ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಮಾನವ ಹಕ್ಕುಗಳಾಗಿ ಮಹಿಳಾ ಹಕ್ಕುಗಳು’ ಎಂಬ ವಿಚಾರ ಸಂಕಿರಣದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮವೊಂದು ಇಡೀ ಮಾನವ ಹಕ್ಕುಗಳ ಚರ್ಚೆಯನ್ನು ತೀವ್ರ ಜಿಜ್ಞಾಸೆಗೆ ಒಳಪಡಿಸಿದ್ದೇ ಅಲ್ಲದೆ, ಅಲ್ಲಿ ನೆರೆದಿದ್ದ ಬಹು ಮಂದಿ, ಕಂಡು-ಕೇಳದ ಸಮಾಜದ ಒಂದು ಕರಾಳ ಮುಖವನ್ನು ದರ್ಶನ ಮಾಡಿಸಿತು.
ಈ ಸಂವಾದದಲ್ಲಿ ಭಾಗವಹಿಸಿದ್ದ ಕೊಳಚೆ ಪ್ರದೇಶದ ನಿವಾಸಿಗಳು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಕಾರ್ಯಕರ್ತರ ಸಂಘಟನೆಗಳ ಪ್ರತಿನಿಧಿಗಳು ಎತ್ತಿದ ಕೆಲ ಪ್ರಶ್ನೆಗಳು ಹಾಗೂ ಹಂಚಿಕೊಂಡ ಅನುಭವಗಳು ನಮ್ಮ ಸಮಾಜದ ಒಳಪದರಗಳಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯ ಹಾಗೂ ಕೃತ್ರಿಮಗಳೆರಡರನ್ನೂ ಕುರಿತ ಅನೇಕ ನಗ್ನ ಸತ್ಯಗಳನ್ನು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದವರ ಮುಂದೆ ತೆರೆದಿಟ್ಟವು.
ಒಂದು ನೆಮ್ಮದಿಯ ವಲಯದಲ್ಲಿ ಜೀವನವನ್ನು ಸವೆಸುತ್ತಿರುವ ಅನೇಕ ಕುಟುಂಬಗಳಿಗೆ ಬದುಕಿನ ಎಲ್ಲ ಅನುಕೂಲಗಳಿಂದ ವಂಚಿತರಾದವರ ಬವಣೆಗಳ ಬಗ್ಗೆ ಅರಿವೂ ಇಲ್ಲ. ಅರಿವಿದ್ದರೂ ಅರ್ಥ ಮಾಡಿಕೊಳ್ಳುವ ವ್ಯವಧಾನವಿಲ್ಲ ಎಂಬ ಭಾವನೆ ಸಂವಾದದ ಗುಪ್ತವಾಹಿನಿಯಂತೆ ಹರಿದಿದ್ದು ಅನೇಕ ಸಂದರ್ಭಗಳಲ್ಲಿ ‘ಜೀವನವೆಂದರೆ ಹೀಗೂ ಉಂಟೆ’ ಎನ್ನುವ ಪ್ರಶ್ನೆ ಅಲ್ಲಿದ್ದವರನ್ನು ಬಹುವಾಗಿ ಕಾಡಿತ್ತು. ತಾವಾಯ್ತು, ತಮ್ಮ ಗುರಿಸಾಧನೆಗಳಾಯ್ತು, ತಮ್ಮ ಸಂಸಾರದ ಸುಖವೊಂದಿದ್ದರೆ ಮತ್ತೇನೂ ಬೇಡ ಎಂಬ ಸೀಮಿತ ದೃಷ್ಟಿಕೋನದಿಂದ ಬದುಕನ್ನು ನೋಡುವವರೇ ಹೆಚ್ಚಾಗಿರುವ ಈ ಸಮಾಜದಲ್ಲಿ ದಿನನಿತ್ಯವೂ ಬಲಾತ್ಕಾರ-ಬಹಿಷ್ಕಾರ-ಬಡತನ ಸಾಮಾಜಿಕ ತಾತ್ಸಾರ, ಒಟ್ಟಿನಲ್ಲಿ ಒಂದು ರೀತಿಯ ಬಂಧಿತ ಬದುಕನ್ನು ನಡೆಸಬೇಕಾದಂಥ ಸ್ಥಿತಿಯಲ್ಲಿರುವವರ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ನಮ್ಮಲ್ಲಿ ಎಷ್ಟು ಜನ ಗಂಭೀರವಾಗಿ ಚಿಂತಿಸಿದ್ದೇವೆ ಎಂಬ ತಪ್ಪಿತಭಾವ ಅಲ್ಲಿದ್ದವರಲ್ಲಿ ಅನೇಕರನ್ನು ಕಾಡಿದ್ದಂತೂ ನಿಜ.
