ರಾಜ್ಯದ 14ನೇ ವಿಧಾನಸಭೆಗೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮುಗಿದಿದ್ದು, ಇನ್ನೇನು 223 ಶಾಸಕರು ರಾಜ್ಯದಲ್ಲಿ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ಸನ್ನದ್ಧರಾಗುತ್ತಿದ್ದಾರೆ.
ಮಾಧ್ಯಮಗಳಲ್ಲಿ ನಡೆದ ಬಹುತೇಕ ಚರ್ಚೆಗಳಲ್ಲಿ ಪ್ರಧಾನವಾಗಿ ಹೊರಹೊಮ್ಮುತ್ತಿರುವ ಅಂಶಗಳೆಂದರೆ ಜಾತಿಯ ಪ್ರಭಾವ, ಹಣಬಲ ಅಥವಾ ತೋಳ್ಬಲಗಳ ಪಾತ್ರ ಹಾಗೂ ಆಯಾ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಅಥವಾ ಮಾಡದ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು. ಚುನಾವಣೆಗಳಲ್ಲಿ ಸ್ಪರ್ಧಿಸಿದ ಪಕ್ಷಗಳ ಅಥವಾ ವ್ಯಕ್ತಿಗಳ ಬಲಾಬಲಗಳನ್ನು ಅಳೆಯುತ್ತಾ ಇಂಥವರು `ಸೋಲಬಾರದಿತ್ತು' ಅಥವಾ `ಗೆಲ್ಲಬಾರದಿತ್ತು' ಎನ್ನುವ ನಿಟ್ಟಿನಲ್ಲೂ ಫಲಿತಾಂಶಗಳ ವಿಶ್ಲೇಷಣೆ ನಡೆಯುತ್ತಿದೆ.
ಆದರೆ ಈ ಎಲ್ಲ ಚರ್ಚೆಗಳಲ್ಲೂ ನನಗೆ ಖಾಲಿ ಜಾಗವೊಂದು ಗೋಚರವಾಗುತ್ತಿದೆ. ಅದೇನೆಂದರೆ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಲಿಂಗಾಧಾರಿತ ಮಾನದಂಡಗಳ ಆಧಾರದ ಮೇಲೆ ವಿಮರ್ಶೆಗೆ ಒಳಪಡಿಸದಿರುವುದು.
ಎಲ್ಲೋ ಒಂದೆರಡು ವೇದಿಕೆಗಳು ಅಥವಾ ಕೆಲ ಪತ್ರಿಕೆಗಳಲ್ಲಿ ನಡೆದಿರುವ ಗಂಭೀರವಾದ ಚರ್ಚೆಗಳನ್ನು ಹೊರತುಪಡಿಸಿದರೆ ಕರ್ನಾಟಕದ ಚುನಾವಣಾ ಸಂಧರ್ಭದಲ್ಲಿ ನಡೆದ ಸಂವಾದ-ಚರ್ಚೆಗಳಲ್ಲಿ ಮಹಿಳೆಯರು ಹೆಚ್ಚು-ಕಡಿಮೆ ಅಗೋಚರವಾಗಿದ್ದಾರೆ ಎನ್ನುವುದು ಉತ್ಪ್ರೇಕ್ಷೆಯಾಗಲಾರದು.
ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಅವರ ಆಯ್ಕೆಯ ಪ್ರಮಾಣ ತೀರಾ ಗೌಣವಾಗಿರುವುದೇ ಇದಕ್ಕೆ ಮುಖ್ಯ ಕಾರಣವಿರಬಹುದೇ? ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಮುಂದುವರೆಯುತ್ತಿರುವ ಇದೇ ಪರಿಸ್ಥಿತಿಯ ಬಗ್ಗೆ ರಾಜಕೀಯ ವಲಯವಾಗಲಿ ನಾಗರಿಕ ಸಮಾಜವಾಗಲಿ ಅಷ್ಟೇನೂ ತಲೆಕೆಡಿಸಿಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ವಿಧಾನಸಭಾ ಚುನಾವಣೆಯನ್ನೂ ಈ ಬಾರಿ ನಡೆದಿರುವ ಚುನಾವಣೆಯನ್ನೂ ಹೋಲಿಸಿದರೆ ಗೆದ್ದಿರುವ ಮಹಿಳೆಯರ ಸಂಖ್ಯೆ ಮೂರರಿಂದ ಆರಕ್ಕೇರಿದೆಯಷ್ಟೆ. ರಾಜ್ಯದ ವಿಧಾನಸಭೆಯಲ್ಲಿ 224 ಕ್ಷೇತ್ರಗಳಿದ್ದು ಈ ಬಾರಿ ಸ್ಪರ್ಧಿಸಿದ್ದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 2984. ಇದರಲ್ಲಿ ಮಹಿಳಾ ಅಭ್ಯರ್ಥಿಗಳು ಕೇವಲ 170, ಎಂದರೆ ಶೇ 5.70. 2008ರ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇಕಡ 4.77 ಇದ್ದು, ಈ ಬಾರಿ ಸ್ವಲ್ಪ ಮಾತ್ರ ಹೆಚ್ಚಳ ಉಂಟಾಗಿದೆ.
