ADVERTISEMENT

ಅಸಮಾನತೆ ಸುಡಲು ಬೆಂಕಿಯೊಂದೇ ಸಾಲದು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:15 IST
Last Updated 16 ಜೂನ್ 2018, 9:15 IST

ರಾಮಾಯಣದ ಸೀತೆ ಮತ್ತು ಮಹಾ­ಭಾರತದ ಗೀತೆ – ಈ ಎರಡು ಹೆಸರು­ಗಳಿಗೂ ಸಮಾನವಾದ ಪದ ಹೇಳಿ ಎಂದು ಕೇಳಿ­ದರೆ, ‘ಯುದ್ಧ’ ಎಂದು ಯಾರಾದರೂ ಥಟ್ ಅಂತ ಹೇಳಬಹುದು. ಎಲ್ಲರಿಗೂ ಗೊತ್ತಿರುವಂತೆ, ರಾಮಾ­ಯಣದಲ್ಲಿ ವನವಾಸ ಕಾಲದಲ್ಲಿ ಸೀತೆಯ ಅಪಹರಣ ಎಂಬ ಅನಿರೀಕ್ಷಿತ ಬೆಳ­ವಣಿಗೆಯ ಕಾರಣಕ್ಕಾಗಿ ರಾಮನು ರಾವಣನ ಲಂಕೆಗೆ ಹೋಗಿ ಅವನ ಮೇಲೆ ಘನಘೋರ ಯುದ್ಧ ಶುರು ಮಾಡಬೇಕಾಯಿತು.

ಮಹಾ­ಭಾರತದ ಕುರುಕ್ಷೇತ್ರದಲ್ಲಿ ಅತಿಮುಖ್ಯ ಹೋರಾಟ­ಗಾರ ಅರ್ಜುನನಿಗೆ ಉತ್ಸಾಹವೇ ಕುಂದಿದ ಅನಿರೀಕ್ಷಿತ ಬೆಳವಣಿಗೆಯ ಕಾರಣ­ದಿಂದ ಗೀತೆ ಹುಟ್ಟಿ ಅವನಲ್ಲಿ ಯುದ್ಧದ ಉನ್ಮಾದ­ವನ್ನು ತುಂಬಬೇಕಾಯಿತು. ಆದರೆ ಸೀತೆಯ ಮೇಲೆ ನಡೆದಂಥ ದೌರ್ಜನ್ಯದ ವಿರುದ್ಧ ಸಾಮಾಜಿಕ ಯುದ್ಧ ಮಾಡುವ ಅವಶ್ಯಕತೆ ಈಗಿನ ಕಾಲದಲ್ಲೂ ಇದೆ; ಗೀತೆಯ ಕಾರಣಕ್ಕೆ ಈಗಿನ ಕಾಲದಲ್ಲಿ ವಾದವಿವಾದಗಳ ಅನವಶ್ಯಕ ಯುದ್ಧ ನಡೆಯುತ್ತಿರುವ ಬಗ್ಗೆ ದಿಗ್ಭ್ರಮೆ ಮೂಡು­ತ್ತಿದೆ. ಇವೆರಡರ ಬಗ್ಗೆ ಥಟ್ ಎಂದು ಹೇಳಲಾಗದ ಇನ್ನೊಂದು ಪದವೆಂದರೆ ಬೆಂಕಿ. ಅಂದಿನಿಂದ ಇಂದಿನವರೆಗೂ ಸೀತೆಯರು ಹಲವು ಕಾರಣಗಳಿಂದ ಬೆಂಕಿಯಲ್ಲಿ ಬಿದ್ದು ನರಳುತ್ತಲೇ ಇದ್ದಾರೆ; ಆ ಕಾಲದಿಂದ ಈ ಕಾಲದವರೆಗೆ ಗೀತೆಯೂ ಹಲವು ಉದ್ದೇಶಗಳ ಬೆಂಕಿಯಲ್ಲಿ ಬಿದ್ದು ಅರಳುತ್ತಲೇ ಇದೆ!

