಹೀಗಾಗಿ, ಮುಂದಿನ ಐದು ವರ್ಷಗಳ ಕಾಲ ನಮ್ಮ ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಾರೆ ಎಂಬುದನ್ನು ಅರಿಯುವುದು ಬಹು ಮುಖ್ಯವಾದ ಕಾರ್ಯ. ಹಾಗೇ ಕಳೆದ ಐದು ವರ್ಷಗಳಲ್ಲಿ ಅವರೇನು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ನಾವೀಗ ಪ್ರಯತ್ನಿಸೋಣ.
2008ರಿಂದ 2013ರ ಅವಧಿಯಲ್ಲಿ ನಡೆದ 16 ಅಧಿವೇಶನಗಳಲ್ಲಿ ರಾಜ್ಯ ವಿಧಾನಸಭೆ ಕೇವಲ 164 ದಿನ ಸೇರಿತ್ತು. ಇದರಿಂದ, ಪ್ರತಿ ವರ್ಷ ಈ ಅವಧಿಯಲ್ಲಿ ಲೋಕಸಭೆ ವಾರ್ಷಿಕವಾಗಿ ಸರಾಸರಿ 71 ದಿನ ಸೇರಿದರೆ, ಶಾಸನಸಭೆ ಬರೀ 33 ದಿನ ಸೇರಿದಂತಾಗಿದೆ. ರಾಜ್ಯದ ಜನರ ಅಭಿವೃದ್ಧಿ ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ, ತಮ್ಮ ಕರ್ತವ್ಯ ಪಾಲನೆಯಲ್ಲಿ ನಮ್ಮ ಸದಸ್ಯರು ಎಷ್ಟು ಗಂಭೀರರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ತಮ್ಮ ವಾರ್ಷಿಕ ಸಾಧನೆಯ ವರದಿಯನ್ನು ಹೊರತರುವಂತೆ ಜನಸಾಮಾನ್ಯರಾದ ನಾವೆಲ್ಲರೂ ಒಟ್ಟಾಗಿ ಶಾಸಕರನ್ನು ಆಗ್ರಹಿಸಬೇಕು. ಶಾಸನಸಭೆಗೆ ಹಾಜರಾತಿ, ಅಲ್ಲಿ ಕೇಳಿದ ಪ್ರಶ್ನೆ, ವಿವಿಧ ನೀತಿಗಳು ಮತ್ತು ಕಾನೂನುಗಳ ಬಗ್ಗೆ ತಮಗಿರುವ ಜ್ಞಾನ, ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿಭಾಯಿಸುವ ಬಗೆ, ಮತದಾರರಿಗಾಗಿ ಎಷ್ಟು ಸಮಯ ವ್ಯಯಿಸುತ್ತಿದ್ದಾರೆ, ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ತಮ್ಮ ಆದಾಯ ಮತ್ತುಆಸ್ತಿಪಾಸ್ತಿ ಘೋಷಣೆಗೆ ಸಂಬಂಧಿಸಿದಂತೆ ಕ್ಷೇತ್ರದ ಜನರಿಗೆ ಹಾಗೂ ರಾಜ್ಯಕ್ಕೆ ಅವರು ಮಾಹಿತಿ ಒದಗಿಸಬೇಕು.
ಮತ್ತೆ ಚುನಾವಣೆ ಎದುರಿಸಿದ 347 ಅಭ್ಯರ್ಥಿಗಳ ಪ್ರಮಾಣಪತ್ರವನ್ನು ವಿಶ್ಲೇಷಿಸಿರುವ ಕರ್ನಾಟಕ ಚುನಾವಣಾ ಕಾವಲುಪಡೆಯ ಪ್ರಕಾರ, ಪ್ರತಿ ಶಾಸಕರ ಆಸ್ತಿಯು ಸರಾಸರಿ ಶೇ 79ರಷ್ಟು ಪ್ರಮಾಣದಲ್ಲಿ ವೃದ್ಧಿಯಾಗಿದೆ. ತಮ್ಮ ಸಾರ್ವಜನಿಕ ಸೇವಕರು ಈ ಬಗೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯುವ ಹಕ್ಕು ನಾಗರಿಕರಿಗೆ ಇದೆ. ನಮ್ಮ ಹಿತಕ್ಕಾಗಿಯಾದರೂ ನಾವು ಸುಮ್ಮನೆ ಕೂರದೆ, ಹೊಣೆಗಾರಿಕೆ ಮತ್ತು ಸಾಧನೆ ಎರಡಕ್ಕೂ ನಮ್ಮ ಶಾಸಕರನ್ನು ಒತ್ತಾಯಿಸಬೇಕು. ಬರೀ ಮತ ಚಲಾವಣೆ ಮಾಡಿ ಸುಮ್ಮನಾಗದೆ, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುತ್ತಾ ಅದನ್ನು ಆರೋಗ್ಯಪೂರ್ಣವಾಗಿ ಇಡಲು ಶ್ರಮಿಸಬೇಕು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.