ತಮ್ಮ ಸರ್ಕಾರ ರಾಜ್ಯದ ಜನತೆಗೆ ಉತ್ತಮ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಶ್ರಮಿಸಲಿದೆ ಎಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮಾತು ನಿಜಕ್ಕೂ ಕಾರ್ಯರೂಪಕ್ಕೆ ಬಂದದ್ದೇ ಆದರೆ, ಕಳೆದ ಕೆಲ ವರ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನರಿಗೆ ಇದೊಂದು ಒಳ್ಳೆಯ ಸುದ್ದಿಯೇ ಹೌದು.
ಸಾಮಾನ್ಯ ಜನರ ದೃಷ್ಟಿಯಲ್ಲಿ ಉತ್ತಮ ಆಡಳಿತ ಎಂದರೆ ಏನು ಎಂಬುದನ್ನು ತಿಳಿಯುವುದು ನಿಜಕ್ಕೂ ಆಸಕ್ತಿದಾಯಕ ಸಂಗತಿ. ಹೆಗ್ಗಡದೇವನಕೋಟೆಯ ಹಿರಿಯ ಬುಡಕಟ್ಟು ಮಹಿಳೆ ಮಾದಿಗೆ ಪ್ರತಿ ತಿಂಗಳೂ ಸರಿಯಾಗಿ ತನ್ನ ಪಿಂಚಣಿ ಹಣ ಕೈ ಸೇರುವಂತಾದರೆ ಸಾಕು, ಅದೇ ಒಳ್ಳೆಯ ಆಡಳಿತ. ಈಗ ನಾಲ್ಕಾರು ತಿಂಗಳಿಗೊಮ್ಮೆ ಬರುತ್ತಿರುವ ಹಣ, ಪ್ರತಿ ತಿಂಗಳೂ ನಿಯಮಿತವಾಗಿ ದೊರೆಯುವಂತಾದರೆ ಅದು ಅವಳ ಬದುಕಿನಲ್ಲಿ ದೊಡ್ಡ ವ್ಯತ್ಯಾಸವನ್ನೇ ತರಬಲ್ಲದು. ಯಾವುದೇ ಕಮಿಷನ್ ಪಡೆಯದೆ ಅಂಚೆಯಣ್ಣ ತನ್ನ ಹಣವನ್ನು ತನಗೆ ನೀಡುವಂತೆ ಆಗುವುದೇ ಅವಳ ದೃಷ್ಟಿಯಲ್ಲಿ ಪಾರದರ್ಶಕ ಆಡಳಿತ. ಸಣ್ಣ ರೈತ ಕರಿಯಯ್ಯ ಕೇಳುವುದು, ಸಕಾಲದಲ್ಲಿ ಉತ್ತಮ ಗುಣಮಟ್ಟದ ಬೀಜ ಸರಬರಾಜು, ಸಾಲ ಸೌಲಭ್ಯ, ಒಳ್ಳೆಯ ವಿದ್ಯುತ್ ಪೂರೈಕೆ, ಶೋಷಣೆರಹಿತ ಮಾರುಕಟ್ಟೆ ವ್ಯವಸ್ಥೆ.
ನನ್ನ ಕೈಗಾರಿಕೋದ್ಯಮಿ ಗೆಳೆಯರೊಬ್ಬರು ವಿಭಿನ್ನ ನಿಲುವು ಹೊಂದಿದ್ದಾರೆ. ಸರ್ಕಾರ ಉತ್ತಮ ಮೂಲಸೌಲಭ್ಯ ಒದಗಿಸಿದರೆ ಅದೇ ಅವರ ಪಾಲಿಗೆ ಒಳ್ಳೆಯ ಆಡಳಿತ. ಕಳಪೆ ರಸ್ತೆಗಳು, ದುರ್ಬಲ ಸಂಪರ್ಕ ವ್ಯವಸ್ಥೆ, ವಿದ್ಯುತ್ ಕೊರತೆ, ಬೆಳೆಯುತ್ತಿರುವ ಕೈಗಾರಿಕೆಗಳಿಗೆ ತಕ್ಕಂತಹ ನೀತಿ ನಿರೂಪಣೆಯ ಕೊರತೆ ಬಗ್ಗೆ ಅವರಿಗೆ ರೋಷವಿದೆ. ಜನಸ್ನೇಹಿ ನೀತಿಗಳನ್ನು ಹೊಂದಿದ ಬಡವರ ಪರ ಸರ್ಕಾರ ಉತ್ತಮ ಆಡಳಿತ ನೀಡಬಲ್ಲದು ಎನ್ನುತ್ತಾರೆ ನನ್ನ ಸಹ ಕಾರ್ಯಕರ್ತರೊಬ್ಬರು. ಸರ್ಕಾರದ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲೂ ಸೂಕ್ತವಾದ ಸಾಮಾಜಿಕ ಹೊಣೆಗಾರಿಕೆ ಇರುವಂತೆ ನೋಡಿಕೊಂಡರೆ ಅದೇ ಅವರ ದೃಷ್ಟಿಯಲ್ಲಿ ನಿಜವಾದ ಪಾರದರ್ಶಕತೆ.