ಇನ್ನು ಗೆದ್ದವರ ವಿಚಾರಕ್ಕೆ ಬಂದಾಗ ಮಹಿಳೆಯರ ಪ್ರಮಾಣ ಮತ್ತಷ್ಟು ಇಳಿಮುಖವಾಗುತ್ತದೆ. ಈ ಬಾರಿ ಸ್ಪರ್ಧಿಸಿದ್ದ 170 ಮಹಿಳಾ ಅಭ್ಯರ್ಥಿಗಳಲ್ಲಿ ಗೆದ್ದವರು 6 ಮಂದಿ ಮಾತ್ರ, ಎಂದರೆ ಯಶಸ್ಸಿನ ಪ್ರಮಾಣ ಶೇ 3.53. ಹೋದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 107 ಮಹಿಳೆಯರಲ್ಲಿ ಕೇವಲ ಮೂವರು (3) ಗೆದ್ದಿದ್ದು, ಗೆಲುವಿನ ಪ್ರಮಾಣ ಶೇ 2.80ರಷ್ಟು ಮಾತ್ರವಿತ್ತು ನಂತರ ನಡೆದ ಮರು ಚುನಾವಣೆಗಳಲ್ಲಿ ಮೂವರು ಮಹಿಳೆಯರು ಜಯ ಗಳಿಸಿದ್ದರಿಂದ ಅವರ ಸಂಖ್ಯೆ ಆರಕ್ಕೆ ಏರಿತ್ತು. ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತಟಸ್ಥ ಸ್ಥಿತಿಯನ್ನು ತಲುಪಿರುವ ಹಾಗೆ ಕಾಣುತ್ತದೆ.
ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಮಹಿಳಾ ಪ್ರಾತಿನಿಧ್ಯದ ಪ್ರಮಾಣದಲ್ಲಿ ಏರಿಕೆಯಾಗಬೇಕೆಂದು ಪ್ರಗತಿಪರ ಮನಸ್ಸುಗಳೆಲ್ಲ ಆಶಿಸುವುದು ಸಹಜವೇ. ಆದರೆ ಕರ್ನಾಟಕದ ವಿಧಾನಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಇತಿಹಾಸವನ್ನು ಅವಲೋಕಿಸಿದಾಗ ಯಾವುದೇ ಕಾಲ ಘಟ್ಟದಲ್ಲಿ ಮಹಿಳೆಯರ ಪ್ರಮಾಣ ಶೇ 10ನ್ನೂ ತಲುಪಿಲ್ಲ ಎನ್ನುವುದು ವೇದ್ಯವಾಗುತ್ತದೆ.
ಇದುವರೆಗೂ ನಡೆದಿರುವ 14 ವಿಧಾನಸಭಾ ಚುನಾವಣೆಗಳಲ್ಲಿ ಮೊದಲನೆಯ (1952-57) ಮತ್ತು ಎರಡನೆಯ (1957-62) ವಿಧಾನಸಭೆಗಳಲ್ಲಿ ಮಾತ್ರ ಅವರ ಪ್ರಾತಿನಿಧ್ಯ ಕ್ರಮವಾಗಿ ಶೇ 7.26 ಮತ್ತು ಶೇ 8.65 ರಷ್ಟಿದ್ದದ್ದು ತಿಳಿಯುತ್ತದೆ. ಇದನ್ನು ಹೊರತುಪಡಿಸಿದರೆ ಮಿಕ್ಕ ಎಲ್ಲ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 5ರಷ್ಟನ್ನೂ ತಲುಪಿಲ್ಲ.