ಸೀತಾಮಾತೆ ಗೀತಾಮಾತೆ ಎಂಬೆಲ್ಲ ಮಾತು­ಗಳನ್ನು ಬಿಟ್ಟು ಭಗವದ್ಗೀತೆ ಎಂಬ ಸಾಹಿತ್ಯಕೃತಿ­ಯನ್ನು ನೋಡೋಣ. ಸಾವಿರಾರು ವರ್ಷಗಳ ಇತಿ­ಹಾಸದ ಬೆಳಕು ನಮಗೆ ಸ್ಪಷ್ಟವಾಗಿ ತೋರುವ ಸತ್ಯವೆಂದರೆ, ಭಗವದ್ಗೀತೆ ಎನ್ನುವುದು ‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ’ ಬಳಕೆಯಾಗುತ್ತಿರುವ ಒಂದು ಮಹತ್ವಾಕಾಂಕ್ಷಿ ಕಾರ್ಯತಂತ್ರ. ವಿಭಿನ್ನ ಕಾಲ­ಘಟ್ಟಗಳಲ್ಲಿ ವಿಭಿನ್ನ ಉದ್ದೇಶಗಳ ಸಾಧನೆ­ಗಾಗಿ ವಿಭಿನ್ನ ಬುದ್ಧಿವಂತರು ಭಗವದ್ಗೀತೆಯನ್ನು ಅದ್ಭುತ­ವಾಗಿ ಬಳಸಿಕೊಂಡಿದ್ದಾರೆ ಮತ್ತು ಬೆಳೆಸಿಕೊಂಡಿದ್ದಾರೆ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ರಾಜಕಾರಣ ಮತ್ತು ಧರ್ಮ­ಕಾರಣ ಇವೆರಡೂ ಅದನ್ನು ತಮಗೆ ಬೇಕಾದ ಕಾರಣಗಳಿಗೆ ಧಾರಾಳವಾಗಿ ಬಳಸಿಕೊಂಡಿವೆ.

ಆದರೆ ಭಗವದ್ಗೀತೆ ಕುರಿತ ಆ ಸತ್ಯಗಳೆಲ್ಲ ಸತ್ತುಹೋಗಿ, ಮಿಥ್ಯೆಗಳೆಲ್ಲ ‘ಮಿಥ್‌’ ಗಳಾಗಿ, ಅವುಗಳಲ್ಲಿ ಎಲ್ಲವೂ ಪುರಾಣ ಸ್ಪರ್ಶ ಪಡೆದು, ಪವಿತ್ರ ಸಂಗತಿಗಳಾಗಿ ಜನರ ಮನದೊಳಗೆ ಇಳಿದುಬಿಟ್ಟಿವೆ. ಹಾಗಿದ್ದೂ ಕೃಷ್ಣ ಪರಮಾತ್ಮ ಹೇಳಿದ ಭಗವದ್ಗೀತೆ ಪ್ರಶ್ನಾತೀತ ಎಂದು ಯಾರೆಷ್ಟೇ ಕೂಗಿದರೂ ಭಗವದ್ಗೀತೆಯನ್ನು ಕುರಿತು ಅನೇಕಾನೇಕ ಪ್ರಶ್ನೆಗಳಿವೆ.

ಅರ್ಜುನನ ಜಿಜ್ಞಾ­ಸೆಯ ಪ್ರಶ್ನೆಗಳು ಕೃಷ್ಣನಿಗಿದ್ದರೆ, ಜಿಜ್ಞಾಸು­ಗಳ ಸಂದೇಹದ ಪ್ರಶ್ನೆಗಳು ಭಗವದ್ಗೀತೆಗಿವೆ. ವೇದಗಳು ಮತ್ತು ಉಪನಿಷತ್ತುಗಳಿಗೆ ನಿರ್ದಿಷ್ಟ ಪಠ್ಯ­ಶಿಸ್ತು ಇದೆ, ಮಹಾಭಾರತ ಮತ್ತು ರಾಮಾಯಣಗಳಿಗೆ ಸ್ವಾದಿಷ್ಟ ಕಥೆಯ ಚೌಕಟ್ಟು ಇದೆ. ಆದರೆ ಇವುಗಳನ್ನೆಲ್ಲ ಮಿಕ್ಕುಮೀರಿಸುವ ಅಪಾರ ಪಾವಿತ್ರ್ಯ ಭಗವದ್ಗೀತೆಗೆ ಮಾತ್ರ ಪ್ರಾಪ್ತ­ವಾಗಿದೆ. ಇದೇಕೆ ಎನ್ನುವುದು ಚರಿತ್ರೆ ಮತ್ತು ಪುರಾಣದ ಅಧ್ಯಯನದ ಮುಂದಿರುವ ಬಹುದೊಡ್ಡ ಸವಾಲು.