24 ಗಂಟೆಯೂ ತಮ್ಮ ಮನೆಯ ನಲ್ಲಿಯಲ್ಲಿ ನೀರು ಬರುತ್ತಿರಬೇಕು ಮತ್ತು ದಿನವಿಡೀ ವಿದ್ಯುತ್ ಸೌಲಭ್ಯ ಇರಬೇಕು ಎಂದು ಗೃಹಿಣಿ ಶರ್ಮಿಳಾ ಬಯಸುತ್ತಾರೆ. ವಿದ್ಯುತ್ ಕೊರತೆ ಇದ್ದರೆ ರೆಫ್ರಿಜಿರೇಟರ್‌ನಲ್ಲಿ ಇಟ್ಟ ಆಹಾರ ಪದಾರ್ಥ ಕೊಳೆಯುತ್ತದೆ ಮತ್ತು ಸಂಜೆ ಹೊತ್ತು ತಮ್ಮ ನೆಚ್ಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಚಿಂತೆ ಅವರಿಗೆ. ಬೆಂಗಳೂರಿನ ಬೀದಿಗಳಲ್ಲಿ ಹಣ್ಣು ಮಾರುವ ಮುನಿಸ್ವಾಮಿ, ಯಾವತ್ತು ಬೀಟ್ ಪೊಲೀಸರು ತನ್ನನ್ನು ಲಂಚ ಕೇಳದಿರುವ ದಿನ ಬರುತ್ತದೋ ಎಂದು ಕನಸು ಕಾಣುತ್ತಿದ್ದಾನೆ.
ಜನದಟ್ಟಣೆಯ ಬೀದಿ ಬದಿಯಲ್ಲಿ ನಿಂತು ವ್ಯಾಪಾರ ಮಾಡುವುದಕ್ಕಾಗಿ ದಿನಾ ತಾನು ಕೊಡುವ 25 ರೂಪಾಯಿ ಲಂಚ ಉಳಿಯುವಂತಾದರೆ ಅದೇ ಒಳ್ಳೆಯ ಆಡಳಿತ ಎನ್ನುತ್ತಾನೆ ಅವನು.
ತಿಪ್ಪೇಶ ಮೈಸೂರಿನ ಮುಖ್ಯ ರಸ್ತೆಗಳಲ್ಲಿ ಹೂಕುಂಡ, ಗಿಡ ಮಾರುತ್ತಾನೆ. ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಯಾವುದೇ ಲಂಚ ಕೊಡದಂತಾಗಲಿ ಮತ್ತು ಅವರಾಗಲೀ ಸ್ಥಳೀಯ ರಾಜಕಾರಣಿಗಳಾಗಲೀ ಇಷ್ಟ ಬಂದಾಗ ತನ್ನಿಂದ ಪಡೆಯುವ ಕುಂಡ ಮತ್ತು ಗಿಡಗಳಿಗೆ ಸೂಕ್ತ ಹಣ ತನಗೆ ಪಾವತಿಸುವಂತಾಗಲಿ ಎಂದಾತ ಬೇಡಿಕೊಳ್ಳುತ್ತಾನೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅರೆಕಾಲಿಕ ಚಾಲಕನಾಗಿರುವ ರಾಮು ಪಾಲಿಗೆ, 5 ಲಕ್ಷ ರೂಪಾಯಿ ಲಂಚವನ್ನೇ ಕೊಡದೆ ತನ್ನ ಕೆಲಸ ಕಾಯಂ ಆಗಿಬಿಟ್ಟರೆ ಅದಕ್ಕಿಂತ ಒಳ್ಳೆಯ ಆಡಳಿತ ಮತ್ತೊಂದಿಲ್ಲ.