ಯಾವುದೇ ರಾಜ್ಯದಲ್ಲಿ ಮಹಿಳಾ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಪ್ರಗತಿ ಕಂಡು ಬಂದ ಹಾಗೆಲ್ಲ ಸಾರ್ವಜನಿಕ ಸ್ಥಾನಗಳಲ್ಲಿ ಮಹಿಳೆಯರ ಗೋಚರತೆಯೂ ಹೆಚ್ಚುತ್ತಾ ಹೋಗಬೇಕು ಎನ್ನುವುದು ಒಂದು ನಿರೀಕ್ಷೆ. ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚು ಕಡಿಮೆ ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರ ಸಂಖ್ಯೆ ಮತ್ತು ಸಾಕ್ಷರತೆಯ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ರಾಜ್ಯದ ಜನಸಂಖ್ಯೆ ಮತ್ತು ಮತದಾರರ ಪಟ್ಟಿಯಲ್ಲೂ ಮಹಿಳೆಯರು ಹತ್ತಿರ ಹತ್ತಿರ ಸಮಪ್ರಮಾಣದಲ್ಲಿದ್ದಾರೆ.
ಆದರೆ ಯಾವುದೇ ಜಿಲ್ಲೆಯಲ್ಲೂ ಶೇ10ರಷ್ಟು ಟಿಕೆಟ್ಟುಗಳನ್ನು ಮಹಿಳೆಯರಿಗೆ ಯಾವ ಪಕ್ಷವೂ ನೀಡಿಲ್ಲ ಎನ್ನುವುದು ದುರಂತ. ಅಷ್ಟೇ ಅಲ್ಲ ರಾಜ್ಯದ ಯಾವ ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ, ಕೊಡಗು) ಮಹಿಳಾ ಅಭಿವೃದ್ಧಿ ಸೂಚ್ಯಂಕಗಳು ಅತ್ಯಂತ ಸಕಾರಾತ್ಮಕ ಎನಿಸುವ ದಿಕ್ಕಿನಲ್ಲಿ ಚಲಿಸುತ್ತಿವೆಯೋ ಆ ಜಿಲ್ಲೆಗಳಲ್ಲಿಯೇ ಮಹಿಳೆಯರು ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ಪಡೆದದ್ದು. ಶೇ 53ರಷ್ಟು ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಬಿಹಾರದ ವಿಧಾನಸಭೆಯಲ್ಲಿಯೂ ಮಹಿಳಾ ಸದಸ್ಯರ ಪ್ರಮಾಣ ಶೇ 14ರಷ್ಟಿದೆ.
ಮಹಿಳೆಯರ ವಿಚಾರಕ್ಕೆ ಬಂದಾಗ ಸಾಮಾನ್ಯ ಕ್ಷೇತ್ರಗಳಲ್ಲಾಗಲಿ, ಮೀಸಲು ಕ್ಷೇತ್ರಗಳಲ್ಲಾಗಲಿ ಒಂದೇ ಪರಿಸ್ಥಿತಿಯಿದೆ. ಲಿಂಗ ಆಧಾರಿತ ಅಸಮಾನತೆಗೆ ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ಭೇದಿಸುವುದು ಅಷ್ಟೊಂದು ಸುಲಭವಲ್ಲ ಎನ್ನುವುದಕ್ಕೆ ಮೀಸಲು ಕ್ಷೇತ್ರಗಳಲ್ಲಿ ಕಂಡು ಬಂದ ಟಿಕೆಟ್ ನೀಡಿಕೆಯ ಪರಿ ಒಂದು ಸ್ಪಷ್ಟ ನಿದರ್ಶನ. ಜಾತಿ ಆಧಾರಿತ ಅಸಮಾನತೆಯ ತೀವ್ರ ಹೊಡೆತವನ್ನು ಅನುಭವಿಸುತ್ತಲೇ ಬಂದಿರುವ ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿ, ಅವರಿಗೆ ರಾಜಕೀಯ ಭಾಗವಹಿಸುವಿಕೆಯ ಹಕ್ಕನ್ನು ನೀಡಲೆಂದೇ ಅಸ್ತಿತ್ವಕ್ಕೆ ತರಲಾದ ಮೀಸಲು ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ತೀರಾ ಕಡಿಮೆ ಟಿಕೆಟ್ಟುಗಳನ್ನು ನೀಡಿರುವುದು ಗಮನಿಸಬೇಕಾದ ಮತ್ತೊಂದು ಅಂಶ.