ಭಗವದ್ಗೀತೆ ಮನು­ವಾದಕ್ಕೆ ಒಂದು ದೊಡ್ಡ ಆಧಾರ ಎನ್ನುವುದಿರಲಿ, ಅದನ್ನು ವಿಶ್ಲೇಷಣೆ ನಡೆಸುವುದು ಮಾರ್ಕ್ಸ್‌ವಾದಕ್ಕೂ ಒಂದು ಆಕರ್ಷಣೆ. ಭಗವದ್ಗೀತೆಯಲ್ಲಿ ಏನಿದೆ ಏನಿಲ್ಲ ಎಂಬುದರ ಬಗ್ಗೆ ನಡೆದಿರುವ ಸಂಶೋಧನೆ ಮತ್ತು ವಾಗ್ವಾದವೇ ಒಂದು ಸಾಂಸ್ಕೃತಿಕ– ಸಾಮಾಜಿಕ ಸಂಶೋಧನೆಗೆ ವಸ್ತು ಎಂದರೆ ತಪ್ಪಿಲ್ಲ.

ಮಹಾಭಾರತದಲ್ಲಿ ಇರುವ ಹಾಗೆ, ಯುದ್ಧದ ಆರಂಭಕ್ಕೆ ಮೊದಲು ಅರ್ಜುನನು ತನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸುವಂತೆ ಸಾರಥಿಯಾದ ಕೃಷ್ಣನನ್ನು ಕೇಳಿಕೊಂಡ­ನಂತೆ. ದುರ್ಯೋಧನನ ಪರ ಯಾರೆಲ್ಲ ಬಂದಿದ್ದಾರೆ ಎನ್ನುವುದನ್ನು ತಿಳಿಯು­ವುದು ಅವನ ಉದ್ದೇಶವಾಗಿತ್ತು. ನೋಡ­ನೋಡುತ್ತ ಅವನಿಗೆ ಕಂಡದ್ದು ತನ್ನ ಕಡುವೈರಿ ದುರ್ಯೋಧನ­ನಲ್ಲ– ತನ್ನ ಸೋದರ ದುರ್ಯೋಧನ. ಎದುರಿಗಿದ್ದ ಪಿತಾಮಹರು, ಆಚಾರ್ಯರು, ಬಂಧುಬಾಂಧವರನ್ನು ನೋಡಿ ಅವನ ಅಂತಃಕರಣ ಮಿಡಿದು  ವಿಷಾದ ಹುಟ್ಟಿ ಬಿಲ್ಲುಬಾಣಗಳನ್ನು ತೆಗೆದಿಟ್ಟುಬಿಟ್ಟ. ಯುದ್ಧ­ವೀರ­ನಲ್ಲಿ ಹೀಗೆ ಅಚ್ಚರಿಯ ವೈರಾಗ್ಯ ಹುಟ್ಟಿತು.

ದಾಯಾದಿಗಳ ನಡುವೆ ಸಂಧಾನಗಳನ್ನು ವಿಫಲಗೊಳಿಸಿ ಯುದ್ಧವೇ ನಡೆಯಬೇಕೆಂದು ಎಲ್ಲರ ಮನಸ್ಸುಗಳನ್ನೂ ಸಂಘಟಿಸಿದ್ದ ಕೃಷ್ಣನಿಗೆ ಇದರಿಂದ ಎಷ್ಟು ಆಘಾತವಾಗಿರಬೇಡ! ಆದರೆ ಅರ್ಜುನನ ವ್ಯಕ್ತಿತ್ವದ ಮೇಲೆ ಹಿಡಿತ ಹೊಂದಿದ್ದ ಕೃಷ್ಣ ಬಹಳ ಚಾಕಚಕ್ಯತೆಯಿಂದ ಅರ್ಜುನನನ್ನು ಮರಳಿ ಯುದ್ಧಕ್ಕೆ ಅಣಿಗೊಳಿಸಿದ. ಆ ಸಂದರ್ಭ­ದಲ್ಲಿ ತನ್ನೆಲ್ಲ ಬುದ್ಧಿಶಕ್ತಿಯನ್ನೂ ಪಣವಾಗಿಟ್ಟು ಮನ­ವೊಲಿಕೆ, ಬೋಧನೆ, ‘ಕೌನ್ಸೆಲಿಂಗ್‌’ ಮಾಡಿರ­ಬಹುದು, ಒಂದಿಷ್ಟು ಅಂಶಗಳನ್ನು ಮುಂದಿಟ್ಟು ನಾನು ಹೇಳಿದಂತೆ ಕೇಳಲೇಬೇಕು ಎಂದು ‘ಬೆದರಿಕೆ’ ಕೂಡ ಹಾಕಿರಬಹುದು.