ಈ ಸಂವಾದ ಇಷ್ಟೊಂದು ಪರಿಣಾಮಕಾರಿಯಾಗಲು ಕಾರಣವೆಂದರೆ ಅದರಲ್ಲಿ ಭಾಗವಹಿಸಿದ್ದ ಸಹೋದರಿಯರು ತಮ್ಮ ಅನುಭವಗಳನ್ನು ಹಂಚಿಕೊಂಡ ಧಾಟಿ. ನೇರ-ದಿಟ್ಟ-ಬಿಚ್ಚು ನುಡಿಗಳಲ್ಲಿ ತಾವು ಕಂಡ-ಅನುಭವಿಸಿದ ನೋವಿನ ಸನ್ನಿವೇಶಗಳ ಬಗ್ಗೆ ಅವರು ವಿವರಗಳನ್ನು ನೀಡುತ್ತಾ ಹೋದ ಹಾಗೆಲ್ಲಾ ಹೃದಯಗಳು ಭಾರವಾಗುತ್ತಾ ಹೋದವು. ಕೊಳಚೆ ಪ್ರದೇಶಗಳ ನಿವಾಸಿಗಳನ್ನು ಪ್ರತಿನಿಧಿಸುವ ಸಂಘಟನೆಯ ಕಾರ್ಯಕರ್ತೆ ನಮ್ಮೊಡನೆ ಹಂಚಿಕೊಂಡ ಘಟನೆಯ ವಿವರ ಹೀಗಿತ್ತು.
ಬೆಂಗಳೂರಿನ ಕೊಳಚೆ ಪ್ರದೇಶವೊಂದನ್ನು ನೆಲಸಮ ಮಾಡುವ ಕಾರ್ಯ ನಡೆದಿತ್ತು. ಸುರಕ್ಷಿತ ಪ್ರದೇಶಗಳಲ್ಲಿ ವಾಸಸ್ಥಾನಗಳನ್ನು ನಿರ್ಮಿಸಿಕೊಳ್ಳಲೋ ಅಥವಾ ಬಾಡಿಗೆಗೆ ಪಡೆಯಲೋ ಆಗದಂಥ ಸ್ಥಿತಿಯಲ್ಲಿರುವ ಬಡ ಜನತೆ ತಾನೇ ಈ ಕೊಳಚೆ ಪ್ರದೇಶಗಳನ್ನು ಆಶ್ರಯ ತಾಣಗಳಾಗಿ ಆಯ್ಕೆ ಮಾಡಿಕೊಳ್ಳುವುದು? ನಗರದ ಸೌಂದರ್ಯರಕ್ಷಣೆ ಅಥವಾ ವರ್ಧನೆಯ ಹೆಸರಿನಲ್ಲಿ ಈ ಕೊಳೆಗೇರಿಯನ್ನು ನಿರ್ಮೂಲನ ಮಾಡ ಹೊರಟಾಗ, ಅದರ ಪರಿಣಾಮವಾಗಿ ಆ ಪ್ರದೇಶದಲ್ಲಿ ವಾಸವಾಗಿರುವ ಎಲ್ಲರ ಬದುಕಿನ ನೆಲೆಗಳೂ ಅಲುಗಾಡಿದ್ದು ನಿಜ. ಆದರೆ ಈ ಪರಿಣಾಮವನ್ನು ಅತ್ಯಂತ ಭೀಕರವಾದ ಸ್ವರೂಪದಲ್ಲಿ ಎದುರಿಸಿದ ವರ್ಗವೆಂದರೆ ತುಂಬು ಗರ್ಭಿಣಿಯಾಗಿರಾಗಿದ್ದ ಮಹಿಳೆಯರು.