ರಾಜ್ಯದ 36 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಸುಮಾರು ಅರ್ಧದಷ್ಟರಲ್ಲಿ ಮಹಿಳೆಯರಿಗೆ ಸ್ಪರ್ಧೆಯ ಅವಕಾಶವೇ ಇಲ್ಲ. ಪರಿಶಿಷ್ಟ ಬುಡಕಟ್ಟುಗಳಿಗಾಗಿ ಮೀಸಲಿಟ್ಟಿರುವ 15 ಕ್ಷೇತ್ರಗಳಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯಿದ್ದು ಅಂಚಿನಲ್ಲಿರುವ ಸಮುದಾಯಗಳಲ್ಲಿ ಮಹಿಳೆಯರು ಎದುರಿಸಬೇಕಾದ ದುಪ್ಪಟ್ಟು ಅಸಮಾನತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಆಚರಣೆಗಳಲ್ಲಿ ಲಿಂಗನ್ಯಾಯ ಎಲ್ಲಿಯವರೆಗೂ ಒಂದು ಅವಿಭಾಜ್ಯ ಅಂಗವಾಗಿ ಸೇರ್ಪಡೆಯಾಗುವುದಿಲ್ಲವೋ ಅಲ್ಲಿಯವರೆಗೂ ಸಮಾಜದ ಶ್ರೇಣೀಕೃತ ವ್ಯವಸ್ಥೆಯಲ್ಲಿ ತಳಸ್ತರಗಳಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಮಹಿಳೆಯರ ಸೀಮಾಂತೀಕರಣ ಹಾಗೆಯೇ ಮುಂದುವರೆಯುತ್ತದೆ.
ಸಂವಿಧಾನ ರಾಜಕೀಯ ಕ್ಷೇತ್ರದಲ್ಲಿ ಸಮಾನ ಸ್ಪರ್ಧಾ ಅವಕಾಶಗಳನ್ನು ಮಹಿಳೆಯರಿಗೆ ನೀಡಿ ಆರು ದಶಕಗಳೇ ಕಳೆದು ಹೋಗಿದ್ದರೂ ಈ ವ್ಯವಸ್ಥೆ ಮಾತ್ರ ತನ್ನ ಬಾಗಿಲುಗಳನ್ನು ಎಂದೂ ಅವರ ಪಾಲಿಗೆ ಮುಕ್ತವಾಗಿ ತೆರೆದಿಲ್ಲವೇಕೆ? ನಾವು ಕಂಡ ಹಾಗೆ ಪುರುಷ ಸ್ಪರ್ಧಿಗಳಿಗೆ ಯಾವುದೇ ವಿಶೇಷವಾದ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸದ ರಾಜಕೀಯ ಸಂಸ್ಥೆ ಮಹಿಳೆಯರಿಗೆ ಅವಕಾಶಗಳನ್ನು ನೀಡುವ ವಿಚಾರಕ್ಕೆ ಬಂದಾಗ ಮಾತ್ರ ಪುರುಷ ಪಕ್ಷಪಾತಿಯಾಗುವುದೇತಕ್ಕೆ?