ಕೃಷ್ಣನ ಜಾಣ್ಮೆಯ ಈ ಕಾರ್ಯತಂತ್ರವೇ ಅವನ ನಿಜವಾದ ಸುದರ್ಶನ ಚಕ್ರ. ಇದು ಮಹಾ­ಭಾರತ ಯುದ್ಧದಲ್ಲಿ ಅಥವಾ ಜಗತ್ತಿನಲ್ಲಿ ಯಾವ ಯುದ್ಧದಲ್ಲಾದರೂ ನಡೆಯಬಹು­ದಾದ ಘಟನೆ. ಆದರೆ ಇಷ್ಟು ಮಾತ್ರ ನಡೆದಿದ್ದರೆ, ಇದು ಕೃಷ್ಣನ ನಿರೀಕ್ಷಿತ ಕಾರ್ಯತಂತ್ರ ಮಾತ್ರ ಆಗಿದಿದ್ದರೆ ಇದನ್ನು ಯಾರು ಗಮನಿಸುತ್ತಿದ್ದರು? ಸರ್ವ­ನಾಶಕ್ಕೆ ದಾರಿಯಾಗುವ ಯುದ್ಧ ಮಾಡು­ವಂತೆ ಹೇರಿದ ಒತ್ತಾಯದ ಬೋಧನೆಯನ್ನು, ಮನಸ್ಸಿಗೆ ಶಾಂತಿ ನೀಡುವ ಪರಮ ಪವಿತ್ರ ಗ್ರಂಥ ಎಂದು ಯಾರು ತಾನೇ ಪೂಜಿಸುತ್ತಿದ್ದರು? ಯುದ್ಧದ ಒಂದು ಸುಸಂದರ್ಭವನ್ನು ತಾವು ಹೇಳಬೇಕಾದುದನ್ನೆಲ್ಲಾ ಹೇಳಲು ಅದ್ಭುತವಾಗಿ ಬಳಸಿಕೊಂಡ ಜಾಣರ ಕಾರ್ಯತಂತ್ರವನ್ನು, ಜಗತ್ತಿನ ಯುದ್ಧರಹಿತ ಆಕ್ರಮಣ ಸಿದ್ಧಾಂತದ ಮೂಲಸೂತ್ರ ಎಂದು ಕರೆಯಬಹುದಲ್ಲವೇ !

ಯುದ್ಧರಂಗದಲ್ಲಿ ಎರಡೂ ಕಡೆಗಳ ಸೈನ್ಯಗಳು ರಣೋತ್ಸಾಹದಿಂದ ಭೋರ್ಗರೆ­ಯು­ತ್ತಿ­ದ್ದಾಗ, ಅವುಗಳ ನಡುವೆ ಇದ್ದ ರಥದಲ್ಲಿ ನಿಂತಿದ್ದ ಒಬ್ಬನು ತನ್ನೆದುರು ಕುಳಿತಿದ್ದ ಇನ್ನೊಬ್ಬ­ನಿಗೆ ಹದಿನೇಳು ಅಧ್ಯಾಯಗಳಲ್ಲಿ 700–750 ಶ್ಲೋಕಗಳನ್ನು ಅತ್ಯಂತ ಸುಂದರ ಕಾವ್ಯಭಾಷೆ­ಯಲ್ಲಿ ಬೋಧನೆ ಮಾಡಿದ ಎನ್ನುವುದನ್ನು ಸುಮ್ಮನೆ ಕಲ್ಪಿಸಿಕೊಳ್ಳಬಹುದು. ಆ ಶ್ಲೋಕ­ಗಳನ್ನು ಓದಲು ಸುಮಾರು ಮೂರು ಗಂಟೆ ಹಿಡಿಯುವುದರಿಂದ, ಅಷ್ಟು ಹೊತ್ತೂ ವೈರಿ ಸೈನಿಕರು ಪಿಳಿಪಿಳಿ ನೋಡುತ್ತ ನಿಂತಿದ್ದರು ಎನ್ನುವುದನ್ನು ಸುಮ್ಮನೆ ಊಹಿಸಿಕೊಳ್ಳಬಹುದು.