ಇನ್ನೇನು ಹೆರಿಗೆಯ ಸಮಯ ಸಮೀಪಿಸಿದ್ದ ಒಂದಿಬ್ಬರು ಮಹಿಳೆಯರ ಮನೆಗಳಲ್ಲೇ ಪ್ರಸವ ಕಾರ್ಯವನ್ನು ನಡೆಸಲು ಎಲ್ಲ ತಯಾರಿಗಳು ನಡೆದಿದ್ದವು. ಶಿಶು ಜನನವಾಗುವವರೆಗೂ ಈ ಮಹಿಳೆಯರ ತಲೆಯ ಮೇಲೆ ಇದ್ದ ಸೂರನ್ನು ಹಾಗೂ ಅವರನ್ನು ಸುತ್ತುವರೆದಿದ್ದ ತಡಿಕೆ ಗೋಡೆಗಳನ್ನು ಹಾಗೆಯೇ ಇರಲು ಬಿಡಿ ಎಂದು ಬೇಡಿಕೊಂಡರೂ ನೆಲಸಮ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಮನೆಗಳನ್ನು ಕೆಡುವುತ್ತಾ ಹೋಗಿದ್ದರಿಂದ ಪ್ರಸವ ವೇದನೆಯಿಂದ ನರಳುತ್ತಿದ್ದ ಆ ಮಹಿಳೆಯರಿಗೆ ತೆರೆದ ಜಾಗದಲ್ಲೇ ಹೆರಿಗೆ ಮಾಡಬೇಕಾದಂಥ ಸ್ಥಿತಿ ಉದ್ಭವವಾಯಿತು. ಇಂಥ ಪರಿಸ್ಥಿತಿಯಲ್ಲಿ ಅವರು ಅನುಭವಿಸಿದ ದೈಹಿಕ-ಮಾನಸಿಕ ಯಾತನೆಯ ಸ್ವರೂಪವಾದರೂ ಎಂತಹುದಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಅಸಾಧ್ಯ.
ಮನೆಮಂದಿಯೆಲ್ಲಾ ರಕ್ಷಣೆಗೆ ನಿಂತು ತಾಯಿಯಾಗಲಿರುವ ಹೆಣ್ಣನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸುರಕ್ಷಿತ ಶಿಶು ಜನನ ಪ್ರಕ್ರಿಯೆಗೆ ಒಪ್ಪಿಸುವ ಸ್ಥಿತಿಯನ್ನು, ಒಬ್ಬ ಸ್ತ್ರೀಯ ಬದುಕಿನ ಅತ್ಯಂತ ಖಾಸಗಿಯೆನಿಸುವ ಕ್ಷಣಗಳನ್ನು ಸಾರ್ವಜನಿಕ ದೃಷ್ಟಿಯಿಂದ ತಪ್ಪಿಸಲಾಗದಂಥ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸ್ತ್ರೀಯರ ಬದುಕಿಗೆ ಹೋಲಿಸಿದಾಗ ಮಾನವ ಹಕ್ಕುಗಳ ರಕ್ಷಣೆಯ ಮಾತೆಲ್ಲ ಕೇವಲ ಉಳ್ಳವರಿಗೇ ಸೀಮಿತವೇನೋ ಎನಿಸದೆ ಹೋಗುವುದಿಲ್ಲ.