ಬಹು ಪ್ರಯಾಸಪಟ್ಟು ಚುನಾವಣಾ ಕಣಕ್ಕೆ ಇಳಿಯುವ ಮಹಿಳೆಯರಲ್ಲಿಯೂ ಬಹು ಮಂದಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಅಥವಾ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಚಾಲ್ತಿಯಲ್ಲಿರುವ ರಾಜಕೀಯ ಪಕ್ಷಗಳಿಂದ ಟಿಕೆಟ್ಟುಗಳನ್ನು ಪಡೆಯಬೇಕು, ಇಲ್ಲವೇ ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಯನ್ನು ಎದುರಿಸಬೇಕು. ಸ್ಪರ್ಧೆಯಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್ಟುಗಳನ್ನು ಪಡೆದ ಮಹಿಳೆಯರಲ್ಲಿಯೂ ಗೆಲ್ಲುವವರ ಪ್ರಮಾಣ ಇಳಿಮುಖವಾಗುತ್ತಿದ್ದು ಇದನ್ನೇ ಮುಂದಿಟ್ಟುಕೊಂಡು ಈ ಪಕ್ಷಗಳು ಅವರಿಗೆ ಅವಕಾಶಗಳನ್ನು ಸೀಮಿತಗೊಳಿಸುತ್ತಿವೆ. ಮಹಿಳೆಯರಿಗೆ ಸೋಲುವ ಅಭ್ಯರ್ಥಿಗಳು ಎಂಬ ಹಣೆಪಟ್ಟಿ ಕಟ್ಟಿ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿವೆ.
ಹಾಗಾದರೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕಾದರೆ ಮಹಿಳೆಯರಿಗೆ ಇರಬೇಕಾದ ಹಿನ್ನೆಲೆ ಮತ್ತು ಬೆಂಬಲ ವ್ಯವಸ್ಥೆಯ ಸ್ವರೂಪವಾದರೂ ಎಂತಹುದು? ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೊರಟಾಗ ನಮ್ಮೆದುರಿಗೆ ತೆರೆದಿಟ್ಟುಕೊಳ್ಳುವ ಒಂದು ಸತ್ಯವೆಂದರೆ, ಮಹಿಳಾ ಆಕಾಂಕ್ಷಿಗಳಿಗೆ ವಿಶೇಷವಾದ ಗುಣಗಳಾಗಲಿ ಅರ್ಹತೆಗಳಾಗಲಿ ಇರಲೇಬೇಕೆನ್ನುವ ಪರಿಸ್ಥಿತಿ ರಾಜಕೀಯದಲ್ಲಿ ಇಲ್ಲ ಎನ್ನುವುದು. ಸ್ವಸಾಮರ್ಥ್ಯವೊಂದನ್ನೇ ಬಂಡವಾಳವಾಗಿರಿಸಿಕೊಂಡು ಮಹಿಳೆಯರು ರಾಜಕೀಯ ಪ್ರವೇಶ ಮಾಡುವುದು ಸಮಕಾಲೀನ ರಾಜಕಾರಣದಲ್ಲಿ ಹೆಚ್ಚು ಕಡಿಮೆ ಅಸಾಧ್ಯವೆನ್ನುವುದು ಒಂದು ಸ್ಥಾಪಿತ ಸತ್ಯ. ರಾಜಕೀಯ ಅನುಭವವಾಗಲಿ ಕ್ಷೇತ್ರದ ಅಭಿವೃದ್ಧಿಗಾಗಿ ಆಕೆ ನೀಡಿರುವ ಕೊಡುಗೆಯಾಗಲಿ ಅನೇಕ ಸಂದರ್ಭಗಳಲ್ಲಿ ಗಣನೆಗೂ ಬರುವುದಿಲ್ಲ.
ಮಹಿಳೆಯೋರ್ವಳ ರಾಜಕೀಯ ಪ್ರವೇಶವನ್ನು ನಿರ್ಧರಿಸಲು ಅಗತ್ಯವಾದ ಅಂಶಗಳೆಂದರೆ ರಾಜಕೀಯ ಪಕ್ಷದ ಕೃಪಾಕಟಾಕ್ಷ, ರಾಜಕೀಯ ಮುಖಂಡರ ಒಡನಾಟ, ಆರ್ಥಿಕವಾಗಿ ಅನುಕೂಲಕರ ಪರಿಸ್ಥಿತಿಯಲ್ಲಿರುವ ಕುಟುಂಬ, ಚರ ಮತ್ತು ಅಚರ ಆಸ್ತಿಗಳ ಒಡೆತನ, ಆಕೆಯ ಅಥವಾ ಕುಟುಂಬದ ಇತರ ಸದಸ್ಯರ ಪೋಷಕತ್ವದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳು, ಮಹಿಳಾ ಸಂಘಗಳು ಅಥವಾ ಇತರ ಉದ್ದಿಮೆಗಳು. ಕೆಲವು ಸಂದರ್ಭಗಳಲ್ಲಿ ಓರ್ವ ಮಹಿಳಾ ಆಕಾಂಕ್ಷಿ ಕ್ಷೇತ್ರದಲ್ಲಿ ಎಷ್ಟು ಪ್ರಭಾವಶಾಲಿಯಾಗಿ ಜನರೊಡನೆ ಒಡನಾಟವನ್ನು ಹೊಂದಿದ್ದಾಳೆ ಅಥವಾ ಅದರ ಅಭಿವೃದ್ಧಿಗಾಗಿ ಶ್ರಮಿಸಿದ್ದಾಳೆ ಎನ್ನುವ ಅಂಶವೂ ಆಕೆಯ ಆಯ್ಕೆಯನ್ನು ನಿರ್ಧರಿಸಬಹುದು.
ರಾಜ್ಯ ರಾಜಕಾರಣದ ಮಾತಿರಲಿ, ನಿಗದಿತ ಪ್ರಮಾಣದ ಮಹಿಳಾ ಮೀಸಲಾತಿ ಇರುವಂಥ ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲೂ ಕೂಡ ಬಹುತೇಕ ಮಹಿಳೆಯರಿಗೆ ರಾಜಕೀಯ ಅರ್ಹತೆಗಳಿಗಿಂತ ಈ ಮೇಲೆ ಉಲ್ಲೆೀಖಿಸಿದಂಥ ಅಂಶಗಳೇ ಬಹು ಮುಖ್ಯವಾಗಿಬಿಟ್ಟಿರುವಂಥ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.
ಈ ಬಾರಿ ವಿಧಾನಸಭೆಯನ್ನು ಪ್ರವೇಶಿಸುತ್ತಿರುವ ಆರು ಜನ ಮಹಿಳೆಯರಲ್ಲಿ ಎಲ್ಲರೂ ರಾಜಕೀಯವಾಗಿ ಅಥವಾ ಆರ್ಥಿಕವಾಗಿ ಅನುಕೂಲ ಹೊಂದಿರುವವರೇ. ಇವರಲ್ಲಿ ಇಬ್ಬರಿಗೆ ರಾಜ್ಯ ರಾಜಕಾರಣದಲ್ಲಿ ಭಾಗವಹಿಸಿದ ಅನುಭವವಿದ್ದರೆ, ಮತ್ತೊಬ್ಬರು ಪಕ್ಷದ ಜಿಲ್ಲಾ ಮಹಿಳಾ ಘಟಕದಲ್ಲಿ ಪ್ರಮುಖ ಸ್ಥಾನವೊಂದರಲ್ಲಿ ಕೆಲಸ ಮಾಡಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೇ ಕೆಲಸ ಮಾಡಿದ ಅನುಭವವನ್ನು ಹೊಂದಿದ ಕುಟುಂಬಗಳಿಂದಲೇ ಬಂದಿರುವ ಮತ್ತಿಬ್ಬರಲ್ಲಿ ಒಬ್ಬರು ಮಾಜಿ ವಿಧಾನಸಭಾ ಸದಸ್ಯರ ಪತ್ನಿ, ಮತ್ತೊಬ್ಬರು ಮಾಜಿ ವಿಧಾನಸಭಾ ಸದಸ್ಯರ ತಾಯಿ. ಇನ್ನೊಬ್ಬ ಸದಸ್ಯೆ ತಮ್ಮದೇ ಆದಂಥ ಉದ್ದಿಮೆಗಳನ್ನು ಹೊಂದಿರುವರು. ಇವರೆಲ್ಲರೂ ಒಂದಲ್ಲ ಒಂದು ಪ್ರಮುಖ ರಾಜಕೀಯ ಪಕ್ಷದ ಬೆಂಬಲವನ್ನು ಪಡೆದಿದ್ದಂಥವರು. ಅವರವರ ಹಿನ್ನೆಲೆ ಅಥವಾ ಅನುಭವಗಳೇನೇ ಇರಲಿ ಈ ಶಾಸಕಿಯರು ರಾಜ್ಯದ ಮಹಿಳೆಯರ ಆಶೋತ್ತರಗಳನ್ನು, ಅಭಿವೃದ್ಧಿ ಕಾಳಜಿಗಳನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂಬುದು ಮೂಲಭೂತವಾದ ಪ್ರಶ್ನೆ.