ಯಾವ ಉತ್ಕೃಷ್ಟ ಕಾರಣಕ್ಕಾದರೂ ಆಗಿರಲಿ ಯಾರ ಬಂಧುವಾದರೂ ಆಗಿರಲಿ ‘ಕೊಲ್ಲು­ವುದು ನಿನ್ನ ಧರ್ಮ’ ಎಂಬ  ಬೋಧನೆ ನಮ್ಮಲ್ಲೂ ಇದೆಯಲ್ಲ ಎಂದು ಬೆಚ್ಚಿಬೀಳ­ಬಹುದು. ಆದರೆ ಅಂಥ ಊಹೆಗಳ ಅಗತ್ಯವಿಲ್ಲ, ಬದಲಿಗೆ ಚರಿತ್ರೆಯನ್ನು ಗಮನಿಸಿದರೆ ಎಲ್ಲ ಅರ್ಥ­ವಾಗುತ್ತದೆ ಎನ್ನುತ್ತವೆ ಇತಿಹಾಸಕಾರರ ಮತ್ತು ಸಂಸ್ಕೃತಿ ಸಂಶೋಧಕರ ವಿಶ್ಲೇಷಣೆಗಳು.

ಆ ಕಾಲಮಾನದಲ್ಲಿ ನಮ್ಮ ನೆಲದಲ್ಲಿ ಆಗುತ್ತಿದ್ದ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತ್ಯಂತರಗಳು, ವ್ಯವಸ್ಥೆಯಲ್ಲಿ ತಮ್ಮನ್ನು ಸ್ಥಿರಪಡಿಸಿಕೊಳ್ಳಲು ಕೃಷ್ಣನ ಕಾರ್ಯತಂತ್ರವನ್ನು ತಮ್ಮದಾಗಿಸಿ­ಕೊಂಡು ‘ಭಗವದ್ಗೀತೆ’ಯನ್ನು ಅವನ ಬಾಯಲ್ಲಿ ಬೋಧಿಸಬೇಕಾದ ಒಂದು ಚಾರಿತ್ರಿಕ ಅಗತ್ಯ ಉದ್ಭವ­ವಾಯಿತು ಎಂದು ಅವು ವಿಶ್ಲೇಷಿಸು­ತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಭಗವದ್ಗೀತೆ­ಯಲ್ಲಿ ಕಾಣುವ ಅಸಂಖ್ಯಾತ ಅಸಂಗತತೆಗಳು ಮತ್ತು ವಿರೋಧಾಭಾಸಗಳು, ಅರ್ಜುನನ ಮನ­ದಲ್ಲಿ­ರುವ ವ್ಯಥೆವ್ಯಾಕುಲಗಳು ಎಲ್ಲವೂ ಆ ಕಾಲದ ಕ್ಷೋಭೆಗಳ ಪ್ರತಿಬಿಂಬಗಳೇ ಆಗಿವೆ ಎಂದೂ ಅವು ಹೇಳುತ್ತವೆ.

ವರ್ಣಾಶ್ರಮ ವ್ಯವಸ್ಥೆಯಲ್ಲಿ ಸಾಕಷ್ಟು ಶಕ್ತರಾಗಿದ್ದ ಕ್ಷತ್ರಿಯರ ಮೇಲೆ ಕ್ಷತ್ರಿಯನಲ್ಲದ ಕೃಷ್ಣ ಸಾಧಿಸುವ ಪ್ರಾಬಲ್ಯದ ದ್ಯೋತಕವೇ ಮಹಾ­ಭಾರತ­ದಲ್ಲಿ ‘ಭಗವದ್ಗೀತೆ’ಯ ಸ್ಥಾಪನೆ ಎಂದೂ ವಿದ್ವಾಂಸರು ಹೇಳಿರುವುದು ಗಮನಾರ್ಹ.  ‘ಎಲ್ಲರೂ ವರ್ಣಕ್ಕೆ ಅನುಗುಣವಾದ ಧರ್ಮ­ವನ್ನು ಪಾಲಿಸಬೇಕು’ ಎಂದು ಕ್ಷತ್ರಿಯನನ್ನು ಯುದ್ಧಕ್ಕೆ ಒತ್ತಾಯಿಸುವ ಬೋಧನೆ ಅವನಿಗೆ ಮಾತ್ರ ಅನ್ವಯಿಸುವುದಿಲ್ಲ. ಯಾದವನ ಧರ್ಮ ಯುದ್ಧ ಮಾಡುವುದು ಅಥವಾ ಮಾಡಿಸು­ವುದು ಅಲ್ಲವೇ ಅಲ್ಲ.

