ಯಾವುದು ಸಮಸ್ಯೆ? ಎಲ್ಲಿದೆ ಪರಿಹಾರ?
Published 31 ಡಿಸೆಂಬರ್ 2012, 19:59 IST Last Updated 31 ಡಿಸೆಂಬರ್ 2012, 19:59 IST ಯಾವುದು ಸಮಸ್ಯೆ? ಎಲ್ಲಿದೆ ಪರಿಹಾರ?
ಅದು 1988ನೇ ಇಸವಿ. ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಬ್ರಹ್ಮಗಿರಿಯಲ್ಲಿನ ಆದಿವಾಸಿಗಳ ನಡುವೆ ನಾನು ನನ್ನ ಬದುಕಿನ ಹೊಸ ಅಧ್ಯಾಯ ಆರಂಭಿಸಿ ಆಗಷ್ಟೇ ಒಂದು ವರ್ಷವಾಗಿತ್ತು. ಸ್ಥಳೀಯ ಆದಿವಾಸಿಗಳಿಗಾಗಿ ನಾವು ಒಂದು ಔಷಧಾಲಯವನ್ನು ತೆರೆದಿದ್ದೆವು.
ಬೆಳಗಿನ ಹೊತ್ತು ಸಾಮಾನ್ಯವಾಗಿ ನಾನು ಅಲ್ಲೇ ಇರುತ್ತಿದ್ದೆ. ಸಮೀಪದ ಆದಿವಾಸಿ ಹಾಡಿಗಳಿಗೆ ಭೇಟಿ ನೀಡುವುದಕ್ಕೆ ಮತ್ತು ಅಲ್ಲಿನ ಜನರೊಟ್ಟಿಗೆ ಕಳೆಯುವುದಕ್ಕೆ ಮಧ್ಯಾಹ್ನದ ನನ್ನ ಸಮಯ ಮೀಸಲಾಗಿ ಇರುತ್ತಿತ್ತು. ಅಂತಹ ಹಾಡಿಗಳಲ್ಲಿ ಒಂದಾಗಿದ್ದ ರಾಜಪುರಕ್ಕೂ ಆಗಾಗ್ಗೆ ತೆರಳಿ ಅಲ್ಲಿನ ಮಹಿಳೆಯರೊಟ್ಟಿಗೆ ಮಾತುಕತೆ ನಡೆಸುತ್ತಿದ್ದೆ. ಇಂತಹ ಸಂದರ್ಭದಲ್ಲಿ, ಅವರೆಲ್ಲ ದಿನಾ 8- 10 ಕಿ.ಮೀ ದೂರ ನಡೆದುಕೊಂಡು ಹೋಗಿ ಕಬಿನಿ ನದಿಯಿಂದ ನೀರು ಹೊತ್ತು ತರುತ್ತಿದ್ದ ವಿಷಯ ನನ್ನ ಗಮನಕ್ಕೆ ಬಂತು. ಇದನ್ನು ಕೇಳಿ ನನಗೆ ಆಘಾತ ಆಯಿತು.