ತಮ್ಮ ಕಣ್ಣೆದುರೇ ನಡೆದ ಇಂಥ ಅಮಾನವೀಯ ಘಟನೆಯ ವಿರುದ್ಧ ಸಿಡಿದೆದ್ದ ಜಾಗೃತ ಮಹಿಳೆಯರು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರ ರಕ್ಷಣೆಗಾಗಿ ಹೋರಾಟವನ್ನು ನಡೆಸಲು ಸಂಘಟನೆಯನ್ನು ಕಟ್ಟಿದ್ದು ಸಕಾರಾತ್ಮಕವಾದ ಒಂದು ಹೆಜ್ಜೆಯೇ ಸರಿ. ಆದರೆ ದೇಶದೆಲ್ಲೆಡೆ ಹರಡಿರುವ ಕೊಳಚೆ ಪ್ರದೇಶಗಳಲ್ಲಿ ದಿನನಿತ್ಯ ಇಂಥ ಬವಣೆಗಳನ್ನು ಎದುರಿಸುತ್ತಿರುವ ಸ್ತ್ರೀಯರಲ್ಲಿ ಎಷ್ಟು ಮಂದಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವಂಥ ಸಂಘಟನೆಗಳ ಬೆಂಬಲವಿದೆ? ದೇಶದ ನಗರ ಜನಸಂಖ್ಯೆಯಲ್ಲಿ ಶೇಕಡ 23 ರಷ್ಟಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಬದುಕಿನ ಅಯ್ಕೆಗಳೇನು? ಅವರಿಗೆ ಪರ್ಯಾಯ ಜೀವನಾಧಾರಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಹಾಗೂ ನಾಗರಿಕ ಸಮಾಜಕ್ಕೆ ಎಷ್ಟು ಬದ್ಧತೆಯಿದೆ? ಈ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರಗಳಿವೆಯೇ?
ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅತ್ಯಂತ ತೀವ್ರ ಸ್ವರೂಪದಲ್ಲಿ ಎದುರಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ಪರಿಸ್ಧಿತಿಗಳನ್ನು ಕುರಿತ ಮುಕ್ತ ಸಂವಾದ ಈ ವಿಚಾರ ಸಂಕಿರಣದಲ್ಲಿ ನಮ್ಮ ಆತ್ಮಸಾಕ್ಷಿಯನ್ನು ಕಲುಕಿದ ಮತ್ತೊಂದು ಸಂಗತಿ. ಸಮಾಜದ ಸ್ವೀಕೃತಿಯನ್ನು ಪಡೆದ ಲೈಂಗಿಕ ನೆಂಟಸ್ಥನಗಳಿಂದ ಹೊರತಾದ ಲೈಂಗಿಕ ಸಂಬಂಧಗಳು ಅಥವಾ ಲೈಂಗಿಕ ಆಯ್ಕೆಗಳನ್ನು ಕುರಿತ ನಕಾರಾತ್ಮಕ ಧೋರಣೆಗಳು, ಇಂಥ ಆಯ್ಕೆಗಳನ್ನು ಮಾಡಿಕೊಂಡಂಥ ವ್ಯಕ್ತಿಗಳನ್ನು ಸಾರ್ವಜನಿಕರು, ರಾಜ್ಯ ವ್ಯವಸ್ಥೆ ಹಾಗೂ ನ್ಯಾಯಪಾಲನಾ ವ್ಯವಸ್ಧೆ ನಡೆಸಿಕೊಳ್ಳುವ ರೀತಿ ಹಾಗೂ ಅವರ ಪಾಲಿಗೆ ಲಭ್ಯವಿರುವ ಜೀವನ ನಿರ್ವಹಣೆಯ ಆಯ್ಕೆಗಳು ಇವುಗಳನ್ನು ಕುರಿತು ಕಟು ಮಾತುಗಳಲ್ಲಿ ವ್ಯಕ್ತವಾದ ಭಾವನೆಗಳಿಂದ ಮಾನವ ಹಕ್ಕುಗಳ ಪರಿಕಲ್ಪನೆ ಮತ್ತು ಆಚರಣೆಗಳನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಬೇಕೆಂಬ ಸ್ಪಷ್ಟ ಸತ್ಯ ನಮಗೆ ಎದುರಾಯ್ತು.