ಉತ್ತಮ, ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ನಮ್ಮ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ನಾವು ಪ್ರತಿಯೊಬ್ಬರೂ ಆ ಬಗ್ಗೆ ನಮ್ಮದೇ ಆದ ನಿಲುವುಗಳನ್ನು ಹೊಂದಿದ್ದೇವೆ. ಉತ್ತಮ ಆಡಳಿತದ ವ್ಯಾಖ್ಯಾನ ಜನರಿಂದ ಜನರಿಗೆ ಬದಲಾದರೂ ಸ್ಪಂದನಶೀಲ, ಜನಸ್ನೇಹಿ,ಒಳ್ಳೆಯ ಆಡಳಿತ ನೀಡಲು ಬದ್ಧವಾಗಿರುವ ಸರ್ಕಾರ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಆಡಳಿತದ ಪರಿಕಲ್ಪನೆಯೇನೂ ನಮಗೆ ಹೊಸದಲ್ಲ. ಅದು ಮಾನವನ ನಾಗರಿಕತೆಯಷ್ಟೇ ಹಳೆಯದು. ಸರಳವಾಗಿ ಹೇಳಬೇಕೆಂದರೆ, ಆಡಳಿತ ಎಂದರೆ ನಿರ್ಧಾರ ಕೈಗೊಳ್ಳುವುದು ಮತ್ತು ಅದನ್ನು ಅನುಷ್ಠಾನಗೊಳಿಸುವ (ಅನುಷ್ಠಾನಗೊಳಿಸದೇ ಇರುವ) ಒಂದು ಪ್ರಕ್ರಿಯೆ. ಸಾರ್ವಜನಿಕ ಸಂಸ್ಥೆಗಳು ಸಾರ್ವಜನಿಕ ವ್ಯವಹಾರಗಳನ್ನು ಹಾಗೂ ಸಾರ್ವಜನಿಕ ಸಂಪನ್ಮೂಲಗಳನ್ನು ಹೇಗೆ ನಿರ್ವಹಿಸುತ್ತವೆ ಎಂಬುದರ ಮೇಲೆ ಇಂದಿನ ದಿನಗಳಲ್ಲಿ ಅದನ್ನು ವ್ಯಾಖ್ಯಾನಿಸಲಾಗುತ್ತಿದೆ. ಒಂದು ಸಮಾಜದಲ್ಲಿ ಆಯ್ದ ಗುಂಪುಗಳಿಗಿಂತ ಜನಸಮೂಹದ ಅಗತ್ಯಗಳಿಗೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಅಥವಾ ಆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದರ ಮೇಲೆ ಈ ಪರಿಕಲ್ಪನೆ ಬೆಳೆದು ಬಂದಿದೆ. ಆದ್ದರಿಂದ ನಾವು ಒಂದು ಆಡಳಿತದ ಬಗ್ಗೆ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ, ನಿರ್ಧಾರ ತಳೆಯುವಲ್ಲಿ ಹಾಗೂ ಅದನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಭಾಗಿಯಾದ, ಇಲ್ಲವೇ ಆಗುವ ಎಲ್ಲ ಅಧಿಕೃತ, ಅನೌಪಚಾರಿಕ ಘಟಕಗಳನ್ನೂ ಗಮನದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ.