ಇವರೆಲ್ಲ ನೀರಿಗಾಗಿ ಅಷ್ಟೊಂದು ದೂರ ನಡೆದುಕೊಂಡು ಹೋಗಬೇಕಾಗಿದ್ದುದು ಮಾತ್ರವಲ್ಲ, ಈ ಕಾರ್ಯಕ್ಕಾಗಿ ಅದೆಷ್ಟೊಂದು ಸಮಯವನ್ನು ತೊಡಗಿಸಬೇಕಲ್ಲ ಎಂಬ ಸಂಗತಿಯೂ ನನ್ನನ್ನು ಚಿಂತೆಗೀಡು ಮಾಡಿತು. ನಗರದ ಬದುಕಿನಲ್ಲಿ ಸಮಯಾಭಾವದ ಒತ್ತಡದ ಅರಿವಿದ್ದ ನನಗೆ, ಈ ಸಮಸ್ಯೆಗೆ ಏನಾದರೊಂದು ಪರಿಹಾರ ಹುಡುಕಲೇಬೇಕು ಎನಿಸಿತು. ಇಂತಹ ಸಮಸ್ಯೆಯ ಬಗ್ಗೆ ಅರಿತ ಬೇರೆ ಯಾರೇ ಆಗಿರಲಿ ಅದಕ್ಕೆ ಯಾವ ರೀತಿ ತತ್‌ಕ್ಷಣದ ಪ್ರತಿಕ್ರಿಯೆ ತೋರುತ್ತಿದ್ದರೋ ಅದೇ ರೀತಿ ನಾನೂ ಯೋಚಿಸಿದ್ದೆ ಮತ್ತು ಏನನ್ನಾದರೂ ಮಾಡಲೇಬೇಕು ಎಂದು ನಿರ್ಧರಿಸಿದ್ದೆ.
ಕೆಲ ದಿನಗಳ ನಂತರ ಜಿಲ್ಲಾ ಪರಿಷತ್ತಿನ (ಈಗಿನ ಜಿಲ್ಲಾ ಪಂಚಾಯಿತಿ) ಮುಖ್ಯ ಕಾರ್ಯದರ್ಶಿಯನ್ನು (ಈಗಿನ ಸಿ.ಇ.ಒ.ಗಳನ್ನು ಆಗ ಹೀಗೆ ಕರೆಯುತ್ತಿದ್ದರು) ಭೇಟಿ ಮಾಡಿ, ರಾಜಪುರ ಹಾಡಿಗೆ ಕೈಪಂಪ್ ಸಹಿತ ಕೊಳವೆ ಬಾವಿಯ ಅಗತ್ಯ ಇರುವುದನ್ನು ವಿವರಿಸಿದೆ. ಅತ್ಯಂತ ಸಹಾನುಭೂತಿ ಇದ್ದ ಮತ್ತು ಬದ್ಧತೆ ಹೊಂದಿದ್ದ ಅವರು ಕೆಲ ದಿನಗಳಲ್ಲೇ ಹಾಡಿಗೆ ಇವೆರಡನ್ನೂ ಜೋಡಿಸಲು ಕ್ರಮ ಕೈಗೊಂಡರು. `ಅಬ್ಬಾ ಇದೀಗ ಹಾಡಿಯ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಿತು, ಇನ್ನು ಮುಂದೆ ಅಲ್ಲಿನ ಮಹಿಳೆಯರು ಪ್ರತಿ ಬಾರಿ ನೀರಿಗೆ ಹೋಗುವಾಗಲೂ 3- 4 ಗಂಟೆ ವ್ಯಯಿಸಬೇಕಾದ ಪ್ರಮೇಯವೇ ಬರುವುದಿಲ್ಲ' ಎಂದುಕೊಂಡು ನಾನು ಅತ್ಯಂತ ಸಂತಸಗೊಂಡೆ.
ಬಳಿಕ ಔಷಧಾಲಯದ ಕಾರ್ಯದಲ್ಲಿ ಮುಳುಗಿಹೋದ ನನಗೆ, ಮತ್ತೆ ರಾಜಪುರ ಹಾಡಿಗೆ ಭೇಟಿ ನೀಡಲು ಸುಮಾರು ಆರು ತಿಂಗಳುಗಳೇ ಬೇಕಾಯಿತು. ಹೀಗೆ ಹೋಗುವಾಗ, ತಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಕ್ಕೆ ಅಲ್ಲಿನ ಮಹಿಳೆಯರು ನನ್ನನ್ನು ಪ್ರಶಂಸಿಸಬಹುದು ಎಂದು ನಾನು ಭಾವಿಸಿದ್ದೆ. ಎಷ್ಟೇ ಆಗಲಿ ನಾವು ಯಾರಿಗಾಗಿ ಕೆಲಸ ಮಾಡುತ್ತೇವೋ ಅವರ ಬದುಕನ್ನು ಉತ್ತಮಪಡಿಸುವುದೇ ನಿಜವಾದ ಅಭಿವೃದ್ಧಿ ಅಲ್ಲವೇ? ಆದರೆ, ಹಾಡಿಗೆ ಕಾಲಿಟ್ಟ ನನಗೆ ಬೇರೆ ರೀತಿಯ ಸ್ವಾಗತವೇ ಕಾಯ್ದಿತ್ತು.
