ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ರಾಜ್ಯದ ಜನಸಾಮಾನ್ಯನೊಬ್ಬ ಬರೆಯುತ್ತಿರುವ ಬಹಿರಂಗ ಪತ್ರ ಇದು...
ಮಾನ್ಯರೆ,
ನಾನೊಬ್ಬ ಸಾಮಾನ್ಯ ಪ್ರಜೆ. ನಿಮ್ಮ ಮಾತಿನಲ್ಲೇ ಹೇಳುವುದಾದರೆ, ಹುಟ್ಟಿದಾರಭ್ಯ ಕರ್ನಾಟಕದಲ್ಲೇ ನೆಲೆಸಿರುವ ಲಕ್ಷಾಂತರ `ಜನಸಾಮಾನ್ಯ'ರಲ್ಲಿ ನಾನೂ ಒಬ್ಬ. ಪೌರತ್ವವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಾನು, ಮತದಾನಕ್ಕೆ ಅರ್ಹತೆ ಪಡೆದ ಕಾಲದಿಂದಲೂ ತಪ್ಪದೇ ಪ್ರಾಮಾಣಿಕವಾಗಿ ಮತ ಚಲಾಯಿಸಿಕೊಂಡು ಬರುತ್ತಿದ್ದೇನೆ. ನನ್ನದು ಪಕ್ಕಾ ಆಶಾವಾದ. ಆದ್ದರಿಂದ `ಕೆಟ್ಟ ಪ್ರಜಾಪ್ರಭುತ್ವ'ಕ್ಕೆ ಇರುವ ಒಂದೇ ಪರಿಹಾರವೆಂದರೆ `ಸಮರ್ಥ ಪ್ರಜಾಪ್ರಭುತ್ವ' ಎಂದು ಬಲವಾಗಿ ನಂಬಿದ್ದೇನೆ.
ಉತ್ತಮ ಆಡಳಿತದ ಭರವಸೆಯೊಂದಿಗೆ ಕಾರ್ಯ ನಿರ್ವಹಿಸುವ ಸಂವೇದನಶೀಲ ಮತ್ತು ಸ್ಥಿರ ಸರ್ಕಾರ ಮಾತ್ರ ಜನಕಲ್ಯಾಣದ ಬಗ್ಗೆ ಕಾಳಜಿ ವಹಿಸಬಲ್ಲದು ಎಂಬ ನಂಬಿಕೆ ನನ್ನದು. ಆದರೆ ಕಳೆದ ದಶಕವಂತೂ ನನ್ನಂತಹ ಜನರಿಗೆ ಅತ್ಯಂತ ನಿರಾಶಾದಾಯಕವಾಗಿತ್ತು. ಹೀಗಾಗಿ ಅತ್ಯಂತ ಕಳಕಳಿ, ಸಂಕಟ ಹಾಗೂ ಇದೆಲ್ಲದರ ನಡುವೆಯೂ ಇನ್ನೂ ಉಳಿದುಕೊಂಡಿರುವ ಭರವಸೆಯೊಂದಿಗೆ ನಿಮಗೆಲ್ಲ ಈ ಪತ್ರ ಬರೆಯಲು ಹೊರಟಿದ್ದೇನೆ.
ನಿಮ್ಮಲ್ಲಿ ಹಲವರು ಈ ಪತ್ರವನ್ನು ಓದುವಿರಿ ಮತ್ತು ಇದರಲ್ಲಿ ವ್ಯಕ್ತವಾಗಿರುವ ಭಾವನೆಗಳು ಕೇವಲ ನನ್ನೊಬ್ಬನವಲ್ಲ, ನಿರಂತರವಾಗಿ ಹೆಣಗಾಡುತ್ತಿರುವ ರಾಜ್ಯದ ಲಕ್ಷಾಂತರ ಜನರನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವಿರಿ ಎಂದುಕೊಂಡಿದ್ದೇನೆ. ಕಳೆದ ದಶಕದಲ್ಲಂತೂ ರಾಜ್ಯದ ಜನತೆ ವಿಪರೀತ ರಾಜಕೀಯ ಗದ್ದಲ, ಅನಿಶ್ಚಿತತೆ, ತೀವ್ರ ಭ್ರಷ್ಟಾಚಾರ, ರಾಜಕೀಯ ಬಲದ ದುರ್ಬಳಕೆ ಹಾಗೂ ಇದೆಲ್ಲದರ ಫಲವಾಗಿ ಅಭಿವೃದ್ಧಿಗೆ ಹಿನ್ನಡೆ ಆದದ್ದನ್ನು ಕಣ್ಣಾರೆ ಕಂಡಿದ್ದಾರೆ. ಇಷ್ಟಾದರೂ ಜನ ಭರವಸೆ ಹೊಂದುವ ಮತ್ತು ಚುನಾಯಿತ ಸರ್ಕಾರದ ನೆರವಿನಡಿ ಉತ್ತಮ ಭವಿಷ್ಯವನ್ನು ಎದುರು ನೋಡುವ ಸಮಯ ಸಹ ಇದಾಗಿದೆ ಎಂಬುದು ನನ್ನ ಭಾವನೆ.