ಲೈಂಗಿಕ ಅಲ್ಪಸಂಖ್ಯಾತರನ್ನು, ಅವರು ಸಲಿಂಗ ಸಂಬಂಧಿಗಳಾಗಲಿ, ಲಿಂಗ ಬದಲಾವಣೆಯನ್ನು ಮಾಡಿಕೊಂಡವರಾಗಲಿ, ಸಮಾಜ ವಿವಿಧ ರೀತಿಗಳಲ್ಲಿ ಗುರುತಿಸುತ್ತದೆ. ಅವರ ಜೈವಿಕ, ಮಾನಸಿಕ, ಭಾವನಾತ್ಮಕ ಅನನ್ಯತೆಯನ್ನು ಒಪ್ಪಿ ಗೌರವಿಸದೆ ಸಭ್ಯತೆಯ ಎಲ್ಲೆಯನ್ನು ಮೀರಿದ ಭಾಷೆಯನ್ನು ಬಳಸುವುದೋ ಅಥವಾ ಅವಹೇಳನಕಾರಿಯಾದ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳುವುದೋ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಉದಾಹರಣೆಗೆ, ಬೃಹತ್ ನಗರಗಳಲ್ಲಿ ವಾಹನ ದಟ್ಟಣೆ ಸಂಭವಿಸಿದಾಗ ಅಥವಾ ಸಂಚಾರಿ ಸಿಗ್ನಲ್‌ಗಳಲ್ಲಿ ವಾಹನಗಳು ನಿಂತಾಗ ಹಣ ನೀಡಲು ವಾಹನ ಚಾಲಕರನ್ನು ಒತ್ತಾಯಿಸುವ ಅಂತರ್‌ಲಿಂಗಿ ವ್ಯಕ್ತಿಗಳನ್ನು ಕುರಿತಂತೆ ಸಾಮಾನ್ಯವಾಗಿ ವ್ಯಕ್ತವಾಗುವ ಅಸಹನೆ ಹಾಗೂ ಅಸಹ್ಯದ ಭಾವನೆಗಳನ್ನೇ ತೆಗೆದುಕೊಳ್ಳೋಣ.
ಸಾರ್ವಜನಿಕ ಶಿಸ್ತಿಗೆ ಭಂಗ ತರುವಂಥ ಒಂದು ಅನಿಷ್ಟ ಪಿಡುಗಾಗಿ ಈ ಪ್ರವೃತ್ತಿಯನ್ನು ಹೆಚ್ಚು ಕಡಿಮೆ ಎಲ್ಲರೂ ಖಂಡಿಸುತ್ತಾರೆ. ಇತ್ತೀಚೆಗೆ ಅಂತರ್‌ಲಿಂಗಿ ವ್ಯಕ್ತಿಗಳ ಗುಂಪೊಂದು ವಿವಾಹ ಮಂಟಪಕ್ಕೆ ನುಗ್ಗಿ ಅಲ್ಲಿ ಉಂಟುಮಾಡಿದ ಕಿರಿಕಿರಿ ವ್ಯಾಪಕ ಟೀಕೆಗಳಿಗೆ ಗುರಿಯಾಯ್ತು. ನಮ್ಮ ಬದುಕಿನ ಅಸಹಾಯಕತೆ ಅನಿಶ್ಚಿತತೆಗಳೇನೇ ಇರಲಿ, ಮತ್ತೊಬ್ಬರಿಗೆ ತೊಂದರೆ ಉಂಟುಮಾಡುವಂಥ ರೀತಿಯಲ್ಲಿ ವರ್ತಿಸಲು ನಮಗೆ ಹಕ್ಕಿಲ್ಲ ಎನ್ನುವುದು ಸರಿಯೇ. ಆದರೆ ಅವರಿಗೆ ಜೀವನೋಪಾಯಕ್ಕಿರುವ ಅನ್ಯಮಾರ್ಗಗಳಾವುವು? ನಾವು ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕಸ ಗುಡಿಸಲೋ ಅಡಿಗೆ ಕೆಲಸ ಮಾಡಲೋ ಸಿದ್ಧ, ಆದರೆ ನೀವು ಆ ಅವಕಾಶ ನಮಗೆ ಕೊಡುವಿರಾ? ಶಿಕ್ಷಣ ಪಡೆಯಲು ಅವಕಾಶ ನೀಡಿದರೆ, ವಿದ್ಯಾವಂತರಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲಲು ಪ್ರಯತ್ನಿಸುತ್ತೇವೆ, ಆದರೆ ಇಂಥ ಬಹುತೇಕ ಸಂಸ್ಥೆಗಳಲ್ಲಿ ನಮಗೆ ಪ್ರವೇಶಾವಕಾಶವೇ ಇಲ್ಲವಾದ್ದರಿಂದ ನಮಗೆ ವಿದ್ಯೆ ಕಲಿಯುವ ಮಾರ್ಗವೇ ಮುಚ್ಚಿದಂತಾಗಿದೆಯಲ್ಲವೇ? ಭಿಕ್ಷ ಅಥವಾ ಲೈಂಗಿಕ ಕೆಲಸ ಇವೆರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂಥ ಸ್ಧಿತಿಗೆ ನಾವು ಅನೇಕ ಬಾರಿ ತಳ್ಳಲ್ಪಡುತ್ತೇವೆ, ಆಗ ನಾವೇನು ಮಾಡಬೇಕು? ಈ ಪ್ರಶ್ನೆಗಳನ್ನು ಅಂತರ್‌ಲಿಂಗಿ ಸಮುದಾಯವನ್ನು ಪ್ರತಿನಿಧಿಸುವ ಸಹೋದರಿ ನಮ್ಮ ಮುಂದಿಟ್ಟಾಗ ಇದಕ್ಕೇನು ಉತ್ತರ ನೀಡುವುದು ಎಂಬ ಮತ್ತೊಂದು ಪ್ರಶ್ನೆ ಬಹು ಮಂದಿಯನ್ನು ಕಾಡಿರಬೇಕು.
ಈ ಪ್ರಶ್ನೆಗೆ ಉತ್ತರವೇನೂ ಇಲ್ಲದಿಲ್ಲ. ಮೊನ್ನೆಯಷ್ಟೇ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಧೆ ಥಾಯ್ ಏರ್‌ವೇಸ್ ಅಂತರ್‌ಲಿಂಗೀಯ ವ್ಯಕ್ತಿಗಳಿಗೆ ತನ್ನ ವಿಮಾನಗಳಲ್ಲಿ ಗಗನ ಸಖಿಯರ ಹುದ್ದೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡು ಅದನ್ನು ಕಾರ್ಯ ರೂಪಕ್ಕೆ ತರಲು ಹೊರಟಿರುವುದು ಒಂದು ಸಕಾರಾತ್ಮಕ ಹೆಜ್ಜೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರ್‌ಲಿಂಗೀಯ ಜನಸಂಖ್ಯೆಯನ್ನು ಹೊಂದಿರುವ ಥಾಯ್ಲೆಂಡ್ ರಾಷ್ಟ್ರ ಇಂಥದೊಂದು ಹೆಜ್ಜೆಯನ್ನಿಡುವ ಮೂಲಕ ಕೆಲವರಿಗಾದರೂ ಜೀವನ ನಿರ್ವಹಣೆಯ ಮಾರ್ಗವನ್ನು ತೋರಿಸಿದೆ. ಇಂತಹುದೇ ಕ್ರಮಗಳನ್ನು ನಮ್ಮಲ್ಲಿಯೂ ಸರ್ಕಾರಿ ಹಾಗೂ ನಾಗರಿಕ ಸಂಸ್ಧೆಗಳು ಕೈಗೊಂಡಾಗ ಸಮಾಜದಲ್ಲಿ ಒಂದು ಹೊಸ ಅಲೆಯ ಸೃಷ್ಟಿಗೆ ನಾಂದಿಯಾಗಬಹುದೇನೋ?