ನನ್ನನ್ನು ಕಂಡು ಅಲ್ಲಿನ ಮಹಿಳೆಯರಿಗೆ ಸಿಟ್ಟು ಬಂದಿರುವಂತೆ ನನಗೆ ತೋರಿತು. ಅವರಲ್ಲಿ ಅತ್ಯಂತ ವಾಚಾಳಿಗಳಾದ ಬೊಮ್ಮಿ ಮತ್ತು ಮಾದಿಗೆ ಹೆಚ್ಚು ಹೊತ್ತು ತಮ್ಮ ಅಸಮಾಧಾನವನ್ನು ಅಡಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೂ ವಸ್ತುಶಃ ಅವರ ಮನೆ ಬಾಗಿಲಿಗೇ ಕೊಳವೆಬಾವಿ ಬರುವಂತೆ ಮಾಡಿದ ನನ್ನ ಬಗ್ಗೆ ಈ ಹೆಂಗಸರು ಆಕ್ರೋಶಗೊಂಡಿರುವುದು ಯಾಕೆ ಎಂಬುದೇ ನನಗೆ ಅರ್ಥವಾಗಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ನಾನು ಮಾಡಿದ್ದ ಕಾರ್ಯದ ಪರಿಣಾಮ ಏನಾಗಿದೆ ಎಂಬುದು ನನ್ನ ಅರಿವಿಗೆ ಬಂತು. ತಮಗೆಲ್ಲ ಯಾವುದು ಅತ್ಯಂತ ಆಪ್ತವಾಗಿತ್ತೋ ಅದನ್ನೇ ನಾನು ಅವರಿಂದ ಕಿತ್ತುಕೊಂಡಿದ್ದೆ ಎಂದು ಅವರಿಗೆ ನನ್ನ ಬಗ್ಗೆ ತೀವ್ರ ಅಸಮಾಧಾನ ಆಗಿತ್ತು.
ನದಿಯಿಂದ ನೀರು ತರುವ ಸಮಯ ಅವರಿಗೆಲ್ಲ ಅತ್ಯಮೂಲ್ಯವಾದುದಾಗಿತ್ತು. ಆಗ ಮಾತ್ರ ಅವರು ತಮ್ಮ ಮನೆಯಿಂದ, ಮನೆಯವರಿಂದ ಮತ್ತು ಗಂಡಂದಿರಿಂದ ದೂರ ಇರುತ್ತಿದ್ದರು. ತಾವೆಲ್ಲರೂ ಅನುಭವಿಸುತ್ತಿದ್ದ ಕಷ್ಟಸುಖಗಳನ್ನು ಹಂಚಿಕೊಳ್ಳಲು ಅವರಿಗೆಲ್ಲ ಸಿಗುತ್ತಿದ್ದ ಸುಸಮಯ ಅದೊಂದೇ ಆಗಿತ್ತು. ಆಗ ಅವರು ತಮ್ಮ ಬಗ್ಗೆ, ತಾವು ಕಟ್ಟಿಕೊಂಡಿದ್ದ ಕನಸುಗಳ ಬಗ್ಗೆ ಪರಸ್ಪರ ಹೇಳಿಕೊಂಡು, ತಮ್ಮೆಲ್ಲ ಸಮಸ್ಯೆಗಳನ್ನು ಹಂಚಿಕೊಂಡು ಹಗುರಾಗುತ್ತಿದ್ದರು. ಕೆಲವರಿಗಂತೂ ತಮ್ಮ ಕುಡುಕ ಮತ್ತು