ಮುಂದಿನ ಕೆಲ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಲ್ಲ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ನೆರವಾಗಬಲ್ಲ ಕೆಲವು ಕ್ರಮಗಳನ್ನು ಪತ್ರದ ಮೂಲಕ ನಿಮ್ಮ ಮುಂದಿಡಲು ಈ ಅವಕಾಶವನ್ನು ನಾನು ಬಳಸಿಕೊಳ್ಳುತ್ತಿದ್ದೇನೆ.
ಇಲ್ಲಿ ನಾನು ಹೇಳಹೊರಟಿರುವ ಕೆಲ ಮೂಲ ತತ್ವಗಳು ಮತ್ತು ಕ್ರಮಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದವೇನಲ್ಲ. ಅಲ್ಲದೆ ಇವು ನವೀನ ಆಲೋಚನೆಗಳಾಗಲೀ ಅಥವಾ ಕಾರ್ಯಕ್ರಮಗಳಾಗಲೀ ಅಲ್ಲ. ಬದಲಾಗಿ, ದೇಶದ ಸಂವಿಧಾನದಲ್ಲಿ ಈಗಾಗಲೇ ಅಡಕಗೊಂಡಿರುವ ಚಿಂತನೆಗಳೇ ಆಗಿವೆ. ಆದಾಗ್ಯೂ ಈ ನಿಬಂಧನೆಗಳ ಗ್ರಹಿಕೆಯಲ್ಲಿ, ಅವುಗಳನ್ನು ಅಂತರ್ಗತ ಮಾಡಿಕೊಳ್ಳುವಲ್ಲಿ ಮತ್ತು ಜಾರಿಗೆ ತರುವಲ್ಲಿ ಹಲವಾರು ಕಾರಣಗಳಿಂದ ಗಂಭೀರ ಕಂದಕಗಳು ಏರ್ಪಟ್ಟಿವೆ.
ಇಂತಹ ಕಂದಕಗಳನ್ನು ಮುಚ್ಚಿ, ರಾಜ್ಯದಲ್ಲಿ ಉತ್ತಮ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಕೆಳಗಿನ ಅಂಶಗಳು ನೆರವಾಗಬಲ್ಲವು. ಹೀಗಾಗಿ ಇವುಗಳನ್ನು ನೀವು ಮತ್ತು ನಿಮ್ಮ ಪಕ್ಷ ಗಂಭೀರವಾಗಿ ಹಾಗೂ ಪ್ರಾಮಾಣಿಕವಾಗಿ ಪರಿಗಣಿಸುವಿರಿ ಎಂದು ನಂಬಿದ್ದೇನೆ. ಈ ನಂಬಿಕೆಗೆ ಅನುಗುಣವಾಗಿ, ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷದ ಪ್ರಣಾಳಿಕೆ ಇರಲಿ ಎಂಬುದು ನನ್ನ ಮನವಿ. ಅಂತಹ ಬದ್ಧತೆಗಳೆಂದರೆ:
1. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಒಳಗೊಂಡಿರುವ ನಿಬಂಧನೆಗಳನ್ನು ನಿಮ್ಮ ಪಕ್ಷ ಸರಿಯಾಗಿ ಗ್ರಹಿಸಿ ಅದರ ಜಾರಿಗೆ ಅಕ್ಷರಶಃ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ,
ಎ. ಗ್ರಾಮ ಸಭೆಗಳು ನಿರಂತರವಾಗಿ ಮತ್ತು ನ್ಯಾಯೋಚಿತವಾಗಿ ನಡೆಯುತ್ತವೆ. ಇವು ಸಮುದಾಯಗಳ ಅಭಿವೃದ್ಧಿ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಪೂರಕವಾಗಿರುತ್ತವೆ.