ರಾಜ್ಯ ರಾಜಕಾರಣದಲ್ಲಾಗಲಿ ರಾಷ್ಟ್ರ ರಾಜಕಾರಣದಲ್ಲಾಗಲಿ ಮಹಿಳೆಯರ ಸಂಖ್ಯಾತ್ಮಕ ಮತ್ತು ಗುಣಾತ್ಮಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾವೇನು ಮಾಡಬೇಕು ಎನ್ನುವುದು ಒಂದು ದೊಡ್ಡ ಪ್ರಶ್ನೆ. ರಾಜಕೀಯ ಆಡಳಿತವನ್ನು ನಡೆಸುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ಧ್ವನಿ ಭಾರತದಲ್ಲಿ ಎದ್ದು ಹೆಚ್ಚು ಕಡಿಮೆ ಒಂದು ಶತಮಾನವೇ ಮುಗಿಯುತ್ತಿದೆ.
1919ರಲ್ಲಿ ಬ್ರಿಟಿಷ್ ಸರ್ಕಾರ ನೇಮಿಸಿದ ಮಾಂಟೆಗೂ-ಚೆರ್ಮ್ಸಫರ್ಡ್ ಸಮಿತಿಯನ್ನು ಸರೋಜಿನಿ ನಾಯ್ಡು ಮತ್ತು ಮಾರ್ಗರೆಟ್ ಕಸಿನ್ಸ್ ಅವರ ನೇತತ್ವದಲ್ಲಿ ಭೇಟಿ ಮಾಡಿದ ಮಹಿಳೆಯರ ನಿಯೋಗವೊಂದು ಮಹಿಳಾ ಪ್ರಾತಿನಿಧ್ಯದ ಬೇಡಿಕೆಯನ್ನು ಇಟ್ಟಿತ್ತು. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಮತದಾನ ಮತ್ತು ಚುನಾಯಿತ ಸಂಸ್ಥೆಗಳಲ್ಲಿ ಭಾಗವಹಿಸುವ ಹಕ್ಕನ್ನು ಪಡೆಯಲು ಭಾರತೀಯ ಮಹಿಳೆಯರು ತೀರಾ ಸುದೀರ್ಘವಾದಂಥ ಹೋರಾಟವನ್ನೇನೂ ನಡೆಸಲಿಲ್ಲ.
ಇನ್ನು ಕರ್ನಾಟಕದ ವಿಚಾರದಲ್ಲೇ ಹೇಳುವುದಾದರೆ 1983ರಲ್ಲೇ ಗ್ರಾಮ ಪಂಚಾಯತಿಗಳಲ್ಲಿ ಶೇ 25 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟು ಇಡೀ ರಾಷ್ಟ್ರಕ್ಕೆ ಮಾದರಿಯಾದ ಹೆಗ್ಗಳಿಕೆ ನಮ್ಮದು. ಹಾಗೆ ನೋಡಿದರೆ ರಾಷ್ಟ್ರ ಮಟ್ಟದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಪ್ರೇರೇಪಣೆ ನೀಡಿದ್ದು ಕರ್ನಾಟಕ ರಾಜ್ಯ ಆದರೀಗ ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಸಂಖ್ಯೆಯ ಮಹಿಳಾ ಸದಸ್ಯರನ್ನು ವಿಧಾನ ಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುತ್ತಿರುವ ರಾಜ್ಯ ನಮ್ಮದು ಎಂದರೆ, ಪುರುಷ ಪ್ರಧಾನ ವ್ಯವಸ್ಥೆ ಇಲ್ಲಿ ಹೇಗೆ ಕಾರ್ಯಪ್ರವೃತ್ತವಾಗಿವೆ ಎಂಬುದರ ಅರಿವು ಮೂಡುತ್ತದೆ.