ಜಗಳಗಂಟ ಗಂಡಂದಿರ ಕಾಟದಿಂದ ಕೊಂಚ ಹೊತ್ತಾದರೂ ಮುಕ್ತಿ ಪಡೆಯಲು ಇದು ಅವಕಾಶ ಮಾಡಿಕೊಡುತ್ತಿತ್ತು. ಅಲ್ಲದೆ, ಬರೀ ನೀರು ಹೊರುವ ಕೆಲಸಕ್ಕಾಗಿ ನಾವು ಇಷ್ಟೆಲ್ಲ ಸಮಯ ತೊಡಗಿಸಬೇಕಲ್ಲ ಎಂಬ ಬೇಸರಕ್ಕೆ ಬದಲಾಗಿ, ಅದನ್ನು ಅವರು ಶಾಂತಿಯಿಂದ ಇರುವ ಮತ್ತು ವಿಶ್ರಾಂತಿ ಪಡೆದುಕೊಳ್ಳುವ ಸಮಯ ಎಂದೇ ಭಾವಿಸಿದ್ದರು.
ಆದರೆ ಖುದ್ದು ತಮ್ಮ ಹಾಡಿಗೇ ಕೊಳವೆಬಾವಿ ಬಂದಿಳಿದ ಬಳಿಕ, ಸ್ನೇಹಿತೆಯರೊಟ್ಟಿಗೆ ಕಳೆಯುತ್ತಿದ್ದ ಇಂತಹ ಸಮಯಕ್ಕೆ ಕೊಕ್ಕೆ ಬಿದ್ದಂತಾಗಿತ್ತು. ಕೊಳವೆ ಬಾವಿಗಳಿಂದಲೇ ನೀರು ತರುವಂತೆ ಗಂಡಂದಿರು ತಾಕೀತು ಮಾಡುತ್ತಿದ್ದರು. ಹೀಗಾಗಿ ಅವರು ಹೆಚ್ಚಿನ ಸಮಯವನ್ನು ಮನೆಗಳಲ್ಲೇ ಕಳೆಯಬೇಕಾಗುತ್ತಿತ್ತು. ಹೀಗೆ ಕೊಳವೆ ಬಾವಿಯು ಅವರ ಖಾಸಗಿ ಸಮಯ, ಏಕಾಂತ, ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಗೆಳತಿಯರ ಸಾಮೀಪ್ಯವನ್ನೆಲ್ಲ ಕಸಿದುಕೊಂಡಿತ್ತು. ತಮ್ಮ ಹಾಡಿಗೆ ಕೊಳವೆ ಬಾವಿ ಸೌಲಭ್ಯ ಕೊಡಿಸುವ ಅಗತ್ಯ ನಿಮಗೇನಿತ್ತು ಎಂದು ಅವರೆಲ್ಲರೂ ಗಟ್ಟಿಸಿ ನನ್ನನ್ನು ಕೇಳುತ್ತಿದ್ದರು. ನಮಗೆ ನೀರಿನ ಸಮಸ್ಯೆ ಇದೆ ಎಂದು ನೀವು ಹೇಗೆ ತಿಳಿದುಕೊಂಡಿರಿ?, ನಮಗೆ ನಿಜವಾಗಲೂ ಏನು ಬೇಕಾಗಿದೆ ಎಂಬುದನ್ನು ನಮ್ಮನ್ನು ಕೇಳಿ ತಿಳಿದುಕೊಳ್ಳುವ ಮನಸ್ಸು ನಿಮಗೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸುತ್ತಿದ್ದರು.