ಬಿ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಪ್ರೋತ್ಸಾಹದಾಯಕ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಲು ಗ್ರಾಮ ಸಭೆಗಳು ಪ್ರಮುಖ ವೇದಿಕೆಗಳಾಗುತ್ತವೆ. ಇವು ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಥವಾ ಇತರ ಯಾವುದೇ ಒತ್ತಡಗಳಿಂದ ಮುಕ್ತವಾಗಿರುತ್ತವೆ.
ಸಿ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಗೆ `ಸಮುದಾಯ ಆಧಾರಿತ ಗುತ್ತಿಗೆ' ಪ್ರಮುಖವಾದ ಮಾರ್ಗ ಆಗಿರುತ್ತದೆ.
ಡಿ. ಸ್ಥಳೀಯರನ್ನು ಒಳಗೊಂಡ ಸಮಿತಿಗಳು (ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಗ್ರಾಮೀಣ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕತೆ ಸಮಿತಿ, ಬಾಲ ವಿಕಾಸ ಸಮಿತಿ, ಗ್ರಾಮೀಣ ಅರಣ್ಯ ಸಮಿತಿ ಇತ್ಯಾದಿ) ನಿಜವಾದ ಅರ್ಥದಲ್ಲಿ ಗ್ರಾಮ ಪಂಚಾಯಿತಿಗಳ ಉಪ ಸಮಿತಿಗಳಂತೆ ಕಾರ್ಯ ನಿರ್ವಹಿಸುತ್ತವೆ.
ಇ. ನಗರ ಪ್ರದೇಶಗಳಲ್ಲಿ ವಾರ್ಡ್ ಸಭೆಗಳನ್ನು ನೇಮಕ ಮಾಡಲಾಗುತ್ತದೆ. ಅವು ವಹಿಸಬೇಕಾದ ಪಾತ್ರವನ್ನು, ಜೊತೆಗೆ ಅವುಗಳ ನಡುವಿನ ರಾಜಕೀಯ ಅಂತರವನ್ನು ಸೂಕ್ತ ರೀತಿಯಲ್ಲಿ ಗುರುತಿಸಲಾಗುತ್ತದೆ.
2. ಗ್ರಾಮೀಣ ಪ್ರದೇಶ ಒಳಗೊಂಡಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ನಿಮ್ಮ ಪಕ್ಷ ಪಾರದರ್ಶಕತೆ, ಹೊಣೆಗಾರಿಕೆ, ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಮತ್ತು ಕೆಳಗಿನ ಕ್ರಮಗಳ ಮೂಲಕ ಪ್ರಾಮಾಣಿಕವಾದ ಸಮುದಾಯ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುತ್ತದೆ.
ಎ. ಅಭಿವೃದ್ಧಿ ಕಾರ್ಯ ಹಾಗೂ ಅದರ ಪ್ರಗತಿಯ ಬಗ್ಗೆ ನಿರಂತರವಾಗಿ ವಿಡಿಯೊ ಚಿತ್ರೀಕರಣ
ಬಿ. ಸಮುದಾಯ ಆಧಾರಿತ ಗುತ್ತಿಗೆ ವ್ಯವಸ್ಥೆಯಲ್ಲಿ ಬರಬಹುದಾದ ವಿವಾದ ಮತ್ತು ದೂರುಗಳಿಗೆ ನ್ಯಾಯಸಮ್ಮತ, ಸರಳ, ನಿಷ್ಪಕ್ಷಪಾತವಾದ ಪರಿಹಾರ ಒದಗಿಸುವುದು.
ಸಿ. ಗ್ರಾಮೀಣ ಉದ್ಯೋಗ ಖಾತರಿಯಂತಹ ಯೋಜನೆಗಳ ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯಕ್ಕೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ಮತ್ತು ಉತ್ತೇಜನ.
3.ನಾಗರಿಕ ಬಜೆಟ್ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರುವ ಕಾರ್ಯಕ್ಕೆ ನಿಮ್ಮ ಪಕ್ಷ ಮುಂದಾಗುತ್ತದೆ. ಅದೆಂದರೆ:
ಎ. ಯಾರ ಸಲುವಾಗಿ ಬಜೆಟ್ ಸಿದ್ಧಗೊಂಡಿದೆಯೇ ಅಂತಹ ನಾಗರಿಕರಿಗೆ ಬಜೆಟ್ ಪ್ರತಿ ಸುಲಭವಾಗಿ ಓದುವಂತೆ ಮತ್ತು ಗ್ರಹಿಸುವಂತೆ ಇರುತ್ತದೆ.