ಲೈಂಗಿಕ ಕಾರ್ಯಕರ್ತೆಯರು ಎನ್ನುವ ಪದ ಇತ್ತೀಚಿನ ವರ್ಷಗಳಲ್ಲಿ ಗೋಚರತೆಯನ್ನು ಪಡೆದಿದ್ದು, ಅನೇಕ ಬರಹಗಳು - ಭಾಷಣಗಳಲ್ಲಿ ಅದರ ಬಳಕೆಯಾಗುತ್ತಿದ್ದರೂ ಸಮಾಜದ ಕಣ್ಣಲ್ಲಿ ಅವರು ಮಾಡುತ್ತಿರುವ ಕೆಲಸ ಅನೈತಿಕವೇ. ಇಂದಿಗೂ ವೇಶ್ಯೆ ಅಥವಾ ಇತರ ಅವಮಾನ ಸೂಚಕ ಪದಗಳನ್ನು ಬಳಸಿ ಅವರನ್ನು ಸಂಬೋಧಿಸುವ ಮೂಲಕ ಅನೇಕ ಸಾರ್ವಜನಿಕರು ಹಾಗೂ ಆರಕ್ಷಕರು ಅವರು ಮನುಷ್ಯರೇ ಅಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಾರೆ. ಜೀವನ ನಿರ್ವಹಣೆಗಾಗಿ ಅಂತರ್‌ಲಿಂಗಿಯರಾಗಲಿ ಲೈಂಗಿಕ ಕಾರ್ಯಕರ್ತೆಯರಾಗಲಿ ನಿರಂತರವಾಗಿ ಅಪರಾಧಿ ಕೂಟಗಳ, ಕೆಲ ಕಾನೂನು ಪಾಲಕರ ಹಾಗೂ ತಮ್ಮ ವೃತ್ತಿ ಬಾಂಧವರ ಶೋಷಣೆಗೆ ಒಳಪಟ್ಟಿರುತ್ತಾರೆ. ಇಡೀ ಸಮಾಜವನ್ನು ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವ ಭ್ರಷ್ಟಾಚಾರ ಇವರು ಎದುರಿಸಬೇಕಾದಂಥ ಬಹು ದೊಡ್ಡ ಸವಾಲು.
ದುರಂತವೆಂದರೆ ಮಡಿವಂತಿಕೆಯ ಸೆರಗಿನಲ್ಲಿ ತನ್ನನ್ನು ಮುಚ್ಚಿಟ್ಟುಕೊಂಡಿರುವ ನಮ್ಮ ಸಮಾಜದ ಒಂದು ದೊಡ್ಡ ಭಾಗ, ತಾನೇ ಹುಟ್ಟು ಹಾಕಿದ ದ್ವಂದ್ವ ನಿಲುವುಗಳಿಗೆ, ಭ್ರಷ್ಟ ಶಕ್ತಿಗಳಿಗೆ ಹಾಗೂ ಅಮಾನವೀಯ ಮೌಲ್ಯಾಚರಣೆಗಳಿಗೆ ಬಲಿಯಾದವರ ಬಗ್ಗೆ ತಳೆದಿರುವ ಅಸೂಕ್ಷ್ಮ ನಿಲುವುಗಳು.
ಇನ್ನು ಮುಂದಾದರೂ ಮಾನವ ಹಕ್ಕುಗಳ ಬಗ್ಗೆ ಚಿಂತಿಸುವಾಗ ಅಥವಾ ಚರ್ಚಿಸುವಾಗ ನಾವು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸುಗಳಿಂದ ದೂರವಿಟ್ಟಿರುವವರ ಬದುಕಿನ ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳುವಂಥ ಪರಿಸ್ಧಿತಿ ನಿರ್ಮಾಣವಾಗಲಿ ಎಂದು ಆಶಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.