ನಾನು ನನ್ನ ದೃಷ್ಟಿಕೋನ ಮತ್ತು ಹಿನ್ನೆಲೆಯಿಂದಷ್ಟೇ ಸಮಸ್ಯೆಯನ್ನು ಗ್ರಹಿಸಿದ್ದೆ ಮತ್ತು ಅದರ ಅನುಸಾರವೇ ಅದಕ್ಕೊಂದು ಪರಿಹಾರ ಕಂಡುಹಿಡಿಯಲು ಯತ್ನಿಸಿದ್ದೆ. ನೀರಿನ ಅಭಾವ ಮತ್ತು ಅದನ್ನು ಹೊತ್ತು ತರಲು ಮಹಿಳೆಯರು ಗಂಟೆಗಟ್ಟಲೆ ವ್ಯಯಿಸಬೇಕಾದ ಸಮಯ ಅದಷ್ಟೇ ನನಗೆ ಸಮಸ್ಯೆಯಾಗಿ ಕಂಡಿತ್ತು. ಆದರೆ ಅವರು ಅದನ್ನು ನೋಡುತ್ತಿದ್ದ ರೀತಿಯೇ ಬೇರೆಯಾಗಿತ್ತು. ಅವರಿಗೆ ನೀರಿನದು ಒಂದು ಸಮಸ್ಯೆ ಎಂದಾಗಲೀ, ಅಷ್ಟು ದೂರದಿಂದ ಅದನ್ನು ಹೊತ್ತು ತರುವುದು ಕಷ್ಟ ಎಂದಾಗಲೀ ಅನಿಸಿರಲೇ ಇಲ್ಲ. ತಮಗೆ ಸಿಗುತ್ತಿದ್ದ ಅಂತಹ ಪ್ರಶಸ್ತವಾದ ಖಾಸಗಿ ಸಮಯವನ್ನು ಅವರು ಕಳೆದುಕೊಂಡಿದ್ದರು.
ದೂರದಿಂದ ನೀರು ತರುವ ನೆಪದಿಂದ ಮಾತನಾಡುತ್ತಾ ನಡೆದುಕೊಂಡು ಹೋಗುವುದರಲ್ಲಿ, ನದಿ ನೀರಿನಲ್ಲಿ ಮೀಯುವುದರಲ್ಲಿ, ದಡದಲ್ಲಿ ತಮ್ಮ ಬಟ್ಟೆಗಳನ್ನು ಒಗೆದುಕೊಂಡು ಸಾವಕಾಶವಾಗಿ ಮನೆಗೆ ವಾಪಸಾಗುವುದರಲ್ಲಿ ಅವರೆಲ್ಲರ ಸಂತಸ ಅಡಗಿತ್ತು. ಹೀಗೆ ಒಮ್ಮೆ ಮನೆಗೆ ವಾಪಸಾದ ಮೇಲೆ ಮುಗಿಯಿತು, ಮತ್ತೆ ಮನೆಯಲ್ಲಿ ಅವರೆಲ್ಲರ ಕತ್ತೆ ಚಾಕರಿ ಶುರುವಾಗುತ್ತಿತ್ತು.