ಇಂದು ಮುಂದೆ ನಾವು ಮಾಡಬೇಕಾಗಿರುವುದಾದರೂ ಏನು? ನಮ್ಮ ರಾಜ್ಯ ರಾಜಕಾರಣದಲ್ಲಿರುವ ಮಹಿಳಾ ಅಗೋಚರತೆಗೆ ಕೇವಲ ರಾಜಕೀಯ ಪಕ್ಷಗಳನ್ನು ಹೊಣೆ ಮಾಡುವುದು ಸರಿಯಲ್ಲ. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಪಾತ್ರವಾದರೂ ಏನು? ಈ ವಿಷಯ ಚರ್ಚೆಗೆ ಬಂದಾಗಲೆಲ್ಲ ಮೂಡಿಬರುವ ಒಂದು ತೀಕ್ಷ್ಣ ಪ್ರತಿಕ್ರಿಯೆಯೆಂದರೆ ಪ್ರತಿ ಕ್ಷೇತ್ರದಲ್ಲೂ ಅರ್ಧದಷ್ಟು ಮತದಾರರು ಮಹಿಳೆಯರೇ ಇದ್ದಾರಲ್ಲ, ಅವರೇಕೆ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿಲ್ಲ ಎನ್ನುವುದು.
ಮಹಿಳೆಯರು ಮಹಿಳೆಯರನ್ನೇ ಆಯ್ಕೆ ಮಾಡಬೇಕು, ಪುರುಷರು ಪುರುಷರನ್ನೇ ಆಯ್ಕೆ ಮಾಡಬೇಕು ಎನ್ನುವ ವಾದ ಸರಿಯಲ್ಲ ನಿಜ. ಆದರೆ ಮಹಿಳೆಯರಾಗಲಿ, ಪುರುಷರಾಗಲಿ ಅಭ್ಯರ್ಥಿಗಳ ಶಕ್ತಿಗಳನ್ನು, ದೌರ್ಬಲ್ಯಗಳನ್ನೂ ಅಳೆಯುವಂಥ ಮನೋಭಾವವನ್ನು ಬೆಳೆಸಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲಂಥ ಮಹಿಳೆಯರನ್ನು ಚುನಾಯಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು.
ಪಕ್ಷಾತೀತವಾಗಿ ಮಹಿಳೆಯರೆಲ್ಲ ಸಂಘಟಿತರಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬಾರಿಯ ಸಂಸತ್ ಚುನಾವಣೆಗಳಿಗೆ ಮುನ್ನ ಜಾರಿಗೆ ತರಲೇಬೇಕೆಂಬ ಒಂದು ಹೋರಾಟವನ್ನೇ ಆರಂಭಿಸಬೇಕು. ಮೀಸಲಾತಿ ಮಸೂದೆ ಜಾರಿಗೆ ಬರುವ ವೇಳೆಗೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸ್ಧಳೀಯ ಸಂಸ್ಥೆಗಳನ್ನು ಪ್ರವೇಶಿಸಿರುವ ಮಹಿಳೆಯರಲ್ಲಿ ಆಸಕ್ತರು ಹಾಗೂ ಅರ್ಹರಾದವರನ್ನು ಗುರುತಿಸಿ ಅವರಿಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಭಾಗವಹಿಸಲು ತರಬೇತಿ ನೀಡುವುದು ಕೂಡ ಅಷ್ಟೇ ಮುಖ್ಯ.
ಮೀಸಲಾತಿ ಮಸೂದೆ ಜಾರಿಗೆ ಬರಲಿ, ಬರದಿರಲಿ, ಪ್ರತಿ ಪಕ್ಷವೂ ಇಂತಿಷ್ಟು ಟಿಕೆಟ್ಟುಗಳನ್ನು ಮಹಿಳೆಯರಿಗೆ ನೀಡಲೇಬೇಕು ಎಂಬ ನಿರ್ಧಾರಕ್ಕೆ ಬದ್ಧವಾಗಲೇಬೇಕು. ಎಲ್ಲಕ್ಕಿಂತ ಮಿಗಿಲಾಗಿ ಈಗಲಾದರೂ ಎಲ್ಲ ಸ್ವಾಯತ್ತ ಮಹಿಳಾ ಸಂಘಟನೆಗಳೂ ಕೂಡಿ ರಾಷ್ಟ್ರವ್ಯಾಪಿ ಆಂದೋಲನವೊಂದನ್ನು ಆರಂಭಿಸಿ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಆಲೋಚಿಸುವಂಥ ಮತ್ತು ಕಾರ್ಯಪ್ರವೃತ್ತವಾಗುವಂಥ ಕಾರ್ಯಕ್ರಮವೊಂದನ್ನು ರೂಪಿಸಬೇಕು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.