ಬಿ. ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಬಜೆಟ್ ಮಾಹಿತಿಯು ಸಾರ್ವಜನಿಕರಿಗೆ ಕಷ್ಟವಿಲ್ಲದೇ ಸಿಗುತ್ತದೆ.
ಸಿ. ಬಜೆಟ್ ಅಭಿವೃದ್ಧಿ ಪ್ರಕ್ರಿಯೆಯು ಜನರ ಸಹಭಾಗಿತ್ವಕ್ಕೆ ಪೂರಕವಾದ ಕ್ರಮಗಳನ್ನು ಒಳಗೊಂಡಿರುತ್ತದೆ.
4. ರಾಜ್ಯದ ಅರಣ್ಯ ಆಧಾರಿತ ಆದಿವಾಸಿ ಜನರಿಗೆ ನಿಮ್ಮ ಪಕ್ಷ ವಿಶೇಷ ಮಹತ್ವ ನೀಡುತ್ತದೆ. ಅದರಲ್ಲಿ ಕೆಳಗಿನ ಅಂಶಗಳು ಸೇರಿರುತ್ತವೆ.
ಎ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ದೃಢ ನಿಶ್ಚಯ
ಬಿ. ಸಮುದಾಯದ ಹಕ್ಕುಗಳ ಜಾರಿಗೆ ಪ್ರೋತ್ಸಾಹ
ಸಿ. ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ.
5. ಬಡತನ ನಿಗದಿಯಲ್ಲಿ ಮತ್ತು ಬಿಪಿಎಲ್/ ಎಪಿಎಲ್ ಕುಟುಂಬಗಳನ್ನು ಗುರುತಿಸುವಲ್ಲಿ ನಿಮ್ಮ ಪಕ್ಷ ಮೌಲ್ಯಾಧಾರಿತ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುತ್ತದೆ. ಎಪಿಎಲ್/ ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ಸ್ಥಳೀಯವಾಗಿ ಬಹಿರಂಗಪಡಿಸುತ್ತದೆ.
6. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸುವ ಮೂಲಕ ಹಸಿವೆ ನಿರ್ಮೂಲನೆಯ ಭರವಸೆ ನೀಡುತ್ತದೆ.
7. ಶಿಕ್ಷಣ ಹಕ್ಕು ಕಾಯ್ದೆಯು ಅರ್ಹ ಬಡವರನ್ನು ಒಳಗೊಳ್ಳುವಂತೆ ನೋಡಿಕೊಳ್ಳುತ್ತದೆ.
8. ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲರಿಗೂ ಸಾರ್ವತ್ರಿಕವಾಗಿ ಆರೋಗ್ಯ ಸೇವೆ ಒದಗಿಸುವ ಸ್ವಯಂ ಬದ್ಧತೆ ಅದಕ್ಕೆ ಇರುತ್ತದೆ.
9. ಮಾಹಿತಿ ಹಕ್ಕು ಕಾಯ್ದೆಯಂತಹ (ಆರ್‌ಟಿಐ) ಸಾರ್ವಜನಿಕ ಹೊಣೆಗಾರಿಕಾ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಬಲಗೊಳಿಸುತ್ತದೆ.
ಆರ್‌ಟಿಐ ಆಯೋಗಕ್ಕೆ ಹೆಚ್ಚು ಬಲ ನೀಡುತ್ತದೆ ಮತ್ತು ಮಾಹಿತಿ ಆಯ್ತುಕರ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
10. ಮುಂಬರುವ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತ ಆಗುವ ನಿಟ್ಟಿನಲ್ಲಿ ಪಕ್ಷವು ನಿರ್ಣಾಯಕ ಪಾತ್ರ ವಹಿಸುತ್ತದೆ. ಹೇಗೆಂದರೆ:
ಎ. ಜಾತಿ, ಹಣ, ಅನುಕೂಲ ಅಥವಾ ಬೆದರಿಕೆ ಒಡ್ಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವ ಕಾರ್ಯದಲ್ಲೂ ತೊಡಗುವುದಿಲ್ಲ.