`ಸುತ್ತಿಗೆ ಹಿಡಿದ ವ್ಯಕ್ತಿಗೆ ಸುತ್ತಮುತ್ತಲೆಲ್ಲ ಬರೀ ಮೊಳೆಗಳೇ ಕಾಣುತ್ತವಂತೆ' ಎಂಬ ಪ್ರಸಿದ್ಧ ಉಕ್ತಿಯೊಂದಿದೆ. ಅದೇ ರೀತಿ, ಅಭಿವೃದ್ಧಿಯನ್ನು ಜಾರಿಗೆ ತರುವಾಗ ನಾವು ಹಲವಾರು ಬಾರಿ ಸಮಸ್ಯೆಗಳನ್ನು ನಮ್ಮ ನೈಪುಣ್ಯ ಮತ್ತು ಸಾಮರ್ಥ್ಯವನ್ನು ಆಧರಿಸಿದ ಸಂಕುಚಿತ ದೃಷ್ಟಿಕೋನದಿಂದಷ್ಟೇ ನೋಡುತ್ತೇವೆ. ನಮಗೆ ಅಭಿವೃದ್ಧಿ ಎಂದರೆ ಏನಿದ್ದರೂ ಶಿಕ್ಷಣ, ಆರೋಗ್ಯ, ಜೀವನೋಪಾಯ, ನೀರು, ನೈರ್ಮಲ್ಯ ಇತ್ಯಾದಿ ಒದಗಿಸುವುದಷ್ಟೇ ಆಗಿರುತ್ತದೆ. ಕೇವಲ ಜನರ ದೈಹಿಕ ಅಗತ್ಯಗಳನ್ನು ಪೂರೈಸುವಷ್ಟಕ್ಕೇ ನಮ್ಮ ಅರಿವನ್ನು ಸೀಮಿತಗೊಳಿಸಿಕೊಂಡು ಬಿಡುವ ನಾವು, ಅವರ ಅಂತರಾಳ, ಮನಸ್ಸು ಮತ್ತು ಆತ್ಮದ ಅಗತ್ಯಗಳನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ.
ಬಡವರಿಗೆ ಮೂಲ ಸೌಕರ್ಯ ಒದಗಿಸುವುದನ್ನೇ ಸರ್ಕಾರಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಹ ಹೆಮ್ಮೆ ಎಂದುಕೊಳ್ಳುತ್ತವೆ. ನಮ್ಮ ಬಳಿ ಏನಿದೆ ಮತ್ತು ನಾವು ಅವರಿಗೆ ಏನು ಮಾಡಬಹುದು ಎಂಬುದನ್ನು ಮಾತ್ರ ಯೋಚಿಸಿ ನಾವು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹೊರಡುತ್ತೇವೆ. ಹೀಗೆ ಮಾಡುವಾಗ ಜನ ತಮಗೆ ಏನು ಬೇಕು ಎಂದುಕೊಂಡಿರುತ್ತಾರೋ ಅದಕ್ಕಿಂತ ಹೆಚ್ಚಾಗಿ, ನಾವು ಅವರಿಗೆ ಏನು ಕೊಡಬೇಕು ಎಂದುಕೊಂಡಿರುತ್ತೇವೋ ಅದಷ್ಟೇ ಅಲ್ಲಿ ಮುಖ್ಯವಾಗಿಬಿಡುತ್ತದೆ. ನಾವು ಸೇವೆ ಒದಗಿಸುತ್ತಿರುವವರಲ್ಲಿ ಒಂದಾಗಿ ಸಹಭಾಗಿಗಳಾಗುವ ಕೆಲಸ ಹೆಚ್ಚಿನ ಸಹನೆ, ವಿನಯ ಮತ್ತು ಸಾಮರ್ಥ್ಯವನ್ನು ಬೇಡುತ್ತದೆ. ಹೀಗಾಗಿ ನಮ್ಮ ಹೊಂದಾಣಿಕೆಯ ವ್ಯಾಪ್ತಿಯನ್ನು ಪರಿಮಿತಿಗೆ ಒಳಪಡಿಸಿಕೊಳ್ಳುವುದರಿಂದ ಸಿಗುವ ಅನುಕೂಲವನ್ನೇ ನಾವು ಹೆಚ್ಚಾಗಿ ಆಯ್ದುಕೊಳ್ಳುತ್ತೇವೆ.