ಸರ್ಕಾರವನ್ನು ಹೊರತುಪಡಿಸಿ ಆಡಳಿತದಲ್ಲಿ ಬೇರೆ ಯಾರು ಯಾರು ಪಾಲ್ಗೊಳ್ಳುತ್ತಾರೆ ಎನ್ನುವುದು ಅದು ಯಾವ ಸ್ತರದ ಸರ್ಕಾರ ಎನ್ನುವುದನ್ನು ಅವಲಂಬಿಸಿರುತ್ತದೆ. ಪ್ರಭಾವಿ ಭೂಮಾಲೀಕರು, ರೈತ ಸಂಘಟನೆಗಳು, ಸಹಕಾರಿ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಧಾರ್ಮಿಕ ನಾಯಕರು, ಹಣಕಾಸು ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸೇನೆ ಇತ್ಯಾದಿಗಳು ಸರ್ಕಾರವನ್ನು ಹೊರತುಪಡಿಸಿದ ಅಂತಹ ಘಟಕಗಳು. ಇವೆಲ್ಲವುಗಳ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳು, ವಶೀಲಿದಾರರು, ಅಂತರ ರಾಷ್ಟ್ರೀಯ ದೇಣಿಗೆದಾರರು, ಬಹುರಾಷ್ಟ್ರೀಯ ನಿಗಮಗಳು ನೀತಿ ನಿರ್ಧಾರದಲ್ಲಿ ಪಾತ್ರ ವಹಿಸಬಹುದು ಅಥವಾ ಅಂತಹ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದು.
ಒಂದು ಅಧಿಕೃತ ಸರ್ಕಾರಿ ಸಂರಚನೆಯು, ನಿರ್ಧಾರ ತಳೆಯಲು ಹಾಗೂ ಅದನ್ನು ಅನುಷ್ಠಾನಗೊಳಿಸಲು ಸೂಕ್ತ ಮಾರ್ಗೋಪಾಯವನ್ನು ಕಲ್ಪಿಸುತ್ತದೆ. ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಸಲಹಾ ಮಂಡಳಿಯಂತಹ ಅನೌಪಚಾರಿಕ ಸಲಹೆಗಾರರೂ ಇರುತ್ತಾರೆ. ನಗರ ಪ್ರದೇಶಗಳಲ್ಲಿ ಭೂ ಮಾಫಿಯಾದಂತಹ ಸಂಘಟಿತ ಅಪರಾಧ ಕೂಟಗಳು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಬಹುದು. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಪ್ರಭಾವಿಯಾದ ಕುಟುಂಬಗಳು ಇಂತಹ ಕೆಲಸವನ್ನು ನಿರ್ವಹಿಸಬಹುದು. ಅಂತಹ ಅನೌಪಚಾರಿಕ ನಿರ್ಧಾರಗಳು ಕೆಲವೊಮ್ಮೆ ಭ್ರಷ್ಟ ವ್ಯವಸ್ಥೆಗೆ ಎಡೆಮಾಡಬಹುದು.
ವಿಶ್ವಸಂಸ್ಥೆಯ ಪ್ರಕಾರ, ಉತ್ತಮ ಆಡಳಿತ 8 ಪ್ರಮುಖ ಲಕ್ಷಣಗಳನ್ನು ಹೊಂದಿರುತ್ತದೆ. ಅದು ಸಹಭಾಗಿತ್ವ, ಬಹುಮತ ಕೇಂದ್ರಿತ, ಜವಾಬ್ದಾರಿಯುತ, ಪಾರದರ್ಶಕ, ಸಂವೇದನಶೀಲ, ಪರಿಣಾಮಕಾರಿ ಮತ್ತು ಸಮರ್ಥ, ನಿಷ್ಪಕ್ಷಪಾತ ಹಾಗೂ ಸಮಗ್ರವಾಗಿದ್ದು ಕಾನೂನು ಪಾಲನೆಗೆ ಪೂರಕವಾಗಿ ಇರಬೇಕು. ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಭ್ರಷ್ಟಾಚಾರದ ಪ್ರಮಾಣ ಇಳಿಕೆ, ಅಲ್ಪಸಂಖ್ಯಾತರ ದೃಷ್ಟಿಕೋನ ಮತ್ತು ತೀವ್ರ ನೊಂದವರ ದನಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಭರವಸೆಯನ್ನು ಅದು ನೀಡಬೇಕು. ಸಮಾಜದ ಇಂದಿನ ಮತ್ತು ಭವಿಷ್ಯದ ಅಗತ್ಯಗಳಿಗೆ ಸ್ಪಂದಿಸುವಂತೆ ಇರಬೇಕು.