ಆದರೆ ಮಹಾಭಾರತದಲ್ಲಿ ಅಥವಾ ಭಗವದ್ಗೀತೆಯಲ್ಲಿ ಕೃಷ್ಣನ ಗುರಿ ಯುದ್ಧ ಮಾಡಿಸುವುದೇ ಆಗಿರುತ್ತದೆ. ಹಾಗೆಯೇ ಯುದ್ಧ ಮಾಡುವುದು ದ್ರೋಣ, ಅಶ್ವತ್ಥಾಮ ಮುಂತಾದವರ ವರ್ಣಾಶ್ರಮ ಧರ್ಮವೂ ಅಲ್ಲ. ಕ್ಷತ್ರಿಯರ ಯುದ್ಧದ ಕಥೆಯಾದ ಮಹಾಭಾರತ­ದಲ್ಲಿ ಕೃಷ್ಣನ ಪ್ರಾಮುಖ್ಯ ಕಾಲಕ್ರಮೇಣ ಬೆಳೆದ ಬಗೆಯೂ ಒಂದು ಸಾಮಾಜಿಕ ಸ್ಥಿತ್ಯಂತರದ ಪ್ರಭಾ­ವದ ಕಥೆಯೇ ಆಗಿದೆ.

ಕ್ಷತ್ರಿಯ ರಾಜರು ಮಾಡುವ ರಾಜಸೂಯ ಯಾಗದಲ್ಲಿ ಕ್ಷತ್ರಿಯ­ನಲ್ಲದ ಕೃಷ್ಣನಿಗೆ ಅಗ್ರಪೂಜೆ ಸಲ್ಲುವುದನ್ನು ಪ್ರಶ್ನಿ­ಸುವ ಕ್ಷತ್ರಿಯ ಶಿಶುಪಾಲನ ಹತ್ಯೆ, ಹೊಸ ಶಕ್ತಿಕೇಂದ್ರದ ಉದಯದ ಸಂದೇಶ ರವಾನಿಸು­ತ್ತದೆ. ಇನ್ನು ಭಗವದ್ಗೀತೆಯಲ್ಲಿ ತಾನೇ ಎಲ್ಲ, ತನ್ನನ್ನು ಬಿಟ್ಟರೆ ಯಾರೂ ಇಲ್ಲ ಎಂದು ತನ್ನನ್ನು ತಾನೇ ಸ್ಥಾಪಿಸಿಕೊಳ್ಳಲು ನಡೆಸುವ ಪ್ರಯತ್ನ­ವಂತೂ ಅತ್ಯಂತ ವಾಚ್ಯವಾಗಿ ಎದ್ದು ಕಾಣುತ್ತದೆ. 

ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಕೃಷ್ಣನ ಪ್ರಾಬಲ್ಯ ಎತ್ತಿ ಹಿಡಿಯುವ ಗ್ರಂಥ, ಅದು ‘ಕೃಷ್ಣನ ವರ್ಣಾರೋಹಣದ ಕಥೆ’ ಎಂದೊಬ್ಬ ಇತಿಹಾಸ­ಕಾರರು ಹೇಳುವುದು ಗಮನಾರ್ಹ. ಕೌರವರ ಸೈನ್ಯವನ್ನು ಛಿದ್ರಗೊಳಿಸು ಎಂದು ಅರ್ಜುನನಿಗೆ ಒತ್ತಾಯಿಸುವ ಕೃಷ್ಣ, ಆ ಕೌರವರ ಸೈನ್ಯದಲ್ಲಿ ಅವರಿಗೆ ಬೆಂಬಲ ಕೊಟ್ಟ ತನ್ನ ಯಾದವ ಕುಲದ ಜನರೂ ಇದ್ದಾರೆ ಎಂಬುದನ್ನು ಯದುನಾಯಕ­ನಾಗಿ ಲಕ್ಷಿಸುವುದಿಲ್ಲ ಎನ್ನುವುದನ್ನು ಇನ್ನೊಬ್ಬರು ಎತ್ತಿಹೇಳಿದ್ದಾರೆ.  