ಆದರೆ ಅಭಿವೃದ್ಧಿ ಎಂಬುದನ್ನು ಸಂಸ್ಥೆಯೊಂದು ಹೇಗೆ ಗ್ರಹಿಸುತ್ತದೆ ಮತ್ತು ಯಾವ ರೀತಿ ಅದರ ಮೌಲ್ಯ ನಿರ್ಧರಿಸುತ್ತದೆ ಎಂದು ನೋಡದೆ, ನಾವು ಕೆಲಸ ಮಾಡುವ ಸಮುದಾಯದ ಜನರ ದೃಷ್ಟಿಕೋನದಿಂದ ಅದನ್ನು ನೋಡಬೇಕಾಗುತ್ತದೆ. ಅವರ ಬೇಕು ಬೇಡಗಳನ್ನು ಕೇಳುವ ತಾಳ್ಮೆ, ಹೀಗೆ ಕೇಳಿದ್ದನ್ನು ಪ್ರತಿಫಲಿಸುವಂತೆ ಮಾಡಲು ಬೇಕಾದ ಸಮಯವನ್ನು ಮೊದಲು ಹೊಂದಿಸಿಕೊಂಡು, ನಂತರವಷ್ಟೇ ಆ ಕಾರ್ಯದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಚಿಂತಿಸಬೇಕಾಗುತ್ತದೆ. ನಮಗೆ ಎದುರಾಗುವ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಬಿಡುತ್ತೇವೆ ಎಂದುಕೊಳ್ಳುವುದು, ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನಮಗೆ ನಾವೇ ಉತ್ತರ ಕೊಟ್ಟುಕೊಳ್ಳಲು ಯತ್ನಿಸುವುದು, ಬಡ ಸಮುದಾಯಗಳ ಜೊತೆ ಕೆಲಸ ಮಾಡುವ ಸಂದರ್ಭದಲ್ಲಿ ನಾವೇ ದೇವರುಗಳು ಎಂಬಂತೆ ಹಮ್ಮಿನಿಂದ ವರ್ತಿಸುವುದನ್ನು ಮೊದಲು ನಾವು ಬಿಡಬೇಕು.
ಕೆಲವು ಸಂದರ್ಭಗಳಲ್ಲಿ ಮೂಗು ತೂರಿಸದೆ ಸುಮ್ಮನಿರುವುದೇ ನಿಜವಾಗಲೂ ಆ ವಿಷಯದಲ್ಲಿ ನಾವು ಒಳ್ಳೆಯ ರೀತಿಯಲ್ಲಿ ಪಾಲ್ಗೊಂಡಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಪರಿಹಾರಗಳನ್ನು, ದೃಷ್ಟಿಕೋನಗಳನ್ನು ಜನರ ಮೇಲೆ ಬಲವಂತವಾಗಿ ಹೇರದಂತೆ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ನಾವು ಕೆಲಸ ಮಾಡುವ ಜನರಲ್ಲಿ ಇರುವ ಜ್ಞಾನವನ್ನು ಗೌರವಿಸುವುದು ಕಲಿತಾಗ, ಅವರು ನಮ್ಮ ಸಮಾನ ಸಹಭಾಗಿಗಳು ಎಂದು ಪರಿಗಣಿಸಿದಾಗ, ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವ ರೀತಿಯಲ್ಲಿ ಅವರನ್ನು ಸಬಲರನ್ನಾಗಿ ಮಾಡಿದಾಗ ಮಾತ್ರ ಪ್ರಜಾಸತ್ತಾತ್ಮಕವಾದ ಹಾಗೂ ಅರ್ಥಪೂರ್ಣವಾದ ಅಭಿವೃದ್ಧಿಯನ್ನು ಸಾಧಿಸಿದಂತೆ ಆಗುತ್ತದೆ. ಅದು ಬಿಟ್ಟು ಬೇರೆ ಇನ್ನಾವುದೇ ರೀತಿಯಲ್ಲಿ ನಾವು ಅಭಿವೃದ್ಧಿ ಸಾಧನೆಗೆ ಮುಂದಾದರೆ, ಅದು ಮೇಲ್ನೋಟದ ಪ್ರಗತಿ ಆಗುತ್ತದೆ ಹೊರತು, ಮಹತ್ವಪೂರ್ಣವಾದ ಅಥವಾ ಮೌಲಿಕವಾದ ಸಾಧನೆ ಆಗಿರುವುದಿಲ್ಲ.