ನಮ್ಮ ನಿಜವಾದ ಬದುಕಿನಲ್ಲಿ ಇದರ ಅರ್ಥ ಏನೆಂದರೆ, ಅಧಿಕಾರಿಗಳ ವರ್ಗಾವಣೆ ಚುನಾಯಿತ ರಾಜಕಾರಣಿಗಳ ಇಷ್ಟಾನಿಷ್ಟಗಳಿಗೆ ತಕ್ಕಂತೆ ಇರಬಾರದು. ಅವರು ನಿರ್ಭಯವಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಅವಕಾಶ ಇರಬೇಕು. ಒಟ್ಟಾರೆ ಸಂಗತಿಗಳು ನ್ಯಾಯೋಚಿತವಾಗಿದ್ದು, ನಾಗರಿಕ ಸಮಾಜಕ್ಕೆ ದೃಷ್ಟಿಗೋಚರವಾಗುವ ರೀತಿಯಲ್ಲಿ ಇರಬೇಕು. ನಿರ್ಧಾರ ಕೈಗೊಳ್ಳುವ ಹಾದಿಯಲ್ಲಿ ಜಾತಿ ಮತ್ತು ಧರ್ಮ ಸಹ ಬರಬಾರದು. ಅಧಿಕಾರ ಎಂಬುದು ಯಾವುದೇ ಹೊಣೆಗಾರಿಕೆಯೂ ಇಲ್ಲದ ರಾಜಕಾರಣಿಗಳ ಸಂಬಂಧಿಕರ ಹತೋಟಿಯಲ್ಲಿ ಇರುವಂತೆ ಆಗಬಾರದು. ಅಂತರ ರಾಜ್ಯ ವಿಷಯಗಳು ಅಥವಾ ವಿವಾದಗಳನ್ನು ಸಾಕ್ಷ್ಯ ಮತ್ತು ಕಾರಣಗಳನ್ನು ಆಧರಿಸಿ ಬಗೆಹರಿಸಬೇಕೇ ಹೊರತು, ಕೇವಲ ರಾಜಕೀಯ ನಿರ್ಬಂಧಗಳಿಂದ ಅಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ, ನಮ್ಮ ನೀತಿಗಳು ಕೆಲವೇ ವ್ಯಕ್ತಿಗಳ, ಸಂಸ್ಥೆಗಳ ಹಿತಾಸಕ್ತಿಗೆ ತಕ್ಕಂತೆ ಇರದೆ ಇಡೀ ಜನಸಮೂಹ, ಅದರಲ್ಲೂ ಬಡತನದ ಅಂಚಿನಲ್ಲಿ ಇರುವವರು ಹಾಗೂ ನೊಂದವರನ್ನು ಗುರಿಯಾಗಿ ಇಟ್ಟುಕೊಂಡಿರಬೇಕು.
ಲೋಕಾಯುಕ್ತ, ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗದಂತಹ ಸಂಸ್ಥೆಗಳು ಪ್ರಭುತ್ವದ ನಿಯಂತ್ರಣದಿಂದ ಮುಕ್ತವಾಗಿ, ಸರ್ಕಾರದ ಕಾವಲುಪಡೆಗಳಂತೆ ಕಾರ್ಯ ನಿರ್ವಹಿಸಬೇಕು. ಹಾಗೆಂದರೆ, ನಾಗರಿಕ ಗುಂಪುಗಳು ಮತ್ತು ನಾಗರಿಕ ಸಂಘಟನೆಗಳು ಆಡಳಿತದ ವಿವಿಧ ಆಯಾಮಗಳಲ್ಲಿ ಸಕ್ರಿಯವಾಗಿ ಹಾಗೂ ಸಮರ್ಥವಾಗಿ ಪಾಲ್ಗೊಳ್ಳುವುದು ಎಂದರ್ಥ. ಅದು, ಶಾಸನಬದ್ಧ ಸಮಿತಿಗಳ ಸದಸ್ಯರಾಗುವ ಮೂಲಕ ವಿವಿಧ ಸಚಿವಾಲಯಗಳಿಗೆ ಅಧಿಕೃತ ಹಾಗೂ ಅನೌಪಚಾರಿಕ ಸಲಹೆಗಾರರ ಪಾತ್ರ ನಿರ್ವಹಿಸುವುದು ಸಹ ಆಗಿರಬಹುದು. ಪೊಲೀಸ್ ಸಂಸ್ಥಾಪನಾ ಮಂಡಳಿಯಂತಹ ಘಟಕಗಳು ನಿಜಕ್ಕೂ ಸ್ವತಂತ್ರವಾಗಿದ್ದು ರಾಜಕೀಯ ಮಧ್ಯಪ್ರವೇಶದಿಂದ ಮುಕ್ತವಾಗಿರುವುದೂ ಉತ್ತಮ ಆಡಳಿತ ಎನಿಸಿಕೊಳ್ಳುತ್ತದೆ.