ಭಾರತದಲ್ಲಿ ಬೌದ್ಧ ಮತ್ತು ಜೈನ ಧರ್ಮ­ಗಳು ಕ್ಷತ್ರಿಯರ ಬೆಂಬಲದಿಂದ ಅಪಾರ ಪ್ರಚಾರ ಮತ್ತು ಪ್ರಾಬಲ್ಯ ಗಳಿಸಿದ ನಂತರ, ವರ್ಣಾಶ್ರಮ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳು ಆಗುವುದು ಅನಿವಾರ್ಯವಾಗಿತ್ತು. ಆ ಧರ್ಮ­ಗಳ ಪ್ರಭಾವಕ್ಕೆ ಒಳಗಾಗಿ ಮಹಾ­ಸಾಮ್ರಾಟ­­ರಾಗಿದ್ದವರೂ ಯುದ್ಧವಿಮುಖರಾಗಿ ಅಹಿಂಸಾ ತತ್ವ ಹೇಳುತ್ತ ಧರ್ಮಪ್ರಚಾರಕ್ಕೆ ಶ್ರಮಿಸುವಂತಾ­ಯಿತು.

ಬೌದ್ಧ ಮತ್ತು ಜೈನ ಧರ್ಮಗಳು ಹೆಚ್ಚು ಶಕ್ತಿ ಗಳಿಸಿದ್ದು, ವರ್ಣಗಳು ತಮ್ಮ ‘ಸಹಜ ಧರ್ಮ’ ವನ್ನು ಬಿಟ್ಟುಕೊಟ್ಟದ್ದು, ಸಾಮಾಜಿಕ ಸಂಕರಗಳು ವಿಪರೀತ ಹೆಚ್ಚಾಗಿದ್ದು ಎಲ್ಲವೂ ವೈದಿಕ ಪರಂಪರೆಗೆ ಸಹಜವಾಗಿ ಆತಂಕ ಮೂಡಿಸಿದವು. ಸಡಿಲವಾಗಿದ್ದ ವರ್ಣಾಶ್ರಮದ ಚೌಕಟ್ಟನ್ನು ಮತ್ತೆ ಭದ್ರಪಡಿಸುವುದಕ್ಕೆ ನಡೆದ ಮಹಾ ಕಾರ್ಯತಂತ್ರವೇ ಮಹಾಭಾರತದಲ್ಲಿ ‘ಭಗವದ್ಗೀತೆ’ಯ ಸೇರ್ಪಡೆ ಎನ್ನುವುದು ಇನ್ನೊಬ್ಬರು ವಿದ್ವಾಂಸರ ವಿಶ್ಲೇಷಣೆ.

ಕೃಷ್ಣನಿಗೆ ಮತ್ತು ಅವನಲ್ಲಿ ಶರಣಾಗತಿಗೆ ಸಿಕ್ಕ ಪ್ರಾಮುಖ್ಯವೇ ಭಕ್ತಿ ಪಂಥದ ಜೀವಾಳ­ವಾಯಿತು. ‘ಕೃಷ್ಣ ಭಗವಂತ, ಅವನು ಹೇಳಿದ್ದು ಭಗವದ್ಗೀತೆ’ ಎಂಬಂತೆ ಆಗಿ ಅದು ಎಲ್ಲಕ್ಕಿಂತ ಶ್ರೇಷ್ಠವೆಂದು ಸ್ಥಾಪಿಸಲಾಯಿತು. ಕ್ಷತ್ರಿಯರ ಮೇಲೆ ಪ್ರಾಬಲ್ಯ ಸಾಧಿಸುವ ಕೃಷ್ಣನ ಪ್ರಯತ್ನವನ್ನು ತಮ್ಮ ಉದ್ದೇಶಸಾಧನೆಗೆ ಅಂದಿನ ವ್ಯವಸ್ಥೆಯಲ್ಲಿ ಪ್ರಾಬಲ್ಯ ಕಳೆದುಕೊಂಡಿದ್ದ ಬ್ರಾಹ್ಮಣರು ಬಳಸಿಕೊಳ್ಳುವುದು ಅನಿವಾರ್ಯ­ವಾಯಿತು. ಭಗವದ್ಗೀತೆ ಅತ್ಯಂತ ಪವಿತ್ರ ಎಂದು ಸಾರಿದ ಅವರು ಅದನ್ನು ತಮ್ಮದೆಂದೇ ಘೋಷಿಸಿಬಿಟ್ಟರು.