ಬಿ. ಚುನಾವಣಾ ಸಮಯದಲ್ಲಿ ನಾಗರಿಕರಿಗೆ ನೀಡಿದ ಭರವಸೆಗಳು ಹಾಗೂ ಪಕ್ಷದ ಪ್ರಣಾಳಿಕೆ ಒಳಗೊಳ್ಳುವ ಎಲ್ಲ ಭರವಸೆಗಳು ಕಾನೂನುಬದ್ಧವಾಗಿಯೂ ಸಂವಿಧಾನಾತ್ಮಕವಾಗಿಯೂ ಇರುತ್ತವೆ.
ಸಿ. ಯಾವ ಸಂದರ್ಭದಲ್ಲೂ ಅಪರಾಧ ಹಿನ್ನೆಲೆಯ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ.
ವಿಕೇಂದ್ರೀಕೃತ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆಯನ್ನು ಬಲಗೊಳಿಸಬೇಕಾದ ಈ ಕಾರ್ಯಕ್ಕೆ ನಿಮ್ಮ ಪಕ್ಷ ಆಳವಾದ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ. ನಾಗರಿಕರ ಪಾಲ್ಗೊಳ್ಳುವಿಕೆಯು ನಮ್ಮ ಸಂವಿಧಾನದಲ್ಲಿ ನಿರೂಪಿತವಾಗಿದೆ. ಹೀಗಾಗಿ ಮೇಲೆ ತಿಳಿಸಿರುವ ವಿಷಯಗಳು ಕೇವಲ ನಾಗರಿಕರ ಮನವಿಯಷ್ಟೇ ಅಲ್ಲ, ಅವು ಚುನಾಯಿತ ಸರ್ಕಾರದ ಕರ್ತವ್ಯ ಸಹ. ಆದ್ದರಿಂದ ಅವುಗಳ ಜಾರಿಗೆ ಹೊಸ ವಿಧಾನಗಳನ್ನು ಸೃಷ್ಟಿಸಬೇಕಾದ ಅಗತ್ಯವೇನೂ ಇಲ್ಲ.
ತಮ್ಮ ನಾನಾ ಸಂಕಷ್ಟಗಳ ನಡುವೆಯೂ ರಾಜ್ಯದ ಜನತೆ ಚುನಾವಣೆ ಸಂದರ್ಭದಲ್ಲಿ ಭರವಸೆಯನ್ನು ಉಳಿಸಿಕೊಂಡಿರುತ್ತಾರೆ. ಹೀಗಾಗಿ ಯಾವುದೇ ಒಂದು ಪಕ್ಷಕ್ಕೆ ಉತ್ತಮ ಆಡಳಿತದ ಭರವಸೆ ನೀಡುವ ಮುಕ್ತ ಅವಕಾಶ ಇದೆ. ಅದು ಜನರ ಹಕ್ಕು ಮತ್ತು ಜನರಿಂದ ಆಯ್ಕೆಯಾದ ಸರ್ಕಾರದ ಹೊಣೆಗಾರಿಕೆ. ನಾನೀಗ ಏನೇನು ಕೇಳುತ್ತಿದ್ದೇನೋ ಅವೆಲ್ಲ ನನ್ನ ವ್ಯಾಪ್ತಿ ಮೀರಿದವಲ್ಲ ಎಂಬುದು ನನಗೆ ಗೊತ್ತಿದೆ. ಆದರೆ, ಈ ವಿಷಯದಲ್ಲಿ ನೀವು ಮತ್ತು ನಿಮ್ಮ ಪಕ್ಷ ಎಷ್ಟು ಬದ್ಧತೆ ಹೊಂದಿದ್ದೀರಿ ಎಂಬುದನ್ನು ಇದೆಲ್ಲ ಅವಲಂಬಿಸಿದೆ.
ಜನಸಾಮಾನ್ಯರ ಗೌರವಯುತ ಬದುಕಿಗೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿನ ಅವರ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಭೂತ ಹಕ್ಕುಗಳನ್ನು ಮಾನ್ಯ ಮಾಡಲು ಹಾಗೂ ಅವುಗಳನ್ನು ಸಂರಕ್ಷಿಸಲು ನೀಡಬೇಕಾದ ಭರವಸೆಯನ್ನು ಸಹ ಅದು ಆಧರಿಸಿದೆ. ಈ ನನ್ನ ಕಳಕಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ.
ಕರ್ನಾಟಕದ ಒಬ್ಬ ನಾಗರಿಕನಾಗಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ,
ನಿಮ್ಮ ವಿಶ್ವಾಸಿ
ಜನಸಾಮಾನ್ಯ
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.