ಇವೆಲ್ಲವೂ ಕಾರ್ಯರೂಪಕ್ಕೆ ಬರಬೇಕಾದರೆ ನಮ್ಮ ಇಂದಿನ ರಾಜಕಾರಣಿಗಳು ಎಂದಿನಂತೆ ಅದೇ ಹಳೆಯ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಆಗದು. ಇಡೀ ರಾಜಕೀಯ ಆಳ್ವಿಕೆಗೇ ಅವರು ಹೊಸ ರೂಪ ಕೊಡಬೇಕಾಗುತ್ತದೆ. ಆಗ ಆರ್ಥಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸರ್ಕಾರಗಳ ಸಾಮರ್ಥ್ಯ ಸಾರ್ವಜನಿಕ ಪರಿಶೀಲನೆಗೆ ಒಳಪಡುತ್ತದೆ. ನೀತಿ ನಿರೂಪಣೆಯಲ್ಲಿ ಸರ್ಕಾರಗಳ ಸಾಮರ್ಥ್ಯ ಮತ್ತು ಅವುಗಳ ಪರಿಣಾಮಕಾರಿ ಜಾರಿಯ ಮೇಲ್ವಿಚಾರಣೆಗೆ ಅವಕಾಶ ಆಗುತ್ತದೆ. ವೈಫಲ್ಯಗಳಿಗೆ ರಾಜಕೀಯ, ಆಡಳಿತಾಂಗ ಎರಡನ್ನೂ ಹೊಣೆ ಮಾಡಲು ಸಾಧ್ಯವಾಗುತ್ತದೆ. ಇವೆಲ್ಲವೂ ಉತ್ತಮ ಶಾಸಕಾಂಗ, ನೀತಿಗಳು, ಕಾರ್ಯಕ್ರಮಗಳು, ಬಜೆಟ್ ಅನುದಾನ ಮತ್ತು ಇತರ ಜನಪರ ಕಾರ್ಯಕ್ರಮಗಳಲ್ಲಿ ಒಳ್ಳೆಯ ಫಲಿತಾಂಶ ನೀಡಬಲ್ಲವು.
ಹೀಗಾಗಿ ಇಂತಹ ವ್ಯವಸ್ಥೆ ಕಾರ್ಯರೂಪಕ್ಕೆ ಬಂದದ್ದೇ ಆದರೆ ಮಾದಿ, ಕರಿಯಯ್ಯ, ಮುನಿಸ್ವಾಮಿ, ತಿಪ್ಪೇಶ, ಶರ್ಮಿಳಾ, ರಾಮು ಅವರಂತಹ ಜನ ಅಂತಿಮವಾಗಿ ತಾವು ಬಯಸುವುದನ್ನು ಪಡೆಯಬಲ್ಲರು. ನಮ್ಮ ಮುಖ್ಯಮಂತ್ರಿ ನೀಡುವ ಒಳ್ಳೆಯ ಆಡಳಿತದ ಭರವಸೆ ಇವೆಲ್ಲದರ ಜೊತೆಗೆ ಇನ್ನೂ ಹೆಚ್ಚಿನದನ್ನು ಒಳಗೊಂಡಿರುತ್ತದೆ. ಐದು ವರ್ಷ ಅಷ್ಟೇನೂ ದೀರ್ಘ ಸಮಯವಲ್ಲ. ಆದ್ದರಿಂದ ಮುಖ್ಯಮಂತ್ರಿ ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅವರು ತಮ್ಮ ಮಾತಿನಂತೆ ನಡೆಯುವರೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.