ಅದುವರೆಗಿನ ಸಿದ್ಧಾಂತಗಳೆಲ್ಲ­ದರ ಸಾರವನ್ನು ಅದಕ್ಕೆ ಧಾರೆಯೆರೆದಿದ್ದು ಅವರೇ ಇರಬೇಕು. ಅನ್ಯ ಧರ್ಮಗಳಿಂದ ವೈದಿಕ ಚಿಂತನೆಗೆ ಆಗಿದ್ದ ಸೋಲಿಗೆ ಈ ಮೂಲಕ ಗೆಲುವಿನ ಗೌರವ ಕೊಟ್ಟುಕೊಂಡರು. ಅವರನ್ನು ದಮನ ಮಾಡಿದವರೆಲ್ಲ ದಶಾವತಾರಗಳಲ್ಲಿ ಸೇರಿಹೋದರು. ಇನ್ನೂ ಮುಖ್ಯವಾಗಿ ಮುಂದೆ ಬಂದ ವೈದಿಕ ಧರ್ಮದ ಮುಖ್ಯ ಪ್ರತಿಪಾದಕರಲ್ಲಿ ಶೈವರು ಕೂಡ, ವೈಷ್ಣವನಾದ ಕೃಷ್ಣ ಹೇಳಿದ ಭಗವದ್ಗೀತೆಗೆ ಭಾಷ್ಯ ಬರೆಯುವ ಮೂಲಕ ಅದರ ಮಹತ್ವವನ್ನು ಗಟ್ಟಿ ಮಾಡಿದರು – ಈ ಮಾತುಗಳನ್ನೂ ಖಂಡಿತ ಗಮನಿಸಬಹುದು.

ಭಾರತೀಯ ಚಿಂತನೆಯ ಸಾರ ಸಂಗ್ರಹ­ವೆಲ್ಲವೂ ಭಗವದ್ಗೀತೆಯಲ್ಲಿ ಇದೆ. ಏನು ಬೇಕೆಂದರೆ ಅವೆಲ್ಲವೂ ಇರುವಂತೆ ನೋಡಿಕೊಂಡಿ­ರುವುದೂ ಒಂದು ವಿಶಿಷ್ಟ ಕಾರ್ಯತಂತ್ರ. ಅದರಲ್ಲಿ ಒಂದೇ ವಿಷಯದ ಪರ ಮತ್ತು ವಿರೋಧ ಎರಡಕ್ಕೂ ಪ್ರಮಾಣಗಳಿರುವುದರಿಂದ ಅದು ಎಲ್ಲರ ಜೀವನಕ್ಕೂ ಬೇಕಾಗಿಬಿಡುತ್ತದೆ. ಯಾರು ಬೇಕಾದರೂ ಅದನ್ನು ತಮ್ಮ ವಾದಕ್ಕೆ ಬಳಸಿಕೊಳ್ಳಬಹುದು. 

ಗಾಂಧೀಜಿ ­ಅವರಿಗೆ ಗೀತೆ ಪವಿತ್ರ ಗ್ರಂಥವಾಗಿದ್ದಂತೆ, ಅವ­ರನ್ನು ಕೊಂದ ನಾಥೂರಾಮ್ ಗೋಡ್ಸೆಗೂ ಪವಿತ್ರವಾಗಿತ್ತು ಎಂಬುದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ.

ಸದ್ಯ, ಈಗಂತೂ ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ ಎಂಬ ಘೋಷಣೆಯನ್ನು ನಂಬೋಣ. ಭಗವದ್ಗೀತೆ ಕಾಲದ ಕೂಸು; ವರ್ಣಾಶ್ರಮ ವ್ಯವಸ್ಥೆಯ ವ್ಯಥೆಯ ಕಥೆ. ಅಸಮಾನತೆಯನ್ನು ಸುಡಲು ಬೆಂಕಿಯೊಂದೇ ಸಾಲದು.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in---

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.